Wednesday, 7 February 2018

ಫೆ. 10 ರಂದು ರಾಷ್ಟ್ರೀಯ ಲೋಕ್ ಅದಾಲತ್


ಕೊಪ್ಪಳ ಫೆ. 07 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ರಾಜೀ ಆಗಬಹುದಾದ ಎಲ್ಲಾ ತರಹದ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು “ರಾಷ್ಟ್ರೀಯ ಲೋಕ್ ಅದಾಲತ್” ಕಾರ್ಯಕ್ರಮವನ್ನು ಫೆಬ್ರವರಿ. 10 ರಂದು ಜಿಲ್ಲೆಯಾದ್ಯಂತ ಆಚರಿಸಲಾಗುತ್ತಿದೆ.   
        ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಇವರ ಆದೇಶದ ಮೇರಗೆ ಕೊಪ್ಪಳ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಈಗಾಗಲೆ ಖಾಯಂ ಸದಸ್ಯ ಕಾರ್ಯದರ್ಶಿಗಳ ಸ್ಥಾನವನ್ನು ಹೊಂದಿ ಕಾರ್ಯನಿರ್ವಹಿಸುತ್ತಿದೆ.  ನ್ಯಾಯಾಧೀಶರಾದ ಟಿ. ಶ್ರೀನಿವಾಸ್ ಅವರು ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.    ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ರಾಜ್ಯ ಕಾನೂನು ಸೇವೆಗಳ ಪಾಧಿಕಾರ ಇವರ ನಿರ್ದೇಶನದ ಮೇರಗೆ ಜಿಲ್ಲೆಯ ಕೊಪ್ಪಳ, ಗಂಗಾವತಿ, ಕುಷ್ಟಗಿ ಮತ್ತು ಯಲಬುರ್ಗಾ ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿರುವ ಪ್ರಕರಣಗಳು ಹಾಗೂ ನ್ಯಾಯಾಲಯಕ್ಕೆ ಇನ್ನೂ ದಾಖಲಿಸದೇ ಇರುವ ಪ್ರಕರಣಗಳನ್ನು ವ್ಯಾಜ್ಯಪೂರ್ವ ಪ್ರಕರಣಗಳು ಅಂತಾ ಪರಿಗಣಿಸಿ ವಿವಿಧ ಪ್ರಕರಣಗಳಾದ ಮೋಟಾರು ವಾಹನ ಅಪಘಾತ ಪರಿಹಾರದ ಪ್ರಕರಣಗಳು, ಭೂಸ್ವಾಧೀನ ಪ್ರಕರಣಗಳು, ವೈವಾಹಿಕ ಹಾಗೂ ಜೀವನಾಂಶ ಪ್ರಕರಣಗಳು, ಕಾನೂನಿನನ್ವಯ ರಾಜೀ ಆಗಬಹುದಾದ ಕ್ರಿಮೀನಲ್ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು, ರಾಜೀ ಆಗಬಹುದಾದ ಎಲ್ಲಾ ತರಹದ ಪ್ರಕರಣಗಳನ್ನು ಫೆಬ್ರವರಿ. 10 ರಂದು ಆಯಾ ನ್ಯಾಯಾಲಯಗಳಲ್ಲಿ ಇತ್ಯರ್ಥಪಡಿಸಿಕೊಳ್ಳಲು ರಾಷ್ಟ್ರೀಯ ಲೋಕ್ ಅದಾಲತ್‍ನ್ನು ಏರ್ಪಡಿಸಿಕೊಳ್ಳಲಾಗಿದೆ.  ಕಕ್ಷಿದಾರರು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ರಾಜೀವ್ ಜಿ. ಜೋಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.   
Post a Comment