Sunday, 22 April 2018

ಮತದಾನ ದಿನದಂದು ಸೆಕ್ಟರ್ ಅಧಿಕಾರಿಗಳ ತೀವ್ರ ಕಟ್ಟೆಚ್ಚರ ಅಗತ್ಯ- ಎಂ. ಕನಗವಲ್ಲಿ


ಕೊಪ್ಪಳ ಏ. 22 (ಕರ್ನಾಟಕ ವಾರ್ತೆ): ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ನಿಮಿತ್ಯ ಮೇ. 12 ರಂದು ಮತದಾನ ನಡೆಯಲಿದ್ದು, ಸೆಕ್ಟರ್ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು, ಮತದಾನ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ತೀವ್ರ ಕಟ್ಟೆಚ್ಚರ ವಹಿಸುವುದು ಅಗತ್ಯವಾಗಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.

     ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ವಿಧಾನಸಭೆ ಚುನಾವಣೆ ಸಂಬಂಧ ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳಿಗೆ ನೇಮಕಗೊಂಡಿರುವ ಸೆಕ್ಟರ್ ಅಧಿಕಾರಿಗಳು ಹಾಗೂ ಮಾಸ್ಟರ್ ಟ್ರೈನರ್‍ಗಳಿಗೆ ಶನಿವಾರದಂದು ಏರ್ಪಡಿಸಲಾದ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

     ಈ ಬಾರಿಯ ವಿಧಾನಸಭಾ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಸಲು ಜಿಲ್ಲಾಡಳಿತ ವತಿಯಿಂದ ನೇಮಿಸಲಾಗಿರುವ ಸೆಕ್ಟರ್ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ.  ಸೆಕ್ಟರ್ ಅಧಿಕಾರಿಗಳು ಈಗಾಗಲೆ ಮತಗಟ್ಟೆಗಳ ಸ್ಥಿತಿ-ಗತಿ, ಮೂಲಭೂತ ಸೌಕರ್ಯ ಮುಂತಾದ ಅಗತ್ಯ ಮಾಹಿತಿಯನ್ನು ಸಂಗ್ರಹಿಸಿ, ಸಮರ್ಪಕವಾಗಿ ಒದಗಿಸುವಲ್ಲಿ ಉತ್ತಮ ಕಾರ್ಯವನ್ನು ನಿರ್ವಹಿಸಿದ್ದಾರೆ.  ಅದೇ ರೀತಿ ಸೆಕ್ಟರ್ ಅಧಿಕಾರಿಗಳು ಆಯಾ ಮತಗಟ್ಟೆಗಳ ವ್ಯಾಪ್ತಿಯಲ್ಲಿ ನೀತಿ ಸಂಹಿತೆಯ ಪಾಲನೆ, ಉಲ್ಲಂಘನೆ ಪ್ರಕರಣಗಳ ಬಗ್ಗೆಯೂ ನಿಗಾ ವಹಿಸಿದ್ದಾರೆ.  ಮೇ. 12 ರಂದು ನಡೆಯುವ ಮತದಾನ ದಿನದಂದು ಸೆಕ್ಟರ್ ಅಧಿಕಾರಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಮತಗಟ್ಟೆಯ ಅಧಿಕಾರಿಗಳು, ಸಹಾಯಕ ಸಿಬ್ಬಂದಿಗಳು, ಮತದಾನ ಸಿಬ್ಬಂದಿಗಳಿಗೆ ಚುನಾವಣಾ ಆಯೋಗ ನೀಡಿರುವ ಮಾರ್ಗಸೂಚಿ ಹಾಗೂ ನಿರ್ದೇಶನಗಳ ಬಗ್ಗೆ ಸೆಕ್ಟರ್ ಅಧಿಕಾರಿಗಳು ಅರಿವು ಹೊಂದಿರಬೇಕು.  ಆಯಾ ಮತಗಟ್ಟೆಗಳ 100 ಮೀ. ವ್ಯಾಪ್ತಿಯಲ್ಲಿ ಯಾವುದೇ ವ್ಯಕ್ತಿ, ಅಭ್ಯರ್ಥಿ, ಅಥವಾ ಪಕ್ಷಗಳು ಪ್ರಚಾರ ಮಾಡುವುದನ್ನು ನಿಷೇಧಿಸಿದ್ದು, ಈ ಕುರಿತಂತೆ ಸೆಕ್ಟರ್ ಅಧಿಕಾರಿಗಳು ನಿಗಾ ವಹಿಸಬೇಕು.  ಮತದಾನ ಪ್ರಕ್ರಿಯೆಯಲ್ಲಿ ಬೆಳಿಗ್ಗೆ 06 ಗಂಟೆಗೆ ಅಣಕು ಮತದಾನ ಪ್ರಾರಂಭವಾಗಲಿದ್ದು, ಈ ಸಂದರ್ಭದಲ್ಲಿ ಮತಯಂತ್ರಗಳ ಕಾರ್ಯ ನಿರ್ವಹಣೆ ಕುರಿತು ಯಾವುದೇ ಸಮಸ್ಯೆಗಳು ತಲೆದೋರಿದಲ್ಲಿ, ಕೂಡಲೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು, ಅದನ್ನು ನಿವಾರಿಸಿ, ಮತದಾನ ಪ್ರಕ್ರಿಯೆ ಸುಗಮವಾಗಿ ಮುಂದುವರೆಯುವಂತೆ ಮಾಡುವಲ್ಲಿ ಸೆಕ್ಟರ್ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು.  ಅಲ್ಲದೆ ಮತಗಟ್ಟೆ ಅಧಿಕಾರಿಗಳಿಗೆ ಸೂಕ್ತ ಜಾಗೃತಿ ನೀಡಬೇಕು.  ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ಸುಗಮವಾಗಿ ಹಾಗೂ ನ್ಯಾಯ ಸಮ್ಮತವಾಗಿ ಜರುಗಲು ಸೂಕ್ತ ರೀತಿಯಲ್ಲಿ ವ್ಯವಸ್ಥೆ ಕೈಗೊಳ್ಳಲಾಗಿದೆಯೇ ಹಾಗೂ ಮತದಾನ ಗೌಪ್ಯತೆ ಕಾಪಾಡುವ ರೀತಿಯಲ್ಲಿ ಮತಯಂತ್ರಗಳನ್ನು ಸೂಕ್ತ ಸ್ಥಳದಲ್ಲಿ ಜೋಡಿಸಿಡಲಾಗಿದೆಯೇ ಎಂಬುದರ ಬಗ್ಗೆಯೂ ನಿಗಾ ವಹಿಸಬೇಕು.  ಮತಗಟ್ಟೆಗಳಲ್ಲಿ ಚುನಾವಣಾ ಏಜೆಂಟರು ನಿಯಮಾನುಸಾರ ಕಾರ್ಯ ನಿರ್ವಹಿಸುವುದರಿಂದ, ಏಜೆಂಟರ ಕಾರ್ಯದ ಬಗ್ಗೆಯೂ ಮತಗಟ್ಟೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.
     ವಿಧಾನಸಭಾ ಚುನಾವಣೆ ಸಂಬಂಧ ಮಾಸ್ಟರ್ ಟ್ರೇನರ್ ಆಗಿ ನೇಮಕ ಮಾಡಲಾಗಿರುವ ಶಂಕರಪ್ಪ ಅವರು, ಸೆಕ್ಟರ್ ಅಧಿಕಾರಿಗಳು ಹಾಗೂ ಕ್ಷೇತ್ರವಾರು ಟ್ರೈನರ್‍ಗಳಿಗೆ ಮತದಾನ ದಿನದಂದು ಕೈಗೊಳ್ಳಬೇಕಾಗಿರುವ ಎಲ್ಲ ಕಾರ್ಯ ಹಾಗೂ ಕ್ರಮಗಳ ಕುರಿತು ವಿವರವಾಗಿ ತರಬೇತಿ ನೀಡಿದರು.
     ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಉಪಸ್ಥಿತರಿದ್ದರು.  ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳಿಗೆ ನೇಮಕಗೊಂಡಿರುವ ಸೆಕ್ಟರ್ ಅಧಿಕಾರಿಗಳು ಹಾಗೂ ಮಾಸ್ಟರ್ ಟ್ರೈನರ್‍ಗಳು ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿದ್ದರು.

ಭಗೀರಥ ಜಯಂತಿ : ಗಣ್ಯರಿಂದ ಭಕ್ತಿ ನಮನ ಸಲ್ಲಿಕೆ


ಕೊಪ್ಪಳ ಏ. 22 (ಕರ್ನಾಟಕ ವಾರ್ತೆ): ಮಹಾನ್ ತಪಸ್ವಿ ಹಾಗೂ ಸಾಧಕ, ಮಹರ್ಷಿ ಭಗೀರಥ ಅವರ ಜಯಂತಿ ಅಂಗವಾಗಿ ಜಿಲ್ಲಾಡಳಿತದ ವತಿಯಿಂದ ಭಾನುವಾರದಂದು ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಎಲ್ಲ ಅಧಿಕಾರಿ, ಸಿಬ್ಬಂದಿಗಳು ಮಹರ್ಷಿ ಭಗೀರಥರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಭಕ್ತಿ ಪೂರ್ವಕ ನಮನ ಸಲ್ಲಿಸಿದರು.
     ಚುನಾವಣಾ ನೀತಿ ಸಂಹಿತೆಯ ಕಾರಣದಿಂದಾಗಿ ಭಗೀರಥ ಅವರ ಜಯಂತಿ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸರಳವಾಗಿ ಆಚರಿಸಲಾಯಿತು.   ಕಾರ್ಯಕ್ರಮದಲ್ಲಿ ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ., ಚುನಾವಣಾ ವಿಭಾಗದ ತಹಸಿಲ್ದಾರ್ ನಾಗರಾಜ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡು, ಭಗೀರಥರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು, ಭಕ್ತಿ ಪೂರ್ವಕ ನಮನ ಸಲ್ಲಿಸಿದರು.

ಯಶಸ್ವಿ ಚುನಾವಣೆಗಾಗಿ ಮತಗಟ್ಟೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳಿಂದ ಪಾಠಕೊಪ್ಪಳ ಏ. 22 (ಕರ್ನಾಟಕ ವಾರ್ತೆ): ಕರ್ನಾಟಕ ವಿಧಾನಸಭೆ ಚುನಾವಣೆ ನಿಮಿತ್ಯ ಮೇ. 12 ರಂದು ಬೆಳಿಗ್ಗೆ 07 ಗಂಟೆಯಿಂದ ಸಂಜೆ 06 ಗಂಟೆಯವರೆಗೆ ಮತದಾನ ನಡೆಯಲಿದ್ದು, ಮತದಾನ ಪ್ರಕ್ರಿಯೆ ಗೊಂದಲ ರಹಿತವಾಗಿ ಹಾಗೂ ಸುಗಮವಾಗಿ ನಡೆಸಲು ಮತಗಟ್ಟೆ ಅಧಿಕಾರಿ ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಖುದ್ದು ಮಾರ್ಗದರ್ಶನ ನೀಡಿದರು.

     ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಧಾನಸಭೆ ಚುನಾವಣೆ ಸಂಬಂಧ ಮತಗಟ್ಟೆ ಅಧಿಕಾರಿಗಳು ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಭಾನುವಾರದಂದು ಏರ್ಪಡಿಸಲಾದ ತರಬೇತಿಯಲ್ಲಿ ಪಾಲ್ಗೊಂಡು, ಅವರು ಅಧಿಕಾರಿಗಳಿಗೆ ಮತದಾನ ದಿನದಂದು ಕೈಗೊಳ್ಳಬೇಕಾದ ಕಾರ್ಯಗಳ ಕುರಿತು ಮಾರ್ಗದರ್ಶನ ನೀಡಿದರು.

     ಮೇ. 12 ರಂದು ಜರುಗುವ ಮತದಾನ ಪ್ರಕ್ರಿಯೆಗೆ ಈಗಾಗಲೆ ಮತಗಟ್ಟೆ ಅಧಿಕಾರಿಗಳು ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಮತದಾನ ಕಾರ್ಯ ಸುಗಮವಾಗಿ ನಡೆಸಲು ಈ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ.  ಮತಗಟ್ಟೆಯಲ್ಲಿದ್ದುಕೊಂಡು, ಮತದಾರರಿಗೆ ಹಾಗೂ ಇತರೆ ಸಿಬ್ಬಂದಿಗಳಿಗೆ ಸೂಕ್ತ ನಿರ್ದೇಶನ ನೀಡಲು, ಮತಗಟ್ಟೆ ಅಧಿಕಾರಿಗಳು ಆಯೋಗದ ನಿಯಮಗಳನ್ನು ಸರಿಯಾಗಿ ಮನನ ಮಾಡಿಕೊಳ್ಳಲೇಬೇಕಿದೆ.  ಹೀಗಾಗಿ ಮತಗಟ್ಟೆ ಅಧಿಕಾರಿಗಳು ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಖುದ್ದು ತಾವೇ ತರಬೇತಿ ನೀಡುವುದರ ಜೊತೆಗೆ, ಅಧಿಕಾರಿಗಳ ಗೊಂದಲ, ಪ್ರಶ್ನೆ ಅಥವಾ ಸಮಸ್ಯೆಗಳಿಗೆ ಸ್ಪಂದಿಸಲು ಅನುಕೂಲವಾಗಲಿದೆ.  ಇದಕ್ಕೆಂದೆ ಭಾನುವಾರದಂದು ಆಯಾ ತಾಲೂಕು ಕೇಂದ್ರಗಳಲ್ಲಿ ಮತಗಟ್ಟೆ ಅಧಿಕಾರಿಗಳು ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ಏರ್ಪಡಿಸಲಾಗಿದ್ದು, ಈ ತರಬೇತಿ ಕೇಂದ್ರಗಳಿಗೆ ತಾವೇ ಖುದ್ದು, ಭೇಟಿ ನೀಡಿ, ಅಧಿಕಾರಿಗಳೊಂದಿಗೆ ನಿಯಮಗಳ ಕುರಿತು ಮಾಹಿತಿ ವಿನಿಮಯ ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
     ಮತಗಟ್ಟೆ ಅಧಿಕಾರಿಗಳು, 100 ಮೀ. ವ್ಯಾಪ್ತಿಯಲ್ಲಿ ಯಾವುದೇ ಪ್ರಚಾರ ಚಟುವಟಿಕೆಗೆ ಅವಕಾಶ ನೀಡಬಾರದು.  ಮತಗಟ್ಟೆಗಳಲ್ಲಿ ಯಾವುದೇ ಪಕ್ಷ ಅಥವಾ ಚಿಹ್ನೆಗಳ ಛಾಯಾಚಿತ್ರವಿದ್ದಲ್ಲಿ ಅದನ್ನು ಮರೆಮಾಚಬೇಕು.  ಮತದಾನ ಪ್ರಕ್ರಿಯೆ ಗೌಪ್ಯವಾಗಿರುವ ರೀತಿಯಲ್ಲಿ ಮತಯಂತ್ರಗಳನ್ನು ಇರಿಸಲು ಸಮರ್ಪಕ ಬೆಳಕಿನ ವ್ಯವಸ್ಥೆ ಮಾಡಿಕೊಂಡು, ಸ್ಥಳ ನಿಗದಿ ಮಾಡಿಕೊಳ್ಳಬೇಕು.  ಪೋಲಿಂಗ್ ಏಜೆಂಟರ ಕಾರ್ಯ ಪರಿಶೀಲಿಸಬೇಕು. ಬೆಳಿಗ್ಗೆ 06 ಗಂಟೆಗೆ ಸರಿಯಾಗಿ ಅಣಕು ಮತದಾನ ಪ್ರಕ್ರಿಯೆ ಪ್ರಾರಂಭಿಸಬೇಕು.  ಮತಗಟ್ಟೆಯೊಳಗೆ ಯಾವುದೇ ಮತದಾರ ಅಥವಾ ಸಿಬ್ಬಂದಿ ಮೊಬೈಲ್ ಫೋನ್ ತರುವಂತಿಲ್ಲ.  ಇದರ ಬಗ್ಗೆ ನಿಗಾ ವಹಿಸಬೇಕು.  ಮತಗಟ್ಟೆ ಬಳಿ ಸೂಕ್ತ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಬೇಕು.  ಚುನಾವಣೆಯನ್ನು ಮುಕ್ತ ಮತ್ತು ನಿಸ್ಪಕ್ಷಪಾತ ರೀತಿಯಲ್ಲಿ ನಡೆಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.  ಮತಗಟ್ಟೆಯಲ್ಲಿ ಮತದಾನದ ಬಗ್ಗೆ ಸರಿಯಾಗಿ ದಾಖಲೆಗಳನ್ನು ನಿರ್ವಹಿಸಬೇಕು.  ನಕಲಿ ಮತದಾರರು ಮತ ಚಲಾವಣೆಗೆ ಯತ್ನಿಸುವ ಸಾಧ್ಯತೆಗಳಿದ್ದು, ಈ ಕುರಿತು ನಿಗಾ ವಹಿಸಿ, ಮತದಾರರನ್ನು ಗುರುತಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಅಂಧರು ಅಥವಾ ದುರ್ಬಲರು ಮತಗಟ್ಟೆಗೆ ಬಂದಾಗ, ಅವರು ಮತ ಚಲಾಯಿಸಲು ನಿಯಮಾನುಸಾರ ಅನುವು ಮಾಡಿಕೊಡಬೇಕು.  ಸಂಜೆ 06 ಗಂಟೆಗೆ ಮತದಾನ ಪ್ರಕ್ರಿಯೆ ಮುಕ್ತಾಯವಾದ ಬಳಿಕ, ನಿಯಮಗಳಿಗೆ ಅನುಗುಣವಾಗಿ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.  ಒಟ್ಟಾರೆ ಮತಗಟ್ಟೆಯಲ್ಲಿ ಚುನಾವಣಾ ಆಯೋಗದ ನಿಯಮಗಳು ಹಾಗೂ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಸುಗಮವಾಗಿ ಹಾಗೂ ನ್ಯಾಯ ಸಮ್ಮತವಾಗಿ ಮತದಾನ ಪ್ರಕ್ರಿಯೆ ಜರುಗಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.
     ಕೊಪ್ಪಳ ಕ್ಷೇತ್ರ ಚುನಾವಣಾಧಿಕಾರಿ ಸಿ.ಡಿ. ಗೀತಾ, ಸಹಾಯಕ ಚುನಾವಣಾಧಿಕಾರಿ ಗುರುಬಸವರಾಜ ಸೇರಿದಂತೆ ಟ್ರೈನರ್‍ಗಳು ಪಾಲ್ಗೊಂಡಿದ್ದರು.  ತರಬೇತಿ ಅಂಗವಾಗಿ ಮತಗಟ್ಟೆ ಅಧಿಕಾರಿಗಳು ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಮತಯಂತ್ರಗಳ ಕಾರ್ಯ ನಿರ್ವಹಣೆ ಹಾಗೂ ಈ ಬಾರಿಯ ಚುನಾವಣೆಯಲ್ಲಿ ನೂತನವಾಗಿ ಪರಿಚಯಿಸಲಾಗುತ್ತಿರುವ ವಿವಿ ಪ್ಯಾಟ್ ಕಾರ್ಯ ನಿರ್ವಹಣೆ ಕುರಿತು ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡಲಾಯಿತು.    ಮತಗಟ್ಟೆಗಳಿಗೆ ನೇಮಕ ಮಾಡಲಾಗಿರುವ ಅಧಿಕಾರಿಗಳಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿವಿಧ ಕೊಠಡಿಗಳಲ್ಲಿ ತರಬೇತಿ ನೀಡಲಾಯಿತು.

ವಿಧಾನಸಭೆ ಚುನಾವಣೆ ನೀತಿ ಸಂಹಿತೆ : ಅಬಕಾರಿ ಅಕ್ರಮಕ್ಕೆ 32 ಜನರ ಬಂಧನ : 05 ಮದ್ಯದಂಗಡಿಗಳ ಲೈಸೆನ್ಸ್ ಅಮಾನತು


ಕೊಪ್ಪಳ ಏ. 22 (ಕ.ವಾ): ವಿಧಾನಸಭಾ ಚುನಾವಣೆ ನಿಮಿತ್ಯ ನೀತಿ ಸಂಹಿತೆ ಜಾರಿಯಲ್ಲಿದೆ.  ಜಿಲ್ಲೆಯಲ್ಲಿ ಈವರೆಗೆ ಅಬಕಾರಿ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಒಟ್ಟು 64 ಪ್ರಕರಣಗಳನ್ನು ದಾಖಲಿಸಿ 32 ಜನರನ್ನು ಬಂಧಿಸಲಾಗಿದ್ದು. ಒಟ್ಟು 05 ಮದ್ಯದ ಅಂಗಡಿಗಳ ಲೈಸೆನ್ಸ್ ಅಮಾನತುಗೊಳಿಸಲಾಗಿದೆ ಎಂದು ಕೊಪ್ಪಳ ಜಿಲ್ಲೆಯ ಅಬಕಾರಿ ಉಪ ಆಯುಕ್ತ ಪ್ರಶಾಂತಕುಮಾರ್ ತಿಳಿಸಿದ್ದಾರೆ.
     ಚುನಾವಣೆ ನಿಮಿತ್ಯ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ.  ಚುನಾವಣೆ ಸಮಯದಲ್ಲಿ ಅಕ್ರಮ ಮದ್ಯ ಸಾಗಾಣಿಕೆ ಬಗ್ಗೆ ತೀವ್ರ ನಿಗಾ ವಹಿಸಲಾಗಿದ್ದು, ಕೊಪ್ಪಳ ಜಿಲ್ಲೆಯಲ್ಲಿ ನೀತಿ ಸಂಹಿತೆ ಜಾರಿಯಾದಾಗಿನಿಂದ ಅಂದರೆ ಮಾ. 27 ರಿಂದ ಇದುವರೆಗೂ ಸುಮಾರು 160 ಕಡೆ ದಾಳಿ ನಡೆಸಲಾಗಿದೆ.  ಈ ಪೈಕಿ ಅಕ್ರಮ ಮದ್ಯ ಸಾಗಾಣಿಕೆಗೆ ಸಂಬಂಧಿಸಿದಂತೆ ತೀವ್ರತರವಾದ 09 ಪ್ರಕರಣಗಳನ್ನು ದಾಖಲಿಸಿದೆ.  ಅಬಕಾರಿ ನಿಯಮಗಳನ್ನು ಉಲ್ಲಂಘಿಸಿದ 32 ಮದ್ಯದಂಗಡಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.  ನಿಯಮ ಉಲ್ಲಂಘಿಸಿ ಸಣ್ಣ ಪುಟ್ಟ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡಿದಂತಹ 23 ಪ್ರಕರಣಗಳನ್ನು ದಾಖಲಿಸಿದೆ.  ಅಕ್ರಮ ಸಾಗಾಣಿಕೆ ಪ್ರಕರಣಗಳಲ್ಲಿ 32 ಜನರನ್ನು ಬಂಧಿಸಿ, 183. 380 ಲೀ. ಅಕ್ರಮ ಮದ್ಯ ಮತ್ತು 26. 850 ಲೀ. ಬಿಯರ್ ವಶಪಡಿಸಿಕೊಳ್ಳಲಾಗಿದೆ.  ಅಲ್ಲದೆ 04 ದ್ವಿಚಕ್ರ ವಾಹನಗಳನ್ನು ಜಪ್ತು ಮಾಡಲಾಗಿದೆ.  ಅಬಕಾರಿ ನಿಯಮಗಳನ್ನು ಉಲ್ಲಂಘಿಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಿಲ್ಲೆಯ ಗಂಗಾವತಿಯಲ್ಲಿ 01, ಕೊಪ್ಪಳ-02, ಕುಕನೂರು- 01 ಹಾಗೂ ಯಲಬುರ್ಗಾದಲ್ಲಿ 01 ಸೇರಿದಂತೆ ಒಟ್ಟು 05 ಸಿ.ಎಲ್-02 ಮದ್ಯದಂಗಡಿಗಳ ಲೈಸೆನ್ಸ್ ಅಮಾನತುಗೊಳಿಸಲಾಗಿದೆ.  
ಅಬಕಾರಿ ಅಕ್ರಮ ಕಂಡುಬಂದಲ್ಲಿ ಮಾಹಿತಿ ನೀಡಿ : ಜಿಲ್ಲೆಯಲ್ಲಿ ಅಕ್ರಮ ಮದ್ಯ ಸಾಗಾಣಿಕೆ ಅಥವಾ ಶೇಖರಣೆ ಬಗ್ಗೆ ಯಾವುದೇ ಮಾಹಿತಿ ಅಥವಾ ದೂರು ಇದ್ದಲ್ಲಿ ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ನೀಡಬಹುದಾಗಿದೆ.  ಪ್ರಶಾಂತಕುಮಾರ್, ಅಬಕಾರಿ ಉಪ ಆಯುಕ್ತರು, ಕೊಪ್ಪಳ- 9449597170, 08539-222002.  ಎಂ.ಎಸ್. ನಾರಾಯಣ ನಾಯ್ಕ್, ಅಬಕಾರಿ ಉಪಾಧೀಕ್ಷಕರು, ಕೊಪ್ಪಳ- 9449597175, 08539-221610.  ಕೊಪ್ಪಳ ತಾಲೂಕು ವ್ಯಾಪ್ತಿಯಲ್ಲಿ ಮಹದೇವ ಪೂಜಾರಿ, ಅಬಕಾರಿ ನಿರೀಕ್ಷಕರು, ಕೊಪ್ಪಳ- 9535479446. ಎಂ.ಎಲ್. ಕಣಬರಕರ, ಅಬಕಾರಿ ಉಪನಿರೀಕ್ಷಕರು- 9902936649.  ಎ.ಎಚ್. ಕೃಷ್ಣಮೂರ್ತಿ, ಅಬಕಾರಿ ನಿರೀಕ್ಷಕರು, ಕೊಪ್ಪಳ- 9880404148, 08539-222384.  ಬಿ.ಎ. ಪಾಂಗೇರಿ, ಅಬಕಾರಿ ಉಪ ನಿರೀಕ್ಷಕರು, ಕೊಪ್ಪಳ- 9481740977.  ಎಂ. ಭವಾನಿ, ಅಬಕಾರಿ ನಿರೀಕ್ಷಕರು, ಕೆ.ಎಸ್.ಬಿ.ಸಿ.ಎಲ್. ಡಿಪೋ, ಗೋಶಾಲಾ ಆವರಣ, ಕಾತರಕಿ ರಸ್ತೆ, ಕೊಪ್ಪಳ- 9845678027.  ಗಂಗಾವತಿ ತಾಲೂಕು ವ್ಯಾಪ್ತಿಯಲ್ಲಿ ಮಹಾದೇವ ಪೂಜಾರಿ, ಅಬಕಾರಿ ನಿರೀಕ್ಷಕರು, ಗಂಗಾವತಿ-9535479446, 08533-230527.  ಎಸ್.ಎಸ್. ಈಶ್ವರಪ್ಪ, ಅಬಕಾರಿ ಉಪ ನಿರೀಕ್ಷಕರು, ಗಂಗಾವತಿ- 9844077032.  ಕುಷ್ಟಗಿ ಮತ್ತು ಯಲಬುರ್ಗಾ ತಾಲೂಕು ವ್ಯಾಪ್ತಿಗೆ ಕೆ. ಸುಷ್ಮಾ, ಅಬಕಾರಿ ನಿರೀಕ್ಷಕರು, ಕುಷ್ಟಗಿ- 9448844650, 08536-267247.  ಬಸವರಾಜ ಎಸ್. ಮುಡಶಿ, ಅಬಕಾರಿ ಉಪ ನಿರೀಕ್ಷಕರು, ಕುಷ್ಟಗಿ- 9241767667.   ಅಬಕಾರಿ ನಿಯಮಗಳ ಉಲ್ಲಂಘನೆ, ಅಕ್ರಮ ಮದ್ಯ ಸಾಗಾಣಿಕೆ ಅಥವಾ ಸಂಗ್ರಹಣೆ ಕುರಿತ ಯಾವುದೇ ಅಕ್ರಮಗಳು ಕಂಡುಬಂದಲ್ಲಿ ಮೇಲೆ ತಿಳಿಸಿದ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ನೀಡಬಹುದಾಗಿದೆ ಎಂದು ಕೊಪ್ಪಳ   ಅಬಕಾರಿ ಉಪ ಆಯುಕ್ತ ಪ್ರಶಾಂತಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Saturday, 21 April 2018

ಕೊಪ್ಪಳ ಜಿಲ್ಲೆ : ಏ. 21 ರ ನಾಮಪತ್ರ ಸಲ್ಲಿಕೆ ವಿವರ

ಕೊಪ್ಪಳ ಜಿಲ್ಲೆ : ಏ. 21 ರ ನಾಮಪತ್ರ ಸಲ್ಲಿಕೆ ವಿವರ

ಮತದಾನ ಜಾಗೃತಿ : ಕೊಪ್ಪಳ ಜಿಲ್ಲೆಗೆ ಗಂಗಾವತಿ ಪ್ರಾಣೇಶ್ ಐಕಾನ್ : ಏ. 26 ರಿಂದ ಜಿಲ್ಲೆಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ


ಕೊಪ್ಪಳ ಏ. 21 (ಕರ್ನಾಟಕ ವಾರ್ತೆ): ರಾಜ್ಯ, ದೇಶ, ವಿದೇಶಗಳಲ್ಲಿ ಪ್ರವಾಸ ಕೈಗೊಂಡು, ತಮ್ಮ ಮಾತುಗಳ ಮೂಲಕವೇ ಜನರನ್ನು ನಗೆಗಡಲಲ್ಲಿ ತೇಲಿಸುವ, ಖ್ಯಾತ ಹಾಸ್ಯ ಸಾಹಿತಿ, ಕಲಾವಿದ ಕೊಪ್ಪಳ ಜಿಲ್ಲೆ ಗಂಗಾವತಿಯ ಪ್ರಾಣೇಶ್ ಅವರು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸಲು ಐಕಾನ್ ಆಗಿ ನೇಮಕಗೊಂಡಿದ್ದಾರೆ.

     ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರಾದ ಜಿ.ಪಂ. ಸಿಇಒ ವೆಂಕಟ್ ರಾಜಾ ಅವರು, ಪ್ರಾಣೇಶ್ ಅವರನ್ನು ಕೊಪ್ಪಳ ಜಿಲ್ಲೆಗೆ ಸಂಬಂಧಿಸಿದಂತೆ ಮತದಾರರ ಜಾಗೃತಿಗೆ ಐಕಾನ್ ಆಗಿ ಆಯ್ಕೆ ಮಾಡಿ, ಅನುಮೋದನೆಗೆ ಚುನಾವಣಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.  ಇದೀಗ, ಚುನಾವಣಾ ಆಯೋಗವು ಈ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದು, ಗಂಗಾವತಿಯ ಪ್ರಾಣೇಶ್ ಅವರು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮತದಾರರಲ್ಲಿ ನೈತಿಕ ಮತದಾನದ ಬಗ್ಗೆ ಹಾಸ್ಯ  ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲು ಜಿಲ್ಲೆಯಾದ್ಯಂತ ಏರ್ಪಡಿಸುವ ಸಮಾರಂಭಗಳಲ್ಲಿ ಪಾಲ್ಗೊಳ್ಳಲಿದ್ದಾರೆ.  ಕಾರ್ಯಕ್ರಮಗಳ ಆಯೋಜನೆ ಕುರಿತಂತೆ ಜಿಲ್ಲಾ ಪಂಚಾಯತಿ ವತಿಯಿಂದ ಕಾರ್ಯಕ್ರಮದ ವೇಳಾಪಟ್ಟಿ ಸಿದ್ಧಪಡಿಸಿದ್ದು, ಕಾರ್ಯಕ್ರಮದ ಸ್ಥಳವನ್ನು ಆಯಾ ತಾಲೂಕಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳೇ ಆಯ್ಕೆ ಮಾಡಲಿದ್ದಾರೆ.
     ಕೊಪ್ಪಳ ಜಿಲ್ಲಾ ಪಂಚಾಯತ ವತಿಯಿಂದ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಸಂಬಂಧಿಸಿದಂತೆ ನಗರ, ಪಟ್ಟಣ ಮತ್ತು ಗ್ರಾಮೀಣ ಭಾಗದ ಜನರಲ್ಲಿ ಮತದಾನದ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಏ. 26 ರಿಂದ ಜಿಲ್ಲೆಯಲ್ಲಿ ಆಯೋಜಿಸಲಾಗಿದೆ.  ಏ. 26 ರಂದು ಕೊಪ್ಪಳ ತಾಲೂಕಿನಲ್ಲಿ, ಏ. 28 ರಂದು ಕುಷ್ಟಗಿ ತಾಲೂಕು, ಏ. 30 ರಂದು ಗಂಗಾವತಿ ತಾಲೂಕು, ಮೇ. 02 ರಂದು ಯಲಬುರ್ಗಾ ತಾಲೂಕು, ಮೇ. 07 ರಂದು ಕೊಪ್ಪಳ ನಗರ ಮತ್ತು ಮೇ. 08 ರಂದು ಗಂಗಾವತಿ ನಗರ ಪ್ರದೇಶ ವ್ಯಾಪ್ತಿಯಲ್ಲಿ ಹಾಸ್ಯ ಸಾಹಿತಿ ಗಂಗಾವತಿ ಪ್ರಾಣೇಶ ಅವರಿಂದ ಮತದಾನ ಜಾಗೃತಿ ಕಾರ್ಯಕ್ರಮ ಜರುಗಲಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರಾಗಿರುವ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ತಿಳಿಸಿದ್ದಾರೆ.

ಕುಷ್ಟಗಿ : ಉದ್ಯೋಗಖಾತ್ರಿ ಕೂಲಿಕಾರರಿಗೆ ಮತದಾರರ ಜಾಗೃತಿ

ಕೊಪ್ಪಳ ಏ. 21 (ಕರ್ನಾಟಕ ವಾರ್ತೆ): ವಿಧಾನಸಭಾ ಚುನಾವಣೆಗಾಗಿ ಮೇ. 12 ರಂದು ನಡೆಯುವ ಮತದಾನ ಕಾರ್ಯದಲ್ಲಿ ಎಲ್ಲ ಕೂಲಿ ಕಾರ್ಮಿಕರು ತಪ್ಪದೆ ಪಾಲ್ಗೊಂಡು, ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ ನೈತಿಕವಾಗಿ ಮತದಾನ ಮಾಡಬೇಕು ಎಂದು ಕುಷ್ಟಗಿ ತಾಲೂಕಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಮೋಹನ್ ಅವರು ಮನವಿ ಮಾಡಿಕೊಂಡರು.

     ಕುಷ್ಟಗಿ ತಾಲೂಕು ತಳುವಗೇರಾ ಗ್ರಾಮ ವ್ಯಾಪ್ತಿಯ ನಿಡಶೇಸಿ ಕೆರೆಯಲ್ಲಿ ಉದ್ಯೋಗಖಾತ್ರಿ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದ್ದು, ಕೆರೆ ಹೂಳೆತ್ತುವ ಕೆಲಸದಲ್ಲಿ ನಿರತರಾಗಿದ್ದ ಕೂಲಿ ಕಾರ್ಮಿಕರಿಗೆ ಮತದಾನ ಜಾಗೃತಿ ಮೂಡಿಸಲಾಯಿತು.  ಕುಷ್ಟಗಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಮೋಹನ್ ಅವರು ಮಾತನಾಡಿ, ಮೇ. 12 ರಂದು ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದ್ದು, ಅಂದು ಎಲ್ಲ ಮತದಾರರು ತಪ್ಪದೆ ಮತದಾನ ಮಾಡಬೇಕು.  ಮತದಾನಕ್ಕಾಗಿ ಕೆಲವರು ಹಣ, ಮದ್ಯದ ಆಸೆ, ಆಮಿಷವೊಡ್ಡುವ ಸಾಧ್ಯತೆಗಳಿದ್ದು, ಇಂತಹ ಆಮಿಷಗಳಿಗೆ ಯಾರೂ ಒಳಗಾಗಬಾರದು.  ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ಇರುವ ಏಕೈಕ ಅಧಿಕಾರ, ಅದು ಮತ ಚಲಾವಣೆಯಾಗಿದ್ದು, ಇಂತಹ ಪವಿತ್ರ ಕಾರ್ಯವಾಗಿರುವ ಮತದಾನವನ್ನು, ತಪ್ಪದೆ ಕೈಗೊಂಡು, ನಮ್ಮ ಕರ್ತವ್ಯವನ್ನು ನಾವು ನಿಭಾಯಿಸಬೇಕು ಎಂದು ಅವರು ಹೇಳಿದರು.


     ಗ್ರಾಮ ಪಂಚಾಯತಿ ಪಿಡಿಒ ಸಂಗನಗೌಡ ಸೇರಿದಂತೆ ತಳುವಗೇರಾ, ನಿಡಶೇಸಿ ಹಾಗೂ ವಣಗೇರಾ ಗ್ರಾಮಗಳ ಸುಮಾರು 1500 ಕೂಲಿ ಕಾರ್ಮಿಕರು ಪಾಲ್ಗೊಂಡಿದ್ದರು.

ವಿಧಾನಸಭೆ ಚುನಾವಣೆಗಳ ಹಿನ್ನೋಟ : ಕೈಪಿಡಿ ಬಿಡುಗಡೆ


ಕೊಪ್ಪಳ ಏ. 21 (ಕರ್ನಾಟಕ ವಾರ್ತೆ) : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕೊಪ್ಪಳ ಇವರಿಂದ ಮಾಧ್ಯಮದವರಿಗಾಗಿ ತಯಾರಿಸಲಾದ ಕೊಪ್ಪಳ ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳ  1957 ರಿಂದ 2013 ರವರೆಗಿನ ಚುನಾವಣಾ ಅಂಕಿ-ಅಂಶ ವಿವರವುಳ್ಳ ಚುನಾವಣೆ ಕೈಪಿಡಿಯನ್ನು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ಶನಿವಾರದಂದು ಬಿಡುಗಡೆಗೊಳಿಸಿದರು.
        1957 ರಿಂದ ಮೊದಲುಗೊಂಡು 2013  ವರೆಗಿನ ಕೊಪ್ಪಳ ಜಿಲ್ಲೆಯ ಎಲ್ಲ 05 ವಿಧಾನಸಭಾ ಕ್ಷೇತ್ರಗಳಲ್ಲಿ ಜರುಗಿದ ಚುನಾವಣೆಗಳಲ್ಲಿನ ಮತದಾರರ ಸಂಖ್ಯೆ, ಮತ ಚಲಾಯಿಸಿದ ಒಟ್ಟು ಮತದಾರರ ಸಂಖ್ಯೆ, ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳು, ಪಕ್ಷ, ಆಯ್ಕೆಯಾದ ಅಭ್ಯರ್ಥಿಗಳು, ಪಡೆದುಕೊಂಡ ಮತಗಳು, ವಿಧಾನಸಭೆ ಕ್ಷೇತ್ರಗಳ ನಕ್ಷೆಗಳು ಹೀಗೆ ಚುನಾವಣೆಗಳ ಸಮಗ್ರ ವಿವರಗಳು ಈ ಚುನಾವಣೆ ಕೈಪಿಡಿಯಲ್ಲಿವೆ.  ಕೈಪಿಡಿಯನ್ನು ಬಿಡುಗಡೆಗೊಳಿಸಿದ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು, ವಿಧಾನಸಭಾ ಕ್ಷೇತ್ರಗಳ ಚುನಾವಣೆಗಳ ಹಿನ್ನೋಟದ ವಿವರಗಳ ಅವಲೋಕನ ನಡೆಸಿ, ಜಿಲ್ಲಾ ವಾರ್ತಾಧಿಕಾರಿಗಳು ಪ್ರಕಟಿಸಿರುವ ಈ ಕೈಪಿಡಿಯು ನಿಜಕ್ಕೂ ಸಂಗ್ರಹಯೋಗ್ಯ ಕೈಪಿಡಿಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. 
     ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ., ಜಿಲ್ಲಾ ಚುನಾವಣಾ ಶಾಖೆಯ ನಾಗರಾಜ್ ಪಾಲ್ಗೊಂಡಿದ್ದರು. 

ಏ. 30 ರಿಂದ ಹುಲಿಗೆಮ್ಮ ದೇವಿ ಜಾತ್ರೆ : ಮೇ. 09 ರಂದು ಮಹಾರಥೋತ್ಸವ: ಅಗತ್ಯ ಸಿದ್ದತೆಗೆ ಜಿಲ್ಲಾಧಿಕಾರಿ ಕನಗವಲ್ಲಿ ಸೂಚನೆ


ಕೊಪ್ಪಳ ಏ. 21 (ಕರ್ನಾಟಕ ವಾರ್ತೆ): ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಕೊಪ್ಪಳ ತಾಲೂಕಿನ ಹುಲಿಗಿಯ ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳು ಏ. 30 ರಿಂದ ಆರಂಭವಾಗಲಿದ್ದು, ಸ್ವಚ್ಛತೆ ಶುದ್ಧ ಕುಡಿಯುವ ನೀರು ಪೂರೈಕೆ, ವಿದ್ಯುತ್ ವ್ಯವಸ್ಥೆ ಹಾಗೂ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. 
 
    ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವ ಸಿದ್ಧತೆ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರದಂದು ಏರ್ಪಡಿಸಲಾಗಿದ್ದ  ಪೂರ್ವಭಾವಿ  ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
 
    ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿಯ ಜಾತ್ರಾ ಮಹೋತ್ಸವ ಕಾರ್ಯಕ್ರಗಳು ಏ. 30 ರಿಂದ ಮೇ. 11 ರವರೆಗೆ ಜರುಗಲಿದ್ದು, ಪ್ರತಿ ವರ್ಷದಂತೆ ಈ ವರ್ಷವು ಸಹ ವಿಜೃಂಭಣೆಯಿಂದ ನಡೆಯಲಿದೆ.  ದೇವಸ್ಥಾನಕ್ಕೆ ವಿದ್ಯುತ್ ಅಲಂಕಾರ ಮತ್ತು ಬೆಳಕಿನ ವ್ಯವಸ್ಥೆ ಕೈಗೊಳ್ಳಬೇಕು.  ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತಾದಿಗಳಿಗೆ ಶುದ್ಧ ಕುಡಿಯುವ ನೀರು, ನೆರಳಿನ ವ್ಯವಸ್ಥೆ ಹಾಗೂ ಸರ್ಮಪಕ ವಿದ್ಯುತ್ ಕಲ್ಪಿಸಬೇಕು.  ಯಾವುದೇ ತೊಂದರೆಯಾಗದಂತೆ ಬಿಗಿ ಪೆÇಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಬೇಕು.  ಸಾರ್ವಜನಿಕರಿಗೆ ತೊಂದರೆಯಾಗದಂತೆ ವಾಹನಗಳಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು.  ಜಾತ್ರೆ ಸಂದರ್ಭದಲ್ಲಿ ಪ್ರಾಣಿಬಲಿ ಕೊಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಈ ಕುರಿತು ಎಚ್ಚರಿಕೆಯ ಸೂಚನಾ ಫಲಕಗಳನ್ನು ಅಳವಡಿಸಬೇಕು.  ಜಾತ್ರಾ ಸಂದರ್ಭದಲ್ಲಿ ಸುಮಾರು ಒಂದು ತಿಂಗಳುಗಳ ಕಾಲ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಲಿದ್ದು, ಆರೋಗ್ಯದ ಹಿತದೃಷ್ಟಿಯಿಂದ ಹುಲಿಗಿಯಲ್ಲಿ ಆರೋಗ್ಯ ಇಲಾಖೆಯು ಹೆಚ್ಚುವರಿ ವೈದ್ಯರು ಮತ್ತು ಸಿಬ್ಬಂದಿಗಳನ್ನು ನಿಯೋಜಿಸಬೇಕು.  ಜಾತ್ರಾ ಸಮಯದಲ್ಲಿ ಮದ್ಯಪಾನವನ್ನು ನಿಷೇಧಿಸಲಾಗಿದೆ.  ಜಾತ್ರೆಗೆ ವಿವಿಧೆಡೆಯಿಂದ ಆಗಮಿಸಲಿರುವ ಭಕ್ತಾಧಿಗಳ ಅನುಕೂಲಕ್ಕಾಗಿ ವಿಶೇಷ ಬಸ್‍ಗಳ ವ್ಯವಸ್ಥೆಯನ್ನು ಮಾಡಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ  ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.   
    ಹುಲಿಗೆಮ್ಮ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್.ಚಂದ್ರಮೌಳಿ ಅವರು ಮಾತನಾಡಿ, ಜಾತ್ರೆಯ ಸಂದರ್ಭದಲ್ಲಿ ನಿರಂತರ ವಿದ್ಯುತ್ ಸರಬರಾಜಿಗೆ ಅಗತ್ಯ ವ್ಯವಸ್ಥೆ ಕೈಗೊಳ್ಳಬೇಕು.  ಸ್ವಾಗತ ಕಮಾನಿನಿಂದ ದೇವಸ್ಥಾನದ ವರೆಗಿನ ಅಂಗಡಿ ಮುಗ್ಗಟ್ಟುಗಳನ್ನು ರಸ್ತೆಯ ಮೇಲೆ ಇಡದಂತೆ ಕ್ರಮ ಕೈಗೊಳ್ಳಬೇಕು.  ಅಗ್ನಿ ಶಾಮಕ ವಾಹನವನ್ನು ಜಾತ್ರಾ ಅವಧಿಯಲ್ಲಿ ಕ್ಷೇತ್ರದಲ್ಲಿ ಕಾಯ್ದಿರಿಸಬೇಕು.  ಜಾತ್ರೆ ಸಂದರ್ಭದಲ್ಲಿ ಕುಡಿಯುವ ನೀರಿಗಾಗಿ ತುಂಗಭದ್ರ ಜಲಾಶಯದಿಂದ ನದಿಗೆ ನೀರು ಹರಿಸುವುದು ಅಗತ್ಯವಾಗಿದೆ ಅಲ್ಲದೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಬೇಕಾಗಿದೆ ಎಂದು ಮನವಿ ಮಾಡಿದರು.  ದೇವಾಲಯ ಆವರಣದಲ್ಲಿ ಭಕ್ತಾದಿಗಳಿಗೆ ತಾತ್ಕಾಲಿಕವಾಗಿ ನೆರಳಿನ ವ್ಯವಸ್ಥೆ ಮಾಡಲಾಗುವುದು.  ಹೊಸದಾಗಿ ಖರೀದಿಸಲಾಗಿರುವ ಜಮೀನಿನಲ್ಲಿ ಗಿಡಗಂಟೆಗಳನ್ನು ಸ್ವಚ್ಛಗೊಳಿಸಿ, ಬೆಳಕಿಗಾಗಿ ಟವರ್‍ಲೈಟ್‍ಗಳನ್ನು ಅಳವಡಿಸಲಾಗುವುದು.  ಭಕ್ತಾದಿಗಳಿಗಾಗಿ ತಾತ್ಕಾಲಿಕ ಸಾಮೂಹಿಕ ಸ್ನಾನದ ವ್ಯವಸ್ಥೆಯನ್ನು ಮಾಡಲಾಗುವುದು.  ರಥೋತ್ಸವಕ್ಕಾಗಿ ರಥದ ಸಾಮರ್ಥ್ಯ ಕುರಿತು ಲೋಕೋಪಯೋಗಿ ಇಲಾಖೆಯಿಂದ ಪ್ರಮಾಣ ಪತ್ರ ಪಡೆಯಲಾಗುವುದು ಎಂದರು.
ಧಾರ್ಮಿಕ ಕಾರ್ಯಕ್ರಮಗಳ ವಿವರ : ಶ್ರೀ ಹುಲಿಗೆಮ್ಮ ದೇವಿಯ ಜಾತ್ರೆಯು ಏ. 30 ರಿಂದ ಮೇ. 11 ರವರೆಗೆ ಜರುಗಲಿದ್ದು, ಕಾರ್ಯಕ್ರಮದ ವಿವರ ಇಂತಿದೆ.  ಏ. 30 ರಂದು ರಾತ್ರಿ 8 ಗಂಟೆಗೆ ಹುಲಿಗೆಮ್ಮ ದೇವಿಯವರಿಗೆ ಕಂಕಣಧಾರಣೆ.  ಮೇ. 08 ರಂದು ಸಂಜೆ 7 ಗಂಟೆಗೆ ಉತ್ಸವ.  ಮೇ. 09 ರಂದು ಅಕ್ಕಿಪಡಿ, ಸಂಜೆ 5-30 ಗಂಟೆಗೆ ಮಹಾರಥೋತ್ಸವ ಜರುಗಲಿದೆ.  ಮೇ. 10 ರಂದು ಬಾಳಿದಂಡಿಗೆ, ಸಂಜೆ 8 ಗಂಟೆಗೆ ಕೊಂಡದ ಪೂಜಾ, ರಾತ್ರಿ 3-30 ಗಂಟೆಗೆ (ಬ್ರಾಹ್ಮೀ ಮುಹೂರ್ತದಲ್ಲಿ) ಗಂಗಾದೇವಿ ಪೂಜಾ, ಬೆಳಗಿನ ಜಾವ 4 ಗಂಟೆಗೆ ಶ್ರೀದೇವಿಗೆ ಪ್ರಸಾದ ಕಟ್ಟುವುದು, ಬೆಳಗಿನ ಜಾವ 4-30 ಕ್ಕೆ ಬಾಳಿದಂಡಿಗೆ ಆರೋಹಣ.  ಮೇ. 11 ರಂದು ಪಾಯಸ ಅಗ್ನಿಕೊಂಡ ಸಂಜೆ 8 ಗಂಟೆಗೆ ಕೊಂಡದ ಪೂಜಾ, ರಾತ್ರಿ 9 ಕ್ಕೆ ಹಿಡಿದಕ್ಷಿಣೆ ವಿತರಣೆ, 9-30 ಕ್ಕೆ ಪಡಗದ ಪೂಜಾ, ಬೆಳಗಿನಜಾವ 4 ಗಂಟೆಗೆ (ಬ್ರಾಹ್ಮೀ ಮುಹೂರ್ತದಲ್ಲಿ) ಗಂಗಾದೇವಿ ಪೂಜಾ, ಬೆಳಗಿನ ಜಾವ 4-30ಕ್ಕೆ ಗಂಟೆಗೆ ಶ್ರೀದೇವಿಗೆ ಪ್ರಸಾದ ಕಟ್ಟುವುದು, ಬೆಳಗಿನ ಜಾವ 5-30 ಗಂಟೆಗೆ ಶ್ರೀದೇವಿಗೆ ಪಾಯಸ ಪ್ರಸಾದ ನಿವೇದನೆ, ಹಾಗೂ ಮೇ. 12 ರಂದು ಬೆಳಿಗ್ಗೆ 6-30 ಗಂಟೆಗೆ (ದ್ವಾದಶಿ ನಸುಕಿನಲ್ಲಿ) ಅಗ್ನಿಕುಂಡ.  ಈ ಬಾರಿ ಜೇಷ್ಠಮಾಸ ಅಧಿಕ ಬಂದಿರುವುದರಿಂದ ನಿಜ ಕಾರಹುಣ್ಣಿಮೆಯ ನಂತರ ಬರುವ ಜುಲೈ. 03 ರಂದು ರಾತ್ರಿ 8 ಗಂಟೆಗೆ ಶ್ರೀದೇವಿಯವರ ಕಂಕಣ ವಿಸರ್ಜನೆ ಮಾಡಲಾಗುವುದು ಎಂದು ಹುಲಿಗೆಮ್ಮ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್.ಚಂದ್ರಮೌಳಿ ಅವರು ತಿಳಿಸಿದರು.  
    ಸಭೆಯಲ್ಲಿ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನುಪ್ ಶೆಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ. ರಾಮಕೃಷ್ಣ ಹೆಚ್., ಹುಲಿಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಫೀವುಲ್ಲಾ ಮುಲ್ಲಾ ಹಾಗೂ ಹುಲಿಗೆಮ್ಮ ದೇವಿ ದೇವಸ್ಥಾನದ ಆಡಳಿತ ಸಮಿತಿ, ಪೊಲೀಸ್ ಇಲಾಖೆ ಸೇರಿದಂತೆ ವಿವಿದ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.  

Friday, 20 April 2018

ಉನ್ನತ ವ್ಯಾಸಂಗಕ್ಕೆ ಆಸಕ್ತಿದಾಯಕ ವಿಷಯ ಆಯ್ಕೆ ಸೂಕ್ತ: ನಿಶಾ ಜೇಮ್ಸ್


ಕೊಪ್ಪಳ ಏ. 20 (ಕರ್ನಾಟಕ ವಾರ್ತೆ) : ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ಆಸಕ್ತಿದಾಯಕ ವಿಷಯವನ್ನು ಆಯ್ಕೆ ಮಾಡಿಕೊಂಡಲ್ಲಿ, ಉನ್ನತ ಶಿಕ್ಷಣ ಸುಲಭ ಮತ್ತು ಅರ್ಥಪೂರ್ಣವಾಗಲಿದೆ ಎಂದು ಮುನಿರಾಬಾದ್‍ನ ಇಂಡಿಯನ್ ರಿಸರ್ವ ಬಟಾಲಿಯನ್ ಕಮಾಂಡೆಂಟ್ ನಿಶಾ ಜೇಮ್ಸ್ ಅವರು ಅಭಿಪ್ರಾಯಪಟ್ಟರು.
  ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ವರ್ಷದ ಬಿ.ಎ., ಬಿ.ಕಾಂ., ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
  ಉನ್ನತ ವ್ಯಾಸಂಗಕ್ಕೆ ನಮಗೆ ಸುಲಭವಾದ ಮತ್ತು ಆಸಕ್ತಿದಾಯಕ ವಿಷಯವನ್ನು ಆಯ್ಕೆ ಮಾಡಿಕೊಂಡು ವಿದ್ಯಾಭ್ಯಾಸ ಮಾಡಿದಲ್ಲಿ, ಯಾವುದೇ ಗೊಂದಲಗಳು ಉಂಟಾಗುವುದಿಲ್ಲ.  ಪದವಿ ನಂತರ ಯಾವ ವಿಷಯ ಅಭ್ಯಾಸ ಮಾಡಬೇಕು ಎಂಬುದನ್ನು ವಿದ್ಯಾರ್ಥಿಗಳು ಮೊದಲೆ ನಿರ್ಧರಿಸಿ, ಅದಕ್ಕೆ ತಕ್ಕಂತೆ ಸಿದ್ಧತೆಗಳನ್ನು ಕೈಗೊಳ್ಳಬೇಕು.  ಪದವಿ ಹಂತದಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳು, ಭವಿಷ್ಯದ ಜೀವನವನ್ನು ರೂಪಿಸಿಕೊಳ್ಳುವ, ನಿರ್ಧಾರಗಳನ್ನು ಕೈಗೊಳ್ಳುವ ಪ್ರಬುದ್ಧತೆ ಬೆಳೆಸಿಕೊಳ್ಳಬೇಕು.  ಮನೆಯಲ್ಲಿ ಮಕ್ಕಳಿಗೆ ಮಾನವೀಯತೆಯ ಮೌಲ್ಯಗಳನ್ನು ಬೆಳೆಸಬೇಕು.  ಮಹಿಳೆಯರು ಸ್ವಾವಲಂಬಿಗಳಾದಾಗ ಮಾತ್ರ, ಉತ್ತಮ ಜೀವನ ಕಟ್ಟಿಕೊಳ್ಳಲು ಸಾಧ್ಯ ಎಂದು ಇಂಡಿಯನ್ ರಿಸರ್ವ ಬಟಾಲಿಯನ್ ಕಮಾಂಡೆಂಟ್ ನಿಶಾ ಜೇಮ್ಸ್ ಅವರು ಹೇಳಿದರು.
  ಕಾಲೇಜಿನ ಪ್ರಾಂಶುಪಾಲರಾದ ಡಾ. ಗಣಪತಿ ಲಮಾಣಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.  ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಹುಲಿಗೆಮ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು.  ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿಯರು ಸಿದ್ಧಪಡಿಸಿದ ಪ್ರಾಯೋಗಿಕ ಪತ್ರಿಕೆ ಮಹಿಳಾ ಮಾಧ್ಯಮ ಮತ್ತು ಕಾಲೇಜಿನ ವಾರ್ಷಿಕ ಸ್ಮರಣ ಸಂಚಿಕೆ ಮಹಿಳಾ ಸಿರಿ ಸಂಚಿಕೆಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.  ಕಾಲೇಜಿನ ವಾರ್ಷಿಕ ವರದಿಯನ್ನು ಡಾ. ನರಸಿಂಹ ಅವರು ಪ್ರಸ್ತುತಪಡಿಸಿದರು.  ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿನಿಯರಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.

ಕುಷ್ಟಗಿಯಲ್ಲಿ ಮತದಾನದ ಜಾಗೃತಿ ಆಟೋ ಚಾಲಕರ ಸಾಥ್


ಕೊಪ್ಪಳ ಏ. 20 (ಕರ್ನಾಟಕ ವಾರ್ತೆ): ವಿಧಾನಸಭಾ ಚುನಾವಣೆ ನಿಮಿತ್ಯ ಮೇ. 12 ರಂದು ಮತದಾನ ನಡೆಯಲಿದ್ದು, ಎಲ್ಲ ಮತದಾರರು ಅಂದು ತಪ್ಪದೆ ಮತದಾನ ಮಾಡಬೇಕು ಎನ್ನುವ ಸಂದೇಶವನ್ನು ನೀಡುವುದರ ಮೂಲಕ ಕುಷ್ಟಗಿ ಪಟ್ಟಣದಲ್ಲಿ ಆಟೋ ಚಾಲಕರು, ಆಟೋ ರ್ಯಾಲಿ ಕೈಗೊಂಡು ಮತ ಜಾಗೃತಿ ಕಾರ್ಯಕ್ರಮಕ್ಕೆ ಸಾಥ್ ನೀಡಿದರು.


  ಮತದಾರರಲ್ಲಿ ನೈತಿಕ ಮತದಾನ ಕುರಿತು ಜಾಗೃತಿ ಮೂಡಿಸಲು ಸ್ವೀಪ್ ಸಮಿತಿಯು ಹಲವು ಕಸರತ್ತು ನಡೆಸುತ್ತಿದ್ದು, ಜನರಲ್ಲಿ ಮತದಾನಕ್ಕೆ ಪ್ರೇರೇಪಿಸಲು ವಿವಿಧ ಬಗೆಯ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.  ಕುಷ್ಟಗಿ ಪಟ್ಟಣದಲ್ಲಿ ಇಂತಹ ಮತ ಜಾಗೃತಿ ಕಾರ್ಯಕ್ರಮಕ್ಕೆ ಆಟೋ ಚಾಲಕರು ಸಾಥ್ ನೀಡಿದ್ದು ವಿಶೇಷವಾಗಿತ್ತು.  ಮತದಾರರ ಜಾಗೃತಿಗಾಗಿ ಆಟೋಗಳಿಗೆ ಮತ ಜಾಗೃತಿಯ ಭಿತ್ತಪತ್ರವನ್ನು ಅಳವಡಿಸಿಕೊಂಡು, ಆಟೋ ರ್ಯಾಲಿ ಕೈಗೊಂಡರು.  ಕುಷ್ಟಗಿಯ ಪೊಲೀಸ್ ಠಾಣೆ ಆವರಣದಲ್ಲಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಡಿ. ಮೋಹನ್ ಹಾಗೂ ಪೊಲೀಸ್ ವೃತ್ತ ನಿರೀಕ್ಷಕ ಸುರೇಶ ತಳವಾರ ಅವರು ಆಟೋ ಜಾಗೃತಿ ರ್ಯಾಲಿಗೆ ಚಾಲನೆ ನೀಡಿದರು.  ಆಟೋ ರ್ಯಾಲಿಯು ಬಸವೇಶ್ವರ ವೃತ್ತ, ಬಸ್ ನಿಲ್ದಾಣ, ಮಲ್ಲಯ್ಯ ವೃತ್ತ, ಮಾರುತಿ ವೃತ್ತ, ಕನಕದಾಸ ವೃತ್ತ, ಮಾರುಕಟ್ಟೆ ರಸ್ತೆ, ಕಾಲೇಜು ರಸ್ತೆ ಮೂಲಕ ತಹಸಿಲ್ದಾರರ ಕಚೇರಿ ಆವರಣವರೆಗೆ ಆಟೋ ರ್ಯಾಲಿ ಸಾಗಿಬಂದಿತು.  ಕುಷ್ಟಗಿ ಕ್ಷೇತ್ರ ಚುನಾವಣಾಧಿಕಾರಿ ಪ್ರಶಾಂತ್ ಅವರು, ಮಾತನಾಡಿ, ಎಲ್ಲ ಮತದಾರರು ಮೇ. 12 ರಂದು ನಡೆಯುವ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು ಮುಂದಾಗಬೇಕು.  ಎಲ್ಲ ಮತದಾರರು ಇತರೆ ಮತದಾರರಿಗೂ ಮತದಾನಕ್ಕಾಗಿ ಪ್ರೇರೇಪಿಸಬೇಕು ಎಂದು ಮನವಿ ಮಾಡಿದರು.

ಕೊಪ್ಪಳ : ಏ. 20 ರಂದು ನಾಮಪತ್ರ ಸಲ್ಲಿಕೆ ವಿವರ

ಕೊಪ್ಪಳ : ಏ. 20 ರಂದು ನಾಮಪತ್ರ ಸಲ್ಲಿಕೆ ವಿವರ

ಆರೋಗ್ಯ ಇಲಾಖೆಯಿಂದ ಕಂದಕೂರು ಗ್ರಾಮದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ


ಕೊಪ್ಪಳ ಏ. 20 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಂದಕೂರು ಗ್ರಾಮದಲ್ಲಿ ಮದನಾದ ಜಾಗೃತಿ ಕಾರ್ಯಕ್ರಮ ಜರುಗಿತು. 
ಸಾರ್ವಜನಿಕರಲ್ಲಿ ಮತದಾನ ಮಹತ್ವದ ಕುರಿತು ತಿಳಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕುಷ್ಟಗಿ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ಹಿರೇಮನ್ನಾಪುರ ಇವರ ಸಹಯೋಗದೊಂದಿಗೆ ಕಂದಕೂರು ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸಲಾಯಿತು. 
ಫ್ರಭಾರಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಅವರು ಮಾತನಾಡಿ, ವಿಧಾನಸಭೆ ಚುನಾವಣೆಯಲ್ಲಿ ಸಂವಿಧಾನ ಬದ್ಧವಾದ ಮತದಾನ ಮಾಡುವುದು ಪ್ರತಿಯೊಬ್ಬ ಭಾರತೀಯರ ಕರ್ತವ್ಯವಾಗಿದೆ.   ಚುನಾವಣೆ ಗುರುತಿನ ಚೀಟಿ ಪಡೆದಿರುವ ಪ್ರತಿಯೊಬ್ಬ ಯುವಕರು ಸಹ ತಮ್ಮ ಹಕ್ಕನ್ನು ಚಲಾಯಿಸಬೇಕು.  ಭಾರತವು ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಪ್ರಜೆಗಳಿಂದಲೇ ಆಯ್ಕೆಯಾದ ಪ್ರಜೆಗಳು ಈ ರಾಷ್ಟ್ರವನ್ನು ಅಭಿವೃಧ್ದಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.  ದೇಶದ ಭವಿಷ್ಯವು ಮತದಾರರ ಕೈಯಲ್ಲಿದ್ದು, ಮೇ. 12 ರಂದು ನೆಡೆಯುವ ಚುನಾವಣೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು.  ಮತ್ತು ನಿಮ್ಮ ಅಕ್ಕ ಪಕ್ಕದವರಿಗೂ ಮತದಾನ ಮಾಡುವಂತೆ ಜಾಗೃತಿ ಮೂಡಿಸಿ.  ಜಿಲ್ಲೆಯಲ್ಲಿ ಶೇ.100 ರಷ್ಟು ಮತದಾನ ಯಶಸ್ವಿಯಾಗಲು ಸಹಕರಿಸಿ ಎಂದರು.   
ಕಂದಕೂರು ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗದವರು, ಕಿರಿಯ ಆರೋಗ್ಯ ಸಹಾಯಕ ನೀಲೇಶ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಪ್ರೇಮಲತಾ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮದ ನಾಗರಿಕರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸಿದರು. 

ಆರೋಗ್ಯ ಇಲಾಖೆಯ ವಿಶೇಷ ವಾಹನದ ಮೂಲಕ ಕನಕೊಪ್ಪದಲ್ಲಿ ಮತದಾನ ಜಾಗೃತಿ


ಕೊಪ್ಪಳ ಏ. 20 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಐ.ಇ.ಸಿ ವಿಶೇಷ ವಾಹನದ ಮೂಲಕ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಂದಕೂರು ಗ್ರಾಮದಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡುವ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಯಿತು.
ಮತದಾನ ಜಾಗೃತಿಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕುಷ್ಟಗಿ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ಚಳಗೇರಾ ಇವರ ಸಹಯೋಗದೊಂದಿಗೆ ಕನಕೊಪ್ಪ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಜಾಗೃತಿ ಕಾರ್ಯಕ್ರಮ ಹಾಗೂ ಮತದಾನ ಮಹತ್ವದ ಕುರಿತು ಸಾರ್ವಜನಿಕರಿಗೆ ಇಲಾಖಾ ಐ.ಇ.ಸಿ ವಾಹನದ ಮೂಲಕ ಜಾಗೃತಿ ಮೂಡಿಸಲಾಯಿತು. 
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶರಣಪ್ಪ ರಾಜೂರು ಮಾತನಾಡಿ, ನಮ್ಮ ಮತ ನಮ್ಮ ಹಕ್ಕು ರಾಜ್ಯದಲ್ಲಿ ಮೇ. 12 ರಂದು ನಡೆಯುವ ವಿಧಾನಸಭೆ  ಚುನಾವಣೆಯಲ್ಲಿ ಎಲ್ಲರೂ ತಪ್ಪದೇ ಮತ ಚಲಾಯಿಸಬೇಕು.  ನಮ್ಮ ದೇಶ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಪ್ರಜೆಗಳಿಂದ ಪ್ರಜೆಗಳಿಗೊಸ್ಕರ ಪ್ರಜೆಗಳು ನೆಡೆಸುವ ಸರ್ಕಾರವನ್ನು ರಚನೆ ಮಾಡಲು ಮತದಾನ ಮಾಡುವುದು ಮತದಾರರ ಕೈಯಲ್ಲಿದೆ.  ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ತಮ್ಮ ಅಮೂಲ್ಯವಾದ ಮತವನ್ನು ಕಡ್ಡಾಯವಾಗಿ ಮಾಡಿ ಪ್ರಜಾಪ್ರಭುತ್ವವನ್ನು ಗೆಲ್ಲಿಸಿ.  ಎಲ್ಲರಲ್ಲಿಯೂ ಮತದಾನದ ಬಗ್ಗೆ ಜಾಗೃತಿ ಮೂಡಿಸಿ ಸುಭದ್ರ ರಾಷ್ಟ್ರವನ್ನಾಗಿಸಿ ಎಂದರು.
ಕನಕೊಪ್ಪ ಗ್ರಾಮದಲ್ಲಿ ಐ.ಇ.ಸಿ ವಾಹನವು ಸಂಚರಿಸಿ ಗ್ರಾಮಸ್ಥರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಯಿತು.  ಫ್ರಭಾರಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ, ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗದವರು, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಬೇಗಂ, ಸ್ತ್ರೀಶಕ್ತಿ ಸಂಘದ ಸದಸ್ಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮದ ನಾಗರಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಗಂಗಾವತಿ : ವಿದ್ಯಾರ್ಥಿನಿಲಯಕ್ಕೆ ಬಾಡಿಗೆ ಕಟ್ಟಡ ಬೇಕಾಗಿದೆ


ಕೊಪ್ಪಳ ಏ. 20 (ಕರ್ನಾಟಕ ವಾರ್ತೆ): ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ ಗಂಗಾವತಿ ನಗರದಲ್ಲಿ ಡಿ. ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಸೂಕ್ತವಾದ ಕಟ್ಟಡ ಬಾಡಿಗೆ ಆಧಾರದಲ್ಲಿ ಬೇಕಾಗಿದೆ.
     ಗಂಗಾವತಿ ನಗರದಲ್ಲಿ ವಿದ್ಯಾರ್ಥಿ ನಿಲಯಕ್ಕೆ ಸರ್ಕಾರಿ ಕಟ್ಟಡ ಲಭ್ಯವಿಲ್ಲದ ಕಾರಣದಿಂದ ಖಾಸಗಿ ಕಟ್ಟಡದಲ್ಲಿ ನಡೆಸಬೇಕಿರುತ್ತದೆ.  ಸುಮಾರು 175 ವಿದ್ಯಾರ್ಥಿಗಳ ವಾಸಕ್ಕೆ ಯೋಗ್ಯವಿರುವ ಕನಿಷ್ಟ 60*40 ಅಡಿ ಅಳತೆ ವ್ಯಾಪ್ತಿಯಲ್ಲಿ ಮೂರು ಮಹಡಿಯ ಕಟ್ಟಡವನ್ನು ಬಾಡಿಗೆ ಆಧಾರದ ಮೇಲೆ ನೀಡಬಯಸುವವರು ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳು, ಗಂಗಾವತಿ, ಮೊಬೈಲ್ ಸಂಖ್ಯೆ: 9901580622 ಕ್ಕೆ ಮೇ. 05 ರೊಳಗಾಗಿ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಕೊಪ್ಪಳ : ಏ. 22 ರಂದು ಲೋಕ್ ಅದಾಲತ್


ಕೊಪ್ಪಳ ಏ. 20 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲೆಯಲ್ಲಿ ಏ. 22 ರಂದು ರಾಷ್ಟ್ರೀಯ ಲೋಕ ಅದಾಲತ್ ಜರುಗಲಿದೆ ಎಂದು ಕೊಪ್ಪಳ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ರಾಜೀವ್ ಜಿ. ಜೋಶಿ ಅವರು ತಿಳಿಸಿದ್ದಾರೆ.
     ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಏ. 22 ರಂದು ಲೋಕ ಅದಾಲತ್ ನಡೆಸಲು ನಿಗದಿಪಡಿಸಲಾಗಿದೆ.  ಕೊಪ್ಪಳ ಜಿಲ್ಲೆಯ ಕೊಪ್ಪಳ, ಗಂಗಾವತಿ, ಕುಷ್ಟಗಿ ಮತ್ತು ಯಲಬುರ್ಗಾ ನ್ಯಾಯಾಲಯಗಳಲ್ಲಿ ಚಾಲ್ತಿ ಇರುವ ಪ್ರಕರಣಗಳು, ಮೋಟಾರು ವಾಹನ ಅಪಘಾತ ಪರಿಹಾರದ ಪ್ರಕರಣಗಳು, ಅಸಲು ದಾವೆಗಳು, ಬ್ಯಾಂಕುಗಳಿಗೆ ಸಂಬಂಧಿಸಿದ ಪ್ರಕರಣಗಳು, ಭೂಸ್ವಾಧೀನ ಪ್ರಕರಣಗಳು, ವೈವಾಹಿಕ ಹಾಗೂ ಜೀವನಾಂಶ ಪ್ರಕರಣಗಳು, ಕಾನೂನಿನನ್ವಯ ರಾಜಿ ಆಗಬಹುದಾದ ಕ್ರಿಮಿನಲ್ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು ಹಾಗೂ ಇನ್ನೂ ನ್ಯಾಯಾಲಯಕ್ಕೆ ದಾಖಲಿಸದೇ ಇರುವ ವ್ಯಾಜ್ಯಪೂರ್ವ ಪ್ರಕರಣಗಳು ಹೀಗೆ ರಾಜಿ ಆಗಬಹುದಾದ ಎಲ್ಲ ತರಹದ ಪ್ರಕರಣಗಳನ್ನು ಏ. 22 ರ ಭಾನುವಾರದಂದು ಆಯಾ ನ್ಯಾಯಾಲಯಗಳಲ್ಲಿ ಇತ್ಯರ್ಥಪಡಿಸಿಕೊಳ್ಳಲು ರಾಷ್ಟ್ರೀಯ ಲೋಕ್ ಅದಾಲತ್ ಅನ್ನು ಏರ್ಪಡಿಸಲಾಗಿದೆ.  ಕಕ್ಷಿದಾರರು, ಸಾರ್ವಜನಿಕರು ಇದರ ಸದುಪಯೋಗ ಪಡೆಸಿಕೊಳ್ಳಬೇಕು ಎಂದು ಕೊಪ್ಪಳ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ರಾಜೀವ್ ಜಿ. ಜೋಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Thursday, 19 April 2018

ಕೊಪ್ಪಳ ಜಿಲ್ಲೆ : ಏ. 19 ರ ನಾಮಪತ್ರ ಸಲ್ಲಿಕೆ ವಿವರ

ಕೊಪ್ಪಳ ಜಿಲ್ಲೆ : ಏ. 19 ರ ನಾಮಪತ್ರ ಸಲ್ಲಿಕೆ ವಿವರ

ಮುಕ್ತ, ನ್ಯಾಯಸಮ್ಮತ ಚುನಾವಣೆ: ವೀಕ್ಷಕರಿಗೆ ಮನವರಿಕೆ ಮಾಡಿಕೊಟ್ಟ ಡಿ.ಸಿ.


ಕೊಪ್ಪಳ ಏ. 19 (ಕರ್ನಾಟಕ ವಾರ್ತೆ) : ಪ್ರಸಕ್ತ ವಿಧಾನಸಭಾ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಚುನಾವಣಾ ವೀಕ್ಷಕರಿಗೆ ಮನವರಿಕೆ ಮಾಡಿಕೊಟ್ಟರು.

      ಚುನಾವಣೆ ನಡೆಸುವ ಸಂಬಂಧ ಕೈಗೊಂಡಿರುವ ಕ್ರಮಗಳ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಕೊಪ್ಪಳ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳ ಚುನಾವಣಾ ವೆಚ್ಚ ವೀಕ್ಷಕರೊಂದಿಗೆ ನಡೆಸಿದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

     ವಿಧಾನಸಭಾ ಚುನಾವಣೆಯನ್ನು ನಿಸ್ಪಕ್ಷಪಾತ ಹಾಗೂ ಮುಕ್ತವಾಗಿ, ಶಾಂತಿಯಿಂದ ಜರುಗಿಸಲು ಅಗತ್ಯ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ಪತ್ತೆಹಚ್ಚಲು ಸೆಕ್ಟರ್ ಅಧಿಕಾರಿಗಳನ್ನು ಹಾಗೂ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 06 ತಂಡಗಳಂತೆ ಫ್ಲೈಯಿಂಗ್ ಸ್ಕ್ವಾಡ್‍ಗಳನ್ನು ನೇಮಕ ಮಾಡಲಾಗಿದೆ.  ಅಲ್ಲದೆ ಪ್ರತಿ ಫ್ಲೈಯಿಂಗ್ ಸ್ಕ್ವಾಡ್‍ತಂಡದಲ್ಲಿ ವಿಡಿಯೋ ಸರ್ವೆಲನ್ಸ್ ತಂಡ ಸಹ ಕಾರ್ಯನಿರ್ವಹಿಸಿ, ವಿವಿಧ ಅಕ್ರಮಗಳ ಬಗ್ಗೆ ವಿಡಿಯೋ ಚಿತ್ರೀಕರಣ ನಡೆಸಲಿದೆ.  ಈ ವಿಡಿಯೋ ಚಿತ್ರಗಳನ್ನು ವೀಕ್ಷಿಸಿ, ವರದಿ ಸಲ್ಲಿಸಲು ವಿಡಿಯೋ ವೀಕ್ಷಣಾ ತಂಡವನ್ನು ಸಹ ರಚಿಸಲಾಗಿದೆ.  ಯಾವುದೇ ಕಾರಣಕ್ಕೂ ಮದ್ಯ ಹಾಗೂ ಹಣ ಹಂಚಿಕೆ ಪ್ರಕರಣಗಳು ನಡೆಯದಂತೆ ಅಗತ್ಯ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.  ಜಿಲ್ಲೆಯ ಗಡಿ ಭಾಗಗಳಿಂದ ಕ್ಷೇತ್ರ ವ್ಯಾಪ್ತಿಯಲ್ಲಿ ಹಣ, ಮದ್ಯ ಹಾಗೂ ಇತರೆ ಸಾಮಗ್ರಿಗಳು ಬರುವ ಸಾಧ್ಯತೆಗಳಿದ್ದು, ಈ ನಿಟ್ಟಿನಲ್ಲಿ ಪ್ರಮುಖ ಸ್ಥಳಗಳಲ್ಲಿ ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಲಾಗಿದೆ.  ಎಲ್ಲ ಬಗೆಯ ವಾಹನಗಳನ್ನೂ ಪರಿಶೀಲಿಸಲಾಗುತ್ತಿದ್ದು, ಕೃಷಿ ಉತ್ಪನ್ನಗಳ ಸಾಗಾಣಿಕೆ ವಾಹನಗಳನ್ನೂ ಕೂಡ ಚೆಕ್ ಮಾಡಲಾಗುತ್ತಿದೆ.   ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಹಣ ಹಾಗೂ ಮದ್ಯ, ಇನ್ನಿತರೆ ಸಾಮಗ್ರಿ ಹಂಚಿಕೆ ತಡೆಗಟ್ಟಲು ಹೆಚ್ಚಿನ ನಿಗಾ ವಹಿಸಲಾಗುತ್ತಿದೆ.  ಅಬಕಾರಿ ಇಲಾಖೆಯವರು ಅಕ್ರಮ ಮದ್ಯ ಸಾಗಾಣಿಕೆಯನ್ನು ಪತ್ತೆ ಹಚ್ಚಲು  ಹೆಚ್ಚಿನ ನಿಗಾ ವಹಿಸಿದ್ದು, ಅಬಕಾರಿ ಇಲಾಖೆ ಹಾಗೂ ಪೊಲೀಸ್  ಸಮನ್ವಯತೆಯಿಂದ ಕಾರ್ಯ ನಿರ್ವಹಿಸುತ್ತಿವೆ.  ಜಿಲ್ಲೆಯ ಬ್ಯಾಂಕರ್ಸ್‍ಗಳ ಸಭೆ ಕೈಗೊಂಡು, 01 ಲಕ್ಷ ರೂ. ಗೂ ಹೆಚ್ಚಿನ ಶಂಕಾಸ್ಪದ ಹಣದ ವ್ಯವಹಾರಗಳ ಕುರಿತು ದಿನನಿತ್ಯ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.   
     ಕುಷ್ಟಗಿ ಹಾಗೂ ಯಲಬುರ್ಗಾ ಕ್ಷೇತ್ರಗಳ ಚುನಾವಣಾ ವೆಚ್ಚ ವೀಕ್ಷಕ ಮನಿಶ್ ಅವರು ಮಾತನಾಡಿ, ಜಿಲ್ಲೆಯ ಎಟಿಎಂ ಗಳಲ್ಲಿ ಹಣ ಇಲ್ಲ ಎಂಬುದಾಗಿ ಮಾಧ್ಯಮಗಳಲ್ಲಿ ವರದಿ ಬರುತ್ತಿದ್ದು, ಎಟಿಎಂ ಗಳಲ್ಲಿ ಹಣ ಇಲ್ಲ ಎಂದಾದರೆ, ಹೆಚ್ಚಿನ ಮೊತ್ತದ ಹಣ ಮನೆಗಳಲ್ಲಿ ಸಂಗ್ರಹಣೆಯಾಗುತ್ತಿದೆ ಎಂಬ ಶಂಕೆ ಮೂಡುತ್ತದೆ.  01 ಲಕ್ಷ ರೂ. ಮೀರಿದ ಶಂಕಾಸ್ಪದ ವ್ಯವಹಾರಗಳ ವಿವರಗಳ ಬಗ್ಗೆ ಮಾತ್ರ ಮಾಹಿತಿ ಸಂಗ್ರಹಿಸದರೆ ಸಾಲದು, ಸತತವಾಗಿ ಪದೇ ಪದೇ ಹಣ ಡ್ರಾ ಮಾಡುತ್ತಿರುವವರ ಬಗ್ಗೆಯೂ ಮಾಹಿತಿ ಸಂಗ್ರಹಣೆ ಹಾಗೂ ವರದಿ ಚುನಾವಣಾಧಿಕಾರಿಗಳಿಗೆ ಲಭ್ಯವಾಗಬೇಕು ಎಂದರು.   
       ಕೊಪ್ಪಳ ಕ್ಷೇತ್ರದ ಚುನಾವಣಾ ವೆಚ್ಚ ವೀಕ್ಷಕ ನೀರಜ್ ಕುಮಾರ್ ಅವರು ಮಾತನಾಡಿ, ಅಕ್ರಮ ಮದ್ಯ ಸಾಗಾಣಿಕೆ ಅಥವಾ ಸಂಗ್ರಹಣೆ ಕುರಿತು ತೀವ್ರ ನಿಗಾ ವಹಿಸಬೇಕು.  ಚೆಕ್ ಪೋಸ್ಟ್‍ಗಳಲ್ಲಿ ಈ ಬಗ್ಗೆ ತಪಾಸಣೆ ಸಮರ್ಪಕವಾಗಿ ಆಗಬೇಕು ಎಂದರು.
     ಗಂಗಾವತಿ ಮತ್ತು ಯಲಬುರ್ಗಾ ಕ್ಷೇತ್ರಗಳ  ಚುನಾವಣಾ ವೆಚ್ಚ ವೀಕ್ಷಕ ಮಹಮ್ಮದ್ ಇರ್ಫಾನ್ ಅಜೀಜ್ ಅವರು, ಕ್ಷೇತ್ರಗಳಲ್ಲಿ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸಲು ಎಲ್ಲ ಅಧಿಕಾರಿ, ಸಿಬ್ಬಂದಿಗಳು ಹಾಗೂ ಸೆಕ್ಟರ್ ಮತ್ತು ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ನಿಷ್ಠೆಯಿಂದ ಕಾರ್ಯ ನಿರ್ವಹಿಸಬೇಕಿದೆ ಎಂದರು.
     ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್ ಶೆಟ್ಟಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಅಬಕಾರಿ ಉಪ ಅಧೀಕ್ಷಕ ನಾರಾಯಣ ನಾಯ್ಕ, ಚುನಾವಣಾ ವೆಚ್ಚ ನೋಡಲ್ ಅಧಿಕಾರಿ ವಾಗೀಶ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ರಾಷ್ಟ್ರೀಯ ಆರೋಗ್ಯ ಗುಣಮಟ್ಟ ಖಾತ್ರಿ ಪ್ರಮಾಣ ಪತ್ರ


ಕೊಪ್ಪಳ ಏ. 19 (ಕರ್ನಾಟಕ ವಾರ್ತೆ): ಕೇಂದ್ರ ಸರ್ಕಾರದ ರಾಷ್ಟ್ರೀಯ ಆರೋಗ್ಯ ಗುಣಮಟ್ಟ ಖಾತ್ರಿ ಯೋಜನೆಯ ಅಡಿಯಲ್ಲಿ ಕೊಪ್ಪಳ ಜಿಲ್ಲಾ ಆಸ್ಪತ್ರೆಯು ಎಂಟು ವಿಭಾಗಗಳಲ್ಲಿ ರಾಷ್ಟ್ರೀಯ ಆರೋಗ್ಯ ಗುಣಮಟ್ಟ ಖಾತ್ರಿ ಪ್ರಮಾಣ ಪತ್ರವನ್ನು ಪಡೆದಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ದಾನರೆಡ್ಡಿ ಅವರು ತಿಳಿಸಿದ್ದಾರೆ.
    ಕೊಪ್ಪಳ ಜಿಲ್ಲಾ ಆಸ್ಪತ್ರೆಯ ಹೆರಿಗೆ ಕೊಠಡಿ, ಪ್ರಸವಾ ನಂತರದ ಕೊಠಡಿ, ಕುಟುಂಬ ಕಲ್ಯಾಣ ಸೇವೆಗಳು, ರಕ್ತ ಭಂಡಾರ, ಓ.ಟಿ. ಐ.ಸಿ.ಯು., ಮಕ್ಕಳ ವಾರ್ಡ, ನವಜಾತ ಶಿಶುಗಳ ತೀವ್ರ ನಿಗಾ ಘಟಕ ಈ ಎಂಟು ವಿಭಾಗಗಳಿಗೆ "ರಾಷ್ಟ್ರೀಯ ಆರೋಗ್ಯ ಗುಣಮಟ್ಟ ಖಾತ್ರಿ ಪ್ರಮಾಣ ಪತ್ರ" ಲಭಿಸಿದೆ.    
    ಕೇಂದ್ರ ಸರ್ಕಾರವು 2013ನೇ ಸಾಲಿನಲ್ಲಿ ರಾಷ್ಟ್ರೀಯ ಆರೋಗ್ಯ ಗುಣಮಟ್ಟ ಖಾತ್ರಿ ಯೋಜನೆಯನ್ನು ಪ್ರಾರಂಭಿಸಿದ್ದು, ಈ ಕಾರ್ಯಕ್ರಮದ ಅಡಿಯಲ್ಲಿ ರಾಷ್ಟ್ರೀಯ ಆರೋಗ್ಯ ಗುಣಮಟ್ಟ ಖಾತ್ರಿ ಮಾನದಂಡಗಳನ್ನು ನಿಗದಿಪಡಿಸಿ ಅದರಲ್ಲಿ ಕನಿಷ್ಠ 70 ಕ್ಕಿಂತ ಹೆಚ್ಚು ಅಂಕ ಪಡೆದು ಕೊಳ್ಳುವ ಆಸ್ಪತ್ರೆಗಳಿಗೆ ಪ್ರಮಾಣ ಪತ್ರವನ್ನು ನೀಡುತ್ತದೆ.  ಯೋಜನೆಯಲ್ಲಿ ಹೆರಿಗೆ ಕೊಠಡಿ, ಪ್ರಸವಾ ನಂತರದ ಕೊಠಡಿ, ಕುಟುಂಬ ಕಲ್ಯಾಣ ಸೇವೆಗಳು, ರಕ್ತ, ಬಂಢಾರ, ಓ.ಟಿ. ಐ.ಸಿ.ಯು., ಮಕ್ಕಳ ವಾರ್ಡ, ನವಜಾತ ಶಿಶುಗಳ ತೀವ್ರ ನಿಗಾ ಘಟಕ, ಈ ವಿಭಾಗಗಳು ಕೇಂದ್ರ ಸರ್ಕಾರದ ಮೌಲ್ಯಮಾಪನವನ್ನು ಹೊಂದಿದ್ದು, ಪ್ರತಿ ವಿಭಾಗದಲ್ಲೂ ಸರ್ವಿಸ್ ಪ್ರೊವಿಜನ್, ಪೇಶೆಂಟ್ ರೈಟ್ಸ್, ಇನ್‍ಪುಟ್ಸ್, ಸಪೋರ್ಟ್ ಸರ್ವಿಸಸ್, ಕ್ಲಿನಿಕಲ್ ಸರ್ವಿಸಸ್, ಇನ್‍ಫೆಕ್ಷನ್ ಕಂಟ್ರೋಲ್, ಕ್ವಾಲಿಟಿ ಮ್ಯಾನೇಜ್‍ಮೆಂಟ್ ಮತ್ತು ಔಟ್‍ಕಮ್ ಎಂಬ ವಿವಿಧ ಉಪ ವಿಭಾಗಗಳಿದ್ದು, ಎಲ್ಲಾ ವಿಭಾಗಗಳಲ್ಲಿಯೂ 70 ಕ್ಕಿಂತ ಹೆಚ್ಚು ಅಂಕಗಳನ್ನು ತೆಗೆದುಕೊಳ್ಳಬೇಕಿರುತ್ತದೆ.  ಕೊಪ್ಪಳ ಜಿಲ್ಲಾ ಆಸ್ಪತ್ರೆಯು ಶೇ.92 ಅಂಕಗಳೊಂದಿಗೆ ಪ್ರಮಾಣ ಪತ್ರವನ್ನು ಕೇಂದ್ರ ಸರ್ಕಾರದಿಂದ ಪಡೆದಿದೆ.  ಪ್ರಸಕ್ತ ಸಾಲಿನಲ್ಲಿ ಇನ್ನುಳಿದ ಹತ್ತು ವಿಭಾಗಗಳಿಗೆ ಪ್ರಮಾಣ ಪತ್ರವನ್ನು ಜಿಲ್ಲಾ ಆಸ್ಪತ್ರೆಯು ಪಡೆಯಲಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ದಾನರೆಡ್ಡಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
    ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಕೇಂದ್ರ ಸರ್ಕಾರದ ರಾಷ್ಟ್ರೀಯ ಆರೋಗ್ಯ ಗುಣಮಟ್ಟ ಖಾತ್ರಿ ಪ್ರಮಾಣ ಪತ್ರ ಪಡೆದಿದ್ದು, ಕಿಮ್ಸ್ ನಿರ್ದೇಶಕರು ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕರು ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ಶಿಶು ಅಭಿವೃದ್ಧಿ ಯೋಜನೆಯ ವಿವಿಧ ಅಂಗನವಾಡಿ ಕೇಂದ್ರಗಳಲ್ಲಿ ಮತದಾನ ಜಾಗೃತಿ


ಕೊಪ್ಪಳ ಏ. 19 (ಕರ್ನಾಟಕ ವಾರ್ತೆ): ಕೊಪ್ಪಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ದಿ ಯೋಜನೆಯ ಕೊಪ್ಪಳ ನಗರದ ಹಾಗೂ ತಾಲೂಕಿನ ವಿವಿಧ ಅಂಗನವಾಡಿ ಕೇಂದ್ರಗಳಲ್ಲಿ ಮತದಾನ ಜಾಗೃತಿ ಕಾರ್ಯಕ್ರಮಗಳು ಜರುಗಿದವು. 
    ಕೊಪ್ಪಳ ಶಿಶು ಅಭಿವೃದ್ದಿ ಯೋಜನೆಯ ಕೊಪ್ಪಳ ನಗರದ ದೇವರಾಜ ಅರಸ ಕಾಲೋನಿ, ಗಂಜ್ ಏರಿಯಾ, ಕುಂಬಾರ ಓಣಿ, ಸರದಾರಗಲ್ಲಿ, ಕವಲೂರ ಓಣಿ, ಕುರುಬರ ಓಣಿ, ನಿರ್ಮಿತಿ ಕೇಂದ್ರ ಹಾಗೂ ತಾಲೂಕಿನ ಚುಕ್ಕನಕಲ್ ಟಣಕನಕಲ್, ಕಲ್ ತಾವರಗೇರ, ಮತ್ತು ಹಾಲಳ್ಳಿ ಗ್ರಾಮಗಳ ಅಂಗನವಾಡಿ ಕೇಂದ್ರಗಳಲ್ಲಿ ಮತದಾನ ಜಾಗೃತಿಗಾಗಿ ಸ್ವೀಪ್ ಕಾರ್ಯಕ್ರಮಗಳನ್ನು ಮಂಗಳವಾರದಂದು ಆಯೋಜಿಸಲಾಗಿತ್ತು. 
    ನಗರದ ಅಂಗನವಾಡಿ ಕೇಂದ್ರಗಳಲ್ಲಿ ನಡೆದ ಮತದಾನದ ಜಾಗೃತಿ ಶಿಬಿರ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕರಾದ ಬಿ.ಎಸ್ ಕಲಾದಗಿ, ಜಿಲ್ಲಾ ನಿರೂಪಣಾಧಿಕಾರಿ ಮಂಜುನಾಥ, ಶಿಶು ಅಭಿವೃದ್ದಿ ಯೋಜನಾಧಿಕಾರಿ ಸಿಂಧು ಎಲಿಗಾರ್ ಹಾಗೂ ಅಂಗನವಾಡಿ ಮೇಲ್ವಿಚಾರಕಿಯರಾದ ಬಸಮ್ಮ ಹಡಪದ, ಲಕ್ಷ್ಮೀದೇವಿ ರೆಡ್ಡಿ ಉಪಸ್ಥಿತರಿದ್ದರು.  ಎಲ್ಲರೂ ಕಡ್ಡಾಯವಾಗಿ ಮೇ. 12 ರಂದು ನಡೆಯುವ ಚುನಾವಣೆಯಲ್ಲಿ ಮತದಾನ ಮಾಡಬೇಕು.  ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೇ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ, ನಾವು ಮತದಾನ ಮಾಡುವುದರ ಜೊತೆಗೆ ನಮ್ಮ ಅಕ್ಕಪಕ್ಕದ ಮತದಾರೆಲ್ಲರಿಗೂ ಮತದಾನ ಮಾಡುವಂತೆ ತಿಳಿಸಬೇಕು ಎಂದು ತಿಳಿಸಲಾಯಿತು.  
      ಚುಕ್ಕನಕಲ್ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ನಡೆದ ಮತದಾನದ ಜಾಗೃತಿ ಶಿಬಿರ ಕಾರ್ಯಕ್ರಮದಲ್ಲಿ  ಗಾಯತ್ರಿ, ಟಣಕನಕಲ್‍ದಲ್ಲಿ  ಬಸಲಿಂಗಮ್ಮ, ಹಾಗೂ ಕಲ್ ತಾವರಗೇರ ಮತ್ತು ಹಾಲಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಸುಮಂಗಲಾ ಅವರು ಮತದಾನದ ಜಾಗೃತಿ ಕುರಿತು ಮಾಹಿತಿ ನೀಡಿದರು.

ಲಘು ವಾಹನಾ ಚಾಲನಾ ತರಬೇತಿ : ಅರ್ಜಿ ಆಹ್ವಾನ


ಕೊಪ್ಪಳ ಏ. 19 (ಕರ್ನಾಟಕ ವಾರ್ತೆ): ಉತ್ತರಕನ್ನಡ ಜಿಲ್ಲೆ ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟಿ ಸಂಸ್ಥೆಯು ಟಾಟಾ ಮೋಟರ್ಸ್ ಸಹಯೋಗದೊಂದಿಗೆ ಲಘು ವಾಹನ ಚಾಲನಾ ತರಬೇತಿಯನ್ನು ಹಮ್ಮಿಕೊಳ್ಳಲಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಸಿಲಾಗಿದೆ.
    ತರಬೇತಿಯು 30 ದಿನಗಳ ಅವಧಿಯದಾಗಿದ್ದು, ಪ್ರಾಯೋಗಿಕ ಕೌಶಲ್ಯಗಳ ಜೊತೆಗೆ ವ್ಯವಹಾರಿಕ ತಂತ್ರಗಳ ಬಗ್ಗೆಯೂ ಸಹ ನುರಿತ ತರಬೇತುದಾರರಿಂದ ತರಬೇತಿ ನೀಡಲಾಗುವುದು.  ತರಬೇತಿಯು ಊಟ ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿದ್ದು,      20 ರಿಂದ 45 ವರ್ಷ ವಯೋಮಿತಿಯಲ್ಲಿರುವ ಅರ್ಹ ನಿರುದ್ಯೋಗಿ ಯುವಜನತೆ ತರಬೇತಿಯಲ್ಲಿ ಭಾಗವಹಿಸಬಹುದಾಗಿದೆ.  ತರಬೇತಿ ಪಡೆಯಲಿಚ್ಚಿಸುವವರು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ, ಉದ್ಯೋಗ ವಿದ್ಯಾ ನಗರ, ದಾಂಡೇಲಿ ರಸ್ತೆ, ಹಳಿಯಾಳ (ಉತ್ತರ ಕರ್ನಾಟಕ ಜಿಲ್ಲೆ), ಈ ವಿಳಾಸಕ್ಕೆ ಕೂಡಲೇ ಸಂಪರ್ಕಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ದೂರವಾಣಿ ಸಂಖ್ಯೆ 08284-220807, 9483485489, 9482188780 ಕ್ಕೆ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ ವಿವಿಧ ದತ್ತಿನಿಧಿ ಪ್ರಶಸ್ತಿ : ಅರ್ಜಿ ಆಹ್ವಾನ


ಕೊಪ್ಪಳ ಏ. 19 (ಕರ್ನಾಟಕ ವಾರ್ತೆ): ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ 2017 ರಲ್ಲಿ ಪ್ರಕಟವಾದ ಕನ್ನಡ ಪುಸ್ತಕಗಳಿಗೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿರುವ ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
        ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ 2017 ರಲ್ಲಿ ಪ್ರಕಟವಾದ ಕನ್ನಡ ಪುಸ್ತಕಗಳಿಗೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿರುವ ವಿವಿಧ ದತ್ತಿನಿಧಿ ಪ್ರಶಸ್ತಿಗಳ ವಿವರ ಇಂತಿದೆ.  ಮಲ್ಲಿಕಾ ದತ್ತಿ ಪ್ರಶಸ್ತಿ : ಅತ್ಯುತ್ತಮ ಲೇಖಕಿಯರ ಕೃತಿಗೆ ರೂ.500/- ಬಹುಮಾನ ನೀಡಲಾಗುವುದು.  ಹಿರಿಯ-ಕಿರಿಯ ಲೇಖಕಿಯರು ಎಂಬ ವ್ಯತ್ಯಾಸವಿಲ್ಲ.  ಯಾರು ಬೇಕಾದರೂ ಭಾಗವಹಿಸಬಹುದು.  ಸ್ವತಂತ್ರ ಅಥವಾ ಅನುವಾದಿತ ಕೃತಿಯಾದರೂ ಆಗಬಹುದು.  ಅಂತರಾಷ್ಟ್ರೀಯ ಮಹಿಳಾ ವರ್ಷದ ಮಹಿಳಾ ದತ್ತಿ ಪ್ರಶಸ್ತಿ : ಮಹಿಳೆಯರ ಅತ್ಯುತ್ತಮ ಕೃತಿಗೆ ರೂ.500/- ಬಹುಮಾನವನ್ನು ನೀಡಲಾಗುವುದು.  ಸ್ವತಂತ್ರ ಕೃತಿಯಾಗಿರಬೇಕು ಹಾಗೂ ಅನುವಾದ ಕೃತಿಗಳನ್ನಾಗಲೀ, ಪುನರ್ ಮುದ್ರಣಗೊಂಡ ಕೃತಿಗಳನ್ನಾಗಲೀ ಪರಿಗಣಿಸುವುದಿಲ್ಲ.  ಶಾರದಾ ರಾಮಲಿಂಗಪ್ಪ ದತ್ತಿ ಪ್ರಶಸ್ತಿ : ಲೇಖಕಿ ಒಬ್ಬರ ಮಹತ್ವದ ಕೃತಿಗೆ ರೂ.500/- ಬಹುಮಾನ ನೀಡಲಾಗುವುದು.  ಲಲಿತಾದೇವಿ ಗುರುಸಿದ್ದಪ್ಪ ಸಿಂಧೂರ ದತ್ತಿ ಪ್ರಶಸ್ತಿ : ಅತ್ಯುತ್ತಮ ಮಹಿಳಾ ಸಾಹಿತ್ಯದ (ಮಹಿಳೆಯರನ್ನು ಕುರಿತು ಅಥವಾ ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ರಚಿತವಾದ) ಕೃತಿಗೆ ರೂ.500/- ಬಹುಮಾನ ನೀಡಲಾಗುವುದು.  ನೀಲಗಂಗಾ ದತ್ತಿ ಪ್ರಶಸ್ತಿ : ಮಹಿಳೆಯರ ಪ್ರಬಂಧ, ಕವನ, ಕಾವ್ಯ ಮತ್ತು ಸಮಕಾಲಿನ ಮೌಲಿಕ ವಿಚಾರವುಳ್ಳ ಗ್ರಂಥಕ್ಕೆ ರೂ.500/- ಬಹುಮಾನ ನೀಡಲಾಗುವುದು.  ಕೆ.ಎಸ್.ಭಾರತಿ ರಾಜಾರಾಮ್ ಮಧ್ಯಸ್ಥ ಪ್ರಶಸ್ತಿ : ಮಹಿಳೆಯರ ಅತ್ಯುತ್ತಮ ಕಾದಂಬರಿಗೆ ರೂ.500/- ಬಹುಮಾನ ನೀಡಲಾಗುವುದು. ಕೃತಿ ಸ್ವತಂತ್ರವಾಗಿರಬೇಕು ಹಾಗೂ ಅನುವಾದವಾಗಿರಬಾರದು.  ಶಾರದಾ ಆರ್.ರಾವ್ ದತ್ತಿ ಪ್ರಶಸ್ತಿ : ಉದಯೋನ್ಮುಖ ಮಹಿಳಾ ಬರಹಗಾರರ ಅತ್ಯುತ್ತಮ ಕೃತಿಗೆ ರೂ.250/- ಬಹುಮಾನ ನೀಡಲಾಗುವುದು.  ಗೌರಮ್ಮ ಹಾರ್ನಹಳ್ಳಿ ಕೆ.ಮಂಜಪ್ಪ ದತ್ತಿ ಪ್ರಶಸ್ತಿ : ಲೇಖಕಿಯರಿಂದ ರಚಿತವಾದ ಯಾವುದೇ ಪ್ರಕಾರದ ಕೃತಿಗೆ ರೂ.1000/- ಬಹುಮಾನ ನೀಡಲಾಗುವುದು.  ಎಚ್. ಕರಿಯಣ್ಣ ದತ್ತಿ ಪ್ರಶಸ್ತಿ : ಲೇಖಕಿಯರಿಂದ ರಚಿತವಾಗಿರುವ ಮಕ್ಕಳ ಪುಸ್ತಕಕ್ಕೆ ರೂ.500/- ಬಹುಮಾನ ನೀಡಲಾಗುವುದು.
         ಡಾ|| ಎಚ್. ನರಸಿಂಹಯ್ಯ ದತ್ತಿ ಪ್ರಶಸ್ತಿ : ವೈಚಾರಿಕ ಹಾಗೂ ವೈಜ್ಞಾನಿಕ ಮನೋಭಾವಕ್ಕೆ ಸಂಬಂಧಿಸಿದ ಶ್ರೇಷ್ಠ ಕೃತಿಗೆ ರೂ.500/- ಬಹುಮಾನ ನೀಡಲಾಗುವುದು.  ಅಸುಂಡಿ ಹುದ್ದಾರ್ ಕೃಷ್ಣರಾವ್ ಸ್ಮಾರಕ ದತ್ತಿ ಪ್ರಶಸ್ತಿ : ಹರಿದಾಸ ಸಾಹಿತ್ಯ ಕುರಿತ ಕೃತಿಗೆ ರೂ.250/- ಬಹುಮಾನ ನೀಡಲಾಗುವುದು.  ಜಿ.ಪಿ.ರಾಜರತ್ನಂ ಸಂಸ್ಮರಣ ದತ್ತಿ ಪ್ರಶಸ್ತಿ : (ಮಕ್ಕಳ ಪುಸ್ತಕ ಬಹುಮಾನ ಸ್ಪರ್ಧೆ-ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಬರಹಗಾರರಿಗೆ ಮಾತ್ರ ಅವಕಾಶ) ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಬರಹಗಾರರು ಬರೆದಿರುವ ಅತ್ಯುತ್ತಮ ಮಕ್ಕಳ ಪುಸ್ತಕಕ್ಕೆ ರೂ.250/- ಬಹುಮಾನ ನೀಡಲಾಗುವುದು.  (ಪುಸ್ತಕ 15 ವರ್ಷ ವಯಸ್ಸಿನ ಒಳಗಿರುವ ಮಕ್ಕಳು ಓದುವಂತಹ ಕೃತಿ ಯಾಗಿರಬೇಕು).  ಕೆ.ವಿ.ರತ್ನಮ್ಮ ದತ್ತಿ ಪ್ರಶಸ್ತಿ : ಉದಯೋನ್ಮುಖ ಬರಹಗಾರರ ಅತ್ಯುತ್ತಮ ಚೊಚ್ಚಲ ಪದ್ಯಕೃತಿ ಒಂದಕ್ಕೆ ರೂ.500/- ಬಹುಮಾನ ನೀಡಲಾಗುವುದು.  ಸ್ಪರ್ಧೆಯಲ್ಲಿ ಯಾರು ಬೇಕಾದರು ಭಾಗವಹಿಸಬಹುದು.  ರತ್ನಾಕರವರ್ಣಿ-ಮುದ್ದಣ್ಣ-ಅನಾಮಿಕ ದತ್ತಿ ಪ್ರಶಸ್ತಿ : ಅತ್ಯುತ್ತಮ ಗದ್ಯಕೃತಿ ಒಂದಕ್ಕೆ ಹಾಗೂ ಅತ್ಯುತ್ತಮ ಪದ್ಯಕೃತಿ ಒಂದಕ್ಕೆ ತಲಾ 500/-ಬಹುಮಾನ ನೀಡಲಾಗುವುದು. ಸ್ಪರ್ಧೆಯಲ್ಲಿ ಯಾರುಬೇಕಾದರು ಭಾಗವಹಿಸಬಹುದು.  ಪಿ.ಶಾಂತಿಲಾಲ್ ದತ್ತಿ ಪ್ರಶಸ್ತಿ : ಜೈನ ಸಾಹಿತ್ಯ ಕುರಿತ ಯಾವುದೇ ಪ್ರಕಾರದ ಕನ್ನಡ ಪುಸ್ತಕಕ್ಕೆ ರೂ.500/- ಬಹುಮಾನ ನೀಡಲಾಗುವುದು.  ಅಕ್ಕಮ್ಮ ಗಿರಿಗೌಡ ರುದ್ರಪ್ಪ ದತ್ತಿ ಪ್ರಶಸ್ತಿ : ಅತ್ಯುತ್ತಮವಾದ "ಜಾನಪದ ಸಾಹಿತ್ಯ ಕೃತಿ" ಒಂದಕ್ಕೆ ರೂ.500/- ಬಹುಮಾನ ನೀಡಲಾಗುವುದು.  ಜಯಲಕ್ಷ್ಮಮ್ಮ ಬಿ.ಎಸ್. ಸಣ್ಣಯ್ಯ ದತ್ತಿ ಪ್ರಶಸ್ತಿ : ಪ್ರಾಚೀನ ಸಂಪಾದಿತ ಕೃತಿಗೆ ರೂ.1000/- ಬಹುಮಾನ ನೀಡಲಾಗುವುದು. ಸ್ಪರ್ಧೆಯಲ್ಲಿ ಯಾರುಬೇಕಾದರು ಭಾಗವಹಿಸಬಹುದು.  ಕುಂಬಾಸ್ ದತ್ತಿ ಪ್ರಶಸ್ತಿ : ಕನ್ನಡ ಹಾಸ್ಯ ಸಾಹಿತ್ಯ ಕೃತಿಗೆ ರೂ.500/- ಬಹುಮಾನ ನೀಡಲಾಗುವುದು. (ಹಾಸ್ಯ ಸಾಹಿತ್ಯದ ಬಗ್ಗೆ ಬರೆದಿರುವ ಪುಸ್ತಕ, ಲೇಖನ, ಚುಟುಕು ಇತ್ಯಾದಿಗಳ ಬಗ್ಗೆ ವಿವರವಾದ ಪರಿಚಯ ಬರೆದು ಕಳುಹಿಸುವುದು).   ಪೆÇ್ರ|| ಡಿ.ಸಿ. ಅನಂತಸ್ವಾಮಿ ದತ್ತಿ ಪ್ರಶಸ್ತಿ : ಅತ್ಯುತ್ತಮ ಚೊಚ್ಚಲ ಕವನ ಸಂಕಲನಕ್ಕೆ ರೂ.500/- ಬಹುಮಾನ ನೀಡಲಾಗುವುದು.  ಸ್ಪರ್ಧೆಯಲ್ಲಿ ಯಾರುಬೇಕಾದರು ಭಾಗವಹಿಸಬಹುದು.  ಆರ್.ರೇವಯ್ಯ ದತ್ತಿ ಪ್ರಶಸ್ತಿ : ದೀನ ದಲಿತರ ಮತ್ತು ಶೋಷಿತ ವರ್ಗಗಳ ರಕ್ಷಣೆಗೆ ಶ್ರಮಿಸುವ ವ್ಯಕ್ತಿಗಳ ಬಗ್ಗೆ ಸಾಹಿತ್ಯ ಕೃತಿಗೆ ರೂ.1000/- ಬಹುಮಾನ ನೀಡಲಾಗುವುದು.  ಉದಯೋನ್ಮುಖ ಬರಹಗಾರರು, ಬರಹಗಾರ್ತಿಯರು ಸ್ಪರ್ಧೆಯಲ್ಲಿ ಭಾಗವಹಿಸಬಹುದು. 
         ಸಿಸು ಸಂಗಮೇಶ ದತ್ತಿ ಪ್ರಶಸ್ತಿ : ಅತ್ಯುತ್ತಮ ಮಕ್ಕಳ ಸಾಹಿತ್ಯ ಕೃತಿಗೆ ರೂ.500/- ಬಹುಮಾನ ನೀಡಲಾಗುವುದು.  ಸ್ಪರ್ಧೆಯಲ್ಲಿ ಯಾರುಬೇಕಾದರು ಭಾಗವಹಿಸಬಹುದು.  ಪಂಪಮ್ಮ-ಶರಣೇಗೌಡ ವಿರುಪಾಪುರ ದತ್ತಿ ಪ್ರಶಸ್ತಿ : ಉತ್ತಮ ಸಾಹಿತ್ಯ ಕೃತಿಗೆ ರೂ.500/- ಬಹುಮಾನ ನೀಡಲಾಗುವುದು. (ರಾಯಚೂರು ಜಿಲ್ಲೆಯ ಬರಹಗಾರರಿಗೆ ಮಾತ್ರ ಸೀಮಿತ).  ಕೆ.ವಾಸುದೇವಾಚಾರ್ ದತ್ತಿ ಪ್ರಶಸ್ತಿ : ಸಣ್ಣಕಥಾ ಸಂಕಲನ ಕೃತಿಗೆ ರೂ.500/- ಬಹುಮಾನ ನೀಡಲಾಗುವುದು.  ಸ್ಪರ್ಧೆಯಲ್ಲಿ ಯಾರು ಬೇಕಾದರು ಭಾಗವಹಿಸಬಹುದು.  ಡಾ|| ಆರ್.ಜೆ. ಗಲಗಲಿ ದತ್ತಿ ಪ್ರಶಸ್ತಿ : ಉತ್ತಮ ಕವನ ಸಂಕಲನ ಒಂದಕ್ಕೆ ರೂ.1000/- ಬಹುಮಾನ ನೀಡಲಾಗುವುದು ಬೆಳಗಾವಿ ಜಿಲ್ಲೆಯ ಬರಹಗಾರರಿಗೆ ಮಾತ್ರ ಅವಕಾಶ.  ಹೊಳಲ್ಕೆರೆ ಪದ್ಮಾವತಮ್ಮ ಶ್ರೀಪಾಲಶೆಟ್ಟಿ ಡಾ. ಮದನಕೇಸರಿ ಜೈನ ದತ್ತಿ ಪ್ರಶಸ್ತಿ : ಯಾವುದೇ ಜೈನ ಸಾಹಿತ್ಯ ಧರ್ಮಕ್ಕೆ ಸಂಬಂಧಪಟ್ಟ ಕೃತಿಗೆ ಬಹುಮಾನ, ಬಹುಮಾನದ ಮೊತ್ತ ರೂ. 7,500/.  ವಸುದೇವ ಭೂಪಾಲಂ ದತ್ತಿ ಪ್ರಶಸ್ತಿ : ಅತ್ಯುತ್ತಮ ಕಾದಂಬರಿ ಕೃತಿಗೆ ರೂ. 5000/- ಬಹುಮಾನ ನೀಡಲಾಗುವುದು.  ಸಣ್ಣಕಥಾ ಸಂಕಲನಗಳನ್ನು ಸ್ಪರ್ಧೆಗೆ ಕಳುಹಿಸಬಹುದು ರೂ. 2000/- ಬಹುಮಾನ.  ಮಕ್ಕಳ ಸಾಹಿತ್ಯ ಕೃತಿಗೆ ರೂ. 2000/- ಬಹುಮಾನ.  ಅನುವಾದಿತ ಕೃತಿಗಳು, ವೈಚಾರಿಕ ಲೇಖನಗಳ ಕೃತಿಗೆ ರೂ. 2000/- ಬಹುಮಾನವನ್ನು ನೀಡಲಾಗುವುದು.  ಡಿ. ಮಾಣಿಕರಾವ ಸ್ಮರಣಾರ್ಥ ಹಾಸ್ಯ ಸಾಹಿತ್ಯ ದತ್ತಿ ಪ್ರಶಸ್ತಿ : ಯಾವುದೇ ಪ್ರಕಾರದ ಹಾಸ್ಯ ಸಾಹಿತ್ಯ ಕೃತಿಗೆ ರೂ.5000/- ಬಹುಮಾನ ನೀಡಲಾಗುವುದು.  ಕಾಕೋಳು ಸರೋಜಮ್ಮ ದತ್ತಿ ಪ್ರಶಸ್ತಿ : ನಾಟಕ ಪ್ರಕಾರಕ್ಕೆ ರೂ.1000/- ಬಹುಮಾನ ನೀಡಲಾಗುವುದು.  ಡಾ. ಎ.ಎಸ್. ಧರಣೇಂದ್ರಯ್ಯ-ಮನೋವಿಜ್ಞಾನ ದತ್ತಿ ಪ್ರಶಸ್ತಿ : ಮನೋವಿಜ್ಞಾನ ಸಾಹಿತ್ಯ ಕೃತಿಗೆ ರೂ.5000/- ಬಹುಮಾನ ನೀಡಲಾಗುವುದು.  ನಾ.ಕು. ಗಣೇಶ ದತ್ತಿ ಪ್ರಶಸ್ತಿ : ಪ್ರಥಮ ಕವನ ಸಂಕಲನಕ್ಕೆ ರೂ.1000/- ಬಹುಮಾನ ನೀಡಲಾಗುವುದು.  ಬಿಸಲೇರಿ ಜಯಣ್ಣ ಮತ್ತು ಬಿಸಲೇರಿ ಬ್ರದರ್ಸ್ ದತ್ತಿ ಪ್ರಶಸ್ತಿ : ವಿಜ್ಞಾನ ತಂತ್ರಜ್ಞಾನ ಪ್ರಕಾರಗಳಾದ ವೈದ್ಯಕೀಯ ಶಾಸ್ತ್ರ, ಯಂತ್ರಶಾಸ್ತ್ರ, ವಿದ್ಯನ್ಮಾನ ಶಾಸ್ತ್ರದಲ್ಲಿ ಕನ್ನಡದಲ್ಲಿ ರಚಿತವಾದ ಆ ವರ್ಷದ ಶ್ರೇಷ್ಠ ಕೃತಿಗಳಿಗೆ ರೂ.10000/- ಗಳ ಬಹುಮಾನ ನೀಡಲಾಗುವುದು.  ಸಾರಂಗಿ ವೆಂಕಟರಾಮಯ್ಯ ಶ್ರೀನಿವಾಸ ರಾವ್ ದತ್ತಿನಿಧಿ : ಮಕ್ಕಳ ಸಾಹಿತ್ಯ ಕ್ಷೇತ್ರದ ಗದ್ಯ ಪ್ರಕಾರದ ಕಥೆಗೆ ಸಂಬಂಧಿಸಿದಂತೆ ಕನಿಷ್ಠ 65 ಪುಟಗಳುಳ್ಳ ಪುಸ್ತಕಕ್ಕೆ ರೂ.2000/- ಬಹುಮಾನ ನೀಡಲಾಗುವುದು. 
           ಪಳಕಳ ಸೀತಾರಾಮಭಟ್ಟ ದತ್ತಿನಿಧಿ : ಮಕ್ಕಳ ಸಾಹಿತ್ಯ ಕೃತಿಗೆ ರೂ.2000/- ಬಹುಮಾನ ನೀಡಲಾಗುವುದು.  ಪೂಜ್ಯ ಸ್ವಸ್ತಿಶ್ರಿ ದೇವೇಂದ್ರಕೀರ್ತಿ ದತ್ತಿ ಪ್ರಶಸ್ತಿ : ಜೈನ್‍ಧರ್ಮದ ಇತಿಹಾಸ, ಸಾಹಿತ್ಯ ಸಂಸ್ಕøತಿ ಹಾಗೂ ಕಲೆ, ಸಂಶೋಧನಾ ಗ್ರಂಥ, ಗ್ರಂಥ ಸಂಪಾದನೆ, ಪ್ರಾಚೀನ ಗ್ರಂಥಗಳು ಹಾಗೂ ಅನುವಾದಕ್ಕೆ ಸಂಬಂಧಿಸಿದ ರೂ.6000/-ಗಳ ನಗದು ಹಣ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.  ಭಾರತೀಸುತ ಸ್ಮಾರಕ ದತ್ತಿ ಪ್ರಶಸ್ತಿ : ಕನ್ನಡ ಕಾದಂಬರಿ ಕೃತಿಗೆ ರೂ.5000/-ಗಳ ನಗದು ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.  ಲಕ್ಷ್ಮೀದೇವಿ ಶಾಂತರಸ ಹೆಂಬೇರಾಳು ದತ್ತಿ ಪ್ರಶಸ್ತಿ : ಕನ್ನಡ ಮಹಿಳಾ ಬರಹಗಾರರ ವಿವಿಧ ಪ್ರಕಾರಗಳ ಆರು ವರ್ಷಗಳ ಅವಧಿಯಲ್ಲಿ (2010ನೇ ಜನವರಿ ತಿಂಗಳಿನಿಂದ 2017ನೇ ಡಿಸೆಂಬರ್ ತಿಂಗಳವರೆಗೆ) ಪ್ರಥಮ ಮುದ್ರಣವಾಗಿ ಪ್ರಕಟವಾದ "ಕಥೆ" ಕೃತಿಗೆ ರೂ.5000/-ಗಳ ನಗದು ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು.  ಪ್ರಕಾಶ ಆರ್.ಎನ್ ಹಬ್ಬು ದತ್ತಿ ಪ್ರಶಸ್ತಿ : "ಕಥಾ ಸಂಕಲನ" ಪ್ರಕಾರದ ಪುಸ್ತಕ ಪ್ರಕಟಣೆ ಮಾಡಿದ "ಪ್ರಕಾಶನ ಸಂಸ್ಥೆಗೆ" ರೂ.5000/- ನಗದು ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.  ಕನ್ನಡ ಪುಸ್ತಕ ಪ್ರಕಾಶನ ಸಂಸ್ಥೆಗಳು ಮಾತ್ರ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.  ಅಮೃತ ಮಹೋತ್ಸವ ಸಾಹಿತ್ಯ ಸಮ್ಮೇಳನದ ಸವಿ ನೆನಪಿನ ದತ್ತಿ (ಎಲ್. ಬಸವರಾಜು ದತ್ತಿ) ಪ್ರಶಸ್ತಿ : ಯಾವುದೇ ಪ್ರಕಾರದ ಉತ್ತಮ ದಲಿತ ಸಾಹಿತ್ಯ ಕೃತಿಗೆ ರೂ.5000/-ಗಳ ನಗದು ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.  ನಿಡಸಾಲೆ ಪುಟ್ಟಸ್ವಾಮಯ್ಯ ಸಾಹಿತ್ಯ ಪ್ರಶಸ್ತಿ ದತ್ತಿ : ಯಾವುದೇ ಪ್ರಕಾರದ ಶ್ರೇಷ್ಠ ಕೃತಿಯನ್ನು ಸ್ಪರ್ಧೆಗೆ ಕಳುಹಿಸಬಹುದು.  ಪ್ರತಿವರ್ಷ ಕನ್ನಡದಲ್ಲಿ ಪ್ರಕಟಗೊಂಡ ಯಾವುದೇ ಪ್ರಕಾರದ ಶ್ರೇಷ್ಠ ಕೃತಿಗೆ ರೂ.5000/-ಗಳ ನಗದು ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.  ಗುಬ್ಬಿ ಸೋಲೂರು ಮುರುಗಾರಾಧ್ಯ ದತ್ತಿ ಪ್ರಶಸ್ತಿ : ಶ್ರೇಷ್ಠ ಕಾದಂಬರಿಗೆ ರೂ. 5000/-ಗಳ ನಗದು ಪ್ರಶಸ್ತಿ ಹಾಗೂ ಪ್ರಶಸ್ತಿ ಪತ್ರ, ಗೌರವ.  ವಿ. ಗೌರಮ್ಮ ಗಂಗಾಧರಯ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಶಸ್ತಿ : ವೀರಶೈವ ಸಾಹಿತ್ಯ ಸಂಶೋಧನಾತ್ಮಕ ಕೃತಿಗಳು ಎಂಬ ಪ್ರಚಾರಕ್ಕೆ ರೂ.10000/-ಗಳ ನಗದು ಮತ್ತು ಪ್ರಶಸ್ತಿ ಪತ್ರ ಹಾಗೂ ಗೌರವ.  ಗೌರುಭಟ್ ದತ್ತಿ ಪ್ರಶಸ್ತಿ : ಮಹಿಳೆಯರಿಗೆ ಸಂಬಂಧಿಸಿದ ಲೇಖನಗಳಿಗೆ ರೂ. 5000/-ಗಳ ನಗದು ಮತ್ತು ಪ್ರಶಸ್ತ ಪತ್ರ ಹಾಗೂ ಗೌರವ.  ಜಯಲಕ್ಷ್ಮಿ ಮತ್ತು ಬಾಪು ರಾಮಣ್ಣ ದತ್ತಿ ಪ್ರಶಸ್ತಿ : ಸಣ್ಣ ಕಥಾ ಸಂಕಲಕ್ಕೆ ರೂ.2000/- ನಗದು ಮತ್ತು ಪ್ರಶಸ್ತ ಪತ್ರ ಹಾಗೂ ಗೌರವ.  ಸುಮನ್ ಸೋಮಶೇಖರ್ ಸೋಮವಾರಪೇಟೆ ದತ್ತಿ ಪ್ರಶಸ್ತಿ : ಕವನ ಸಂಕಲಕ್ಕೆ ರೂ.1000/- ನಗದು ಮತ್ತು ಪ್ರಶಸ್ತಿ ಪತ್ರ ಹಾಗೂ ಗೌರವ.
ಹೇಮರಾಜ್ ಜಿ.ಎನ್. ಕುಶಾಲನಗರ ದತ್ತಿ ಪ್ರಶಸ್ತಿ : ಸಣ್ಣ ಕಥಾ ಸಂಕಲನಕ್ಕೆ ರೂ.1000/- ನಗದು ಮತ್ತು ಪ್ರಶಸ್ತಿ ಪತ್ರ ಹಾಗೂ ಗೌರವ.  ಗಂಗಮ್ಮ ಬಿ. ಶಿವಣ್ಣ ದತ್ತಿ ಪ್ರಶಸ್ತಿ : ಜಾತ್ಯಾತೀತ ವಿಚಾರವನ್ನೊಳಗೊಂಡ ಕೃತಿಗೆ ರೂ.5000/- ನಗದು ಮತ್ತು ಪ್ರಶಸ್ತಿ ಪತ್ರ ಹಾಗೂ ಗೌರವ.  ಡಾ. ಹಾ.ಮಾ ನಾಯಕ ದತ್ತಿ ಪ್ರಶಸ್ತಿ : ಶ್ರೇಷ್ಠ ವಿಚಾರ ಸಾಹಿತ್ಯ ಕೃತಿಗೆ ರೂ.2500/- ನಗದು ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.
          ಪ್ರತಿ ಪ್ರವೇಶಕ್ಕೆ ತಲಾ ಮೂರು ಪುಸ್ತಕಗಳನ್ನು ಗೌರವ ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು-560018 ಇವರಿಗೆ ಮೇ. 30 ರೊಳಗಾಗಿ ತಲುಪುವಂತೆ ಕಳುಹಿಸಬೇಕು.  ತಡವಾಗಿ ಬಂದ ಪುಸ್ತಕಗಳನ್ನು ಸ್ವೀಕರಿಸಲಾಗುವುದಿಲ್ಲ.  ಪರಿಶೀಲನೆಗೆ ಬಂದ ಪುಸ್ತಕಗಳನ್ನು ಹಿಂದಿರುಗಿಸಲಾಗುವುದಿಲ್ಲ.  ಬಹುಮಾನದ ಬಗ್ಗೆ ಪರಿಷತ್ತು ನೇಮಿಸುವ ತೀರ್ಪುಗಾರರು ನೀಡುವ ಶಿಫಾರಸ್ಸನ್ನು ಗಮನಿಸಿ ಪರಿಷತ್ತು ಅಂತಿಮ ನಿರ್ಧಾರ ಕೈಗೊಳ್ಳುತ್ತದೆ.  ಯಾವುದೇ ವರ್ಷ ಪ್ರಶಸ್ತಿಗೆ ಅರ್ಹ ಗ್ರಂಥಗಳು ಬಾರದಿದ್ದಾಗ ಆ ವರ್ಷ ಪ್ರಶಸ್ತಿಯನ್ನು ನೀಡದಿರುವ ಹಕ್ಕು ಪರಿಷತ್ತಿಗೆ ಇರುತ್ತದೆ.  ಒಂದಕ್ಕಿಂತ ಹೆಚ್ಚು ಗ್ರಂಥಗಳು ಅತ್ಯುತ್ತಮವೆಂದು ಪರಿಗಣಿತವಾದರೆ ಬಹುಮಾನ ಹಣವನ್ನು ಹಂಚಿ ವಿತರಿಸುವ ಹಕ್ಕು ಪರಿಷತ್ತಿಗೆ ಇರುತ್ತದೆ.  ಪಿ.ಎಚ್.ಡಿ. ಗ್ರಂಥಗಳನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ.  ಭಾಗವಹಿಸುತ್ತಿರುವ ಸ್ಪರ್ಧೆಯ ದತ್ತಿ ಹೆಸರನ್ನು ಪುಸ್ತಕದ ಮೊದಲ ಒಳಪುಟದಲ್ಲಿ ಸ್ಪಷ್ಟವಾಗಿ ಸೂಚಿಸಬೇಕು.  ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ಹೆಸರು, ವಿಳಾಸ, ದೂರವಾಣಿ ಹಾಗೂ ಮೊಬೈಲ್ ಸಂಖ್ಯೆಗಳನ್ನು ನಮೂದಿಸಬೇಕು. 
        ಹೆಚ್ಚಿನ ವಿವರಗಳಿಗೆ ಸ್ವ-ವಿಳಾಸದ ಸ್ಟಾಂಪ್ ಹಚ್ಚಿದ ಲಕೊಟೆ ಇಟ್ಟು ಪತ್ರ ಬರೆಯಬಹುದಾಗಿದೆ.  ಹೆಚ್ಚಿನ ಮಾಹಿತಿಗಾಗಿ ವೆಬ್‍ಸೈಟ್  www.kasapa.in  ಮೂಲಕ ಸಹ ಪಡೆಯಬಹುದಾಗಿದೆ ಎಂದು ಕಸಾಪ ಗೌರವ ಕಾರ್ಯದರ್ಶಿ ವ.ಚ. ಚನ್ನೇಗೌಡ ಅವರು ತಿಳಿಸಿದ್ದಾರೆ.

Wednesday, 18 April 2018

ಜಗಜ್ಯೋತಿ ಬವಸವೇಶ್ವರರಿಗೆ ಭಕ್ತಿ ಪೂರ್ವಕ ನಮನ


ಕೊಪ್ಪಳ ಏ. 18 (ಕರ್ನಾಟಕ ವಾರ್ತೆ): ಜಗಜ್ಯೋತಿ ಬಸವೇಶ್ವರ ಜಯಂತಿ ಅಂಗವಾಗಿ ಜಿಲ್ಲಾಡಳಿತದ ವತಿಯಿಂದ ಬುಧವಾರದಂದು ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಎಲ್ಲ ಅಧಿಕಾರಿ, ಸಿಬ್ಬಂದಿಗಳು ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಭಕ್ತಿ ಪೂರ್ವಕ ನಮನ ಸಲ್ಲಿಸಿದರು.
     ಚುನಾವಣಾ ನೀತಿ ಸಂಹಿತೆಯ ಕಾರಣದಿಂದಾಗಿ ಜಗಜ್ಯೋತಿ ಬಸವೇಶ್ವರರ ಜಯಂತಿ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸರಳವಾಗಿ ಆಚರಿಸಲಾಯಿತು.  ಬಸವೇಶ್ವರರ ಭಾವಚಿತ್ರಕ್ಕೆ ಭಕ್ತಿ ಪೂರ್ವಕ ನಮನ ಸಲ್ಲಿಸಿದ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ ಅವರು ಮಾತನಾಡಿ, ಬಸವೇಶ್ವರರು 12 ನೇ ಶತಮಾನದಲ್ಲಿ ಕ್ರಾಂತಿಕಾರಕ ಸುಧಾರಣೆಗಳನ್ನು ತಂದ ಮಹನೀಯರು, ಅವರು, ನೀಡಿದ ಕಾಯಕವೇ ಕೈಲಾಸ ಎಂಬ ಸಂದೇಶ ಹಾಗೂ ಸಿದ್ದಾಂತ, ಇಂದಿನ ಪೀಳಿಗೆಗೆ ಅನ್ವಯವಾಗಬೇಕಿದೆ.  12 ನೇ ಶತಮಾನದಲ್ಲಿಯೇ ಪ್ರಜಾಪ್ರಭುತ್ವವನ್ನು ಸಮಾಜಕ್ಕೆ ಪರಿಚಯಿಸಿದ್ದ ಬಸವಣ್ಣನವರು, ಮೂಢನಂಬಿಕೆ ಹಾಗೂ ಮೌಢ್ಯಗಳನ್ನು ಬಲವಾಗಿ ವಿರೋಧಿಸಿದ್ದರು.  ಬಸವಣ್ಣನವರು ರಚಿಸಿದ ಮೇರು ವಚನ ಸಾಹಿತ್ಯ, ಎಲ್ಲ ಭಾಷೆಗಳಲ್ಲೂ ಲಭ್ಯವಾಗಬೇಕು.  ಅಂದಾಗ ಮಾತ್ರ ಅವರ ಮಹತ್ವವನ್ನು ಕೇವಲ ರಾಜ್ಯ, ದೇಶವಷ್ಟೇ ಅಲ್ಲ ಇಡೀ ಜಗತ್ತು ಅರಿಯಬೇಕಿದೆ.  ಇಂದಿನ ಪೀಳಿಗೆ ಕೇವಲ ಮೊಬೈಲ್ ಹಾಗೂ ಅಂತರ್ಜಾಲದಲ್ಲಿ ಮಗ್ನವಾಗಿದ್ದು, ಸಾಹಿತ್ಯಗಳ ಅಧ್ಯಯನದಿಂದ ಮಾತ್ರ ಮಹನೀಯರ ಬಗ್ಗೆ ಹಾಗೂ ಅವರ ಸಾಧನೆಗಳ ಬಗ್ಗೆ ಅರಿವು ಹೊಂದಲು ಸಾಧ್ಯ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ ಅವರು ಹೇಳಿದರು.
     ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ್, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ., ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ವಾಗೀಶ್, ಜಿಲ್ಲಾ ಎನ್‍ಐಸಿ ಅಧಿಕಾರಿ ವೀರಣ್ಣ ಏಳುಬಾವಿ, ಜಿಲ್ಲಾ ನೋಂದಣಾಧಿಕಾರಿ ಅಶೋಕ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡು, ಜಗಜ್ಯೋತಿ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು, ಭಕ್ತಿ ಪೂರ್ವಕ ನಮನ ಸಲ್ಲಿಸಿದರು.

ವಿಧಾನಸಭಾ ಕ್ಷೇತ್ರವಾರು ರ್‍ಯಾಂಡಮೈಜೇಶನ್ ಮೂಲಕ ಮತ ಯಂತ್ರಗಳ ಹಂಚಿಕೆ


ಕೊಪ್ಪಳ ಏ. 18 (ಕರ್ನಾಟಕ ವಾರ್ತೆ): ಪ್ರಸಕ್ತ ವಿಧಾನಸಭಾ ಚುನಾವಣೆ ನಿಮಿತ್ಯ ಮೇ. 12 ರಂದು ನಡೆಯುವ ಮತದಾನಕ್ಕಾಗಿ ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಜ್ಜಾಗುತ್ತಿದ್ದು, ಆಯಾ ವಿಧಾನಸಭಾ ಕ್ಷೇತ್ರವಾರು ಮತ ಯಂತ್ರಗಳನ್ನು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಕಂಪ್ಯೂಟರೀಕೃತ ರ್‍ಯಾಂಡಮೈಜೇಶನ್ ಮೂಲಕ ಮಂಗಳವಾರದಂದು ಹಂಚಿಕೆ ಮಾಡಿದರು.


     ಜಿಲ್ಲಾಡಳಿತ ಭವನದ ಎನ್‍ಐಸಿ ಕಚೇರಿ ಸಭಾಂಗಣದಲ್ಲಿ ಕಂಪ್ಯೂಟರೀಕೃತವಾಗಿ ರ್‍ಯಾಂಡಮೈಜೇಶನ್(ಯಾದೃಚ್ಛೀಕರಣ) ಕೈಗೊಳ್ಳುವ ಮೂಲಕ ಆಯಾ ವಿಧಾನಸಭಾ ಕ್ಷೇತ್ರಗಳಿಗೆ ಮತಗಟ್ಟೆಗಳ ಸಂಖ್ಯೆಗನುಗುಣವಾಗಿ ಹಂಚಿಕೆ ಮಾಡಲಾಯಿತು.  ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು, ಕೊಪ್ಪಳ ಜಿಲ್ಲೆಯಲ್ಲಿ ಕಳೆದ ತಿಂಗಳು ಎಲ್ಲ ಮತಯಂತ್ರಗಳು ಹಾಗೂ ವಿವಿ ಪ್ಯಾಟ್‍ಗಳನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಪರಿಶೀಲಿಸಿ, ಜಿಲ್ಲಾಡಳಿತ ಭವನ ಆವರಣದಲ್ಲಿನ ದಾಸ್ತಾನು ಕೇಂದ್ರದಲ್ಲಿ ಇರಿಸಲಾಗಿತ್ತು.  ಜಿಲ್ಲೆಗೆ ಒಟ್ಟು 1635 ಕಂಟ್ರೋಲ್ ಯುನಿಟ್, 1963 ಬ್ಯಾಲೆಟ್ ಯುನಿಟ್ ಹಾಗೂ 1766 ವಿವಿ ಪ್ಯಾಟ್ ಯಂತ್ರಗಳನ್ನು ಚುನಾವಣಾ ಆಯೋಗದಿಂದ ಪೂರೈಸಲಾಗಿತ್ತು.  ಕೊಪ್ಪಳ ಜಿಲ್ಲೆಯಲ್ಲಿ ಕುಷ್ಟಗಿ 271 (02 ಹೆಚ್ಚುವರಿ ಸೇರಿದಂತೆ) ಮತಗಟ್ಟೆಗಳು, ಯಲಬುರ್ಗಾ-253, ಕೊಪ್ಪಳ-287, ಕನಕಗಿರಿ-260 ಹಾಗೂ ಗಂಗಾವತಿ ಕ್ಷೇತ್ರದಲ್ಲಿ 232 ಮತಗಟ್ಟೆಗಳು ಸೇರಿದಂತೆ ಒಟ್ಟು 1303 ಮತಗಟ್ಟೆಗಳಿವೆ.  ಈ ಮತಗಟ್ಟೆಗಳ ಸಂಖ್ಯೆಗೆ ಅನುಗುಣವಾಗಿ ಎಲ್ಲ ಮತ ಯಂತ್ರಗಳು ಹಾಗೂ ಮುಂಜಾಗ್ರತಾ ಕ್ರಮವಾಗಿ ಸಾಕಷ್ಟು ಸಂಖ್ಯೆಯಲ್ಲಿ ಹೆಚ್ಚುವರಿ ಮತ ಯಂತ್ರಗಳನ್ನು ಹಂಚಿಕೆ ಮಾಡಲಾಗುತ್ತಿದೆ.  ಅಧಿಕಾರಿ ಸಿಬ್ಬಂದಿಗಳಿಗೆ ತರಬೇತಿ ಹಾಗೂ ಸಾರ್ವಜನಿಕರಲ್ಲಿ ಮತ ಯಂತ್ರಗಳ ಕುರಿತು ಅರಿವು ಮೂಡಿಸುವಂತಹ ಕಾರ್ಯಕ್ರಮಗಳಿಗೆ ಒಟ್ಟು 70 ಮತ ಯಂತ್ರಗಳನ್ನು ಬಳಸಲಾಗುತ್ತಿದೆ.  ತರಬೇತಿಗಾಗಿ ಬಳಸುವ 70 ಮತ ಯಂತ್ರಗಳನ್ನು ಹೊರತುಪಡಿಸಿ, ಇತರೆ ಮತ ಯಂತ್ರಗಳನ್ನು ಕ್ಷೇತ್ರಗಳಿಗೆ ಹಂಚಲು ರ್‍ಯಾಂಡಮೈಜೇಶನ್ ಮಾಡಲಾಗುತ್ತಿದೆ.  ನಂತರದ ದಿನಗಳಲ್ಲಿ ಆಯಾ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳು ಆಯಾ ಕ್ಷೇತ್ರದಲ್ಲಿ ಮತ್ತೊಮ್ಮೆ ರ್‍ಯಾಂಡಮೈಜೇಶನ್ ಪ್ರಕ್ರಿಯೆ ಕೈಗೊಂಡು, ಮತಗಟ್ಟೆವಾರು ಮತಯಂತ್ರಗಳನ್ನು ಹಂಚಿಕೆ ಮಾಡುವರು.  ಮತಯಂತ್ರಗಳನ್ನು ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ವಾಹನಗಳ ಮೂಲಕ ಆಯಾ ತಾಲೂಕು ಕೇಂದ್ರಗಳಿಗೆ ಸಾಗಿಸಿ, ಆಯಾ ತಾಲೂಕು ಕೇಂದ್ರದಲ್ಲಿ ಮತಯಂತ್ರಗಳನ್ನು ದಾಸ್ತಾನು ಕೊಠಡಿಗಳಲ್ಲಿ ಸಂಗ್ರಹಿಸಿಡಲಾಗುವುದು ಎಂದರು.
     ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳಿಗೆ ಕಂಪ್ಯೂಟರ್ ತಂತ್ರಾಂಶದಲ್ಲಿ ಮತ ಯಂತ್ರಗಳನ್ನು ರ್‍ಯಾಂಡಮೈಜೇಶನ್ ಮೂಲಕ ಹಂಚಿಕೆ ಮಾಡಲಾಯಿತು.  ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್ ಶೆಟ್ಟಿ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಕೊಪ್ಪಳ ಕ್ಷೇತ್ರ ಚುನಾವಣಾಧಿಕಾರಿ ಸಿ.ಡಿ. ಗೀತಾ, ಗಂಗಾವತಿ- ಡಾ. ರವಿ ತಿರ್ಲಾಪುರ, ಯಲಬುರ್ಗಾ- ವಿಜಯ ಮೆಕ್ಕಳಕಿ, ಕುಷ್ಟಗಿ- ಪ್ರಶಾಂತ್ ಅವರು ಪಾಲ್ಗೊಂಡಿದ್ದರು.  ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮತಯಂತ್ರಗಳ ರ್‍ಯಾಂಡಮೈಜೇಶನ್ ಸಂದರ್ಭದಲ್ಲಿ ಉಪಸ್ಥಿತರಿದ್ದು, ಪ್ರಕ್ರಿಯೆಯ ಸಂಪೂರ್ಣ ಮಾಹಿತಿ ಪಡೆದುಕೊಂಡರು.

ವಿಧಾನಸಭಾ ಚುನಾವಣೆ : ಕ್ಷೇತ್ರಗಳತ್ತ ಹೊರಟ ಮತ ಯಂತ್ರಗಳು

ಕೊಪ್ಪಳ ಏ. 18 (ಕರ್ನಾಟಕ ವಾರ್ತೆ): ಪ್ರಸಕ್ತ ವಿಧಾನಸಭಾ ಚುನಾವಣೆ ಪ್ರಕ್ರಿಯೆಗಳು ಚುರುಕುಗೊಂಡಿದ್ದು, ಮೇ. 12 ರಂದು ನಡೆಯುವ ಮತದಾನ ಕಾರ್ಯಕ್ಕಾಗಿ ಬಳಸಲಾಗುವ ಮತಯಂತ್ರಗಳನ್ನು ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ವಾಹನಗಳ ಮೂಲಕ ಕೊಪ್ಪಳ ಜಿಲ್ಲೆಯ ಆಯಾ ತಾಲೂಕು ಕೇಂದ್ರಗಳಿಗೆ ಬುಧವಾರದಂದು ಸಾಗಿಸಲಾಯಿತು.

     ಕೊಪ್ಪಳ ಜಿಲ್ಲಾಡಳಿತ ಭವನ ಆವರಣದಲ್ಲಿನ ಮತಯಂತ್ರಗಳ ದಾಸ್ತಾನು ಕೇಂದ್ರದಲ್ಲಿ ಇದುವರೆಗೂ ಪೊಲೀಸರ ಸರ್ಪಗಾವಲಿನಲ್ಲಿ ಇರಿಸಲಾಗಿದ್ದ ವಿದ್ಯುನ್ಮಾನ ಮತಯಂತ್ರಗಳನ್ನು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಮಂಗಳವಾರದಂದು ಕಂಪ್ಯೂಟರೀಕೃತ ರ್‍ಯಾಂಡಮೈಜೇಶನ್ ಮೂಲಕ ಆಯಾ ಕ್ಷೇತ್ರಗಳಿಗೆ ಜಿಲ್ಲಾ ಚುನಾವಣಾಧಿಕಾರಿಗಳು ಹಂಚಿಕೆ ಮಾಡಿದ್ದರು.


     ಮಂಗಳವಾರದಂದು ಬೆಳಿಗ್ಗೆ 06 ಗಂಟೆಯಿಂದಲೇ ಭೌತಿಕವಾಗಿ ಮತ ಯಂತ್ರಗಳ ಹಂಚಿಕೆ ಕಾರ್ಯ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಪ್ರಾರಂಭಗೊಂಡಿತು.  ಆಯಾ ಕ್ಷೇತ್ರ ಚುನಾವಣಾಧಿಕಾರಿಗಳು ಮತಯಂತ್ರಗಳನ್ನು ವಾಹನಗಳಲ್ಲಿ ಕೊಂಡೊಯ್ಯಲು ಬೆಳಿಗ್ಗೆಯೇ ಸಜ್ಜಾಗಿ ಬಂದಿದ್ದರು.  ಮತಯಂತ್ರಗಳ ಸಾಗಾಟ ಪ್ರಕ್ರಿಯೆಯಲ್ಲಿ ಬಂದೋಬಸ್ತ್ ಕೈಗೊಳ್ಳಲು ಪೊಲೀಸರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲಾಡಳಿತ ಭವನ ಆವರಣದಲ್ಲಿ ಜಮಾವಣೆಗೊಂಡಿದ್ದರು.  ಕ್ಷೇತ್ರಗಳಿಗೆ ಹಂಚಿಕೆಯಾದ ಮತಯಂತ್ರ ಪೆಟ್ಟಿಗೆಗಳ ಸಂಖ್ಯೆಯ ವಿವರ ಹೊಂದಿರುವ ಪಟ್ಟಿಯನ್ನು ಹಿಡಿದು, ಚುನಾವಣಾ ಸಿಬ್ಬಂದಿಗಳು ಮತಯಂತ್ರ ಪೆಟ್ಟಿಗೆಗಳನ್ನು ಹಂಚಿಕೆ ಮಾಡಿದರು.  ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ಬೆಳಿಗ್ಗೆ 06 ಗಂಟೆಯಿಂದಲೇ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿ, ಮತಯಂತ್ರಗಳ ಹಂಚಿಕೆ ಹಾಗೂ ಸಾಗಾಣಿಕೆ ಪ್ರಕ್ರಿಯೆಯನ್ನು ಖುದ್ದಾಗಿ ಸ್ಥಳದಲ್ಲಿಯೇ ಇದ್ದು ಪರಿಶೀಲನೆ ನಡೆಸಿದರು.  ಆಯಾ ಕ್ಷೇತ್ರಗಳಿಗೆ ಹಂಚಿಕೆ ಮಾಡಲಾದ ಮತಯಂತ್ರಗಳ ಪೆಟ್ಟಿಗೆಗಳನ್ನು ವಾಹನಕ್ಕೆ ತುಂಬಿ, ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಸಾಗಿಸಲಾಯಿತು.  ಚುನಾವಣೆಗಾಗಿ ನಿಯೋಜನೆಗೊಂಡಿರುವ ಸಿಬ್ಬಂದಿಗಳು ಪಾಲ್ಗೊಂಡು, ಮತಯಂತ್ರಗಳ ಸಾಗಾಣಿಕೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.

Tuesday, 17 April 2018

ಕಲ್ಯಾಣಿ ಮತ್ತು ಕಿರ್ಲೋಸ್ಕರ್ ಕಾರ್ಖಾನೆಗಳಲ್ಲಿ ಮತದಾನ ಜಾಗೃತಿಕೊಪ್ಪಳ ಏ. 17 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ತಾಲೂಕಿನ ಕಲ್ಯಾಣಿ ಹಾಗೂ ಕಿರ್ಲೋಸ್ಕರ್ ಕಾರ್ಖಾನೆಗಳ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಹಾಗೂ ಕಾರ್ಮಿಕರಿಗೆ ಮತದಾನದ ಕುರಿತು ಇವಿಎಂ ಹಾಗೂ ವಿವಿ ಪ್ಯಾಟ್ ಬಳಕೆ ಕುರಿತು ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸಲಾಯಿತು.

ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಶೇ.100 ರಷ್ಟು ಮತದಾನ ಯಶಸ್ವಿಯಾಗಿ ಜರುಗಿಸುವ ಹಿನ್ನಲೆಯಲ್ಲಿ ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.  ನಮ್ಮ ಮತ-ನಮ್ಮ ಹಕ್ಕು, ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ ಎನ್ನುವ ಸಂದೇಶಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.   ಮತದಾನ ಜಾಗೃತಿಗಾಗಿ ಅನೇಕ ವೈವಿಧ್ಯಮಯ ಕಾರ್ಯಕ್ರಮಗಳನ್ನು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ, ಸಾರ್ವಜನಿಕರಿಗೆ ಮತದಾನದ ಮಹತ್ವದ ಕುರಿತು ಅರಿವು ಮೂಡಿಸಲಾಗುತ್ತಿದೆ.  ಮೇ. 12 ರಂದು ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುವಂತೆ ಪ್ರೇರೆಪಿಸಲು ಕೊಪ್ಪಳ ತಾಲೂಕಿನ ಕಲ್ಯಾಣಿ ಸ್ಟೀಲ್ ಲಿಮಿಟೆಡ್ ಮತ್ತು ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಕಾರ್ಖಾನೆಗಳ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಕಾರ್ಮಿಕರಿಗೆ ಮತದಾನ ಜಾಗೃತಿ ಮತ್ತು ಮತದಾನ ಖಾತ್ರಿ ಯಂತ್ರ (ವಿ.ವಿ.ಪ್ಯಾಟ್) ಬಳಕೆ ಕುರಿತು ಸೋಮವಾರದಂದು ಪ್ರಾತ್ಯಕ್ಷಿಕೆ ಮೂಲಕ ತೋರಿಸಲಾಯಿತು.  ಅಲ್ಲದೆ ಇದೇ ಸಂದರ್ಭದಲ್ಲಿ ಅಧಿಕಾರಿಗಳು, ಕಾರ್ಮಿಕರು ಅಣಕು ಮತದಾನ ಮೂಲಕ ಮತಯಂತ್ರಗಳ ಮಹತ್ವವನ್ನು ಮನವರಿಕೆ ಮಾಡಿಕೊಡಲಾಯಿತು.      

 ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ಯಾಮರಾವ್, ಸೆಕ್ಟರ್ ಅಧಿಕಾರಿ ಸೇರಿದಂತೆ ಕಲ್ಯಾಣಿ ಮತ್ತು ಕಿರ್ಲೋಸ್ಕರ್ ಕಾರ್ಖಾನೆಗಳ ಅಧಿಕಾರಿಗಳು, ಸಿಬ್ಬಂದಿಗಳು, ಕಾರ್ಮಿಕರು ಉಪಸ್ಥಿತರಿದ್ದರು. 

ಆನೆಗುಂದಿ ಗ್ರಾಮದಲ್ಲಿ ಶಿಕ್ಷರಿಂದ ಮತದಾನ ಜಾಗೃತಿ ಜಾಥಾ


ಕೊಪ್ಪಳ ಏ. 17 (ಕರ್ನಾಟಕ ವಾರ್ತೆ): ಕೊಪ್ಪಳ ಸಾರ್ವಜನಿಕ ಶಿಕ್ಷಣ ಇಲಾಖೆ ಗಂಗಾವತಿ ತಾಲೂಕಿನ ಆನೆಗುಂದಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಗಳ ಶಿಕ್ಷಕರುಗಳಿಂದ ಆನೆಗುಂದಿ ಗ್ರಾಮದಲ್ಲಿ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮ ನಡೆಯಿತು.   
    ಗಂಗಾವತಿ ತಾಲೂಕ ಆನೆಗುಂದಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಗಳ ಮುಖ್ಯ ಗುರುಗಳು ಹಾಗೂ ಸಹ ಶಿಕ್ಷಕರುಗಳಿಂದ ಮತದಾನ ಜಾಗೃತಿ ಜಾಥವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಾರ್ವಜನಿಕರಗೆ  "ನಮ್ಮ ಮತ ನಮ್ಮ ಹಕ್ಕು" ಎಲ್ಲರೂ ಕಡ್ಡಾಯವಾಗಿ ಮೇ. 12 ರಂದು ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮಾತದಾನ ಮಾಡುವಂತೆ ತಿಳಿಸಲಾಯಿತು. 
ಆನೆಗುಂದಿ ಗ್ರಾಮದ ಪ್ರಮುಖ ವೃತ್ತದಲ್ಲಿ ಮತದಾನ ಜಾಗೃತಿ ಮಾನವ ಸರಪಳಿ ನಿರ್ಮಿಸಿ ಮತದಾನ ಜಾಗೃತಿ ಘೋಷಣೆಗಳನ್ನು ಕೂಗುವುದರ ಮೂಲಕ ಸ್ವೀಪ್ ಕಾರ್ಯಕ್ರಮವನ್ನು ಆಚರಿಸಲಾಯಿತು.  ಅಲ್ಲದೇ ಎಲ್ಲರೂ ಕಡ್ಡಾಯವಾಗಿ ಮತದಾನದಲ್ಲಿ ಭಾಗವಹಿಸುವ ಬಗ್ಗೆ ಸಂಕಲ್ಪ ಪ್ರಮಾಣ ವಚನ ಬೋಧಿಸಿ ಸಂಕಲ್ಪ ಪ್ರಮಾಣ ಪತ್ರಗಳಿಗೆ ಕುಟುಂಬದ ಮುಖ್ಯಸ್ಥರ ಸಹಿ ಪಡೆಯಲಾಯಿತು.  ಗ್ರಾಮದ ಹಿರಿಯರು, ಯುವಕರು, ವಿದ್ಯಾರ್ಥಿಗಳು ಮುಖ್ಯ ಶಿಕ್ಷಕರಾದ ವಿಜಯಕುಮಾರ ಹಾಗೂ ಸಹ ಶಿಕ್ಷಕರಾದ ಶಂಕ್ರಪ್ಪ ಹಾಗೂ ಇತರರು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ವಿವಿಧೆಡೆ ಮತದಾನ ಜಾಗೃತಿ


ಕೊಪ್ಪಳ ಏ. 17 (ಕರ್ನಾಟಕ ವಾರ್ತೆ): ಕೊಪ್ಪಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಅಂಗವಿಕಲರು ಹಾಗೂ ಮಹಿಳೆಯರು ಸೇರಿದಂತೆ ಹೊಸ ಮತದಾರರಿಗೆ ಮತದಾನದ ಕುರಿತು ಜಾಗೃತಿ ಮೂಡಿಸಲು ಮಂಗಳವಾರದಂದು ಜಿಲ್ಲೆಯ ವಿವಿಧೆಡೆ ಮತದಾನ ಜಾಗೃತಿ ಕಾರ್ಯಕ್ರಗಳು ಜರುಗಿದವು. 
     ಕೊಪ್ಪಳ ನಗರದ ಗಾಂಧಿನಗರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಛೇರಿ, ಯಲಬುರ್ಗಾ ತಾಲೂಕಿನ ಕುಕನೂರು, ಬನ್ನಿಕೊಪ್ಪ, ಯಡಿಯಾಪೂರ, ಗ್ರಾಮಗಳಲ್ಲಿ ಮಹಿಳಾ ಮತದಾರರಿಗೆ, ಅಂಗನವಾಡಿ ಕಾರ್ಯಕರ್ತೆ/ ಸಹಾಯಕಿಯರಿಗೆ, ಆಶಾ ಕಾರ್ಯಕರ್ತೆಯರು, ಸ್ತೀಶಕ್ತಿ ಸಂಘದ ಸದಸ್ಯರಿಗೆ ಹಾಗೂ ಹೊಸ ಮತದಾರರಿಗೆ ಮತದಾನದ ಕುರಿತು ಅರಿವು ಮೂಡಿಸಿ, ಮತದಾನ ಮಾಡುವಂತೆ ಪ್ರೇರೆಪಿಸಲು ಸ್ವೀಪ್ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೆಶಕ ಬಿ.ಎಸ್. ಕಲಾದಗಿ ಮತ್ತು ಜಿಲ್ಲಾ ನಿರೂಪಣಾಧಿಕಾರಿ ಮಂಜುನಾಥ್, ಸಿಡಿಪಿಒ ಸಿಂಧು ಎಲಿಗಾರ್ ಹಾಗೂ ತಾಲೂಕಿನ ಮೇಲ್ವಿಚಾರಕಿಯರು ಪಾಲ್ಗೊಂಡು   ಮೇ 12 ರಂದು ನಡೆಯುವ ಚುನಾವಣೆಯಲ್ಲಿ ಎಲ್ಲ ಮಹಿಳೆಯರು ತಪ್ಪದೆ ಮತದಾನ ಮಾಡಬೇಕು ಎಂಬ ಸಂದೇಶ ನೀಡಲಾಯಿತು. 

ಕೊಪ್ಪಳ ವಿಧಾನಸಭೆ ಚುನಾವಣೆ : ಅಧಿಸೂಚನೆ ಪ್ರಕಟ


ಕೊಪ್ಪಳ ಏ. 17 (ಕರ್ನಾಟಕ ವಾರ್ತೆ): ಕೊಪ್ಪಳ ವಿಧಾನಸಭಾ ಚುನಾವಣೆ ಅಂಗವಾಗಿ ಚುನಾವಣಾ ಅಧಿಸೂಚನೆಯನ್ನು ಕ್ಷೇತ್ರ ಚುನಾವಣಾಧಿಕಾರಿ ಸಿ.ಡಿ. ಗೀತಾ ಅವರು  ಮಂಗಳವಾರದಂದು ಹೊರಡಿಸಿದ್ದಾರೆ.
     ಅಧಿಸೂಚನೆಯನ್ವಯ ನಾಮಪತ್ರಗಳನ್ನು ಉಮೇದುವಾರರು ಅಥವಾ ಅವರ ಸೂಚನಕರು ಚುನಾವಣಾಧಿಕಾರಿಗೆ ಅಥವಾ ಸಹಾಯಕ ಚುನಾವಣಾಧಿಕಾರಿಗೆ ಕೊಪ್ಪಳ ತಹಸಿಲ್ದಾರರ ಕಚೇರಿ ಒಂದನೆ ಮಹಡಿಯಲ್ಲಿನ ಸಭಾಂಗಣದಲ್ಲಿ ಏ. 24 ರವರೆಗೆ (ಸರ್ಕಾರಿ ರಜಾ ದಿನ ಹೊರತುಪಡಿಸಿ) ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 03 ಗಂಟೆಯವರೆಗಿನ ಅವಧಿಯಲ್ಲಿ ಸಲ್ಲಿಸಬಹುದು.  ನಾಮಪತ್ರದ ನಮೂನೆಗಳನ್ನು ಇದೇ ಕಚೇರಿಯಲ್ಲಿ ಹಾಗೂ ಇದೇ ವೇಳೆಯಲ್ಲಿ ಪಡೆದುಕೊಳ್ಳಬಹುದು.  ನಾಮಪತ್ರಗಳ ಪರಿಶೀಲನೆ ಏ. 25 ರಂದು ಬೆಳಿಗ್ಗೆ 11 ಗಂಟೆಗೆ ನಡೆಸಲಾಗುವುದು.  ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳುವ ತಿಳುವಳಿಕೆ ಪತ್ರವನ್ನು ಉಮೇದುವಾರ ಅಥವಾ ಅವರ ಯಾರೇ ಸೂಚಕರು ಅಥವಾ ಅದನ್ನು ಸಲ್ಲಿಸಲು ಉಮೇದುವಾರರಿಂದ ಲಿಖಿತದಲ್ಲಿ ಅಧಿಕೃತರಾದ ಅವರ ಏಜೆಂಟ್ ಏ. 27 ರಂದು ಮಧ್ಯಾಹ್ನ 03 ಗಂಟೆಯ ಒಳಗಾಗಿ ಸಲ್ಲಿಸಬಹುದು.  ಮತದಾನ ಮೇ. 12 ರಂದು ಬೆಳಿಗ್ಗೆ 07 ಗಂಟೆಯಿಂದ ಸಂಜೆ 05 ಗಂಟೆಯವರೆಗೆ ನಡೆಯಲಿದೆ ಎಂದು ಕೊಪ್ಪಳ ಕ್ಷೇತ್ರ ಚುನಾವಣಾಧಿಕಾರಿ ಸಿ.ಡಿ. ಗೀತಾ ಅವರು ತಿಳಿಸಿದ್ದಾರೆ.

ವಿಧಾನಸಭೆ ಚುನಾವಣೆ : ನಾಮಪತ್ರ ಸಲ್ಲಿಸಬಯಸುವವರಿಗೆ ಸೂಚನೆ


ಕೊಪ್ಪಳ ಏ. 17 (ಕರ್ನಾಟಕ ವಾರ್ತೆ): ಪ್ರಸಕ್ತ ವಿಧಾನಸಭಾ ಚುನಾವಣೆಗೆ ಏ. 17 ರಂದು ಅಧಿಸೂಚನೆ ಪ್ರಕಟಗೊಂಡಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ನಾಮಪತ್ರ ಸಲ್ಲಿಸಬಯಸುವವರು ಅನುಸರಿಸುವ ಕ್ರಮಗಳ ಕುರಿತು ಸೂಚನೆಗಳನ್ನು ನೀಡಲಾಗಿದೆ.
ನಾಮಪತ್ರ ಸಲ್ಲಿಸಬಯಸುವವರು ನಾಮಪತ್ರವನ್ನು ನಮೂನೆ 2ಬಿ ರಲ್ಲಿ ಸಲ್ಲಿಸಬೇಕು . ಸೂಚಕರು ಮತ್ತು ಅಭ್ಯರ್ಥಿಯು ಕಡ್ಡಾಯವಾಗಿ ಸಹಿ ಮಾಡಿರಬೇಕು. ಸಹಿ ಮಾಡದ ನಾಮಪತ್ರಗಳನ್ನು ತಿರಸ್ಕರಿಸಲಾಗುವುದು. ನಾಮಪತ್ರದಲ್ಲಿ ಹೆಸರು ಮತ್ತು ಅಂಚೆ ವಿಳಾಸವನ್ನು ಸ್ಪಷ್ಟವಾಗಿ ಹಾಗೂ ಪೂರ್ಣವಾಗಿ ನಮೂದಿಸಬೇಕು. ನಮೂನೆ 26 ರಲ್ಲಿ ಅಫಿಡವಿಟ್ ರೂ. 20 ರ ಛಾಪಾ ಕಾಗದದಲ್ಲಿ (2 ಮೂಲ ಪ್ರತಿಗಳು ಹಾಗೂ 03 ಜೆರಾಕ್ಸ್ ಪ್ರತಿಗಳು) ಸಲ್ಲಿಸಬೇಕು. ಅಭ್ಯರ್ಥಿಯು ಅಫಿಡವಿಟ್‍ನಲ್ಲಿ ಎಲ್ಲಾ ಪುಟಗಳಿಗೆ ಸಹಿ ಮಾಡಿರಬೇಕು. ಅಫಿಡವಿಟ್‍ನ ಎಲ್ಲ ಕಾಲಂಗಳನ್ನು ಕಡ್ಡಾಯವಾಗಿ ಭರ್ತಿ ಮಾಡಿರಬೇಕು. ಅನ್ವಯವಾಗದ ಕಾಲಂಗಳಲ್ಲಿ ‘ಅನ್ವಯಸುವುದಿಲ್ಲ/NIL ಎಂದು ಬರೆಯಬೇಕು. ನೋಟರಿ ಪಬ್ಲಿಕ್‍ರಿಂದ ದೃಢೀಕರಿಸಿರಬೇಕು. ಅಫಿಡವಿಟ್‍ನ ಕ್ರಮಸಂಖ್ಯೆ 3 ರಲ್ಲಿ ಅಭ್ಯರ್ಥಿಯು ಹೊಂದಿರುವ ಸಾಮಾಜಿಕ ಜಾಲತಾಣದ ವಿವರ ನೀಡಬೇಕು. ಅಂದರೆ ಫೇಸ್‍ಬುಕ್, ಟ್ವಿಟರ್, ಇನ್ಸ್‍ಟಾಗ್ರಾಂ, ಪರ್ಸನಲ್ ಆ್ಯಪ್, ಪರ್ಸನಲ್ ವೆಬ್‍ಸೈಟ್, ಯುಟ್ಯೂಬ್ ಚಾನೆಲ್, ಬ್ಲಾಗ್ಸ್, ಇ-ಮೇಲ್ ಐಡಿ, ವಾಟ್ಸಪ್, ಟೆಲಿಗ್ರಾಂ, ಹೈಕ್ ಇತ್ಯಾದಿ ಸಾಮಾಜಿಕ ಜಾಲತಾಣಗಳ ಎಲ್ಲ ಸಮಗ್ರ ವಿವರವನ್ನು ನೀಡಬೇಕು. ಹೆಚ್ಚುವರಿ ಅಫಿಡವಿಟ್‍ನ್ನು (ಸರ್ಕಾರಕ್ಕೆ ಬರಬೇಕಾದ ಬೇಬಾಕಿ ಬಗ್ಗೆ) ಸಲ್ಲಿಸಬೇಕು. ಸಂಬಂಧಪಟ್ಟ ಇಲಾಖೆಗಳಿಂದ ಬೇಬಾಕಿ ದೃಢೀಕರಣ ( (No Due certificate) ಹಾಜರುಪಡಿಸಬೇಕು. ನೋಟರಿ ಪಬ್ಲಿಕ್‍ರಿಂದ ದೃಢೀಕರಿಸಿರಬೇಕು. ಹೆಚ್ಚುವರಿ ಅಫಿಡವಿಟ್ ಸಲ್ಲಿಸದಿದ್ದಲ್ಲಿ ಪ್ರಜಾಪ್ರಾತಿನಿಧ್ಯ ಕಾಯ್ದೆ ಕಲಂ-36 ರಂತೆ ಅನರ್ಹತೆಯ ಮಾನದಂಡವಾಗುತ್ತದೆ. ಅಭ್ಯರ್ಥಿಯು (ಆಯಾ ಕ್ಷೇತ್ರದ ಮತದಾರರಾಗಿರದಿದ್ದಲ್ಲಿ) ಕಡ್ಡಾಯವಾಗಿ ಸಂಬಂಧಿಸಿದ ವಿಧಾನಸಭಾ ಮತದಾರರ ಪಟ್ಟಿಯ ದೃಢೀಕೃತ ನಕಲು ಪ್ರತಿ ಸಲ್ಲಿಸಬೇಕು. ಅಭ್ಯರ್ಥಿಯ ವಯಸ್ಸು 25 ವರ್ಷಕ್ಕಿಂತ ಕಡಿಮೆ ಇರಬಾರದು. ಒಬ್ಬರು ಅಭ್ಯರ್ಥಿಯು 04 ನಾಮಪತ್ರಗಳನ್ನು ಮಾತ್ರ ಸಲ್ಲಿಸಬಹುದಾಗಿದೆ. ರಾಷ್ಟ್ರೀಯ/ರಾಜ್ಯ ಪಕ್ಷವಾಗಿದ್ದಲ್ಲಿ ಒಬ್ಬರು ಸೂಚಕರು. ನೋಂದಾಯಿತ/ ಪಕ್ಷೇತರರಾಗಿದ್ದಲ್ಲಿ 10 ಜನ ಸೂಚಕರ ಸಹಿ ಮಾಡಿರಬೇಕು. ಸೂಚಕರು ಕಡ್ಡಾಯವಾಗಿ ಆಯಾ ವಿಧಾನಸಭಾ ಕ್ಷೇತ್ರದ ಮತದಾರರಾಗಿರಬೇಕು. ರಾಜಕೀಯ ಪಕ್ಷಗಳ ಅಭ್ಯರ್ಥಿಗಳಾಗಿದ್ದಲ್ಲಿ ಎ ಮತ್ತು ಬಿ ಮೂಲ ಫಾರಂ ಅನ್ನು ನಾಮಪತ್ರ ಸಲ್ಲಿಸುವ ಕೊನೆಯ ದಿನ ಅಂದರೆ ಏ. 24 ರಂದು ಮಧ್ಯಾಹ್ನ 3 ಗಂಟೆಯ ಒಳಗಾಗಿ ಸಲ್ಲಿಸಬೇಕು. ಠೇವಣಿ ಹಣ, ಸಾಮಾನ್ಯ ಅಭ್ಯರ್ಥಿಗೆ ರೂ. 10 ಸಾವಿರ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಯಾಗಿದ್ದರೆ ರೂ. 5 ಸಾವಿರ. ಇದಕ್ಕಾಗಿ ಸಂಬಂಧಪಟ್ಟ ಜಾತಿ ಪ್ರಮಾಣ ಪತ್ರ ಸಲ್ಲಿಸಬೇಕು. ನಾಮಪತ್ರ ಸಲ್ಲಿಸಿದ ನಂತರ ಅಭ್ಯರ್ಥಿಯು ಪ್ರಮಾಣ ವಚನ ಸ್ವೀಕರಿಸಬೇಕು. ಚುನಾವಣಾಧಿಕಾರಿಗಳ ಕಚೇರಿಯ 100 ಮೀ. ಒಳಗೆ ಕೇವಲ ಮೂರು ವಾಹನಗಳಿಗೆ ಮಾತ್ರ ಪ್ರವೇಶಕ್ಕೆ ಅವಕಾಶವಿರುತ್ತದೆ. ಚುನಾವಣಾಧಿಕಾರಿಗಳ ಕೊಠಡಿ ಒಳಗೆ ಅಭ್ಯರ್ಥಿಯ ಜೊತಗೆಗೆ 04 ಜನರಿಗೆ ಮಾತ್ರ ಪ್ರವೇಶವಿರುತ್ತದೆ. ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು. ಇತ್ತೀಚಿನ 03 ಪಾಸ್‍ಪೋರ್ಟ್ ಅಳತೆಯ ಹಾಗೂ 02 ಸ್ಟ್ಯಾಂಪ್ ಸೈಜ್ ಅಳತೆಯ ಭಾವಚಿತ್ರಗಳನ್ನು ಸಲ್ಲಿಸಬೇಕು. ಭಾವಚಿತ್ರವನ್ನು ನಾಮಪತ್ರದೊಂದಿಗೆ ಸಲ್ಲಿಸಬೇಕು. ಚುನಾವಣೆ ಉದ್ದೇಶಕ್ಕಾಗಿಯೇ ತೆರೆದಿರುವ ಹೊಸ ಬ್ಯಾಂಕ್ ಖಾತೆಯ ಪಾಸ್‍ಬುಕ್‍ನ ನಕಲು ಪ್ರತಿ ಸಲ್ಲಿಸಬೇಕು. ಭಾರತದ ಸಂವಿಧಾನ, ಪ್ರಜಾ ಪ್ರಾತಿನಿಧ್ಯ ಕಾಯ್ದೆಯಡಿಗಳಲ್ಲಿ ತಮ್ಮ ಅರ್ಹತೆ ಮತ್ತು ಅನರ್ಹತೆಗಳ ಬಗ್ಗೆ ಮಾಹಿತಿಯನ್ನು ಹೊಂದಿರಬೇಕು ಎಂದು ಕೊಪ್ಪಳ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

Monday, 16 April 2018

ಹಣ, ಕಾಣಿಕೆಗಳಿಗೆ ಮತ ಮಾರಿಕೊಳ್ಳಬೇಡಿ- ವೆಂಕಟ್ ರಾಜಾ ಮನವಿ

ಕೊಪ್ಪಳ ಏ. 16 (ಕರ್ನಾಟಕ ವಾರ್ತೆ): ಪ್ರಸಕ್ತ ವಿಧಾನಸಭಾ ಚುನಾವಣೆಗಾಗಿ ಮೇ. 12 ರಂದು ಮತದಾನ ನಡೆಯಲಿದೆ.  ಪ್ರತಿಯೊಂದು ಮತವೂ ಅಮೂಲ್ಯವಾಗಿದ್ದು, ಹಣ, ಅಥವಾ ಕಾಣಿಕೆ ನೀಡುವಂತಹ ಆಮಿಷಗಳಿಗೆ ಮತವನ್ನು ಮಾರಿಕೊಳ್ಳದಂತೆ ಮಹಿಳೆಯರಿಗೆ ಜಾಗೃತಿ ಮೂಡಿಸಬೇಕು ಎಂದು ಕೊಪ್ಪಳ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ ಅವರು ವಿವಿಧ ಯೋಜನೆಗಳ ಮಹಿಳಾ ಸಂಯೋಜಕರಿಗೆ ಕರೆ ನೀಡಿದರು.

     ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಂಜೀವಿನಿ, ಎನ್‍ಆರ್‍ಎಲ್‍ಎಂ, ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಯೋಜನೆಗಳ ಸಂಯೋಜಕರಿಗೆ ಮತದಾನ ಜಾಗೃತಿ ಕುರಿತಂತೆ ಸೋಮವಾರದಂದು ಏರ್ಪಡಿಸಿದ ಕಾರ್ಯಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

     ಗ್ರಾಮೀಣ ಪ್ರದೇಶಗಳಲ್ಲಿ ಸಮಾಜದ ಮನಸ್ಥಿತಿ ಬದಲಾವಣೆಯಲ್ಲಿ ಮಹಿಳಾ ಘಟಕಗಳು ಬಹಳಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿವೆ.  ಶೌಚಾಲಯ ನಿರ್ಮಾಣ ಸಂದರ್ಭದಲ್ಲಿಯೂ ಇಂತಹ ಘಟಕಗಳು ಜನರ ಮನವೊಲಿಸುವಲ್ಲಿ ಪರಿಣಾಮಕಾರಿಯಾಗಿದ್ದು, ಜಿಲ್ಲೆಯಲ್ಲಿ ಶೌಚಾಲಯ ನಿರ್ಮಾಣದಲ್ಲಿ ಪ್ರಗತಿ ಸಾಧಿಸಲು ತಮ್ಮದೇ ಆದ ಕೊಡುಗೆಯನ್ನು ಮಹಿಳಾ ಘಟಕಗಳು ನೀಡಿವೆ.  ಇದೀಗ ಚುನಾವಣೆಯಲ್ಲಿ ಮತದಾರರಿಗೆ ನೈತಿಕ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಮಹಿಳೆಯರು ಬದ್ಧತೆಯನ್ನು ಪ್ರದರ್ಶಿಸುವ ಕಾಲ ಕೂಡಿ ಬಂದಿದೆ.  ಮನೆಗಳಲ್ಲಿ ತಮ್ಮ ಮನೆಯ ಕಾರ್ಯದಲ್ಲಿ ಸದಾ ಬ್ಯುಸಿಯಾಗಿರುವ ಮಹಿಳೆಯರು, ಮತದಾನ ಜಾಗೃತಿಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಏರ್ಪಡಿಸಲಾಗುತ್ತಿರುವ ಮತದಾನ ಯಂತ್ರ, ವಿವಿ ಪ್ಯಾಟ್ ಕಾರ್ಯವಿಧಾನ ಕುರಿತ ಪ್ರಾತ್ಯಾಕ್ಷಿಕೆಯಲ್ಲಿ ಪಾಲ್ಗೊಳ್ಳದಿರುವುದು ಕಂಡುಬಂದಿದೆ.  ಹೀಗಾಗಿ ಮಹಿಳೆಯರಿಗೆ ಸ್ಥಳೀಯವಾಗಿ ಸುಶಿಕ್ಷಿತ ಮಹಿಳೆಯರೇ ನೈತಿಕ ಮತದಾನ ಕುರಿತು ಅರಿವು ಮೂಡಿಸಬೇಕು.  ವಿವಿಧ ಪಕ್ಷಗಳು, ರಾಜಕೀಯ ವ್ಯಕ್ತಿಗಳು ಗ್ರಾಮೀಣ ಪ್ರದೇಶಗಳಲ್ಲಿ ಹಣ ನೀಡುವುದು, ಸೀರೆ, ಕುಕ್ಕರ್ ಸೇರಿದಂತೆ ಇತರೆ ಕಾಣಿಕೆಗಳ ಆಮಿಷವೊಡ್ಡುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ.  ಆದರೆ, ಇಂತಹ ಆಮಿಷವೊಡ್ಡುವುದು ಅಥವಾ ಪಡೆಯುವುದು ಕೂಡ ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ.  ಇದು ಶಿಕ್ಷಾರ್ಹ ಅಪರಾಧವಾಗಿದ್ದು, ಇಂತಹ ಕೆಟ್ಟ ವ್ಯವಸ್ಥೆಯ ವಿರುದ್ಧ ಮಹಿಳೆಯರು ಜಾಗೃತಿ ಮೂಡಿಸಬೇಕು.  ಮಹಿಳೆಯರೇ ಮಹಿಳಾ ಮತದಾರರ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಕಾರ್ಯಗಾರವನ್ನು ಹಮ್ಮಿಕೊಂಡಿದ್ದು, ಮಹಿಳಾ ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ನಿತ್ಯ ಸಂಜೆ ವೇಳೆ ಆಯೋಜಿಸಬೇಕು.  ಈ ಮೂಲಕ ಮಹಿಳೆಯರಲ್ಲಿ ನೈತಿಕ ಮತದಾನದ ಕುರಿತು ಅರಿವು ಮೂಡಿಸಲು ಮುಂದಾಗಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ ಅವರು ಹೇಳಿದರು.
ಮಹಿಳಾ ಮತಗಟ್ಟೆಗಳು :
********** ಚುನಾವಣಾ ಪ್ರಕ್ರಿಯೆಯಲ್ಲಿ ಮಹಿಳೆಯರನ್ನು ಮತದಾನಕ್ಕಾಗಿ ಪ್ರೇರೇಪಿಸುವ ಸಲುವಾಗಿ, ಹಾಗೂ ಮಹಿಳೆಯರಲ್ಲಿ ನೈತಿಕ ಮತದಾನದ ಕುರಿತು ಜಾಗೃತಿ ಮೂಡಿಸಲು ಜಿಲ್ಲೆಯಲ್ಲಿ ಪ್ರತಿ ಕ್ಷೇತ್ರದಲ್ಲಿಯೂ ತಲಾ ಒಂದು ಮತಗಟ್ಟೆಯನ್ನು ಮಾದರಿ ಮತಗಟ್ಟೆಗಳನ್ನಾಗಿ ನಿರ್ಮಿಸಲಾಗುತ್ತಿದೆ.  ಈ ಮತಗಟ್ಟೆಯಲ್ಲಿ ಮತಗಟ್ಟೆ ಅಧಿಕಾರಿಯಿಂದ ಹಿಡಿದು, ಸಹಾಯಕ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನೊಡಗೂಡಿ ಎಲ್ಲರೂ ಮಹಿಳೆಯರೇ ಇರುತ್ತಾರೆ.  ಇದನ್ನು ಪಿಂಕ್ ಮತಗಟ್ಟೆ ಎಂದು ಕರೆಯಲಾಗುತ್ತಿದ್ದು, ಇದರಲ್ಲಿ ವಿಶೇಷ ಮೂಲಭೂತ ವ್ಯವಸ್ಥೆಗಳನ್ನೂ ಕೂಡ ಕಲ್ಪಿಸಲಾಗುವುದು ಎಂದು ವೆಂಕಟ್ ರಾಜಾ ಅವರು ಹೇಳಿದರು.
ಮತದಾನ ಜಾಗೃತಿಗೆ ಆಯೋಗದ ಯತ್ನ :
************* ಕುಷ್ಟಗಿ ತಾಲೂಕಿನಲ್ಲಿ ಇತ್ತೀಚೆಗೆ ಮತದಾನ ಜಾಗೃತಿಗಾಗಿ ಏರ್ಪಡಿಸಿದ ಬೈಕ್ ರ್ಯಾಲಿ ಸಂದರ್ಭದಲ್ಲಿ ಆದ ಅನುಭವವನ್ನು ಇಲ್ಲಿ ಹಂಚಿಕೊಂಡ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ತಾವು ಸಾಮಾನ್ಯ ವ್ಯಕ್ತಿಗಳಂತೆ ಕುಷ್ಟಗಿ ತಾಲೂಕಿನ ಗ್ರಾಮವೊಂದಕ್ಕೆ ಭೇಟಿ ನೀಡಿದಾಗ, ಅಲ್ಲಿಯ ಕಟ್ಟೆಯ ಮೇಲೆ ಹರಟೆ ಹೊಡೆಯುತ್ತ ಕುಳಿತಿದ್ದ ಕೆಲ ವ್ಯಕ್ತಿಗಳು, ತಮ್ಮನ್ನು ಕಂಡು, ತಾವು ಯಾವ ಪಕ್ಷದಿಂದ ಬಂದಿದ್ದೀರಿ, ತಮಗೆ ಎಷ್ಟು ಹಣ ಕೊಡುತ್ತೀರಿ ಎಂಬುದಾಗಿ ಪ್ರಶ್ನಿಸಿದರು, ಆಗ ತಾವು ಜನರಲ್ಲಿ ನೈತಿಕ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಚುನಾವಣಾ ಆಯೋಗದ ಪರವಾಗಿ ಬಂದಿದ್ದೇವೆ ಎಂದಾಗಲೇ ಜನರಿಗೆ ತಮ್ಮ ತಪ್ಪಿನ ಅರಿವಾಯಿತು.  ಕಾರ್ಯಕ್ರಮದಲ್ಲಿ ಮತವನ್ನು ಹಣ ಅಥವಾ ಇತರೆ ಆಮಿಷಗಳಿಗೆ ಮಾರಿಕೊಂಡಲ್ಲಿ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು ಎಂದು ವೆಂಕಟ್ ರಾಜಾ ಅವರು ಇದೇ ಸಂದರ್ಭದಲ್ಲಿ ಸ್ಮರಿಸಿಕೊಂಡರು.
ಪ್ರಜಾಪ್ರಭುತ್ವ ಬಲಗೊಳ್ಳಲು ಮತ ಪ್ರಮಾಣ ಹೆಚ್ಚಬೇಕು :
*************** ಜಿಲ್ಲೆಯಲ್ಲಿ ಪುರುಷ- 535874, ಹಾಗೂ ಮಹಿಳೆ- 533325 ಸೇರಿದಂತೆ ಒಟ್ಟು 1069199 ಮತದಾರರಿದ್ದಾರೆ.  ಅಂದರೆ ಸುಮಾರು ಶೇ. 50 ರಷ್ಟು ಮಹಿಳಾ ಮತದಾರರಿದ್ದಾರೆ.  ಮತದಾನ ಪ್ರಮಾಣ ಅತ್ಯಂತ ಗರಿಷ್ಠವಾದಾಗಲೇ, ನಿಜವಾದ ಚುನಾವಣೆಯಾದಂತೆ,  ನಮ್ಮನ್ನು ಪ್ರತಿನಿಧಿಸುವ ಜನ ಪ್ರತಿನಿಧಿಯನ್ನು ಎಲ್ಲರೂ ಸೇರಿ ಆರಿಸಿದಾಗಲೇ ಪ್ರಜಾಪ್ರಭುತ್ವಕ್ಕೆ ಅರ್ಥ ಬರಲು ಸಾಧ್ಯ.  ಆದ್ದರಿಂದ ಜಿಲ್ಲೆಯಲ್ಲಿ ಮತದಾನ ಪ್ರಮಾಣ ಶೇ. 100 ರಷ್ಟು ಆಗಬೇಕು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ ಆಶಯ ವ್ಯಕ್ತಪಡಿಸಿದರು.
     ಕಾರ್ಯಗಾರದಲ್ಲಿ ಜಿಲ್ಲೆಯ ಸಂಜೀವಿನಿ, ಎನ್‍ಆರ್‍ಎಲ್‍ಎಂ, ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಯೋಜನೆಗಳ ಸುಮಾರು 400 ಕ್ಕೂ ಹೆಚ್ಚು ಮಹಿಳಾ ಸಂಯೋಜಕರು ಭಾಗವಹಿಸಿದ್ದರು.  ಜಿಲ್ಲಾ ಪಂಚಾಯತಿಯ ಸಹಾಯಕ ನಿರ್ದೇಶಕ ಶರಣಪ್ಪ, ಕುಷ್ಟಗಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಮೋಹನ್ ಸೇರಿದಂತೆ ಹಲವು ಅಧಿಕಾರಿಗಳು ಭಾಗವಹಿಸಿದ್ದರು.

Saturday, 14 April 2018

ಡಾ: ಬಿ.ಆರ್. ಅಂಬೇಡ್ಕರ್ ಅವರಿಗೆ ಭಕ್ತಿ ನಮನ


ಕೊಪ್ಪಳ ಏ. 14 (ಕರ್ನಾಟಕ ವಾರ್ತೆ): ಸಂವಿಧಾನ ಶಿಲ್ಪಿ, ಮಹಾನ್ ಮಾನವತಾವಾದಿ ಡಾ. ಬಿ.ಆರ್. ಅಂಬೇಡ್ಕರ್ ಅವರ 127 ನೇ ಜನ್ಮ ದಿನಾಚರಣೆಯನ್ನು ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸಿ ಭಕ್ತಿ ನಮನ ಸಲ್ಲಿಸುವ ಮೂಲಕ ಸರಳವಾಗಿ ಆಚರಿಸಲಾಯಿತು.
     ಚುನಾವಣಾ ನೀತಿ ಸಂಹಿತೆಯ ಕಾರಣದಿಂದಾಗಿ ಜಿಲ್ಲಾಡಳಿತ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ಶನಿವಾರದಂದು ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಸರಳವಾಗಿ ಆಚರಿಸಲಾಯಿತು.  ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ರೇಣುಕಾನಂದ್ ಅವರು, ಅಂಬೇಡ್ಕರ್ ಅವರ ಜೀವನ, ಸಾಧನೆ ಹಾಗೂ ಅವರ ಆಶಯಗಳ ಕುರಿತು ಸಂಕ್ಷಿಪ್ತವಾಗಿ ವಿವರಿಸಿ, ಅಂಬೇಡ್ಕರ್ ಅವರ ಸಮಾನತೆಯ ಸದುದ್ದೇಶವನ್ನು ಈಡೇರಿಸಲು ಸರ್ಕಾರಿ ನೌಕರರು ಪಣತೊಡಬೇಕಿದೆ ಎಂದರು.
     ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಆಹಾರ ಇಲಾಖೆ ಉಪನಿರ್ದೇಶಕಿ ಸಿ.ಡಿ. ಗೀತಾ, ಅಬಕಾರಿ ಇಲಾಖೆ ಉಪ ಆಯುಕ್ತ ಪ್ರಶಾಂತಕುಮಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆಗೈದು ಭಕ್ತಿ ನಮನ ಸಲ್ಲಿಸಿದರು.  

ಅಬಕಾರಿ ನಿಯಮಗಳನ್ನು ಉಲ್ಲಂಘಿಸಿದರೆ ಪರವಾನಿಗೆ ರದ್ದು- ಡಿಸಿ ಕನಗವಲ್ಲಿ

ಕೊಪ್ಪಳ ಏ. 14 (ಕರ್ನಾಟಕ ವಾರ್ತೆ): ಪ್ರಸಕ್ತ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಮದ್ಯದ ಆಮಿಷವೊಡ್ಡಲು, ಸಹಕರಿಸುವ ಹಾಗೂ ಅಬಕಾರಿ ನಿಯಮಗಳನ್ನು ಉಲ್ಲಂಘಿಸುವ ಮದ್ಯದ ಅಂಗಡಿಗಳ ಪರವಾನಿಗೆಯನ್ನು ರದ್ದುಪಡಿಸಲಾಗುವುದು ಎಂದು ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಎಚ್ಚರಿಕೆ ನೀಡಿದರು.

     ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿಧಾನಸಭೆ ಚುನಾವಣೆ ನಿಮಿತ್ಯ ಜಿಲ್ಲೆಯ ಎಲ್ಲ ಅಬಕಾರಿ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

     ವಿಧಾನಸಭೆ ಚುನಾವಣೆಯಲ್ಲಿ ಮತದಾರರಿಗೆ ಮದ್ಯದ ಆಮಿಷವೊಡ್ಡಿ, ಮತದಾರರ ಮೇಲೆ ಪ್ರಭಾವ ಬೀರಲು   ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳಿಗೆ ಸಹಕಾರ ನೀಡುವ ಮತ್ತು ಅಬಕಾರಿ ನಿಯಮಗಳನ್ನು ಉಲ್ಲಂಘಿಸುವ ಮದ್ಯದ ಅಂಗಡಿಗಳ ಪರವಾನಿಗೆಯನ್ನು ರದ್ದುಪಡಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು.  ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 136 ಮದ್ಯದ ಅಂಗಡಿಗಳಿದ್ದು, ಈ ಮದ್ಯದ ಅಂಗಡಿಗಳಲ್ಲಿ ಕಳೆದ 2017 ರ ಜನವರಿ ಮತ್ತು ಫೆಬ್ರವರಿ ತಿಂಗಳಿನಲ್ಲಿ ಇದ್ದಂತಹ ದಾಸ್ತಾನು ಹಾಗೂ ಸರಾಸರಿ ಮಾರಾಟ ವಿವರ ಹಾಗೂ ಈ ವರ್ಷದ ಜನವರಿ ಮತ್ತು ಫೆಬ್ರವರಿ ತಿಂಗಳಿನಲ್ಲಿ ಇದ್ದ ದಾಸ್ತಾನು ಹಾಗೂ ಸರಾಸರಿ ಮಾರಾಟ ವಿವರವನ್ನು ಜಿಲ್ಲೆಯ ಎಲ್ಲ ಮದ್ಯದ ಅಂಗಡಿವಾರು ಹಾಗೂ ತಾಲೂಕುವಾರು ವರದಿಯನ್ನು ಏ. 16 ರ ಒಳಗಾಗಿ ಸಲ್ಲಿಸಬೇಕು.  ಚುನಾವಣೆ ಘೋಷಣೆಯಾದ 2018 ರ ಮಾರ್ಚ್ 27 ರಿಂದ ಈವರೆಗಿನ ಪ್ರತಿದಿನದ ಇಂಡೆಂಟ್ ಹಾಗೂ ಮಾರಾಟ ವಿವರ ಹಾಗೂ ಉಳಿಕೆ ವಿವರವನ್ನು ಬ್ರಾಂಡ್‍ವಾರು ಪ್ರತ್ಯೇಕವಾಗಿ ನಮೂದಿಸಿ, ಪ್ರತಿ ಅಂಗಡಿ ಹಾಗೂ ತಾಲೂಕುವಾರು ಸಲ್ಲಿಸಬೇಕು.  ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಇಂತಹ ವರದಿಯನ್ನು ನಿತ್ಯ ಜಿಲ್ಲಾಧಿಕಾರಿಗಳ ಕಚೇರಿಗೆ ಹಾಗೂ ಚುನಾವಣಾ ವೀಕ್ಷಕರಿಗೆ ಸಲ್ಲಿಸಬೇಕು.  ಕೊಪ್ಪಳ ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಊರ ಒಳಗಡೆ ಇರುವಂತಹ ಮದ್ಯದ ಅಂಗಡಿಗಳ ಬಗ್ಗೆಯೂ ತೀವ್ರ ನಿಗಾ ವಹಿಸಬೇಕು.  ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮದ್ಯದ ಮಾರಾಟ ಹಾಗೂ ವ್ಯವಹಾರ ಇರುವ ಮದ್ಯದ ಅಂಗಡಿಗಳು ಹಾಗೂ ಕಳೆದ ವರ್ಷಕ್ಕೂ ಈ ವರ್ಷಕ್ಕೂ ಹೆಚ್ಚಿನ ದಾಸ್ತಾನು ಹಾಗೂ ಮಾರಾಟ ಪ್ರಮಾಣ ದಾಖಲಾಗಿರುವ ಅಂಗಡಿಗಳನ್ನು ಸೂಕ್ಷ್ಮ ಮದ್ಯದ ಅಂಗಡಿಗಳೆಂದು ಗುರುತಿಸಲಾಗುತ್ತಿದ್ದು, ಇಂತಹ ಅಂಗಡಿಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗುವುದು.  ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳಿಗೆ ಮದ್ಯದ ಅಂಗಡಿಗಳಲ್ಲಿ ಸ್ಟಾಕ್ ರಿಜಿಸ್ಟರ್ ಪರಿಶೀಲಿಸಲು ಸೂಚನೆ ನೀಡಲಾಗಿದ್ದು, ಅಬಕಾರಿ ಇಲಾಖೆ ಅಧಿಕಾರಿಗಳು ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳೊಂದಿಗೆ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು.  ಕೊಪ್ಪಳ ಜಿಲ್ಲೆಯಲ್ಲಿ 01 ಡಿಸ್ಟಿಲರಿ ಹಾಗೂ 01- ವೈನರಿ ಘಟಕಗಳಿದ್ದು, ಈ ಘಟಕಗಳು ಜೊತೆಗೆ, ಮದ್ಯದ ಬಾಕ್ಸ್‍ಗಳನ್ನು ಎತ್ತುವಳಿ ಮಾಡುವ ಸ್ಥಳಗಳಲ್ಲಿ ಕಡ್ಡಾಯವಾಗಿ ಸಿಸಿ ಟಿ.ವಿ. ಕ್ಯಾಮೆರಾ ಅಳವಡಿಸಿ, ಪೊಲೀಸ್ ಬಂದೋಬಸ್ತ್ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಅಬಕಾರಿ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಚೆಕ್‍ಪೋಸ್ಟ್‍ಗಳಲ್ಲಿ ತೀವ್ರ ತಪಾಸಣೆ :
***************** ಕೊಪ್ಪಳ ಜಿಲ್ಲೆಯಿಂದ ವಿವಿಧೆಡೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿಗಳ ಸ್ಥಳಗಳಲ್ಲಿ ಈಗಾಗಲೆ ಒಟ್ಟು 11 ಕಡೆಗಳಲ್ಲಿ ಚೆಕ್‍ಪೋಸ್ಟ್ ಸ್ಥಾಪಿಸಲಾಗಿದೆ.  ಈ ಚೆಕ್‍ಪೋಸ್ಟ್‍ಗಳಲ್ಲಿ ಅಧಿಕಾರಿಗಳು ಅಕ್ರಮ ಮದ್ಯ ಸಾಗಾಣಿಕೆ ಬಗ್ಗೆ ತೀವ್ರ ನಿಗಾ ವಹಿಸಿದ್ದಾರೆ.  ತಪಾಸಣೆಯನ್ನು ಇನ್ನಷ್ಟು ತೀವ್ರಗೊಳಿಸಬೇಕು.  ಈ ಚೆಕ್‍ಪೋಸ್ಟ್‍ಗಳಿಂದ ತಪ್ಪಿಸಿಕೊಳ್ಳಲು, ಗ್ರಾಮೀಣ ರಸ್ತೆಗಳನ್ನು ಬಳಕೆ ಮಾಡಿಕೊಳ್ಳುವ ಸಾಧ್ಯತೆಗಳಿದ್ದು, ಅಬಕಾರಿ ಅಧಿಕಾರಿಗಳು ನಿಗಾ ವಹಿಸಬೇಕು.  ದಾಳಿ ಪ್ರಕರಣಗಳನ್ನು ಹೆಚ್ಚಿಸಬೇಕು.  ರಾತ್ರಿ ವೇಳೆಯಲ್ಲಿ ಅಕ್ರಮ ಸಾಗಾಣಿಕೆ ನಡೆಯುವ ಸಾಧ್ಯತೆಗಳಿರುವುದರಿಂದ, ರಾತ್ರಿ ವೇಳೆ ತಪಾಸಣೆಯನ್ನು ಹೆಚ್ಚು ತೀವ್ರಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಟೋಕನ್ ವ್ಯವಸ್ಥೆ ಕಂಡಲ್ಲಿ ಲೈಸೆನ್ಸ್ ರದ್ದು :
*************** ಚುನಾವಣೆ ಸಂದರ್ಭದಲ್ಲಿ ಮತದಾರರ ಮೇಲೆ ಪ್ರಭಾವ ಬೀರಲು, ಮದ್ಯಮ ಆಮಿಷವೊಡ್ಡುವ ಸಂಭವ ಇದ್ದು, ಟೋಕನ್ ವ್ಯವಸ್ಥೆ ಮಾಡಿಕೊಂಡು, ಮದ್ಯದ ಅಂಗಡಿಗಳಲ್ಲಿ ಹಣದ ಬದಲಿಗೆ ಈ ಟೋಕನ್ ಪಡೆದು, ಮದ್ಯದ ಬಾಟಲ್ ನೀಡುವ ಅಕ್ರಮ ಚಟುವಟಿಕೆ ನಡೆಯುವ ಸಾಧ್ಯತೆಗಳಿರುತ್ತವೆ.  ಅಬಕಾರಿ ಅಧಿಕಾರಿಗಳು ಹಾಗೂ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ಇಂತಹ ಅಕ್ರಮ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಡಬೇಕು.  ಇಂತಹ ಅಕ್ರಮ ವ್ಯವಸ್ಥೆಯ ಬಗ್ಗೆ ಸಾರ್ವಜನಿಕರು ಯಾವುದೇ ದೂರು ನೀಡಿದಲ್ಲಿ, ತಕ್ಷಣ ಅಧಿಕಾರಿಗಳು ಧಾವಿಸಿ, ಅಕ್ರಮ ಚಟುವಟಿಕೆ ಕಂಡುಬಂದಲ್ಲಿ, ಯಾವುದೇ ಪ್ರಭಾವಕ್ಕೆ ಒಳಗಾಗದೆ, ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕು.  ಒಂದು ವೇಳೆ ಅಧಿಕಾರಿಗಳೇ ಯಾರದಾದರೂ ಪ್ರಭಾವಕ್ಕೆ ಒಳಗಾಗಿದ್ದು ಕಂಡುಬಂದಲ್ಲಿ ಅಂತಹ ಅಧಿಕಾರಿ, ಸಿಬ್ಬಂದಿಗಳ ವಿರುದ್ಧವೂ ಶಿಸ್ತು ಕ್ರಮ ಕೈಗೊಳ್ಳಲಾಗುವುದು.  ಹೀಗಾಗಿ ಅಧಿಕಾರಿಗಳು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
     ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್ ಶೆಟ್ಟಿ ಅವರು ಮಾತನಾಡಿ, ಚೆಕ್‍ಪೋಸ್ಟ್‍ಗಳಿಂದ ತಪ್ಪಿಸಿಕೊಳ್ಳಲು ಗ್ರಾಮೀಣ ರಸ್ತೆಯನ್ನು ಬಳಕೆ ಮಾಡಿಕೊಂಡು ಸಂಚರಿಸುವ ವಾಹನಗಳ ಬಗ್ಗೆಯೂ ಪೊಲೀಸ್ ಅಧಿಕಾರಿಗಳು ತೀವ್ರ ನಿಗಾ ವಹಿಸಿದ್ದಾರೆ.  ಸರ್ಕಾರಿ ಸ್ವಾಮ್ಯದ ಎಂಎಸ್‍ಐಎಲ್ ಮದ್ಯ ಮಾರಾಟ ಮಳಿಗೆಗಳಲ್ಲೂ ಅಕ್ರಮ ಕುರಿತು ದೂರುಗಳು ಬರುತ್ತಿದ್ದು, ಅಕ್ರಮ ಚಟುವಟಿಕೆ ಕೈಗೊಳ್ಳುವ ಯಾವುದೇ ಅಂಗಡಿಗಳಾಗಲಿ, ಅವರಿಗೆ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು.  ಗಂಗಾವತಿ ಮತ್ತು ಕನಕಗಿರಿ ಕ್ಷೇತ್ರಗಳಲ್ಲಿ ಮದ್ಯದ ಅಕ್ರಮ ಚಟುವಟಿಕೆಗಳ ಬಗ್ಗೆ ಹೆಚ್ಚಿನ ದೂರುಗಳು ಕೇಳಿಬರುತ್ತಿದ್ದು, ಈ ಕುರಿತು ತೀವ್ರ ನಿಗಾ ವಹಿಸಲಾಗಿದೆ.  ಅಬಕಾರ ಇಲಾಖೆಯವರು ಎಚ್ಚರಿಕೆಯಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
     ಕೊಪ್ಪಳ ಜಿಲ್ಲಾ ಅಬಕಾರಿ ಉಪ ಆಯುಕ್ತ ಪ್ರಶಾಂತಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಸಿಎಲ್2- 56, ಸಿಎಲ್7-32, ಸಿಎಲ್9- 18, ಸಿಎಲ್4-01, ಇತರೆ-15, ಎಂಎಸ್‍ಐಎಲ್-14 ಸೇರಿದಂತೆ ಒಟ್ಟು 136 ಮದ್ಯದ ಅಂಗಡಿಗಳಿವೆ.  ಅಕ್ರಮ ಪತ್ತೆಗಾಗಿ ಈಗಾಗಲೆ ಇಲಾಖೆಯಿಂದ 03 ವಿಶೇಷ ತಂಡ ರಚಿಸಲಾಗಿದೆ.  04 ಸ್ಕ್ವಾಡ್‍ಗಳನ್ನು ನೇಮಿಸಲಾಗಿದೆ.  ಚುನಾವಣೆ ಘೋಷಣೆಯಾದಾಗಿನಿಂದ ಈವರೆಗೆ ಅಬಕಾರಿ ಅಕ್ರಮಗಳಿಗೆ ಸಂಬಂಧಿಸಿದ 06 ಪ್ರಕರಣಗಳನ್ನು ದಾಖಲಿಸಿ 169 ಲೀ. ಲಿಕ್ಕರ್ ವಶಕ್ಕೆ ಪಡೆಯಲಾಗಿದೆ.  ಬಿಎಲ್‍ಸಿ ಸನ್ನದುದಾರರ ಮೇಲೆ 16 ಪ್ರಕರಣ ದಾಖಲಾಗಿವೆ.  75 ಕಡೆಗಳಲ್ಲಿ ದಾಳಿ ನಡೆಸಿದ್ದು, 20 ಎಫ್‍ಐಆರ್ ದಾಖಲಿಸಿದೆ.  ಚುನಾವಣೆ ಸಂದರ್ಭದಲ್ಲಿ ಮದ್ಯದ ಪ್ರಭಾವ ಬೀರಲು ಯತ್ನಿಸುವ ಹಾಗೂ ಅಕ್ರಮ ಸಾಗಾಣಿಕೆ ಅಥವಾ ವಿತರಣೆ ಕೈಗೊಳ್ಳುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು.  ದಾಳಿ ಪ್ರಕರಣಗಳನ್ನು ಇನ್ನಷ್ಟು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
     ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಅಬಕಾರಿ ಉಪ ಅಧೀಕ್ಷಕ ನಾರಾಯಣ ನಾಯ್ಕ ಸೇರಿದಂತೆ ಜಿಲ್ಲೆಯ ಎಲ್ಲ ಅಬಕಾರಿ ನಿರೀಕ್ಷಕರು ಪಾಲ್ಗೊಂಡಿದ್ದರು.
 

Friday, 13 April 2018

ಮೂಲ ಕಾನೂನು ಹಾಗೂ ಮತದಾನ ಜಾಗೃತಿಗಾಗಿ ಕಾನೂನು ಅರಿವು-ನೆರವು ಕಾರ್ಯಕ್ರಮಕೊಪ್ಪಳ ಏ. 13 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ವಿದ್ಯಾರ್ಥಿಗಳಿಗಾಗಿ ಮೂಲ ಕಾನೂನು ಹಾಗೂ ಮತದಾನ ಜಾಗೃತಿ ಕುರಿತು ಕಾನೂನು ಅರಿವು-ನೆರವು ಕಾರ್ಯಕ್ರಮ ಜರುಗಿತು.

    ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಮೇಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಇವರ ಸಹಯೋಗದಲ್ಲಿ ಮೂಲ ಕಾನೂನು ಹಾಗೂ ಮತದಾನ ಜಾಗೃತಿ ಕುರಿತು ಕಲ್ಯಾಣ ನಗರದ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಗುರುವಾರದಂದು ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.  

    ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಟಿ. ಶ್ರೀನಿವಾಸ ಅವರು ಮಾತನಾಡಿ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಪ್ರಜೆಗೂ ಮುಕ್ತವಾಗಿ ಮತದಾನ ಮಾಡಲು ಹಕ್ಕಿದೆ. ಕರ್ನಾಟಕ ವಿಧಾನಸಭೆ ಚುನಾವಣೆಯು ಮೇ. 12 ರಂದು ನಡೆಯಲಿದ್ದು, ಮನೆಯಲ್ಲಿ ಕೂಡದೇ ಪ್ರತಿಯೊಬ್ಬರೂ ಮತಗಟ್ಟೆಗೆ ಹೋಗಿ ಮತ ಚಲಾಯಿಸಿ,  ನಿಮ್ಮ ಕರ್ತವ್ಯವನ್ನು ಪಾಲಿಸಿ ಎಂದು ಹೇಳಿದರು.  

    ವಕೀಲರಾದ ಹನುಮಂತರಾವ್ ಅವರು ವಿಶೇಷ ಉಪನ್ಯಾಸ ನೀಡಿ, ಸಂವಿಧಾನದಲ್ಲಿರುವ ಮೂಲಭೂತ ಹಕ್ಕುಗಳನ್ನು ಹೇಗೆ ಅನುಭವಿಸುತ್ತೇವೆಯೋ ಹಾಗೆಯೇ ಪ್ರತಿಯೊಬ್ಬ ಪ್ರಜೆಗಳು ಮೂಲಭೂತ ಕರ್ತವ್ಯಗಳನ್ನು ಪಾಲಿಸಬೇಕು.  ಮತದಾನವು ಎಲ್ಲ ಮತದಾರರ ಕರ್ತವ್ಯವಾಗಿದ್ದು ನಿಮ್ಮ ಹಕ್ಕನ್ನು ಚಲಾಯಿಸಿ ಎಂದು ಮತದಾನ ಜಾಗೃತಿ ಕುರಿತು ಮತದಾನದ ಮಹತ್ವವನ್ನು ವಿವರಿಸಿದರು.
    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬಾಲಕರ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ ಉದ್ದಗಟ್ಟಿ ತ್ರಿಮೂರ್ತಿ ಅವರು ಮಾತನಾಡಿ, ಸಮೃದ್ಧ ಭಾರತದ ನಿರ್ಮಾಣಕ್ಕೆ ಸಮರ್ಥ ನಾಯಕರನ್ನು ಆಯ್ಕೆ ಮಾಡಲು ಪ್ರತಿಯೊಬ್ಬ ಪ್ರಜೆ ಮತದಾನ ಮಾಡಬೇಕು.  ಪ್ರಸ್ತುತ ಮತದಾನವು ಕೇವಲ ಶೇ.60 ರಷ್ಟು ನಡೆಯುತ್ತಿದೆ.  ಇದು ಶೇ.100 ಕ್ಕೆ ತಲುಪಿದಾಗ ಮಾತ್ರ ಸ್ವಾಸ್ಥ್ಯ ಸಮಾಜ ಸಮೃದ್ಧ ಭಾರತವನ್ನು ನಿರ್ಮಾಣ ಮಾಡಲಿಕ್ಕೆ ಸಾಧ್ಯವಾಗುತ್ತದೆ ಎಂದರು.  ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವಸತಿ ಶಿಕ್ಷಣ ಸಂಸ್ಥೆಗಳ 6ನೇ ತರಗತಿ ಪ್ರವೇಶ ಪರೀಕ್ಷೆ : ನಿಷೇಧಾಜ್ಞೆ ಜಾರಿ


ಕೊಪ್ಪಳ ಏ. 13 (ಕರ್ನಾಟಕ ವಾರ್ತೆ): ಪ್ರಸಕ್ತ ಸಾಲಿನ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ 6ನೇ ತರಗತಿ ದಾಖಲಾತಿಗೆ ಪ್ರವೇಶ ಪರೀಕ್ಷೆಗಳು ಏ. 15 ರಂದು ಕೊಪ್ಪಳ ಜಿಲ್ಲೆಯಲ್ಲಿ ನಡೆಯಲಿದ್ದು, ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ  ನಿಷೇಧಾಜ್ಞೆ  ಜಾರಿಗೊಳಿಸಿ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಆದೇಶ ಹೊರಡಿಸಿದ್ದಾರೆ.
    ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ 6ನೇ ತರಗತಿ ದಾಖಲಾತಿಗೆ ಪ್ರವೇಶ ಪರೀಕ್ಷೆಗಳು ಏ. 15 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಜಿಲ್ಲೆಯ 42 ಪರೀಕ್ಷಾ ಕೇಂದ್ರಗಳಲ್ಲಿ ಜರುಗಲಿದ್ದು, ಒಟ್ಟು 11034 ವಿದ್ಯಾರ್ಥಿಗಳು ಪರಿಕ್ಷೆಗೆ ಹಾಜರಾಗಲಿದ್ದಾರೆ.  ಪರೀಕ್ಷೆಗಳು ಸುಗಮ ಹಾಗೂ ಶಾಂತಿಯುತವಾಗಿ ನಡೆಯುವ ಉದ್ದೇಶದಿಂದ ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ  ಸಿ.ಆರ್.ಪಿ.ಸಿ 1937ರ ಕಲಂ 144 ರನ್ವಯ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ.  ಇದರನ್ವಯ ನಿಷೇಧಿತ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಎಸ್.ಟಿ.ಡಿ., ಮೊಬೈಲ್, ಪೇಜರ್, ಜೆರಾಕ್ಸ್, ಟೈಪಿಂಗ್ ಮುಂತಾದವುಗಳನ್ನು ನಿಷೇಧಿಸಲಾಗಿದೆ.  ಪರೀಕ್ಷಾ ಕೇಂದ್ರದಲ್ಲಿ ಪ್ರವೇಶ ಪತ್ರ ಹೊಂದಿದ ವಿದ್ಯಾರ್ಥಿಗಳು, ನಿಯೋಜಿತ ಶಿಕ್ಷಕರು, ಜಾಗೃತ ದಳದವರನ್ನು ಹೊರತುಪಡಿಸಿ, ಉಳಿದವರ ಪ್ರವೇಶ ನಿಷೇಧಿಸಿದೆ.  ನಿಷೇಧಿತ ವ್ಯಾಪ್ತಿಯಲ್ಲಿ ಜನರು ಮಾರಕಾಸ್ತ್ರ ಹಿಡಿದು ತಿರುಗಾಡುವುದನ್ನು ನಿಷೇಧಿಸಿದೆ.  ಈ ಆದೇಶವು ಮದುವೆ, ಶವ ಸಂಸ್ಕಾರಗಳು ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಿಗೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

ಸಾಮೂಹಿಕ ವಿವಾಹಗಳಲ್ಲಿ ಬಾಲ್ಯವಿವಾಹಗಳು ಆಗದಂತೆ ಎಚ್ಚರ ವಹಿಸಿ


ಕೊಪ್ಪಳ ಏ. 13 (ಕರ್ನಾಟಕ ವಾರ್ತೆ): ಅಕ್ಷಯ ತೃತೀಯ ದಿನದಂದು ಸಾಮೂಹಿಕ ವಿವಾಹಗಳಲ್ಲಿ ಬಾಲ್ಯವಿವಾಹಗಳು ಆಗದಂತೆ   ಸಾಮೂಹಿಕ ವಿವಾಹ ಆಯೋಜಕರು ಎಚ್ಚರ ವಹಿಸುವಂತೆ ಕೊಪ್ಪಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಸೂಚನೆ ನೀಡಿದ್ದಾರೆ. 
ಬಾಲ್ಯ ವಿವಾಹ ನಿಷೇಧ ಕಾಯ್ದೆ-2006 ಹಾಗೂ ಕರ್ನಾಟಕ ತಿದ್ದುಪಡಿ-2016 ರನ್ವಯ 18 ವರ್ಷದೂಳಗಿನ ಬಾಲಕಿಯರು ಮತ್ತು 21 ವರ್ಷದೂಳಗಿನ ಬಾಲಕರ ವಿವಾಹವನ್ನು ನಿಷೇಧಿಸಿದೆ.  ಏ. 18 ಅಕ್ಷಯ ತೃತೀಯ ದಿನದಂದು ಕೊಪ್ಪಳ ಜಿಲ್ಲೆಯಲ್ಲಿ ಸಾಮೂಹಿಕ ವಿವಾಹಗಳು ಹೆಚ್ಚಾಗಿ ಆಯೋಜನೆಯಾಗುತ್ತಿದ್ದು, ಈ ಸಾಮೂಹಿಕ ವಿವಾಹಗಳಲ್ಲಿ ವಿವಾಹ ಅಯೋಜಕರು ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದು ವಿವಾಹಗಳನ್ನು ಆಯೋಜನೆ ಮಾಡಬೇಕು.  ಒಂದು ವೇಳೆ ಯಾರಾದರು ಅನುಮತಿ ಇಲ್ಲದೇ ವಿವಾಹವನ್ನು ಮಾಡಿದಲ್ಲಿ ಅಂತಹ ವಿವಾಹವು ಬಾಲ್ಯ ವಿವಾಹ ನಿಷೇಧ ಕಾಯ್ದೆ-2006 ಹಾಗೂ ಕರ್ನಾಟಕ ತಿದ್ದುಪಡಿ-2016 ರನ್ವಯ ಅಸಿಂಧು ವಿವಾಹವಾಗಿರುತ್ತದೆ.  ಹಾಗೂ ಕಾಯ್ದೆಯನ್ವಯ ಅಪ್ರಾಪ್ತ ವಯಸ್ಸಿನವರನ್ನು ಮದುವೆ ಮಾಡಿಕೊಂಡವರಿಗೆ, ಮಾಡಿದವರಿಗೆ, ಮದುವೆಯನ್ನು ಆಯೋಜಿಸಿದವರಿಗೆ ಹಾಗೂ ಮದುವೆಯಲ್ಲಿ  ಭಾಗವಹಿಸಿದವರಿಗೆ ಕನಿಷ್ಠ 1 ವರ್ಷದಿಂದ 2 ವರ್ಷದವರೆಗೆ ಜೈಲು ಶಿಕ್ಷೆ ಮತ್ತು ರೂ. 1 ಲಕ್ಷ ರೂಪಾಯಿ ದಂಡವನ್ನು ವಿಧಿಸಬಹುದಾಗಿದೆ. ಸರ್ವೋಚ್ಛ ನ್ಯಾಯಾಲದ ಆದೇಶದನ್ವಯ “ಅಪ್ರಾಪ್ತ ವಯಸ್ಸಿನ ಪತ್ನಿಯೂಂದಿಗೆ ಲೈಂಗಿಕ ಸಂಪರ್ಕವು ಕೂಡ ಲೈಂಗಿಕ ದೌರ್ಜನ್ಯ” ಎಂದು ಪರಿಗಣಿಸಲಾಗುತ್ತದೆ.
ಈ ಹಿನ್ನಲೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಎಲ್ಲಾ ಸಾಮೂಹಿಕ ವಿವಾಹ ಆಯೋಜಕರು ಸಾಮೂಹಿಕ ವಿವಾಹ ಆಯೋಜನೆಯ ಮುನ್ನ ಸಕ್ಷಮ ಪ್ರಾಧಿಕಾರದಿಂದ ಮದುವೆಯಾಗುವ ವಧು ಮತ್ತು ವರರ ವಯಸ್ಸಿನ ಬಗ್ಗೆ ದೃಢೀಕರಣ ಪಡೆದು ಪ್ರಾಪ್ತರೆಂದು ಕಂಡುಬಂದಲ್ಲಿ ಮಾತ್ರ ವಿವಾಹ ಮಾಡಬೇಕು.  ಇಲ್ಲವಾದಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ ಅನ್ವಯ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ಬಾಲ್ಯ ವಿವಾಹದಿಂದ ಬಾಲಕಿಯ ರಕ್ಷಣೆ : ಮಕ್ಕಳ ಕಲ್ಯಾಣ ಸಮಿತಿಗೆ ಹಾಜರು


ಕೊಪ್ಪಳ ಏ. 13 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಬಾಲ್ಯ ವಿವಾಹಕ್ಕೆ ಒಳಪಡುತ್ತಿದ್ದ ಗಂಗಾವತಿ ತಾಲೂಕಿನ ಈಚನಾಳ ಗ್ರಾಮದ ಬಾಲಕಿಯನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಿದೆ.
    ಗಂಗಾವತಿ ತಾಲೂಕಿನ ಈಚನಾಳ ಗ್ರಾಮದ ಬಾಲಕಿಯೊಂದಿಗೆ, ಉಮಲೂಟಿ ಗ್ರಾಮದ ವರನೊಂದಿಗೆ ಮದುವೆ ನೆರವೇರಿಸಲು ಸಿದ್ಧತೆ ಕೈಗೊಂಡಿರುವ ಕುರಿತ ಮಾಹಿತಿಯನ್ನು ತಿಳಿದು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳು, ಗ್ರಾಮಕ್ಕೆ ಭೇಟಿ ನೀಡಿ ಬಾಲ್ಯವಿವಾಹದಿಂದ ಬಾಲಕಿಯನ್ನು ರಕ್ಷಿಸಿದ್ದಾರೆ.
    ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಮಾಜ ಕಾರ್ಯಕರ್ತೆ ಯಮನಮ್ಮ, ಮಕ್ಕಳ ಸಹಾಯವಾಣಿ ಸಿಬ್ಬಂದಿ ರಾಘವೇಂದ್ರ ಹಾಗೂ ಬಸವರಾಜ, ಮತ್ತು ಕನಕಗಿರಿ ಪೊಲೀಸ್ ಠಾಣೆಯ ಬಸವರಾಜರವರು ಬಾಲ್ಯ ವಿವಾಹದ ಖಚಿತ ಮಾಹಿತಿಯ ಮೇರೆಗೆ ಏ. 12 ರಂದು ಗಂಗಾವತಿ ತಾಲೂಕಿನ ಈಚನಾಳ ಗ್ರಾಮಕ್ಕೆ ಭೇಟಿ ನೀಡಿ, ಶಾಲಾ ದೃಢಿಕರಣದ ಪ್ರಕಾರ ಬಾಲಕಿಗೆ 18 ವರ್ಷ ಪೂರ್ಣಗೊಳ್ಳದೇ ಬಾಲ್ಯವಿವಾಹ ಆಯೋಜಿಸಿರುವುದು ದಾಖಲೆಗಳಿಂದ ಕಂಡುಬಂದ ಹಿನ್ನೆಲೆಯಲ್ಲಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳು ಬಾಲಕಿಯನ್ನು ರಕ್ಷಿಸಿ, ಮುಂದಿನ ಆರೈಕೆ ಮತ್ತು ಪೋಷಣೆಗಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿದ್ದಾರೆ ಎಂದು ಕೊಪ್ಪಳ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಮತದಾನ ಜಾಗೃತಿ


ಕೊಪ್ಪಳ ಏ. 13 (ಕರ್ನಾಟಕ ವಾರ್ತೆ): ಕೊಪ್ಪಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಕೊಪ್ಪಳ ಜಿಲ್ಲೆಯ ವಿವಿಧೆಡೆ ಮಹಿಳೆಯರಿಗೆ ಸೇರಿದಂತೆ ಹೊಸ ಮತದಾರರಿಗೆ ಮತದಾನದ ಕುರಿತು ಜಾಗೃತಿ ಮೂಡಿಸಲಾಯಿತು.
    ಕೊಪ್ಪಳ ನಗರದ ಟೌನ್ ಗಾಂಧಿನಗರ ಹಾಗೂ ತಾಲೂಕಿನ ಯಲಮಗೇರಿ, ಕನಕಗಿರಿ ಯೋಜನೆಯ ಶ್ರೀರಾಮನಗರ, ಯಲಬುರ್ಗಾ ತಾಲೂಕಿನ ಕರ್ಕಿಹಳ್ಳಿ ಮತ್ತು ದೋಟಿಹಾಳ ಗ್ರಾಮಗಳಲ್ಲಿ ಮಹಿಳಾ ಮತದಾರರಿಗೆ, ಅಂಗನವಾಡಿ ಕಾರ್ಯಕರ್ತೆ/ ಸಹಾಯಕಿಯರಿಗೆ, ಆಶಾ ಕಾರ್ಯಕರ್ತೆಯರಿಗೆ, ಹೊಸ ಮತದಾರರಿಗೆ ಮತದಾನದ ಕುರಿತು ಅರಿವು ಮೂಡಿಸಿ, ಮತದಾನ ಮಾಡುವಂತೆ ತಿಳಿಸಲಾಯಿತು. 
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೆಶಕರು ಮತ್ತು ಜಿಲ್ಲಾ ನಿರೂಪಣಾಧಿಕಾರಿ ಹಾಗೂ ತಾಲೂಕಿನ ಮೇಲ್ವಿಚಾರಕಿಯರಿಂದ ಎಲ್ಲರೂ ಕಡ್ಡಾಯವಾಗಿ ಮೇ 12 ರಂದು ನಡೆಯುವ ಚುನಾವಣೆಯಲ್ಲಿ ಮತದಾನ ಮಾಡಬೇಕು ಎಂದು ತಿಳಿಸಲಾಯಿತು.  ಮತದಾನದ ಮಹತ್ವದ ಕುರಿತಂತೆ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಒಟ್ಟು 388 ಸಂಖ್ಯೆಯ ಜನರಿಗೆ ಮಾಹಿತಿ ನೀಡುವಲ್ಲಿ ಇಲಾಖೆಯು ಯಶಸ್ವಿಯಾಗಿದೆ.

ಯಲಂಗೇರಿ ಗ್ರಾಮದಲ್ಲಿ ಮಹಿಳಾ ಮತದಾರರಿಗೆ ಜಾಗೃತಿಕೊಪ್ಪಳ ಏ. 13 (ಕರ್ನಾಟಕ ವಾರ್ತೆ): ಕೊಪ್ಪಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ದಿ ಯೋಜನೆಯ ವತಿಯಿಂದ ಯಲಂಗೇರಿ ಗ್ರಾಮದಲ್ಲಿ ಮಹಿಳೆಯರಿಗೆ ಮತದಾನದ ಕುರಿತು ಜಾಗೃತಿ ಮೂಡಿಸಲಾಯಿತು. 
    ಕೊಪ್ಪಳ ಶಿಶು ಅಭಿವೃದ್ದಿ ಯೋಜನೆಯ ಯಲಂಗೇರಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮತದಾನದ ಮಹತ್ವದ ಕುರಿತು ಸ್ತ್ರೀಶಕ್ತಿ ಗುಂಪಿನ ಮಹಿಳೆಯರಿಗೆ, ಗ್ರಾಮದ ಮಹಿಳಾ ಮತದಾರರಿಗೆ ಹಾಗೂ ಅಂಗನವಾಡಿ ಕಾರ್ಯಕರ್ತೆ/ ಸಹಾಯಕಿಯರಿಗೆ ಜಾಗೃತಿ ಮೂಡಿಸಲಾಯಿತು. 
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೆಶಕ ಕೃಷ್ಣ ಉಕ್ಕುಂದ ಹಾಗೂ ಜಿಲ್ಲಾ ನಿರೂಪಣಾಧಿಕಾರಿ ಮಂಜುನಾಥ ಹಾಗೂ ಬಸಲಿಂಗಮ್ಮ ಹಿರೇಮಠ, ಎಲ್ಲರೂ ಕಡ್ಡಾಯವಾಗಿ ಮೇ 12 ರಂದು ನಡೆಯುವ ಚುನಾವಣೆಯಲ್ಲಿ ಮತದಾನ ಮಾಡಬೇಕು.  ಯಾವುದೇ ಆಸೆ, ಆಮೀಷಗಳಿಗೆ ಒಳಗಾಗದೇ ಎಲ್ಲರೂ ಮತದಾನ ಮಾಡಬೇಕು.  ಮತದಾನ ಒಂದು ಪವಿತ್ರವಾದ ದಾನ, ಮತದಾನದ ಹಕ್ಕು ನಮ್ಮೆಲ್ಲರ ಹಕ್ಕಾಗಿದ್ದು, ನಾವು ಮತದಾನ ಮಾಡುವುದರ ಜೊತೆಗೆ ನಮ್ಮ ಅಕ್ಕಪಕ್ಕದ ಮತದಾರೆಲ್ಲರಿಗೂ ಮತದಾನ ಮಾಡುವಂತೆ ಪ್ರೇರೆಪಿಸಬೇಕು ಎಂದು ತಿಳಿಸಿದರು. 

ಮತದಾನ ಜಾಗೃತಿಗೆ ಶಿಕ್ಷಕರಿಂದ ಹಿರೇಬಗನಾಳ ಗ್ರಾಮದಲ್ಲಿ ಮಾನವ ಸರಪಳಿ ನಿರ್ಮಾಣ


ಕೊಪ್ಪಳ ಏ. 13 (ಕರ್ನಾಟಕ ವಾರ್ತೆ): ಕೊಪ್ಪಳ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಹಿರೇಬಗನಾಳ ಗ್ರಾಮದ ಸರ್ಕಾರಿ ಪ್ರೌಢ ಶಾಲೆಗಳ ಶಿಕ್ಷಕರಿಂದ ಮತದಾನ ಮಹತ್ವದ ಕುರಿತು ಮಾನವ ಸರಪಳಿ ನಿರ್ಮಿಸಿ ಮತದಾರರಿಗೆ ಜಾಗೃತಿ ಮೂಡಿಸಲಾಯಿತು.  
    ಕೊಪ್ಪಳ ತಾಲೂಕ ಹಿರೇಬಗನಾಳ ಗ್ರಾಮದ ಸರ್ಕಾರಿ ಪ್ರೌಢ ಶಾಲೆಗಳ ಮುಖ್ಯ ಗುರುಗಳು ಹಾಗೂ ಸಹ ಶಿಕ್ಷಕರುಗಳು ಮತದಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ನಡೆಸಿ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ನಮ್ಮ ಮತ ನಮ್ಮ ಹಕ್ಕು ಎಲ್ಲರೂ ಕಡ್ಡಾಯವಾಗಿ ಮೇ. 12 ರಂದು ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮಾತದಾನ ಮಾಡುವಂತೆ ಸಾರ್ವಜನಿಕರಿಗೆ ತಿಳಿಸಿದರು.  ಹಾಗೂ ಗ್ರಾಮದ ವೃತ್ತದಲ್ಲಿ ಮತದಾನ ಜಾಗೃತಿ ಮಾನವ ಸರಪಳಿ ನಿರ್ಮಿಸಿ, ಮತದಾನದ ಮಹತ್ವದ ಕುರಿತು ಘೋಷಣೆಗಳನ್ನು ಕೂಗಿ ಜಾಗೃತಿ ಮೂಡಿಸಲಾಯಿತು.  ಮತದಾನದಲ್ಲಿ ಭಾಗವಹಿಸುವ ಬಗ್ಗೆ ಸಂಕಲ್ಪ ಪ್ರಮಾಣ ವಚನ ಬೋಧಿಸಿ ಸಂಕಲ್ಪ ಪ್ರಮಾಣ ಪತ್ರಗಳಿಗೆ ಕುಟುಂಬದ ಮುಖ್ಯಸ್ಥರ ಸಹಿ ಪಡೆಯಲಾಯಿತು.  ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ಯುವಕರು, ವಿದ್ಯಾರ್ಥಿಗಳು ಮುಖ್ಯ ಸೇರಿದಂತೆ ಶಿಕ್ಷಕರಾದ ಬಿ. ವೀರಭದ್ರಪ್ಪ ಹಾಗೂ ಸಹ ಶಿಕ್ಷಕರಾದ ಹನಯಪ್ಪ ಕುರಿ, ನಾಗಪ್ಪ ಅಗಸಿಮುಂದಿನ, ಶಿವಾನಂದಯ್ಯ, ಮಂಜುನಾಥ, ಮುಸ್ತಾಫ್, ವೆಂಕಟೇಶ, ಹಾಜಿ ಮಲಾಂಗಾ ಬಾಬಾ ಉಪಸ್ಥಿತರಿದ್ದರು.      

Thursday, 12 April 2018

ಮತ ಜಾಗೃತಿ : ಡಾಕ್ಟರ್‍ಗಳೂ ತಪ್ಪದೆ ಮತದಾನ ಮಾಡಿ ಅಂತ ಚೀಟಿ ಕೊಡ್ತಾರೆ


ಕೊಪ್ಪಳ ಏ. 12 (ಕ.ವಾ): ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಎಲ್ಲ ಮತದಾರರು ಕಡ್ಡಾಯವಾಗಿ ಮತದಾನ ಮಾಡುವಂತಾಗಲು, ಮತದಾರರನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲಾ ಸ್ವೀಪ್ ಸಮಿತಿ ಹಲವಾರು ಕಸರತ್ತು ಪ್ರಾರಂಭಿಸಿದ್ದು, ಇದೀಗ ಎಲ್ಲ ಆಸ್ಪತ್ರೆಗಳಲ್ಲೂ ಡಾಕ್ಟರ್‍ಗಳು, ತಮ್ಮ ಅಮೂಲ್ಯ ಮತವನ್ನು ತಪ್ಪದೆ ಚಲಾಯಿಸಿ ಎಂಬ ಸಂದೇಶವುಳ್ಳ ಚೀಟಿಯನ್ನು ನೀಡುವ ಮೂಲಕ ಮತದಾರರ ಜಾಗೃತಿಗೆ ಮುಂದಾಗಲಿದ್ದಾರೆ.


    ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಹಾಗೂ ಮತದಾರರ ಸಹಭಾಗಿತ್ವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಸ್ವೀಪ್ ಸಮಿತಿ ಮತದಾನದ ಪ್ರಮಾಣ ಹೆಚ್ಚಿಸಲು ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.  ಈ ದಿಸೆಯಲ್ಲಿ ಡಾಕ್ಟರ್‍ಗಳ ಮೂಲಕವೂ ಮತದಾರರ ಜಾಗೃತಿ ಕೈಗೊಳ್ಳಲು ಮುಂದಾಗಿದ್ದು, ಇದಕ್ಕಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೂಲಕ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆಗಳು ಹಾಗೂ ಕೊಪ್ಪಳ ಜಿಲ್ಲಾ ಆಸ್ಪತ್ರೆಯವರಿಗೆ ಮತದಾರರ ಜಾಗೃತಿಯ ಸಂದೇಶವುಳ್ಳ   ಮೊಹರುಗಳನ್ನು (ಸೀಲ್) ತಲುಪಿಸಲು ಈಗಾಗಲೆ ಕ್ರಮ ಕೈಗೊಂಡಿದೆ.  ಖಾಸಗಿ ಆಸ್ಪತ್ರೆಗಳು ಕೂಡ ಮತದಾರರ ಜಾಗೃತಿಯ ಈ ಕಾರ್ಯಕ್ರಮಕ್ಕೆ ಕೈಜೋಡಿಸಲಿದ್ದಾರೆ.  ಅಲ್ಲದೆ ಅಂಚೆಯಣ್ಣನ ಮೂಲಕವೂ ಮತದಾರರ ಜಾಗೃತಿಗೆ ಸ್ವೀಪ್ ಸಮಿತಿ ಮುಂದಾಗಿದ್ದು, ಅಂಚೆ ಇಲಾಖೆಯ ನೆರವಿನೊಂದಿಗೆ ಎಲ್ಲ ಲಕೋಟೆಗಳು, ಪತ್ರಗಳ ಮೇಲೆ ‘ ದಿನಾಂಕ : 12-05-2018 ರಂದು ತಮ್ಮ ಅಮೂಲ್ಯವಾದ ಮತ ಚಲಾಯಿಸಿ- ಪ್ರಜಾಪ್ರಭುತ್ವವನ್ನು ಗೆಲ್ಲಿಸಿ’ ಎಂಬ ಸಂದೇಶವುಳ್ಳ ಸೀಲ್ ಹಾಕಲು ಮನವಿ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ ಅಗತ್ಯವಿರುವಷ್ಟು ಸೀಲ್‍ಗಳನ್ನು ತಯಾರಿಸಿ ಅಂಚೆ ಇಲಾಖೆಗೆ ಪೂರೈಸಲಾಗುತ್ತಿದೆ.  ಇನ್ನು ಮುಂದೆ ಚುನಾವಣೆಯ ಮತದಾನ ಪ್ರಕ್ರಿಯೆ ಮುಗಿಯವವರೆಗೂ ಅಂಚೆ ಮೂಲಕ ಬರುವ ಪತ್ರಗಳು, ಲಕೋಟೆಗಳು ಅಲ್ಲದೆ ಡಾಕ್ಟರ್‍ಗಳು ನೀಡುವ ಚೀಟಿಗಳೂ ಸಹ ಮತದಾನದ ಜಾಗೃತಿ ಸಂದೇಶವನ್ನು ಹೊತ್ತು ಮತದಾರರನ್ನು ತಲುಪಲಿವೆ.  ಇದರ ಜೊತೆಗೆ ಸೀಲ್‍ಗಳನ್ನು ರಾಷ್ಟ್ರೀಕೃತ ಬ್ಯಾಂಕ್‍ಗಳು, ಪ್ರಗತಿ ಕೃಷ್ಣಾ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕ್‍ಗಳಲ್ಲಿ ಕೈಗೊಳ್ಳುವ ಪತ್ರ ವ್ಯವಹಾರ, ಚಲನ್‍ಗಳ ಮೇಲೂ ಮತದಾರರ ಜಾಗೃತಿ ಸಂದೇಶವುಳ್ಳ ಮೊಹರು ರಾರಾಜಿಸಲಿದೆ.  ಮತದಾನ ದಿನಾಂಕ ಹಾಗೂ ಜಾಗೃತಿ ಸಂದೇಶವುಳ್ಳ ಈ ಮೊಹರುಗಳು ಈಗಾಗಲೆ ಜಿಲ್ಲಾ ಮಟ್ಟದಲ್ಲಿ ಎಲ್ಲ ಇಲಾಖೆಗಳಿಗೂ ತಲುಪಿಸಲು ಕ್ರಮ ಕೈಗೊಳ್ಳಲಾಗಿದ್ದು, ಇಲಾಖಾ ಕಚೇರಿಯ ಪತ್ರ ವ್ಯವಹಾರಗಳಲ್ಲೂ ಕೂಡ ಈ ಮೊಹರು ಮತದಾನ ದಿನಾಂಕದವರೆಗೂ ಕಂಡುಬರಲಿದೆ.  ಈ ಬಾರಿಯ ಚುನಾವಣೆಯನ್ನು ಚುನಾವಣಾ ಆಯೋಗವು ‘ಒಳಗೊಳ್ಳುವ, ಸುಗಮ ಮತ್ತು ನೈತಿಕ ಮತದಾನ’ ಎಂಬ ಘೋಷವಾಕ್ಯವನ್ನು ನೀಡಿದ್ದು, ಈ ಘೋಷವಾಕ್ಯವುಳ್ಳ ಮೊಹರು ಕೂಡ ಮತದಾರರ ಜಾಗೃತಿ ಸಂದೇಶದ ಮೊಹರಿನೊಂದಿಗೆ ವಿತರಿಸಲಾಗುತ್ತಿದೆ.
     ಒಟ್ಟಾರೆಯಾಗಿ ಮತದಾರರು ಜಾಗೃತಗೊಂಡು, ತಮ್ಮ ಸಂವಿಧಾನಬದ್ಧ ಹಕ್ಕನ್ನು ತಪ್ಪದೆ ಚಲಾಯಿಸಿ, ಪ್ರಜಾಪ್ರಭುತ್ವವನ್ನು ಬಲಪಡಿಸಲಿ ಎಂಬುದೇ ಜಿಲ್ಲಾ ಸ್ವೀಪ್ ಸಮಿತಿಯ ಉದ್ದೇಶವಾಗಿದೆ ಎನ್ನುತ್ತಾರೆ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ ಅವರು.

ಭಾಗ್ಯನಗರ : ಹೊಸ ಕೊಳವೆ ಬಾವಿ ಕೊರೆಯಿಸಲು ಪ.ಪಂ ನಿರಾಕ್ಷೇಪಣೆ ಪತ್ರ ಕಡ್ಡಾಯ


ಕೊಪ್ಪಳ ಏ. 12 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕಿನ ಭಾಗ್ಯನಗರ ಪಟ್ಟಣ ಪಂಚಾಯತ್ ವ್ಯಪ್ತಿಯಲ್ಲಿ ಖಾಸಗಿ ವ್ಯಕ್ತಿಗಳು ಹೊಸ ಕೊಳವೆ ಬಾವಿಗಳನ್ನು ಕೊರೆಯಿಸುವ ಮುನ್ನ ಪ.ಪಂ ವತಿಯಿಂದ ನಿರಾಕ್ಷೇಪಣೆ ಪತ್ರ ಪಡೆಯುವುದು ಕಡ್ಡಾಯ ಎಂದು ಮುಖ್ಯಾಧಿಕಾರಿ ತಿಳಿಸಿದ್ದಾರೆ.  
      ಕೊಳವೆ ಬಾವಿಗಳನ್ನು ಕೊರೆಯುವ ಪ್ರಕ್ರಿಯಲ್ಲಿ ವಿಫಲ ಕೊಳವೆ ಬಾವಿಗಳಿಂದ ಸಂಭವಿಸುತ್ತಿರುವ ಅವಘಡಗಳ ಹಿನ್ನೆಲೆಯಲ್ಲಿ ಹೈಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ ಹೊಸ ಕೊಳವೆ ಬಾವಿಗಳನ್ನು ಕೊರೆಯುವಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲು ಹಾಗೂ ವಿಫಲಕೊಳವೆ ಬಾವಿಗಳನ್ನು ಮುಚ್ಚಿರುವ ಬಗ್ಗೆ ವರದಿ ಪಡೆದುಕೊಳ್ಳಲು ತಿಳಿಸಲಾಗಿದ್ದು, ಖಾಸಗಿ ವ್ಯಕ್ತಿಗಳು ನಿರ್ದಿಷ್ಟ ಅನುಮತಿ ಪಡೆಯದೇ ಇರುವುದರಿಂದ ವಿಫಲ ಕೊಳವೆ ಭಾವಿಗಳನ್ನು ಗುರುತಿಸಲು ಕಷ್ಟಕರವಾಗುತ್ತಿದೆ.  ಆದ್ದರಿಂದ ಇನ್ನು ಮುಂದೆ ಭಾಗ್ಯನಗರ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಹೊಸ ಕೊಳವೆ ಬಾವಿಗಳನ್ನು ಕೊರೆಯಿಸುವ ಮುನ್ನ ಪಟ್ಟಣ ಪಂಚಾಯತ್‍ಯಿಂದ ನಿರಾಕ್ಷೇಪಣೆ ಪತ್ರ ಪಡೆಯುವುದು ಕಡ್ಡಾಯವಾಗಿದೆ. 
         ಕೊಳವೆ ಬಾವಿ ಕೊರೆಯಿಸುವ ಮುನ್ನ ಸಾರ್ವಜನಿಕ ಕುಡಿಯುವ ನೀರಿನ ಮೂಲದಿಂದ 500 ಮೀ ವ್ಯಾಸದ ವ್ಯಾಪ್ತಿಯಲ್ಲಿ ಇರಬಾರದು.  ವಿಫಲವಾದಲ್ಲಿ ಭದ್ರವಾಗಿ ಮುಚ್ಚಿಸುತ್ತೇನೆ ಹಾಗೂ ಮುಚ್ಚಿಸಲು ವಿಫಲನಾದಲ್ಲಿ ತಾವೇ ನೇರ ಹೊಣೆಗಾರನೆಂದು, ಅವಘಡಗಳು ಸಂಭವಿಸದಿದ್ದಲ್ಲಿ, ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಳ್ಳಲು ಭಾಧ್ಯಸ್ಥನಾಗಿರುವುದಾಗಿ ಮತ್ತು ಕರ್ನಾಟಕ ಅಂತರ್ಜಲ ಅಧಿನಿಯಮ 2011, 2012ರನ್ವಯ ಅಂತರ್ಜಲ ಪ್ರಾಧಿಕಾರ ಬೆಂಗಳೂರು ಇವರಲ್ಲಿ ನಿಯಮಾನುಸಾರ ನೊಂದಣಿಯಾದ ರಿಗ್‍ನಿಂದ ಮಾತ್ರ ಕೊಳವೆಭಾವಿ ಕೊರೆಯಿಸುತ್ತೆನೆಂದು ಷರತ್ತನ್ನು ಒಳಗೊಂಡ ಮುಚ್ಚಳಿಕೆ ಬರೆದುಕೊಡಬೇಕು.  ವಿದ್ಯುಚ್ಚಕ್ತಿ ಕಂಪನಿಗಳು ಪಟ್ಟಣ ಪಂಚಾಯತಿಯಿಂದ ಎನ್.ಓ.ಸಿ ಪಡೆದ ನಂತರವೇ ಸಂಪರ್ಕ ಕಲ್ಪಿಸಬೇಕು.  ವಿಫಲಕೊಳವೆ ಭಾವಿಗಳನ್ನು ಮುಚ್ಚಿಸಿದ ಬಗ್ಗೆ ಅಧಿಕಾರಿಗಳು ವೀಕ್ಷಿಸಲಿದ್ದಾರೆ.  ಖಾಸಗಿ ವ್ಯಕ್ತಿಗಳು ಕೊಳವೆ ಬಾವಿಗಳನ್ನು ಕೊರೆಯಿಸುವಾಗ ಭಾಗ್ಯನಗರ ಪಟ್ಟಣ ಪಂಚಾಯತ ಕಾರ್ಯಾಲಯದಿಂದ ಎನ್.ಓ.ಸಿ ಪಡೆದ ನಂತರವೇ ಕೊರೆಯಿಸಬೇಕು.  ರಿಗ್ ಹೊಂದಿದ ಮಾಲೀಕರು ಅಷ್ಟೇ ಕೊಳವೆಭಾವಿ ಕೊರೆಯುವಾಗ ಪ.ಪಂ ಅನುಮತಿ ಇರುವ ಬಗ್ಗೆ ಪರಿಶೀಲಿಸಬೇಕು.  ಇಲ್ಲವಾದಲ್ಲಿ ಅಂತಹ ವಾಹನಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು.  ಸಾರ್ವಜನಿಕರು ಈ ಹಿಂದೆ ಆದ ಅವಘಡಗಳನ್ನು ಗಮನದಲ್ಲಿಟ್ಟುಕೊಂಡು ಭಾಗ್ಯನಗರ ಪ.ಪಂ ನೊಂದಿಗೆ ಸಹಕರಿಸುವಂತೆ ಮುಖ್ಯಾಧಿಕಾರಿಗಳು ಪ್ರಕಟಣೆ ತಿಳಿಸಿದ್ದಾರೆ.