Thursday, 1 February 2018

ನಿರುದ್ಯೋಗಿಗಳಿಗೆ ಹೊಸ ಭರವಸೆ ಮೂಡಿಸಿದ ಕೊಪ್ಪಳ ಜಿಲ್ಲಾ ಉದ್ಯೋಗ ಕೇಂದ್ರ


ಕೊಪ್ಪಳ ಫೆ. 01 (ಕರ್ನಾಟಕ ವಾರ್ತೆ) : ನಿರುದ್ಯೋಗಿ ಯುವ ಜನತೆ ಸರ್ಕಾರಿ ನೌಕರಿಯನ್ನು ಅವಲಂಬಿಸದೆ ಸ್ವಂತ ಉದ್ಯೋಗ ಕೈಗೊಂಡು ಸ್ವಾವಲಂಬಿಗಳನ್ನಾಗಿ ಮಾಡುವಲ್ಲಿ ಕೊಪ್ಪಳ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ನೆರವಾಗುತ್ತಿದೆ.
     ಹೌದು ಕೊಪ್ಪಳ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರವು ಕೊಪ್ಪಳ ಜಿಲ್ಲೆಯ ಯುವ ಜನತೆಗೆ ಸ್ವಂತ ಉದ್ಯೋಗಕ್ಕಾಗಿ ಅವರಿಗೆ ವಿವಿಧ ತರಬೇತಿಯನ್ನು ನೀಡುತ್ತಿದ್ದು, ಯುವ ಜನತೆಗೆ ಒಂದು ಭರವಸೆ ಮೂಡಿಸಿದೆ. ಜಿಲ್ಲಾ ಉದ್ಯೋಗ ಕೇಂದ್ರದಿಂದ ಹಮ್ಮಿಕೊಳ್ಳಲಾಗುವ ಉದ್ಯೋಗ ಮೇಳ ಹಾಗೂ ಕೌಶಲ್ಯ ತರಬೇತಿ ಹಾಗೂ ಕಂಪ್ಯೂಟರ್ ತರಬೇತಿ  ಪಡೆದು, ಹಲವಾರು ನಿರುದ್ಯೋಗಿ ಯುವಕ ಯುವತಿಯರು ವಿವಿಧ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವುದು ಇದಕ್ಕೆ ಉದಾಹರಣೆಯಾಗಿದೆ.
ಮಿನಿ ಉದ್ಯೋಗ ಮೇಳ:
********** ಉದ್ಯೋಗ ವಿನಿಮಯ ಕಚೇರಿಯಿಂದ ಎರಡು ಮೂರು ತಿಂಗಳಿಗೊಮ್ಮೆ ಮಿನಿ ಉದ್ಯೋಗ ಮೇಳ ಹಮ್ಮಿಕೊಂಡು ನಿರುದ್ಯೋಗಿಗಳನ್ನು ವಿವಿಧ ಕಂಪನಿ ಫ್ಯಾಕ್ಟರಿಗಳಲ್ಲಿ ಅವರ ಶೈಕ್ಷಣಿಕ ವಿದ್ಯಾರ್ಹತೆ ಹಾಗೂ ವಯಸ್ಸಿನ ಆಧಾರದ ಮೇಲೆ ಮತ್ತು ಅವರ ಅನುಭವ ಮತ್ತು ಆಸಕ್ತಿಗೆ ತಕ್ಕ ಕೆಲಸವನ್ನು ದೊರಕಿಸಲು ನೆರವಾಗುತ್ತಿದೆ.
     ಕಳೆದ ವರ್ಷ ಹಮ್ಮಿಕೊಳ್ಳಲಾಗಿದ್ದ ಮಿನಿ ಉದ್ಯೋಗ ಮೇಳದಲ್ಲಿ ಒಟ್ಟು 11 ನಿಯೋಜಕರು ಸಂದರ್ಶನ ಮಾಡಿದ್ದು ಇದರಲ್ಲಿ 402 ಅಭ್ಯರ್ಥಿಗಳು ಭಾಗವಹಿಸಿದ್ದರು. ಅವರು ಓದಿದ ಹಾಗೂ ಅನುಭವದ ಆಧಾರದ ಮೇಲೆ 132 ಅಭ್ಯರ್ಥಿಗಳು ಕೆಲಸಕ್ಕೆ ನೇಮಕ ಗೊಂಡಿದ್ದಾರೆ. ಇದರಲ್ಲಿ 10 ಅಭ್ಯರ್ಥಿಗಳನ್ನು ಕಾಯ್ದಿರಿಸಿದ್ದು ಮುಂದಿನ ದಿನಗಳಲ್ಲಿ ಇವರು ಕೂಡ ಕೆಲಸಕ್ಕೆ ನೇಮಕ ಮಾಡಿಗೊಳ್ಳುವ ಎಲ್ಲ ಸಾಧ್ಯತೆಗಳಿವೆ ಎನ್ನುತ್ತಾರೆ ನಿಯೋಜಕರು.
ಸ್ಟಡಿ ಸರ್ಕಲ್:
****** ಕೆಪಿಎಸ್‍ಸಿ ಪರೀಕ್ಷೆಗಾಗಿ ಸಿದ್ದತೆಯಲ್ಲಿರುವವರಿಗೆ ಸ್ಟಡಿ ಸರ್ಕಲ್ ಹಮ್ಮಿಕೊಂಡು ಕೆಪಿಎಸ್‍ಸಿ ಪರೀಕ್ಷೆ ಕೈಗೊಳ್ಳುವವರಿಗೆ ಅನುಭವಿ ಶಿಕ್ಷಕರಿಂದ ಉಚಿತವಾಗಿ ತರಬೇತಿ ನೀಡಲಾಗುತ್ತಿದ್ದು, ಕಳೆದ ವರ್ಷ ಸೆಪ್ಟಂಬರ್ ನಿಂದ ನವಂಬರ್ ಅವಧಿಗೆ 55 ಅಭ್ಯರ್ಥಿಗಳು ತರಬೇತಿ ಪಡೆದಿದ್ದಾರೆ. ಡಿಸೆಂಬರ್ ತಿಂಗಳಿನಲ್ಲಿ 59 ಅಭ್ಯರ್ಥಿಗಳು ತರಬೇತಿ ಪಡೆದಿದ್ದು, 85- ಪುರುಷರು ಹಾಗೂ 29- ಮಹಿಳೆಯರು ತರಬೇತಿ ಪಡೆದಿದ್ದಾರೆ.  ತರಬೇತಿ ಪಡೆದವರಲ್ಲಿ, ಪ.ಜಾತಿ-29 ಮತ್ತು ಪ. ಪಂಗಡ-16, ಹಿಂದುಳಿದ ವರ್ಗ-62 ಹಾಗೂ  ಸಾಮಾನ್ಯ ವರ್ಗದ 07 ಅಭ್ಯರ್ಥಿಗಳಿದ್ದಾರೆ.
ಕೌಶಲ್ಯ ತರಬೇತಿ:
*********ಕೌಶಲ್ಯ ತರಬೇತಿಗಾಗಿ ಜಿಲ್ಲೆಯ ಅಭ್ಯರ್ಥಿಗಳ ನೊಂದಣಿ ಮಾಡಿಕೊಳ್ಳಲಾಗಿದ್ದು ಕೊಪ್ಪಳ ತಾಲೂಕಿನಲ್ಲಿ 5842, ಗಂಗಾವತಿ ತಾಲೂಕಿನ 3787, ಕುಷ್ಟಗಿ ತಾಲೂಕಿನ 5235 ಹಾಗೂ ಯಲಬುರ್ಗಾ ತಾಲೂಕಿನ 4022 ಅಭ್ಯರ್ಥಿಗಳ ನೊಂದಣಿಯಾಗಿದ್ದು, ಕಳೆದ ವರ್ಷ ಮೇ 15 ರಿಂದ ಡಿಸೆಂಬರ್ 30 ರವರೆಗೆ ಒಟ್ಟು 11,886 ಅಭ್ಯರ್ಥಿಗಳು ಕೌಶಲ್ಯ ತರಬೇತಿಗಾಗಿ ತಮ್ಮ ಹೆಸರು ನೋಂದಾಯಿಸಿದ್ದಾರೆ. ಇವರಿಗೆ ಮುಂದಿನ ದಿನಗಳಲ್ಲಿ ಸುಮಾರು 700 ಕ್ಕೂ ಹೆಚ್ಚು ಕೌಶಲ್ಯ ತರಬೇತಿಗಳನ್ನು ಕೈಗೊಳ್ಳಲಾಗುತ್ತಿದ್ದು, ಅಭ್ಯರ್ಥಿಗಳು ಯಾವ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ ಎಂಬುದನ್ನು ನೋಡಿ ಅವರಿಗೆ ಆಯಾ ತರಬೇತಿ ನೀಡಲಾಗುವುದು.
ಕಂಪ್ಯೂಟರ್ ತರಬೇತಿ:
*********** ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಿಂದ ಇದೇ ಮೊದಲ ಬಾರಿಗೆ ಅಭ್ಯರ್ಥಿಗಳಿಗೆ ಕಚೇರಿಯಲ್ಲಿಯೆ 30 ದಿನಗಳ ಕಂಪ್ಯೂಟರ್ ತರಬೇತಿ ನೀಡಲಾಗುತ್ತಿದೆ. ಜನೆವರಿ ತಿಂಗಳಿನಲ್ಲಿ ನಡೆದಿರುವ ಕಂಪ್ಯೂಟರ್ ತರಬೇತಿಯ ಮೊದಲ ತಂಡದಲ್ಲಿ ಈಗಾಗಲೆ 30 ಅಭ್ಯರ್ಥಿಗಳು ಆಯ್ಕೆಯಾಗಿದ್ದು ತರಬೇತಿ ಪಡೆಯುತ್ತಿದ್ದಾರೆ.
     ಕೊಪ್ಪಳ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರವು ರಾಜ್ಯದಲ್ಲಿನ ವಿವಿಧ ಕಂಪನಿಗಳನ್ನು ಆಹ್ವಾನಿಸಿ ತಮ್ಮ ಕಂಪನಿಗಳಿಗೆ ಬೇಕಾಗುವ ಕೆಲಸಗಾರರನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲು ವೇದಿಕೆ ನಿರ್ಮಿಸಿಕೊಡುತ್ತಿದೆ. ಇದರಿಂದಾಗಿ ಟೆಕ್ನಿಕಲ್ ಕೋರ್ಸ್ ಮಾಡಿದ ಉದ್ಯೋಗಾಕಾಂಕ್ಷಿಗಳಿಗೆ ತಮ್ಮ ಊರಿನಲ್ಲಿಯೇ ಸಂದರ್ಶನ ನಡೆಯುವುದರಿಂದ ಅನುಕೂಲವಾಗಲಿದೆ. ಹೀಗೆ ಹಲವಾರು ಕಂಪನಿಗಳು ಸಂದರ್ಶನದ ಮೂಲಕ ಜಿಲ್ಲೆಯ ಯುವಕ ಯುವತಿಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಉದ್ಯೋಗಾಧಿಕಾರಿ ಪಿ.ಎಸ್. ಹಟ್ಟಪ್ಪ ಅವರು.

-ನಾಗರಾಜ್ ಬೆಲ್ಲದ್
ಕೊಪ್ಪಳ
Post a Comment