Saturday, 3 February 2018

ಅಪ್ರಾಪ್ತೆಯ ರಕ್ಷಣೆ : ಬಾಲ್ಯ ವಿವಾಹದಿಂದ ಪಾರು


ಕೊಪ್ಪಳ ಫೆ. 03 (ಕರ್ನಾಟಕ ವಾರ್ತೆ): ಬಳ್ಳಾರಿ ಜಿಲ್ಲೆ ಶಿರಗುಪ್ಪ ತಾಲೂಕು ಗೋಸಬಾಳ ಗ್ರಾಮದ ಸಿದ್ದಲಿಂಗೇಶ್ವರ ದೇವಸ್ಥಾನದಲ್ಲಿ ಫೆ. 04 ರಂದು ಏರ್ಪಡಿಸಲು ಉದ್ದೇಶಿಸಲಾಗಿದ್ದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಕೊಪ್ಪಳ ಜಿಲ್ಲೆಯ ಕುಂಟೋಜಿ ಗ್ರಾಮದ ಅಪ್ರಾಪ್ತ ಬಾಲಕಿಯ ವಿವಾಹವೊಂದು ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ, ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ, ಬಾಲ್ಯ ವಿವಾಹವನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
      ಗಂಗಾವತಿ ತಾಲೂಕು ಕುಂಟೋಜಿ ಗ್ರಾಮದ ದೊಡ್ಡ ಕಾರಣ್ಣ ಅವರು ತಮ್ಮ ಅಪ್ರಾಪ್ತ ಮಗಳ ಮದುವೆಯನ್ನು ಗೋಸಬಾಳ ಗ್ರಾಮದ ಪಂಚನಗೌಡ್ರ ಅವರ ಮಗನೊಂದಿಗೆ ಅದೇ ಗ್ರಾಮದ ಸಿದ್ದಲಿಂಗೇಶ್ವರ ದೇವಸ್ಥಾನದಲ್ಲಿ ಫೆ. 04 ರಂದು ಏರ್ಪಡಿಸಲಾಗಿರುವ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನಡೆಸಲು ಸಿದ್ಧತೆ ನಡೆಸಿದ್ದರು.  ಬಾಲ್ಯ ವಿವಾಹ ಜರುಗುತ್ತಿರುವ ಕುರಿತ ಖಚಿತ ಮಾಹಿತಿಯ ಮೇರೆಗೆ ಜಿಲ್ಲಾಧಿಕಾರಿಗಳ ಸೂಚನೆಯಂತೆ, ಕಾರಟಗಿ ಪೊಲೀಸ್ ಠಾಣೆ ಪಿಎಸ್‍ಐ ಎಂ. ಶಿವಕುಮಾರ್, ಮಕ್ಕಳ ವಿಶೇಷ ಪೊಲೀಸ್ ಘಟಕದ ಬಸಪ್ಪ ಹಾದಿಮನಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳೊಂದಿಗೆ ಕುಂಟೋಜಿ ಗ್ರಾಮಕ್ಕೆ ತೆರಳಿ, ಬಾಲಕಿಯ ವಯಸ್ಸಿನ ಕುರಿತು ಶಾಲಾ ದೃಢೀಕರಣ ಪತ್ರ ಪಡೆದು, ಬಾಲಕಿ ಅಪ್ರಾಪ್ತೆ ಎಂಬುದನ್ನು ಖಚಿತಪಡಿಸಿಕೊಳ್ಳಲಾಯಿತು.  ಬಾಲಕಿಯ ಪಾಲಕರನ್ನು ಭೇಟಿ ಮಾಡಿ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಬಾಲ್ಯ ವಿವಾಹ ಆಯೋಜನೆಯಿಂದ ಉಂಟಾಗುವ ದುಷ್ಪರಿಣಾಮಗಳು ಹಾಗೂ ಬಾಲಕಿಯ ಭವಿಷ್ಯ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು, ಪೋಷಕರಿಗೆ ತಿಳುವಳಿಕೆ ನೀಡಲಾಯಿತು.  ವಿವಾಹವಾಗಬೇಕಿದ್ದ, ಬಾಲಕಿಯನ್ನು ವಶಕ್ಕೆ ಪಡೆದು ಮುಂದಿನ ಆರೈಕೆ ಮತ್ತು ಪೋಷಣೆಗಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಲಾಗಿದೆ. 
     ಬಾಲ್ಯ ವಿವಾಹ ನಿಷೇಧ ಕಾಯ್ದೆಯನ್ವಯ 18 ವರ್ಷದೊಳಗಿನ ಹೆಣ್ಣು ಹಾಗೂ 21 ವರ್ಷದೊಳಗಿನ ಗಂಡಿನ ವಿವಾಹ ಕಾನೂನು ಬಾಹಿತ.  ಒಂದು ವೇಳೆ ಇಂತಹ ವಿವಾಹ ಮಾಡಿದಲ್ಲಿ, ಅದು ಅಸಿಂಧು ವಿವಾಹವಾಗುತ್ತದೆ.  ಅಲ್ಲದೆ ಮದುವೆ ಮಾಡಿಕೊಂಡವರು, ಮಾಡಿದವರು, ಆಯೋಜನೆ ಮಾಡಿದವರು ಹಾಗೂ ಮದುವೆಯಲ್ಲಿ ಭಾಗವಹಿಸಿದವರು, ಇವರೆಲ್ಲರಿಗೂ ಕನಿಷ್ಟ 01 ರಿಂದ 02 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ. ದಂಡ ವಿಧಿಸಲಾಗುತ್ತದೆ.  ಅಪ್ರಾಪ್ತ ವಯಸ್ಸಿನ ಪತ್ನಿಯೊಂದಿಗೆ ಲೈಂಗಿಕ ಸಂಪರ್ಕವು ಲೈಂಗಿಕ ದೌರ್ಜನ್ಯ ಎಂದು ಪರಿಗಣಿಸಲಾಗುತ್ತದೆ ಎಂಬುದಾಗಿ ಸರ್ವೋಚ್ಛ ನ್ಯಾಯಾಲಯ ತೀರ್ಪಿನಲ್ಲಿ ಹೇಳಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment