Wednesday, 31 January 2018

ಬಾಲಭವನದ ಸಂಯೋಜಕರು & ಕಛೇರಿ ಸಹಾಯಕರ ಆಯ್ಕೆ : ಅರ್ಜಿ ಆಹ್ವಾನ


ಕೊಪ್ಪಳ ಜ. 31 (ಕರ್ನಾಟಕ ವಾರ್ತೆ): ಕೊಪ್ಪಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಜಿಲ್ಲಾ/ ತಾಲೂಕು ಬಾಲಭವನದ ಸಂಯೋಜಕರು ಮತ್ತು ಕಛೇರಿ ಸಹಾಯಕರನ್ನು ತಾತ್ಕಾಲಿಕ ಆಧಾರದ ಮೇಲೆ ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. 
    ಜಿಲ್ಲಾ/ ತಾಲೂಕು ಬಾಲಭವನಗಳ ಕಾರ್ಯಕ್ರಮ/ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಅನುವಾಗುವಂತೆ, ಕಾರ್ಯಕ್ರಮದ ಸಂಯೋಜಕರು ಮತ್ತು ಕಛೇರಿ ಸಹಾಯಕರನ್ನು ತಾತ್ಕಾಲಿಕ ಆಧಾರದ ಮೇಲೆ ನೇಮಿಸಬೇಕಾಗಿರುವದರಿಂದ ಅರ್ಜಿ ಆಹ್ವಾನಿಸಲಾಗಿದ್ದು, ಜಿಲ್ಲಾ ಬಾಲಭವನ ಸಮಿತಿಯ ಮೂಲಕ ಆಯ್ಕೆ ಪ್ರಕ್ರಿಯೆಯನ್ನು ನಿಯಮಾನುಸಾರ ನಡೆಸಲಾಗುವುದು. 
ಹುದ್ದೆಗಳ ಹಾಗೂ ಕರ್ತವ್ಯದ ವಿವರ ಇಂತಿದೆ.  ಕಾರ್ಯಕ್ರಮದ ಸಂಯೋಜಕರು ಹುದ್ದೆಗೆ ಸಂಚಿತ ವೇತನ ರೂ. 15,000/- ಜಿಲ್ಲಾ ಅಥವಾ ತಾಲೂಕು ಬಾಲಭವನಗಳಿಗೆ ಸಂಬಂಧಿಸಿದ ಕಾರ್ಯಕ್ರಮ ಅಥವಾ ಚಟುವಟಿಕೆಗಳನ್ನು ನಿಯಮಾನುಸಾರ ನಡೆಸುವುದು.  ಸಂಬಂಧಿಸಿದ ತಾಲೂಕುಗಳಿಗೆ ಭೇಟಿ ನೀಡಿ ಕಾರ್ಯಕ್ರಮ ನಿರ್ವಹಿಸುವುದು ಮತ್ತು ಮೇಲಾಧಿಕಾರಿಗಳು ಸೂಚಿಸುವ ಇನ್ನಿತರ ಕರ್ತವ್ಯ ನಿರ್ವಹಿಸುವುದು. 
     ಕಛೇರಿ ಸಹಾಯಕರು ಹುದ್ದೆಗೆ ಸಂಚಿತ ವೇತನ ರೂ. 10,000/- ಜಿಲ್ಲಾ ಅಥವಾ ತಾಲೂಕು ಬಾಲಭವನಗಳಿಗೆ ಸಂಬಂಧಿಸಿದ ಕಾರ್ಯಕ್ರಮ ಅಥವಾ ಚಟುವಟಿಕೆಗಳನ್ನು ಸಂಬಂಧಿಸಿದ ಕೆಲಸ ಹಾಗೂ ಕಾರ್ಯಕ್ರಮದ ಸಂಯೋಜಕರಿಗೆ ಸಹಾಯ ಮಾಡುವುದರೊಂದಿಗೆ ಮೇಲಾಧಿಕಾರಿಗಳು ಸೂಚಿಸಿದ ಇನ್ನಿತರ ಕರ್ತವ್ಯ ನಿರ್ವಹಿಸುವುದು.     
ಅರ್ಜಿ ಸಲ್ಲಿಸಲು ಸಂಯೋಜಕರ ಹುದ್ದೆಗೆ ಬಿ.ಎಸ್.ಡಬ್ಲ್ಯೂ./ ಎಂ.ಎಸ್.ಡಬ್ಲ್ಯೂ.,/ ಎಂ.ಎ. ಇವುಗಳಲ್ಲಿ ಯಾವುದಾದರು ಒಂದು ಪದವಿ ಮತ್ತು ಕಂಪ್ಯೂಟರ್ ಜ್ಞಾನದೊಂದಿಗೆ, ಸೃಜನಾತ್ಮಕ ಮತ್ತು ಕ್ರಿಯಾತ್ಮಕ ಚಟುವಟಿಕೆಗಳ ಯಾವುದಾದರು ಒಂದು ಕಲಾ ಕ್ಷೇತ್ರದಲ್ಲಿ ಕೌಶಲ್ಯ ಹೊಂದಿರುವ ಬಗ್ಗೆ ಮಾಹಿತಿ ಒದಗಿಸುವುದು ಅವಶ್ಯವಾಗಿದೆ.  ಪದವಿ ಸರ್ಟಿಫಿಕೆಟ್, ಕಂಪ್ಯೂಟರ್ ಸಾಕ್ಷಾರತ ಪತ್ರ, ಅನುಭವ ಪತ್ರ, ಬಾಲಭವನದಲ್ಲಿ ಕನಿಷ್ಠ 5 ವರ್ಷಗಳಿಗೆ ಮೇಲ್ಪಟ್ಟು ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿರುವ ಸೇವಾ ತೃಪ್ತಿಕರ ಪತ್ರ ಸಂಬಂಧಿಸಿದ ಇಲಾಖೆ ಸಂಸ್ಥೆಯಿಂದ ಪಡೆದಿರಬೇಕು.  ಕಛೇರಿ ಸಹಾಯಕರ ಹುದ್ದೆಗೆ ಕನಿಷ್ಠ ಪಿಯುಸಿ ವಿದ್ಯಾರ್ಹತೆಯೊಂದಿಗೆ  ಕಂಪ್ಯೂಟರ್ ಜ್ಞಾನ ಕಡ್ಡಾಯವಾಗಿ ಹೊಂದಿರಬೇಕು.  ಹಾಗೂ ಕಂಪ್ಯೂಟರ್ ಸಾಕ್ಷಾರತ ಪತ್ರ, ಅನುಭವ ಪತ್ರ, ಯಾವುದಾದರು ಒಂದು ಕಛೇರಿಯಲ್ಲಿ 3 ವರ್ಷ ಅನುಭವ ಹೊಂದಿರಬೇಕು.  ಆಸಕ್ತರು ಪ್ರಸ್ತಾವನೆಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೊಪ್ಪಳ ಇವರಿಗೆ ಫೆಬ್ರವರಿ. 09 ರೊಳಗಾಗಿ ಸಲ್ಲಿಸಬೇಕು ಎಂದು ಕೊಪ್ಪಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಗಂಗಾವತಿ ನಗರಸಭೆ ವತಿಯಿಂದ ವಿವಿಧ ತರಬೇತಿ ಅರ್ಜಿ ಆಹ್ವಾನ


ಕೊಪ್ಪಳ ಜ. 31 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆ ಗಂಗಾವತಿ ನಗರಸಭೆ ವತಿಯಿಂದ 2017-18ನೇ ಸಾಲಿನ ಡೇ-ನಲ್ಮ್ ಯೋಜನೆಯ ಇ.ಎಸ್.ಟಿ.ಪಿ. ಉಪಯೋಜನೆಯ ಅಡಿಯಲ್ಲಿ ನಗರಸಭೆ ವ್ಯಾಪ್ತಿಯಲ್ಲಿರುವ ಬಿ.ಪಿ.ಎಲ್. ರಹಿವಾಶಿಗಳಿಗೆ ನಗರಸಭೆ ವ್ಯಾಪ್ತಿಯಲ್ಲಿ ಬರುವ ವಿವಿಧ ವಾರ್ಡ್ ಮತ್ತು ಪ್ರದೇಶಮಟ್ಟದ ಒಕ್ಕೂಟಗಳಲ್ಲಿ ವಿವಿಧ ತರಬೇತಿಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
           ಗಂಗಾವತಿ ನಗರಸಭೆಯು 50 ಜನರಿಗೆ ಸೇವಿಂಗ್ ಮೆಶಿನ್ ಆಪರೇಟರ್, ಸ್ಪೇಶಲಾಯಿಜ್ಡ್ ಸೇವಿಂಗ್ ಮೆಶಿನ್ ಆಪರೇಟರ್ ಹಾಗೂ ಸೆಲ್ಫ್ ಎಂಪ್ಲಾಯಿಡ್ ಟೈಲರ್ ತರಬೇತಿ.  35 ಜನರಿಗೆ ಡೊಮ್ಯಾಸ್ಟೀಕ್ ಡಾಟಾ ಎಂಟ್ರಿ ಆಪರೇಟರ್ ಹಾಗೂ ವೆಬ್ ಡೆವ್ಹಲಪರ್ ತರಬೇತಿ ಮತ್ತು 30 ಜನರಿಗೆ ವಾಷಿಂಗ್ ಮಶೀನ್ ಆಪರೇಟರ್ ತರಬೇತಿಯನ್ನು ನೀಡಲು ಉದ್ದೇಶಿಸಿದೆ.
             ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಞಚಿushಚಿಟಞಚಿಡಿ.ಛಿom ನಲ್ಲಿ ನೋಂದಣಿಯಾಗಿರಬೇಕು.  ಕನಿಷ್ಠ 5 ರಿಂದ 12 ನೇ ತರಗತಿ ಒಳಗೆ ವಿದ್ಯಾರ್ಹತೆ ಹೊಂದಿರಬೇಕು.  ಆದಾಯವು ರೂ.23,124/- ಒಳಗಿರಬೇಕು.  ಅರ್ಜಿಯನ್ನು ನಗರಸಭೆ ಕಾರ್ಯಾಲಯದ ನಲ್ಮ್ ವಿಭಾಗದಲ್ಲಿ ಪಡೆದು ಭರ್ತಿ ಮಾಡಿ, ಅದರೊಂದಿಗೆ ಜಾತಿ ಪ್ರಮಾಣ ಪತ್ರ, ಟಿ.ಸಿ., ಆದಾಯ ಪ್ರಮಾಣ ಪತ್ರ, ವಿದ್ಯಾರ್ಹತೆ ಪ್ರಮಾಣ ಪತ್ರ, ಮತದಾರರ ಚೀಟಿ/ರೇಷನ್ ಕಾರ್ಡ್/ ಆಧಾರ ಕಾಡ ಪ್ರತಿಯನ್ನು ಲಗತ್ತಿಸಿ ಫೆ. 15 ರ ಸಂಜೆ 4-00 ಗಂಟೆಯೊಳಗಾಗಿ ಸಲ್ಲಿಸಬೇಕು.  ಗುರಿಗೆ ಹಾಗೂ ಮೀಸಲಾತಿಗೆ ಅನುಗುಣವಾಗಿ ಅರ್ಜಿಗಳನ್ನು ಸ್ವೀಕರಿಸುವ ಕುರಿತು ಆಯುಕ್ತರ ನಿರ್ಧಾರವೇ ಅಂತಿಮವಾಗಿರುತ್ತದೆ.  ತರಬೇತಿಗಳು ನಗರಸಭೆಯಲ್ಲಿ ಅಯೋಜಿಸಲಾಗುವುದು ಎಂದು ಗಂಗಾವತಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದರೆ. 

ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸ್ವಂತ ಕಟ್ಟಡಕ್ಕೆ ನಿವೇಶನ : ಆಕ್ಷೇಪಣೆಗೆ ಆಹ್ವಾನ


ಕೊಪ್ಪಳ ಜ. 31 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪಟ್ಟಣದಲ್ಲಿ ನಾಗರಿಕ ಸೌಲಭ್ಯಕ್ಕಾಗಿ ಕಾಯ್ದಿರಿಸಿದ ನಿವೇಶನವನ್ನು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಗೆ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ನಿವೇಶನ ಮಂಜೂರು ಮಾಡಲಾಗಿದ್ದು, ಆಕ್ಷೇಪಣೆಗಳಿಗೆ ಆಹ್ವಾನಿಸಲಾಗಿದೆ. 
          ಯಲಬುರ್ಗಾ ಪಟ್ಟಣದ ವ್ಯಾಪ್ತಿಯ ಕೊಪ್ಪಳ ರಸ್ತೆಯಲ್ಲಿ ಬರುವ ಸ.ನಂ:399/1 ರಲ್ಲಿ ನಾಗರಿಕ ಸೌಲಭ್ಯಕ್ಕಾಗಿ ಕಾಯ್ದಿರಿಸಿದ ನಿವೇಶನ ಸಂಖ್ಯೆ:38 ವಿಸ್ತೀರ್ಣ:191 ಚ.ಮೀ ರಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಗೆ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ನಿವೇಶನವನ್ನು ನಿಯಮಾನುಸಾರ ಹಂಚಿಕೆ ಮಾಡುವ ಕುರಿತು ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಮಂತ್ರಿಗಳ ಟಿಪ್ಪಣಿ ಸೂಚನೆ ಮೇರೆಗೆ ಅಗತ್ಯ ಕ್ರಮವಹಿಸಲು ಸೂಚಿಸಿದ ಪ್ರಕಾರ ಪಟ್ಟಣ ಪಂಚಾಯತ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ನಿವೇಶನವನ್ನು ನಿಯಮಾನುಸಾರ ಮಂಜೂರು ಮಾಡಲು ಸರ್ವಾನುಮತದಿಂದ ನಿರ್ಣಯಿಸಲಾಗಿದೆ. 
ಆಸ್ತಿಯ ಚಕ್ಕಬಂದಿ ಇಂತಿದೆ.  ಪೂರ್ವಕ್ಕೆ - 9 ಮೀಟರ್ ರಸ್ತೆ, ಪಶ್ಚಿಮಕ್ಕೆ - ರಿ.ಸ.ನಂ:400. ಶೇತ್ಕಿ ಜಮೀನು, ಉತ್ತರಕ್ಕೆ -ಉದ್ಯಾನವನ ಜಾಗೆ, ಹಾಗೂ ದಕ್ಷಿಣಕ್ಕೆ - 9 ಮೀಟರ್ ರಸ್ತೆ ಇದ್ದು, ಚಕ್ಕಬಂದಿ ಮಧ್ಯದಲ್ಲಿರುವ ಆಸ್ತಿಯ ನಾಗರಿಕ ಸೌಲಭ್ಯಕ್ಕಾಗಿ ಕಾಯ್ದಿರಿಸಿದ ನಿವೇಶನವನ್ನು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಗೆ ಸ್ವಂತ ಕಟ್ಟಡದ ನಿರ್ಮಾಣಕ್ಕಾಗಿ ಕಾರ್ಯದರ್ಶಿಗಳು, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ತಾಲೂಕಾ ಸಂಸ್ಥೆ ಯಲಬುರ್ಗಾ ಇವರಿಗೆ ಹಂಚಿಕೆ ಮಾಡಲಾಗಿದ್ದು, ಯಾವುದೇ ತಕರಾರು ಇದ್ದಲ್ಲಿ, 7 ದಿನಗಳೊಳಗಾಗಿ ಅಗತ್ಯ ಮೂಲ ದಾಖಲಾತಿಗಳೊಂದಿಗೆ ಲಿಖಿತ ಮೂಲಕ ಸಲ್ಲಿಸಬಹುದಾಗಿದೆ ಎಂದು ಯಲಬುರ್ಗಾ ಪ.ಪಂ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫೆ. 01 ರಂದು ಕೊಪ್ಪಳದಲ್ಲಿ ಮಡಿವಾಳ ಮಾಚಿದೇವರ ಜಯಂತಿ


ಕೊಪ್ಪಳ ಜ. 31 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ವಚನಸಾಹಿತ್ಯ ರಕ್ಷಕ ವೀರ ಗಣಾಚಾರಿ ಮಡಿವಾಳ ಮಾಚಿದೇವರ ಜಯಂತಿ ಆಚರಣೆ ಕಾರ್ಯಕ್ರಮವನ್ನು ಫೆಬ್ರವರಿ. 01 ರಂದು ಬೆಳಿಗ್ಗೆ 11-30 ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದೆ.
    ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು.  ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಸಮಾರಂಭದ ಅಧ್ಯಕ್ಷತೆ ವಹಿಸುವರು.  ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ ಅಧ್ಯಕ್ಷ ಕೆ. ರಾಜಶೇಖರ ಹಿಟ್ನಾಳ, ಸಂಸದ ಕರಡಿ ಸಂಗಣ್ಣ, ಶಾಸಕರುಗಳಾದ ಶಿವರಾಜ ಎಸ್ ತಂಗಡಗಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್, ವಿಧಾನಪರಿಷತ್ ಸದಸ್ಯರುಗಳಾದ ಬಸವರಾಜ ಪಾಟೀಲ ಇಟಗಿ, ಅಮರನಾಥ ಪಾಟೀಲ, ಶರಣಪ್ಪ ಮಟ್ಟೂರ, ಜಿ.ಪಂ. ಉಪಾಧ್ಯಕ್ಷೆ ಲಕ್ಷ್ಮಮ್ಮ ಸಿದ್ದಪ್ಪ ನೀರಲೂಟಿ, ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ, ತಾ.ಪಂ. ಅಧ್ಯಕ್ಷ ಬಾಲಚಂದ್ರನ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯದ್ ಜುಲ್ಲು ಖಾದರ ಖಾದ್ರಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸರ್ಕಾರದ ಕಾರ್ಯದರ್ಶಿ ಉಮಾ ಮಹದೇವನ್ ಪಾಲ್ಗೊಳ್ಳುವರು.   ಕೊಪ್ಪಳ ಹಿರಿಯ ಸಾಹಿತಿಗಳಾದ ಅಲ್ಲಮಪ್ರಭು ಬೆಟದೂರ ಅವರು ಮಡಿವಾಳ ಮಾಚಿದೇವರ ಕುರಿತು ವಿಶೇಷ ಉಪನ್ಯಾಸ ನೀಡುವರು.
ಕಾರ್ಯಕ್ರಮದ ಅಂಗವಾಗಿ ಅಂದು ಬೆಳಿಗ್ಗೆ 9 ಗಂಟೆಗೆ ಮಡಿವಾಳ ಮಾಚಿದೇವರ ಭಾವಚಿತ್ರದ ಮೆರವಣಿಗೆ ಕೊಪ್ಪಳ ಕೋಟೆ ರಸ್ತೆಯ ಅಕ್ಕಮಹಾದೇವಿ ದೇವಸ್ಥಾನ (ಮಹೇಶ್ವರ ದೇವಸ್ಥಾನ) ದಿಂದ ಪ್ರಾರಂಭಗೊಂಡು, ಗಡಿಯಾರ ಕಂಬದ ಮಾರ್ಗವಾಗಿ ಜವಾಹರ ರಸ್ತೆಯ ಮೂಲಕ ಸಾಹಿತ್ಯ ಭವನದ ವರೆಗೆ ಜರುಗುವುದು ಎಂದು ಪ್ರಕಟಣೆ ತಿಳಿಸಿದೆ.

ಪ್ರದಸ ಹುದ್ದೆಗಳ ನೇರ ನೇಮಕಾತಿ ಪರೀಕ್ಷೆ : ನಿಷೇಧಾಜ್ಞೆ ಜಾರಿ


ಕೊಪ್ಪಳ ಜ. 31 (ಕರ್ನಾಟಕ ವಾರ್ತೆ): ಕರ್ನಾಟಕ ಲೋಕ ಸೇವಾ ಆಯೋಗದಿಂದ ಜರುಗಲಿರುವ ಪ್ರಥಮ ದರ್ಜೆ ಸಹಾಯಕರು ಹುದ್ದೆಗಳ ನೇರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ ಫೆಬ್ರವರಿ. 04 ರಂದು ಕೊಪ್ಪಳ ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಪರೀಕ್ಷೆಗಳು ಸುಗಮ ಹಾಗೂ ಶಾಂತಿಯುತವಾಗಿ ನಡೆಯುವ ಉದ್ದೇಶದಿಂದ ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಆದೇಶ ಹೊರಡಿಸಿದ್ದಾರೆ.
     ಪ್ರಥಮ ದರ್ಜೆ ಸಹಾಯಕರು ಹುದ್ದೆಗಳ ನೇರ ನೇಮಕಾತಿ ಪರೀಕ್ಷೆ ಫೆ. 04 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 4 ಗಂಟೆಯವರೆಗೆ ಜಿಲ್ಲೆಯ ಕೊಪ್ಪಳ ಹಾಗೂ ಗಂಗಾವತಿ ತಾಲೂಕಿನ ಒಟ್ಟು 33 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಒಟ್ಟು  9881 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.  ಪರೀಕ್ಷಾ ಕೇಂದ್ರದ ಸುತ್ತಮುತ್ತಲಿನ 200 ಮೀಟರ್ ವ್ಯಾಪ್ತಿಯ ಪ್ರದೇಶದಲ್ಲಿ ಹಾಗೂ ಪರೀಕ್ಷಾ ಕೇಂದ್ರದಲ್ಲಿ ಯಾವುದೇ ರೀತಿಯ ಅಕ್ರಮ/ ಅವ್ಯವಹಾರ ನಡೆಯದಂತೆ 144ನೇ ಕಲಂ ಅನ್ವಯ ನಿಷೇದಾಜ್ಞೆಯನ್ನು ಜಾರಿಗೊಳಿಸಲಾಗಿದ್ದು, ಇದರನ್ವಯ ನಿಷೇಧಿತ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಎಸ್.ಟಿ.ಡಿ., ಮೊಬೈಲ್, ಪೇಜರ್, ಜೆರಾಕ್ಸ್, ಟೈಪಿಂಗ್ ಮುಂತಾದವುಗಳನ್ನು ನಿಷೇಧಿಸಲಾಗಿದೆ.  ಪರೀಕ್ಷೆಯಲ್ಲಿ ಪ್ರವೇಶ ಪತ್ರ ಹೊಂದಿದ ವಿದ್ಯಾರ್ಥಿಗಳು ಹಾಗೂ ನಿಯೋಜಿತ ಶಿಕ್ಷಕರನ್ನು, ಜಾಗೃತ ದಳದವರನ್ನು ಹೊರತುಪಡಿಸಿ ಇನ್ನುಳಿದವರಿಗೆ ಪರವಾನಿಗೆ ಇಲ್ಲದೆ ಪರೀಕ್ಷಾ ಕೇಂದ್ರದಲ್ಲಿ ಪ್ರವೇಶ ಮಾಡುವುದನ್ನು ನಿರ್ಬಂಧಿಸಲಾಗಿದೆ.  ನಿಷೇಧಿತ ವ್ಯಾಪ್ತಿಯಲ್ಲಿ ಜನರು ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡುವುದನ್ನು ನಿಷೇಧಿಸಿದೆ.  ಈ ಆದೇಶವು ಮದುವೆ, ಶವ ಸಂಸ್ಕಾರಗಳು ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಿಗೆ ಅನ್ವಯವಾಗುವುದಿಲ್ಲ ಎಂದು ಕೊಪ್ಪಳ ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.
ಪರೀಕ್ಷಾ ಕೇಂದ್ರಗಳ ವಿವರ :
************** ಪ್ರಥಮ ದರ್ಜೆ ಸಹಾಯಕರು ಹುದ್ದೆಗಳ ನೇರ ನೇಮಕಾತಿ ಜಿಲ್ಲೆಯ ಕೊಪ್ಪಳ ಹಾಗೂ ಗಂಗಾವತಿ ತಾಲೂಕುಗಳಲ್ಲಿ ನಡೆಯಲಿದ್ದು, ಪರೀಕ್ಷಾ ಕೇಂದ್ರಗಳ ವಿವರ ಇಂತಿದೆ, ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಾಲಕಿಯರ ಸರ್ಕಾರಿ ಪ.ಪೂ ಕಾಲೇಜು, ಗವಿಸಿದ್ದೇಶ್ವರ ಪಿ.ಯು ಕಾಲೇಜು, ಗವಿಸಿದ್ದೇಶ್ವರ ಕಲಾ-ವಾಣಿಜ್ಯ-ವಿಜ್ಞಾನ ಪದವಿ ಕಾಲೇಜು, ಹೊಸಪೇಟೆ ರಸ್ತೆಯ ಎಸ್.ಎಫ್.ಎಸ್ ಶಾಲೆ, ಲಯನ್ಸ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ಬಾಲಕರ ಸರ್ಕಾರಿ ಪ.ಪೂ ಕಾಲೇಜು, ನ್ಯಾಷನಲ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಭಾಗ್ಯನಗರ, ಗವಿಸಿದ್ದೇಶ್ವರ ಪ್ರೌಢ ಶಾಲೆ, ಗದಗ ರಸ್ತೆಯ ಸರ್ಕಾರಿ ಪಾಲಿಟೆಕ್ನಿಕ್ ದದೆಗಲ್, ಗುಳಗಣ್ಣವರ್ ಪಾಲಿಟೆಕ್ನಿಕ್ ದದೆಗಲ್, ಕುಷ್ಟಗಿ ರಸ್ತೆಯ ಕಾಳಿದಾಸ ಪ್ರೌಢ ಶಾಲೆ, ವಿಠ್ಠಲ ಮಾದರಿ ನಗರದ ನಿವೇಧಿತ ಪ್ರಾಥಮಿ ಮತ್ತು ಪ್ರೌಢ ಶಾಲೆ, ಗವಿಸಿದ್ದೇಶ್ವರ ಕಾಲೇಜ್ ಆಫ್ ಎಜುಕೇಶನ್, ಗದಗ ರಸ್ತೆಯ ಮಿಲ್ಲೆನಿಯಂ ಪಬ್ಲಿಕ್ ಸ್ಕೂಲ್, ಮತ್ತು ಗಂಗಾವತಿ ತಾಲೂಕಿನ ಕಾರಟಗಿಯ ಶ್ರೀಶರಣ ಬಸವೇಶ್ವರ ಕನ್/ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಗಂಗಾವತಿಯ ವಿರುಪಾಪುರದ ಬೇಥಲ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಕಾರಟಗಿಯ ರೆಡ್ಡಿ ವೀರಣ್ಣ ಸಂಜೀವಪ್ಪ (ಐಸಿಎಸ್‍ಸಿ) ರೆಸಿಡೆಂಸಿಯಲ್ ಸ್ಕೂಲ್ ಮರಲಾನಹಳ್ಳಿ, ಗಂಗಾವತಿಯ ಬಾಲಕರ ಸರ್ಕಾರಿ ಪ.ಪೂ ಕಾಲೇಜು, ಜೈನಗರದ ಸೆಂಟ್ ಪೌಲ್ಸ್ ಇಂಗ್ಲೀಷ್ ಹೌಸ್ಕೂಲ್, ಹೊಸ್ಸಳ್ಳಿ ರಸ್ತೆಯ ಲಿಟ್ಲ್ ಹಾಟ್ರ್ಸ್ ಸ್ಕೂಲ್, ಕೊಟ್ಟೂರೇಶ್ವರ ಪ.ಪೂ ಕಾಲೇಜು, ಎನ್.ಎನ್.ಎಂ ಬಾಲಕೀಯರ ಸರ್ಕಾರಿ ಪ.ಪೂ ಕಾಲೇಜು, ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಎಸ್.ಕೆ.ಎನ್.ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸೆಂಟರ್-1 & ಸೆಂಟರ್-2, ಪಂಪಾ ನಗರದ ಕಲ್ಮಠ ಚನ್ನಬಸವೇಶ್ವಮೈ ಆಟ್ರ್ಸ್ & ಕಾಮರ್ಸ್ ಕಾಲೇಜ್ ಫಾರ್ ಹೆಮೆನ್, ಹೆಚ್.ಆರ್ ಸರೋಜಮ್ಮ ಮೆಮೋರಿಯಲ್ ಬಾಲಕೀಯರ ಪ.ಪೂ ಕಾಲೇಜು, ಕೊಟ್ಟೂರೇಶ್ವರ ಕ್ಯಾಂಪ್‍ನ ಜಿ.ಹೆಚ್.ಎನ್ ಕಾಲೇಜ್ ಆಫ್ ಕಾಮರ್ಸ್, ಟಿ.ಎಂ.ಎ.ಇ ಸೊಸಿಯೆಟೀಸ್ ಕಾಲೇಜ್ ಆಪ್ ಎಜುಕೇಶನ್, ನವಲಿ ರಸ್ತೆಯ ಸೆಂಟ್ರಲ್ ಪಬ್ಲಿಕ್ ಹೈಸ್ಕೂಲ್ ಹಾಗೂ ಕಾರಟಗಿಯ ಸರ್ಕಾರಿ ಪ.ಪೂ ಕಾಲೇಜುಗಳಲ್ಲಿ ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.

ಕೊಪ್ಪಳ ಜಿಲ್ಲಾ ಉಸ್ತುವಾರಿ ಮಂತ್ರಿಗಳ ಪ್ರವಾಸ ಕಾರ್ಯಕ್ರಮ


ಕೊಪ್ಪಳ ಜ. 31 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಫೆಬ್ರವರಿ. 01 ರಿಂದ 04 ರವರೆಗೆ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
        ಬಸವರಾಜ ರಾಯರಡ್ಡಿ ಅವರು ಹುಬ್ಬಳಿಯಿಂದ ಹೊರಟು ಫೆ. 01 ರಂದು ಸಂಜೆ 06 ಗಂಟೆಗೆ ಕೊಪ್ಪಳಕ್ಕೆ ಆಗಮಿಸಿ, ಗವಿಸಿದ್ದೇಶ್ವರ ಮಠಕ್ಕೆ ಭೇಟಿ ನೀಡುವರು.  ನಂತರ 7-30 ಕ್ಕೆ ಪಕ್ಷದ ಮುಖಂಡರ ಭೇಟಿ/ ಸಭೆಯಲ್ಲಿ ಪಾಲ್ಗೊಂಡು ಕೊಪ್ಪಳದಲ್ಲಿ ವಾಸ್ತವ್ಯ ಮಾಡುವರು.  ಫೆ. 02 ರಂದು ಬೆಳಿಗ್ಗೆ 9-30 ಗಂಟೆಗೆ ತಳಕಲ್‍ಗೆ ತೆರಳಿ, 10-30 ಕ್ಕೆ ತಳಕಲ್‍ನಲ್ಲಿ ನಿರ್ಮಿಸಲಾಗುತ್ತಿರುವ ಸಕಾರಿ ಇಂಜಿನಿಯರಿಂಗ್ ಕಾಲೇಜಿನ ನೂತನ ಕಟ್ಟಡ ಕಾಮಗಾರಿಯ ಪರಿವೀಕ್ಷಣೆ ನಡೆಸುವರು.  11-30 ಗಂಟೆಗೆ ಲಕಮನಗುಳೆ ಸಣ್ಣ ನೀರಾವರಿ ಇಲಾಖೆ ಕಾಮಗಾರಿಗಳ ಭೂಮಿಪೂಜೆ ನೆರೆವೇರಿಸಲಿದ್ದಾರೆ.  ಮಧ್ಯಾಹ್ನ 12-30 ಗಂಟೆಗೆ ಯಲಬುರ್ಗಾದಲ್ಲಿನ ಕೆಂಪು ಕೆರೆ ಅಭಿವೃದ್ಧಿ ಯೋಜನೆಯ ಕಾಮಗಾರಿಗಳ ಉದ್ಘಾಟನೆ ಹಾಗೂ ರಾಷ್ಟ್ರೀಯ ಹೆದ್ದಾರಿ-367 ರ ಭೂಮಿಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸುವರು.  ಮಧ್ಯಾಹ್ನ 3 ಗಂಟೆಗೆ ಕೊಪ್ಪಳಕ್ಕೆ ಆಗಮಿಸಿ ಪಕ್ಷದ ಸಭೆಯಲ್ಲಿ ಪಾಲ್ಗೊಂಡು ಕೊಪ್ಪಳದಲ್ಲಿ ವಾಸ್ತವ್ಯ ಮಾಡುವರು.   
         ಫೆ. 03 ರಂದು ಬೆಳಿಗ್ಗೆ 9 ಗಂಟೆಗೆ ಕೊಪ್ಪಳದಿಂದ ಯಲಬುರ್ಗಾಕ್ಕೆ ತೆರಳಿ, ಬೆಳಿಗ್ಗೆ 10 ಗಂಟೆಗೆ ಯಲಬುರ್ಗಾದಲ್ಲಿ ನಡೆಯುವ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳುವರು.  ಬೆಳಿಗ್ಗೆ 10 ಗಂಟೆಗೆ ಯಲಗುಬುರ್ಗಾ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಇವರ ಶೈಕ್ಷಣಿಕ ವಿಚಾರಗೋಷ್ಠಿ ‘ಶಾಲೆಗೊಂದು ಶಿಕ್ಷಕ’ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸಾಯಂಕಾಲ 05 ಗಂಟೆಗೆ ಮಸಬಹಂಚಿನಾಳಗೆ ತೆರಳಿ ಯಾತ್ರೀನಿವಾಸ್ ಕಾಮಗಾರಿಯ ಭೂಮಿ ಪೂಜೆ ನೆರೆವೇರಿಸುವರು.  ಸಾಯಂಕಾಲ 7-30 ಕ್ಕೆ ಕೊಪ್ಪಳಕ್ಕೆ ಆಗಮಿಸಿ ವಾಸ್ತವ್ಯ ಮಾಡುವರು.  ಫೆ. 04 ರಂದು ಬೆಳಿಗ್ಗೆ 9-30 ಗಂಟೆಗೆ ಕೊಪ್ಪಳದಿಂದ ಕುಷ್ಟಗಿಗೆ ತೆರಳುವರು.  ಬೆಳಿಗ್ಗೆ 10-30 ಗಂಟೆಗೆ ಕುಷ್ಟಗಿ, ಮಧ್ಯಾಹ್ನ 12 ಗಂಟೆಗೆ ಕನಕಗಿರಿ, 01 ಗಂಟೆಗೆ ಗಂಗಾವತಿ ಹಾಗೂ ಮಧ್ಯಾಹ್ನ 2 ಗಂಟೆಗೆ ಕಾರಟಗಿಯಲ್ಲಿ ಪಕ್ಷದ ಕಾರ್ಯಕರ್ತರ ಭೇಟಿ ಮಾಡುವರು.  ಮಧ್ಯಾಹ್ನ 3-30 ಗಂಟೆಗೆ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಎಂದು ವಿಶೇಷ ಕರ್ತವ್ಯಾಧಿಕಾರಿ ತಿಳಿಸಿದ್ದಾರೆ.

Tuesday, 30 January 2018

ಬೆಂಬಲ ಬೆಲೆಯಲ್ಲಿ ಕಡಲೆ ಖರೀದಿ : ಜ. 31 ರಿಂದ ರೈತರ ನೊಂದಣಿ ಪ್ರಕ್ರಿಯೆ ಪ್ರಾರಂಭ- ಎಂ. ಕನಗವಲ್ಲಿ


ಕೊಪ್ಪಳ, ಜ.30  (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಕಡಲೆ ಖರೀದಿ ಕೇಂದ್ರವನ್ನು ತೆರೆಯುವುದಕ್ಕೆ ಸಂಬಂಧಿಸಿದಂತೆ ಮೊದಲ ಹಂತದ ಪ್ರಕ್ರಿಯೆಯಾಗಿ ಜ. 31 ರಿಂದ ರೈತರ ನೊಂದಣಿ ಕಾರ್ಯ ಪ್ರಾರಂಭಿಸಲಾಗುತ್ತಿದ್ದು, ಫೆ. 24 ರವರೆಗೆ ನೊಂದಣಿ ಜರುಗಲಿದೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.

     ಬೆಂಬಲ ಬೆಲೆ ಯೋಜನೆಯಡಿ ಕಡಲೆ ಬೆಳೆಯನ್ನು ಖರೀದಿಸುವ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರದಂದು ನಡೆಸಲಾದ ಜಿಲ್ಲಾ ಕಾರ್ಯಪಡೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

     ಸರ್ಕಾರದ ಸೂಚನೆಯಂತೆ ಬೆಂಬಲ ಬೆಲೆಯಲ್ಲಿ ಕಡಲೆ ಖರೀದಿ ಕೇಂದ್ರವನ್ನು ಪ್ರಾರಂಭಿಸಬೇಕಿದೆ.  ಇದಕ್ಕಾಗಿ ಸರ್ಕಾರದ ಸೂಚನೆಯಂತೆ ಖರೀದಿ ಕೇಂದ್ರ ಪ್ರಾರಂಭಕ್ಕೂ ಮೊದಲು ರೈತರ ನೊಂದಣಿ ಮಾಡಿಸಬೇಕಿದೆ.  ಈ ನಿಟ್ಟಿನಲ್ಲಿ ಜ. 31 ರಿಂದ ಜಿಲ್ಲೆಯ 22 ಕಡೆಗಳಲ್ಲಿ ರೈತರ ನೊಂದಣಿ ಪ್ರಕ್ರಿಯೆ ಪ್ರಾರಂಭಿಸಬೇಕು.  ರೈತರ ನೊಂದಣಿ ಪ್ರಕ್ರಿಯೆ ಗಮನಿಸಿ, ಎಲ್ಲೆಲ್ಲಿ ಖರೀದಿ ಕೇಂದ್ರ ಪ್ರಾರಂಭಿಸಬೇಕು ಎನ್ನುವುದನ್ನು ನಿರ್ಧರಿಸಲಾಗುವುದು.  ಖರೀದಿಸಲಾದ ಕಡಲೆ ದಾಸ್ತಾನು ಮಾಡಲು ಅಗತ್ಯ ಗೋದಾಮು ವ್ಯವಸ್ಥೆಯನ್ನು ಈಗಲೇ ಮಾಡಿಟ್ಟುಕೊಳ್ಳಬೇಕು.  ರೈತರ ನೊಂದಣಿ ಪ್ರಕ್ರಿಯೆಯಲ್ಲಿ ಯಾವುದೇ ಗೊಂದಲ ಉಂಟಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.  ನೋಂದಣಿ ಮಾಡಲು ಬರುವ ರೈತರ ಹೆಸರು ಮತ್ತು ಮೊಬೈಲ್ ಸಂಖ್ಯೆ ವಿವರವನ್ನು ಪಡೆದು, ಪ್ರತ್ಯೇಕವಾಗಿ ರಜಿಸ್ಟರ್ ನಿರ್ವಹಣೆ ಮಾಡಬೇಕು.  ನೋಂದಣಿಗೂ ಟೋಕನ್ ವ್ಯವಸ್ಥೆ ಕೈಗೊಳ್ಳಬೇಕು.  ರೈತರ ನೊಂದಣಿ ಕಾರ್ಯದಲ್ಲಿ ಯಾವುದೇ ತೊಂದರೆಗಳು ಉಂಟಾದಲ್ಲಿ ಸಂಬಂಧಪಟ್ಟ ನೋಡಲ್ ಅಧಿಕಾರಿಗಳ ಗಮನಕ್ಕೆ ತಂದು, ಸಮಸ್ಯೆ ಪರಿಹರಿಸಿಕೊಳ್ಳಬೇಕು.  ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.
22 ಕೇಂದ್ರಗಳಲ್ಲಿ ರೈತರ ನೊಂದಣಿ :
************** ಜ. 31 ರಿಂದ ಫೆ.24 ರವರೆಗೆ ಜಿಲ್ಲೆಯ 22 ಕೇಂದ್ರಗಳಲ್ಲಿ ರೈತರ ನೋಂದಣಿ ಪ್ರಕ್ರಿಯೆ ಜರುಗಲಿದೆ.  ಕಡಲೆ ಬೆಳೆದು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಬಯಸುವ ರೈತರು ಮೊದಲು, ಸಮೀಪದ ನೋಂದಣಿ ಕೇಂದ್ರಕ್ಕೆ ತೆರಳಿ ಹೆಸರು ನೋಂದಾಯಿಸಬೇಕು.  ಯಲಬುರ್ಗಾ ತಾಲೂಕಿನಲ್ಲಿ ಯಲಬುರ್ಗಾ, ಮಂಗಳೂರ, ತಳಕಲ್, ಕುಕನೂರ, ಮಂಡಲಗಿರಿ, ಬನ್ನಿಕೊಪ್ಪ ಮತ್ತು ಮುಧೋಳ ಗ್ರಾಮಗಳ ಟಿಎಪಿಸಿಎಂಎಸ್/ಸೊಸೈಟಿಗಳಲ್ಲಿ ಮೊಬೈಲ್ ಆಪ್ ಮೂಲಕ ನೊಂದಣಿ ಮಾಡಲಾಗುವುದು.  ಕೊಪ್ಪಳ ತಾಲೂಕಿನಲ್ಲಿ ಕೊಪ್ಪಳ, ಅಳವಂಡಿ, ಕಿನ್ನಾಳ, ಕವಲೂರ ಮತ್ತು ಹಿರೇಸಿಂದೋಗಿ.  ಕುಷ್ಟಗಿ ತಾಲೂಕಿನಲ್ಲಿ ಕುಷ್ಟಗಿ, ಹಿರೇಮನ್ನಾಪುರ, ಮುದೇನೂರ, ಹನುಮಸಾಗರ, ತಾವರಗೇರಾ ಮತ್ತು ದೋಟಿಹಾಳ.  ಗಂಗಾವತಿ ತಾಲೂಕಿನಲ್ಲಿ ಕಾರಟಗಿ, ಹುಲಿಹೈದರ, ನವಲಿ ಮತ್ತು ಕನಕಗಿರಿಯಲ್ಲಿ ರೈತರ ನೊಂದಣಿ ಪ್ರಕ್ರಿಯೆ ನಡೆಯಲಿದೆ.
ನೋಂದಣಿಗೆ ಟೋಕನ್ ವ್ಯವಸ್ಥೆ :
********** ಬೆಂಬಲ ಬೆಲೆಯಲ್ಲಿ ಕಡಲೆ ಮಾರಾಟ ಮಾಡಬಯಸುವ ರೈತರ ನೋಂದಣಿ ಕಾರ್ಯ ಸುಗಮವಾಗಿ ಜರುಗಲು ಅನುಕೂಲವಾಗುವಂತೆ ಈ ಬಾರಿ ಟೋಕನ್ ನೀಡುವ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ.  ನೋಂದಣಿ ಪ್ರಕ್ರಿಯೆ ಪ್ರಾರಂಭಕ್ಕೂ ಮುನ್ನವೇ ಟೋಕನ್ ನೀಡಬೇಕು, ಟೋಕನ್ ಪಡೆಯುವ ರೈತರ ಹೆಸರು, ಊರು ಹಾಗೂ ಮೊಬೈಲ್ ಸಂಖ್ಯೆಯನ್ನು ಪ್ರತ್ಯೇಕ ರಜಿಸ್ಟರ್‍ನಲ್ಲಿ ನಮೂದಿಸಬೇಕು.  ಸಂಬಂಧಪಟ್ಟ ರೈತರು ಬೆಳಿಗ್ಗೆಯೇ ನೋಂದಣಿ ಕೇಂದ್ರಕ್ಕೆ ತೆರಳಿ ಟೋಕನ್ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಪ್ರತಿ ಕ್ವಿಂ. ಗೆ ರೂ. 4400 :
********** ಪ್ರಸಕ್ತ ವರ್ಷದಲ್ಲಿ ಎಫ್‍ಎಕ್ಯೂ ಗುಣಮಟ್ಟದ ಕಡಲೆಯನ್ನು ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂ. ಗೆ ರೂ. 4400 ರಂತೆ ಖರೀದಿಸಲಾಗುವುದು.  ಕೊಪ್ಪಳ ಜಲ್ಲೆಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಇವರನ್ನು ಖರೀದಿ ಏಜೆನ್ಸಿಯಾಗಿ ನಿಗದಿಪಡಿಸಲಾಗಿದೆ.   ಸರ್ಕಾರದ ಆದೇಶದಂತೆ ಪ್ರತಿ ರೈತರಿಂದ ಗರಿಷ್ಟ 10 ಕ್ವಿಂ. ಕಡಲೆ ಮಾತ್ರ ಬೆಂಬಲ ಬೆಲೆಯಲ್ಲಿ ಖರೀದಿಸಲಾಗುವುದು ಎಂದರು.
ರೈತರಿಗೆ ಸೂಚನೆ:
******* ಕಡಲೆ ಬೆಳೆದಿರುವ ರೈತರು, ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಬಯಸಿದಲ್ಲಿ,  ಜ. 31 ರಿಂದ ಪ್ರಾರಂಭವಾಗುವ ನೋಂದಣಿ ಕೇಂದ್ರದಲ್ಲಿ ತಮ್ಮ ಹೆಸರು ನೋಂದಾಯಿಸಬೇಕು.  ಹೆಸರು ನೋಂದಾಯಿಸಲು ಒರಿಜನಲ್ ಆಧಾರ್ ಕಾರ್ಡ್, ಆಧಾರ್‍ಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆ ಪಾಸ್ ಪುಸ್ತಕ, ಮೊಬೈಲ್ ನಂ., ಪಹಣಿ, ಗ್ರಾಮ ಲೆಕ್ಕಿಗರಿಂದ ಪಡೆದ ಬೆಳೆ ದೃಢೀಕರಣ ಪತ್ರ ಇವಿಷ್ಟು ದಾಖಲೆಗಳೊಂದಿಗೆ ನೋಂದಣಿ ಕೇಂದ್ರಕ್ಕೆ ತೆರಳಿ, ನೊಂದಣಿ ಮಾಡಿಸಬೇಕು.  ಕಡಲೆ ಬೆಳೆಯು ಎಫ್‍ಎಕ್ಯೂ ಗುಣಮಟ್ಟದ್ದಾಗಿರುವುದು ಕಡ್ಡಾಯವಾಗಿದ್ದು, ಚೆನ್ನಾಗಿ ಒಣಗಿಸಿ, ಕಸ ರಹಿತವಾಗಿರಬೇಕು.  ತೇವಾಂಶ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಇರುವಂತಿಲ್ಲ.
ನೋಡಲ್ ಅಧಿಕಾರಿಗಳ ನೇಮಕ :
*********** ಬೆಂಬಲ ಬೆಲೆಯಲ್ಲಿ ಕಡಲೆ ಖರೀದಿಸುವುದಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಹಾಗೂ ಮೇಲ್ವಿಚಾರಣೆಗಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.  ಕೊಪ್ಪಳ ತಾಲೂಕಿಗೆ ಜಂಟಿಕೃಷಿ ನಿರ್ದೇಶಕ ವೀರೇಶ ಅಂಗಡಿ, ಕುಷ್ಟಗಿ ತಾಲೂಕಿಗೆ ಉಪವಿಭಾಗಾಧಿಕಾರಿ ರವಿ ತಿರ್ಲಾಪುರ,  ಯಲಬುರ್ಗಾ ತಾಲೂಕಿಗೆ ಎಪಿಎಂಸಿ ಸಹಾಯಕ ನಿರ್ದೇಶಕ ಪ್ರಭಾಕರ ಅಂಗಡಿ, ಹಾಗೂ ಗಂಗಾವತಿ ತಾಲೂಕಿಗೆ ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ಅವರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.  ಆಯಾ ತಾಲೂಕು ವ್ಯಾಪ್ತಿಯಲ್ಲಿನ ರೈತರ ನೊಂದಣಿ ಹಾಗೂ ಖರೀದಿ ಪ್ರಕ್ರಿಯೆಯ ಸಂಪೂರ್ಣ ಮೇಲ್ವಿಚಾರಣೆಯನ್ನು ನೋಡಲ್ ಅಧಿಕಾರಿಗಳು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
64341 ಹೆ. ಕ್ಷೇತ್ರದಲ್ಲಿ ಕಡಲೆ :
********** ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ ಒಟ್ಟಾರೆ ಸುಮಾರು 64341 ಹೆ. ಕ್ಷೇತ್ರದಲ್ಲಿ ಕಡಲೆ ಬೆಳೆದಿರುವ ಬಗ್ಗೆ ವರದಿ ಇದ್ದು, ಸುಮಾರು 77833 ಟನ್ ಕಡಲೆ ಬೆಳೆ ಉತ್ಪಾದನೆಯ ಅಂದಾಜು ಮಾಡಲಾಗಿದೆ.  ಈ ಪೈಕಿ ಯಲಬುರ್ಗಾ ತಾಲೂಕಿನಲ್ಲಿ ಅತಿ ಹೆಚ್ಚು 27036 ಹೆ. ಪ್ರದೇಶದಲ್ಲಿ ಕಡಲೆ ಬೆಳೆಯಲಾಗಿದ್ದು, 32611 ಟನ್ ಉತ್ಪಾದನೆ ಆಗಿರುವ ಸಾಧ್ಯತೆ ಇದೆ.  ಕೊಪ್ಪಳ ತಾಲೂಕಿನಲ್ಲಿ 13845 ಹೆ. ನಲ್ಲಿ 168602 ಟನ್, ಕುಷ್ಟಗಿ ತಾಲೂಕಿನಲ್ಲಿ 12760 ಹೆ. ನಲ್ಲಿ 15438 ಟನ್ ಹಾಗೂ ಗಂಗಾವತಿ ತಾಲೂಕಿನಲ್ಲಿ 10700 ಹೆ. ನಲ್ಲಿ ಅಂದಾಜು 12924 ಟನ್ ಉತ್ಪಾದನೆಯ ಸಾಧ್ಯತೆ ಇದೆ ಎಂದು ಜಂಟಿಕೃಷಿ ನಿರ್ದೇಶಕ ವೀರೇಶ ಹುನಗುಂದ ಅವರು ವಿವರಿಸಿದರು.
     ಸಭೆಯಲ್ಲಿ ಉಪಸ್ಥಿತರಿದ್ದ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ವ್ಯವಸ್ಥಾಪಕ ಶ್ರೀಕಾಂತ್,  ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಉಪವಿಭಾಗಾಧಿಕಾರಿ ರವಿ ತಿರ್ಲಾಪುರ, ಎಪಿಎಂಸಿ ಸಹಾಯಕ ನಿರ್ದೇಶಕ ಪ್ರಭಾಕರ ಅಂಗಡಿ, ವಿವಿಧ ಇಲಾಖೆಗಳ ಅಧಿಕಾರಿಗಳು, ಎಪಿಎಂಸಿ ಅಧಿಕಾರಿಗಳು, ತಾಲೂಕುಗಳ ತಹಸಿಲ್ದಾರರು ಪಾಲ್ಗೊಂಡಿದ್ದರು.

ರಾಷ್ಟ್ರೀಯ ಸ್ವಚ್ಛತೆ ದಿನಾಚರಣೆ : ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಸ್ವಚ್ಛತಾ ಜಾಗೃತಿ


ಕೊಪ್ಪಳ ಜ. 30 (ಕರ್ನಾಟಕ ವಾರ್ತೆ): ರಾಷ್ಟ್ರೀಯ ಸ್ವಚ್ಛತಾ ದಿನಾಚರಣೆ ಅಂಗವಾಗಿ ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ವಕೀಲರ ಸಂಘದ ಸಹಯೋಗದಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಆರ್.ಜಿ. ಜೋಶಿ ಅವರ ನೇತೃತ್ವದಲ್ಲಿ ಮಂಗಳವಾರದಂದು ಜಿಲ್ಲಾ ನ್ಯಾಯಾಲಯ ಆವರಣದ ಸ್ವಚ್ಛತೆ ಕೈಗೊಂಡು ಜಾಗೃತಿ ಮೂಡಿಸಲಾಯಿತು.

     ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಆದೇಶದಂತೆ ರಾಷ್ಟ್ರೀಯ ಸ್ವಚ್ಛತಾ ದಿನಾಚರಣೆ ಅಂಗವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಸ್ವಚ್ಛತಾ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿತು.  ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಆರ್.ಜಿ. ಜೋಶಿ ಅವರು ಖುದ್ದಾಗಿ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಕಸ ಗುಡಿಸಿ, ಸ್ವಚ್ಛತೆಯಲ್ಲಿ ಪಾಲ್ಗೊಂಡಿದ್ದು ಇತರೆ ನ್ಯಾಯಾಧೀಶರು ಹಾಗೂ ವಕೀಲರುಗಳಿಗೆ ಉತ್ತೇಜನ ನೀಡಿದಂತಾಯಿತು.  

ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಟಿ. ಶ್ರೀನಿವಾಸ, ಹಿರಿಯ ಸಿವಿಲ್ ನ್ಯಾಯಾಧೀಶ ಕುಮಾರ್ ಎಸ್., ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮನುಶರ್ಮಾ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ದೊಡ್ಡಬಸಪ್ಪ ಕಂಪ್ಲಿ, ಉಪಾಧ್ಯಕ್ಷ ಎಸ್.ಹೆಚ್. ಇಂಗಳದಾಳ, ಕಾರ್ಯದರ್ಶಿ ಕೆ.ಯು. ಪೋಚಗುಂಡಿ, ನಗರಸಭೆ ಪೌರಾಯುಕ್ತ ಪರಮೇಶಪ್ಪ, ಹಿರಿಯ ವಕೀಲರುಗಳಾದ ವಿ.ಎಂ. ಭೂಸನೂರ ಮಠ, ಆಸಿಫ್ ಅಲಿ, ಶರಣಪ್ಪ, ಎ.ವಿ. ಕಣವಿ., ಎಂ.ಸಿ. ಸಜ್ಜನ, ಪಿ.ಆರ್. ಹೊಸಳ್ಳಿ, ಎಸ್.ಹೆಚ್. ಸುರಪುರ ಸೇರಿದಂತೆ ವಕೀಲರ ಸಂಘದ ಸದಸ್ಯರುಗಳು, ಪ್ರಾಧಿಕಾರದ ಪ್ಯಾನಲ್ ವಕೀಲರು, ಮಧ್ಯಸ್ಥಗಾರರು, ನ್ಯಾಯಾಲಯದ ಸಿಬ್ಬಂದಿಗಳು ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ನ್ಯಾಯಾಲಯ ಆವರಣವನ್ನು ಸ್ವಚ್ಛಗೊಳಿಸಿದರು.  ಅಲ್ಲದೆ ಸ್ವಚ್ಛತೆಯಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಸಮಾಜವನ್ನು ಸಹ ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಮನಸ್ಸು ಸ್ವಚ್ಛವಾಗಿರುತ್ತದೆ ಎಂಬ ಜಾಗೃತಿ ಮೂಡಿಸಿದರು.

ಕುಷ್ಠರೋಗ ಅರಿವು ಆಂದೋಲನ : ಪ್ರತಿಜ್ಞಾ ವಿಧಿ ಸ್ವೀಕಾರ



ಕೊಪ್ಪಳ ಜ. 30 (ಕರ್ನಾಟಕ ವಾರ್ತೆ): ಕುಷ್ಠರೋಗ ನಿರ್ಮೂಲನೆಗಾಗಿ ಇದೇ ಜ. 30 ರಿಂದ ಫೆ. 13 ರವರೆಗೆ ‘ಸ್ಪರ್ಶ್ ಕುಷ್ಠರೋಗ ಅರಿವು ಆಂದೋಲನ’ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದು, ಇದರ ಅಂಗವಾಗಿ ಕುಷ್ಠರೋಗ ನಿರ್ಮೂಲನೆಗೆ ಹಾಗೂ ರೋಗ ಪೀಡಿತ ವ್ಯಕ್ತಿಗಳ ತಾರತಮ್ಯ ನಿವಾರಿಸಲು ಬದ್ಧರಿರುವ ಕುರಿತು ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮ ಮಂಗಳವಾರದಂದು ಕೊಪ್ಪಳದಲ್ಲಿ ಜರುಗಿತು.

     ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಈ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ಅವರು, ಜಿಲ್ಲೆಯನ್ನು ಕುಷ್ಠರೋಗ ಮುಕ್ತವಾಗಿಸಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು, ಸಾಧ್ಯವಾದಷ್ಟು ಮುಂಚಿತವಾಗಿ ಕುಷ್ಠರೋಗ ಪ್ರಕರಣಗಳನ್ನು ಕಂಡು ಹಿಡಿಯಲು ಕ್ರಮ ಕೈಗೊಳ್ಳಲಾಗುವುದು.  ಕುಷ್ಠರೋಗದಿಂದ ಬಳಲುತ್ತಿರುವ ವ್ಯಕ್ತಿಗಳ ಜೊತೆ ಯಾವುದೇ ರೀತಿಯ ತಾರತಮ್ಯ ಮಾಡಬಾರದು, ಮತ್ತು ಇತರರು ಕೂಡ ತಾರತಮ್ಯ ಮಾಡಲು ಅವಕಾಶ ನೀಡಬಾರದು.  ವಯಕ್ತಿಕವಾಗಿ ಹಾಗೂ ಒಟ್ಟಾಗಿ ಕುಷ್ಠ ರೋಗ ಪೀಡಿತ ವ್ಯಕ್ತಿಗಳ ವಿರುದ್ಧದ ಕಳಂಕ ಮತ್ತು ತಾರತಮ್ಯ ಕೊನೆಗೊಳಿಸಲು ಕೆಲಸ ಮಾಡಿ, ಅವರನ್ನು ಮುಖ್ಯ ವಾಹಿನಿಗೆ ತರಲು ಸಹಕಾರ ನೀಡಬೇಕು ಎಂಬ ಪ್ರತಿಜ್ಞಾ ವಿಧಿ ಬೋಧಿಸಿದರು.
     ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಉಪವಿಭಾಗಾಧಿಕಾರಿ ರವಿ ತಿರ್ಲಾಪುರ, ಜಿಲ್ಲಾ ಕುಷ್ಠರೋಗ ನಿಯಂತ್ರಣ ಅಧಿಕಾರಿ ಡಾ. ಎಸ್.ಕೆ. ದೇಸಾಯಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು ಈ ಸಂದರ್ಭದಲ್ಲಿ ಹಾಜರಿದ್ದು,  ಕುಷ್ಠರೋಗ ನಿರ್ಮೂಲನೆಗಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಮಹಿಳಾ ಟೇಲರಿಂಗ್ ತರಬೇತಿ : ಅರ್ಜಿ ಆಹ್ವಾನ


ಕೊಪ್ಪಳ ಜ. 30 (ಕರ್ನಾಟಕ ವಾರ್ತೆ): ಕೊಪ್ಪಳ ಸ್ಟೇಟ ಬ್ಯಾಂಕ್ ಆಫ್ ಇಂಡಿಯಾ, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ವತಿಯಿಂದ ಜಿಲ್ಲೆಯ ಆಸಕ್ತರಿಗೆ 30 ದಿನಗಳ ಉಚಿತ “ಮಹಿಳಾ ಟೇಲರಿಂಗ್” ತರಬೇತಿಯನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ.
    ಅರ್ಜಿ ಸಲ್ಲಿಸಲು 18 ರಿಂದ 45 ವರ್ಷ ವಯೋಮಿತಿಯಲ್ಲಿರಬೇಕು.  ಕನಿಷ್ಠ ಎಂಟನೇ ತರಗತಿ ಪಾಸ್ ಆಗಿರಬೇಕು.  ಕೊಪ್ಪಳ ಜಿಲ್ಲೆಯವರಾಗಿರಬೇಕು.  ಸ್ವಯಂ ಉದ್ಯೋಗದಲ್ಲಿ ಆಸಕ್ತಿ ಹೊಂದಿರಬೇಕು.  ಅನುಭವ ಇದ್ದವರಿಗೆ ಆದ್ಯತೆ ನೀಡಲಾಗುವುದು.  ಅರ್ಜಿ ವಿತರಿಸುವ ಹಾಗೂ ಸ್ವೀಕರಿಸುವ ಕೊನೆಯ ದಿನಾಂಕ ಫೆಬ್ರವರಿ. 14 ಆಗಿದ್ದು, ಫೆ. 15 ರಂದು ಬೆಳಿಗ್ಗೆ 10-30ಕ್ಕೆ ಸಂದರ್ಶನ ನಡೆಸಲಾಗುವುದು.  ಫೆ. 16 ರಿಂದ ತರಬೇತಿಗಳು ಪ್ರಾರಂಭಗೊಳ್ಳುವವು.  ಆಯ್ಕೆಯಾದ ಅಭ್ಯರ್ಥಿಗಳಿಗೆ ಊಟ ಮತ್ತು ವಸತಿಯನ್ನು ಉಚಿತವಾಗಿ ನೀಡಲಾಗುವುದು. 
ಅರ್ಜಿಯನ್ನು ನಿರ್ದೇಶಕರು, ಸ್ಟೇಟ ಬ್ಯಾಂಕ್ ಆಫ್ ಇಂಡಿಯಾ, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ಜಿಲ್ಲಾ ಕೈಗಾರಿಕ ಕೇಂದ್ರ ಆವರಣ, ಅಶೋಕ ಸರ್ಕಲ್ ಹತ್ತಿರ, ಕೊಪ್ಪಳ ದೂರವಾಣಿ ಸಂಖ್ಯೆ 08539-231038, ಇಲ್ಲಿಗೆ ಸಲ್ಲಿಸಬಹುದು ಎಂದು ಕೊಪ್ಪಳ ಎಸ್.ಬಿ.ಐ. ಆರ್‍ಸೆಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬ್ಯೂಟಿ ಪಾರ್ಲರ್ ತರಬೇತಿ : ಅರ್ಜಿ ಆಹ್ವಾನ


ಕೊಪ್ಪಳ ಜ. 30 (ಕರ್ನಾಟಕ ವಾರ್ತೆ): ಕೊಪ್ಪಳ ಸ್ಟೇಟ ಬ್ಯಾಂಕ್ ಆಫ್ ಇಂಡಿಯಾ, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ವತಿಯಿಂದ ಜಿಲ್ಲೆಯ ಆಸಕ್ತರಿಗೆ 30 ದಿನಗಳ ಉಚಿತ “ಬ್ಯೂಟಿಪಾರ್ಲರ್” ತರಬೇತಿಯನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ.
    ಅರ್ಜಿ ಸಲ್ಲಿಸಲು 18 ರಿಂದ 45 ವರ್ಷ ವಯೋಮಿತಿಯಲ್ಲಿರಬೇಕು.  ಕನಿಷ್ಠ ಎಂಟನೇ ತರಗತಿ ಪಾಸ್ ಆಗಿರಬೇಕು.  ಕೊಪ್ಪಳ ಜಿಲ್ಲೆಯವರಾಗಿರಬೇಕು.  ಸ್ವಯಂ ಉದ್ಯೋಗದಲ್ಲಿ ಆಸಕ್ತಿ ಹೊಂದಿರಬೇಕು.  ಅನುಭವ ಇದ್ದವರಿಗೆ ಆದ್ಯತೆ ನೀಡಲಾಗುವುದು.  ಅರ್ಜಿ ವಿತರಿಸುವ ಹಾಗೂ ಸ್ವೀಕರಿಸುವ ಕೋನೆಯ ಫೆಬ್ರವರಿ. 14 ಆಗಿದ್ದು, ಫೆ. 15 ರಂದು ಬೆಳಿಗ್ಗೆ 10-30ಕ್ಕೆ ಸಂದರ್ಶನ ನಡೆಸಲಾಗುವುದು.  ಫೆ. 16 ರಿಂದ ತರಬೇತಿಗಳು ಪ್ರಾರಂಭಗೊಳ್ಳುವವು.  ಆಯ್ಕೆಯಾದ ಅಭ್ಯರ್ಥಿಗಳಿಗೆ ಊಟ ಮತ್ತು ವಸತಿಯನ್ನು ಉಚಿತವಾಗಿ ನೀಡಲಾಗುವುದು. 
      ಅರ್ಜಿಯನ್ನು ನಿರ್ದೇಶಕರು, ಸ್ಟೇಟ ಬ್ಯಾಂಕ್ ಆಫ್ ಇಂಡಿಯಾ, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ಜಿಲ್ಲಾ ಕೈಗಾರಿಕ ಕೇಂದ್ರ ಆವರಣ, ಅಶೋಕ ಸರ್ಕಲ್ ಹತ್ತಿರ, ಕೊಪ್ಪಳ ದೂರವಾಣಿ ಸಂಖ್ಯೆ 08539-231038, ಇಲ್ಲಿಗೆ ಸಲ್ಲಿಸಬಹುದು ಎಂದು ಕೊಪ್ಪಳ ಎಸ್.ಬಿ.ಐ. ಆರ್‍ಸೆಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹುತಾತ್ಮರ ಸ್ಮರಣಾರ್ಥ ಕೊಪ್ಪಳದಲ್ಲಿ ಮೌನಾಚರಣೆ



ಕೊಪ್ಪಳ ಜ. 30 (ಕರ್ನಾಟಕ ವಾರ್ತೆ): ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತ್ಯಾಗ ಬಲಿದಾನಗಳ ಮೂಲಕ ಪ್ರಾಣತೆತ್ತು ಹುತಾತ್ಮರಾದವರ ಸ್ಮರಣಾರ್ಥವಾಗಿ ಕೊಪ್ಪಳ ಜಿಲ್ಲಾಡಳಿತದ ವತಿಯಿಂದ 02 ನಿಮಿಷಗಳ ಮೌನ ಆಚರಿಸಲಾಯಿತು.
     ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಹುತಾತ್ಮರಾದ ಜ. 30 ರ ದಿನವನ್ನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಾಣತೆತ್ತವರ ಸ್ಮರಣೆ ಮಾಡುವ ದಿನವನ್ನಾಗಿ ಆಚರಿಸಲಾಗುತ್ತಿದೆ.   ಹುತಾತ್ಮರ ಸ್ಮರಣಾರ್ಥ ಮಂಗಳವಾರದಂದು ಬೆಳಿಗ್ಗೆ 11 ಗಂಟೆಗೆ ಎರಡು ನಿಮಿಷಗಳ ಮೌನವನ್ನು ಆಚರಿಸಿ, ಹುತಾತ್ಮರಿಗೆ ಗೌರವ ಸಲ್ಲಿಸಲು ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.  
     ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡು, ಹುತಾತ್ಮರ ಸ್ಮರಣಾರ್ಥ ಎರಡು ನಿಮಿಷಗಳ ಮೌನವನ್ನು ಆಚರಿಸಿದರು.  ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಉಪವಿಭಾಗಾಧಿಕಾರಿ ರವಿ ತಿರ್ಲಾಪುರ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು ಈ ಸಂದರ್ಭದಲ್ಲಿ ಹಾಜರಿದ್ದು, ಮೌನಾಚರಣೆಯಲ್ಲಿ ಪಾಲ್ಗೊಂಡರು.

Monday, 29 January 2018

ಗ್ರಾಮೀಣ ಪ್ರದೇಶಗಳಲ್ಲಿ ಶೈಕ್ಷಣಿಕ ಕ್ರಾಂತಿ : ಇಕ್ಬಾಲ್ ಅನ್ಸಾರಿ


ಕೊಪ್ಪಳ ಜ. 29 (ಕರ್ನಾಟಕ ವಾರ್ತೆ) : ಗ್ರಾಮೀಣ ಪ್ರದೇಶಗಳಲ್ಲಿಯೂ ಶೈಕ್ಷಣಿಕ ಕ್ರಾಂತಿಗಾಗಿ ಸರಕಾರ ಕ್ಷೀರ ಭಾಗ್ಯ, ವಿದ್ಯಾಸಿರಿ ಯೋಜನೆಗಳನ್ನು ಜಾರಿಗೊಳಿಸಿದೆ ಅಲ್ಲದೆ  ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಉಚಿತ ಲ್ಯಾಪ್‍ಟ್ಯಾಪ್ ವಿತರಣೆಯಂತಹ ಯೋಜನೆಗಳನ್ನು ಜಾರಿಗೊಳಿಸಿ, ಶೈಕ್ಷಣಿಕ ಕ್ರಾಂತಿಗೆ ಮುಂದಾಗಿದೆ ಎಂದು ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಹೇಳಿದರು.

       ಗಂಗಾವತಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕೊಪ್ಪಳ ತಾಲೂಕಿನ ಚಿಲಕಮುಖಿ ಗ್ರಾಮದಲ್ಲಿ 50 ಲಕ್ಷ ರೂ. ವೆಚ್ಚದ ಹಾಸ್ಟೆಲ್ ಕಂಪೌಂಡ್ ನಿರ್ಮಾಣ ಕಾಮಗಾರಿ ಹಾಗೂ ಗ್ರಾಮೀಣ ಸಂತೆಗೆ ಚಾಲನೆ ನೀಡಿ ಅವರು ಮಾತನಾಡಿದರು. 

     ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಹಕಾರ ಮತ್ತು ಅವರ ಜನಪರ, ಅಭಿವೃದ್ದಿ ಪರ ಕಾಳಜಿಯಿಂದ ಗಂಗಾವತಿ ವಿಧಾನ ಸಭಾ ಕ್ಷೇತ್ರದಲ್ಲಿ 620 ಕೋಟಿ ರೂ.ಗಳಿಗೂ ಹೆಚ್ಚಿನ ಅಭಿವೃದ್ದಿ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗಿದೆ ಎಂದು ಶಾಸಕ ಇಕ್ಬಾಲ್ ಅನ್ಸಾರಿ ಹೇಳಿದರು.
     ಇದೇ ಸಂದರ್ಭದಲ್ಲಿ ಎಸ್‍ಸಿಪಿ ಯೋಜನೆಯಡಿ 30 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ, ಹೆಚ್‍ಕೆಆರ್‍ಡಿಬಿಯ ಅನುದಾನಡಿ 20 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ, 12 ಲಕ್ಷ ರೂ. ವೆಚ್ಚದಲ್ಲಿ ಅಂಬೇಡ್ಕರ್ ಭವನ, 10 ಲಕ್ಷ ರೂ. ವೆಚ್ಚದಲ್ಲಿ ಪರ್ವತ ಮಲ್ಲಯ್ಯ ಸಮುದಾಯ ಭವನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.  ಚಿಕ್ಕ ಸೂಳಿಕೇರಿ ತಾಂಡಾದಲ್ಲಿ 1 ಕೋಟಿ ರೂ. ವೆಚ್ಚದ ಸುವರ್ಣಗ್ರಾಮ ಯೋಜನೆ ಕಾಮಗಾರಿ, 15 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ, 10 ಲಕ್ಷ ರೂ. ವೆಚ್ಚದ ಶಾಲಾ ಕೊಠಡಿ, ಹಿರೇಸೂಳಿಕೇರಿ ತಾಂಡಾದಲ್ಲಿ 25 ಲಕ್ಷ ರೂ. ವೆಚ್ಚದ ಚೆಕ್ ಡ್ಯಾಂ, 25 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
     ಹಾಸಗಲ್ ಗ್ರಾ.ಪಂ. ಅಧ್ಯಕ್ಷ ತುಕಾರಾಮ ಬಡಿಗೇರ, ಗಣ್ಯರುಗಳಾದ ಪರಮೆಶ ಬಡಿಗೇರ, ಮಲ್ಲೇಶಪ್ಪ ಗುಮಗೇರಿ, ಶಂಕರ ನಾಯ್ಕ, ತಿರುಪತಿ ಪೂಜಾರ, ಸಂಗಮೆಶ ಬಾದವಾಡಗಿ, ಬಸವಕುಮಾರ್, ಹನುಮಂತಪ್ಪ ವನಬಳ್ಳಾರಿ, ಫಕೀರಪ್ಪ ಎಮ್ಮಿ ಇತರರು ಇದ್ದರು.
 

ಸ್ವಾತಂತ್ರ್ಯ ಸಂಗ್ರಾಮ ಹುತಾತ್ಮರ ಸ್ಮರಣಾರ್ಥ ಜ. 30 ರಂದು ಮೌನ ಆಚರಣೆ


ಕೊಪ್ಪಳ ಜ. 29 (ಕರ್ನಾಟಕ ವಾರ್ತೆ): ಭಾತರದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಾಣತೆತ್ತು ಹುತಾತ್ಮರಾದವರ ಸ್ಮರಣಾರ್ಥವಾಗಿ ಮೌನ ಆಚರಣೆಯನ್ನು ಜ. 30 ರಂದು ಕೊಪ್ಪಳ ಜಿಲ್ಲಾಡಳಿತ ಭವನದ ಆಡಿಟೋರಿಯಮ್ ಹಾಲ್‍ನಲ್ಲಿ ಆಯೋಜಿಸಲಾಗಿದೆ.
    “ಭಾತರದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಾಣತೆತ್ತು ಹುತಾತ್ಮರಾದವರ ಸ್ಮರಣಾರ್ಥವಾಗಿ ಮೌನ ಆಚರಣೆ” ಯನ್ನು ಆಚರಿಸುವಂತೆ ಸರ್ಕಾರ ಸೂಚನೆ ನೀಡಿದ್ದು, ಅದರನ್ವಯ, ಜ. 30 ರಂದು ಬೆಳಿಗ್ಗೆ 11 ಗಂಟೆಗೆ ಕೊಪ್ಪಳ ಜಿಲ್ಲಾಡಳಿತ ಭವನದ ಆಡಿಟೋರಿಯಮ್ ಹಾಲ್‍ನಲ್ಲಿ 2 ನಿಮಿಸಗಳ ಮೌನ ಆಚರಿಸಲಾಗುವುದು.   ಎಲ್ಲಾ ಇಲಾಖೆಗಳ ಅಧಿಕಾರಿ ಸಿಬ್ಬಂದಿಗಳು ಹಾಜರಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ ಘಾಳಿ ಅವರು ತಿಳಿಸಿದ್ದಾರೆ.

ಫೆ. 03 ರಂದು ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ


ಕೊಪ್ಪಳ ಜ. 29 (ಕರ್ನಾಟಕ ವಾರ್ತೆ): ಹಿಂದೂ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರ ಕ್ಷೇತ್ರದ ಮೈಲಾರಲಿಂಗಸ್ವಾಮಿ ದೇವರ ಕಾರ್ಣಿಕೋತ್ಸವ ಫೆಬ್ರವರಿ. 03 ರಂದು ಜರುಗಲಿದೆ.
    ಮೈಲಾರ ಕ್ಷೇತ್ರದ ಮೈಲಾರಲಿಂಗಸ್ವಾಮಿ ದೇವರ ಕಾರ್ಣಿಕೋತ್ಸವ ಅಂಗವಾಗಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳ ವಿವರ ಇಂತಿದೆ.  ಜ. 31 ರಂದು ಭಾರತ ಹುಣ್ಣಿಮೆ, ಫೆಬ್ರವರಿ. 01 ರಂದು ಧ್ವಜಾರೋಹಣ, 02 ರಂದು ತ್ರಿಶೂಲ ಪೂಜೆ, ಫೆ. 03 ರಂದು ಪಾತ್ರಃಕಾಲ 5 ಗಂಟೆಗೆ ಸ್ವಾಮಿಯು ಮಲ್ಲಾಸುರನ ಸಂಹಾರಕ್ಕೆ ಡೆಂಕನ ಮರಡಿಗೆ ಗುಪ್ತಮೌನ ಸವಾರಿ.  ಸಾಯಂಕಾಲ 5-30 ಕ್ಕೆ ಮೈಲಾರಲಿಂಗಸ್ವಾಮಿ ದೇವಸ್ಥಾನದ ಗುರುಪರಂಪರ್ಯ ಗುರುಗಳಿಂದ ಆಶೀರ್ವಾದ ನಂತರ ಗೊರವಯ್ಯನವರಿಂದ ಕಾರ್ಣಿಕ ನುಡಿ.  ಫೆ. 04 ರಂದು ಮೈಲಾರಲಿಂಗ ಸ್ವಾಮಿಯು ಹೆಗ್ಗಪ್ಪನ ಮರಡಿಗೆ ಉತ್ಸವ ಹೊರಡುವುದು.  ಸಾಯಂಕಾಲ 4-30 ಕ್ಕೆ ಮೈಲಾರಲಿಂಗಸ್ವಾಮಿ ದೇವಸ್ಥಾನದ ಗುರುಪರಂಪರ್ಯ ಗುರುಗಳಿಂದ ಆರ್ಶೀವಾದ ನಂತರ ಕಂಚಿವೀರರಿಂದ ಪವಾಡ ಮತ್ತು ಗೊರವಯ್ಯರವರಿಂದ ಸರಪಳಿ ಪವಾಡಗಳು ಜರುಗಲಿವೆ ಎಂದು ಬಳ್ಳಾರಿ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ಮತದಾರರ ಪಟ್ಟಿಗಳ ಪರಿಷ್ಕಣೆ ಕಾರ್ಯಕ್ರಮ : ನಿಗದಿತ ಅವಧಿಯೊಳಗೆ ಅರ್ಜಿಗಳ ವಿಲೇವಾರಿಯಾಗಬೇಕು- ಅಮ್ಲನ್ ಆದಿತ್ಯ ಬಿಸ್ವಾಸ್


ಕೊಪ್ಪಳ ಜ. 29 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮದಡಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಫೆ. 12 ರ ಒಳಗಾಗಿ ನಿಯಮಾನುಸಾರ ಇತ್ಯರ್ಥಪಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದ ಜಿಲ್ಲಾ ವೀಕ್ಷಕರು ಹಾಗೂ ಕಾರ್ಮಿಕ ಇಲಾಖೆ ಕಾರ್ಯದರ್ಶಿ ಅಮ್ಲನ್ ಆದ್ಯತ್ಯ ಬಿಸ್ವಾಸ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
      ಕೊಪ್ಪಳ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಭಾನುವಾರಂದು ಏರ್ಪಡಿಸಲಾಗಿದ್ದ ಮತದಾರರ ಪಟ್ಟಿಗಳ ಪರಿಷ್ಕರಣಾ ಕಾರ್ಯದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 
     ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯಕ್ರಮ ಕೊಪ್ಪಳ ಜಿಲ್ಲೆಯ ಎಲ್ಲ ಐದೂ ವಿಧಾನಸಭಾ ಕ್ಷೇತ್ರಗಳಲ್ಲಿ ಸಮರ್ಪಕವಾಗಿ ಜರುಗಿದೆ.  ಮತದಾರರ ಜಾಗೃತಿಗಾಗಿ ಜಿಲ್ಲೆಯಲ್ಲಿ ಬೂತ್ ಮಟ್ಟದಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ಕೈಗೊಂಡ ವಿವಿಧ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿವೆ.  ಹೀಗಾಗಿ ಜಿಲ್ಲೆಯಲ್ಲಿ ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಒಟ್ಟು 42520 ಅರ್ಜಿಗಳು ಸಲ್ಲಿಕೆಯಾಗಿವೆ.  ಇತ್ತೀಚೆಗೆ ಕೊಪ್ಪಳದಲ್ಲಿ ಭಾರತ ನಕ್ಷೆಯೊಂದಿಗೆ ಬೃಹತ್ ಮಾನವ ಸರಪಳಿ ಕಾರ್ಯಕ್ರಮ ಪ್ರಶಂಸೆಗೆ ಪಾತ್ರವಾಗಿದೆ.  ಫೆ. 28 ರಂದು ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಬೇಕಿದೆ.  ಹೀಗಾಗಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮದ ವೇಳಾಪಟ್ಟಿಯಂತೆ ಫೆ. 12 ರೊಳಗಾಗಿ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಸಲ್ಲಿಸಿರುವ ಅರ್ಜಿ, ಹೆಸರು ತೆಗೆದುಹಾಕುವುದು, ತಿದ್ದುಪಡಿ ಹಾಗೂ ವರ್ಗಾವಣೆಗೆ ಸಂಬಂಧಿಸಿದ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ ಇತ್ಯರ್ಥಗೊಳಿಸಬೇಕು ಎಂದು ಅಮ್ಲನ್ ಆದಿತ್ಯ ಬಿಸ್ವಾಸ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಮಾತನಾಡಿ, ಜಿಲ್ಲೆಯ ಕುಷ್ಟಗಿ, ಕನಕಗಿರಿ, ಗಂಗಾವತಿ, ಯಲಬುರ್ಗಾ ಹಾಗೂ ಕೊಪ್ಪಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು 42520 ಅರ್ಜಿಗಳು ಸಲ್ಲಿಕೆಯಾಗಿವೆ.  ಹೆಸರನ್ನು ತೆಗೆದುಹಾಕುವ ಕುರಿತಂತೆ 21405 ಅರ್ಜಿಗಳು, ತಿದ್ದುಪಡಿಗೆ 12221 ಅರ್ಜಿಗಳು ಹಾಗೂ ವರ್ಗಾವಣೆಗಾಗಿ 1538 ಅರ್ಜಿಗಳು ಸಲ್ಲಿಕೆಯಾಗಿವೆ.  1286 ಮತಗಟ್ಟೆಗಳಿದ್ದು, ಮತಗಟ್ಟೆಗೊಬ್ಬರಂತೆ ಬೂತ್ ಮಟ್ಟದ ಅಧಿಕಾರಿಯನ್ನು ನೇಮಿಸಲಾಗಿದೆ ಎಂದರು.
     ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ, ಸಹಾಯಕ ಆಯುಕ್ತ ರವಿ ತಿರ್ಲಾಪುರ, ಕೊಪ್ಪಳ ತಹಶೀಲ್ದಾರ ಗುರುಬಸವರಾಜ, ಯಲಬುರ್ಗಾ ತಹಶೀಲ್ದಾರ ರಮೇಶ ಅಳವಂಡಿಕರ ಹಾಗೂ ಕುಷ್ಟಗಿ ತಹಶೀಲ್ದಾರ ಗಂಗಪ್ಪ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು. 

ಬಾಲಕಾರ್ಮಿಕತೆ ಕುರಿತು ಬೆನಕನಾಳದಲ್ಲಿ ಜನ-ಜಾಗೃತಿ ಕಾರ್ಯಕ್ರಮ


ಕೊಪ್ಪಳ ಜ. 29 (ಕರ್ನಾಟಕ ವಾರ್ತೆ): ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕತೆಯ ಕುರಿತು ಗಂಗಾವತಿ ತಾಲೂಲಿನ ಬೆನಕನಾಳ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ “ಜನ-ಜಾಗೃತಿ ಕಾರ್ಯಕ್ರಮ” ಜರುಗಿತು. 
    ಗಂಗಾವತಿ ತಾಲೂಕು ಆಡಳಿತ, ಕೊಪ್ಪಳ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ, ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಪಾರ್ವತಮ್ಮ ಬಿ. ಮಹಿಳಾ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ತಿಪ್ಪನಾಳ ಇವರ ಸಹಯೋಗದಲ್ಲಿ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ಗಂಗಾವತಿ ತಾ.ಪಂ ಸದಸ್ಯ ಮಲ್ಲಿಕಾರ್ಜುನಗೌಡ ಅವರು ಮಾತನಾಡಿ, ಮಕ್ಕಳು ಯಾವುದೇ ಕಾರಣಕ್ಕೂ ಶಾಲೆಯ ಶಿಕ್ಷಣದಿಂದ ವಂಚಿತರಾಗಬಾರದೆಂದು ನೆರೆದಿರುವ ಎಲ್ಲಾ ಪಾಲಕರಲ್ಲಿ ವಿನಂತಿಸಿ ಕೊಂಡರು ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಂಡು ಶಿಕ್ಷಣ ಕೋಡಿಸಿ ಬಾಲಕಾರ್ಮಿಕತೆಯಿಂದ ಮಕ್ಕಳನ್ನು ಮುಕ್ತರಾಗಿಸಿ ಎಂದು ಪಾಲಕರಲ್ಲಿ ವಿನಂತಿಸಿಕೊಂಡರು. 
ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕರಾದ ಬಸವರಾಜ ಹಿರೇಗೌಡ್ರ ಅವರು ಬಾಲಕಾರ್ಮಿಕ ಹಾಗೂ ಕಿಶೋರಕಾರ್ಮಿಕ ಕಾಯ್ದೆ ಕುರಿತು, ಬಾಲಕಾರ್ಮಿಕರನ್ನು ನೇಮಿಸಿಕೋಂಡ ಮಾಲಿಕರಿಗ್ಲೆ ಅನುಭವಿಸುವ ಶಿಕ್ಷೆಗಳ ಬಗ್ಗೆ, ಬಾಲಕಾರ್ಮಿಕತೆಗೆ ಕಾರಣಗಳೇನು ಮತ್ತು ಬಾಲಕಾರ್ಮಿಕತೆಯಿಂದ ಹೊರ ಬಂದ ಬಾಲ ಕಾರ್ಮಿಕರಿಗೆ ಇರುವ ಸರ್ಕಾರದ ಯೋಜನೆಗಳ ಕುರಿತು ಮಾಹಿತಿ ನೀಡಿದರು.  ಕಾರ್ಮಿಕ ನಿರೀಕ್ಷಕ ಹೊನ್ನಪ್ಪ, ತಾ.ಪಂ ಸದಸ್ಯ ಶಿವಾನಂದ ವಂಕಲಕುಂಟಿ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘದ ಕಾರ್ಯದರ್ಶಿ ಮಲ್ಲಿಕಾರ್ಜುನ ಗೌಡ ಪಾಟೀಲ್, ಸುಳೇಕಲ್ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಕೃಷ್ಣಪ್ಪ, ಶಾಲೆಯ ಮುಖ್ಯ ಗುರು ಮನೋಹರ್ ಪತ್ತರ್, ಎಸ್.ಡಿ.ಎಂ.ಸಿ ಅಧ್ಯಕ್ಷ ಶಿವನೆಗೌಡ, ಸವಿತಾ, ದೇವೆಗೌಡ ಪಾಟೀಲ್ ಹಾಗೂ ಎಸ್.ಡಿ.ಎಂ.ಸಿ ಯ ಸರ್ವ ಸದಸ್ಯರು ಮತ್ತು ಗ್ರಾಮದ ಗಣ್ಯರು, ಶಾಲಾ ವಿದ್ಯಾರ್ಥಿಗಳು ಶಿಕ್ಷಕರು ಹಾಜರಿದ್ದರು.

ಬಾಲ್ಯ ವಿವಾಹ ತಡೆಗಟ್ಟಿದ ಅಧಿಕಾರಿಗಳು


ಕೊಪ್ಪಳ ಜ. 29 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕಿನ ಕಾತರಕಿ-ಗುಡ್ಲಾನೂರು ಗ್ರಾಮದಲ್ಲಿ ಜ. 27 ರಂದು ನಡೆಯಬೇಕಿದ್ದ ಬಾಲ್ಯವಿವಾಹವೊಂದನ್ನು ತಡೆದು, ಅಪ್ರಾಪ್ತ ಬಾಲಕಿಯನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲಾಗಿದೆ.
      ಕಾತರಕಿ-ಗುಡ್ಲಾನೂರು ಗ್ರಾಮದಲ್ಲಿ ಅಪ್ರಾಪ್ತೆಯ ವಿವಾಹ ಜರುಗುವ ಕುರಿತು ನಿಖರ ಮಾಹಿತಿಯನ್ನಾಧರಿಸಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳಾದ ಶಿವಲೀಲಾ ಲೀಗಲ್ ಕಂ ಪ್ರೊಬೇಷನರ್ ಆಫೀಸರ್, ಬಸವರಾಜ ವಿ. ಆಪ್ತ ಸಮಾಲೋಚಕರು ಮತ್ತು ರವಿ ಬಡಿಗೇರ, ಔಟರೀಚ್‍ವರ್ಕರ್ ಅವರು ಜ. 26 ರಂದು ಕಾತರಕಿ-ಗುಡ್ಲಾನೂರು ಗ್ರಾಮಕ್ಕೆ ಬೇಟಿ ನೀಡಿ ಪರಿಶೀಲಿಸಿತು.  ಬಾಲಕಿಯ ಶಾಲಾ ದೃಢಿಕರಣ ಪತ್ರ ಪರಿಶೀಲಿಸಲಾಗಿ, ಬಾಲಕಿಗೆ 18 ವರ್ಷ ಪೂರ್ಣಗೊಳ್ಳದೇ ಬಾಲ್ಯವಿವಾಹ ಜ. 27 ರಂದು ಆಯೋಜಿಸಿರುವುದು ದಾಖಲೆಗಳಿಂದ ಸಾಬೀತಾಗಿದೆ. ಬಾಲ್ಯ ವಿವಾಹ ಆಯೋಜನೆಯಿಂದ ಉಂಟಾಗುವ ದುಷ್ಪರಿಣಾಮಗಳು ಹಾಗೂ ಬಾಲಕಿಯ ಭವಿಷ್ಯ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು, ಪೋಷಕರಿಗೆ ತಿಳುವಳಿಕೆ ನೀಡಲಾಯಿತು.  ವಿವಾಹವಾಗಬೇಕಿದ್ದ, ಬಾಲಕಿಯನ್ನು ವಶಕ್ಕೆ ಪಡೆದು ಮುಂದಿನ ಆರೈಕೆ ಮತ್ತು ಪೋಷಣೆಗಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

Saturday, 27 January 2018

ಭಾರತದ ನಕ್ಷೆಯಲ್ಲಿ ಬೃಹತ್ ಮಾನವ ಸರಪಳಿ : ಪ್ರಜಾಪ್ರಭುತ್ವ ಬಲಪಡಿಸಲು ಮತದಾರರ ಪಾಲ್ಗೊಳ್ಳುವಿಕೆ ಅಗತ್ಯ - ಎಂ. ಕನಗವಲ್ಲಿ


ಕೊಪ್ಪಳ ಜ. 27 (ಕರ್ನಾಟಕ ವಾರ್ತೆ): ಭಾರತ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದ್ದು, ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ಮತದಾರರು ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.

     ಕೊಪ್ಪಳ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿಯ ಸಹಯೋಗದಲ್ಲಿ ನಗರದ ಗವಿಮಠ ಆವರಣದಲ್ಲಿ ಶನಿವಾರದಂದು ಸ್ವೀಪ್ ಚಟುವಟಿಕೆಯ ಭಾಗವಾಗಿ ಏರ್ಪಡಿಸಲಾಗಿದ್ದ ಬೃಹತ್ ಮಾನವ ಸರಪಳಿ ಹಾಗೂ ಮತದಾರರ ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

     ದೇಶದಲ್ಲಿ ಜರುಗುವ ಯಾವುದೇ ಚುನಾವಣೆಗಳಲ್ಲಿ ಮತದಾರರು ತಮ್ಮ ಹಕ್ಕನ್ನು ತಪ್ಪದೆ ಚಲಾಯಿಸಬೇಕು.  ಸಂವಿಧಾನ ನಮ್ಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಲು, ಮತದಾನದ ಹಕ್ಕನ್ನು ನೀಡಿದೆ.  ಮತದಾನದ ಹಕ್ಕನ್ನು ನಾವು ಚಲಾಯಿಸದಿದ್ದಲ್ಲಿ, ನಮಗೆ ನಾವೆ ವಂಚನೆ ಮಾಡಿಕೊಂಡಂತಾಗುತ್ತದೆ ಎಂದರು.  ಪ್ರಜಾಪ್ರಭುತ್ವದಲ್ಲಿ ದೃಢ ವಿಶ್ವಾಸವುಳ್ಳ ನಾವು, ದೇಶದಲ್ಲಿ ಮುಕ್ತ, ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿ ಹಿಡಿಯುವ, ಚುನಾವಣೆಗಳಲ್ಲಿ ನಿರ್ಭೀತರಾಗಿ ಧರ್ಮ, ಜನಾಂಗ, ಜಾತಿ, ಮತ, ಭಾಷೆ ಅಥವಾ ಯಾವುದೇ ಪ್ರೇರೇಪಣೆಗಳ ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೆ, ಮತ ಚಲಾಯಿಸುತ್ತೇವೆ ಎನ್ನುವ ಮತದಾರರ ಪ್ರತಿಜ್ಞಾ ವಿಧಿಯನ್ನು ಜಿಲ್ಲಾಧಿಕಾರಿಗಳು ಎಲ್ಲರಿಗೂ ಭೋದಿಸಿದರು.

ಭಾರತದ ನಕ್ಷೆಯಲ್ಲಿ ಬೃಹತ್ ಮಾನವ ಸರಪಳಿ :
****************ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕೊಪ್ಪಳದ ಗವಿಮಠ ಆವರಣದಲ್ಲಿ 300 * 200 ಅಡಿ ಉದ್ದಗಲದಲ್ಲಿ ಭಾರತದ ಬೃಹತ್ ನಕ್ಷೆ ಹಾಗೂ ಅದರೊಳಗೆ ಕರ್ನಾಟಕದ ನಕ್ಷೆಯನ್ನೂ ಕೂಡ ರಚಿಸಲಾಯಿತು.  ಕೊಪ್ಪಳದ ವಿವಿಧ ಕಾಲೇಜುಗಳ ಸುಮಾರು 6500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಸ್ತು ಬದ್ಧವಾಗಿ ಭಾರತದ ನಕ್ಷೆಯ ರೇಖೆಯ ಮೇಲೆ ಜೊತೆಜೊತೆಯಾಗಿ ನಿಂತು ಮಾನವ ಸರಪಳಿಯನ್ನು ನಿರ್ಮಿಸಿದರು.  ಅಲ್ಲದೆ ಇದೇ ಮೈದಾನದಲ್ಲಿ ಕನ್ನಡ ಭಾಷೆಯಲ್ಲಿ ‘ನಮ್ಮ ಮತ, ನಮ್ಮ ಹಕು’್ಕ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಮೈ ವೋಟ್, ‘ಮೈ ರೈಟ್ಸ್’ ಎನ್ನುವ ಘೋಷ ವಾಕ್ಯವನ್ನು ಕೂಡ ರಚಿಸಿ, ಇದರಲ್ಲಿಯೂ ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸಿದ್ದು, ಆಕರ್ಷಣೀಯವಾಗಿತ್ತು.  ಡ್ರೋಣ್ ಕ್ಯಾಮೆರಾ ಮೂಲಕ ಈ ಎಲ್ಲ ಪ್ರಕ್ರಿಯೆಯನ್ನು ಸೆರೆಹಿಡಿಯಲಾಗಿದ್ದು, ವಿಡಿಯೋ ನಿಜಕ್ಕೂ ಅದ್ಭುತವಾಗಿ ಮೂಡಿ ಬಂದಿದೆ.  ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕೊಪ್ಪಳ ನಗರದಲ್ಲಿ ಹಮ್ಮಿಕೊಂಡ ಈ ವಿಶೇಷ ಬೃಹತ್ ಮಾನವ ಸರಪಳಿ ಕಾರ್ಯಕ್ರಮ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.
     ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ ಅವರು ಮತದಾರರ ಜಾಗೃತಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.  ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಎನ್.ಕೆ. ತೊರವಿ, ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವೈ. ಸುದರ್ಶನರಾವ್, ಉಪವಿಭಾಗಾಧಿಕಾರಿ ರವಿ ತಿರ್ಲಾಪುರ ಸೇರಿದಂತೆ ಹಲವು ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.  ಕೊಪ್ಪಳ ನಗರದ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಪ್ರಾಚಾರ್ಯರು, ಶಿಕ್ಷಕರು ಆಸಕ್ತಿಯಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.  ಒಟ್ಟಾರೆ ಇತ್ತೀಚೆಗಷ್ಟೇ ಗವಿಮಠ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಂಡಿದ್ದರು.  ಇದೀಗ ಕೊಪ್ಪಳ ಗವಿಮಠದ ಮೈದಾನ ಮತದಾರರ ಜಾಗೃತಿಗಾಗಿ ಭಾರತದ ನಕ್ಷೆಯಲ್ಲಿ ಬೃಹತ್ ಮಾನವ ಸರಪಳಿ ಕಾರ್ಯಕ್ರಮದ ಆಯೋಜನೆಯ ಮೂಲಕ ಮತ್ತೊಮ್ಮೆ ಸಾವಿರಾರು ಜನರ ಪಾಲ್ಗೊಳ್ಳುವಿಕೆಗೆ ಸಾಕ್ಷಿಯಾಯಿತು.

ಕಿನ್ನಾಳಗೆ ಐಟಿಐ, ಪದವಿ ಕಾಲೇಜ್ ಮಂಜೂರಾತಿಗೆ ಯತ್ನ: ಇಕ್ಬಾಲ್ ಅನ್ಸಾರಿ


ಕೊಪ್ಪಳ ಜ. 27 (ಕರ್ನಾಟಕ ವಾರ್ತೆ) : ಅಂತರ ರಾಷ್ಟ್ರೀಯ ಖ್ಯಾತಿಯ ಕಲಾ ಗ್ರಾಮ ಕಿನ್ನಾಳ ತೀವ್ರಗತಿಯಲ್ಲಿ ಅಭಿವೃದ್ಧಿಯಾಗುತ್ತಿದ್ದು ಗ್ರಾಮಕ್ಕೆ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆ, ಐಟಿಐ, ಪದವಿ ಕಾಲೇಜ್ ಮಂಜೂರಾತಿಗೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುವುದಾಗಿ ಗಂಗಾವತಿ ಶಾಸಕರಾದ ಇಕ್ಬಾಲ್ ಅನ್ಸಾರಿಯವರು ಹೇಳಿದರು.

     ಗಂಗಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದಲ್ಲಿ  01 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ಪಿಕಪ್ ಡ್ಯಾಂ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

     ರಾಜ್ಯದಲ್ಲಿ ವೈದ್ಯರ ಕೊರತೆ ಮಧ್ಯೆಯೂ ಹದಿನೈದು ಸಾವಿರ ಜನಸಂಖ್ಯೆಯ ಕಿನ್ನಾಳ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೇಗೇರಿಸಲು ಪ್ರಯತ್ನ ನಡೆಸಿದ್ದು ಶೀಘ್ರ ನಮ್ಮ ಪ್ರಯತ್ನ ಯಶಸ್ವಿಯಾಗಿ ಗ್ರಾಮಕ್ಕೆ ಎಂಬಿಬಿಎಸ್ ವೈದ್ಯರ  ಸೇವೆ ಲಭಿಸಲಿದೆ ಎಂದರು.
     ಈ ಸಂದರ್ಭದಲ್ಲಿ ಶಾಸಕರು 75 ಲಕ್ಷ ರೂ. ವೆಚ್ಚದ ಕಿನ್ನಾಳ-ಕೊಪ್ಪಳ ರಸ್ತೆ, 64 ಲಕ್ಷ ವೆಚ್ಚದ ಕಿನ್ನಾಳ-ಮಂಗಳೂರು ರಸ್ತೆ ಡಾಂಬರೀಕರಣ, 1 ಕೋಟಿ 35 ಲಕ್ಷ ವೆಚ್ಚದ ಸಿಸಿ ರಸ್ತೆ, 34 ಲಕ್ಷ ವೆಚ್ಚದ ವಾರದ ಸಂತೆ ಮಾರುಕಟ್ಟೆ ನಿರ್ಮಾಣ, 55 ಲಕ್ಷ ವೆಚ್ಚದ ಚೆಕ್ ಡ್ಯಾಂ, 7 ಲಕ್ಷ ವೆಚ್ಚದ ಮಹಿಳಾ ಸಮುದಾಯ ಭವನ, 5 ಲಕ್ಷ ವೆಚ್ಚದ ಕಟ್ಟಡ ಕಾರ್ಮಿಕರ ಸಮುದಾಯ ಭವನ, 5 ಲಕ್ಷ ವೆಚ್ಚದ ಜಾಮೀಯಾ ಸಮುದಾಯ ಭವನ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.
     ಗ್ರಾ.ಪಂ ಸದಸ್ಯ ಬಸವರಾಜ ಚಿಲವಾಡಗಿ ಪ್ರಾಸ್ತಾವಿಕ ಮಾತನಾಡಿದರು. ವೇದಿಕೆಯಲ್ಲಿ ತಾ.ಪಂ. ಮಾಜಿ ಅಧ್ಯಕ್ಷ ಅಮರೇಶ ಉಪಲಾಪೂರ, ತಾ.ಪಂ. ಮಾಜಿ ಸದಸ್ಯ ಹನುಮಂತಪ್ಪ ವನಬಳ್ಳಾರಿ, ವೀರೇಶ ತಾವರಗೇರಿ, ಅನಿಲ್ ಬೋರಟ್ಟಿ, ಮಲ್ಲೇಶಪ್ಪ ಗುಮಗೇರಿ, ಎಸ್.ಬಿ.ಖಾದ್ರಿ ಹಾಗೂ ಗ್ರಾ.ಪಂ.ನ ಅಧ್ಯಕ್ಷರು, ಸದಸ್ಯರು, ಅಧಿಕಾರಿ ವರ್ಗ ಸೇರಿ ಇತರರು ಉಪಸ್ಥಿತರಿದ್ದರು.

ಫೆ. 09 ರಿಂದ ದ್ರಾಕ್ಷಿ ಮತ್ತು ದಾಳಿಂಬೆ ಮೇಳ : ಹೆಸರು ನೋಂದಣಿಗೆ ರೈತರಿಗೆ ಸೂಚನೆ


ಕೊಪ್ಪಳ ಜ. 27 (ಕರ್ನಾಟಕ ವಾರ್ತೆ): ತೋಟಗಾರಿಕೆ ಇಲಾಖೆಯು ಕೊಪ್ಪಳದಲ್ಲಿ ಫೆ. 09 ರಿಂದ 13 ರವರೆಗೆ ದ್ರಾಕ್ಷಿ ಮತ್ತು ದಾಳಿಂಬೆ ಬೆಳೆಯ ತಾಂತ್ರಿಕ ಕಾರ್ಯಗಾರ ಮತ್ತು ಮಾರಾಟ ಮೇಳವನ್ನು ಆಯೋಜಿಸಲು ಉದ್ದೇಶಿಸಿದ್ದು, ಭಾಗವಹಿಸಲು ಇಚ್ಛಿಸುವ ದ್ರಾಕ್ಷಿ ಮತ್ತು ದಾಳಿಂಬೆ ಬೆಳೆಗಾರರು ತಮ್ಮ ಹೆಸರು ನೊಂದಾಯಿಸುವಂತೆ ಸೂಚನೆ ನೀಡಲಾಗಿದೆ.
           ಪ್ರಸಕ್ತ ಸಾಲಿನಲ್ಲಿ ಫೆ. 09 ರಿಂದ  13 ರವರೆಗೆ ಜಿಲ್ಲೆಯಲ್ಲಿ ದ್ರಾಕ್ಷಿ ಮತ್ತು ದಾಳಿಂಬೆ ತಾಂತ್ರಿಕ ಕಾರ್ಯಾಗಾರ ಮತ್ತು ಮಾರಾಟ ಮೇಳ ಆಯೋಜಿಸಲು ಉದ್ದೇಶಿಸಿದ್ದು, ಜಿಲ್ಲೆಯ ಆಸಕ್ತ ದ್ರಾಕ್ಷಿ ಮತ್ತು ದಾಳಿಂಬೆ ಬೆಳೆಗಾರರು ಮಾರಾಟ ಮೇಳದಲ್ಲಿ ಭಾಗವಹಿಸಲು ಇಚ್ಚಿಸಿದಲ್ಲಿ ಕೂಡಲೆ ಆಯಾ ತಾಲ್ಲೂಕಿನ ತೋಟಗಾರಿಕೆ ಕಛೇರಿಗೆ ಭೇಟಿ ನೀಡಿ ತಮ್ಮ ಹೆಸರು ನೊಂದಾಯಿಸಿಕೊಳ್ಳಬೇಕು. ಅಲ್ಲದೆ, ಜಿಲ್ಲೆಯ ತೋಟಗಾರಿಕೆ ಬೆಳೆಗಾರರು, ತಾಂತ್ರಿಕ ಕಾರ್ಯಾಗಾರದಲ್ಲಿ ಪಾಲ್ಗೊಂಡು ತಾಂತ್ರಿಕ ವಿಷಯವನ್ನು ಪಡೆದುಕೊಳ್ಳಲು ಉತ್ತಮ ಅವಕಾಶವನ್ನು ತೋಟಗಾರಿಕೆ ಇಲಾಖೆ ಕಲ್ಪಿಸಿದೆ.  ಜೊತೆಗೆ ಜಿಲ್ಲೆಯ ಗ್ರಾಹಕರು ಮತ್ತು ಸಾರ್ವಜನಿಕರು ಈ ಮೇಳದಲ್ಲಿ ಪಾಲ್ಗೊಂಡು ಗುಣಮಟ್ಟದ ವಿವಿಧ ತಳಿಗಳ ದ್ರಾಕ್ಷಿ ಮತ್ತು ದಾಳಿಂಬೆ ಹಣ್ಣು ಮತ್ತು ಉತ್ಪನ್ನಗಳನ್ನು ಯೋಗ್ಯ ಬೆಲೆಯಲ್ಲಿ ಖರೀದಿಸಿ ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಜ. 28 ರಂದು ಐದು ವರ್ಷದೊಳಗಿನ ಮಕ್ಕಳಿಗೆ ತಪ್ಪದೆ ಪೋಲಿಯೋ ಹನಿ ಹಾಕಿಸಿ- ವೆಂಕಟ್ ರಾಜಾ


ಕೊಪ್ಪಳ ಜ. 27 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಜ. 28 ರಿಂದ 31 ರವರೆಗೆ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಪಾಲಕರು, ಪೋಷಕರು ತಮ್ಮ 05 ವರ್ಷದೊಳಗಿನ ಎಲ್ಲ ಮಕ್ಕಳಿಗೆ ತಪ್ಪದೆ ಸಮೀಪದ ಅಂಗನವಾಡಿ, ಸರ್ಕಾರಿ ಆಸ್ಪತ್ರೆ ಅಥವಾ ಶಾಲೆಗಳಿಗೆ ಕರೆತಂದು ತಪ್ಪದೆ ಪಲ್ಸ್ ಪೋಲಿಯೋ ಹನಿ ಹಾಕಿಸಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ ಮನವಿ ಮಾಡಿಕೊಂಡಿದ್ದಾರೆ.
     ಮಕ್ಕಳನ್ನು ಕಾಡುವ ಪೋಲಿಯೋ ರೋಗವನ್ನು ಸಂಪೂರ್ಣ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಜ. 28 ರಿಂದ 31 ರವರೆಗೆ ಜಿಲ್ಲೆಯಲ್ಲಿ ಮೊದಲ ಹಂತದ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ 1,83,992 ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹನಿ ಹಾಕುವ ಗುರಿ ಹೊಂದಲಾಗಿದೆ.  ಆ ಪೈಕಿ 153135 ಮಕ್ಕಳು ಗ್ರಾಮಾಂತರ ಪ್ರದೇಶದವರಾಗಿದ್ದು, 30857 ಮಕ್ಕಳು ನಗರ ಪ್ರದೇಶದವರಾಗಿದ್ದಾರೆ.  ಮಕ್ಕಳಿಗೆ ಪೋಲಿಯೋ ಹನಿ ನೀಡುವ ಸಲುವಾಗಿ ಒಟ್ಟು 298889  ಮನೆಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ.  ಈ ಪೈಕಿ ಗ್ರಾಮೀಣ ಪ್ರದೇಶದ 249213 ಮನೆಗಳು ಹಾಗೂ ನಗರ ಮತ್ತು ಪಟ್ಟಣ ಪ್ರದೇಶದ 49676 ಮನೆಗಳ ಭೇಟಿಗೆ ಗುರಿ ಹೊಂದಲಾಗಿದೆ.  ಜ. 28 ರಂದು  ಬೂತ್ ಮಟ್ಟದಲ್ಲಿ ಮಕ್ಕಳಿಗೆ ಲಸಿಕೆ ನೀಡಲು ಒಟ್ಟು 1870 ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು.  ಜ. 29 ರಿಂದ 31 ರವರೆಗೆ ಮನೆ ಮನೆಗಳಿಗೆ ಭೇಟಿ ನೀಡಿ ಉಳಿಕೆ ಮಕ್ಕಳಿಗೆ ಪೋಲಿಯೋ ಹನಿ ನೀಡಲಾಗುವುದು.  ಬಸ್ ನಿಲ್ದಾಣ, ರೈಲು ನಿಲ್ದಾಣ, ಸಂತೆ, ಜಾತ್ರೆಗಳಲ್ಲಿ ಅಲ್ಲದೆ ಧಾರ್ಮಿಕ ಕ್ಷೇತ್ರಗಳಲ್ಲಿ ವಿಶೇಷ ಬೂತ್‍ಗಳನ್ನು ಸ್ಥಾಪಿಸಿ ಮಕ್ಕಳಿಗೆ ಲಸಿಕೆ ನೀಡಲಾಗುವುದು. ಕಾರ್ಖಾನೆ ಮತ್ತು ಕಟ್ಟಡ ನಿರ್ಮಾಣ, ಇಟ್ಟಿಗೆ ಭಟ್ಟಿ ಪ್ರದೇಶಗಳಲ್ಲಿ ವಾಸ್ತವ್ಯ ಹೂಡಿರುವ ಕಾರ್ಮಿಕರ ಮಕ್ಕಳಿಗೂ ಸಹ ಪೋಲಿಯೋ ಲಸಿಕೆ ನೀಡಿಕೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.  ಸ್ಲಂ ಪ್ರದೇಶಗಳು, ಅಲೆಮಾರಿ ಜನರು ತಾತ್ಕಾಲಿಕ ವಾಸ್ತವ್ಯಕ್ಕೆ ಹಾಕಿಕೊಂಡಿರುವ ಟೆಂಟ್ ಪ್ರದೇಶಗಳಿಗೂ ಭೇಟಿ ನೀಡಿ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲಾಗುವುದು.  ಪಾಲಕರು ತಮ್ಮ 05 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ತಪ್ಪದೆ ಲಸಿಕೆ ಹಾಕಿಸಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ ಮನವಿ ಮಾಡಿಕೊಂಡಿದ್ದಾರೆ.

ಹುಲಿಗಿ : ಖಗ್ರಾಸ ಚಂದ್ರಗ್ರಹಣ ನಿಮಿತ್ಯ ಮಧ್ಯಾಹ್ನ ನಂತರ ದೇವಿ ದರ್ಶನ ಇಲ್ಲ


ಕೊಪ್ಪಳ ಜ. 27 (ಕರ್ನಾಟಕ ವಾರ್ತೆ): ಇದೇ ಜ. 31 ರಂದು ಖಗ್ರಾಸ ಚಂದ್ರಗ್ರಹಣ ಜರುಗುವುದರಿಂದ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಅಂದು ಮಧ್ಯಾಹ್ನ 12-30 ರ ನಂತರ ದೇವಿಯ ದರ್ಶನ ವ್ಯವಸ್ಥೆ ಇರುವುದಿಲ್ಲ.
     ಜ. 31 ರಂದು ಬುಧವಾರ  ‘ಭಾರತ ಹುಣ್ಣಿಮೆ’ ಯಂದು ಖಗ್ರಾಸ ಚಂದ್ರಗ್ರಹಣವಿರುವುದರಿಂದ ಮದ್ಯಾಹ್ನ 12:30 ಗಂಟೆಯ ವರೆಗೆ ಮಾತ್ರ ‘ಶ್ರೀ ದೇವಿ’ಯವರ  ದರ್ಶನವಿರುತ್ತದೆ.  ಅಂದು ಬೆಳಿಗ್ಗೆ 07 ಗಂಟೆಗೆ ವೇದಾರಂಭ,  ಸಂಜೆ 5-18 ಗಂಟೆಗೆ ಗ್ರಹಣ ಸ್ಪರ್ಶ, ರಾತ್ರಿ 07 ಗಂಟೆಗೆ ಮದ್ಯಕಾಲ, ರಾತ್ರಿ 8-42 ಗಂಟೆಗೆ ಗ್ರಹಣ ಮೋಕ್ಷ ಇರುತ್ತದೆ.  ರಾತ್ರಿ 8:42ರ ನಂತರ ಹುಲಿಗೆಮ್ಮ ದೇವಿಯವರಿಗೆ ಮಹಾಪೂಜೆ, ಗಂಗಾ ದೇವಿ ಪೂಜೆ, ಮಾತಂಗಿ ಪೂಜಾರರಿಗೆ ಉಡಿತುಂಬಿ ಹಾಲೆರೆಯುವುದು, ಕ್ಷೇತ್ರಪಾಲ ಅಜ್ಜಪ್ಪ ದೇವರಿಗೆ ಗುಗ್ಗರಿ ನೈವೇದ್ಯ, ಮಹಾಮಂಗಳಾರತಿ ಪೂಜಾ ಕಾರ್ಯಕ್ರಮಗಳು ಜರುಗುತ್ತವೆ.   ಜ. 31 ರಂದು ಖಗ್ರಾಸ ಚಂದ್ರಗ್ರಹಣ ಇರುವ ಪ್ರಯುಕ್ತ  ಅನ್ನ ದಾಸೋಹದ ವ್ಯವಸ್ಥೆ ಇರುವುದಿಲ್ಲ.  ಭಕ್ತಾದಿಗಳು ಸಹಕರಿಸಬೇಕು ಎಂದು ಹುಲಿಗೆಮ್ಮ ದೇವಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್. ಚಂದ್ರಮೌಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಸಾರ್ವಜನಿಕರ ಸಹಕಾರ ಅಗತ್ಯ- ಟಿ. ಶ್ರೀನಿವಾಸ


ಕೊಪ್ಪಳ ಜ. 27 (ಕರ್ನಾಟಕ ವಾರ್ತೆ): ಬಾಲ ಕಾರ್ಮಿಕತೆ ನಿರ್ಮೂಲನೆ ಕೇವಲ ಸರ್ಕಾರಿ ಇಲಾಖೆಗಳ ಕೆಲಸ ಮಾತ್ರವಲ್ಲ, ಸಾರ್ವಜನಿಕರ ಪಾತ್ರವೂ ಕೂಡ ಮಹತ್ವದ್ದಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾಗಿರುವ ಟಿ. ಶ್ರೀನಿವಾಸ ಅವರು ಹೇಳಿದರು.
            ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ತಾಲೂಕು ಆಡಳಿತ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ, ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೊಪ್ಪಳ ಹಾಗೂ ಗ್ರಾಮ ಪಂಚಾಯತ ಕಿನ್ನಾಳ ಇವರುಗಳ ಸಂಯುಕ್ತಾಶ್ರಯದಲ್ಲಿ ಗುರುವಾರದಂದು ಕಿನ್ನಾಳ ಗ್ರಾಮದ  ರಾಜೀವ ಗಾಂದಿ ಸೇವಾ ಕೇಂದ್ರದಲ್ಲಿ ಆಯೋಜಿಸಲಾದ ಬಾಲಕಾರ್ಮಿಕತೆ ಹಾಗೂ ಮತದಾನ ದಿನಾಚರಣೆ ಜನಜಾಗೃತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
       ಸರ್ಕಾರ ಕಡ್ಡಾಯ ಶಿಕ್ಷಣ ಕಾಯ್ದೆ ಜಾರಿ ಮಾಡಿದೆ. ಕಾಯ್ದೆಯ ಪ್ರಕಾರ 14 ವರ್ಷದೋಳಗಿನ ಮಕ್ಕಳು  ಶಾಲಾ ಶಿಕ್ಷಣದಿಂದ ವಂಚಿತರಾಗಬಾರದೆಂದು ಮತ್ತು ಬಾಲಕಾರ್ಮಿಕತೆಯ ಸುಳಿಗೆ ಸಿಲುಕಬಾರದು ಬಾಲಕಾರ್ಮಿಕತೆ ನಿರ್ಮೂಲನೆ ಕೇವಲ ಇಲಾಖೆಗಳ ಕೆಲಸ ಮಾತ್ರವಲ್ಲ. ಸಾರ್ವಜನಿಕರ ಪಾತ್ರವೂ ಕೂಡಾ ಮಹತ್ವದ್ದಾಗಿದೆ.  ಆದ್ದರಿಂದ ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಂಡು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಬಾಲಕಾರ್ಮಿಕತೆಯಿಂದ ಮಕ್ಕಳನ್ನು ಮುಕ್ತರಾಗಿಸಬೇಕು ಎಂದರು.  ಮತದಾನ ದಿನಾಚರಣೆಯ ಮಹತ್ವದ ಕುರಿತು ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸಲು ಎಲ್ಲಾ ನಾಗರೀಕರು ತಪ್ಪದೆ ಮತದಾನ ಮಾಡಬೇಕು ಮತ್ತು ಇಂತಹ ದಿನಾರಣೆಗಳಿಗೆ ಹೆಚ್ಚಿನ ಪ್ರಾಧಾನ್ಯತೆ ಸಿಗಬೇಕು ಪ್ರಜ್ಞಾಪೂರ್ವಕವಾಗಿ ಎಲ್ಲರು ಮತ ಚಲಾಯಿಸಬೇಕು ಎಂದು ಸಿವಿಲ್ ನ್ಯಾಯಾಧೀಶ ಟಿ. ಶ್ರೀನಿವಾಸ ಅವರು ಹೇಳಿದರು.
           ಕೊಪ್ಪಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಇಮಾಲಪ್ಪ ಅವರು, ಬಾಲಕಾರ್ಮಿಕತೆಯ ದುಷ್ಪರಿಣಾಮಗಳ ಬಗ್ಗೆ ಹಾಗೂ ಮತದಾರರ ದಿನಾಚರಣೆಯ ಕುರಿತು ಮಾತನಾಡಿದರು.  ಕಾರ್ಮಿಕ ನಿರೀಕ್ಷಕ ಹೊನ್ನಪ್ಪ  ಅವರು, ಕಾರ್ಮಿಕ ಇಲಾಖೆಯ ಅಡಿಯಲ್ಲಿ ಬರುವ ಎಲ್ಲಾ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು.
           ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕ ಬಸವರಾಜ ಹಿರೇಗೌಡ್ರ ಅವರು ಬಾಲಕಾರ್ಮಿಕ ಹಾಗೂ ಕಿಶೋರಕಾರ್ಮಿಕ ಕಾಯ್ದೆ ಕುರಿತು  ವಿಶೇಷ ಉಪನ್ಯಾಸ ನೀಡಿದರು.  ಕೆ.ಹನುಮಂತರಾವ್ ವಕೀಲರು, ಮತದಾರರ ದಿನದ ಮಹತ್ವ ಕುರಿತು ಉಪನ್ಯಾಸ ನಿಡಿದರು.
        ಕಾರ್ಯಕ್ರಮದಲ್ಲಿ ಪಿಡಿಒ ವೀರನಗೌಡ ಚನ್ನವೀರಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು ಮತ್ತು ಮತದಾರ ದಿನಾಚರಣೆಯ ಪ್ರತಿಜಾÐ ವಿಧಿ ಭೊದಿಸಿದರು. ಗ್ರಾಮ ಪಂಚಾಯತಿ ಸದಸ್ಯರು, ಕಟ್ಟಡ ಕಾರ್ಮಿಕ ಸಂಘದ ಕಾರ್ಯದರ್ಶಿ ರಮೇಶ ಘೋರ್ಪಡೆ, ಸರ್ಕಾರಿ ಪ್ರೌಡ ಶಾಲೆ ಉಪ ಪ್ರಾಚಾರ್ಯರು ಆಶಾ ಕಾರ್ಯ ಕರ್ತೆಯರು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಇತರೆ ಗಣ್ಯರು ಪಾಲ್ಗೊಂಡಿದ್ದರು.

ಕುಕನೂರು ಮಾದರಿ ತಾಲೂಕು ಆಗಿ ನಿರ್ಮಾಣಗೊಳ್ಳಲಿದೆ : ಬಸವರಾಜ ರಾಯರಡ್ಡಿ

ಕೊಪ್ಪಳ ಜ. 27 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ನೂತನ ಹೊಸ ತಾಲೂಕು ಆಗಿ ರಚನೆಗೊಂಡಿರುವ ಕುಕನೂರು ಒಂದು ಮಾದರಿ ತಾಲೂಕು ಆಗಿ ನಿರ್ಮಾಣಗೊಳ್ಳಲಿದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಹೇಳಿದರು. 

    ಕೊಪ್ಪಳ ಜಿಲ್ಲೆಯ ಕುಕನೂರ ಪ್ರವಾಸಿ ಮಂದಿರದ ಎದುರುಗಡೆಯ ಕಲ್ಯಾಣ ಮಂಟಪ ಆವರಣದಲ್ಲಿ ಏರ್ಪಡಿಸಲಾಗಿದ್ದ ಕುಕನೂರ ನೂತನ ತಾಲೂಕ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ, ತಹಶಿಲ್ದಾರ ಕಾರ್ಯಾಲಯ ಹಾಗೂ ಕಾರ್ಯಕ್ರಮದ ಉದ್ಘಾಟನೆ ನೆರೆವೇರಿಸಿ ಅವರು ಮಾತನಾಡಿದರು.

     ಯಲಬುರ್ಗಾ ತಾಲೂಕಿನಲ್ಲಿದ್ದ ಕುಕನೂರನ್ನು ಇದೀಗ ನಮ್ಮ ಸರ್ಕಾರ ನೂತನ ತಾಲೂಕು ಆಗಿ ರಚನೆ ಮಾಡಿ, ಉದ್ಘಾಟನೆಯನ್ನೂ ನೆರವೇರಿಸಲಾಗಿದೆ.  ಕುಕನೂರು ತಾಲೂಕಿನಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ರಾಜ್ಯದಲ್ಲಿಯೇ ಮಾದರಿ ತಾಲೂಕನ್ನಾಗಿ ಮಾಡಲಾಗುವುದು.  ಮುಂಬೈಗೆ ಹೋಗುವ ಕುಕನೂರ-ಬಾದಮಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಯನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು.  ಇದರಿಂದ ಜನರಿಗೆ ತುಂಬ ಅನುಕೂಲವಾಗಲಿದೆ.  ರಾಜೂರು, ಸಂಗನಾಳ ಸೇರಿದಂತೆ ಇನ್ನೂ ಅನೇಕ ಗ್ರಾಮಗಳ ಮೂಲಕ ಬೈಪಾಸ ರಸ್ತೆ ಹಾಗೂ 26 ಹಳ್ಳಿಗಳ ಬ್ರಿಡ್ಜ್‍ಗಳು ಸಹ ನಿರ್ಮಾಣವಾಗಲಿವೆ.  ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆದೇಶ ಮಾಡಿರುವ ನೂತನ ತಾಲೂಕುಗಳಲ್ಲಿ ಕೊಪ್ಪಳ ಜಿಲ್ಲೆಯ ಕುಕನೂರ, ಕಾರಟಗಿ ಮತ್ತು ಕನಕಗಿರಿ ಒಳಗೊಂಡಿದೆ.  ಗಣರಾಜ್ಯೊತ್ಸವ ದಿನದಂದು ಕುಕನೂರು ಹೊಸ ತಾಲೂಕು ಆಗಿ ಉದ್ಘಾಟನೆಯಾಗಿದ್ದು ಸಂತೋಷದ ವಿಷಯವಾಗಿದೆ.  ಕಾರಟಗಿ ಹಾಗೂ ಕನಕಗಿರಿ ತಾಲೂಕುಗಳ ಉದ್ಘಾಟನಾ ಕಾರ್ಯ ಶೀಘ್ರದಲ್ಲೇ ನೆರೆವೇರಲಿದೆ.  ನಮ್ಮ ಸರ್ಕಾರ ನುಡಿದಂತೆ ನಡೆದ ಸರ್ಕಾರವಾಗಿದೆ.  ಜಿಲ್ಲೆಯಲ್ಲಿ ಕೆರೆ ತುಂಬಿಸುವ, ಶುದ್ಧ ಕುಡಿಯುವ ನೀರು ಪೂರೈಸುವ ಹಾಗೂ ಇತರೆ ಬೃಹತ್ ಕಾರ್ಯಕ್ರಮಗಳನ್ನು   ಜಾರಿಗೊಳಿಸಲಾಗಿದೆ.  ತಳಕಲ್ ಗ್ರಾಮದಲ್ಲಿ ನಿರ್ಮಾಣಗೊಳ್ಳುತ್ತಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ದೇಶದ ಅತ್ಯಂತ ಮಾದರಿಯ ಇಂಜಿನಿಯರಿಂಗ್ ಕಾಲೇಜ್ ಆಗಿ ಹೊರಹೊಮ್ಮಲಿದೆ.  ಇದರಿಂದಾಗಿ ಹೈ-ಕ ಭಾಗದ ವಿದ್ಯಾರ್ಥಿಗಳಿಗೆ ತುಂಬಾ ಸಹಕಾರಿಯಾಗಲಿದೆ.  ಜಿಲ್ಲೆಯಲ್ಲಿ ಹೊಸ-ಹೊಸ ಮೂರಾರ್ಜಿ ದೇಸಾಯಿ ಶಾಲೆ, ಸರ್ಕಾರಿ ಐ.ಟಿ.ಐ ಕಾಲೇಜು, ಸ್ನಾತಕೊತ್ತರ ಕೇಂದ್ರ, ವಸತಿ ಪದವಿ ಪೂರ್ವ ಕಾಲೇಜುಗಳ ಸ್ಥಾಪನೆಗೆ ಸರ್ಕಾರವು ಅನುಮೋದನೆಯನ್ನು ನೀಡಿದೆ.    
ಸರ್ಕಾರವು ಶುದ್ಧ ಕುಡಿಯುವ ನೀರು ಪೂರೈಕೆಗಾಗಿ ಜಿಲ್ಲೆಯ ಯಲಬುರ್ಗಾ ಮತ್ತು ಕುಷ್ಟಗಿ ತಾಲೂಕುಗಳ ಎಲ್ಲಾ ಗ್ರಾಮಗಳಿಗೆ   ಪ್ರತಿಯೊಬ್ಬರಿಗೆ ಒಂದು ದಿನಕ್ಕೆ 85 ಲೀಟರ್ ಕುಡಿಯುವ ನೀರನ್ನು ಪೂರೈಸುವ ಯೋಜನೆಯನ್ನು ಜಾರಿಗೊಳಿದೆ.  ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಮುಂದಾಗಿದೆ.  ಗದಗ-ವಾಡಿ ರೈಲ್ವೆ ಮಾರ್ಗಕ್ಕೆ ಕೇಂದ್ರ ಸರ್ಕಾರದ ಜೊತೆ ರಾಜ್ಯ ಸರ್ಕಾರವು ಶೇ.50 ರಷ್ಟು ಅನುದಾನದ ಜೊತೆಗೆ ಭೂಮಿಯನ್ನು ಸಹ ನೀಡಿದೆ.  ಸರ್ಕಾರವು ಅನೇಕ ಜನಪರ ಕಾರ್ಯಕ್ರಮಗಳನ್ನು ನೀಡಿದೆ.  ಕುಕನೂರ ತಾಲೂಕು ಆಗಲು ಪಟ್ಟಣದ ಹಲಾವರು ಹಿರಿಯ ನಾಗರೀಕರು, ಜನಪ್ರತಿನಿದಿಗಳು, ಸಾರ್ವಜನಿಕರು, ಸಂಘಟನೆಗಳು ಹೋರಾಡಿದ್ದು, ಇದರ ಪ್ರತಿಫಲವಾಗಿ ಕುಕನೂರ ಹೊಸ ತಾಲೂಕು ಆಗಿ ರಚನೆಯಾಗಿದೆ.  ಇದಕ್ಕೆ ಮಾಧ್ಯಮದವರ ಪಾತ್ರವು ಸಹ ಮುಖ್ಯವಾಗಿದೆ.  ಶ್ರಮಿಸಿದ ಎಲ್ಲರಿಗೂ ನಾನು ಅಭಿನಂದಿಸುತ್ತೇನೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಹೇಳಿದರು.        
    ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಕುಕನೂರನ್ನು ಹೊಸ ತಾಲೂಕ ಎಂದು ಸರ್ಕಾರದ ಪರವಾಗಿ ಘೋಷಿಸಿದರು.  ನಂತರ ಮಾತನಾಡಿ, ಜ. 29 ರಂದು ಕನಕಗಿರಿ ಹಾಗೂ ಫೆಬ್ರವವರಿ. 12 ರಂದು ಕಾರಟಗಿಯನ್ನು ನೂತನ ಹೊಸ ತಾಲೂಕುಗಳಾಗಿ ಪ್ರಾರಂಭಿಸುತ್ತೇವೆ.  ತಾಲೂಕು ಆಡಳಿತಕ್ಕೆ ಸಂಬಂಧಿಸಿದ ಎಲ್ಲಾ ಇಲಾಖೆಗಳ ಕಚೇರಿಗಳನ್ನು ಸಹ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
    ಯಲಬುರ್ಗಾ ತಹಶೀಲ್ದಾರ ರಮೇಶ ಅಳವಂಡಿಕರ್ ಅವರು ಮಾತನಾಡಿ, ಯಲಬುರ್ಗಾ ತಾಲೂಕಿನ ಒಟ್ಟು ನಾಲ್ಕು ಹೋಬಳಿಗಳಲ್ಲಿ ಕುಕನೂರ ಮತ್ತು ಮಂಗಳೂರು ಹೋಬಳಿಗಳನ್ನು ನೂತನ ಹೊಸ ತಾಲೂಕು ಆದ ಕುಕನೂರಿಗೆ ಸೇರಿಸಿದೆ ಎಂದರು.
    ಸಮಾರಂಭದ ಅಧ್ಯಕ್ಷತೆಯನ್ನು ಕುಕನೂರ ಪ.ಪಂ ಅಧ್ಯಕ್ಷೆ ಶಾಂತಲಾ ರಾಮಣ್ಣ ಚಲವಾದಿ ಅವರು ವಹಿಸಿದ್ದರು.  ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ ಶೆಟ್ಟಿ, ಸಹಾಯಕ ಆಯುಕ್ತ ರವಿ ತಿರ್ಲಾಪುರ, ಕುಕನೂರ ಪ.ಪಂ ಉಪಾಧ್ಯಕ್ಷ ರಹೆಮಾನಸಾಬ ಮಕ್ಕಪ್ಪನವರ, ಜಿ.ಪಂ ಸದಸ್ಯ ಹನುಂತಗೌಡ, ಸೇರಿದಂತೆ ಪಟ್ಟಣದ ಹಿರಿಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.  

ಜ. 28 ರಿಂದ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ


ಕೊಪ್ಪಳ ಜ. 27 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಮೊದಲನೇ ಸುತ್ತಿನ “ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ” ಜ. 28 ರಿಂದ 31 ರವರೆಗೆ ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶದ ಅಂಗನವಾಡಿ ಕೇಂದ್ರ, ಸರ್ಕಾರಿ ಆಸ್ಪತ್ರೆ ಹಾಗೂ ಉಪ ಕೇಂದ್ರಗಳಲ್ಲಿ ಜರುಗಲಿದ್ದು,  ಉದ್ಘಾಟನಾ ಸಮಾರಂಭವನ್ನು ಜ. 28 ರಂದು ಬೆಳಿಗ್ಗೆ 8 ಗಂಟೆಗೆ  ಗವಿಸಿದ್ದೇಶ್ವರ ಮಠದ ಆವರಣ ಹಾಗೂ 9 ಗಂಟೆಗೆ ಕೊಪ್ಪಳದ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಏರ್ಪಡಿಸಲಾಗಿದೆ. 
    ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ಅಂಗವಾಗಿ ಜ. 28 ರಿಂದ 31 ರವರೆಗೆ ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶದ ಅಂಗನವಾಡಿ ಕೇಂದ್ರ, ಸರ್ಕಾರಿ ಆಸ್ಪತ್ರೆ ಹಾಗೂ ಉಪ ಕೇಂದ್ರಗಳಲ್ಲಿ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಪಲ್ಸ್ ಪೋಲಿಯೋ ಹನಿ ಹಾಕಲಾಗುತ್ತದೆ.  ಜಿಲ್ಲೆಯ ಎಲ್ಲಾ ಸಾರ್ವಜನಿಕರು ತಮ್ಮ ಸಮೀಪದ ಅಂಗನವಾಡಿ ಕೇಂದ್ರ, ಸರ್ಕಾರಿ ಆಸ್ಪತ್ರೆ ಮತ್ತು ಶಾಲೆಗಳಿಗೆ ಬೇಟಿ ನೀಡಿ ತಮ್ಮ 5 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಿಸಿ.  ಈ ಹಿಂದೆ ಎಷ್ಟೆ ಭಾರಿ ಲಸಿಕೆ ಹಾಕಿಸಿದರು ಪುನಃ ಲಸಿಕೆ ಹಾಕಿಸಿ ಪೊಲೀಯೋ ಮುಕ್ತ ರಾಷ್ಟ್ರವನ್ನಾಗಿ ಮಾಡಲು ಸಹಕರಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ಹೆಚ್ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಪದವಿ ಪೂರ್ವ ಕಾಲೇಜುಗಳ ಪ್ರಾರಂಭಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ


ಕೊಪ್ಪಳ ಜ. 27 (ಕರ್ನಾಟಕ ವಾರ್ತೆ): ಕೊಪ್ಪಳ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ 2018-19ನೇ ಶೈಕ್ಷಣಿಕ ಸಾಲಿನ ಹೊಸ ಅನುದಾನರಹಿತ ಪದವಿ ಪೂರ್ವ ಕಾಲೇಜುಗಳನ್ನು ಪ್ರಾರಂಭಿಸಲು ಇಚ್ಚಿಸುವ ಅರ್ಹ ಖಾಸಗಿ ಶಿಕ್ಷಣ ಸಂಸ್ಥೆ/ ಟ್ರಸ್ಟಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. 
    ಅರ್ಜಿ ಸಲ್ಲಿಸಲು ಜ. 31 ಕೊನೆಯ ದಿನವಾಗಿದ್ದು, ನಿಗದಿತ ಅರ್ಜಿ ನಮೂನೆಯನ್ನು (ಫಾರಂ-1) ರಲ್ಲಿ ಹೆಸರನ್ನು ನೊಂದಾಯಿಸಿಕೊಳ್ಳಲು ಜಂಟಿ ನಿರ್ದೇಶಕರು (ಮಾನ್ಯತೆ ಮತ್ತು ಅನುದಾನ) ಪದವಿ ಪೂರ್ವ ಶಿಕ್ಷಣ ನಿರ್ದೇಶನಾಲಯ, ಬೆಂಗಳೂರು ಇವರಿಗೆ ಅರ್ಜಿಯನ್ನು ಸಲ್ಲಿಸಬೇಕು.  ಆನ್‍ಲೈನ್ ಅರ್ಜಿ ನಮೂನೆ ಮತ್ತು ಹೆಚ್ಚಿನ ವಿವರಗಳನ್ನು ಇಲಾಖೆಯ ವೆಬ್‍ಸೈಟ್  www.pue.kar.nic.in ಯಿಂದ ಪಡೆಯಬಹುದಾಗಿದೆ.  ಇಲ್ಲಿಂದ ಯಾವುದೇ ಸ್ಪಷ್ಟೀಕರಣ ಬೇಕಾದಲ್ಲಿ ಕೊಪ್ಪಳ ಜಿಲ್ಲಾ ಉಪನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ ಕಛೇರಿಯಿಂದ ಪಡೆಯಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ. 

Friday, 26 January 2018

ದಕ್ಷತೆ ಹಾಗೂ ಪ್ರಾಮಾಣಿಕ ಸೇವೆಯೇ ನೌಕರರು ದೇಶಕ್ಕೆ ಸಲ್ಲಿಸುವ ಗೌರವ - ಎಂ. ಕನಗವಲ್ಲಿ

ಕೊಪ್ಪಳ ಜ. 26 (ಕರ್ನಾಟಕ ವಾರ್ತೆ): ಪ್ರತಿಯೊಬ್ಬ ಸರ್ಕಾರಿ ನೌಕರರು ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುವುದೇ ದೇಶಕ್ಕೆ ಸಲ್ಲಿಸುವ ನಿಜವಾದ ಗೌರವವಾಗಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.

     ಕೊಪ್ಪಳ ಜಿಲ್ಲಾಡಳಿತ ಭವನದ ಆವರಣದಲ್ಲಿ ಶುಕ್ರವಾರದಂದು ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಅವರು ಮಾತನಾಡಿದರು.

     ಸಾಮಾಜಿಕ ನ್ಯಾಯದ ನೆಲೆಗಟ್ಟಿನಲ್ಲಿ ರಚಿಸಲಾದ ಸಂವಿಧಾನ, ಜಾರಿಗೆ ಬಂದ ಈ ದಿನವನ್ನು ನಾವು ಗಣರಾಜ್ಯೋತ್ಸವ ದಿನವನ್ನಾಗಿ ಆಚರಿಸುತ್ತಿದ್ದೇವೆ.  ಪ್ರತಿಯೊಬ್ಬ ನೌಕರರು ದಕ್ಷತೆಯಿಂದ ಹಾಗೂ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಮೂಲಕವೇ ದೇಶಕ್ಕೆ ಗೌರವ ಸಲ್ಲಿಸಬೇಕು. ಸರ್ಕಾರಿ ನೌಕರಿಯ ಸೇವೆ ಎಲ್ಲರಿಗೂ ದೊರೆಯುವಂತಹದ್ದಲ್ಲ.  ಕಷ್ಟಪಟ್ಟು ಓದಿ, ಸ್ಪರ್ಧೆಯ ಮೂಲಕ ನೌಕರಿ ಪಡೆದಿರುತ್ತೇವೆ.  ಸ್ಪರ್ಧೆಗೆ ಕಷ್ಟಪಟ್ಟ ರೀತಿಯಲ್ಲಿಯೇ ಸಾರ್ವಜನಿಕರಿಗೆ ಸರ್ಕಾರ ನೀಡುವ ಸೌಲಭ್ಯವನ್ನು ವಿಳಂಬಕ್ಕೆ ಆಸ್ಪದವಿಲ್ಲದಂತೆ ಒದಗಿಸಲು ಪ್ರಾಮಾಣಿಕ ಯತ್ನ ಮಾಡಬೇಕು  ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಇದೇ ಸಂದರ್ಭದಲ್ಲಿ ಕರೆ ನೀಡಿದರು.

     ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಉಪವಿಭಾಗಾಧಿಕಾರಿ ರವಿ ತಿರ್ಲಾಪುರ ಸೇರಿದಂತೆ ಜಿಲ್ಲಾ ಮಟ್ಟದ ಹಲವು ಅಧಿಕಾರಿಗಳು, ವಿವಿಧ ಇಲಾಖೆಗಳ ಸಿಬ್ಬಂದಿಗಳು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಉತ್ತಮ ಸೇವೆಗೈದವರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ



ಕೊಪ್ಪಳ ಜ. 26 (ಕರ್ನಾಟಕ ವಾರ್ತೆ): ಸರ್ಕಾರಿ ಸೇವೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಅಧಿಕಾರಿ, ಸಿಬ್ಬಂದಿಗಳಿಗೆ ಜಿಲ್ಲಾಡಳಿತದ ವತಿಯಿಂದ ಕೊಡಮಾಡುವ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ಜಿಲ್ಲೆಯ ಒಟ್ಟು 14 ಅಧಿಕಾರಿ, ಸಿಬ್ಬಂದಿಗಳಿಗೆ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಗಣರಾಜ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ ಪ್ರದಾನ ಮಾಡಿದರು.

     ಸವೋತ್ತಮ ಸೇವಾ ಪ್ರಶಸ್ತಿ ಪಡೆದವರ ವಿವರ ಇಂತಿದೆ.  ಕೃಷ್ಣಮೂರ್ತಿ ದೇಸಾಯಿ- ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ, ಕೊಪ್ಪಳ.  ಡಾ. ಈಶ್ವರ ಸವಡಿ- ವೈದ್ಯರು, ಗಂಗಾವತಿ ಸಾರ್ವಜನಿಕ ಆಸ್ಪತ್ರೆ.  ಎಸ್.ಎನ್. ತಿಮ್ಮನಗೌಡ್ರ- ಸಹಾಯಕ ಕಾರ್ಯದರ್ಶಿ, ಎಪಿಎಂಸಿ ಕೊಪ್ಪಳ.  ಮನೋಹರ್- ಬೆರಳಚ್ಚುಗಾರ, ಡಿಸಿ ಆಫೀಸ್, ಕೊಪ್ಪಳ.  ತಾನಾಜಿ ನರಗುಂದ- ಮ್ಯಾನೇಜರ್, ಜಿಪಂ., ಕೊಪ್ಪಳ.  ಸುಧೀರ ಅವರಾದಿ- ವೈದ್ಯಕೀಯ ರೇಡಿಯೋಲಾಜಿಕಲ್ ಟೆಕ್ನಾಲಜಿಸ್ಟ್, ಕೊಪ್ಪಳ.  ಬಿ. ಬಾಬು- ಮುಖ್ಯಾಧಿಕಾರಿ, ಪಪಂ, ಭಾಗ್ಯನಗರ.  ವಿಜಯಕುಮಾರ- ಉಪತಹಸಿಲ್ದಾರ, ನಾಢಕಚೇರಿ ಹಿರೇವಂಕಲಕುಂಟಾ.  ಶಿವರಾಜ- ಪ್ರಮುಖ ಅಗ್ನಿಶಾಮಕರು, ಕೊಪ್ಪಳ.  ದುರುಗಪ್ಪ- ಪೌರಕಾರ್ಮಿಕ, ಕೊಪ್ಪಳ ನಗರಸಭೆ.  ರೇವಣಸಿದ್ದಪ್ಪ- ಬಸ್ ಚಾಲಕ, ಕೊಪ್ಪಳ.  ಶಿವಕುಮಾರ- ಬಸ್ ಚಾಲಕ, ಕೊಪ್ಪಳ.  ವೀರೇಶ ಎಂ.- ಎಇಇ, ಜೆಸ್ಕಾಂ, ಮುನಿರಾಬಾದ್.  ವೆಂಕಟೇಶ್- ಪಿಡಿಒ, ದೋಟಿಹಾಳ.

       ಸಂಸದ ಕರಡಿ ಸಂಗಣ್ಣ, ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್‍ರಾಜಾ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ತಾ.ಪಂ. ಅಧ್ಯಕ್ಷ ಬಾಲಚಂದ್ರನ್, ಉಪವಿಭಾಗಾಧಿಕಾರಿ ರವಿ ತಿರ್ಲಾಪುರ ಮುಂತಾದ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಾಂತ್ವನ ಹರೀಶ್ ಯೋಜನೆಯಡಿ ಜೀವ ರಕ್ಷಕ ಪ್ರಶಸ್ತಿ ಪ್ರದಾನ


ಕೊಪ್ಪಳ ಜ. 26 (ಕರ್ನಾಟಕ ವಾರ್ತೆ):  ರಸ್ತೆ ಅಪಘಾತಗಳಲ್ಲಿ ಗಾಯಗೊಂಡ ಸಂತ್ರಸ್ತರಿಗೆ, ಸಮಯಪ್ರಜ್ಞೆ ಹಾಗೂ ಪ್ರಾಮಾಣಿಕತೆಯಿಂದ, ಅವರ ಜೀವ ಉಳಿಸಲು, ಚಿಕಿತ್ಸೆ ಕೊಡಿಸಲು, ನೆರವಾಗುವ ನಾಗರಿಕರಿಗೆ ಮುಖ್ಯಮಂತ್ರಿಗಳ ಸಾಂತ್ವನ ಹರೀಶ್ ಯೋಜನೆಯಡಿ ಜಿಲ್ಲಾಡಳಿತದ ವತಿಯಿಂದ ಕೊಡಮಾಡುವ ಜಿಲ್ಲಾ ಮಟ್ಟದ ‘ಜೀವ ರಕ್ಷಕ ಪ್ರಶಸ್ತಿ’ ಯನ್ನು ಜಿಲ್ಲೆಯ ಮೂವರು ನಾಗರಿಕರಿಗೆ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಗಣರಾಜ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ ಪ್ರದಾನ ಮಾಡಿದರು.
     ಮುಖ್ಯಮಂತ್ರಿಗಳ ಸಾಂತ್ವನ ಹರೀಶ್ ಯೋಜನೆಯಡಿ ಜಿಲ್ಲಾ ಮಟ್ಟದ ಜೀವ ರಕ್ಷಕ ಪ್ರಶಸ್ತಿ ಪಡೆದವರ ವಿವರ ಇಂತಿದೆ.  ಮಹೇಶಗೌಡ ಮರಟಗೇರಿ, ನಾಗಲಾಪುರ, ಕುಷ್ಟಗಿ ತಾಲೂಕು.  ಡಾ. ಶರಣಯ್ಯ ಸ್ವಾಮಿ, ಸಿದ್ದಾಪುರ, ಗಂಗಾವತಿ ತಾಲೂಕು.  ರಾಮಣ್ಣ ಕನಕಪ್ಪ ಮನ್ನಾಪುರ, ಹಿರೇಅರಳಿಹಳ್ಳಿ, ಕುಷ್ಟಗಿ ತಾಲೂಕು.
        ಸಂಸದ ಕರಡಿ ಸಂಗಣ್ಣ, ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್‍ರಾಜಾ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ತಾ.ಪಂ. ಅಧ್ಯಕ್ಷ ಬಾಲಚಂದ್ರನ್, ಉಪವಿಭಾಗಾಧಿಕಾರಿ ರವಿ ತಿರ್ಲಾಪುರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ಮುಂತಾದ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವಿಕಲಚೇತನರಿಗೆ ಟಾಕಿಂಗ್ ಲ್ಯಾಪ್‍ಟಾಪ್ ವಿತರಣೆ


ಕೊಪ್ಪಳ ಜ. 26 (ಕರ್ನಾಟಕ ವಾರ್ತೆ): ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ವತಿಯಿಂದ 2016-17 ನೇ ಸಾಲಿನ ಯೋಜನೆಯಡಿ 10 ಜನರಿಗೆ ಟಾಕಿಂಗ್ ಲ್ಯಾಪ್‍ಟಾಪ್ ಮಂಜೂರಾಗಿದ್ದು, ಸಾಂಕೇತಿಕವಾಗಿ ಮೂವರು ವಿಕಲಚೇತನ ಫಲಾನುಭವಿಗಳಿಗೆ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಗಣರಾಜ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ ಟಾಕಿಂಗ್ ಲ್ಯಾಪ್‍ಟಾಪ್ ವಿತರಣೆ ಮಾಡಿದರು.
          ಜಿಲ್ಲೆಯ 10 ಅರ್ಹ ವಿಕಲಚೇತನರಿಗೆ 2016-17 ನೇ ಸಾಲಿನಲ್ಲಿ ಟಾಕಿಂಗ್ ಲ್ಯಾಪ್‍ಟಾಪ್ ಮಂಜೂರಾಗಿದ್ದು, ಈ ಪೈಕಿ ತಳಕಲ್‍ನ ಪಿಡ್ಡನಗೌಡ, ಚಿಕ್ಕಜಂತಕಲ್‍ನ ಅಂಜನಪ್ಪ ಹಾಗೂ ಬಿನ್ನಾಳದ ರತ್ನವ್ವ ಮನ್ನಾಪುರ ಇವರಿಗೆ ಸಾಂಕೇತಿಕವಾಗಿ ಟಾಕಿಂಗ್ ಲ್ಯಾಪ್‍ಟಾಪ್ ವಿತರಿಸಲಾಯಿತು.
     ಸಂಸದ ಕರಡಿ ಸಂಗಣ್ಣ, ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್‍ರಾಜಾ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ತಾ.ಪಂ. ಅಧ್ಯಕ್ಷ ಬಾಲಚಂದ್ರನ್, ಉಪವಿಭಾಗಾಧಿಕಾರಿ ರವಿ ತಿರ್ಲಾಪುರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಭಾರಿ ಉಪನಿರ್ದೇಶಕ ಕೃಷ್ಣ ಉಕ್ಕುಂದ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜಗದೀಶ್ ಮುಂತಾದ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಜನಪರ ಯೋಜನೆಗಳ ಮೂಲಕವೇ ಜನರ ಮನದಲ್ಲಿ ನೆಲೆಸಿದ್ದೇವೆ- ಬಸವರಾಜ ರಾಯರಡ್ಡಿ


ಕೊಪ್ಪಳ ಜ. 26 (ಕರ್ನಾಟಕ ವಾರ್ತೆ): ಹಸಿವುಮುಕ್ತ ಸಮಾಜಕ್ಕಾಗಿ ಅನ್ನಭಾಗ್ಯ, ಬರದಿಂದ ಕಂಗೆಟ್ಟಿದ ರೈತರ ಹಿತ ಕಾಯಲು ಸಾಲ ಮನ್ನಾ, ನೀರಾವರಿ, ಕೃಷಿ, ಶಿಕ್ಷಣ, ಹೀಗೆ ಹಲವಾರು ಕ್ಷೇತ್ರಗಳಲ್ಲಿ ಸರ್ವತೋಮುಖ ಅಭಿವೃದ್ಧಿ ಸಾಧಿಸಲು ನಮ್ಮ ಸರ್ಕಾರ ಕೈಗೊಂಡ ಜನಪರ ಯೋಜನೆಗಳಿಂದಾಗಿಯೇ ಜನರ ಮನದಲ್ಲಿ ನೆಲೆಸಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಹೇಳಿದರು.
 
        ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರದಂದು 69 ನೇ ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಅವರು ಮಾತನಾಡಿದರು.
 
        ಭಾರತೀಯರಾದ ನಾವು ವಿಭಿನ್ನ ಭಾಷೆ ಸಂಸ್ಕøತಿ, ಮತ್ತು ಧರ್ಮಗಳ ವೈವಿಧ್ಯಯತೆಯನ್ನು ಹೊಂದಿದ್ದರೂ, ಭೌಗೋಳಿಕವಾಗಿ, ಪ್ರಾದೇಶಿಕವಾಗಿ ಭಿನ್ನತೆಯನ್ನು ಹೊಂದಿದ್ದರೂ, ಒಕ್ಕೂಟ ವ್ಯವಸ್ಥೆಯ ಅಡಿಯಲ್ಲಿ ‘ನಾವೆಲ್ಲಾ ಒಂದು’ ಎಂದು ಘೋಷಿಸಿಕೊಂಡ ದಿನ “1950 ರ ಜನವರಿ 26”. ಭಾರತದ ಗಣರಾಜ್ಯ ಉದಯಗೊಂಡ ಬಳಿಕ, ಜಗತ್ತಿನಲ್ಲಿಯೇ ಶ್ರೇಷ್ಠ ಸಂವಿಧಾನವನ್ನು ರಚಿಸಿಕೊಂಡಿರುವ ನಮ್ಮ ದೇಶದಲ್ಲಿ, ನಮಗೆ ನಾವೇ ಹಕ್ಕು ಮತ್ತು ಕರ್ತವ್ಯಗಳನ್ನು ನಿಶ್ಚಿಯಿಸಿಕೊಂಡು ಸಾಮಾಜಿಕ ನ್ಯಾಯ ಮತ್ತು ಸಮಾನತೆಯನ್ನು ಸಾಧಿಸಲು ಬದ್ಧತೆಯನ್ನು ನಿಗದಿಪಡಿಸಿಕೊಂಡಿದ್ದೇವೆ. ಭಾರತಕ್ಕೆ ಇಂಥ ಸಂವಿಧಾನವನ್ನು ರಚಿಸಿಕೊಟ್ಟ ಮಹಾನ್ ಮಾನವತಾವಾದಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಭಾರತೀಯರ ಮನದಲ್ಲಿ ಅಮರರಾಗಿ ಉಳಿದಿದ್ದಾರೆ.  ಗಣ ರಾಜ್ಯೋತ್ಸವದ ಈ ಶುಭ ದಿನದಂದು ಅವರಿಗೆ ಗೌರವ ನಮನವನ್ನು ಸಲ್ಲಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯವಾಗಿದೆ.  ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯ ಸಂಕಲ್ಪದಲ್ಲಿ ಜಾರಿಗೆ ತಂದಿರುವ ಹಲವಾರು ಜನೋಪಯೋಗಿ ಯೋಜನೆಗಳು ಬಡವರ, ಶೋಷಿತರ, ಕೃಷಿಕರ, ದೀನ ದಲಿತರ, ಹಿಂದುಳಿದವರ, ಅಲ್ಪಸಂಖ್ಯಾತರ ಹಾಗೂ ಮಹಿಳೆಯರ ಬದುಕಿಗೆ ಭದ್ರ ಬುನಾದಿಯನ್ನು ಹಾಕಿಕೊಟ್ಟಿದೆ.
 
     ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಅನ್ನಭಾಗ್ಯ, ಕೃಷಿಭಾಗ್ಯ, ಕ್ಷೀರಭಾಗ್ಯ, ಪಶುಭಾಗ್ಯ, ಕ್ಷೀರಭಾಗ್ಯ, ವಿದ್ಯಾಸಿರಿ, ಕ್ಷೀರಧಾರೆ, ಮೈತ್ರಿ, ಮನಸ್ವಿನಿ, ಮಾತೃಪೂರ್ಣ, ಋಣಮುಕ್ತ, ರೈತರ ಸಾಲ ಮನ್ನಾ ಇಂತಹ ಹಲವಾರು ಯೋಜನೆಗಳು ಶ್ರೀಸಾಮಾನ್ಯರ ಬದುಕಿಗೆ ಆಧಾರವಾಗಿವೆ.  ಬಡಕುಟುಂಬಗಳಿಗೆ ಉಚಿತವಾಗಿ ಅಡುಗೆ ಅನಿಲ ಸಂಪರ್ಕ ಕಲ್ಪಿಸಿ, ಅವರ ಬದುಕಿನ ಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಅನಿಲಭಾಗ್ಯ ಯೋಜನೆಯನ್ನು ಜಾರಿಗೊಳಿಸಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 50 ಸಾವಿರಕ್ಕೂ ಹೆಚ್ಚು ಬಡ ಫಲಾನುಭವಿಗಳಿಗೆ ಸಂಪೂರ್ಣ ಉಚಿತವಾಗಿ ಅಡುಗೆ ಅನಿಲ ಸಂಪರ್ಕ ಒದಗಿಸಲಾಗುತ್ತಿದೆ.  ಜಿಲ್ಲೆಯಲ್ಲಿ ಈವರೆಗೆ 8191 ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದ್ದು, ಇದಕ್ಕಾಗಿ 72. 19 ಕೋಟಿ ರೂ. ಅನುದಾನ ಒದಗಿಸಿದೆ. ಜಿಲ್ಲೆಯಲ್ಲಿ 33 ಸಾವಿರಕ್ಕೂ ಹೆಚ್ಚು ರೈತರ 100 ಕೋಟಿ ರೂ. ಗಳಿಗೂ ಹೆಚ್ಚಿನ ಮೊತ್ತದ ಸಾಲಮನ್ನಾ ಮಾಡಲಾಗಿದೆ.  ಕೊಪ್ಪಳ ಹಾಗೂ ಯಲಬುರ್ಗಾದ ಪಿಜಿ ಸೆಂಟರ್ ಕಟ್ಟಡಗಳಿಗೆ ತಲಾ 25 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಕೊಪ್ಪಳದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ನಿರ್ಮಿಸಿ, ವೈದ್ಯಕೀಯ ಶಿಕ್ಷಣ ಹಾಗೂ ವೈದ್ಯಕೀಯ ಕ್ಷೇತ್ರಕ್ಕೆ ನಮ್ಮ ಸರ್ಕಾರ ಕೊಡುಗೆ ನೀಡಿದೆ. ಕುಷ್ಟಗಿ ಹಾಗೂ ಯಲಬುರ್ಗಾ ತಾಲೂಕುಗಳ 48 ಕೆರೆಗಳಿಗೆ ನೀರು ತುಂಬಿಸುವ 290 ಕೋಟಿ ರೂ. ಮೊತ್ತದ ಕಾಮಗಾರಿಗೆ ಚಾಲನೆ ನೀಡಲಾಗಿದೆ.  ತಳಕಲ್ ಇಂಜಿನಿಯರಿಂಗ್ ಕಾಲೇಜು ಕಟ್ಟಡ ಕಾಮಗಾರಿ ಭರದಿಂದ ಸಾಗಿದೆ.  ರಾಷ್ಟ್ರ ಮಟ್ಟದಲ್ಲಿಯೇ ಇದನ್ನು ಮಾದರಿ ಇಂಜಿನಿಯರಿಂಗ್ ಕಾಲೇಜಾಗಿ ನಿರ್ಮಿಸಲಾಗುವುದು.  ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ, ಹಿಂದೆಂದಿಗಿಂತಲೂ ಅತಿ ಹೆಚ್ಚು ಅಭಿವೃದ್ಧಿ ಕಾರ್ಯಗಳು ಜಿಲ್ಲೆಯಲ್ಲಿ ಆಗಿವೆ.  ಕೃಷಿ, ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯ, ವಿದ್ಯುತ್, ರಸ್ತೆ ಅಭಿವೃದ್ಧಿ, ಕುಡಿಯುವ ನೀರು ಹೀಗೆ ಹಲವಾರು ಕ್ಷೇತ್ರಗಳಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ದಿಯಾಗಿದೆ.
 
     ಕೊಪ್ಪಳ ಜಿಲ್ಲೆಯ ಜನ, ಅನ್ನ ಕೊಟ್ಟವರನ್ನು, ಹಾಲು ಕೊಟ್ಟವರನ್ನು, ನೀರು ಕೊಟ್ಟವರನ್ನು, ಸಾಲ ತೀರಿಸಿ ಋಣಮುಕ್ತಗೊಳಿಸಿ, ಸೇವೆ ಮಾಡಿದ ಕೈಗಳಿಗೆ ಜನರ ಬೆಂಬಲ ಸದಾ ಇರುತ್ತದೆ ಎಂಬ ವಿಶ್ವಾಸ ನಮ್ಮದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಹೇಳಿದರು.
     ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಭಾಗ್ಯನಗರದ ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕøತರಾದ ಸಾದಿಕ್ ಅಲಿ ಹಾಗೂ ಅಂತರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಕೊಪ್ಪಳದ ಸತೀಶ್ ಮುರಾಳ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
     ಸಮಾರಂಭದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ, ಕ್ರೀಡಾಪಟುಗಳಿಗೆ, ಕಲಾವಿದರಿಗೆ ಸನ್ಮಾನಿಸಲಾಯಿತು.
      ಸಮಾರಂಭದಲ್ಲಿ ಸಂಸದ ಕರಡಿ ಸಂಗಣ್ಣ, ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್‍ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನುಪ್ ಶೆಟ್ಟಿ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ತಾ.ಪಂ. ಅಧ್ಯಕ್ಷ ಬಾಲಚಂದ್ರನ್, ಉಪವಿಭಾಗಾಧಿಕಾರಿ ರವಿ ತಿರ್ಲಾಪುರ,  ಮುಂತಾದ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Thursday, 25 January 2018

ಜಂತುಹುಳು ನಿವಾರಣೆಗಾಗಿ 3. 72 ಲಕ್ಷ ಮಕ್ಕಳಿಗೆ ಮಾತ್ರೆ ವಿತರಣೆ : ವೆಂಕಟ್ ರಾಜಾ


ಕೊಪ್ಪಳ ಜ. 25 (ಕರ್ನಾಟಕ ವಾರ್ತೆ): ಮಕ್ಕಳಲ್ಲಿ ರಕ್ತಹೀನತೆ ಸಮಸ್ಯೆಗೆ ಜಂತುಹುಳುವಿನ ಕಾಟವೇ ಪ್ರಮುಖ ಕಾರಣವಾಗಿದ್ದು, ಇದರ ನಿವಾರಣೆಗಾಗಿ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮದಡಿ ಜಿಲ್ಲೆಯ 01 ರಿಂದ 19 ವರ್ಷದೊಳಗಿನ 3. 72 ಲಕ್ಷ ಮಕ್ಕಳಿಗೆ ಅಲ್ಬೆಂಡಾಜೋಲ್ ಮಾತ್ರೆ ಸೇವನೆ ಮಾಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ ಅವರು ಹೇಳಿದರು.
     ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮ ಆಯೋಜನೆ ಕುರಿತು ಜಿಲ್ಲಾ ಪಂಚಾಯತಿಯ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಇತ್ತೀಚೆಗೆ ಏರ್ಪಡಿಸಲಾದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
      ಮಕ್ಕಳಲ್ಲಿ ಹಸಿವಾಗದಿರುವುದು, ಹೊಟ್ಟೆನೋವು, ರಕ್ತಹೀನತೆ, ಪದೇ ಪದೇ ವಾಂತಿಬೇಧಿ ಮುಂತಾದ ಸಮಸ್ಯೆಗಳಿಗೆ ಜಂತುಹುಳುವಿನ ಕಾಟ ಪ್ರಮುಖ ಕಾರಣವಾಗಿದೆ.  ಮಕ್ಕಳಲ್ಲಿ ಜಂತುಹುಳು ಬಾಧೆಗೆ ಅನೈರ್ಮಲ್ಯ ಮತ್ತು ಬಯಲು ಶೌಚವೇ ಬಹುಮುಖ್ಯ ಕಾರಣವಾಗಿದೆ.  ಬರಿಗಾಲಲ್ಲಿ ಮಲವನ್ನು ತುಳಿದುಕೊಂಡು ನಡೆದಾಡುವ ಮಕ್ಕಳಿಗೆ ಜಂತುಹುಳುವಿನ ಬಾಧೆ ಕಾಡುತ್ತದೆ.  ಹೀಗಾಗಿ ಬಯಲು ಬಹಿರ್ದೆಸೆಯನ್ನು ಸಂಪೂರ್ಣವಾಗಿ ನಿರ್ಮೂಲನೆಗೊಳಿಸುವ ಅಗತ್ಯವಿದೆ.  ಮಕ್ಕಳಲ್ಲಿನ ರಕ್ತಹೀನತೆ ನಿವಾರಣೆ ನಿಟ್ಟಿನಲ್ಲಿ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮವನ್ನು ಫೆ. 12 ರಂದು ಜಿಲ್ಲೆಯಲ್ಲಿ ಆಯೋಜಿಸಲಾಗುತ್ತಿದೆ.  ಕೊಪ್ಪಳ ಜಿಲ್ಲೆಯ 01 ರಿಂದ 19 ವರ್ಷದೊಳಗಿನ ಎಲ್ಲರಿಗೂ ಅಲ್ಬೆಂಡಾಜೋಲ್ ಮಾತ್ರೆ ಸೇವನೆ ಮಾಡಿಸಲಾಗುವುದು.  ಈ ಮಾತ್ರೆಯು ಅತ್ಯಂತ ಸುರಕ್ಷಿತವಾಗಿದ್ದು, ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು.  ಮಾತ್ರೆಯನ್ನು ಜಿಲ್ಲೆಯ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳು, ಅಂಗನವಾಡಿಗಳು, ಹಾಸ್ಟೆಲ್‍ಗಳಲ್ಲಿನ 01 ರಿಂದ 19 ವರ್ಷದೊಳಗಿನ ಮಕ್ಕಳಿಗೆ ಆಯಾ ಶಾಲೆ, ಕಾಲೇಜಿನಲ್ಲಿಯೇ ಮಾತ್ರೆ ಸೇವನೆ ಮಾಡಿಸಬೇಕು.  ಯಾವುದೇ ಕಾರಣಕ್ಕೂ ಮಾತ್ರೆಯನ್ನು ಮಕ್ಕಳಿಗೆ ಮನೆಗೆ ಒಯ್ಯಲು ಅವಕಾಶ ಕೊಡಬಾರದು.  ಈ ಹಿಂದೆ ಸರ್ಕಾರಿ ಶಾಲೆಯ ಮಕ್ಕಳಿಗೆ ಮಾತ್ರ ಮಾತ್ರೆ ವಿತರಣೆ ಮಾಡಲಾಗುತ್ತಿತ್ತು.  ಈ ಬಾರಿ ಸರ್ಕಾರಿ ಮತ್ತು ಖಾಸಗಿ ಶಾಲೆ ಕಾಲೇಜುಗಳ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ.  ಶಾಲೆಗಳಲ್ಲಿ ಶಿಕ್ಷಕರು ಜಂತುಹುಳುಗಳ ಸಮಸ್ಯೆ ಹಾಗೂ ಇದಕ್ಕೆ ಕಾರಣ ಹಾಗೂ ಮಾತ್ರೆ ಸೇವೆನೆಯಿಂದ ಆಗುವ ಅನುಕೂಲದ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕು.  ಕಾರ್ಯಕ್ರಮ ಯಶಸ್ವಿಗೊಳಿಸಲು ಸರ್ಕಾರಿ ಮತ್ತು ಖಾಸಗಿ ಶಾಲಾ ಕಾಲೇಜುಗಳಿಗೆ ಅಗತ್ಯ ಸೂಚನೆ ನೀಡಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದರು.
     ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ. ಅಲಕಾನಂದ ಮಳಗಿ ಅವರು, ಬಯಲು ಮಲವಿಸರ್ಜನೆ, ಕೈ ತೊಳೆಯದೆ ಆಹಾರ ಸೇವನೆ, ತರಕಾರಿಗಳನ್ನು ಸರಿಯಾಗಿ ತೊಳೆಯದೆ ಹಸಿಯಾಗಿ ತಿನ್ನುವುದು, ಅನೈರ್ಮಲ್ಯ ಸ್ಥಳದಲ್ಲಿ ಬರಿಗಾಲಲ್ಲಿ ಓಡಾಡುವುದರಿಂದ ಜಂತುಹುಳುವಿನ ಸಮಸ್ಯೆ ಕಾಡಲಿದೆ.  ಜಂತುಹುಳುವಿನಿಂದ ಮಕ್ಕಳಲ್ಲಿ ರಕ್ತಹೀನತೆ, ಕಲಿಕಾ ಸಾಮಥ್ರ್ಯ ಕುಂಠಿತ, ಅಪೌಷ್ಠಿಕತೆ, ಚಟುವಟಿಕೆ ಇಲ್ಲದಿರುವುದು ಮುಂತಾದ ತೊಂದರೆ ಕಂಡುಬರುತ್ತದೆ.  ಜಂತುಹುಳು ಸಮಸ್ಯೆ ನಿವಾರಣೆಗೆ ಜಿಲ್ಲೆಯಲ್ಲಿ ಫೆ. 12 ರಂದು ಮಕ್ಕಳಿಗೆ ಅಲ್ಬೆಂಡಾಜೋಲ್ ಮಾತ್ರೆ ಸೇವನೆ ಮಾಡಿಸಲಾಗುವುದು.  ಜಿಲ್ಲೆಯಲ್ಲಿ 1850 ಅಂಗನವಾಡಿಗಳ 139636 ಮಕ್ಕಳು, 1552 ಶಾಲೆಗಳ 221069 ಮಕ್ಕಳು ಹಾಗೂ 82 ಕಾಲೇಜುಗಳ 12000 ಮಕ್ಕಳು ಸೇರಿದಂತೆ ಒಟ್ಟು 372705 ಮಕ್ಕಳಿಗೆ ಅಂದು ಅಲ್ಬೆಂಡಾಜೋಲ್ ಮಾತ್ರೆ ಸೇವನೆ ಮಾಡಿಸಲಾಗುವುದು.  ಮಾತ್ರೆಯನ್ನು ಮಕ್ಕಳು ಹಲ್ಲಿನಿಂದ ಕಡಿದು, ಪುಡಿ ಮಾಡಿ ಸೇವಿಸುವಂತೆ ತಿಳಿಸಬೇಕು.  ಮಾತ್ರೆಯು ಅತ್ಯಂತ ಸುರಕ್ಷಿತವಾಗಿದ್ದು, ವದಂತಿಗಳಿಗೆ ಯಾರೂ ಕಿವಿಗೊಡಬಾರದು ಎಂದರು.
     ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ದಾನರೆಡ್ಡಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಆರೋಗ್ಯ ಇಲಾಖೆ ಯೋಜನೆ ಅನುಷ್ಠಾನಾಧಿಕಾರಿಗಳು, ನಾಲ್ಕು ತಾಲೂಕುಗಳ ವೈದ್ಯಾಧಿಕಾರಿಗಳು, ರೋಟರಿ, ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ಮತದಾರರಲ್ಲಿ ಅರಿವು : ಜ. 27 ರಂದು ಕೊಪ್ಪಳದಲ್ಲಿ ಬೃಹತ್ ಜಾಗೃತಿ ಕಾರ್ಯಕ್ರಮ


ಕೊಪ್ಪಳ ಜ. 25 (ಕರ್ನಾಟಕ ವಾರ್ತೆ): ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಜನರಲ್ಲಿ ಜಾಗೃತಿ ಮೂಡಿಸಲು ಕೊಪ್ಪಳದ ಗವಿಮಠ ಆವರಣದಲ್ಲಿ ಸುಮಾರು 5000 ವಿದ್ಯಾರ್ಥಿಗಳಿಂದ ಭಾರತದ ನಕ್ಷೆ ಹಾಗೂ ಕರ್ನಾಟಕದ ನಕ್ಷೆಯಲ್ಲಿ ಬೃಹತ್ ಮಾನವ ಸರಪಳಿ ನಿರ್ಮಿಸುವ ಮೂಲಕ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದ್ದಾರೆ.
        ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಜ. 27 ರಂದು ಬೆಳಿಗ್ಗೆ 8-30 ಗಂಟೆಗೆ ಕೊಪ್ಪಳದ ಗವಿಸಿದ್ದೇಶ್ವ ಮಠದ ಮೈದಾನದಲ್ಲಿ 18 ವರ್ಷ ಮೇಲ್ಪಟ್ಟ ಸುಮಾರು 5000 ಕ್ಕೂ ಹೆಚ್ಚು ಜಿಲ್ಲೆಯ ಎಲ್ಲ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳನ್ನು ಸೇರಿಸಿ, ಭಾರತ ನಕ್ಷೆಯಲ್ಲಿ ನಿಂತು ಪ್ರಜಾಪ್ರಭುತ್ವದಲ್ಲಿ ಮತದಾನದ ಮಹತ್ವ ಸಾರುವ ಪ್ರತಿಜ್ಞಾ ವಿಧಿ ಬೋಧನೆ ಕಾರ್ಯಕ್ರಮ ಆಯೋಜಿಸಲಾಗುವುದು. ಎಲ್ಲ ಮತದಾರರು, ನಾಗರಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ ಅವರು ಕೋರಿದ್ದಾರೆ.

ಜ. 26 ರಂದು ಕುಕನೂರ ನೂತನ ತಾಲೂಕ ಉದ್ಘಾಟನಾ ಸಮಾರಂಭ


ಕೊಪ್ಪಳ ಜ. 25 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಕುಕನೂರ ನೂತನ ತಾಲೂಕ ಉದ್ಘಾಟನಾ ಸಮಾರಂಭ ಜ. 26 ರಂದು ಸಾಯಂಕಾಲ 5 ಗಂಟೆಗೆ ಕುಕನೂರಿನ ಪ್ರವಾಸಿಮಂದಿರ ಎದುರಗಡೆಯ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದೆ. 
    ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯಡ್ಡಿ ಅವರು ಕಾರ್ಯಕ್ರಮದ ಉದ್ಘಾಟನೆ ನೆರೆವೇರಿಸುವರು.  ಕುಕನೂರ ಪಟ್ಟಣ ಪಂಚಾಯತ ಅಧ್ಯಕ್ಷೆ ಶಾಂತಲಾ ರಾಮಣ್ಣ ಚಲವಾದಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸುವರು.  ಗೌರವಾನ್ವಿತ ಅತಿಥಿಗಳಾಗಿ ಜಿಲ್ಲಾ ಪಂಚಾಯತ ಅಧ್ಯಕ್ಷ ರಾಜಶೇಖರ ಹಿಟ್ನಾಳ, ಸಂಸದ ಕರಡಿ ಸಂಗಣ್ಣ, ಶಾಸಕರುಗಳಾದ ಕೆ. ರಾಘವೇಂದ್ರ ಹಿಟ್ನಾಳ್, ಶಿವರಾಜ ಎಸ್ ತಂಗಡಗಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್, ವಿಧಾನಪರಿಷತ್ ಸದಸ್ಯರುಗಳಾದ ಬಸವರಾಜ ಪಾಟೀಲ್ ಇಟಗಿ, ಅಮರನಾಥ ಪಾಟೀಲ್, ಶರಣಪ್ಪ ಮಟ್ಟೂರ, ಜಿ.ಪಂ. ಉಪಾಧ್ಯಕ್ಷೆ ಲಕ್ಷ್ಮಮ್ಮ ಸಿದ್ದಪ್ಪ ನೀರಲೂಟಿ, ಯಲಬುರ್ಗಾ ತಾ.ಪಂ ಅಧ್ಯಕ್ಷೆ ಲಕ್ಷ್ಮೀ ದ್ಯಾಮಪ್ಪ ಗೌಡ್ರ, ಉಪಾಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ, ಕುಕನೂರ ಪ.ಪಂ ಉಪಾಧ್ಯಕ್ಷ ರಹೆಮಾನಸಾಬ ಮಕ್ಕಪ್ಪನವರ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸರ್ಕಾರದ ಕಾರ್ಯದರ್ಶಿ ಉಮಾ ಮಹದೇವನ್, ಜಿ.ಪಂ., ಯಲಬುರ್ಗಾ ತಾ.ಪಂ. ಹಾಗೂ ಕುಕನೂರ ಪ.ಪಂ ಸರ್ವ ಸದಸ್ಯರು ಪಾಲ್ಗೊಳ್ಳುವರು.
      ಎಲ್ಲಾ ಸಮಾಜದ ಸಮಸ್ತ ಬಾಂಧವರು, ಜನಪ್ರತಿನಿಧಿಗಳು, ಜಿಲ್ಲಾ/ತಾಲೂಕ ಮಟ್ಟದ ವಿವಿಧ ಇಲಾಖೆಗಳ ಮುಖ್ಯಸ್ಥರು, ನೌಕರ ವರ್ಗದವರು, ನಗರದ ಗಣ್ಯ ವ್ಯಕ್ತಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಪ್ರಕಟಣೆಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ.

ಫೆ. 11 ರಂದು ಕೊಟ್ಟೂರು ಗುರುಬಸವೇಶ್ವರ ಸ್ವಾಮಿ ರಥೋತ್ಸವ


ಕೊಪ್ಪಳ ಜ. 25 (ಕರ್ನಾಟಕ ವಾರ್ತೆ): ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆ ವತಿಯಿಂದ ಬಳ್ಳಾರಿ ಜಿಲ್ಲೆಯ ಕೊಟ್ಟೂರು ಪಟ್ಟಣದ ಗುರುಬಸವೇಶ್ವರ ಸ್ವಾಮಿಯ ರಥೋತ್ಸವ ಫೆಬ್ರವರಿ. 11 ರಂದು ಸಾಯಂಕಾಲ ವಿಜೃಂಭಣೆಯಿಂದ ಜರುಗಲಿದೆ. 
    ಗುರುಬಸವೇಶ್ವರ ಸ್ವಾಮಿಯ ರಥೋತ್ಸವದ ಅಂಗವಾಗಿ ನಡೆಯುವ ಕಾರ್ಯಕ್ರಮಗಳ ವಿವರ ಇಂತಿದೆ.  ಫೆ. 07 ರಂದು ರಾತ್ರಿ ಬೆಳ್ಳಿಯ ರಥದಲ್ಲಿ ನಾಗರೋತ್ಸವ, 08 ರಂದು ನವಿಲು ವಾಹನೋತ್ಸವ, 09 ರಂದು ಗಜವಾಹನೋತ್ಸವ, 10 ರಂದು ಬೆಳ್ಳಿಯ ರಥದಲ್ಲಿ ವೃಷಭ ವಾಹನೋತ್ಸವ ಹಾಗೂ ಫೆ. 11 ರಂದು ಸಾಯಂಕಾಲ ನೂತನವಾಗಿ ನಿರ್ಮಾಣಗೊಂಡಿರುವ ರಥದಲ್ಲಿ ಕೊಟ್ಟೂರು ಗುರುಬಸವೇಶ್ವರ ಸ್ವಾಮಿಯ ಮಹಾ ರಥೋತ್ಸವ ಜರುಗಲಿದ್ದು, ಫೆ. 12 ರಂದು ಮದಾಲ್ಸಿ, 13 ರಂದು ಮಹಾಶಿವರಾತ್ರಿ ಪೂಜೆ (ಜಾಗರಣೆ), ಹಾಗೂ ಫೆ. 15 ರಂದು ಅಮವಾಸ್ಯೆ ಪೂಜಾ ಸಮಾರಂಭ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಮಡಿವಾಳ ಮಾಚಿದೇವರ ಜಯಂತಿ : ಫೆ. 01 ರಂದು ಸರ್ಕಾರಿ ಕಾರ್ಯಕ್ರಮವಾಗಿ ಆಚರಣೆ- ಡಾ. ರುದ್ರೇಶ್ ಘಾಳಿ


ಕೊಪ್ಪಳ ಜ. 25 (ಕರ್ನಾಟಕ ವಾರ್ತೆ) : ಮಡಿವಾಳ ಮಾಚಿದೇವರ ಜಯಂತಿ ಆಚರಣೆಯನ್ನು ಫೆ. 01 ರಂದು  ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಇದೇ ಮೊದಲ ಬಾರಿಗೆ ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ಹೇಳಿದರು.  

      ಮಡಿವಾಳ ಮಾಚಿದೇವರ ಜಯಂತಿ ಆಚರಣೆಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸುವ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರದಂದು ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
     ಮಡಿವಾಳ ಮಾಚಿದೇವರ ಜಯಂತಿಯನ್ನು ಫೆ. 01 ರಂದು ಸರ್ಕಾರಿ ಕಾರ್ಯಕ್ರಮವನ್ನಾಗಿ ಕೊಪ್ಪಳದಲ್ಲಿ ಭಕ್ತಿಭಾವದಿಂದ ಆಚರಿಸಲಾಗುವುದು.  ಅಂದು ಬೆಳಿಗ್ಗೆ 9 ಗಂಟೆಗೆ ಮಡಿವಾಳ ಮಾಚಿದೇವರ ಭಾವಚಿತ್ರದೊಂದಿಗೆ ಮೆರವಣಿಗೆಯು ನಗರದ ಗಡಿಯಾರ ಕಂಬ ಬಳಿಯ ಅಕ್ಕಮಹಾದೇವಿ ದೇವಸ್ಥಾನದ ಬಳಿಯಿಂದ ಹೊರಟು, ಗಡಿಯಾರ ಕಂಭ, ಜವಾಹರ ರಸ್ತೆ, ಅಶೋಕ ಸರ್ಕಲ್ ಮೂಲಕ ಸಾಹಿತ್ಯ ಭವನದವರೆಗೆ ಸಾಗಿ ಬರಲಿದೆ.  ಅಂದು ಬೆಳಿಗ್ಗೆ 11-30 ಗಂಟೆಗೆ ಸಾಹಿತ್ಯ ಭವನದಲ್ಲಿ ವೇದಿಕೆ ಸಮಾರಂಭ ಜರುಗಲಿದೆ. 
     ಜಯಂತಿ ಆಚರಣೆ ಅಂಗವಾಗಿ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಲು ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರ ಅವರನ್ನು ಆಹ್ವಾನಿಸಲಾಗುವುದು. ಜಯಂತಿ ಆಚರಣೆಯಲ್ಲಿ ಎಲ್ಲ ಸಾರ್ವಜನಿಕರು, ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳು, ಎಲ್ಲ ಸಮಾಜದ ಮುಖಂಡರು ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು.  ಮೆರವಣಿಗೆ ಹಾಗೂ ಸಮಾರಂಭದಲ್ಲಿ ಎಲ್ಲ ಅಧಿಕಾರಿ, ಸಿಬ್ಬಂದಿಗಳು ಪಾಲ್ಗೊಳ್ಳಬೇಕು.   ಮೆರವಣಿಗೆ ಸಂದರ್ಭದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್, ಅಗತ್ಯ ಕುಡಿಯುವ ನೀರಿನ ವ್ಯವಸ್ಥೆ, ಮೆರವಣಿಗೆ ಸಾಗಿ ಬರುವ ರಸ್ತೆಯನ್ನು ಸ್ವಚ್ಛಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ಹೇಳಿದರು.
    ಸಭೆಯಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ, ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ. ವೇಣುಗೋಪಾಲ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸುದರ್ಶನರಾವ್ ಸೇರಿದಂತೆ  ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು,  ಗಣ್ಯರಾದ ಬಸವರಾಜ ಮಡಿವಾಳರ, ಶಂಕ್ರಪ್ಪ ಮಡಿವಾಳರ, ಗವಿಸಿದ್ದಪ್ಪ ಮಡಿವಾಳರ, ಸಿ.ಎಸ್. ಮಡಿವಾಳರ, ಆರ್.ಯು. ಮಡಿವಾಳರ ಸೇರಿದಂತೆ ವಿವಿಧ ಸಮಾಜದ ಮುಖಂಡರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿ ಉಪಯುಕ್ತ ಸಲಹೆ ಸೂಚನೆ ನೀಡಿದರು.

ದೇಶ ನಿರ್ಮಾಣದಲ್ಲಿ ಯುವಕರ ಸಕ್ರಿಯ ಪಾಲ್ಗೊಳ್ಳುವಿಕೆ ಮಹತ್ವದ್ದು- ವೆಂಕಟ್ ರಾಜಾ




ಕೊಪ್ಪಳ ಜ. 25 (ಕರ್ನಾಟಕ ವಾರ್ತೆ): ಸದೃಢ ಭಾರತ ದೇಶ ನಿರ್ಮಾಣದಲ್ಲಿ ಯುವಕರು ಸಕ್ರಿಯರಾಗಿ ಪಾಲ್ಗೊಳ್ಳುವುದು ಅತ್ಯಂತ ಮಹತ್ವದ್ದಾಗಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್‍ರಾಜಾ ಅವರು ಹೇಳಿದರು. 

     ಚುನಾವಣಾ ಆಯೋಗ ಹಾಗೂ ಜಿಲ್ಲಾಡಳಿತದ ವತಿಯಿಂದ ನಗರದ ಸಾಹಿತ್ಯ ಭವನದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

     ಭಾರತ ದೇಶ ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದ್ದು, ಪ್ರಜಾಪ್ರಭುತ್ವವನ್ನು ಬಲಪಡಿಸಲು ಮತದಾರರ ಸಕ್ರಿಯ ಪಾಲ್ಗೊಳ್ಳುವಿಕೆ ಅಗತ್ಯವಾಗಿದೆ.  ದೇಶದ ಭವಿಷ್ಯ ರೂಪುಗೊಳ್ಳುವುದು ಚುನಾವಣೆಯಲ್ಲಿಯೇ ಆಗಿದೆ. ಜ. 01 ಕ್ಕೆ 18 ವರ್ಷ ವಯಸ್ಸು ಪೂರ್ಣಗೊಂಡವರು ತಪ್ಪದೆ ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರ್ಪಡೆಗೊಳಿಸುವುದು ಅಗತ್ಯವಾಗಿದೆ. ಸರ್ಕಾರದ ಕೆಲಸ ದೇವರ ಕೆಲಸವಾದರೆ, ಮತದಾನದ ಕೆಲಸ ಅದಕ್ಕೂ ಮಿಗಿಲಾದುದಾಗಿದೆ.  ಯುವ ಪೀಳಿಗೆ ಶಿಕ್ಷಣ ಹಾಗೂ ಉದ್ಯೋಗಕ್ಕೆ ಮಹತ್ವ ಕೊಟ್ಟ ರೀತಿಯಲ್ಲಿಯೇ ಮತದಾನ ಪ್ರಕ್ರಿಯೆಗೂ ಮಹತ್ವ ನೀಡಬೇಕು.  ಮತದಾರರ ಜಾಗೃತಿಗಾಗಿ ಜ. 27 ರಂದು ಕೊಪ್ಪಳದ ಗವಿಸಿದ್ದೇಶ್ವರ ಮಠದ ಮೈದಾನದಲ್ಲಿ ಬೃಹತ್ ರ್ಯಾಲಿ ಏರ್ಪಡಿಸಲಾಗಿದ್ದು, ಅಂದು ಸುಮಾರು 5 ಸಾವಿರ ವಿದ್ಯಾರ್ಥಿಗಳಿಂದ 300 * 200 ಅಡಿ ಉದ್ದಗಲದಲ್ಲಿ ಭಾರತದ ನಕ್ಷೆ ಹಾಗೂ ಕರ್ನಾಟಕದ ನಕ್ಷೆಯನ್ನು ಮಾನವ ಸರಪಳಿಯ ಮೂಲಕ ನಿರ್ಮಿಸಿ, ಮತದಾರರ ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮ ಆಯೋಜಿಸಲಾಗಿದೆ.  ಎಲ್ಲ ವಿದ್ಯಾರ್ಥಿಗಳು, ಸಾರ್ವಜನಿಕರು, ನಾಗರಿಕರು ತಪ್ಪದೆ ಈ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್‍ರಾಜಾ ಮನವಿ ಮಾಡಿದರು.

     ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಸಮಾರಂಭದ ಉದ್ಘಾಟನೆ ನೆರವೇರಿಸಿ, ಪ್ರಜಾಪ್ರಭುತ್ವದಲ್ಲಿ ದೃಢ ವಿಶ್ವಾಸವುಳ್ಳ ನಾವು, ದೇಶದಲ್ಲಿ ಮುಕ್ತ, ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿ ಹಿಡಿಯುವ, ಚುನಾವಣೆಗಳಲ್ಲಿ ನಿರ್ಭೀತರಾಗಿ ಧರ್ಮ, ಜನಾಂಗ, ಜಾತಿ, ಮತ, ಭಾಷೆ ಅಥವಾ ಯಾವುದೇ ಪ್ರೇರೇಪಣೆಗಳ ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೆ, ಮತ ಚಲಾಯಿಸುತ್ತೇವೆ ಎನ್ನುವ ಮತದಾರರ ಪ್ರತಿಜ್ಞಾ ವಿಧಿ ಭೋದಿಸಿದರು.
     ಕಾರ್ಯಕ್ರಮ ಕುರಿತು ಮಾತನಾಡಿದ ಉಪವಿಭಾಗಾಧಿಕಾರಿ ರವಿ ತಿರ್ಲಾಪುರ ಅವರು, ಜ. 25 ರಂದು ರಾಷ್ಟ್ರೀಯ ಮತದಾರರ ದಿನಾಚರಣೆಯ ಜೊತೆಗೆ ಚುನಾವಣಾ ಆಯೋಗದ ಸಂಸ್ಥಾಪನಾ ದಿನವೂ ಆಗಿದೆ.  ದೇಶ ಪ್ರಗತಿಯ ಹಾದಿಯಲ್ಲಿ ಬರಲು ಪ್ರಜಾಪ್ರಭುತ್ವದ ಬುನಾದಿ ಗಟ್ಟಿಯಾಗಿರಬೇಕು. ಮತದಾನ ಎಂಬುದು ಶ್ರೇಷ್ಠ ಕರ್ತವ್ಯವಾಗಿದೆ.  ಮುಕ್ತ, ನ್ಯಾಯ ಸಮ್ಮತ ಚುನಾವಣೆಗೆ ಮತದಾರರು ಜಾಗೃತಿ ಹೊಂದಲೇಬೇಕು.  ಚುನಾವಣೆ ಪದ್ಧತಿ ಇನ್ನಷ್ಟು ಬಲಗೊಳ್ಳಬೇಕು.  ಪ್ರತಿ ವರ್ಷ ಜ. 01 ಕ್ಕೆ 18 ವರ್ಷ ವಯಸ್ಸು ಪೂರ್ಣಗೊಳ್ಳುವವರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಸಬೇಕು, ಆದರೆ ಈ ಕಾರ್ಯ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ.  ನಗರ ಮತ್ತು ಗ್ರಾಮೀಣ ಪ್ರದೇಶದ ಮತದಾನ ಪ್ರಮಾಣ ಹೋಲಿಸಿದಾಗ, ನಗರವಾಸಿಗಳೂ ಮತದಾನ ಪ್ರಕ್ರಿಯೆಯಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳದಿರುವುದು ಕಂಡುಬಂದಿದೆ.  ಇದು ಸಮಂಜಸವಲ್ಲ.  ಎಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಾಗ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳ್ಳಲು ಸಾಧ್ಯ ಎಂದರು.
     ವಿಶೇಷ ಉಪನ್ಯಾಸ ನೀಡಿದ ಸರ್ಕಾರಿ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಪ್ರಭುರಾಜ ನಾಯಕ್ ಅವರು, ಭಾರತ ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದ್ದರೂ, ಚುನಾವಣೆ ಸಂದರ್ಭದಲ್ಲಿ ಕಡಿಮೆ ಪ್ರಮಾಣದ ಮತದಾನ ದಾಖಲಾಗುತ್ತಿರುವುದು ಕಳವಳಕಾರಿಯಾಗಿದೆ.  ಇಟಲಿ ದೇಶದಲ್ಲಿ ಶೇ. 90, ಜರ್ಮನಿ- 86, ಆಸ್ಟ್ರಿಯಾ- 81, ಜಪಾನ್-71 ರಷ್ಟು ಮತದಾನವಾದರೆ, ಭಾರತದಲ್ಲಿನ ಮತದಾನ ಪ್ರಮಾಣ ಸರಾಸರಿ ಶೇ. 55 ರಷ್ಟಿದೆ.   ಭಾರತ ಕೇವಲ ಅಂಕಿ-ಸಂಖ್ಯೆಯ ಪ್ರಜಾಪ್ರಭುತ್ವವಾಗಬಾರದು.  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಸಮಾನವಾದ ಹಕ್ಕಿದೆ. ಆದರೆ ದೇಶದಲ್ಲಿ ಹಣ ಬಲ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಿಯಂತ್ರಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಜಗತ್ತು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಬಹಳಷ್ಟು ನಿರೀಕ್ಷೆ ಮಾಡುತ್ತಿದೆ.  ಅನೇಕ ದೇಶಗಳು ಇಲ್ಲಿನ ಪ್ರಜಾಪ್ರಭುತ್ವ ಹಾಗೂ ಚುನಾವಣೆ ವ್ಯವಸ್ಥೆ ಅರಿಯಲು ಇಲ್ಲಿಗೆ ಬಂದು ಹೋಗುತ್ತಾರೆ.  ಹೀಗಿರುವಾಗ ನಾವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಇನ್ನಷ್ಟು ಬಲಗೊಳಿಸುವ ಅಗತ್ಯವಿದೆ.  ಮತದಾನ ಮಾಡದಿರುವವರು ಜವಾಬ್ದಾರಿಯುತ ನಾಗರಿಕರಾಗಲು ಸಾಧ್ಯವಿಲ್ಲ ಎಂದರು.
     ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ ಹಾಗೂ ಪೋಸ್ಟರ್ ತಯಾರಿಕೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಮಾಣ ಪತ್ರ ಹಾಗೂ ಬಹುಮಾನ ವಿತರಿಸಲಾಯಿತು. 
     ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್‍ಶೆಟ್ಟಿ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಡಿಡಿಪಿಐ ಹನುಮಂತಪ್ಪ ಸೇರಿದಂತೆ ಹಲವು ಅಧಿಕಾರಿಗಳು   ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.  ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ನಿರೂಪಿಸಿ ವಂದಿಸಿದರು.

69ನೇ ಗಣರಾಜ್ಯೋತ್ಸವ : ಜ. 26 ರಂದು ಕೊಪ್ಪಳದಲ್ಲಿ ಧ್ವಜಾರೋಹಣ


ಕೊಪ್ಪಳ ಜ. 25 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾಡಳಿತದ ವತಿಯಿಂದ 69ನೇ ಗಣರಾಜ್ಯೋತ್ಸವ ನಿಮಿತ್ಯ ರಾಷ್ಟ್ರ ಧ್ವಜಾರೋಹಣ ಕಾರ್ಯಕ್ರಮ ಜ. 26 ರಂದು ಬೆಳಿಗ್ಗೆ 09-00 ಗಂಟೆಗೆ ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ.
    ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಧ್ವಜಾರೋಹಣ ನೆರೆವೇರಿಸುವರು.  ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಸಮಾರಂಭದ ಅಧ್ಯಕ್ಷತೆ ವಹಿಸುವರು.  ಜಿಲ್ಲಾ ಪಂಚಾಯತ ಅಧ್ಯಕ್ಷ ಕೆ. ರಾಜಶೇಖರ ಹಿಟ್ನಾಳ್, ಸಂಸದ ಕರಡಿ ಸಂಗಣ್ಣ, ಶಾಸಕರುಗಳಾದ ಶಿವರಾಜ್ ಎಸ್. ತಂಗಡಗಿ, ಇಕ್ಬಾಲ್ ಅನ್ಸಾರಿ ಹಾಗೂ ದೊಡ್ಡನಗೌಡ ಪಾಟೀಲ್, ವಿಧಾನ ಪರಿಷತ್ ಸದಸ್ಯರುಗಳಾದ ಬಸವರಾಜ ಪಾಟೀಲ ಇಟಗಿ, ಅಮರನಾಥ ಪಾಟೀಲ ಹಾಗೂ ಶರಣಪ್ಪ ಮಟ್ಟೂರ, ಜಿ.ಪಂ ಉಪಾಧ್ಯಕ್ಷೆ ಲಕ್ಷಮ್ಮ ಸಿದ್ದಪ್ಪ ನೀರಲೂಟಿ, ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ, ತಾ.ಪಂ ಅಧ್ಯಕ್ಷ ಬಾಲಚಂದ್ರನ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಯ್ಯದ್ ಜುಲ್ಲು ಖಾದರ ಖಾದ್ರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸರ್ಕಾರದ ಕಾರ್ಯದರ್ಶಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಮಾ ಮಹಾದೇವನ್ ಪಾಲ್ಗೊಳ್ಳುವರು.
      ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಧ್ವಜಾರೋಹಣದ ನಂತರ ವಿವಿಧ ಶಾಲಾ ಮಕ್ಕಳು, ಪೊಲೀಸ್, ಎನ್.ಸಿ.ಸಿ. ಸೇವಾದಳ, ಭಾರತ್ ಸ್ಕೌಟ್ಸ್ ಮತ್ತು ಗೈಟ್ಸ್ ಹಾಗೂ ಗೃಹ ರಕ್ಷಕ ದಳದಿಂದ ಪಥಸಂಚಲನ, ಗೌರವ ರಕ್ಷೆ ಸ್ವೀಕಾರ ಕಾರ್ಯಕ್ರಮ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಹಾಗೂ ಸ್ವಾತಂತ್ರ್ಯ ಯೋಧರಿಗೆ ಸನ್ಮಾನ ನಡೆಯಲಿದೆ.  ಅಂದು ಸಂಜೆ 06-00 ಗಂಟೆಯಿಂದ ನಗರದ ಸಾಹಿತ್ಯ ಭವನದಲ್ಲಿ ದೇಶ ಭಕ್ತಿ ಗೀತೆ, ದೇಶ ಭಕ್ತಿ ನೃತ್ಯಗಳು, ಭರತನಾಟ್ಯ, ಜನಪದ ನೃತ್ಯ ಹಾಗೂ ಸಮೂಹ ಇತ್ಯಾದಿ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಪ್ರಕಟಣೆ ತಿಳಿಸಿದೆ. 

ಮತದಾರರಲ್ಲಿ ಅರಿವು : ಜ. 27 ರಂದು ಕೊಪ್ಪಳದಲ್ಲಿ ಬೃಹತ್ ಜಾಗೃತಿ ಕಾರ್ಯಕ್ರಮ


ಕೊಪ್ಪಳ ಜ. 25 (ಕರ್ನಾಟಕ ವಾರ್ತೆ): ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಜನರಲ್ಲಿ ಜಾಗೃತಿ ಮೂಡಿಸಲು ಕೊಪ್ಪಳದ ಗವಿಮಠ ಆವರಣದಲ್ಲಿ ಸುಮಾರು 5000 ವಿದ್ಯಾರ್ಥಿಗಳಿಂದ ಭಾರತದ ನಕ್ಷೆ ಹಾಗೂ ಕರ್ನಾಟಕದ ನಕ್ಷೆಯಲ್ಲಿ ಬೃಹತ್ ಮಾನವ ಸರಪಳಿ ನಿರ್ಮಿಸುವ ಮೂಲಕ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದ್ದಾರೆ.
     ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ.  ಜ. 27 ರಂದು ಬೆಳಿಗ್ಗೆ 8-30 ಗಂಟೆಗೆ  ಕೊಪ್ಪಳದ ಗವಿಸಿದ್ದೇಶ್ವ ಮಠದ ಮೈದಾನದಲ್ಲಿ 18 ವರ್ಷ ಮೇಲ್ಪಟ್ಟ ಸುಮಾರು 5000 ಕ್ಕೂ ಹೆಚ್ಚು ಜಿಲ್ಲೆಯ ಎಲ್ಲ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳನ್ನು ಸೇರಿಸಿ, ಭಾರತ ನಕ್ಷೆಯಲ್ಲಿ ನಿಂತು ಪ್ರಜಾಪ್ರಭುತ್ವದಲ್ಲಿ ಮತದಾನದ ಮಹತ್ವ ಸಾರುವ ಪ್ರತಿಜ್ಞಾ ವಿಧೊ ಬೋಧನೆ ಕಾರ್ಯಕ್ರಮ ಆಯೋಜಿಸಲಾಗುವುದು.  ಎಲ್ಲ ಮತದಾರರು, ನಾಗರಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ ಅವರು ಕೋರಿದ್ದಾರೆ.

Wednesday, 24 January 2018

ಖಾಸಗಿ ಶಾಲಾ ಕಾಲೇಜುಗಳಲ್ಲೂ ಪರಿಶಿಷ್ಠ ವಿದ್ಯಾರ್ಥಿಗಳಿಗೆ ಮೀಸಲಾತಿ- ಎಲ್. ಮುರುಗನ್



ಕೊಪ್ಪಳ ಜ. 24 (ಕರ್ನಾಟಕ ವಾರ್ತೆ): ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಇರುವಂತೆಯೇ ಖಾಸಗಿ ಶಾಲಾ ಕಾಲೇಜುಗಳಲ್ಲಿಯೂ ಪರಿಶಿಷ್ಟ ಜಾತಿ, ಪ.ಪಂಗಡದ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲು ಮೀಸಲಾತಿ ನೀಡಬೇಕು ಎಂದು ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದ ಉಪಾಧ್ಯಕ್ಷ ಎಲ್. ಮುರುಗನ್ ಅವರು ಹೇಳಿದರು.

     ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ವಿವಿಧ ಯೋಜನೆಗಳಡಿ ನೀಡಲಾಗುತ್ತಿರುವ ಸೌಲಭ್ಯಗಳ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರದಂದು ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

     ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡುವ ರೀತಿಯಲ್ಲಿಯೇ ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆ ಕಾಲೇಜುಗಳಲ್ಲಿಯೂ ಪರಿಶಿಷ್ಟ ವಿದ್ಯಾರ್ಥಿಗಳಿಗೆ ವ್ಯಾಸಂಗಕ್ಕಾಗಿ ಮೀಸಲಾತಿ ನೀಡಬೇಕು.  ಮೀಸಲಾತಿ ನಿಯಮಗಳನ್ನು ಪಾಲಿಸಲಾಗಿರುವ ಕುರಿತು ಶಿಕ್ಷಣ ಇಲಾಖೆ ಅಧಿಕಾರಿಗಳು ಪರಿಶೀಲಿಸಿ, ವರದಿ ಸಲ್ಲಿಸಬೇಕು.  ಐಎಎಸ್, ಐಪಿಎಸ್, ನೀಟ್, ಸಿಇಟಿ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪರಿಶಿಷ್ಟ ವಿದ್ಯಾರ್ಥಿಗಳನ್ನು ಸಿದ್ಧಪಡಿಸಲು ಅಗತ್ಯ ತರಬೇತಿ ನೀಡುವ ವ್ಯವಸ್ಥೆಯನ್ನು ಒದಗಿಸಬೇಕು.  ಕೃಷಿ, ತೋಟಗಾರಿಕೆ ಸೇರಿದಂತೆ ಹಲವು ಇಲಾಖೆಗಳಲ್ಲಿ ಪರಿಶಿಷ್ಠರಿಗೆ ನಿಯಮಾನುಸಾರ ಸೌಲಭ್ಯ ನೀಡಲಾಗುತ್ತಿದೆ.  ಅನುದಾನವನ್ನೂ ಕೂಡ ಒದಗಿಸಲಾಗುತ್ತಿದೆ.  ಆದರೆ ಈಗಾಗಲೆ ಆರ್ಥಿಕ ವರ್ಷ ಪೂರ್ಣಗೊಳ್ಳುವ ಹಂತದಲ್ಲಿದ್ದು, ಇದುವರೆಗೂ ಖರ್ಚಾಗದೆ ಉಳಿದಿರುವ ಅನುದಾನವನ್ನು ವ್ಯರ್ಥಗೊಳಿಸದೆ, ಕೂಡಲೆ ಸಂಬಂಧಪಟ್ಟ ಯೋಜನೆಗಳಡಿ ಪರಿಶಿಷ್ಟರಿಗೆ ಸೌಲಭ್ಯ ಒದಗಿಸಲು ವಿನಿಯೋಗಿಸಿ, ನಿಗದಿತ ಗುರಿ ಸಾಧಿಸಬೇಕು.  ಜಿಲ್ಲೆಯಲ್ಲಿರುವ ಕೈಗಾರಿಕೆಗಳಲ್ಲಿ ಎಷ್ಟು ಜನ ಪರಿಶಿಷ್ಠ ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ ಹಾಗೂ ಎಷ್ಟು ಜನ ಕೈಗಾರಿಕೋದ್ಯಮಿಗಳು ಇದ್ದಾರೆ ಎಂಬುದರ ವಿವರಣೆ ಕೇಳಿದರು. ಜಿಲ್ಲೆಯಲ್ಲಿರುವ ಪ.ಜಾತಿ ಮತ್ತು ಪ.ಪಂಗಡದ ರೈತರ ಸಂಖ್ಯೆ ಹಾಗೂ ಅವರು ಹೊಂದಿರುವ ಜಮೀನು ವಿಸ್ತೀರ್ಣದ ವಿವರ ವರದಿ ಹಾಗೂ ಇವರಿಗೆ ನೀಡಲಾಗಿರುವ ಸರ್ಕಾರದ ಯೋಜನೆಗಳ ವಿವರಗಳನ್ನು ಸಲ್ಲಿಸುವಂತೆ ತಿಳಿಸಿದರು.  ಎಂದು ಎಲ್. ಮುರುಗನ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಫಲಾನುಭವಿಗಳಿಗೆ ಬೇಗ ಸೌಲಭ್ಯ ನೀಡಿ : ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಡಿ ಪರಿಶಿಷ್ಟ ಜಾತಿಯವರಿಗೆ   ಹತ್ತು ಹಲವು ಯೋಜನೆಗಳಡಿ ಸೌಲಭ್ಯ ಒದಗಿಸಲು ಅರ್ಜಿಯನ್ನು ಪಡೆದು ಬಹಳಷ್ಟು ತಿಂಗಳುಗಳೇ ಕಳೆದಿವೆ.  ಆದರೆ ಇದುವರೆಗೂ ಫಲಾನುಭವಿಗಳ ಪಟ್ಟಿಯನ್ನು ಅಂತಿಮಗೊಳಿಸಿಲ್ಲ.  ಈಗಾಗಲೆ ಆರ್ಥಿಕ ವರ್ಷದ ಪೂರ್ಣಕ್ಕೆ ಎರಡು ತಿಂಗಳುಗಳು ಮಾತ್ರ ಉಳಿದಿದೆ.  ಇದುವರೆಗೂ ಫಲಾನುಭವಿಗಳಿಗೆ ಸೌಲಭ್ಯ ಒದಗಿಸದಿರುವ ಕ್ರಮಕ್ಕೆ ಆಯೋಗದ ಉಪಾಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿದರು.  ಇದಕ್ಕೆ ಪ್ರತಿಕ್ರಿಯಿಸಿದ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು, ಫಲಾನುಭವಿಗಳ ಪಟ್ಟಿಗೆ ಆಯಾ ವಿಧಾನಸಭಾ ಕ್ಷೇತ್ರದ ಶಾಸಕರುಗಳಿಂದ ಅಂತಿಮ ಅನುಮೋದನೆ ಪಡೆಯಬೇಕಿರುತ್ತದೆ.  ಶಾಸಕರುಗಳಿಂದ ಫಲಾನುಭವಿಗಳ ಪಟ್ಟಿ ಅಂತಿಮಗೊಂಡ ಕೂಡಲೆ, ಸಂಬಂಧಪಟ್ಟವರಿಗೆ ಸೌಲಭ್ಯ ಒದಗಿಸಲಾಗುವುದು ಎಂದರು.
ದೇವದಾಸಿಯರ ಮರು ಸಮೀಕ್ಷೆಯಾಗಲಿ : ದೇವದಾಸಿ ಪದ್ಧತಿಯನ್ನು 1982 ರಲ್ಲಿಯೇ ನಿಷೇಧಿಸಲಾಗಿದೆ.  ಕೊಪ್ಪಳ ಜಿಲ್ಲೆಯಲ್ಲಿ ದೇವದಾಸಿಯರ ಕುರಿತು 2007-08 ರಲ್ಲಿ ಸಮೀಕ್ಷೆ ಕೈಗೊಳ್ಳಲಾಗಿತ್ತು.  ಸಮೀಕ್ಷೆಯ ಬಳಿಕ ಸದ್ಯ ಜಿಲ್ಲೆಯಲ್ಲಿ 2873 ದೇವದಾಸಿಯರು ಮಾತ್ರ ಇದ್ದಾರೆ.  ಈಗಾಗಲೆ ದೇವದಾಸಿ ಪದ್ದತಿ ನಿಷೇಧಗೊಂಡಿದ್ದು, ಜಿಲ್ಲೆಯಲ್ಲಿರುವ ಮಾಜಿ ದೇವದಾಸಿಯರಿಗೆ ಸರ್ಕಾರದ ವಿವಿಧ ಇಲಾಖೆಗಳಿಂದ ಹಲವು ಸೌಲಭ್ಯಗಳನ್ನು ನೀಡಲಾಗುತ್ತಿದೆ.  ಮಾಸಾಶನ ಮಂಜೂರಾತಿ, ಮನೆ ಮಂಜೂರು, ಭೂಮಿ ಇರುವವರಿಗೆ ಕೊಳವೆಬಾವಿ ಸೌಲಭ್ಯ, ಸ್ವಯಂ ಉದ್ಯೋಗಕ್ಕಾಗಿ ಸಾಲ ಸೌಲಭ್ಯ ಸೇರಿದಂತೆ ಹಲವಾರು ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ವಿವರಿಸಿದರು.  ಇದಕ್ಕೆ ಪ್ರತಿಕ್ರಿಯಿಸಿದ ಆಯೋಗದ ಉಪಾಧ್ಯಕ್ಷ ಎಲ್. ಮುರುಗನ್ ಅವರು, ದೇವದಾಸಿಯರ ಕುರಿತು 2007-08 ರಲ್ಲಿ ಸಮೀಕ್ಷೆ ಕೈಗೊಂಡಿದ್ದು, ಮತ್ತೊಮ್ಮೆ ಸಮೀಕ್ಷೆ ನಡೆಸಿ, ವರದಿ ಸಂಗ್ರಹಿಸುವ ಅಗತ್ಯತೆ ಕಂಡುಬರುತ್ತಿದೆ.  ಮಾಜಿ ದೇವದಾಸಿಯರಿಗೆ ಅಥವಾ ಅವರ ಮಕ್ಕಳಿಗೆ ಕಾರ್ಖಾನೆಗಳಲ್ಲಿ ಉದ್ಯೋಗ ಕಲ್ಪಿಸಲು ಕೈಗಾರಿಕೆ ಮತ್ತು ಕಾರ್ಮಿಕ ಇಲಾಖೆ ಕ್ರಮ ವಹಿಸಬೇಕು.  ಸರ್ಕಾರಿ ಆಸ್ಪತ್ರೆಗಳಲ್ಲಿ ಅಕುಶಲ ಕೆಲಸ ಕಾರ್ಯಗಳಿಗೆ ನೇಮಕ ಮಾಡಿಕೊಳ್ಳಬಹುದಾಗಿದೆ.  ಸದ್ಯ 45 ವರ್ಷ ಮೇಲ್ಪಟ್ಟ ಮಾಜಿ ದೇವದಾಸಿಯರಿಗೆ ಮಾತ್ರ ಮಾಸಾಶನ ಮಂಜೂರಾತಿಗೆ ಅವಕಾಶವಿದ್ದು, ವಯೋಮಿತಿಯನ್ನು ಸಡಿಲಗೊಳಿಸಲು ಅಗತ್ಯ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಸೂಚನೆ ನೀಡಿದರು.
ಹತ್ತು ದಿನಗಳೊಳಗೆ ವರದಿ ನೀಡಿ : ಜಿಲ್ಲೆಯಲ್ಲಿ ಪರಿಶಿಷ್ಠರ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಳೆದ ಮೂರು ವರ್ಷಗಳಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ, ಇತ್ಯರ್ಥವಾದ ಪ್ರಕರಣಗಳ ಸಂಖ್ಯೆ, ಕ್ರಮ ಕೈಗೊಂಡ ಹಾಗೂ ಪರಿಹಾರ ಒದಗಿಸಿದ ಕುರಿತ ಸಂಪೂರ್ಣ ಮಾಹಿತಿಯ ವರದಿಯನ್ನು ಹತ್ತು ದಿನಗಳ ಒಳಗಾಗಿ ಆಯೋಗಕ್ಕೆ ಸಲ್ಲಿಸಬೇಕು ಎಂದು ಎಲ್. ಮುರುಗನ್ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದರು.
     ಸಭೆಯಲ್ಲಿ ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್ ಶೆಟ್ಟಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಉಪವಿಭಾಗಾಧಿಕಾರಿ ರವಿ ತಿರ್ಲಾಪುರ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಚಿದಾನಂದ, ಡಿಯುಡಿಸಿ ಯೋಜನಾ ನಿರ್ದೇಶಕ ವಿಜಯಕುಮಾರ, ಜಂಟಿಕೃಷಿ ನಿರ್ದೇಶಕ ವಿರೇಶ ಹುನಗುಂದ, ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಜಪ್ತಿ ಮಾಡಿದ ಗೋಧಿ ಜ. 29 ರಂದು ಗಂಗಾವತಿಯಲ್ಲಿ ಬಹಿರಂಗ ಹರಾಜು


ಕೊಪ್ಪಳ ಜ. 24 (ಕರ್ನಾಟಕ ವಾರ್ತೆ): ಗಂಗಾವತಿ ತಾಲೂಕಿನ ವಿವಿಧ ಪ್ರದೇಶಗಳಲ್ಲಿ ಆಹಾರ ಮತ್ತು ಇತರೆ ಇಲಾಖೆಗಳಿಂದ 2013-14 ರಿಂದ 2015-16 ರವರೆಗೆ ಜಪ್ತಿ ಮಾಡಲಾದ 541. 33 ಕ್ವಿಂ. ಗೋಧಿಯನ್ನು ಜ. 29 ರಂದು ಬೆಳಿಗ್ಗೆ 11 ಗಂಟೆಗೆ ಗಂಗಾವತಿಯ ಕೆಎಫ್‍ಸಿಎಸ್‍ಸಿ ಗೋದಾಮಿನಲ್ಲಿ ಬಹಿರಂಗ ಹರಾಜು ಮಾಡಲಾಗುತ್ತಿದ್ದು, ಆಸಕ್ತರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ.
     ಜಿಲ್ಲೆಯಲ್ಲಿ ಆಹಾರ ಮತ್ತು ಇತರೆ ಇಲಾಖೆಗಳಿಂದ 2013-14 ರಿಂದ 2015-16 ರವರೆಗೆ ಜಪ್ತಿ ಮಾಡಲಾದ 541. 33 ಕ್ವಿಂ. ಗೋಧಿ ಉಳಿಕೆ ಇದ್ದು, ಬಹಿರಂಗ ಹರಾಜು ಮಾಡಿ, ಸರ್ಕಾರಕ್ಕೆ ಹಣ ಸಂದಾಯ ಮಾಡಬೇಕಿರುತ್ತದೆ.  ಜಪ್ತು ಮಾಡಿರುವ ಗೋಧಿಯು ಗಂಗಾವತಿಯ ಕನಕಗಿರಿ ರಸ್ತೆಯಲ್ಲಿರುವ ಎಪಿಎಂಸಿ ಗೋದಾಮಿನಲ್ಲಿ ವೀಕ್ಷಣೆಗೆ ಲಭ್ಯವಿರುತ್ತದೆ.  ಅಲ್ಲದೆ ಗೋಧಿಯನ್ನು ಎಲ್ಲಿದೆಯೋ ಹಾಗೂ ಯಾವ ಸ್ಥಿತಿಯಲ್ಲಿದೆಯೋ ಹಾಗೆಯೇ ಹರಾಜು ಮಾಡಲಾಗುವುದು.  ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವ ಖರೀದಿದಾರರು ಗಂಗಾವತಿ ಸಮಿತಿಯಿಂದ ಅಥವಾ ಕೃಷಿ ಮಾರಾಟ ಇಲಾಖೆ, ಕೊಪ್ಪಳ ಇವರಿಂದ ಲೈಸೆನ್ಸ್ ಹೊಂದಿರಬೇಕು.  ಶೇ. 4 ರಷ್ಟು ಮೊತ್ತದ ಭದ್ರತಾ ಮೊತ್ತವನ್ನು ಗಂಗಾವತಿ ತಹಸಿಲ್ದಾರರ ಹೆಸರಿನಲ್ಲಿ ಡಿಡಿ ರೂಪದಲ್ಲಿ ಪಡೆಯಬೇಕು. ಹೆಚ್ಚಿನ ವಿವರಗಳನ್ನು ಗಂಗಾವತಿ ತಹಸಿಲ್ದಾರರ ಕಚೇರಿಯಿಂದ ಪಡೆಯಬಹುದಾಗಿದೆ ಎಂದು ತಹಸಿಲ್ದಾರ್ ಚಂದ್ರಕಾಂತ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೌಶಲ್ಯ ತರಬೇತಿ: ನೇರ ಸಂದರ್ಶನ


ಕೊಪ್ಪಳ. ಜ.24 (ಕರ್ನಾಟಕ ವಾರ್ತೆ) : ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ವಿದ್ಯುತ್ ವರಿವರ್ತಕಗಳ ಎಲ್.ವಿ ಮತ್ತು ಎಚ್.ವಿ ಸುರುಳಿ ಸುತ್ತುವ ಕೌಶಲ್ಯ ತರಬೇತಿಗಾಗಿ ಪರಿಶಿಷ್ಠ ಜಾತಿ ಮತ್ತು ಪ.ಪಂಗಡದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ಜ.29 ಮತ್ತು 30 ರಂದು ಬೆಳಿಗ್ಗೆ 10 ಗಂಟೆಯಿಂದ ಮ.03 ಗಂಟೆಗೆ ನಡೆಯುವ ಸಂದರ್ಶನದಲ್ಲಿ ತಮ್ಮ 2 ಭಾವಚಿತ್ರ, ಜಾತಿ ಪ್ರಮಾಣ ಪತ್ರ, ವಿಳಾಸದ ದೃಢೀಕರಣಕ್ಕಾಗಿ ಪಡಿತರ ಚೀಟಿ, ಆಧಾರ್ ಕಾರ್ಡ್ ಅಥವಾ ಗುರುತಿನ ಚೀಟಿಗಳ ದಾಖಲೆಗಳೊಂದಿಗೆ ಜಿಲ್ಲಾ ಕೈಗಾರಿಕಾ ಕೇಂದ್ರ ಇಲ್ಲಿಗೆ ಭೇಟಿ ನೀಡಿ ತಮ್ಮ ಹೆಸರು ನೋಂದಾಯಿಸಬಹುದು.   ತರಬೇತಿ ಅವಧಿ 45 ದಿನಗಳು, ಮೊದಲು ಬಂದವರಿಗೆ ಆದ್ಯತೆ (ಭೇಟಿ ನೀಡಿ ಟೋಕನ್ ಪಡೆಯಬೇಕು) ಪ.ಜಾತಿ ಮತ್ತು ಪ.ಪಂಗಡದ ಅಭ್ಯರ್ಥಿಗಳಾಗಿರಬೇಕು. ವಯೋಮಿತಿ 18 ರಿಂದ 40 ವರ್ಷ ದೊಳಗಿರಬೇಕು. ಕನಿಷ್ಠ 4 ನೇ ತರಗತಿ ಅಥವಾ ಓದು ಬರಹ ಬಲ್ಲವರಾಗಿರಬೇಕು.   ಒಟ್ಟು ಪ.ಜಾತಿಯ 88 ಹಾಗೂ ಪ.ಪಂಗಡದ 58 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಇದರಲ್ಲಿ 3 ಪ.ಜಾತಿ 2 ಪ.ಪಂಗಡದ ಅಂಗವಿಕಲ ಅಭ್ಯರ್ಥಿಗಳು (ಅಂಗವಿಕಲತೆಯಿಂದ ವೃತ್ತಿ ಕೌಶಲ್ಯ ಪಡೆಯಲು ಸಾದ್ಯವಿರಬೇಕು) ಹಾಗೂ ಪ.ಜಾತಿಯ 30 ಹಾಗೂ ಪ.ಪಂಗಡದ 20 ಮಹಿಳಾ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.  ಹೆಚ್ಚಿನ ಮಾಹಿತಿಗೆ ದೂ.ಸಂಖ್ಯೆ 08539-231101/231548 ಅಥವಾ ಜಿಲ್ಲಾ ಕೈಗಾರಿಕಾ ಕೇಂದ್ರ ಕೊಪ್ಪಳ ಇಲ್ಲಿಗೆ ಭೇಟಿ ನೀಡಬಹುದು ಎಂದು ಪ್ರಕಟಣೆ ತಿಳಿಸಿದೆ.

ಜ.25 ರಂದು ಕೊಪ್ಪಳದಲ್ಲಿ ರಾಷ್ಟ್ರೀಯ ಮತದಾನ ದಿನಾಚರಣೆ


ಕೊಪ್ಪಳ. ಜ.24 (ಕರ್ನಾಟಕ ವಾರ್ತೆ) : ಭಾರತ ಚುನಾವಣಾ ಆಯೋಗದ ವತಿಯಿಂದ ರಾಷ್ಟ್ರೀಯ ಮತದಾನ ದಿನಾಚರಣೆ ಕಾರ್ಯಕ್ರಮ ಜ.25 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ಜರುಗಲಿದೆ.
     ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅನೂಪ್‍ಶೆಟ್ಟಿ, ಜಿ.ಪಂ ಸಿ.ಇ.ಒ ವೆಂಕಟ್ ರಾಜಾ, ಅಪರ ಜಿಲ್ಲಾಧಿಕಾರಿ ಡಾ.ರುದ್ರೇಶ್ ಘಾಳಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.  ಸರಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ.ಪ್ರಭುರಾಜ ಕೆ. ನಾಯಕ ವಿಶೇಷ ಉಪನ್ಯಾಸ ನೀಡುವರು ಎಂದು ಪ್ರಕಟಣೆ ತಿಳಿಸಿದೆ.

ಮಡಿವಾಳ ಮಾಚಿದೇವರ ಜಯಂತಿ : ಜ. 25 ರಂದು ಪೂರ್ವಭಾವಿ ಸಭೆ


ಕೊಪ್ಪಳ ಜ. 24 (ಕರ್ನಾಟಕ ವಾರ್ತೆ): ಮಡಿವಾಳ ಮಾಚಿದೇವರ ಜಯಂತಿಯನ್ನು ಫೆ. 01 ರಂದು ಜಿಲ್ಲಾ ಕೇಂದ್ರದಲ್ಲಿ ಆಚರಿಸುವುದಕ್ಕೆ ಸಂಬಂಧಿಸಿದಂತೆ ಪೂರ್ವಭಾವಿ ಸಭೆ ಜ. 25 ರಂದು ಮಧ್ಯಾಹ್ನ 04 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಲಿದೆ.
     ಪೂರ್ವಭಾವಿ ಸಭೆಗೆ ಎಲ್ಲ ಸಮಾಜದ ಗಣ್ಯರು ಆಗಮಿಸಿ, ಅಗತ್ಯ ಸಲಹೆ ಸೂಚನೆಗಳನ್ನು ನೀಡಬಹುದಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ತಿಳಿಸಿದ್ದಾರೆ.

ಕ್ರೀಡಾಶಾಲೆ, ವಸತಿ ನಿಲಯಗಳಿಗೆ ಜ. 27 ರಿಂದ ಆಯ್ಕೆ ಪ್ರಕ್ರಿಯೆ


ಕೊಪ್ಪಳ ಜ. 24 (ಕರ್ನಾಟಕ ವಾರ್ತೆ): ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾಶಾಲೆ ಮತ್ತು ವಸತಿ ನಿಲಯಗಳಿಗೆ 2018-19 ನೇ ಸಾಲಿಗೆ ಕ್ರೀಡಾಪಟುಗಳ ಪ್ರವೇಶಕ್ಕಾಗಿ ಆಯ್ಕೆ ಪ್ರಕ್ರಿಯೆ ಜ. 27 ರಿಂದ 31 ರವರೆಗೆ ಆಯಾ ತಾಲೂಕು ಕೇಂದ್ರಗಳಲ್ಲಿ ಜರುಗಲಿದೆ.
     ಪ್ರತಿಭಾವಂತ ಬಾಲಕ/ಬಾಲಕಿಯರಿಗಾಗಿ ದೈಹಿಕ ಸಾಮಥ್ರ್ಯ ಪರೀಕ್ಷೆಯನ್ನು ಕೊಪ್ಪಳ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಏರ್ಪಡಿಸಲು ದಿನಾಂಕ ನಿಗದಿಪಡಿಸಲಾಗಿದೆ.  ಜ. 27 ರಂದು ಯಲಬುರ್ಗಾದ ತಾಲೂಕು ಕ್ರೀಡಾಂಗಣದಲ್ಲಿ, ಜ. 29 ರಂದು ಕುಷ್ಟಗಿಯ ತಾಲೂಕು ಕ್ರೀಡಾಂಗಣ.  ಆ. 30 ರಂದು ಗಂಗಾವತಿಯ ತಾಲೂಕು ಕ್ರೀಡಾಂಗಣ ಹಾಗೂ ಜ. 31 ರಂದು ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯಾ ದಿನದಂದು ಬೆಳಿಗ್ಗೆ 10 ಗಂಟೆಯಿಂದ ಆಯ್ಕೆ ಪ್ರಕ್ರಿಯೆ ನಡೆಯಲಿದೆ.  ಕೊಪ್ಪಳ ಕ್ರೀಡಾ ವಸತಿ ನಿಲಯಕ್ಕೆ ಅಥ್ಲೆಟಿಕ್ಸ್ ಹಾಗೂ ವ್ಹಾಲಿಬಾಲ್ ವಿಭಾಗದಲ್ಲಿ ಬಾಲಕರು ಮತ್ತು ಬಾಲಕಿಯರನ್ನು ಆಯ್ಕೆ ಮಾಡಲಾಗುವುದು.  ದಿ: 01-06-2008 ರ ನಂತರ ಜನಿಸಿದವರು ಹಾಗೂ ಪ್ರಸ್ತುತ 04 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಮುಂದಿನ ಶೈಕ್ಷಣಿಕ ವರ್ಷಕ್ಕೆ 05 ನೇ ತರಗತಿಗೆ ಸೇರಲು ಅರ್ಹತೆ ಹೊಂದುವವರು ಮಾತ್ರ ಭಾಗವಹಿಸಿಲು ಅವಕಾಶವಿರುತ್ತದೆ.  ಆಸಕ್ತರು ಶಾಲೆಯಿಂದ ಜನ್ಮದಿನಾಂಕ ಹಾಗೂ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ದೃಢೀಕರಣ ಪತ್ರದೊಂದಿಗೆ ಹಾಜರಾಗಬೇಕು.  ಒಂದು ವೇಳೆ ಕ್ರೀಡಾಪಟುಗಳು ಆಯಾ ತಾಲೂಕು ಕೇಂದ್ರದಲ್ಲಿ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ಸಿಗದೇ ಇದ್ದ ಪಕ್ಷದಲ್ಲಿ, ಜಿಲ್ಲಾ ಕೇಂದ್ರದಲ್ಲಿ ಜರುಗುವ ಆಯ್ಕೆ ಪ್ರಕ್ರಿಯೆಗೆ ನೇರವಾಗಿ ಭಾಗವಹಿಸಲು ಅವಕಾಶವಿದೆ.  ಕಿರಿಯ ವಿಭಾಗದಲ್ಲಿ 14 ವರ್ಷ ಮೀರದಿರುವ ಬಾಲಕ ಬಾಲಕಿಯರಿಗೆ ಅವಕಾಶವಿದ್ದು 8 ನೇ ತರಗತಿಗೆ ಸೇರಲು ಅರ್ಹತೆ ಪಡೆದಿರಬೇಕು.  ಅಥ್ಲೆಟಿಕ್ಸ್, ಹಾಕಿ, ಬಾಸ್ಕೆಟ್‍ಬಾಲ್, ಸೈಕ್ಲಿಂಗ್, ಜೂಡೋ ಕ್ರೀಡೆಯಲ್ಲಿ ಬಾಲಕ/ಬಾಲಕಿಯರಿಗೆ ಹಾಗೂ ಕುಸ್ತಿಯಲ್ಲಿ ಬಾಲಕರಿಗೆ ಅವಕಾಶವಿದೆ.  ಹಿರಿಯ ವಿಭಾಗದಲ್ಲಿ 18 ವರ್ಷ ಮೀರದಿರುವ ಹಾಗೂ ಪ್ರಥಮ ಪಿಯುಸಿಗೆ ಸೇರಲು ಅರ್ಹತೆ ಪಡೆದಿರುವ ಅಭ್ಯರ್ಥಿಗಳು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು.    ಅಥ್ಲೆಟಿಕ್ಸ್, ಬಾಸ್ಕೆಟ್‍ಬಾಲ್, ವ್ಹಾಲಿಬಾಲ್, ಹಾಕಿ, ಫುಟ್‍ಬಾಲ್, ಜೂಡೋ ಕ್ರೀಡೆಗೆ ಯುವಕ/ಯುವತಿಯರಿಗೆ ಅವಕಾಶವಿದೆ.  ಕುಸ್ತಿಯಲ್ಲಿ ಯುವಕರಿಗೆ ಮಾತ್ರ ಅವಕಾಶವಿದೆ.  ಆಸಕ್ತ ಅರ್ಹ ಅಭ್ಯರ್ಥಿಗಳು ಹೆಚ್ಚಿನ ವಿವರಗಳನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕೊಪ್ಪಳ ಕಚೇರಿ- 08539-201400 ಅಥವಾ ಯಲಬುರ್ಗಾ-8970288857, ಗಂಗಾವತಿ-7411755523, ಕುಷ್ಟಗಿ-9945501033, ಕೊಪ್ಪಳ-9036773070 ಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.