Wednesday, 7 February 2018

ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ ಅಗತ್ಯ ಸೌಲಭ್ಯಗಳ ಕುರಿತು ಫೆ. 20 ರೊಳಗೆ ಖಚಿತಪಡಿಸಿ- ಎಂ. ಕನಗವಲ್ಲಿ



ಕೊಪ್ಪಳ ಫೆ. 07 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಲ್ಲ 1286 ಮತಗಟ್ಟೆಗಳ ಭೌತಿಕ ಪರಿಶೀಲನೆ ನಡೆಸಿ, ಚುನಾವಣಾ ಆಯೋಗ ಸೂಚಿಸಿರುವ ಎಲ್ಲ ಅಗತ್ಯ ಸೌಲಭ್ಯಗಳನ್ನು ಒದಗಿಸಿರುವ ಕುರಿತು ಫೆ. 20 ರ ಒಳಗಾಗಿ ದೃಢೀಕರಣ ಪತ್ರ ಸಲ್ಲಿಸುವಂತೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

      ಜಿಲ್ಲೆಯ ಮತಗಟ್ಟೆಗಳ ಸ್ಥಿತಿ-ಗತಿ ಕುರಿತು ಇಲಾಖಾವಾರು ಪರಿಶೀಲನೆ ಸಂಬಂಧ ಬುಧವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

     ಕೊಪ್ಪಳ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 1286 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.  ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ 269, ಕನಕಗಿರಿ-257, ಗಂಗಾವತಿ-230, ಯಲಬುರ್ಗಾ-251 ಹಾಗೂ ಕೊಪ್ಪಳ ಕ್ಷೇತ್ರದಲ್ಲಿ 279 ಮತಗಟ್ಟೆಗಳಿವೆ.  ಈ ಬಾರಿ ಮತಗಟ್ಟೆಗಳನ್ನು ವಿಕಲಚೇತನ ಸ್ನೇಹಿ ಮತಗಟ್ಟೆಗಳನ್ನಾಗಿಸಲಾಗುವುದು.  ಮತಗಟ್ಟೆಗಳಲ್ಲಿ ವಿಕಲಚೇತನರಿಗಾಗಿ ರ್ಯಾಂಪ್ ವ್ಯವಸ್ಥೆ ಕಡ್ಡಾಯವಾಗಿ ಇರಲೇಬೇಕು.  ಜೊತೆಗೆ ವಿದ್ಯುತ್ ಸಂಪರ್ಕ ವ್ಯವಸ್ಥೆ, ಕುಡಿಯುವ ನೀರು ಪೂರೈಕೆ, ನೆರಳು, ಶೌಚಾಲಯ ಹೀಗೆ ಮೂಲಭೂತ ಸೌಕರ್ಯಗಳು ಸಮರ್ಪಕವಾಗಿ ಇರುವ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಖುದ್ದಾಗಿ ಆಯಾ ಮತಗಟ್ಟೆಗಳಿಗೆ ಒಂದು ಸುತ್ತು ಭೇಟಿ ನೀಡಿ ಕೂಲಂಕಷವಾಗಿ ಪರಿಶೀಲಿಸಬೇಕು.  ಅಲ್ಲದೆ ಈ ಎಲ್ಲ ಸೌಲಭ್ಯಗಳಲ್ಲಿ ಕೊರತೆ ಇದ್ದಲ್ಲಿ, ಕೂಡಲೆ ಕಾಮಗಾರಿ ಕೈಗೊಂಡು 10 ದಿನಗಳ ಒಳಗಾಗಿ ಪೂರ್ಣಗೊಳಿಸಬೇಕು.  ಎಲ್ಲ ಸೌಲಭ್ಯಗಳು ಇರುವ ಕುರಿತು ಆಯಾ ಇಲಾಖೆಯ ಅಧಿಕಾರಿಗಳು ಫೆ. 20 ರ ಒಳಗಾಗಿ ದೃಢೀಕರಣ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕು.   ಬಹುತೇಕ ಮತಗಟ್ಟೆಗಳು ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಶಾಲೆಗಳಲ್ಲಿದ್ದು, ಉಳಿದಂತೆ ಲೋಕೋಪಯೋಗಿ, ಪಶುಸಂಗೋಪನೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಇಲಾಖೆ, ಜೆಸ್ಕಾಂ, ಕಂದಾಯ, ಸಹಕಾರ, ಎಪಿಎಂಸಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವ್ಯಾಪ್ತಿಯಲ್ಲಿವೆ.  ಆಯಾ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೂಡಲೆ ಮತಗಟ್ಟೆಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿ, ವರದಿ ಸಲ್ಲಿಸಬೇಕು.  ಎಲ್ಲೆಲ್ಲಿ ಕಟ್ಟಡಗಳ ಸಣ್ಣಪುಟ್ಟ ದುರಸ್ತಿಗಳು, ರ್ಯಾಂಪ್ ನಿರ್ಮಾಣ, ಶೌಚಾಲಯ, ಕುಡಿಯುವ ನೀರು ಪೂರೈಕೆಯ ಸಮಸ್ಯೆಗಳಿದ್ದಲ್ಲಿ, ಅವೆಲ್ಲವನ್ನೂ ಕೂಡಲೆ ಕೈಗೊಳ್ಳಬೇಕು.  ಮತಗಟ್ಟೆಗಳನ್ನು ಆದಷ್ಟು ನೆಲಮಹಡಿಯಲ್ಲಿಯೇ ಇರುವಂತೆ ನೋಡಿಕೊಳ್ಳಬೇಕು.  ಚುನಾವಣಾ ಪ್ರಕ್ರಿಯೆಗೆ ಈಗಾಗಲೆ ಸಿಬ್ಬಂದಿಗಳನ್ನು ಗುರುತಿಸುವ ಕಾರ್ಯ ಪ್ರಾರಂಭಿಸಲಾಗಿದ್ದು, ನೌಕರರನ್ನು ಗುರುತಿಸುವ ಸಂದರ್ಭದಲ್ಲಿ ಗರ್ಭಿಣಿಯರು, ನಿವೃತ್ತಿಯಾದವರು, ವರ್ಗಾವಣೆಗೊಂಡವರು ಇಂತಹವರ ಹೆಸರು ಪಟ್ಟಿಯಲ್ಲಿ ಬಾರದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕರ್ತವ್ಯ ನಿರ್ಲಕ್ಷ್ಯತೆ ಸಹಿಸುವುದಿಲ್ಲ :
************ಚುನಾವಣೆ ಪ್ರಕ್ರಿಯೆ ಎಂಬುದು ಒಂದು ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ಇದರಲ್ಲಿ ಎಲ್ಲ ಅಧಿಕಾರಿಗಳು, ಸಿಬ್ಬಂದಿಗಳು ದಕ್ಷತೆಯಿಂದ ಹಾಗೂ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಬೇಕು.  ಅನಗತ್ಯ ಕುಂಟು ನೆಪಗಳನ್ನು ಮುಂದೊಡ್ಡಿ, ಕರ್ತವ್ಯ ನಿರ್ವಹಿಸಲು ಹಿಂದೇಟು ಹಾಕುವ ಅಥವಾ ಕರ್ತವ್ಯದಲ್ಲಿ ನಿರ್ಲಕ್ಷ್ಯತೆ ತೋರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.  ಇಂತಹ ಕ್ರಮಗಳಿಗೆ ಅವಕಾಶ ನೀಡದಂತೆ ಎಲ್ಲ ಅಧಿಕಾರಿ, ಸಿಬ್ಬಂದಿಗಳು ಚುನಾವಣಾ ಕರ್ತವ್ಯ ನಿರ್ವಹಿಸುತ್ತೀರೆಂಬ ವಿಶ್ವಾಸವಿದೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.
     ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಜಿ.ಪಂ. ಉಪಕಾರ್ಯದರ್ಶಿ ಎನ್.ಕೆ. ತೊರವಿ, ಲೋಕೋಪಯೋಗಿ ಇಲಾಖೆ ಇಇ ಬಂಡಿವಡ್ಡರ್, ಸೇರಿದಂತೆ ಹಲವು ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ತಹಸಿಲ್ದಾರರು, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಪಾಲ್ಗೊಂಡಿದ್ದರು.
Post a Comment