Tuesday, 26 December 2017

ಕುಕನೂರು ನೂತನ ತಾಲೂಕು ರಚನೆ : ವಿವಿಧ ಇಲಾಖೆಗಳ ತಾಲೂಕು ಮಟ್ಟದ ಕಚೇರಿ ಪ್ರಾರಂಭಕ್ಕೆ ಸಿದ್ಧತೆ ಕೈಗೊಳ್ಳಿ- ಬಸವರಾಜ ರಾಯರಡ್ಡಿ



ಕೊಪ್ಪಳ ಡಿ. 26 (ಕರ್ನಾಟಕ ವಾರ್ತೆ) : ಯಲಬುರ್ಗಾ ತಾಲೂಕಿನ ಕುಕನೂರನ್ನು ನೂತನ ತಾಲೂಕನ್ನಾಗಿ ಸರ್ಕಾರ ಈಗಾಗಲೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದು, ನೂತನ ತಾಲೂಕಿನಲ್ಲಿ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಇಲಾಖಾ ಕಚೇರಿಗಳ ಪ್ರಾರಂಭಕ್ಕೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

     ಕುಕನೂರು ನೂತನ ತಾಲೂಕು ಪ್ರಾರಂಭಿಸುವ ಸಂಬಂಧ ಕುಕನೂರಿನ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಲಾಗಿದ್ದ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಕುಕನೂರನ್ನು ನೂತನ ತಾಲೂಕನ್ನಾಗಿ ರಚಿಸಿ, ಸರ್ಕಾರ ಈಗಾಗಲೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದೆ.  ನೂತನ ತಾಲೂಕು ವ್ಯಾಪ್ತಿ ನಿಗದಿ ಸಂಬಂಧ ಈಗಾಗಲೆ ಆಕ್ಷೇಪಣೆ ಸಲ್ಲಿಸಲು ಸಮಯಾವಕಾಶ ಒದಗಿಸಿದೆ.  ಇದರ ನಂತರ ಅಂತಿಮ ಅಧಿಸೂಚನೆಯನ್ನು ಹೊರಡಿಸಲಾಗುವುದು.  ಕುಕನೂರಿನಲ್ಲಿ ತಾಲೂಕು ಕಚೇರಿ ಪ್ರಾರಂಭಿಸಲು ಈಗಾಗಲೆ ಸರ್ಕಾರಿ ಕಟ್ಟಡವೇ ಆಗಿರುವ ಕಲ್ಯಾಣ ಮಂಟಪವನ್ನು ಗುರುತಿಸಲಾಗಿದ್ದು, ಕಟ್ಟಡವನ್ನು ಸಜ್ಜುಗೊಳಿಸುವ ಕಾರ್ಯವನ್ನು ತ್ವರಿತಗೊಳಿಸಬೇಕು. ಸರ್ಕಾರಿ ಕಚೇರಿಗಳು ಪ್ರಾರಂಭಿಸಲು ಅಗತ್ಯವಿರುವ ಮಾದರಿಯಲ್ಲಿ ಕಟ್ಟಡವನ್ನು ಸಿದ್ಧಗೊಳಿಸಬೇಕು.  ನೂತನ ತಾಲೂಕಿನಲ್ಲಿ ವಿವಿಧ ಇಲಾಖೆಗಳ ಕಚೇರಿಗಳು ಕೂಡ ಪ್ರಾರಂಭವಾಗಬೇಕಿರುವುದರಿಂದ, ಆಯಾ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ತಮ್ಮ ಇಲಾಖೆಯೊಂದಿಗೆ ಸಂಪರ್ಕಿಸಿ, ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು.  ಜ. 26 ರಂದು ನೂತನ ತಾಲೂಕಿನಲ್ಲಿ ಆಯಾ ಇಲಾಖೆಗಳ ಎಲ್ಲ ಕಚೇರಿಗಳು ಕಾರ್ಯಾರಂಭ ಆಗಬೇಕು ಎಂದು ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.  ಸಭೆಯ ನಂತರ ತಾಲೂಕು ಕಚೇರಿಗಳು ಪ್ರಾರಂಭವಾಗುವ ಕಲ್ಯಾಣ ಮಂಟಪ ಕಟ್ಟಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಕಟ್ಟಡದ ಸ್ಥಿತಿ-ಗತಿ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು.

     ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್ ಶೆಟ್ಟಿ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಉಪವಿಭಾಗಾಧಿಕಾರಿ ಗುರುದತ್ ಹೆಗ್ಡೆ, ಪಟ್ಟಣ ಪಂಚಾಯತಿ ಅಧ್ಯಕ್ಷೆ ಶಾಂತಲಾ ಚಲುವಾದಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಪದ್ಮಾವತಿ ದೇಸಾಯಿ, ಜಿ.ಪಂ. ಸದಸ್ಯ ಹನುಮಂತಗೌಡ ಚಂಡೂರ, ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
Post a Comment