Thursday, 30 November 2017

ಮಹಿಳಾ ಹೊಲಿಗೆ ತರಬೇತಿ : ಅರ್ಜಿ ಆಹ್ವಾನ


ಕೊಪ್ಪಳ ನ. 30 (ಕರ್ನಾಟಕ ವಾರ್ತೆ): ಕೊಪ್ಪಳ ಸ್ಟೇಟ ಬ್ಯಾಂಕ್ ಆಫ್ ಇಂಡಿಯಾ, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ವತಿಯಿಂದ ಜಿಲ್ಲೆಯ ಆಸಕ್ತರಿಗೆ 30 ದಿನಗಳ ಉಚಿತ “ಮಹಿಳಾ ಹೊಲಿಗೆ” ತರಬೇತಿಯನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ.
    ಅರ್ಜಿ ಸಲ್ಲಿಸಲು 18 ರಿಂದ 45 ವರ್ಷ ವಯೋಮಿತಿಯಲ್ಲಿರಬೇಕು.  ಕನಿಷ್ಠ ಎಂಟನೇ ತರಗತಿ ಪಾಸ್ ಆಗಿರಬೇಕು.  ಕೊಪ್ಪಳ ಜಿಲ್ಲೆಯವರಾಗಿರಬೇಕು.  ಸ್ವಯಂ ಉದ್ಯೋಗದಲ್ಲಿ ಆಸಕ್ತಿ ಹೊಂದಿರಬೇಕು.  ಅನುಭವ ಇದ್ದವರಿಗೆ ಆದ್ಯತೆ ನೀಡಲಾಗುವುದು.  ಅರ್ಜಿ ವಿತರಿಸುವ ಹಾಗೂ ಸ್ವೀಕರಿಸುವ ಕೊನೆಯ ದಿನಾಂಕ ಡಿಸೆಂಬರ್. 13 ಆಗಿದ್ದು, ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಡಿ. 14 ರಂದು ಬೆಳಿಗ್ಗೆ 10-30ಕ್ಕೆ ಸಂದರ್ಶನ ನಡೆಸಲಾಗುವುದು.  ಡಿ. 15 ರಿಂದ ತರಬೇತಿಗಳು ಪ್ರಾರಂಭಗೊಳ್ಳುವವು.  ತರಬೇತಾರ್ಥಿಗಳಿಗೆ ಊಟ ಮತ್ತು ವಸತಿಯನ್ನು ಉಚಿತವಾಗಿ ನೀಡಲಾಗುವುದು.  ಅರ್ಜಿಯನ್ನು ನಿರ್ದೇಶಕರು, ಸ್ಟೇಟ ಬ್ಯಾಂಕ್ ಆಫ್ ಇಂಡಿಯಾ, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ಜಿಲ್ಲಾ ಕೈಗಾರಿಕ ಕೇಂದ್ರ ಆವರಣ, ಅಶೋಕ ಸರ್ಕಲ್ ಹತ್ತಿರ, ಕೊಪ್ಪಳ ದೂ. 08539-231038, ಇಲ್ಲಿಗೆ ಸಲ್ಲಿಸಬಹುದು ಎಂದು ಕೊಪ್ಪಳ ಎಸ್.ಬಿ.ಐ. ಆರ್‍ಸೆಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕೆ ತರಬೇತಿ : ಅರ್ಜಿ ಆಹ್ವಾನ


ಕೊಪ್ಪಳ ನ. 30 (ಕರ್ನಾಟಕ ವಾರ್ತೆ): ಕೊಪ್ಪಳ ಸ್ಟೇಟ ಬ್ಯಾಂಕ್ ಆಫ್ ಇಂಡಿಯಾ, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ವತಿಯಿಂದ ಜಿಲ್ಲೆಯ ಆಸಕ್ತರಿಗೆ 10 ದಿನಗಳ ಉಚಿತ “ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕೆ” ತರಬೇತಿಯನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ.
    ಅರ್ಜಿ ಸಲ್ಲಿಸಲು 18 ರಿಂದ 45 ವರ್ಷ ವಯೋಮಿತಿಯಲ್ಲಿರಬೇಕು.  ಕನಿಷ್ಠ ಎಂಟನೇ ತರಗತಿ ಪಾಸ್ ಆಗಿರಬೇಕು.  ಕೊಪ್ಪಳ ಜಿಲ್ಲೆಯವರಾಗಿರಬೇಕು.  ಸ್ವಯಂ ಉದ್ಯೋಗದಲ್ಲಿ ಆಸಕ್ತಿ ಹೊಂದಿರಬೇಕು.  ಅನುಭವ ಇದ್ದವರಿಗೆ ಆದ್ಯತೆ ನೀಡಲಾಗುವುದು.  ಅರ್ಜಿ ವಿತರಿಸುವ ಹಾಗೂ ಸ್ವೀಕರಿಸುವ ಕೊನೆಯ ದಿನಾಂಕ ಡಿಸೆಂಬರ್. 17 ಆಗಿದ್ದು, ಡಿ. 18 ರಂದು ಬೆಳಿಗ್ಗೆ 10-30ಕ್ಕೆ ಸಂದರ್ಶನ ನಡೆಸಲಾಗುವುದು.  ಹಾಗೂ ಡಿ. 19 ರಿಂದ ತರಬೇತಿಗಳು ಪ್ರಾರಂಭಗೊಳ್ಳುವವು.  ಆಯ್ಕೆಯಾದ ಅಭ್ಯರ್ಥಿಗಳಿಗೆ ಊಟ ಮತ್ತು ವಸತಿಯನ್ನು ಉಚಿತವಾಗಿ ನೀಡಲಾಗುವುದು.  ಅರ್ಜಿಯನ್ನು ನಿರ್ದೇಶಕರು, ಸ್ಟೇಟ ಬ್ಯಾಂಕ್ ಆಫ್ ಇಂಡಿಯಾ, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ಜಿಲ್ಲಾ ಕೈಗಾರಿಕ ಕೇಂದ್ರ ಆವರಣ, ಅಶೋಕ ಸರ್ಕಲ್ ಹತ್ತಿರ, ಕೊಪ್ಪಳ ದೂ. 08539-231038, ಇಲ್ಲಿಗೆ ಸಲ್ಲಿಸಬಹುದು ಎಂದು ಕೊಪ್ಪಳ ಎಸ್.ಬಿ.ಐ. ಆರ್‍ಸೆಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೃಷಿ ಭಾಗ್ಯ ಯೋಜನೆಯಡಿ ರೈತರಿಗೆ ತರಕಾರಿ ಬೀಜ ಕಿಟ್ ವಿತರಣೆ


ಕೊಪ್ಪಳ ನ. 30 (ಕರ್ನಾಟಕ ವಾರ್ತೆ): ತೋಟಗಾರಿಕೆ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ “ಕೃಷಿ ಭಾಗ್ಯ” ಯೋಜನೆಯಡಿ ರೈತರಿಗೆ ತರಕಾರಿ ಬೀಜಗಳ ಕಿಟ್ ವಿತರಣೆ ಮಾಡುವಂತಹ ಕಾರ್ಯಕ್ರಮವನ್ನು ಮೊದಲ ಬಾರಿಗೆ ತೋಟಗಾರಿಕೆ ಇಲಾಖೆ ಜಾರಿಗೊಳಿಸಿದೆ.
       ರೈತರಿಗೆ ಕೃಷಿಯಲ್ಲಿ ಉತ್ತೇಜನ ನೀಡುವ ನಿಟ್ಟಿನಲ್ಲಿ ಹಾಗೂ ನಿರಂತರ ಆದಾಯ ಗಳಿಕೆ ಮಾಡುವಂತಹ ತರಕಾರಿ ಕೃಷಿಗೆ ಪ್ರೋತ್ಸಾಹ ನೀಡಲು ಈ ವಿಶೇಷ ಯೋಜನೆ ಜಾರಿಗೊಳಿಸಲಾಗಿದೆ.  ಪ್ರಸಕ್ತ ಹಿಂಗಾರಿನಿಂದಲೇ ತರಕಾರಿ ಬೀಜಗಳ ಕಿಟ್ ವಿತರಣೆ ಶುರುವಾಗಲಿದೆ.  ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ತರಕಾರಿ ಬೆಳೆಗಳ ಉತ್ಪಾದನಾ ವೆಚ್ಚ ಕಡಿಮೆ ಮಾಡಲು, ಗುಣಮಟ್ಟದ ಬೀಜಗಳನ್ನು ದೊರಕಿಸುವುದು ಯೋಜನೆಯ ಉದ್ದೇಶವಾಗಿದೆ.  ಅಧಿಕೃತ ಹಾಗೂ ಶಿಫಾರಸು ಮಾಡಿರುವ ಹೊಸ ಸುಧಾರಿತ ತರಕಾರಿ ತಳಿಗಳನ್ನು ಪರಿಚಯಿಸುವ ಜೊತೆಗೆ ರೈತರಿಗೆ ಉತ್ತೇಜಿಸಲು ಈ ವಿಶೇಷ ಸೌಲಭ್ಯ ಸಹಕಾರಿಯಾಗಲಿದೆ.
      ರೈತರಿಗೆ ಗುಣಮಟ್ಟದ ಬೀಜ ವಿತರಿಸುವುದಲ್ಲದೆ ನಂತರ ಹರಡುವ ವಿವಿಧ ರೋಗಗಳ ನಿರ್ವಹಣೆಗೂ ಇಲಾಖೆ ಕ್ರಮ ಕೈಗೊಂಡಿದೆ.  ತರಕಾರಿ ಬೀಜಗಳು, ತೋಟಗಾರಿಕೆ ಬೆಳೆಗಳ ಇಳುವರಿ ಹೆಚ್ಚಿಸುವ ಜೊತೆಗೆ ರೈತರ ಆರ್ಥಿಕ ಮಟ್ಟ ಸುಧಾರಿಸುವ ಉದ್ದೇಶ ಹೊಂದಲಾಗಿದೆ.  ಪ್ರಸಕ್ತ ಮುಂಗಾರು ಹಂಗಾಮಿನ ಕೊನೆಯಲ್ಲಿ ಉತ್ತಮ ಮಳೆಯಾಗಿದೆ.  ಆರಂಭಿಕ ಬೆಳೆ ವೈಫಲ್ಯ ಸರಿದೂಗಿಸಲು ಹಿಂಗಾರು ಹಾಗೂ ಬೇಸಿಗೆ ಹಂಗಾಮಿನಲ್ಲಿ ಬೆಳೆಯುವ ತರಕಾರಿ ಬೆಳೆಗಳಿಗೆ ಬೀಜ ಕಿಟ್‍ಗಳನ್ನು “ಕೃಷಿ ಭಾಗ್ಯ” ಯೋಜನೆಯಡಿ ವಿತರಿಸಲಾಗುತ್ತದೆ.  
      ಪ್ರತಿ ರೈತರಿಗೆ ತರಕಾರಿ ಬೇಸಾಯಕ್ಕೆ ತರಕಾರಿ ಬೀಜಗಳಿಗೆ 2000 ರೂ, ಜೈವಿಕ ಗೊಬ್ಬರ-500 ರೂ, ಸಸ್ಯ ಸಂರಕ್ಷಣಾ ಔಷಧ 1500 ರೂ, ಸೇರಿ ಒಟ್ಟು ಘಟಕ ವೆಚ್ಚ 4000 ರೂ. ಆಗಲಿದೆ.   ಈ ಪೈಕಿ ಗರಿಷ್ಟ 2000 ರೂ, ಮೊತ್ತದ  ವಿವಿಧ ತರಕಾರಿ ಬೆಳೆಗಳ ಬೀಜಗಳನ್ನು ಇಲಾಖೆ ವತಿಯಿಂದ ವಿತರಿಸಲಾಗುತ್ತದೆ.   ಬೀಜದ ವೆಚ್ಚ ಹೊರತುಪಡಿಸಿ, ಇತರ ಘಟಕಗಳ ವೆಚ್ಚವನ್ನು ರೈತರೇ ಭರಿಸಲು ನಿಯಮ ರೂಪಿಸಲಾಗಿದ್ದು, ತೋಟಗಾರಿಕೆ ರೈತರು ಈ ಬಗ್ಗೆ ಆಯಾ ತಾಲೂಕಿನ ತೋಟಗಾರಿಕೆ ಕಛೇರಿಗೆ ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ ಎಂದು ಕೊಪ್ಪಳ ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತುಂಗಭದ್ರಾ ಕಾಲುವೆಗಳಲ್ಲಿ ನೀರು ಮುಂದುವರೆಸಲು ನಿರ್ಧಾರ


ಕೊಪ್ಪಳ ನ. 30 (ಕರ್ನಾಟಕ ವಾರ್ತೆ): ತುಂಗಭದ್ರಾ ಜಲಾಶಯದ ಪ್ರಸಕ್ತ ಸಾಲಿಗೆ ಲಭ್ಯವಾಗುವ ನೀರನ್ನು ಉಪಯೋಗಿಸುವ ಹಾಗೂ ಕುಡಿಯುವ ನೀರಿಗಾಗಿ ಜೂನ್-2018 ರವರೆಗೆ ನೀರನ್ನು ಕಾಯ್ದಿರಿಸಿ, ಉಳಿಕೆಯಾಗುವ ನೀರನ್ನು ತಡವಾಗಿ ಆರಂಭವಾದ ಮುಂಗಾರು ಹಂಗಾಮಿನ ಬೆಳದು ನಿಂತಿರುವ ಬೆಳೆಗಳಿಗೆ ಮತ್ತು ಮಳೆ ಆಶ್ರಿತ ಮಿತ ಬೆಳೆಗಳಿಗೆ ಕಾಲುವೆಗಳಲ್ಲಿ ನೀರನ್ನು ಮುಂದುವರೆಸಲು ನಿರ್ಧರಿಸಲಾಗಿದೆ ಎಂದು ಕೊಪ್ಪಳ ಜಿಲ್ಲೆಯ ಮುನಿರಾಬಾದ್ ತುಂಗಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರು ಹಾಗೂ ನೀರಾವರಿ ಅಧಿಕಾರಿಗಳು ತಿಳಿಸಿದ್ದಾರೆ.
    ಬೆಳಗಾವಿಯಲ್ಲಿ ಇತ್ತೀಚೆಗೆ ನಡೆದ ತುಂಗಭದ್ರಾ ಯೋಜನೆಯ 110ನೇ ನೀರಾವರಿ ಸಲಹಾ ಸಮಿತಿ ಸಭೆಯ ನಿರ್ಣಯದಂತೆ, ಮುಂಗಾರು ಹಂಗಾಮಿನ ಬೆಳದು ನಿಂತಿರುವ ಬೆಳೆಗಳಿಗೆ ಮತ್ತು ಮಳೆ ಆಶ್ರಿತ ಮಿತ ಬೆಳೆಗಳಿಗೆ ಕಾಲುವೆಗಳಲ್ಲಿ ನೀರನ್ನು ಮುಂದುವರೆಸಲು ನಿರ್ಧರಿಸಲಾಗಿದೆ.  ನೀರನ್ನು ಒದಗಿಸುವ ಕಾಲಾವಧಿ ವಿವರ ಇಂತಿದೆ,
ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ : ಡಿಸೆಂಬರ್. 01 ರಿಂದ 2018ರ ಫೆಬ್ರುವರಿ 28 ರವರೆಗೆ ಸರಾಸರಿ 2500 ಕ್ಯೂಸೆಕ್ಸ್‍ನಂತೆ ಅಥವಾ ಈ ಕಾಲುವೆಯಡಿ ನೀರಿನ ಲಭ್ಯತೆಯು ಇರುವವರೆಗೆ ಮಾತ್ರ, ಇದರಲ್ಲಿ ಯಾವುದು ಮೊದಲೊ ಅದು ಅನ್ವಯಿಸುತ್ತದೆ. 
ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆ : ಡಿ. 10 ರವರೆಗೆ 700 ಕ್ಯೂಸೆಕ್ಸ್‍ನಂತೆ ಮುಂದುವರೆಸುವುದು.  ಡಿ. 11 ರಿಂದ 31 ರವರೆಗೆ ನೀರು ನಿಲುಗಡೆ, ನಂತರ 2018ರ ಜನೇವರಿ. 01 ರಿಂದ 22 ರವರೆಗೆ 600 ಕ್ಯೂಸೆಕ್ಸ್‍ನಂತೆ, ಜ. 23 ರಿಂದ ಫೆಬ್ರುವರಿ. 02 ರವರೆಗೆ ನೀರು ನಿಲುಗಡೆ.  ಫೆ. 03 ರಿಂದ ಫೆ. 25 ರವರೆಗೆ 600 ಕ್ಯೂಸೆಕ್ಸ್‍ನಂತೆ, ನಂತರ ಫೆ. 26 ರಿಂದ ಮಾರ್ಚ್. 07 ರವರೆಗೆ ನಿಲುಗಡೆ.  ಮಾ. 08 ರಿಂದ ಮಾ. 30 ರವರೆಗೆ 600 ಕ್ಯೂಸೆಕ್ಸ್‍ನಂತೆ ಅಥವಾ ಈ ಕಾಲುವೆಯಡಿ ನೀರಿನ ಲಭ್ಯತೆಯು ಇರುವವರೆಗೆ ಮಾತ್ರ, ಇದರಲ್ಲಿ ಯಾವುದು ಮೊದಲೊ ಅದು ಅನ್ವಯಿಸುತ್ತದೆ. 
ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆ : ಡಿ. 10 ರವರೆಗೆ 1200 ಕ್ಯೂಸೆಕ್ಸ್ ನಂತೆ ಮುಂದುವರೆಸುವುದು.  ಡಿ. 11 ರಿಂದ ಡಿ. 31 ರವರೆಗೆ ನೀರು ನಿಲುಗಡೆ, 2018ರ ಜನೇವರಿ. 01 ರಿಂದ 10 ರವರೆಗೆ 1200 ಕ್ಯೂಸೆಕ್ಸ್‍ನಂತೆ ಹರಿಸಿ ನಂತರ ಸಂಪೂರ್ಣ ನಿಲುಗಡೆ.  ಅಥವಾ ಈ ಕಾಲುವೆಯಡಿ ನೀರಿನ ಲಭ್ಯತೆಯು ಇರುವವರೆಗೆ ಹಾಗೂ ಕಾಲುವೆಯ ಮಟ್ಟ ತಲುಪುವವರೆಗೆ ಇದರಲ್ಲಿ ಯಾವುದು ಮೊದಲೊ ಅದು ಅನ್ವಯಿಸುತ್ತದೆ. 
ರಾಯ ಬಸಣ್ಣ ಕಾಲುವೆ : ಡಿ. 10 ರವರೆಗೆ 200 ಕ್ಯೂಸೆಕ್ಸ್ ನಂತೆ ಮುಂದುವರೆಸುವುದು.  ಡಿ. 11 ರಿಂದ 2018ರ ಜನೇವರಿ. 10 ರವರೆಗೆ ಕಾಲುವೆ ನಿಲುಗಡೆ.  ಜ. 11 ರಿಂದ ಮೇ. 31 ರವರೆಗೆ 200 ಕ್ಯೂಸೆಕ್ಸ್‍ನಂತೆ ಅಥವಾ ಈ ಕಾಲುವೆಯಡಿ ನೀರಿನ ಲಭ್ಯತೆಯು ಇರುವವರೆಗೆ ಮಾತ್ರ, ಇದರಲ್ಲಿ ಯಾವುದು ಮೊದಲೊ ಅದು ಅನ್ವಯಿಸುತ್ತದೆ.
ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆ: ಡಿ. 15 ರವರೆಗೆ 33 ಕ್ಯೂಸೆಕ್ಸ್‍ನಂತೆ ಮುಂದುವರೆಸುವುದು.  ನಂತರ ಡಿ. 16 ರಿಂದ ಡಿ. 31 ರವರೆಗೆ ನಿಲುಗಡೆ, 2018ರ ಜನೇವರಿ. 01 ರಿಂದ ಕಾಲುವೆ ಮಟ್ಟ ತಲುಪುವವರೆಗೆ ಅಥವಾ ಈ ಕಾಲುವೆಯಡಿ ನೀರಿನ ಲಭ್ಯತೆಯು ಇರುವವರೆಗೆ ಮಾತ್ರ, ಇದರಲ್ಲಿ ಯಾವುದು ಮೊದಲೊ ಅದು ಅನ್ವಯಿಸುತ್ತದೆ.
ಎಡದಂಡೆ ವಿಜಯನಗರ ಕಾಲುವೆಗಳು : 2018ರ ಫೆಬ್ರುವರಿ. 28 ರವರೆಗೆ 150 ಕ್ಯೂಸೆಕ್ಸ್‍ನಂತೆ ಮುಂದುವರೆಸುವುದು.  ನಂತರ ಮಾರ್ಚ್. 01 ರಿಂದ ಮೇ. 10 ರವರೆಗೆ 150 ಕ್ಯೂಸೆಕ್ಸ್‍ನಂತೆ ಹರಿಸುವುದು ಅಥವಾ  ಈ ಕಾಲುವೆಯಡಿ ನೀರಿನ ಲಭ್ಯತೆಯು ಇರುವವರೆಗೆ ಮಾತ್ರ, ಇದರಲ್ಲಿ ಯಾವುದು ಮೊದಲೊ ಅದು ಅನ್ವಯಿಸುತ್ತದೆ.
    ತುಂಗಭದ್ರಾ ಜಲಾಶಯದಲ್ಲಿ ಪ್ರಸಕ್ತ ವರ್ಷ ಪ್ರಸಕ್ತ ಸಾಲಿನಲ್ಲಿ ಲಭ್ಯವಾಗುವ ನೀರನ್ನು ಉಪಯೋಗಿಸುವ ಹಾಗೂ ಕುಡಿಯುವ ನೀರಿಗಾಗಿ ಜೂನ್-2018 ರವರೆಗೆ ನೀರನ್ನು ಕಾಯ್ದಿರಿಸಿ, ಉಳಿಕೆಯಾಗುವ ನೀರನ್ನು ತಡವಾಗಿ ಆರಂಭವಾದ ಮುಂಗಾರು ಹಂಗಾಮಿನ ಬೆಳದು ನಿಂತಿರುವ ಬೆಳೆಗಳಿಗೆ ಮತ್ತು ಮಳೆ ಆಶ್ರಿತ ಮಿತ ಬೆಳೆಗಳಿಗೆ ಕಾಲುವೆಗಳಲ್ಲಿ ನೀರನ್ನು ಮುಂದುವರೆಸಲು ನಿರ್ಧರಿಸಲಾಗಿದೆ.  ಈ ಹಿನ್ನಲೆಯಲ್ಲಿ ರೈತ ಭಾಂದವರು ಲಭ್ಯವಿರುವ ಅಲ್ಪಪ್ರಮಾಣದ ನೀರನ್ನು ಮಿತವ್ಯಯವಾಗಿ ಬಳಸಿ ಇಲಾಖೆಯೊಡನೆ ಸಹಕರಿಸಲು ಮುನಿರಾಬಾದ್ ತುಂಗಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರು ಹಾಗೂ ನೀರಾವರಿ ಅಧಿಕಾರಿಗಳು ಮನವಿ ಮಾಡಿದ್ದಾರೆ.  ಮುಂದುವರೆದು ಯಾವುದೇ ಉಲ್ಲಂಘನೆ ಮಾಡಿ ಬೆಳೆ ನಷ್ಟ ಮಾಡಿಕೊಂಡಲ್ಲಿ ಇಲಾಖೆಯು ಜವಾಬ್ದಾರಿ ಯಾವುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.

ಅಣಬೆ ಬೇಸಾಯ ತರಬೇತಿ : ಹೆಸರು ನೊಂದಾಯಿಸಿಕೊಳ್ಳಲು ಸೂಚನೆ


ಕೊಪ್ಪಳ ನ. 30 (ಕರ್ನಾಟಕ ವಾರ್ತೆ): ಕೊಪ್ಪಳ ತೋಟಗಾರಿಕೆ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಅಣಬೆ ಬೇಸಾಯ ಕುರಿತು ಜಿಲ್ಲೆಯ ಕೃಷಿಕರು, ಪಟ್ಟಣ ಪ್ರದೇಶದ ಸಾರ್ವಜನಿಕರಿಗೆ ಹಾಗೂ ಸ್ವ-ಸಹಾಯಕ ಸಂಘಗಳ ಸದಸ್ಯರಿಗೆ ತರಬೇತಿಯನ್ನು ಹಮ್ಮಿಕೊಳ್ಳಲಾಗಿದ್ದು, ಆಸಕ್ತರು ಹೆಸರು ನೊಂದಾಯಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
    ಕೊಪ್ಪಳ ತೋಟಗಾರಿಕೆ ಇಲಾಖೆ ವತಿಯಿಂದ ಅಣಬೆ ಬೇಸಾಯ ಕುರಿತು ಜಿಲ್ಲೆಯ ಕೃಷಿಕರು, ಪಟ್ಟಣ ಪ್ರದೇಶದ ಸಾರ್ವಜನಿಕರಿಗೆ ಹಾಗೂ ಸ್ವ-ಸಹಾಯಕ ಸಂಘಗಳ ಸದಸ್ಯರುಗಳಿಗೆ ಪ್ರತಿ ತಾಲೂಕಿಗೆ ಒಟ್ಟು 100 ಜನರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಡಿಸೆಂಬರ್ ಮಾಹೆಯ 2 ಅಥವಾ 3ನೇ ವಾರದಲ್ಲಿ ಆಯಾ ತಾಲೂಕು ಮಟ್ಟದಲ್ಲಿ ಏರ್ಪಡಿಸಲು ಉದ್ದೇಶಿಸಲಾಗಿದೆ.  ಆಸಕ್ತ  ಕೃಷಿಕರು, ಪಟ್ಟಣ ಪ್ರದೇಶದ ಸಾರ್ವಜನಿಕರಿಗೆ ಹಾಗೂ ಸ್ವ-ಸಹಾಯಕ ಸಂಘಗಳ ಸದಸ್ಯರು ಸಂಬಂಧಪಟ್ಟ ತೋಟಗಾರಿಕೆ ಇಲಾಖೆ ತಾಲೂಕು ಕಛೇರಿಗಳಿಗೆ ಭೇಟಿ ನೀಡಿ, ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳಬಹುದು.  ಹೆಚ್ಚಿನ ಮಾಹಿತಿಗಾಗಿ ತಾಲೂಕು ತೋಟಗಾರಿಕೆ ಕಛೇರಿಗಳಿಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಐ.ಆರ್.ಬಿ ಮುನಿರಾಬಾದ್‍ನಲ್ಲಿ “ಜಿಎಸ್‍ಎಸ್ ಭಾವಯಾನ”



ಕೊಪ್ಪಳ ನ. 30 (ಕರ್ನಾಟಕ ವಾರ್ತೆ): ಇಂಡಿಯಾ ರಿಸರ್ವ್ ಬಟಾಲಿಯನ್ ಮತ್ತು ಕೆ.ಎಸ್.ಆರ್.ಪಿ ತರಬೇತಿ ಶಾಲೆ ಮುನಿರಾಬಾದ್‍ನಲ್ಲಿ ಕನ್ನಡ ರಾಜ್ಯೋತ್ಸವ, ಕರುನಾಡ ಪರ್ವ-2017ರ ಅಂಗವಾಗಿ “ಜಿಎಸ್‍ಎಸ್ ಭಾವಯಾನ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ರಾಷ್ಟ್ರಕವಿ ದಿ|| ಡಾ.ಜಿ.ಎಸ್. ಶಿವರುದ್ರಪ್ಪನವರಿಗೆ ನುಡಿನಮನವನ್ನು ಸಲ್ಲಿಸಲಾಯಿತು.

    ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ, ಸಾಹಿತಿ, ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತರಾದ ವಿಠ್ಠಪ್ಪ ಗೋರಂಟ್ಲಿ ಅವರನ್ನು ಸನ್ಮಾನಿಸಲಾಯಿತು.  ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಕೆ.ಎಸ್.ಆರ್.ಪಿ.  ಎ.ಡಿ.ಜಿ.ಪಿ ಭಾಸ್ಕರ ರಾವ್ ರವರ ಮಾರ್ಗದರ್ಶನದಲ್ಲಿ ಪೊಲೀಸ್ ಇಲಾಖೆಯಲ್ಲಿ ಕರುನಾಡ ಹಬ್ಬವನ್ನು ಹಮ್ಮಿಕೊಂಡಿರುವುದು ಪ್ರಶಂಸನೀಯ ಎಂದು ಹೇಳಿದರು.
     ಪ್ರಾಸ್ತಾವಿಕವಾಗಿ ಮಾತನಾಡಿದ ಪೊಲೀಸ್ ತರಬೇತಿ ಶಾಲೆಯ ಪ್ರಾಚಾರ್ಯ ಹಾಗೂ ಕಮಾಂಡೆಂಟ್ ಇಂಡಿಯಾ ರಿಸರ್ವ್ ಬಟಾಲಿಯನ್, ಡಾ. ರಾಮಕೃಷ್ಣ ಮುದ್ದೇಪಾಲ ಅವರು ಕರುನಾಡ ಪರ್ವವನ್ನು ಕೆ.ಎಸ್.ಆರ್.ಪಿಯ ಎಲ್ಲ ಪಡೆಗಳಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.
     ತೋಟಗಾರಿಕಾ ಮಹಾವಿದ್ಯಾಲಯದ ಡೀನ್ ಪಿ.ಎಂ. ಗಂಗಾಧರಪ್ಪ, ಗುರುಪ್ರಸಾದ್, ಸ್ಪೇ.ಆರ್.ಎಸ್.ಐ ಮೋಹನಮುರಳಿ,  ಪಿ.ಎಸ್.ಐ ಈಶಪ್ಪ, ಸ್ಪೇ.ಆರ್.ಪಿ.ಐ ರಾಧಾಕೃಷ್ಣ ಹರಾವತ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.   ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನಂತರ ಜಿ.ಎಸ್.ಎಸ್ ವಿರಚಿತ ಭಾವಗೀತೆಗಳನ್ನಾಧರಿಸಿದ ಸುಗಮ ಸಂಗೀತ ಕಾರ್ಯಕ್ರಮವನ್ನು ಶೃತಿ ನಡೆಸಿಕೊಟ್ಟರು.

ಕಾಲೇಜು ನಾಟಕ ಮತ್ತು ಜಾನಪದ ಕಲಾ ಸ್ಪರ್ಧೆ : ಸಂಚಾಲಕರ ಆಯ್ಕೆ


ಕೊಪ್ಪಳ ನ. 30 (ಕರ್ನಾಟಕ ವಾರ್ತೆ): ಕಲಬುರಗಿ ರಂಗಾಯಣ ವತಿಯಿಂದ ಪದವಿ ಮತ್ತು ಸ್ನಾತಕೊತ್ತರ ಕಾಲೇಜುಗಳಿಗಾಗಿ ಏರ್ಪಡಿಸಿರುವ ಕಾಲೇಜು ನಾಟಕ ಮತ್ತು ಜಾನಪದ ಕಲಾ ಸ್ಪರ್ಧೆಗಾಗಿ ಆಯ್ಕೆ ಸಮಿತಿಯ ನಿರ್ಧಾರದ ಮೇರೆಗೆ ಆರು ಜಿಲ್ಲೆಗಳಿಗೆ ಸಂಬಂಧಿಸಿದಂತೆ ಸಂಚಾಲಕರನ್ನು ಆಯ್ಕೆ ಮಾಡಲಾಗಿದೆ. 
    ಕಲಬುರಗಿ ರಂಗಾಯಣ ವತಿಯಿಂದ ಪದವಿ ಮತ್ತು ಸ್ನಾತಕೊತ್ತರ ಕಾಲೇಜುಗಳಿಗಾಗಿ ಏರ್ಪಡಿಸಿರುವ ಕಾಲೇಜು ನಾಟಕ ಮತ್ತು ಜಾನಪದ ಕಲಾ ಸ್ಪರ್ಧೆಗಾಗಿ ಆಯ್ಕೆ ಸಮಿತಿಯ ನಿರ್ಧಾರದ ಮೇರೆಗೆ ಕಲಬುರಗಿ ಜಿಲ್ಲೆಗೆ ಶಾಂತಲಿಂಗ ಎಸ್. ಹಿರೇಮಠ, ಕೊಪ್ಪಳ - ಶೀಲಾ ಹಾಲ್ಕುರಿಕೆ, ರಾಯಚೂರು – ರಂಜಾನ್ ಸಾಹೇಬ್ ಉಳಾಗಡ್ಡಿ, ಯಾದಗಿರಿ – ರವೀಂದ್ರ ಹಿರೇಮಠ ಹಾಗೂ ಬಳ್ಳಾರಿ ಜಿಲ್ಲೆಗೆ ಅಣ್ಣಾಜೀರಾವ್ ಕೃಷ್ಣರೆಡ್ಡಿ ಅವರನ್ನು ಸಂಚಾಲಕರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಕಲಬುರಗಿ ರಂಗಾಯಣದ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಶಸ್ತ್ರ ಪೊಲೀಸ್ ಕಾನ್ಸ್‍ಟೇಬಲ್ ನೇಮಕಾತಿ : ಡಿ. 03 ರಂದು ಲಿಖಿತ ಪರೀಕ್ಷೆ


ಕೊಪ್ಪಳ ನ. 30 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಪೊಲೀಸ್ ಘಟಕದಲ್ಲಿ ಸಶಸ್ತ್ರ ಪೊಲೀಸ್ ಕಾನ್ಸ್‍ಟೇಬಲ್‍ರ ಪ್ರಸಕ್ತ ಸಾಲಿನ ನೇಮಕಾತಿಗಾಗಿ ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಡಿಸೆಂಬರ್. 03 ರಂದು ಭಾನುವಾರ ಮಧ್ಯಾಹ್ನ 03-00 ರಿಂದ 04-30 ಗಂಟೆಯವರೆಗೆ ಜಿಲ್ಲೆಯ ಗಂಗಾವತಿ ನಗರದ 23 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಒಟ್ಟು 6400 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.
ಪರೀಕ್ಷಾ ಕೇಂದ್ರಗಳ ವಿವರ : ಗಂಗಾವತಿಯ ಸಾಯಿ ನಗರದ ಕೊಲ್ಲಿ ನಾಗೇಶ್ವರಾವ್ ಗಂಗಯ್ಯ ಸರಕಾರಿ ಪ್ರಥಮ ದರ್ಜೆ ಮಹಾ ವಿದ್ಯಾಲಯದಲ್ಲಿ ರೂಲ್ ನಂಬರ್. 5316001 ರಿಂದ 5316600 ವರೆಗೆ ಒಟ್ಟು 600 ಅಭ್ಯರ್ಥಿಗಳು.  ಸರಸ್ವತಿ ಗಿರಿ, ಲಲಿತ ಮಹಲ್ ಹೊಟೇಲ್ ಹಿಂದುಗಡೆಯ ಸರಕಾರಿ ಕೈಗಾರಿಕ ತರಬೇತಿ ಸಂಸ್ಥೆಯಲ್ಲಿ ರೂಲ್ ನಂಬರ್. 5316601 ರಿಂದ 5316900 ವರೆಗೆ ಒಟ್ಟು 300, ವಿರುಪಾಪುರ ಬೆಥಲ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ರೂಲ್ ನಂಬರ್. 5316901 ರಿಂದ 5317300 ವರೆಗೆ ಒಟ್ಟು 400, ಎಂ.ಎನ್.ಎಂ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜ್ (ಪ್ರೌಢ ಶಾಲಾ ವಿಬಾಗ) ದಲ್ಲಿ ರೂಲ್ ನಂಬರ್. 5317301 ರಿಂದ 5317600 ರವರೆಗೆ ಒಟ್ಟು 300, ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರೂಲ್ ನಂಬರ್. 5317601 ರಿಂದ 5317900 ವರೆಗೆ ಒಟ್ಟು 300, ಲಯನ್ಸ್ ಸಂಯುಕ್ತ ಪದವಿ ಪೂರ್ವ ಕಾಲೇಜ್ ಲಯನ್ಸ್ ಕ್ಲಬ್ ಆವರಣದಲ್ಲಿ ರೂಲ್ ನಂಬರ್. 5317901 ರಿಂದ 5318200 ವರೆಗೆ ಒಟ್ಟು 300, ಪಂಪಾನಗರದ ಕೊಟ್ಟೂರೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜ್ (ಪ್ರೌಢ ಶಾಲಾ ವಿಭಾಗ) ದಲ್ಲಿ ರೂಲ್ ನಂಬರ್. 5318201 ರಿಂದ 5318500 ವರೆಗೆ ಒಟ್ಟು 300, ಎಚ್.ಆರ್. ಸರೋಜಮ್ಮ ಸ್ಮಾರಕ ಬಾಲಕಿಯರ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ರೂಲ್ ನಂಬರ್. 5318501 ರಿಂದ 5318700 ಒಟ್ಟು 200, ಜಯನಗರದ ಎಂ.ಎನ್.ಎಂ ಪ್ರೌಢಶಾಲೆ, ವಿದ್ಯಾಗಿರಿಯಲ್ಲಿ ರೂಲ್ ನಂಬರ್. 5318701 ರಿಂದ 5318860 ಒಟ್ಟು 160, ಜಯನಗರದ ಸೇಂಟ್ ಪಾಲ್ಸ್ ಆಂಗ್ಲ ಶಾಲೆಯಲ್ಲಿ ರೂಲ್ ನಂಬರ್. 5318861 ರಿಂದ 5319220 ವರೆಗೆ ಒಟ್ಟು 360, ಎಲ್.ಐ.ಸಿ ಆಫೀಸ್ ಎದುರುಗಡೆ ಲಿಟಲ್ ಹಾಟ್ರ್ಸ್ ಸ್ಕೂಲ್‍ನಲ್ಲಿ ರೂಲ್ ನಂಬರ್. 5319221 ರಿಂದ 5319620 ವರೆಗೆ ಒಟ್ಟು 400, ಜುಲಾಯಿ ನಗರದ ಜನತಾ ಸೇವಾ ಅನುದಾನಿತ ಕನ್ನಡ ಮಾಧ್ಯಮ ಪ್ರೌಢ ಶಾಲೆಯಲ್ಲಿ ರೂಲ್ ನಂಬರ್.  5319621 ರಿಂದ 5319880 ವರೆಗೆ ಒಟ್ಟು 260, ಜನತಾ ಸೇವಾ ಅನುದಾನಿತ ಪದವಿ ಪೂರ್ವ ಕಾಲೇಜಿನಲ್ಲಿ ರೂಲ್ ನಂಬರ್.  5319881 ರಿಂದ 5320020 ವರೆಗೆ ಒಟ್ಟು 140, ಲಕ್ಷ್ಮೀದೇವಿ ಗುಡಿ ಹತ್ತಿರದ ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜಿನಲ್ಲಿ 5320021 ರಿಂದ 5320260 ವರೆಗೆ ಒಟ್ಟು 240, ವಡ್ಡರಹಟ್ಟಿಯ ಕೆ.ಎಲ್.ಇ ಸಂಸ್ಥೆಯ ಪದವಿ ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾ ವಿದ್ಯಾಲಯದಲ್ಲಿ ರೂಲ್ ನಂಬರ್.  5320261 ರಿಂದ 5320500 ವರೆಗೆ ಒಟ್ಟು 240, ಚೈತನ್ಯ ಟೆಕ್ನೊ ಸ್ಕೂಲ್, ಕೇರಾಫ್ ಸಪ್ತಗಿರಿ ಪಬ್ಲಿಕ್ ಸ್ಕೂಲ್‍ನಲ್ಲಿ ರೂಲ್ ನಂಬರ್. 5320501 ರಿಂದ 5320800 ವರೆಗೆ ಒಟ್ಟು 300, ಕೊಪ್ಪಳ ರಸ್ತೆಯ ವೆಂಕಟೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ರೂಲ್ ನಂಬರ್. 5320801 ರಿಂದ 5321040 ವರೆಗೆ ಒಟ್ಟು 240, ವಡ್ಡರಹಟ್ಟಿ-ಗಂಗಾವತಿಯ ಕೆಂಧೋಳಿ ರಾಮಣ್ಣ ಇಂಗ್ಲೀಷ್ ಮಿಡಿಯಂ ಹೈಯರ್ ಪ್ರೈಮೆರಿ ಸ್ಕೂಲ್‍ನಲ್ಲಿ ರೂಲ್ ನಂಬರ್. 5321041 ರಿಂದ 5321180 ವರೆಗೆ ಒಟ್ಟು 140, ಇಲಾಹಿ ಕಾಲೋನಿಯ ಟಿ.ಎಂ.ಎ.ಇ ಸೊಸೈಟಿ ಆಫ್ ಎಜ್ಯಕೇಶನ್ ಸಂಸ್ಥೆಯಲ್ಲಿ ರೂಲ್ ನಂಬರ್. 5321181 ರಿಂದ 5321420 ವರೆಗೆ ಒಟ್ಟು 240, ವಿದ್ಯಾನಗರದ ನೆಕ್ಕಂಟಿ ರಾಮರಾವ್ ಇಂಗ್ಲೀಷ್ ಮಾದ್ಯಮ ಪ್ರೌಢಶಾಲೆಯಲ್ಲಿ ರೂಲ್ ನಂಬರ್. 5321421 ರಿಂದ 5321620 ವರೆಗೆ ಒಟ್ಟು 200, ಎಳಮಂಚಿಲಿ ಜನತಾ ರಾಣಿ ಪದವಿ ಪೂರ್ವ ಕಾಲೇಜಿನಲ್ಲಿ ರೂಲ್ ನಂಬರ್. 5321621 ರಿಂದ 5321740 ವರೆಗೆ ಒಟ್ಟು 120, ಶ್ರೀರಾಮ ನಗರದ ಕೋಟಯ್ಯ ಕ್ಯಾಂಪ್ ರಸ್ತೆಯ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‍ನಲ್ಲಿ ರೂಲ್ ನಂಬರ್. 5321741 ರಿಂದ 5322140 ವರೆಗೆ ಒಟ್ಟು 400, ಎ.ಕೆ.ಆರ್ ದೇವಿ ಮೊಮೋರಿಯಲ್ ಪದವಿ ಪೂರ್ವ ಕಾಲೇಜಿನಲ್ಲಿ ಸ್ಕೂಲ್‍ನಲ್ಲಿ ರೂಲ್ ನಂಬರ್. 5322141 ರಿಂದ 532400 ವರೆಗೆ ಒಟ್ಟು 260, ಸೇರಿದಂತೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ 23 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 6400 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.
    ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಕರೆಪತ್ರಗಳನ್ನು ಇಲಾಖೆಯ ಅಧಿಕೃತ ವೆಬ್‍ಸೈಟ್  www.ksp.gov.in ನಿಂದ ಪಡೆದುಕೊಳ್ಳಬಹುದಾಗಿದೆ.  ಲಿಖಿತ ಪರೀಕ್ಷೆಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿ ಹಾಗೂ ಲಿಖಿತ ಪರೀಕ್ಷೆಗೆ ಹಾಜರಾಗಬೇಕಾದ ಪರೀಕ್ಷಾ ಕೇಂದ್ರದ ವಿವರಗಳನ್ನು ಸಹ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದೆ.  ಕರಪತ್ರವನ್ನು ಪಡೆಯದೇ ಪರೀಕ್ಷೆಗೆ ಹಾಜರಾದಲ್ಲಿ ಲಿಖಿತ ಪರೀಕ್ಷಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದಿಲ್ಲ.  ಕರೆಪತ್ರದ ಜೊತೆಗೆ ಗುರುತಿನ ಚೀಟಿಯನ್ನು ಕಡ್ಡಾಯಬಾಗಿ ತರಬೇಕು.  ನಿಗಧಿತ ದಿನಾಂಕ ಹಾಗೂ ಸಮಯದಲ್ಲಿ ಹಾಜರಾಗದಿದ್ದರೆ ಅಂತಹವರನ್ನು ಲಿಖಿತ ಪರೀಕ್ಷೆಯಲ್ಲಿ ಭಾಗವಹಿಸಲು ಅನುಮತಿ ನೀಡಲಾಗುವುದಿಲ್ಲ ಎಂದು ಕೊಪ್ಪಳ ಜಿಲ್ಲಾ ಪೊಲೀಸ್ ನೇಮಕಾತಿ ಅಧ್ಯಕ್ಷರು ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿ. 02 ರಂದು ತಾಳಕೇರಿ ಮತ್ತು ಗುನ್ನಾಳದಲ್ಲಿನ ನೂತನ ಬಸ್ ನಿಲ್ದಾಣ ಉದ್ಘಾಟನೆ


ಕೊಪ್ಪಳ ನ. 30 (ಕರ್ನಾಟಕ ವಾರ್ತೆ): ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೊಪ್ಪಳ ವಿಭಾಗದ ವತಿಯಿಂದ ಯಲಬುರ್ಗಾ ತಾಲೂಕಿನ ತಾಳಕೇರಿ ಮತ್ತು ಗುನ್ನಾಳ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ನೂತನ ಬಸ್ ನಿಲ್ದಾಣಗಳ ಉದ್ಘಾಟನಾ ಸಮಾರಂಭ ಡಿ. 02 ರಂದು ಜರುಗಲಿದೆ.
ತಾಳಕೇರಿ ಬಸ್ ನಿಲ್ದಾಣ :
************* ತಾಳಕೇರಿ ನೂತನ ಬಸ್ ನಿಲ್ದಾಣದ ಉದ್ಘಾಟನೆ ಡಿ. 02 ರಂದು ಬೆಳಿಗ್ಗೆ 11-30 ಗಂಟೆಗೆ ಬಸ್ ನಿಲ್ದಾಣ ಆವರಣದಲ್ಲಿ ನೆರವೇರಲಿದ್ದು, ಜಿಲ್ಲಾ ಉಸ್ತುವಾರಿ  ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ನೆರವೇರಿಸುವರು.  ಗ್ರಾ.ಪಂ. ಅಧ್ಯಕ್ಷೆ ಗಂಗಮ್ಮ ಸಂಗಪ್ಪ ಮೇಟಿ ಅಧ್ಯಕ್ಷತೆ ವಹಿಸುವರು.  ಕಲಬುರಗಿಯ     ಈ.ಕ.ರ.ಸಾ.ಸಂಸ್ಥೆ ಅಧ್ಯಕ್ಷ ಮಹಮ್ಮದ ಇಲಿಯಾಸ್ ಸೇಠ್ ಬಾಗವಾನ್ ಜ್ಯೋತಿ ಬೆಳಗಿಸುವರು.  ಜಿ.ಪಂ. ಅಧ್ಯಕ್ಷ ರಾಜಶೇಖರ ಹಿಟ್ನಾಳ, ಸಂಸದ ಕರಡಿ ಸಂಗಣ್ಣ, ಶಾಸಕರುಗಳಾದ ರಾಘವೇಂದ್ರ ಹಿಟ್ನಾಳ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ, ಶಿವರಾಜ ತಂಗಡಗಿ, ವಿಧಾನಪರಿಷತ್ ಸದಸ್ಯರುಗಳಾದ ಬಸವರಾಜ ಪಾಟೀಲ ಇಟಗಿ, ಅಮರನಾಥ ಪಾಟೀಲ, ಶರಣಪ್ಪ ಮಟ್ಟೂರ, ಜಿ.ಪಂ. ಉಪಾಧ್ಯಕ್ಷೆ ಲಕ್ಷ್ಮಮ್ಮ ನೀರಲೂಟಿ, ಜಿ.ಪಂ. ಸದಸ್ಯೆ ಹೊಳೆಯಮ್ಮ ಪೊಲೀಸ್ ಪಾಟೀಲ, ತಾ.ಪಂ. ಅಧ್ಯಕ್ಷೆ ಲಕ್ಷ್ಮೀ ಗೌಡ್ರ, ಉಪಾಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ, ತಾ.ಪಂ. ಸದಸ್ಯ ಷಣ್ಮುಖಪ್ಪ ಬಳ್ಳಾರಿ, ಗ್ರಾ.ಪಂ. ಉಪಾಧ್ಯಕ್ಷ ಜಂಗ್ಲಿಸಾಬ್ ಕುದರಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳುವರು.
ಗುನ್ನಾಳ ಬಸ್ ನಿಲ್ದಾಣ :
******** ಗುನ್ನಾಳ ಗ್ರಾಮದ ನೂತನ ಬಸ್ ನಿಲ್ದಾಣದ ಉದ್ಘಾಟನೆ ಡಿ. 02 ರಂದು ಸಂಜೆ 5 ಗಂಟೆಗೆ ನೂತನ ಬಸ್ ನಿಲ್ದಾಣ ಆವರಣದಲ್ಲಿ ನೆರವೇರಲಿದೆ.  ಜಿಲ್ಲಾ ಉಸ್ತುವಾರಿ  ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ನೆರವೇರಿಸುವರು.  ಗ್ರಾ.ಪಂ. ಅಧ್ಯಕ್ಷೆ ಜ್ಯೋತೆಮ್ಮ ಬಾಳಪ್ಪ ಗುಳೇದ ಅಧ್ಯಕ್ಷತೆ ವಹಿಸುವರು.  ಕಲಬುರಗಿಯ ಈ.ಕ.ರ.ಸಾ.ಸಂಸ್ಥೆ ಅಧ್ಯಕ್ಷ ಮಹಮ್ಮದ ಇಲಿಯಾಸ್ ಸೇಠ್ ಬಾಗವಾನ್ ಜ್ಯೋತಿ ಬೆಳಗಿಸುವರು.  ಜಿ.ಪಂ. ಅಧ್ಯಕ್ಷ ರಾಜಶೇಖರ ಹಿಟ್ನಾಳ, ಸಂಸದ ಕರಡಿ ಸಂಗಣ್ಣ, ಶಾಸಕರುಗಳಾದ ರಾಘವೇಂದ್ರ ಹಿಟ್ನಾಳ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ, ಶಿವರಾಜ ತಂಗಡಗಿ, ವಿಧಾನಪರಿಷತ್ ಸದಸ್ಯರುಗಳಾದ ಬಸವರಾಜ ಪಾಟೀಲ ಇಟಗಿ, ಅಮರನಾಥ ಪಾಟೀಲ, ಶರಣಪ್ಪ ಮಟ್ಟೂರ, ಜಿ.ಪಂ. ಉಪಾಧ್ಯಕ್ಷೆ ಲಕ್ಷ್ಮಮ್ಮ ನೀರಲೂಟಿ, ಜಿ.ಪಂ. ಸದಸ್ಯೆ ಹೊಳೆಯಮ್ಮ ಪೊಲೀಸ್ ಪಾಟೀಲ, ತಾ.ಪಂ. ಅಧ್ಯಕ್ಷೆ ಲಕ್ಷ್ಮೀ ಗೌಡ್ರ, ಉಪಾಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ, ತಾ.ಪಂ. ಸದಸ್ಯ ರುದ್ರಪ್ಪ ಹರಿಜನ, ಗ್ರಾ.ಪಂ. ಉಪಾಧ್ಯಕ್ಷೆ ರೇಣುಕಮ್ಮ ಸಿಂಗಾಪುರ ಸೇರಿದಂತೆ ಹಲವು ಗಣ್ಯರು ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

Wednesday, 29 November 2017

ಸಾಮಾಜಿಕ ಮತ್ತು ಮಾನವೀಯ ಸಮಸ್ಯೆ ಬಿಂಬಿತ ವರದಿ : ಪ್ರಶಸ್ತಿಗಾಗಿ ಆಹ್ವಾನ

ಕೊಪ್ಪಳ ನ. 29 (ಕರ್ನಾಟಕ ವಾರ್ತೆ): ಕರ್ನಾಟಕ ಮಾಧ್ಯಮ ಅಕಾಡೆಮಿಯು ಸಾಮಾಜಿಕ ಸಮಸ್ಯೆ ಬಿಂಬಿಸುವ ಉತ್ತಮ ವರದಿಗೆ-ಅಭಿಮಾನಿ ಪ್ರಶಸ್ತಿ ಮತ್ತು ಮಾನವೀಯ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಬಿಂಬಿಸುವ ಉತ್ತಮ ಲೇಖನ-ವರದಿಗೆ- ಮೈಸೂರು ದಿಗಂತ ಪ್ರಶಸ್ತಿಗಳನ್ನು ರಾಜ್ಯ ಮತ್ತು ಜಿಲ್ಲಾ ಮಟ್ಟದ ಕನ್ನಡ ಪತ್ರಿಕೆಗಳಲ್ಲಿ ಬರೆದ ಪತ್ರಕರ್ತರಿಗೆ ನೀಡುವ ಉದ್ದೇಶ ಹೊಂದಿದ್ದು, ವರದಿಗಳನ್ನು ಆಹ್ವಾನಿಸಲಾಗಿದೆ.
     ಬೆಂಗಳೂರಿನ ‘ಅಭಿಮಾನಿ ಪ್ರಕಾಶನ’ ಸಂಸ್ಥೆಯು ರಾಜ್ಯ ಮತ್ತು ಜಿಲ್ಲಾ ಮಟ್ಟದ ಕನ್ನಡ ಪತ್ರಿಕೆಗಳಲ್ಲಿ ‘ಸಾಮಾಜಿಕ ಸಮಸ್ಯೆ’ಗಳನ್ನು, ಹಾಗೂ ಮೈಸೂರಿನ ‘ಮೈಸೂರು ದಿಗಂತ’ ಪತ್ರಿಕಾ ಸಂಸ್ಥೆಯು ‘ಮಾನವೀಯ ಸಮಸ್ಯೆ’ಗಳನ್ನು ಪರಿಣಾಮಕಾರಿಯಾಗಿ ಬಿಂಬಿಸುವ ಲೇಖನ-ವರದಿಗಳನ್ನು ಬರೆದ ಪತ್ರಕರ್ತರಿಗೆ ಪ್ರತಿ ವರ್ಷ ತಲಾ ಹತ್ತು ಸಾವಿರ ರೂ.ಗಳ ನಗದು ಪ್ರಶಸ್ತಿ ನೀಡುವ ಸಲುವಾಗಿ ಉಭಯ ಸಂಸ್ಥೆಗಳು ತಲಾ ಒಂದು ಲಕ್ಷ ರೂ.ಗಳ ದತ್ತಿಯನ್ನು ಕರ್ನಾಟಕ ಮಾಧ್ಯಮ ಅಕಾಡೆಮಿಯಲ್ಲಿ ಸ್ಥಾಪಿಸಿವೆ.  2017 ರ ಜನವರಿಯಿಂದ ಅಕ್ಟೋಬರ್ ವರೆಗಿನ ಅವಧಿಯಲ್ಲಿ ಪ್ರಕಟವಾಗಿರುವ ಸಾಮಾಜಿಕ ಸಮಸ್ಯೆ ಬಿಂಬಿಸುವ ಉತ್ತಮ ವರದಿಗೆ-ಅಭಿಮಾನಿ ಪ್ರಶಸ್ತಿ ಮತ್ತು ಮಾನವೀಯ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಬಿಂಬಿಸುವ ಉತ್ತಮ ಲೇಖನ-ವರದಿಗೆ- ಮೈಸೂರು ದಿಗಂತ ಪ್ರಶಸ್ತಿ ನೀಡಲಾಗುವುದು.  ಎರಡೂ ವಿಭಾಗಗಳಿಗೆ ಪ್ರತ್ಯೇಕವಾಗಿ ಪ್ರಸ್ತಾವನೆ ಸಲ್ಲಿಸಬೇಕು.  ಕನ್ನಡ ದೈನಿಕ-ವಾರ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪತ್ರಕರ್ತರು ಬರೆದಿರುವ ವರದಿಗಳಿಗೆ ಮಾತ್ರ ಪ್ರಶಸ್ತಿಗೆ ಅವಕಾಶ ಇರುತ್ತದೆ.  ಲೇಖನ-ವರದಿಗಳಲ್ಲಿ ಹೆಸರು (ಬೈಲೈನ್) ಪ್ರಕಟವಾಗದಿದ್ದಲ್ಲಿ, ಸಂಬಂಧಿಸಿದ ಪತ್ರಿಕೆಯ ಸಂಪಾದಕರಿಂದ ದೃಢೀಕರಣ ಪತ್ರ ಪಡೆದು ಕಳುಹಿಸಬೇಕು.  ಲೇಖನ ವರದಿಗಳನ್ನು ಡಿ. 26 ರ ಒಳಗಾಗಿ ಕಾರ್ಯದರ್ಶಿ, ಕರ್ನಾಟಕ ಮಾಧ್ಯಮ ಅಕಾಡೆಮಿ, ಅಭಿಮಾನಿ ಪ್ರಶಸ್ತಿ-2017 ಹಾಗೂ ಮೈಸೂರು ದಿಗಂತ ಪ್ರಶಸ್ತಿ-2017, ಪೋಡಿಯಂ ಬ್ಲಾಕ್, ವಿಶ್ವೇಶ್ವರಯ್ಯ ಕೇಂದ್ರ, ಡಾ. ಅಂಬೇಡ್ಕರ್ ವೀಧಿ, ಬೆಂಗಳೂರು-01 ಇವರಿಗೆ ಸಲ್ಲಿಸಬೇಕು ಎಂದು ಅಕಾಡೆಮಿ ಅಧ್ಯಕ್ಷ ಎಂ. ಸಿದ್ದರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಲಬುರ್ಗಾ : ವಿವಿಧ ತರಬೇತಿಗೆ ಅರ್ಜಿ ಆಹ್ವಾನ


ಕೊಪ್ಪಳ ನ. 29 (ಕರ್ನಾಟಕ ವಾರ್ತೆ): ಯಲಬುರ್ಗಾ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಇರುವ ನಿರುದ್ಯೋಗಿಗಳಿಗೆ ಪ್ರಸಕ್ತ ಸಾಲಿನ ದೀನದಯಾಳ್ ಅಂತ್ಯೋದಯ ಯೋಜನೆ-ನಲ್ಮ್ ಅಭಿಯಾನ ರಾಜ್ಯ ಯೋಜನೆಯಡಿ ವಿವಿಧ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
     ಹೊಲಿಗೆ ಯಂತ್ರ ತರಬೇತಿಗಾಗಿ ಕನಿಷ್ಟ 05 ನೇ ತರಗತಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು.  20 ಅಭ್ಯರ್ಥಿಗಳನ್ನು ತರಬೇತಿಗೆ ಆಯ್ಕೆ ಮಾಡಲಾಗುವುದು.  ಟ್ಯಾಕ್ಸಿ ಡ್ರೈವರ್ ತರಬೇತಿಗೆ ಅರ್ಜಿ ಸಲ್ಲಿಸಲು ಕನಿಷ್ಟ 10 ನೇ ತರಗತಿ ಉತ್ತೀರ್ಣರಾಗಿರಬೇಕು.  21 ಅಭ್ಯರ್ಥಿಗಳನ್ನು ಈ ತರಬೇತಿಗೆ ಆಯ್ಕೆ ಮಾಡಲಾಗುವುದು.  ನಿಗದಿತ ಗುರಿಗೆ ಅನುಗುಣವಾಗಿ ಪ.ಜಾ/ಪ.ಪಂ, ಅಲ್ಪಸಂಖ್ಯಾತರು, ಹಾಗೂ ಇತರೆ ವರ್ಗದ ಅಭ್ಯರ್ಥಿಗಳನ್ನು ಸರ್ಕಾರದ ನಿಯಮಾನುಸಾರ ಆಯ್ಕೆ ಮಾಡಲಾಗುತ್ತದೆ  ಭರ್ತಿ ಮಾಡಿದ ಅರ್ಜಿಯೊಂದಿಗೆ ಜಾತಿ ಪ್ರಮಾಣ ಪತ್ರ,  ಪ್ರಸಕ್ತ ಸಾಲಿನಲ್ಲಿ ಪಡೆದ ಆದಾಯ ಪ್ರಮಾಣಪತ್ರ, ವಿದ್ಯಾರ್ಹತೆ ಪ್ರಮಾಣ ಪತ್ರ, ಮತದಾರರ ಗುರುತಿನ ಚೀಟಿ ಅಥವಾ ಆಧಾರ್ ಕಾರ್ಡ್, ಬಿಪಿಎಲ್ ಪಡಿತರ ಚೀಟಿ, 01 ಭಾವಚಿತ್ರವನ್ನು ಲಗತ್ತಿಸಿ ದ್ವಿ ಪ್ರತಿಯಲ್ಲಿ ಡಿ. 06 ರ ಒಳಗಾಗಿ ಯಲಬುರ್ಗಾ ಪಟ್ಟಣ ಪಂಚಾಯತಿ ಕಚೇರಿಗೆ ಸಲ್ಲಿಸಬೇಕು.   ದಾಖಲೆಗಳನ್ನು ಕಡ್ಡಾಯವಾಗಿ ದೃಢೀಕರಿಸಿ ಸಲ್ಲಿಸಬೇಕು. ಅರ್ಜಿ ನಮೂನೆ ಹಾಗೂ ಹೆಚ್ಚಿನ ವಿವರವನ್ನು ಕಚೇರಿಯ ನಲ್ಮ್ ವಿಭಾಗದ ವಿಷಯ ನಿರ್ವಾಹಕರಿಂದ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.

ಡಿ. 03 ರಂದು ಸಶಸ್ತ್ರ ಪೊಲೀಸ್ ಕಾನ್ಸ್‍ಟೇಬಲ್ ಹುದ್ದೆಗೆ ಲಿಖಿತ ಪರೀಕ್ಷೆ


ಕೊಪ್ಪಳ ನ. 29 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಪೊಲೀಸ್ ಘಟಕದಲ್ಲಿ ಸಶಸ್ತ್ರ ಪೊಲೀಸ್ ಕಾನ್ಸ್‍ಟೇಬಲ್ ಹುದ್ದೆಯ ಆಯ್ಕೆಗೆ ಲಿಖಿತ ಪರೀಕ್ಷೆ ಡಿ. 03 ರಂದು ಮಧ್ಯಾಹ್ನ 03 ಗಂಟೆಯಿಂದ 4-30 ರವರೆಗೆ ಗಂಗಾವತಿಯಲ್ಲಿ ಜರುಗಲಿದ್ದು, ಅಭ್ಯರ್ಥಿಗಳು ಯಾವುದೇ ಮಧ್ಯವರ್ತಿಗಳ ಭರವಸೆಗಳಿಗೆ ಮಾರುಹೋಗದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್‍ಶೆಟ್ಟಿ ಅವರು ಮನವಿ ಮಾಡಿದ್ದಾರೆ.
     ಕೊಪ್ಪಳ ಜಿಲ್ಲಾ ಪೊಲೀಸ್ ಘಟಕದಲ್ಲಿ ಸಶಸ್ತ್ರ ಪೊಲೀಸ್ ಕಾನ್ಸ್‍ಟೇಬಲ್ ಹುದ್ದೆಯ ಆಯ್ಕೆಗೆ ಲಿಖಿತ ಪರೀಕ್ಷೆ ಡಿ. 03 ರಂದು ಮಧ್ಯಾಹ್ನ 03 ಗಂಟೆಯಿಂದ 4-30 ರವರೆಗೆ ಗಂಗಾವತಿಯ ಒಟ್ಟು 23 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ.  ಪೊಲೀಸ್ ನೇಮಕಾತಿಯು ಪಾರದರ್ಶಕ, ಗಣಕೀಕೃತ, ಸಂಪೂರ್ಣ ವಸ್ತುನಿಷ್ಠ, ಅರ್ಹತೆ ಮತ್ತು ಮೀಸಲಾತಿ ಆಧಾರದ ಮೇಲೆ ನಡೆಯುತ್ತದೆ.  ಯಾವುದೇ ಅಭ್ಯರ್ಥಿಯು ಇಲಾಖೆಯ ಹೊರಗಾಗಲಿ ಅಥವಾ ಒಳಗಾಗಲಿ ಉದ್ಯೋಗ ಪಡೆಯುವ ಸಲುವಾಗಿ ಯಾವುದೇ ವ್ಯಕ್ತಿಗೆ ಹಣ ನೀಡುವುದು ಅಥವಾ ಯಾವುದೇ ವಿಧವಾದ ಪಾರಿತೋಷಕ ನೀಡುವುದು ಮಾಡಬಾರದು.  ಯಾವುದೇ ವಿಧವಾದ ಹಣ ವಸೂಲಾತಿಗೆ ಯಾರಿಗೂ ಅಧಿಕಾರ ನೀಡಿರುವುದಿಲ್ಲ.  ಈ ದಿಸೆಯಲ್ಲಿ ಪರೀಕ್ಷಾರ್ಥಿಗಳು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಹಾಗೂ ಮಧ್ಯವರ್ತಿಗಳ ಭರವಸೆಗಳಿಗೆ ಮಾರುಹೋಗದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್‍ಶೆಟ್ಟಿ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಡಿ. 05 ರಂದು ಕಂದಾಯ ಸಚಿವರ ಕೊಪ್ಪಳ ಪ್ರವಾಸ


ಕೊಪ್ಪಳ ನ. 29 (ಕರ್ನಾಟಕ ವಾರ್ತೆ): ರಾಜ್ಯ ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪ ಅವರು ಡಿ. 05 ರಂದು ಕೊಪ್ಪಳಕ್ಕೆ ಆಗಮಿಸುವರು.
     ಸಚಿವರು ಅಂದು ಬೆಳಿಗ್ಗೆ 10 ಗಂಟೆಗೆ ಕೊಪ್ಪಳ ನಗರಕ್ಕೆ ಆಗಮಿಸಿ, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೃಷ್ಣ ಮೇಲ್ದಂಡೆ ಯೋಜನೆ ಹಂತ-3 ಕ್ಕೆ ಭೂಸ್ವಾಧೀನಪಡಿಸಿಕೊಳ್ಳುವ ಜಮೀನಿಗೆ ಭೂ ಪರಿಹಾರ ದರ ನಿಗದಿಪಡಿಸುವ ಕುರಿತು ರೈತರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.  ಸಚಿವರು ಅದೇ ದಿನ ಮಧ್ಯಾಹ್ನ 1-30 ಗಂಟೆಗೆ ಹುಬ್ಬಳ್ಳಿಗೆ ಪ್ರಯಾಣ ಬೆಳೆಸುವರು ಎಂದು ವಿಶೇಷ ಕರ್ತವ್ಯಾಧಿಕಾರಿ ತಿಳಿಸಿದ್ದಾರೆ.

ನ. 30 ರಂದು ಎಸಿಬಿ ಅಧಿಕಾರಿಗಳಿಂದ ಕುಂದುಕೊರತೆ ದೂರು ಸ್ವೀಕಾರ


ಕೊಪ್ಪಳ ನ. 29 (ಕರ್ನಾಟಕ ವಾರ್ತೆ): ಕೊಪ್ಪಳದ ಭ್ರಷ್ಟಾಚಾರ ನಿಗ್ರಹ ದಳದ ಆರಕ್ಷಕ ಉಪಾಧೀಕ್ಷಕರು ಹಾಗೂ ಆರಕ್ಷಕ ನಿರೀಕ್ಷಕರು ನ. 30 ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 03 ಗಂಟೆಯವರೆಗೆ ಗಂಗಾವತಿ ಹಾಗೂ ಯಲಬುರ್ಗಾದ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಂದ ಕುಂದುಕೊರತೆ ದೂರುಗಳನ್ನು ಸ್ವೀಕರಿಸಿ, ಅಹವಾಲುಗಳನ್ನು ಆಲಿಸುವರು.
     ಸಾರ್ವಜನಿಕರು ತಮ್ಮ ಕುಂದುಕೊರತೆಗಳ ಬಗ್ಗೆ ದೂರು ಅರ್ಜಿಗಳನ್ನು ನೀಡಿ, ಸದುಪಯೋಗ ಪಡೆದುಕೊಳ್ಳಬಹುದಾಗಿದೆ.  ಹೆಚ್ಚಿನ ಮಾಹಿತಿಗೆ ಆರಕ್ಷಕ ಉಪಾಧೀಕ್ಷಕರು, ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆ, ಪಿಡಬ್ಲ್ಯೂಡಿ ಕ್ವಾಟ್ರಸ್ ನಂ.5, ಈಶ್ವರ ಗುಡಿ ಹಿಂದೆ, ಕೊಪ್ಪಳ ದೂರವಾಣಿ ಸಂ: 08539-221833 ಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಸಂಗೀತ ನೃತ್ಯ ಅಕಾಡೆಮಿ : ಶಿಷ್ಯ ವೇತನಕ್ಕೆ ಅರ್ಜಿ ಆಹ್ವಾನ


ಕೊಪ್ಪಳ ನ. 29 (ಕರ್ನಾಟಕ ವಾರ್ತೆ): ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು 2017-18 ನೇ ಸಾಲಿನ ಶಿಷ್ಯ ವೇತನಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
     ಶಾಸ್ತ್ರೀಯ ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ, ನೃತ್ಯ, ಸುಗಮ ಸಂಗೀತ, ಕಥಾ ಕೀರ್ತನ ಮತ್ತು ಗಮಕ, ಈ ಆರು ಕ್ಷೇತ್ರದಲ್ಲಿ ಅಭ್ಯಾಸ ಮಾಡುತ್ತಿರುವ 16 ರಿಂದ 24 ವರ್ಷ ವಯೋಮಿತಿ ಒಳಗಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.  ಸಂದರ್ಶನದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ 10 ಸಾವಿರ ರೂ. ಶಿಷ್ಯ ವೇತನವಾಗಿ ನೀಡಲಾಗುವುದು.  ಅರ್ಜಿಯನ್ನು ಸಹಾಯಕ ನಿರ್ದೇಶಕರ ಕಚೇರಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮೊದಲನೆ ಮಹಡಿ, ಜಿಲ್ಲಾಡಳಿತ ಭವನ, ಕೊಪ್ಪಳ ಇವರಿಂದ ಉಚಿತವಾಗಿ ಪಡೆಯಬಹುದು.  ಭರ್ತಿ ಮಾಡಿದ ಅರ್ಜಿಯನ್ನು ರಿಜಿಸ್ಟ್ರಾರ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕನ್ನಡ ಭವನ, ಎರಡನೆ ಮಹಡಿ, ಜೆ.ಸಿ. ರಸ್ತೆ, ಬೆಂಗಳೂರು-02 ಇವರಿಗೆ ಡಿ. 15 ರ ಒಳಗಾಗಿ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.

Tuesday, 28 November 2017

ಕೊಪ್ಪಳ ಜಿಲ್ಲಾ ಉಸ್ತುವಾರಿ ಮಂತ್ರಿಗಳ ಪ್ರವಾಸ ಕಾರ್ಯಕ್ರಮ


ಕೊಪ್ಪಳ ನ. 28 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ನ. 30 ರಿಂದ ಡಿ. 05 ರವರೆಗೆ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
     ಬಸವರಾಜ ರಾಯರಡ್ಡಿ ಅವರು ನ. 30 ರಂದು ಮಧ್ಯಾಹ್ನ 02 ಗಂಟೆಗೆ ಯಲಬುರ್ಗಾಕ್ಕೆ ಆಗಮಿಸುವರು. ನಂತರ ಯಲಬುರ್ಗಾ ತಾಲೂಕಿನ ಗ್ರಾಮಗಳಲ್ಲಿ ಜನಸಂಪರ್ಕ ಸಭೆಗಳಲ್ಲಿ ಭಾಗವಹಿಸುವರು.  ರಾತ್ರಿ 09 ಗಂಟೆಗೆ ಕೊಪ್ಪಳಕ್ಕೆ ಆಗಮಿಸಿ ವಾಸ್ತವ್ಯ ಮಾಡುವರು.  ಡಿ. 01 ಮತ್ತು 02 ರಂದು ಬೆಳಿಗ್ಗೆ 10 ಗಂಟೆಯಿಂದ ಯಲಬುರ್ಗಾ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಜನಸಂಪರ್ಕ ಸಭೆಯಲ್ಲಿ ಪಾಲ್ಗೊಂಡು ರಾತ್ರಿ 09 ಗಂಟೆಗೆ ಕೊಪ್ಪಳದಲ್ಲಿ ವಾಸ್ತವ್ಯ ಮಾಡುವರು.  ಡಿ. 03 ರಂದು ಬೆಳಿಗ್ಗೆ 10 ಗಂಟೆಯಿಂದ ಯಲಬುರ್ಗಾ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಜನಸಂಪರ್ಕ ಸಭೆಯಲ್ಲಿ ಭಾಗವಹಿಸುವರು.  ರಾತ್ರಿ 10 ಗಂಟೆಗೆ ಹೊಸಪೇಟೆಗೆ ತೆರಳಿ ವಾಸ್ತವ್ಯ ಹೂಡುವರು.  ಡಿ. 04 ರಂದು ಹೊಸಪೇಟೆಯಿಂದ ಬಾಗಲಕೋಟೆ ಜಿಲ್ಲೆ ಕೂಡಲಸಂಗಮಕ್ಕೆ ತೆರಳಿ ಕೃಷ್ಣ ಮೇಲ್ದಂಡೆ ಯೋಜನೆ ಹಂತ-3 ಕ್ಕೆ ಭೂಸ್ವಾಧೀನಪಡಿಸಿಕೊಳ್ಳುವ ಜಮೀನಿಗೆ ಭೂ ಪರಿಹಾರ ದರ ನಿಗದಿಪಡಿಸುವ ಕುರಿತ ಸಭೆಯಲ್ಲಿ ಭಾಗವಹಿಸುವರು.  ರಾತ್ರಿ 08 ಗಂಟೆಗೆ ಕೊಪ್ಪಳಕ್ಕೆ ಆಗಮಿಸಿ ವಾಸ್ತವ್ಯ ಮಾಡುವರು.  ಡಿ. 05 ರಂದು ಬೆಳಿಗ್ಗೆ 11 ಗಂಟೆಗೆ ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೃಷ್ಣ ಮೇಲ್ದಂಡೆ ಯೋಜನೆ ಹಂತ-3 ಕ್ಕೆ ಭೂಸ್ವಾಧೀನಪಡಿಸಿಕೊಳ್ಳುವ ಜಮೀನಿಗೆ ಭೂ ಪರಿಹಾರ ದರ ನಿಗದಿಪಡಿಸುವ ಕುರಿತು ರೈತರು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಪಾಲ್ಗೊಳ್ಳುವರು.  ಮಧ್ಯಾಹ್ನ 12 ಗಂಟೆಗೆ ಪತ್ರಿಕಾಗೋಷ್ಠಿ ನಡೆಸುವರು.  ಮಧ್ಯಾಹ್ನ 03 ಗಂಟೆಗೆ ಮುಖ್ಯಮಂತ್ರಿಗಳು ಡಿ. 17 ರಂದು ಜಿಲ್ಲೆಯ ಗಂಗಾವತಿ, ಕನಕಗಿರಿ, ಕುಷ್ಟಗಿ ತಾಲೂಕುಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಿದ್ಧತಾ ಸಭೆ ನಡೆಸುವರು.  ಮಂತ್ರಿಗಳು ಅದೇ ಡಿ. 05 ರಂದು ರಾತ್ರಿ 8-15 ಗಂಟೆಗೆ ಹಂಪಿ ಎಕ್ಸ್‍ಪ್ರೆಸ್ ರೈಲು ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಎಂದು ವಿಶೇಷ ಕರ್ತವ್ಯಾಧಿಕಾರಿ ತಿಳಿಸಿದ್ದಾರೆ.

ಕೂರಿಗೆ ಬಿತ್ತನೆಯಿಂದ ವಿಷಮುಕ್ತ ಭತ್ತ ಮತ್ತು ಅಕ್ಕಿ- ಡಾ. ಎಂ.ಬಿ. ಪಾಟೀಲ


ಕೊಪ್ಪಳ ನ. 28 (ಕರ್ನಾಟಕ ವಾರ್ತೆ): ಭತ್ತದಲ್ಲಿ ಕೂರಿಗೆ ಬಿತ್ತನೆಯಿಂದ, ಬೆಳೆಯನ್ನು, ಗದ್ದೆಯನ್ನು, ನೀರನ್ನು ಮತ್ತು ವಾತಾವರಣವನ್ನು ವಿಷಮುಕ್ತ ಮಾಡುವದು ಸಾಧ್ಯ ಎಂದು ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥ ಡಾ. ಎಂ.ಬಿ. ಪಾಟೀಲ ತಿಳಿಸಿದರು.
     ತಾಲೂಕಿನ ಹಿಟ್ನಾಳ ಗ್ರಾಮದ ಕಾಸಿಮ್‍ಸಾಬ್ ರವರ ಭತ್ತದ ಕೂರಿಗೆ ಬಿತ್ತನೆ ಗದ್ದೆಯಲ್ಲಿ ಏರ್ಪಡಿಸಿದ್ದ ನೇರಕೂರಿಗೆ ಭತ್ತದ ಬೆಳೆ (ಆರ್.ಎನ್.ಆರ್. ತಳಿ) ಕ್ಷೇತ್ರೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
       ಕೂರಿಗೆ ಬಿತ್ತನೆಯಿಂದ ಬೆಳೆಗೆ ನೀರಿನ, ಗೊಬ್ಬರದ ಬೇಡಿಕೆ ಪ್ರಮಾಣ ಕುಗ್ಗುತ್ತದೆ.   ಇದರಿಂದ ಕೀಟ ಮತ್ತು ರೋಗಗಳ ಹಾವಳಿ ತಪ್ಪಿದಂತಾಗಲಿದೆ.  ಅನಾವಶ್ಯಕ ಕೀಟ ಮತ್ತು ರೋಗನಾಶಕಗಳ ಬಳಕೆ ತಡೆಗಟ್ಟಿ, ಆರೋಗ್ಯಕರ ಬೆಳೆ, ವಿಷಮುಕ್ತ ಆಹಾರ, ನೀರು ಮತ್ತು ಮಣ್ಣಿನ ಪ್ರದೂಷಣೆ ತಪ್ಪಿಸಬಹುದು ಎಂದು ಡಾ. ಎಂ.ಬಿ. ಪಾಟೀಲ್ ಅಭಿಪ್ರಾಯಪಟ್ಟರು. 
     ಕೃಷಿ ವಿಜ್ಞಾನಿ ಡಾ. ರೂಪಶ್ರೀ ಮಾತನಾಡಿ ಕೂರಿಗೆ ಬಿತ್ತನೆಯಿಂದ ಬೀಜದ ಉಳಿತಾಯ ಹೆಚ್ಚಿ, ಕೇವಲ ಕಳೆನಾಶಕ್ಕಾಗಿ ವಿವಿಧ ತಂತ್ರಗಳನ್ನು ಬಳಸಬಹುದು ಎಂದು ತಿಳಿಸಿದರು.  ರೈತರುಗಳಾದ ಕಾಸಿಮ್‍ಸಾಬ್ ಮತ್ತು ಈಶಣ್ಣ ಕೂರಿಗೆ ಬಿತ್ತನೆ ವ್ಯವಸ್ಥೆಯಿಂದ ಆದ ಅನುಕೂಲಗಳ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು.  ಜಿಲ್ಲಾ ಆಹಾರ ಭದ್ರತಾ ಯೋಜನೆ ಸಂಯೋಜಕ ಎಸ್.ಬಿ. ಕೋಣಿ, ರೈತ ಸಂಪರ್ಕ ಕೇಂದ್ರ, ಹುಲಗಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕೃಷಿ ಇಲಾಖೆ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳದ ಸಹಭಾಗಿತ್ವದಲ್ಲಿ ನಡೆಯಿತು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ ಅಧ್ಯಕ್ಷ ಧರ್ಮರಾಜ ವಹಿಸಿದ್ದರು.  ಕಾರ್ಯಕ್ರಮದಲ್ಲಿ ಹಿಟ್ನಾಳ ಹಾಗೂ ಸುತ್ತಲಿನ ರೈತರು ಭಾಗವಹಿಸಿದ್ದರು.

ಸೌಯಾರ್ದಯುತ ಈದ್-ಮಿಲಾದ್, ಹನುಮ ಜಯಂತಿ ಆಚರಣೆಗೆ ಡಿ.ಸಿ. ಕನಗವಲ್ಲಿ ಮನವಿ


ಕೊಪ್ಪಳ ನ. 28 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಈದ್-ಮಿಲಾದ್ ಮತ್ತು ಹನುಮ ಜಯಂತಿ ಆಚರಣೆಯನ್ನು ಶಾಂತಿ ಹಾಗೂ ಸೌಹಾರ್ದತೆಯಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಮನವಿ ಮಾಡಿದರು.
    ಜಿಲ್ಲೆಯಲ್ಲಿ ಡಿಸೆಂಬರ್. 02 ರಂದು ಈದ್-ಮಿಲಾದ್ ಹಬ್ಬ ಹಾಗೂ ಡಿ. 02 ರಂದು ಹನುಮ ಜಯಂತಿ ಆಚರಿಸುವ ಕುರಿತು ಜಿಲ್ಲಾ ಆಡಳಿತ ಭವನದ ಸಭಾಂಗಣದಲ್ಲಿ ಮಂಗಳವಾರದಂದು ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಶಾಂತಿಪಾಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
    ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಜಿಲ್ಲೆಯಲ್ಲಿ ಈದ್-ಮಿಲಾದ್ ಹಬ್ಬದ ಆಚರಣೆಯನ್ನು ಶಾಂತಿ ಹಾಗೂ ಸೌಹಾರ್ದತೆಯಿಂದ ಆಚರಿಸಬೇಕು.  ಹನುಮ ಜಯಂತಿಯನ್ನು ಕೂಡ ಈದ್-ಮಿಲಾದ್ ಆಚರಣೆ ಸಂದರ್ಭದಲ್ಲಿಯೇ ಆಚರಿಸಲಾಗುವುದರಿಂದ ಈ ಆಚರಣೆಗಳನ್ನು ಎಲ್ಲ ಸಮುದಾಯದವರು ಸೌಹಾರ್ದತೆ ಹಾಗೂ ಭಾವೈಕ್ಯತೆಯಿಂದ ಆಚರಿಸಬೇಕು.  ಜಿಲ್ಲೆಯಾದ್ಯಂತ ಡಿಸೆಂಬರ್. 02 ರಂದು ಈದ್-ಮಿಲಾದ್ ಹಬ್ಬವನ್ನು ಆಚರಣೆ ಮಾಡಲಾಗುತ್ತಿದ್ದು, ಹಾಗೂ ಹನುಮ ಜಯಂತಿ ಪ್ರಯುಕ್ತ ಕೊಪ್ಪಳ ನಗರದಲ್ಲಿ ಇದೇ ನ. 30 ರಂದು ಹನುಮ ಮಾಲಾ ಪೂಜಾ ಕಾರ್ಯಕ್ರಮ, ಡಿ. 02 ರಂದು ಗಂಗಾವತಿಯ ಅಂಜನಾದ್ರಿ ಬೆಟ್ಟದಲ್ಲಿ ಮಾಲಾ ವಿಸರ್ಜನಾ ಕಾರ್ಯಕ್ರಮ ಹಾಗೂ ಪೂಜಾ ಕಾರ್ಯಕ್ರಮ ಆಚರಿಸಲಾಗುತ್ತಿದ್ದು, ಯಾವುದೇ ಗೊಂದಲಗಳಿಗೆ ಅವಕಾಶ ಮಾಡಿಕೊಡದಂತೆ ಸೌಹಾರ್ದಯುತವಾಗಿ ಧಾರ್ಮಿಕ ಕಾರ್ಯಗಳ ಆಚರಣೆಗಳನ್ನು ಮಾಡಿಕೊಳ್ಳಬೇಕು.  ಕೊಪ್ಪಳ ಜಿಲ್ಲೆ ಒಂದು ಹಿಂದುಳಿದ ಜಿಲ್ಲೆಯಾಗಿದ್ದರೂ ಕೂಡ ಇದು ಒಂದು ಶಾಂತಿ, ಸೌಹಾರ್ದತೆಯ ಪ್ರತೀಕವಾದ ಜಿಲ್ಲೆಯಾಗಿದೆ.  ಇದನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಯಾವುದೇ ಗೊಂದಲ, ಸಮಸ್ಯೆಗಳಾದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತನ್ನಿ.  ಹಬ್ಬ ಆಚರಣೆಗಳನ್ನು ಶಾಂತಿಯುತವಾಗಿ ಹಾಗೂ ಸೌಹಾರ್ದತೆಯಿಂದ ಆಚರಿಸಿ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಮನವಿ ಮಾಡಿದರು.
    ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಡಾ. ಅನೂಪ ಶೆಟ್ಟಿ ಅವರು ಮಾತನಾಡಿ, ಡಿ. 02 ರಂದು ಜಿಲ್ಲಾಯಾದ್ಯಂತ ಈದ್-ಮಿಲಾದ್ ಆಚರಣೆ ಮಾಡಲಾಗುತ್ತಿದ್ದು, ಹನುಮ ಮಾಲಾ ಪೂಜಾ ಕಾರ್ಯಕ್ರಮವನ್ನು ಡಿ. 02ರ ಬದಲಿಗೆ ಕೊಪ್ಪಳದಲ್ಲಿ ನ. 30 ರಂದು ಆಚರಿಸಿಕೊಳ್ಳಬೇಕು.  ಹನುಮ ಮಾಲಾ ಕಾರ್ಯಕ್ರಮದಲ್ಲಿ ಭಾಗ್ಯನಗರ, ಕಿನ್ನಾಳ ಸೇರಿದಂತೆ ಕೊಪ್ಪಳ ನಗರದ ಸುತ್ತಮುತ್ತಲಿನ ಗ್ರಾಮಗಳ ಸ್ಥಳೀಯರಷ್ಟೇ ಭಾಗವಹಿಸಬೇಕು.  ಡಿ. 02 ರಂದು ಗಂಗಾವತಿಯ ಅಂಜನಾದ್ರಿ ಬೆಟ್ಟದಲ್ಲಿ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿಕೊಳ್ಳಬಹುದು.  ಗಂಗಾವತಿಯಲ್ಲಿ ಯಾವುದೇ ರೀತಿಯ ಮೆರವಣಿಗೆಗೆ ಅವಕಾಶ ಇಲ್ಲ.  ಪೂಜೆ ಮತ್ತು ಪ್ರಾರ್ಥನೆಗೆ ಮಾತ್ರ ಅವಕಾಶ ನೀಡಲಾಗಿದೆ.  ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವ ಉದ್ದೇಶದಿಂದ ಕೊಪ್ಪಳ ಮತ್ತು ಗಂಗಾವತಿ ನಗರಗಳಲ್ಲಿ ಬ್ಯಾನರ್ಸ್ ಅಳವಡಿಕೆಯನ್ನು ನಿಷೇಧಿಸಲಾಗಿದೆ.  ಡಿ.ಜೆ ಬಳಕೆ ಹಾಗೂ ನಿಷೇಧಿತ ಹಾಡುಗಳನ್ನು ಬಿತ್ತರಿಸುವುದನ್ನು ಕೂಡ ನಿಷೇಧಿಸಲಾಗಿದೆ. ಆಚರಣೆಗಳ  ಸಮಯವನ್ನು ನಿಗದಿಪಡಿಸಲಾಗಿದ್ದು, ಈದ್-ಮಿಲಾದ್ ಆಚರಣೆ ಹಾಗೂ ಹನುಮ ಜಯಂತಿ ಕಾರ್ಯಕ್ರವನ್ನು ಮಧ್ಯಾಹ್ನ 2-30 ಗಂಟೆಯೊಳಗಾಗಿ ಪೂರ್ಣಗೊಳಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. 
    ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಸಹಾಯಕ ಆಯುಕ್ತ ಗುರುದತ್ ಹೆಗ್ಡೆ, ಕೊಪ್ಪಳ ತಹಶೀಲ್ದಾರ ಗುರುಬಸವರಾಜ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.  ಹಲವು ಸಮಾಜದ ಗಣ್ಯರು,   ಮುಖಂಡರುಗಳು ಭಾಗವಹಿಸಿ, ಸಲಹೆ ಸೂಚನೆಗಳನ್ನು ನೀಡಿದರು.

ಭಾರತ ಸಂವಿಧಾನ ದಿನ ಆಚರಣೆ : ಪ್ರತಿಜ್ಞಾ ವಿಧಿ ಸ್ವೀಕಾರ


ಕೊಪ್ಪಳ ನ. 28 (ಕರ್ನಾಟಕ ವಾರ್ತೆ): ಭಾರತ ಸಂವಿಧಾನ ದಿನವಾದ ನ. 26 ರ ಅಂಗವಾಗಿ ಜಿಲ್ಲಾಡಳಿತದ ವತಿಯಿಂದ ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಸಂಭಾಗಣದಲ್ಲಿ ಮಂಗಳವಾರದಂದು ಸಹಾಯಕ ಆಯುಕ್ತರಾದ ಗುರುದತ್ ಹೆಗ್ಡೆ ಅವರ ನೇತೃತ್ವದಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.
    ಸಂವಿಧಾನ ದಿನದ ಅಂಗವಾಗಿ ಸಹಾಯಕ ಆಯುಕ್ತರಾದ ಗುರುದತ್ ಹೆಗ್ಡೆ ಅವರು, ಪ್ರತಿಜ್ಞಾ ವಿಧಿ ಬೋಧಿಸಿ, ‘ಭಾರತದ ಜನಗಳಾದ ನಾವು ಭಾರತದವನ್ನು ಒಂದು ಸಾರ್ವಭೌಮ ಸಮಾಜವಾದೀ ಸರ್ವಧರ್ಮ ಸಮಭಾವದ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ರಚಿಸಲು ಮತ್ತು ಅದರ ಸಮಸ್ತ ನಾಗರಿಕರಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ, ವಿಚಾರ, ಅಭಿವ್ಯಕ್ತಿ, ವಿಶ್ವಾಸ, ಧರ್ಮಶ್ರದ್ಧೆ ಮತ್ತು ಉಪಾಸನಾ ಸ್ವಾತಂತ್ರ್ಯ ಸ್ಥಾನಮಾನ ಹಾಗೂ ಅವಕಾಶ ಸಮಾನತೆ ದೊರೆಯುವಂತೆ ಮಾಡಲು ಮತ್ತು ವ್ಯಕ್ತಿ ಗೌರವವನ್ನು, ರಾಷ್ಟ್ರದ ಏಕತೆಯನ್ನು ಹಾಗೂ ಅಖಂಡತೆಯನ್ನು ಸುನಿಶ್ಚಿತಗೊಳಿಸಿ ಅವರಲ್ಲಿ ಭ್ರಾತೃಭಾವನೆಯನ್ನು ವೃದ್ಧಿಗೊಳಿಸಲು ಶ್ರದ್ಧಾಪೂರ್ವಕ ಸಂಕಲ್ಪ ಮಾಡಿದವರಾಗಿ ನಮ್ಮ ಸಂವಿಧಾನ ಸಭೆಯಲ್ಲಿ 1949ನೇಯ ಇಸವಿ ನವೆಂಬರ್ ತಿಂಗಳ 26 ನೇ ದಿವಸ ಈ ಮೂಲಕ ಸಂವಿಧಾನವನ್ನು ಅಂಗೀಕರಿಸಿ, ಅಧಿನಿಯಮಿಸಿ ಅರ್ಪಿಸಿಕೊಂಡಿದ್ದೇವೆ’ ಎಂಬುದಾಗಿ ಪ್ರತಿಜ್ಞೆ ಸ್ವೀಕರಿಸಲಾಯಿತು.  ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಭಾಗವಹಿಸಿ, ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಹಬ್ಬಗಳ ಆಚರಣೆ : ಮದ್ಯಪಾನ ನಿಷೇಧ ಜಾರಿ


ಕೊಪ್ಪಳ ನ. 28 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಡಿ. 02 ರಂದು ಈದ್‍ಮಿಲಾದ್ ಮತ್ತು ಹನುಮ ಜಯಂತಿ ಆಚರಣೆ ನಿಮಿತ್ಯ ಕಾನೂನು ಸುವ್ಯವಸ್ಥೆ ಮತ್ತು ಶಾಂತಿ ಪಾಲನೆ ಉದ್ದೇಶದಿಂದ ಡಿ. 01 ರಂದು ಮಧ್ಯರಾತ್ರಿ 12 ಗಂಟೆಯಿಂದ ಡಿ. 03 ರ ಬೆಳಿಗ್ಗೆ 06 ಗಂಟೆಯವರೆಗೆ ಜಿಲ್ಲೆಯಾದ್ಯಂತ ಮದ್ಯಪಾನ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಆದೇಶ ಹೊರಡಿಸಿದ್ದಾರೆ.
     ಜಿಲ್ಲೆಯಲ್ಲಿ ಈದ್‍ಮಿಲಾದ್ ಮತ್ತು ಹನುಮ ಜಯಂತಿ ಆಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಪಾಲನೆಗಾಗಿ ಸಾರ್ವಜನಿಕ ಹಿತದೃಷ್ಟಿಯಿಂದ ಡಿ. 01 ರಂದು ಮಧ್ಯರಾತ್ರಿ 12 ಗಂಟೆಯಿಂದ ಡಿ. 03 ರ ಬೆಳಿಗ್ಗೆ 06 ಗಂಟೆಯವರೆಗೆ ಜಿಲ್ಲೆಯಾದ್ಯಂತ ಮದ್ಯಪಾನ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.  ಈ ಸಂಬಂಧ ಅಬಕಾರಿ ಉಪ ಆಯುಕ್ತರ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿದ್ದು, ನಿಷೇಧಾಜ್ಞೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಡಿ. 01 ರಂದು ಕೊಪ್ಪಳದಲ್ಲಿ ವಿಶ್ವ ಏಡ್ಸ್ ಜಾಗೃತಿ ಜಾಥಾ


ಕೊಪ್ಪಳ ನ. 28 (ಕರ್ನಾಟಕ ವಾರ್ತೆ): ಕೊಪ್ಪಳದಲ್ಲಿ ವಿಶ್ವ ಏಡ್ಸ್ ದಿನದ ಅಂಗವಾಗಿ ಡಿ. 01 ರಂದು ಬೆಳಿಗ್ಗೆ 08 ಗಂಟೆಗೆ ನಗರದ ಸಾರ್ವಜನಿಕ ಮೈದಾನದಲ್ಲಿ ಜಾಗೃತಿ ಜಾಥಾಕ್ಕೆ ಚಾಲನೆ ದೊರೆಯಲಿದೆ.
     ಜಾಗೃತಿ ಜಾಥಾ ಸಾರ್ವಜನಿಕ ಮೈದಾನದಿಂದ ಪ್ರಾರಂಭಗೊಂಡು, ಅಶೋಕ ವೃತ್ತ, ಜವಾಹರ ರಸ್ತೆ, ಸಿಂಪಿಲಿಂಗಣ್ಣ ರಸ್ತೆ ಮೂಲಕ ಬಸ್‍ಸ್ಟ್ಯಾಂಡ್‍ನ ಮಾರ್ಗವಾಗಿ ಹಳೆ ಜಿಲ್ಲಾಸ್ಪತ್ರೆ ಆವರಣದಲ್ಲಿ ಕೊನೆಗೊಳ್ಳಲಿದೆ ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

ನ. 29 ರಿಂದ ಕೊಪ್ಪಳದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ತರಬೇತಿ ಕಾರ್ಯಕ್ರಮ


ಕೊಪ್ಪಳ ನ. 28 (ಕರ್ನಾಟಕ ವಾರ್ತೆ): ಕೊಪ್ಪಳ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಐಎಎಸ್, ಐಪಿಎಸ್, ಬ್ಯಾಂಕಿಂಗ್ ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ನ. 29 ಮತ್ತು 30 ರಂದು ಎರಡು ದಿನಗಳ ತರಬೇತಿ ಕಾರ್ಯಕ್ರಮ ಕೊಪ್ಪಳದ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಲಾಗಿದೆ.
      ಸರ್ಕಾರದ ಸೂಚನೆಯಂತೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಂತಿಮ ವರ್ಷದ ಪದವಿ ಕೋರ್ಸುಗಳ (ಬಿಎ, ಬಿಕಾಂ, ಬಿಎಸ್‍ಸಿ) ಹಾಗೂ ಸ್ನಾತ್ತಕೋತ್ತರ ಪದವಿ ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ಐ.ಎ.ಎಸ್., ಐ.ಪಿ.ಎಸ್., ಬ್ಯಾಂಕಿಂಗ್ ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ತಿಳುವಳಿಕೆ ಹೆಚ್ಚಿಸಲು ತರಬೇತಿ ಕಾರ್ಯಕ್ರಮವನ್ನು ಕೊಪ್ಪಳದ ಪ್ರವಾಸಿ ಮಂದಿರದ ಎದುರುಗಡೆ ಇರುವ ಫಿರದೋಸ್‍ನಗರದಲ್ಲಿನ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ನ. 29 ಮತ್ತು 30 ರಂದು ಎರಡು ದಿನಗಳ ಕಾಲ ಬೆಳಿಗ್ಗೆ 10-30 ಗಂಟೆಯಿಂದ ಸಂಜೆ 05 ಗಂಟೆಯವರೆಗೆ ನಡೆಸಲಾಗುವುದು.
         ತರಬೇತಿ ಕಾರ್ಯಕ್ರಮದಲ್ಲಿ ಕೊಪ್ಪಳ, ಯಲಬುರ್ಗಾ, ಕುಷ್ಟಗಿ ತಾಲೂಕಾ ವ್ಯಾಪ್ತಿಯಲ್ಲಿನ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಂತಿಮ ವರ್ಷದ ಪದವಿ ಕೋರ್ಸುಗಳ (ಬಿ.ಎ., ಬಿ.ಕಾಂ., ಬಿ.ಎಸ್.ಸಿ) ಹಾಗೂ ಸ್ನಾತ್ತಕೋತ್ತರ ಪದವಿ ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಭಾಗವಹಿಸಬಹುದಾಗಿದೆ ಎಂದು ಕೊಪ್ಪಳ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಚಿದಾನಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.   

Monday, 27 November 2017

ಗ್ರಾಮ ಪಂಚಾಯತಿಗೊಂದು ಫಾಗಿಂಗ್ ಯಂತ್ರ ಖರೀದಿಸಿ- ರಾಜಶೇಖರ ಹಿಟ್ನಾಳ


ಕೊಪ್ಪಳ ನ. 27 (ಕರ್ನಾಟಕ ವಾರ್ತೆ): ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಸೊಳ್ಳೆಗಳಿಂದ ಹರಡುವ ಮಲೇರಿಯಾ, ಡೆಂಗ್ಯು, ಚಿಕುನ್‍ಗುನ್ಯಾ ಮುಂತಾದ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿ ಗ್ರಾಮ ಪಂಚಾಯತಿಗೆ ಒಂದು ಫಾಗಿಂಗ್ ಯಂತ್ರವನ್ನು ಖರೀದಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯತಿ ಅಧ್ಯಕ್ಷ ರಾಜಶೇಖರ ಹಿಟ್ನಾಳ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಜಿಲ್ಲಾ ಪಂಚಾಯತಿಯ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಸೋಮವಾರದಂದು ಏರ್ಪಡಿಸಲಾಗಿದ್ದ ಜಿಲ್ಲಾ ಪಂಚಾಯತಿ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಸದ್ಯ ಸೊಳ್ಳೆಗಳಿಂದ ಹರಡುವ ಮಲೇರಿಯಾ, ಡೆಂಗ್ಯು, ಚಿಕುನ್‍ಗುನ್ಯಾ ಮುಂತಾದ ರೋಗಗಳು ಉಲ್ಬಣಗೊಳ್ಳುತ್ತಿವೆ.  ಸೊಳ್ಳೆಗಳನ್ನು ತಡೆಗಟ್ಟಲು ಗ್ರಾಮೀಣ ಪ್ರದೇಶಗಳಲ್ಲಿ ಸಾಧ್ಯವಾಗುತ್ತಿಲ್ಲ.  ಲಭ್ಯವಿರುವ ಫಾಗಿಂಗ್ ಯಂತ್ರಗಳು ಸಾಕಾಗುತ್ತಿಲ್ಲ.  ಸದ್ಯ ರೋಗ ಉಲ್ಬಣಗೊಂಡ ಪ್ರದೇಶಗಳಿಗೆ ಮಾತ್ರ ಫಾಗಿಂಗ್ ಯಂತ್ರ ಬಳಕೆ ಮಾಡಲಾಗುತ್ತಿದೆಯಾದರೂ, ನಿರೀಕ್ಷಿತ ಯಶಸ್ಸು ದೊರೆಯುತ್ತಿಲ್ಲ.  ಒಂದು ಫಾಗಿಂಗ್ ಯಂತ್ರಕ್ಕೆ ಅಂದಾಜು 50 ರಿಂದ 60 ಸಾವಿರ ರೂ. ವೆಚ್ಚವಾಗಬಹುದಾಗಿದ್ದು, ಪ್ರತಿ ಗ್ರಾಮ ಪಂಚಾಯತಿಗೆ ಒಂದು ಫಾಗಿಂಗ್ ಯಂತ್ರವನ್ನು ಆಯಾ ಗ್ರಾ.ಪಂ. ನಲ್ಲಿ ಲಭ್ಯವಿರುವ ಅನುದಾನದಲ್ಲಿ ಖರೀದಿಸಬೇಕು.  ಫಾಗಿಂಗ್ ಯಂತ್ರ ನಿರ್ವಹಣೆಗೆ ಪಂಚಾಯತಿಯ ಸಿಬ್ಬಂದಿಗೆ ತರಬೇತಿ ನೀಡಲು ಕ್ರಮ ಕೈಗೊಳ್ಳಬೇಕು.  ಆರೋಗ್ಯ ಇಲಾಖೆಯಿಂದ ಇದಕ್ಕೆ ಸೂಕ್ತ ಸಹಕಾರ ಒದಗಿಸಬೇಕು ಎಂದು ಜಿ.ಪಂ. ಅಧ್ಯಕ್ಷರು ಸೂಚನೆ ನೀಡಿದರು.   ಗ್ರಾಮೀಣ ಪ್ರದೇಶದ ಆಸ್ಪತ್ರೆಗಳಲ್ಲಿ ಕೇವಲ ಮಲೇರಿಯಾ ರೋಗ ಪತ್ತೆ ಮಾಡುವುದಕ್ಕೆ ಮಾತ್ರ ರಕ್ತ ಪರೀಕ್ಷೆ ಮಾಡುತ್ತಿದ್ದಾರೆ.  ಉಳಿದಂತೆ ಟೈಫಾಯ್ಡ್, ಡೆಂಗ್ಯೂ ಸೇರಿದಂತೆ ವಿವಿಧ ರೋಗಗಳ ಪತ್ತೆಗೆ ರಕ್ತ ಪರೀಕ್ಷೆಗೆ ವೈದ್ಯರು ಹೊರಗಡೆ ಚೀಟಿ ಬರೆದು ಕಳುಹಿಸುತ್ತಿದ್ದು, ಬಡ ರೋಗಿಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಜಿ.ಪಂ. ಸದಸ್ಯರು ಆರೋಪಿಸಿದರು.  ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ಅವರು ಈ ಕುರಿತು ಪರಿಶೀಲಿಸಿ, ವರದಿ ಸಲ್ಲಿಸುವುದಾಗಿ ಹೇಳಿದರು.
ಶುದ್ಧ ಕುಡಿಯುವ ನೀರಿನ ಘಟಕ :
************ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿನ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಸಲುವಾಗಿ ಆರ್.ಓ ಘಟಕಗಳನ್ನು ಸ್ಥಾಪಿಸಲು ಪಾನ್ ಏಷಿಯಾ ಕಂಪನಿಗೆ ಗುತ್ತಿಗೆ ನೀಡಲಾಗಿದೆ.  ಆದರೆ ಕಂಪನಿಯು ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಘಟಕಗಳನ್ನು ಸ್ಥಾಪಿಸಿಲ್ಲ.  ಸ್ಥಾಪನೆಗೊಂಡಿರುವ ಕೆಲವೆಡೆ ಶುದ್ಧ ಕುಡಿಯುವ ನೀರು ದೊರೆಯುತ್ತಿಲ್ಲ.  ಘಟಕಗಳು ಕಾರ್ಯನಿರ್ವಹಿಸದ ಕಾರಣ ಹಂದಿ, ನಾಯಿಗಳ ವಾಸಸ್ಥಾನವಾಗಿ ಮಾರ್ಪಟ್ಟಿವೆ.  ಜನರಿಗೆ ಕುಡಿಯುವ ನೀರು ದೊರಕುತ್ತಿಲ್ಲ.  ಸರ್ಕಾರದ ಉದ್ದೇಶ ಈಡೇರುತ್ತಿಲ್ಲ ಎಂದು ಕೆಲ ಜಿ.ಪಂ. ಸದಸ್ಯರು ಆರೋಪಿಸಿದರು.  ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ. ಅಧ್ಯಕ್ಷರು.  ಪಾನ್ ಏಷಿಯ ಕಂಪನಿಯಿಂದ ಕೊಪ್ಪಳ ಜಿಲ್ಲೆಯಲ್ಲಿ ಅಳವಡಿಸಿರುವ ಹಾಗೂ ಅಳವಡಿಸಬೇಕಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ಸದ್ಯದ ಸ್ಥಿತಿ-ಗತಿ ಕುರಿತು ಮೂರು ದಿನಗಳ ಒಳಗಾಗಿ ಸಮಗ್ರ ವರದಿಯನ್ನು ಪಡೆಯಲಾಗುವುದು.  ವರದಿಯ ಆಧಾರದಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿ, ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಕುಡಿಯುವ ನೀರು ಪೂರೈಕೆಯ ಬಿಲ್ ಪಾವತಿಸಿ :
*************** ಕಳೆದ ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆ ಎದುರಿಸುತ್ತಿದ್ದ ಗ್ರಾಮೀಣ ಪ್ರದೇಶಗಳಲ್ಲಿ ಟ್ಯಾಂಕರ್ ಮೂಲಕ ಹಾಗೂ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದು ಜನರಿಗೆ ನೀರು ಪೂರೈಸಲಾಗಿದೆ.  ಆದರೆ ಹನುಮನಾಳ ಮುಂತಾದ ಗ್ರಾಮಗಳಲ್ಲಿ ಇದುವರೆಗೂ ಇದಕ್ಕೆ ಸಂಬಂಧಿಸಿದ ಬಿಲ್ ಪೂರ್ಣ ಪಾವತಿಯಾಗಿಲ್ಲ.  ಈಗಲೂ ಕೆಲವೆಡೆ ಕುಡಿಯುವ ನೀರಿನ ತೊಂದರೆ ಇದೆ ಎಂದು ಜಿ.ಪಂ. ಸದಸ್ಯರು ಆತಂಕ ವ್ಯಕ್ತಪಡಿಸಿದರು.  ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜ ಅವರು ಬೇಸಿಗೆಯ ಮೂರು ತಿಂಗಳಲ್ಲಿ ಟ್ಯಾಂಕರ್ ಹಾಗೂ ಖಾಸಗಿ ಬೋರ್‍ಗಳ ಮೂಲಕ ನೀರು ಪೂರೈಸಿದ ಬಿಲ್‍ಗಳನ್ನು ಈಗಾಗಲೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ಬಿಲ್ ಪಾವತಿಸಲಾಗಿದೆ.  ಇದರ ನಂತರವೂ ಕೆಲವೆಡೆ ಕ್ರಿಯಾ ಯೋಜನೆಗೆ ಅನುಮೋದನೆ ಪಡೆಯದೆ ನೀರು ಪೂರೈಸಿದ್ದಲ್ಲಿ, ಬಿಲ್ ಪಾವತಿ ಮಾಡಲು ಬರುವುದಿಲ್ಲ.  ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ನೊಣಗಳ ಹಾವಳಿ ತಪ್ಪಿಸಿ :
************ ಜಿಲ್ಲೆಯಲ್ಲಿರುವ ಕೋಳಿ ಫಾರಂ ಗಳು ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದ ಕಾರಣ ಹಾಗೂ ಸ್ವಚ್ಛತೆಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದಿರುವ ಪರಿಣಾಮವಾಗಿ ಕೋಳಿ ಫಾರಂ ಗಳಿರುವ ಸುತ್ತಮುತ್ತಲ ಪ್ರದೇಶದಲ್ಲಿ ತೀವ್ರ ನೊಣಗಳ ಹಾವಳಿಯಾಗುತ್ತಿದೆ.  ಆನರು ಮನೆಗಳ ಒಳಗಡೆಯೂ ಊಟ ಮಾಡದ, ಕುಳಿತುಕೊಳ್ಳಲಾರದ ಪರಿಸ್ಥಿತಿ ಉಂಟಾಗಿದೆ.  ಈ ಕುರಿತು ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಜಿ.ಪಂ. ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.  ಇದಕ್ಕೆ ಉತ್ತರಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ಅವರು, ಆರೋಗ್ಯ ಮತ್ತು ಪಶುಸಂಗೋಪನೆ ಇಲಾಖೆ ಅಧಿಕಾರಿಗಳೊಂದಿಗೆ ಕೋಳಿ ಫಾರಂಗಳಿಗೆ ಭೇಟಿ ನೀಡಿ, ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಅಲ್ಲದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸೂಚನೆ ನೀಡಲಾಗುವುದು ಎಂದರು.
     ಸಭೆಯಲ್ಲಿ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಲಕ್ಷ್ಮಮ್ಮ ನೀರಲೂಟಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಉಪಕಾರ್ಯದರ್ಶಿ ಎನ್.ಕೆ. ತೊರವಿ, ಯೋಜನಾ ನಿರ್ದೇಶಕ ರವಿ ಬಸವರಿಹಳ್ಳಿ ಸೇರಿದಂತೆ ಜಿಲ್ಲಾ ಪಂಚಾಯತಿ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು, ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

ಗ್ರಾಮ ಪಂಚಾಯತಿ ಉಪಚುನಾವಣೆ : ಅಧಿಸೂಚನೆ ಪ್ರಕಟ


ಕೊಪ್ಪಳ ನ. 27 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಯರಗೇರಾ, ಗೌರಿಪುರ, ಚಿಕ್ಕಬೆಣಕಲ್ ಮತ್ತು ಮರಳಿ ಗ್ರಾಮ ಪಂಚಾಯತಿಗಳಲ್ಲಿ ವಿವಿಧ ಕಾರಣಗಳಿಂದ ಆಕಸ್ಮಿಕವಾಗಿ ತೆರವಾಗಿರುವ ಸದಸ್ಯರ 05 ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು ವೇಳಾಪಟ್ಟಿಯೊಂದಿಗೆ ಅಧಿಸೂಚನೆ ಪ್ರಕಟಿಸಲಾಗಿದೆ.
    ವಿವಿಧ ಕಾರಣಗಳಿಂದ ಆಕಸ್ಮಿಕವಾಗಿ ತೆರವಾಗಿರುವ ಗ್ರಾಮ ಪಂಚಾಯತಿ ಸದಸ್ಯರ ಸ್ಥಾನಗಳಿಗೆ ಚುನಾವಣೆ ಮೂಲಕ ಭರ್ತಿ ಮಾಡುವ ಸಂಬಂಧವಾಗಿ ಉಪಚುನಾವಣೆ ನಡೆಯಲಿದ್ದು, ಚುನಾವಣೆ ನಡೆಯುವ ಗ್ರಾಮ ಪಂಚಾಯತಿ, ಕ್ಷೇತ್ರ ಹಾಗೂ ಮೀಸಲಾತಿ ವಿವರ ಇಂತಿದೆ.  ಕುಷ್ಟಗಿ ತಾಲೂಕಿನ ಯರಗೇರಾ ಗ್ರಾಮ ಪಂಚಾಯತಿಯ ಗುಡದೂರಕಲ್-5 (ಅನುಸೂಚಿತ ಜಾತಿ).  ಗಂಗಾವತಿ ತಾಲೂಕಿನ ಮರಳಿ ಗ್ರಾಮ ಪಂಚಾಯತಿಯ ಆಚಾರನರಸಾಪುರ-1 (ಹಿಂದುಳಿದ ವರ್ಗ-ಅ(ಮಹಿಳೆ)), ಚಿಕ್ಕಬೆಣಕಲ್ ಗ್ರಾಮ ಪಂಚಾಯತಿಯ ಚಿಕ್ಕಬೆಣಕಲ್-2 (ಅನುಸೂಚಿತ ಜಾತಿ), ಹಿರೇಬೆಣಕಲ್-2 (ಅನುಸೂಚಿತ ಜಾತಿ) ಹಾಗೂ ಗೌರಿಪುರ ಗ್ರಾಮ ಪಂಚಾಯತಿಯ ಅಡವಿಭಾವಿ-2 (ಅನುಸೂಚಿತ ಪಂಗಡ). 
     ಚುನಾವಣಾ ವೇಳಾಪಟ್ಟಿ ಇಂತಿದೆ.  ನಾಮಪತ್ರಗಳನ್ನು ಸಲ್ಲಿಸಲು ನವೆಂಬರ್ 30 ಕೊನೆಯ ದಿನಾಂಕವಾಗಿದ್ದು, ನಾಮಪತ್ರಗಳನ್ನು ಡಿ. 01 ರಂದು ಪರಿಶೀಲನೆ ನಡೆಸಲಾಗುವುದು.  ಉಮೇದುವಾರಿಕೆ ಹಿಂಪಡೆಯಲು ಡಿ. 04 ಕೊನೆಯ ದಿನವಾಗಿರುತ್ತದೆ.  ಮತದಾನ ಅವಶ್ಯವಿದ್ದರೆ ಡಿ. 17 ರಂದು ಬೆ. 07 ರಿಂದ ಸಂಜೆ 05 ಗಂಟೆಯವರೆಗೆ ಮತದಾನ ನಡೆಯಲಿದೆ.  ಡಿ. 20 ರ ಒಳಗಾಗಿ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.

ಗ್ರಾ.ಪಂ. ಉಪಚುನಾವಣೆ : ಶಸ್ತ್ರ ಒಪ್ಪಿಸಲು ಸೂಚನೆ


ಕೊಪ್ಪಳ ನ. 27 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಯರಗೇರಾ, ಗೌರಿಪುರ, ಚಿಕ್ಕಬೆಣಕಲ್ ಮತ್ತು ಮರಳಿ ಗ್ರಾಮ ಪಂಚಾಯತಿಗಳಲ್ಲಿ ವಿವಿಧ ಕಾರಣಗಳಿಂದ ಆಕಸ್ಮಿಕವಾಗಿ ತೆರವಾಗಿರುವ ಸದಸ್ಯರ ಸ್ಥಾನಗಳಿಗೆ ಡಿಸೆಂಬರ್. 17 ರಂದು ಚುನಾವಣೆ ನಡೆಯಲಿದ್ದು,  ಈ ವ್ಯಾಪ್ತಿಯಲ್ಲಿ ಇರುವ ಪರವಾನಿಗೆ ಪಡೆದ ಶಸ್ತ್ರಗಳನ್ನು ಡಿ. 20 ರವರೆಗೂ ಪೊಲೀಸ್ ಇಲಾಖೆಯ ವಶಕ್ಕೆ ಒಪ್ಪಿಸುವಂತೆ ಆದೇಶಿಸಲಾಗಿದೆ.
     ಗ್ರಾಮ ಪಂಚಾಯತಿ ಉಪಚುನಾವಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ, ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಪಾಲನೆ ಉದ್ದೇಶದಿಂದ ಚುನಾವಣೆ ಜರುಗುವ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಪರವಾನಿಗೆ ಪಡೆದ ಶಸ್ತ್ರಗಳನ್ನು ಚುನಾವಣೆ ನೀತಿ ಸಂಹಿತೆ ಮುಗಿಯುವವರೆಗೆ ಅಂದರೆ ಡಿ. 20 ರವರೆಗೆ ಪೊಲೀಸ್ ಇಲಾಖೆಯಲ್ಲಿ ನಿಯಮಾನುಸಾರ ಠೇವಣಿ ಮಾಡಿಕೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.  ಈ ಆದೇಶವು ರಾಷ್ಟ್ರೀಕೃತ ಬ್ಯಾಂಕುಗಳಿಗೆ ಹಾಗೂ ಆರ್‍ಬಿಐ ನಿಂದ ಮಾನ್ಯತೆ ಪಡೆದಿರುವ ಬ್ಯಾಂಕುಗಳ ಸೆಕ್ಯುರಿಟಿ ಗಾರ್ಡ್ ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳಿಗೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

ಆಧಾರ್ ಅದಾಲತ್‍ಗೆ ಡಿಸಿ ಕನಗವಲ್ಲಿ ಚಾಲನೆ



ಕೊಪ್ಪಳ ನ. 27 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾಡಳಿತವು ಇ-ಆಡಳಿತ. ಬೆಂಗಳೂರು ಇವರ ಸಹಯೋಗದಲ್ಲಿ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಸ್ಪಂದನ ಕೇಂದ್ರದಲ್ಲಿ ಆಯೋಜಿಸಿರುವ ಆಧಾರ್ ಅದಾಲತ್  ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಚಾಲನೆ ನೀಡಿದರು.

     ನಂತರ ಮಾತನಾಡಿದ ಜಿಲ್ಲಾಧಿಕಾರಿಗಳು, ಸರ್ಕಾರ ಇತ್ತೀಚೆಗೆ ಎಲ್ಲ ಯೋಜನೆಗಳಿಗೆ ಆಧಾರ್ ಸಂಖ್ಯೆಯ ಜೋಡಣೆಗೊಳಿಸುವ ಮೂಲಕ ಆಧಾರ್ ಸಂಖ್ಯೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ.  ಅಲ್ಲದೆ, ಪ್ರತಿಯೊಬ್ಬರೂ ಆಧಾರ್ ಕಾರ್ಡ್ ಮಾಡಿಸುವುದು ಕಡ್ಡಾಯವೂ ಆಗಿದೆ.  ಈ ಹಿಂದೆ ಪಡೆಯಲಾಗಿರುವ ಆಧಾರ್ ಕಾರ್ಡ್ ನಲ್ಲಿ ಕಣ್ತಪ್ಪಿನಿಂದಾಗಿ ಕೆಲವೊಂದು ಲೋಪದೋಷಗಳು ಆಗಿರುವ ಸಾಧ್ಯತೆ ಇದ್ದರೆ, ಕೆಲವರ ವಿಳಾಸ ಬದಲಾಗಿದೆ.  ಹೀಗಾಗಿ ಇವೆಲ್ಲವನ್ನೂ ಸರಿಪಡಿಸಿಕೊಳ್ಳಲು ಇದೀಗ ಆಧಾರ್ ಅದಾಲತ್ ಅನ್ನು ನ. 27 ರಿಂದ ಡಿ. 02 ರವರೆಗೆ ಕೊಪ್ಪಳ ಜಿಲ್ಲಾಡಳಿತ ಭವನ ಆವರಣದಲ್ಲಿರುವ ಸ್ಪಂದನ ಕೇಂದ್ರದಲ್ಲಿ ಹೊಸದಾಗಿ ಆಧಾರ್ ನೋಂದಣಿ, ತಿದ್ದುಪಡಿ, ವಿಳಾಸ ಬದಲಾವಣೆ ಇಂತಹ ಕಾರ್ಯ ಚಟುವಟಿಕೆಗಳನ್ನು ಇಲ್ಲಿ ಮಾಡಿಕೊಡಲಾಗುವುದು.
     ಇದುವರೆಗೂ ಆಧಾರ್ ನೊಂದಣಿ ಮಾಡಿಸದೇ ಇರುವವರು, ಆಧಾರ್ ನೋಂದಣಿ ಮಾಡಿಸಿಕೊಳ್ಳಬಹುದು.  ಅಲ್ಲದೆ ಆಧಾರ್ ಕಾರ್ಡ್ ತಿದ್ದುಪಡಿ, ವಿಳಾಸ ಬದಲಾವಣೆ ಮಾಡಿಸಲೂ ಅವಕಾಶ ಇರುತ್ತದೆ.  ಈ ವಿಶೇಷ ಕಾರ್ಯಕ್ರಮದ ಪ್ರಯೋಜನ ಪಡೆಯಬಯಸುವವರು, ಸ್ವಯಂ ದೃಢೀಕರಿಸಿದ ದಾಖಲಾತಿಗಳಾದ ಮತದಾರರ ಗುರುತಿನ ಚೀಟಿ, ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ, ಪಡಿತರ ಚೀಟಿ, ಬ್ಯಾಂಕ್ ಪಾಸ್ ಪುಸ್ತಕ, ವಾಸಸ್ಥಳ ಪ್ರಮಾಣ ಪತ್ರ, ಪಾನ್ ಕಾರ್ಡ್, ಡಿ.ಎಲ್. ಪ್ರತಿ ಮತ್ತು ಇನ್ನಿತರ ಅಧಿಕೃತ ದಾಖಲಾತಿಗಳು ಹಾಗೂ ಈ ಹಿಂದೆ ಪಡೆದ ಆಧಾರ್ ಕಾರ್ಡ್‍ನ ಪ್ರತಿಯನ್ನು ತರಬೇಕು.  ಸಾರ್ವಜನಿಕರು ಆಧಾರ್ ಅದಾಲತ್ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು. 
     ಆಧಾರ್ ಅದಾಲತ್ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳಲು ಮೊದಲನೆ ದಿನವಾದ ಇಂದು ನೂರಾರು ಸಾರ್ವಜನಿಕರು ಅದಾಲತ್‍ನಲ್ಲಿ ಪಾಲ್ಗೊಂಡರು.  ಆಧಾರ್ ನೋಂದಣಿ ಜಿಲ್ಲಾ ವ್ಯವಸ್ಥಾಪಕ ಜಾಫರ್ ಸೇರಿದಂತೆ ವಿವಿಧ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ಪಿ.ಯು.ಸಿ ವರೆಗೆ ಉಚಿತ ಶಿಕ್ಷಣ : ಎಂ.ಆರ್ ವೆಂಕಟೇಶ

ಕೊಪ್ಪಳ ನ. 27 (ಕರ್ನಾಟಕ ವಾರ್ತೆ): ಪೌರಕಾರ್ಮಿಕರು/ ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ಪಿ.ಯು.ಸಿ ವರೆಗೆ ಉಚಿತ ಶಿಕ್ಷಣ ನೀಡಲು, ಸರ್ಕಾರ ಪ್ರತಿಷ್ಠಿತ ಶಾಲೆಗಳಲ್ಲಿ ಮೀಸಲಾತಿ ನೀಡುವ ವ್ಯವಸ್ಥೆಯನ್ನು ಜಾರಿಗೊಳಿಸಿದೆ ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷರಾದ ಎಂ.ಆರ್ ವೆಂಕಟೇಶ ಅವರು ಹೇಳಿದರು.

    ಬೆಂಗಳೂರು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ಹಾಗೂ ಕೊಪ್ಪಳ ಜಿಲ್ಲಾಡಳಿತದ ಸಹಯೋಗದಲ್ಲಿ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಸೋಮವಾರದಂದು ಹಮ್ಮಿಕೊಳ್ಳಲಾಗಿದ್ದ, ಸಫಾಯಿ ಕರ್ಮಚಾರಿಗಳೊಂದಿಗಿನ “ಸಂವಾದ ಕಾರ್ಯಕ್ರಮ” ಉದ್ಘಾಟಿಸಿ ಅವರು ಮಾತನಾಡಿದರು.

    ರಾಜ್ಯದ ಕಿತ್ತೂರು ರಾಣಿ ಚೆನ್ನಮ್ಮ ಇತ್ಯಾದಿ ಪ್ರತಿಷ್ಟಿತ ಶಾಲೆಗಳಲ್ಲಿ ಪೌರಕಾರ್ಮಿಕರ/ ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ಪ್ರವೇಶ ಪರೀಕ್ಷೆ ಇಲ್ಲದೇ ನೇರ ದಾಖಲಾತಿಗಾಗಿ ಸರ್ಕಾರ ಅನುವು ಮಾಡಿದ್ದು, ರಾಜ್ಯದಲ್ಲಿ ಪ್ರತಿಷ್ಠಿತ ಶಾಲೆಗಳಲ್ಲಿ ಇವರಿಗಾಗಿ 1830 ಸ್ಥಾನಗಳನ್ನು ಮೀಸಲಿಟ್ಟಿದೆ.  ಇತರೆ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾಹೆಯಾನ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ.  ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮವನ್ನು ಕರ್ನಾಟಕ ರಾಜ್ಯ ಸರ್ಕಾರ ಸ್ಥಾಪಿಸಿದೆ.  ಪೌರ ಕಾರ್ಮಿಕರಿಗೆ 7.5 ಲಕ್ಷ ವೆಚ್ಛದಲ್ಲಿ ಮನೆಗಳ ನಿರ್ಮಾಣ ಮಾಡಲು ಗೃಹ ಭಾಗ್ಯ ಯೋಜನೆ ಜಾರಿಗೊಳಿಸಲಾಗಿದೆ.  ಈ ಯೋಜನೆಗೆ ರಾಜ್ಯದಲ್ಲಿ 75 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.  ಸರ್ಕಾರವು ಕನಿಷ್ಠ ವೇತನ ವನ್ನು ಜಾರಿಗೊಳಿಸಲಾಗಿದ್ದು, ಇದರನ್ವಯ ಪಿ.ಎಫ್. & ಇ.ಎಸ್.ಐ ಒಳಗೊಂಡು ಕನಿಷ್ಠ ವೇತವನ್ನು ನೀಡುತ್ತಿದೆ.  ಪೌರಕಾರ್ಮಿಕರಿಗೆ ಕರ್ನಾಟಕ ರಾಜ್ಯ ಸರ್ಕಾರ ನೀಡುತ್ತಿರುವಂತಹ   ಸೌಲಭ್ಯಗಳು ದೇಶದ ಯಾವುದೇ ರಾಜ್ಯದಲ್ಲಿಯೂ ಇಲ್ಲ.  ಇದರ ಜೊತೆ ಬೆಳಗಿನ ಉಪಹಾರ, ವಾರ್ಷಿಕ ಎರಡು ಜೊತೆ ಬಟ್ಟೆ, ಸುರಕ್ಷಾ ಪರಿಕರಗಳನ್ನು ಅವರ ಆರೋಗ್ಯದ ಹಿತದೃಷ್ಟಿಯಿಂದ ನೀಡಲಾಗುತ್ತಿದೆ.  ಪೌರಕಾರ್ಮಿಕರಿಗೆ ಆರೋಗ್ಯ, ಮಕ್ಕಳ ಶಿಕ್ಷಣ, ಶೌಚಾಲಯ ನಿರ್ಮಾಣ, ವೈದ್ಯಕೀಯ ಸೇವೆ, ಇತ್ಯಾದಿ ವೈಯುಕ್ತಿಕ ಸೇವೆಗಳನ್ನು ಒದಗಿಸಲು ಶೇ. 20% ಹಣವನ್ನು ಮೀಸಲಿಡಲಾಗಿದೆ.  ಆರೋಗ್ಯ ಭದ್ರತೆಗಾಗಿ 9.65 ಲಕ್ಷ ಹಣವನ್ನು ನಿಗಮದ  ಜ್ಯೋತಿ ಸಂಜೀವಿನಿಗೆ ನೀಡಲಾಗಿದೆ.  ಸಫಾಯಿ ಕರ್ಮಚಾರಿಗಳ ಸಮಗ್ರ ಅಭಿವೃದ್ಧಿ ಯೋಜನೆಯಡಿ 100 ಕೋಟಿ ರೂ. ಗಳನ್ನು ಸರ್ಕಾರ ಬಜೆಟ್ ನಲ್ಲಿ ಮಿಸಲಿಟ್ಟಿದೆ.  ಇದರಲ್ಲಿ ಸಫಾಯಿ ಕರ್ಮಚಾರಿಗಳ ಕಾಲೋನಿಯಲ್ಲಿ ಸಿ.ಸಿ ರಸ್ತೆ, ಕುಡಿಯುವ ನೀರು, ಕಾಲೋನಿ ನಿರ್ಮಾಣ, ರಸ್ತೆ, ಅಂಗನವಾಡಿ ಇತ್ಯಾದಿಗಳ ಅಭಿವೃದ್ಧಿ ಕಾರ್ಯಗಳು ಒಳಗೊಂಡಿವೆ.  ಪೌರಕಾರ್ಮಿಕರು/ ಸಫಾಯಿ ಕರ್ಮಚಾರಿಗಳಿಗೆ ನಿಗಮದಿಂದ ವಾಹನ ಸಾಲ, ಕೌಶಲ್ಯಾಭಿವೃಧ್ಧಿ ತರಬೇತಿ, ವಾಹನ ಚಾಲನಾ ತರಬೇತಿ ಹಾಗೂ ವಿವಿಧ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷರಾದ ಎಂ.ಆರ್ ವೆಂಕಟೇಶ ಅವರು ಹೇಳಿದರು.
ಸಂವಾದ ಕಾರ್ಯಕ್ರಮದಲ್ಲಿ ಕೊಪ್ಪಳದ ಪೌರಕಾರ್ಮಿಕ ದೇವಪ್ಪ ಮಾತನಾಡಿ, ಪೌರಕಾರ್ಮಿಕರು/ ಸಫಾಯಿ ಕರ್ಮಚಾರಿಗಳು ಮರಣ ಹೊಂದಿದರೆ ಅನುಕಂಪದ ಆಧಾರದಮೇಲೆ ಅವರ ಮಕ್ಕಳಿಗೆ ಕೆಲಸಕ್ಕೆ ತೆಗೆದುಕೊಳ್ಳಲು ಕನಿಷ್ಠ ಎಸ್.ಎಸ್.ಎಲ್.ಸಿ ವಿದ್ಯಾರ್ಹತೆಯನ್ನು ಹೊಂದಿರಬೇಕು ಎಂಬ ನಿಯಮವನ್ನು ಸಡಿಲಿಸಬೇಕು.  ನಗರದಲ್ಲಿ 24 ಗುತ್ತಿಗೆ ಕಾರ್ಮಿಕರಿದ್ದು, ಸುಮಾರು 18 ರಿಂದ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.  ಇವರಿಗೆ ಖಾಯಂ ಉದ್ಯೋಗ ಕೊಡಿ ಎಂದು ಕೇಳಿಕೊಂಡರು.  ಇದಕ್ಕೆ ಪ್ರತಿಕ್ರಿಯಿಸಿದ   ಆಯೋಗದ ಅಧ್ಯಕ್ಷರು, ಪೌರಕಾರ್ಮಿಕರು/ ಸಫಾಯಿ ಕರ್ಮಚಾರಿಗಳ ಕೆಲಸಕ್ಕೆ ಯಾವುದೇ ವಿದ್ಯಾರ್ಹತೆಯನ್ನು ನಿಗದಿಪಡಿಲ್ಲ.  20 ವರ್ಷಗಳ ಸೇವೆ ಸಲ್ಲಿಸಿದ ನೌಕರರಿಗೆ ಖಾಯಂ ಕೆಲಸ ಒದಗಿಸುವ ಕುರಿತು ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯರಾದ ಗೋಕುಲ ನಾರಾಯಣಸ್ವಾಮಿ, ಉಪನಿರ್ದೇಶಕ ಮಂಜುನಾಥ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿಜಯ ಕುಮಾರ, ಕೊಪ್ಪಳ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀಕಾಂತ, ನಗರಸಭೆ ಪೌರಾಯುಕ್ತ ಪರಮೇಶ್ವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.  ಜಿಲ್ಲೆಯ ವಿವಿಧೆಡೆಗಳಿಂದ ಪೌರಕಾರ್ಮಿಕರು ಹಾಗೂ ವಿವಿಧ ಇಲಾಖೆಗಳಡಿ ಕಾರ್ಯ ನಿರ್ವಹಿಸುವ ಸಫಾಯಿ ಕರ್ಮಚಾರಿಗಳು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸಫಾಯಿ ಕರ್ಮಚಾರಿಗಳಿಗಿರುವ ಯೋಜನೆಗಳ ಕುರಿತು ಜಾಗೃತಿ ಮೂಡಿಸಿ : ಎಂ.ಆರ್ ವೆಂಕಟೇಶ


ಕೊಪ್ಪಳ ನ. 27 (ಕರ್ನಾಟಕ ವಾರ್ತೆ): ಪೌರಕಾರ್ಮಿಕರು/ ಸಫಾಯಿ ಕರ್ಮಚಾರಿಗಳ ಕುಟುಂಬಗಳಿಗೆ ಸರ್ಕಾರವು ವಿವಿಧ ಯೋಜನೆಗಳನ್ನು ಜಾರಿಗೊಳಿಸಿದ್ದು, ಈ ಕುರಿತು ಅವರಲ್ಲಿ ಜಾಗೃತಿ ಮೂಡಿಸಲು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ಆರ್. ವೆಂಕಟೇಶ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಂಗಳೂರು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದಿಂದ ಸಫಾಯಿ ಕರ್ಮಚಾರಿಗಳ/ ಪೌರಕಾರ್ಮಿಕರ ಕುಂದುಕೊರತೆಗಳ ಕುರಿತು ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರದಂದು ಆಯೋಜಿಸಲಾಗಿದ್ದ, ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 
    ನ್ಯಾಯಾಲಯದ ನಿರ್ದೇಶನದಂತೆ ಪೌರಕಾರ್ಮಿಕರು/ ಸಫಾಯಿ ಕರ್ಮಚಾರಿಗಳಿಗೆ 2013ರ ಕಾಯ್ದೆ ಪ್ರಕಾರ ಕನಿಷ್ಠ ವೇತನವನ್ನು ಜಾರಿಗೊಳಿಸಲಾಗಿದ್ದು, ಕಡ್ಡಾಯವಾಗಿ ಅವರಿಗೆ ಕನಿಷ್ಠ ವೇತನವನ್ನು ನೀಡಬೇಕು.  ಈಗಾಗಲೆ ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಲಾಗಿದೆ. ಪಿ.ಎಫ್ ಇ.ಎಸ್.ಐ ಗಳ ನಂಬರ್ ಕುರಿತು 15 ದಿನಗಳ ಒಳಗಾಗಿ ದಾಖಲೆಗಳನ್ನು ಸಲ್ಲಿಸಬೇಕು.  ಕಾರ್ಮಿಕ ಅಧಿಕಾರಿಗಳು ಜಿಲ್ಲೆಯ ಎಲ್ಲ ನಗರಸಭೆ, ಪುರಸಭೆ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಭೇಟಿ ನೀಡಿ, ಅವರಿಗೆ 2013ರ ಕಾಯ್ದೆ ಪ್ರಕಾರ ವೇತನ ನೀಡಲಾಗುತ್ತಿದೆಯೇ ಇಲ್ಲವೆ ಎಂಬುದರ ಕುರಿತು ಪರಿಶೀಲಿಸಬೇಕು.  ನಗರಸಭೆ, ಪುರಸಭೆ, ಪಟ್ಟಣ ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಪೌರಕಾರ್ಮಿಕರಿಗೆ ಕಡ್ಡಾಯವಾಗಿ ಆರೋಗ್ಯ ತಪಾಸಣೆ ನಡೆಸಬೇಕು.  ಸಫಾಯಿ ಕರ್ಮಚಾರಿಗಳಿಗೆ ಸುರಕ್ಷತಾ ಪರಿಕರಗಳಾದ ಮಾಸ್ಕ್, ಕೈಗವಸು, ಟೋಪಿ, ಶೂ ಇವುಗಳನ್ನು ಕಡ್ಡಾಯವಾಗಿ ನೀಡಬೇಕು.  ಸುರಕ್ಷತಾ ಪರಿಕರಗಳಿಲ್ಲದೆ ಯಾವುದೇ ಪೌರಕಾರ್ಮಿಕರು ಕರ್ತವ್ಯಕ್ಕೆ ತೆರಳದಂತೆ ನೋಡಿಕೊಳ್ಳಬೇಕು.  ಪ್ರತಿ ಮೂರು ತಿಂಗಳಿಗೊಮ್ಮೆ ಪೌರಕಾರ್ಮಿಕರ ಹಾಗೂ ಸಫಾಯಿ ಕರ್ಮಚಾರಿಗಳ ಆರೋಗ್ಯ ತಪಾಸಣೆ ಮಾಡಿಸಬೇಕು.  ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸಫಾಯಿ ಕರ್ಮಚಾರಿಗಳ ಕಾಲೋನಿಗಳಿಗೆ ಭೇಟಿ ನೀಡಿ, ಸರ್ಕಾರ ಜಾರಿಗೊಳಿಸಿರುವ ಯೋಜನೆಗಳ ಕುರಿತು ಜಾಗೃತಿ ಮೂಡಿಸಬೇಕು.  ಜಾಹೀರಾತು ಫಲಕಗಳನ್ನು ಅಳವಡಿಸಬೇಕು.  ಕೊಪ್ಪಳ ಜಿಲ್ಲೆಯ ಪ್ರತಿ ತಾಲೂಕು ಪಂಚಾಯತಿಗೆ ಒಂದರಂತೆ ಸಕ್ಕಿಂಗ್ ಮತ್ತು ಜೆಟ್ ಯಂತ್ರವನ್ನು ತಾಲೂಕು ಪಂಚಾಯತಿ ಕಚೇರಿಯಿಂದ ಕೂಡಲೆ ಖರೀದಿಸಬೇಕು ಎಂದು ಆಯೋಗದ ಅಧ್ಯಕ್ಷರು ಅಧಿಕಾರಿಗಳಿಗೆ ಸೂಚನೆ ನೀಡಿದರು.
    ಗೃಹ ಭಾಗ್ಯ ಯೋಜನೆಯಡಿ ಕೊಪ್ಪಳ ನಗರಸಭೆಯ ಪೌರಕಾರ್ಮಿಕರಿಗೆ 30*40 ಅಳತೆಯ ನಿವೇಶನವನ್ನು ಒದಗಿಸಿ, ಮನೆ ನಿರ್ಮಿಸಿಕೊಡಲು ಅವಕಾಶ ಮಾಡಿಕೊಟ್ಟಿರುವ ಕೊಪ್ಪಳ ಜಿಲ್ಲಾಧಿಕಾರಿಗಳ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದ್ದು, ಇದು ರಾಜ್ಯಕ್ಕೆ ಮಾದರಿಯಾಗಿದೆ.  ಸ್ವಚ್ಛತೆಗೆ ಸಂಬಂಧಿಸಿದಂತೆ ಕೊಪ್ಪಳ ಹಾಗೂ ಗಂಗಾವತಿಯಲ್ಲಿ ಇನ್-ಸ್ಯಾನಿಟರಿ ಲ್ಯಾಟರೀನ್ ವ್ಯವಸ್ಥೆ ಇಂದಿಗೂ ಬಳಕೆಯಲ್ಲಿದ್ದು, ಈ ವ್ಯವಸ್ಥೆಯನ್ನು ಹೋಗಲಾಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು.  ಶಾಲಾ ಕಾಲೇಜುಗಳ ಆವರಣಗಳಲ್ಲಿ ಸ್ವಚ್ಛತೆಯನ್ನು ಕಾಪಾಡಲು ಗೊಡೆಗಳ ಮೇಲೆ ಸೂಚನಾ ಫಲಕಗಳನ್ನು ಅಳವಡಿಸಬೇಕು.  ಬಸ್‍ನಿಲ್ದಾಣ, ಆಸ್ಪತ್ರೆ, ಇತ್ಯಾದಿ ಸಾರ್ವಜನಿಕ ಸ್ಥಳಗಳಲಿರುವ  ಶೌಚಾಲಯಗಳನ್ನು ದುರಸ್ಥಿಪಡಿಸಿ, ಸಾರ್ವಜನಿಕ ಬಳಕೆಗೆ ಅನುಕೂಲ ಮಾಡಬೇಕು.  ಬಯಲು ಬರ್ಹಿದೆಸೆಯನ್ನು ತಡೆಗಟ್ಟಿ, ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಿಕೊಳ್ಳಲು ಮತ್ತು ಅದರ ಬಳಕೆ ಕುರಿತು ನಗರಸಭೆಯ ಕಸವಿಲೇವಾರಿ ವಾಹನಗಳ ಮೂಲಕ ಅರಿವು ಮತ್ತು ಜಾಗೃತಿ ಮೂಡಿಸಿ ನೈರ್ಮಲ್ಯ ಸಮಾಜವನ್ನು ನಿರ್ಮಿಸಿ ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷರಾದ ಎಂ.ಆರ್ ವೆಂಕಟೇಶ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
    ಸಭೆಯಲ್ಲಿ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯರಾದ ಗೋಕುಲ ನಾರಾಯಣಸ್ವಾಮಿ, ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ ಶೆಟ್ಟಿ, ಸಹಾಯಕ ಆಯುಕ್ತ ಗುರುದತ್ ಹೆಗ್ಡೆ, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಉಪನಿರ್ದೇಶಕ ಮಂಜುನಾಥ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿಜಯ ಕುಮಾರ, ಕೊಪ್ಪಳ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀಕಾಂತ, ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ನಗರಸಭೆ ಪೌರಾಯುಕ್ತರು, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು ಉಪಸ್ಥಿತರಿದ್ದರು. 

Saturday, 25 November 2017

ಗ್ರಾಮ ಪಂಚಾಯತಿ ಚುನಾವಣೆ : ನ. 27 ರಿಂದ ಮದ್ಯಪಾನ ನಿಷೇಧ


ಕೊಪ್ಪಳ ನ. 25 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಯರಗೇರಾ, ಗಂಗಾವತಿ ತಾಲೂಕಿನ ಗೌರಿಪುರ, ಚಿಕ್ಕಬೆಣಕಲ್ ಮತ್ತು ಮರಳಿ ಗ್ರಾಮ ಪಂಚಾಯತಿಗಳಲ್ಲಿ ವಿವಿಧ ಕಾರಣಗಳಿಂದ ಆಕಸ್ಮಿಕವಾಗಿ ತೆರವಾಗಿರುವ ಸದಸ್ಯರ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಗ್ರಾ.ಪಂ ವ್ಯಾಪ್ತಿಯಲ್ಲಿ ನ. 27 ರಿಂದ ಡಿ. 20 ರವರೆಗೆ ಮದ್ಯಪಾನ ನಿಷೇಧಿಸಿ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಆದೇಶ ಹೊರಡಿಸಿದ್ದಾರೆ.
    ವಿವಿಧ ಕಾರಣಗಳಿಂದ ಆಕಸ್ಮಿಕವಾಗಿ ತೆರವಾಗಿರುವ ಗ್ರಾಮ ಪಂಚಾಯತಿ ಸದಸ್ಯರ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು,   ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ, ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಪಾಲನೆಗಾಗಿ ಹಾಗೂ ಸಾರ್ವಜನಿಕ ಹಿತಾಸಕ್ತಿ ಕಾಪಾಡುವ ದೃಷ್ಠಿಯಿಂದ, ಮದ್ಯಪಾನ, ಮದ್ಯ ಮಾರಾಟವನ್ನು ನ. 27 ರಿಂದ ಡಿ. 20 ರವರೆಗೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಯರಗೇರಾ, ಗಂಗಾವತಿ ತಾಲೂಕಿನ ಗೌರಿಪುರ, ಚಿಕ್ಕಬೆಣಕಲ್ ಮತ್ತು ಮರಳಿ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ನಿಷೇಧಿಸಲಾಗಿದೆ.  ಇದರನ್ವಯ ನಿಷೇಧಿತ ವ್ಯಾಪ್ತಿಯಲ್ಲಿನ ಎಲ್ಲಾ ಮದ್ಯದ ಅಂಗಡಿಗಳನ್ನು ಮತ್ತು ಮದ್ಯ ತಯಾರಿಕಾ ಘಟಕಗಳನ್ನು ಅದರ ಮಾಲೀಕರು, ಅಧಿಭೋಗದಾರರು ಮತ್ತು ವ್ಯವಸ್ಥಾಪಕರು ಮುಚ್ಚಬೇಕು.  ಹಾಗೂ ಮೊಹರು ಮಾಡಿ ಅದರ ಕೀಲಿಗಳನ್ನು ಸಂಬಂಧಪಟ್ಟ ತಹಶೀಲ್ದಾರರ ಸುಪರ್ದಿಗೆ ಒಪ್ಪಿಸಬೇಕು ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

ಗ್ರಾಮ ಪಂಚಾಯತಿ ಚುನಾವಣೆ : ಸಂತೆ-ಜಾತ್ರೆಗಳು ಮುಂದೂಡಿಕೆ


ಕೊಪ್ಪಳ ನ. 25 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಯರಗೇರಾ, ಗೌರಿಪುರ, ಚಿಕ್ಕಬೆಣಕಲ್ ಮತ್ತು ಮರಳಿ ಗ್ರಾಮ ಪಂಚಾಯತಿಗಳಲ್ಲಿ ವಿವಿಧ ಕಾರಣಗಳಿಂದ ಆಕಸ್ಮಿಕವಾಗಿ ತೆರವಾಗಿರುವ ಸದಸ್ಯರ ಸ್ಥಾನಗಳಿಗೆ ಡಿಸೆಂಬರ್. 17 ರಂದು ಚುನಾವಣೆ ನಡೆಯಲಿದ್ದು, ಮತದಾನ ನಡೆಯುವ ಗ್ರಾ.ಪಂ ವ್ಯಾಪ್ತಿಯಲ್ಲಿ ಯಾವುದೇ ಸಂತೆ-ಜಾತ್ರೆಗಳಿದ್ದಲ್ಲಿ, ಒಂದು ದಿನದ ಮಟ್ಟಿಗೆ ಮುಂದೂಡಿಸಲಾಗಿದೆ.
    ವಿವಿಧ ಕಾರಣಗಳಿಂದ ಆಕಸ್ಮಿಕವಾಗಿ ತೆರವಾಗಿರುವ ಗ್ರಾಮ ಪಂಚಾಯತಿ ಸದಸ್ಯರ ಸ್ಥಾನಗಳಿಗೆ ಚುನಾವಣೆ ಮೂಲಕ ಭರ್ತಿ ಮಾಡುವ ಸಂಬಂಧವಾಗಿ ಡಿಸೆಂಬರ್. 17 ರಂದು ಮತದಾನವನ್ನು ನಿಗಧಿಪಡಿಸಲಾಗಿದ್ದು, ಈ ಹಿನ್ನಲೆಯಲ್ಲಿ ಮತದಾನವು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಸಲು ಮತ್ತು ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದನ್ವಯ ಮತದಾನ ದಿನದಂದು ಕೊಪ್ಪಳ ಜಿಲ್ಲೆಯ  ಕುಷ್ಟಗಿ ತಾಲೂಕಿನ ಯರಗೇರಾ, ಗಂಗಾವತಿ ತಾಲೂಕಿನ ಗೌರಿಪುರ, ಚಿಕ್ಕಬೆಣಕಲ್ ಮತ್ತು ಮರಳಿ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ನಡೆಯುವ ಸಂತೆ-ಜಾತ್ರೆಗಳನ್ನು ಒಂದು ದಿನದ ಮಟ್ಟಿಗೆ ಮುಂದೂಡಿ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಆದೇಶ ಹೊರಡಿಸಿದ್ದಾರೆ.

ಸಂಸದರ ಅನುದಾನದಲ್ಲಿ ಕೊಪ್ಪಳ ಜಿಲ್ಲಾಸ್ಪತ್ರೆಗೆ ಹೊಸ ಅಂಬುಲೆನ್ಸ್


ಕೊಪ್ಪಳ ನ. 25 (ಕರ್ನಾಟಕ ವಾರ್ತೆ): ಕೊಪ್ಪಳ ಲೋಕಸಭಾ ಸದಸ್ಯರ ಅನುದಾನದಲ್ಲಿ ಜಿಲ್ಲಾ ಆಸ್ಪತ್ರೆಗೆ ಹೊಸದಾಗಿ ಅಂಬುಲೆನ್ಸ್ ವಾಹನವನ್ನು ಒದಗಿಸಿದ್ದು, ವಾಹನಕ್ಕೆ ಜಿಲ್ಲಾಸ್ಪತ್ರೆ ಆವರಣದಲ್ಲಿ ಹಸಿರು ನಿಶಾನೆ ತೋರುವ ಮೂಲಕ ಸಂಸದ ಕರಡಿ ಸಂಗಣ್ಣ ಅವರು ಶನಿವಾರದಂದು ಚಾಲನೆ ನೀಡಿದರು. 
2016-17ನೇ ಸಾಲಿನ ಕೊಪ್ಪಳ ಲೋಕಸಭಾ ಸದಸ್ಯರ ಅನುದಾನದಲ್ಲಿ ಜಿಲ್ಲಾ ಆಸ್ಪತ್ರೆಗೆ ಹೊಸದಾಗಿ ಅಂಬುಲೆನ್ಸ್ ವಾಹನವನ್ನು ಒದಗಿಸಿದ್ದು, ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು ಹಸಿರು ನಿಶಾನೆ ತೋರಿಸಿ ಚಾಲನೆ ಕೊಟ್ಟರು.  ಕೊಪ್ಪಳ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ದಾನರೆಡ್ಡಿ, ಕಿಮ್ಸ್ ನಿರ್ದೇಶಕ ಡಾ. ಶಂಕರ ಮಲಪುರೆ, ಜಿ.ಪಂ ಸದಸ್ಯರಾದ ರಾಮಣ್ಣ ಚೌಡ್ಕಿ, ಗವಿಸಿದ್ದಪ್ಪ ಗರಡಿ, ಜಿಲ್ಲಾ ಆಸ್ಪತ್ರೆಯ ವೈದ್ಯರು ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. 

ಹೈ-ಕ ಪ್ರದೇಶಾಭಿವೃದ್ಧಿ ಯೋಜನೆ ಕಾಮಗಾರಿಗಳನ್ನು ಶೀಘ್ರ ಪ್ರಾರಂಭಿಸಿ- ಬಸವರಾಜ ರಾಯರಡ್ಡಿ


ಕೊಪ್ಪಳ ನ. 25 (ಕರ್ನಾಟಕ ವಾರ್ತೆ): ಹೈದ್ರಾಬಾದ್-ಕರ್ನಾಟಕ ಪ್ರದೇಶ ಅಭಿವೃದ್ಧಿ ಯೋಜನೆಯಡಿ ಜಿಲ್ಲೆಯಲ್ಲಿ ಈಗಾಗಲೆ ಅನುಮೋದನೆಗೊಂಡಿರುವ ಕಾಮಗಾರಿಗಳನ್ನು ಶೀಘ್ರ ಪ್ರಾರಂಭಿಸುವಂತೆ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

     ಹೈದ್ರಾಬಾದ್-ಕರ್ನಾಟಕ ಪ್ರದೇಶ ಅಭಿವೃದ್ಧಿ ಯೋಜನೆ ಕಾಮಗಾರಿಗಳ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಹೈದ್ರಾಬಾದ್-ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಕೊಪ್ಪಳ ಜಿಲ್ಲೆಗೆ ನಿಗದಿಪಡಿಸಲಾಗಿರುವ ಕಾಮಗಾರಿಗಳ ಪೈಕಿ, ಇದುವರೆಗೂ ಕಾಮಗಾರಿಗಳು ಪ್ರಾರಂಭವಾಗದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.  ಈವರೆಗೆ ಪ್ರಾರಂಭವಾಗದಿರುವ ಕಾಮಗಾರಿಗಳನ್ನು ಆದಷ್ಟು ಶೀಘ್ರ ಪ್ರಾರಂಭ ಮಾಡಬೇಕು. ಕಾಮಗಾರಿಗಳಿಗೆ ಒಂದು ವಾರದೊಳಗಾಗಿ ಆಡಳಿತಾತ್ಮಕ ಅನುಮೋದನೆ ಪಡೆದು, ಅಲ್ಪಾವಧಿ ಟೆಂಡರ್ ಕರೆದು ಕಾಮಗಾರಿಗಳನ್ನು ತ್ವರಿತವಾಗಿ ಪ್ರಾರಂಭಿಸಬೇಕು.  ಯಾವುದೇ ಕಾರಣಕ್ಕೂ ಗುಣಮಟ್ಟದಲ್ಲಿ ರಾಜಿಯಾಗುವ ಪ್ರಶ್ನೆಯಿಲ್ಲ.  ಪ್ರಸಕ್ತ ಸಾಲಿಗೆ ಹೈದ್ರಾಬಾದ್-ಕರ್ನಾಟಕ ಪ್ರದೇಶ ಅಭಿವೃದ್ಧಿ ಯೋಜನೆಯಲ್ಲಿ ಕೊಪ್ಪಳ ಜಿಲ್ಲೆಗೆ ಮೈಕ್ರೋ ಕಾರ್ಯಕ್ರಮದಡಿ ಒಟ್ಟು 464 ಕಾಮಗಾರಿಗಳನ್ನು ನಿಗದಿಪಡಿಸಿದ್ದು ಇದಕ್ಕಾಗಿ 93. 94 ಕೋಟಿ ರೂ. ಗಳ ಅನುದಾನ ಹಂಚಿಕೆ ಮಾಡಿದ್ದು, ಈ ಪೈಕಿ 40. 70 ಕೋಟಿ ರೂ. ಅನುದಾನ ಒದಗಿಸಲಾಗಿದೆ.  ಕೊಪ್ಪಳ ತಾಲೂಕಿನಲ್ಲಿ 96 ಕಾಮಗಾರಿಗಳಿಗೆ 16. 70 ಕೋಟಿ, ಗಂಗಾವತಿ ತಾಲೂಕಿನಲ್ಲಿ 36 ಕಾಮಗಾರಿಗಳಿಗೆ 6. 19 ಕೋಟಿ, ಕುಷ್ಟಗಿ ತಾಲೂಕಿನಲ್ಲಿ 174 ಕಾಮಗಾರಿಗಳಿಗೆ 31. 86 ಕೋಟಿ, ಹಾಗೂ ಯಲಬುರ್ಗಾ ತಾಲೂಕಿನಲ್ಲಿ 139 ಕಾಮಗಾರಿಗಳಿಗೆ 32. 78 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿದೆ.  ಜಿಲ್ಲೆಯಲ್ಲಿ 2016-17 ರವರೆಗಿನ ಪ್ರಗತಿ ಗಮನಿಸಿದಾಗ ಈವರೆಗೆ ಅನುಮೋದನೆಗೊಂಡ 1464 ಕಾಮಗಾರಿಗಳ ಪೈಕಿ ಸುಮಾರು ಒಂದು ಸಾವಿರ ಕಾಮಗಾರಿಗಳು ಪೂರ್ಣಗೊಂಡಿವೆ.
     ಮ್ಯಾಕ್ರೋ ಕಾರ್ಯಕ್ರಮಗಳಡಿ ಪ್ರಸಕ್ತ ಸಾಲಿಗೆ 33 ಕಾಮಗಾರಿಗಳನ್ನು ನಿಗದಿಪಡಿಸಿದ್ದು, 82. 80 ಕೋಟಿ ರೂ. ಅನುದಾನ ಕಾಯ್ದಿರಿಸಿದೆ.   ಜಿಲ್ಲೆಯಲ್ಲಿ ಈವರೆಗಿನ ಒಟ್ಟು 150 ಕಾಮಗಾರಿಗಳಲ್ಲಿ ಬಹುತೇಕ ಪ್ರೌಢಶಾಲಾ ಕಟ್ಟಡಗಳು ಹಾಗೂ ಕಾಲೇಜು ಕಟ್ಟಡಗಳ ಕಾಮಗಾರಿಗಳು ಒಳಗೊಂಡಿವೆ.  ಹೈ-ಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಈವರೆಗೆ 25. 35 ಕೋಟಿ ರೂ. ಅನುದಾನ ಒದಗಿಸಲಾಗಿದೆ.  ಯಲಬುರ್ಗಾ ತಾಲೂಕಿನ ಕೋನಸಾಗರಕ್ಕೆ ಹೊಸದಾಗಿ ಪ್ರೌಢಶಾಲೆ ಹಾಗೂ ಗಾಣಧಾಳ ಗ್ರಾಮಕ್ಕೆ ಪದವಿಪೂರ್ವ ಕಾಲೇಜು ಮಂಜೂರು ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಹೇಳಿದರು.
     ಹೈದ್ರಾಬಾದ್-ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಜಂಟಿನಿರ್ದೇಶಕ ಬಸವರಾಜ ಅವರು ಮಾತನಾಡಿ, ಹೈ-ಕ ಪ್ರದೇಶ ಅಭಿವೃದ್ಧಿ ಮಂಡಳಿಯ ಯೋಜನೆಯಡಿ ಕೈಗೊಳ್ಳಲಾಗುವ ಕಾಮಗಾರಿಗಳ ಬಿಲ್ ಪಾವತಿಗೆ ಸಂಬಂಧಿಸಿದಂತೆ ಕಾಮಗಾರಿ ಕೈಗೊಳ್ಳುವ ಗುತ್ತಿಗೆದಾರರ ಬ್ಯಾಂಕ್ ಖಾತೆಗೆ ಮಂಡಳಿಯಿಂದಲೇ ನಿಯಮಾನುಸಾರ ನೇರವಾಗಿ ಜಮಾ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದರು.
     ಸಭೆಯಲ್ಲಿ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಜಿಲ್ಲಾ ಪಂಚಾಯತಿ ಅಧ್ಯಕ್ಷ ರಾಜಶೇಖರ ಹಿಟ್ನಾಳ, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಹೈದ್ರಾಬಾದ್-ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಜಂಟಿನಿರ್ದೇಶಕ ಬಸವರಾಜ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಉಪವಿಭಾಗಾಧಿಕಾರಿ ಗುರುದತ್ ಹೆಗ್ಡೆ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಬಂಡಿವಡ್ಡರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು. 

ಜಿಲ್ಲೆಯಲ್ಲಿ 192 ಆನೆಕಾಲು ರೋಗಿಗಳು ಪತ್ತೆ : ಆನೆಕಾಲು ರೋಗ ನಿವಾರಣೆಗಾಗಿ ಸಾಮೂಹಿಕ ಮಾತ್ರೆ ನುಂಗಿಸುವ ಕಾರ್ಯಕ್ರಮಕ್ಕೆ ಚಾಲನೆ


ಕೊಪ್ಪಳ ನ. 25 (ಕರ್ನಾಟಕ ವಾರ್ತೆ): ಕೊಪ್ಪಳ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಜಿಲ್ಲೆಯಲ್ಲಿ ಆನೆಕಾಲು  ರೋಗ ನಿವಾರಣೆಗಾಗಿ ಜಿಲ್ಲೆಯ ಕಿನ್ನಾಳ, ತಾವರಗೇರಾ ಮತ್ತು ಹನುಮಸಾಗರ ಗ್ರಾಮಗಳಲ್ಲಿ ನ. 27 ರಿಂದ ಡಿಸೆಂಬರ್. 04 ರವರೆಗೆ ಹಮ್ಮಿಕೊಂಡಿರುವ “ಸಾಮೂಹಿಕ ಮಾತ್ರೆ ನುಂಗಿಸುವ ಕಾರ್ಯಕ್ರಮ” ಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ಹೆಚ್. ಅವರು ಸಾರ್ವಜನಿಕರಲ್ಲಿ ವಿಶ್ವಾಸವನ್ನು ಮೂಡಿಸುವ ಸಲುವಾಗಿ ಸ್ವತಃ ತಾವೇ ಮಾತ್ರೆಗಳನ್ನು ನುಂಗುವುದರ ಮೂಲಕ ಚಾಲನೆ ನೀಡಿದರು.
    ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ಹೆಚ್. ಅವರು ಮಾತನಾಡಿ, ನ. 27 ರಿಂದ ಡಿ. 04 ರವರೆಗೆ ಆರೋಗ್ಯ ಇಲಾಖೆಯವರು ಮನೆ-ಮನೆಗೆ ಹಾಗೂ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಖುದ್ದಾಗಿ ಆನೆಕಾಲು ರೋಗ ನಿವಾರಕ ಡಿ.ಇ.ಸಿ ಹಾಗೂ ಅಲ್ಬೆಂಡಾಜೋಲ್ ಮಾತ್ರೆಗಳನ್ನು ಉಚಿತವಾಗಿ ನೀಡುವರು.  ಈ ಮಾತ್ರೆಗಳು ಅತ್ಯಂತ ಸುರಕ್ಷಿತವಾಗಿದ್ದು, ಯಾವುದೇ ತೀವ್ರತರನಾದ ಅಡ್ಡ ಪರಿಣಾಮಗಳು ಇರುವುದಿಲ್ಲ.  ಮಾತ್ರೆಗಳನ್ನು ಊಟ ಅಥವಾ ಉಪಹಾರ ಸೇವನೆಯಾದ ನಂತರವೇ ಸೇವಿಸಬೇಕು.  ಡಿ.ಇ.ಸಿ ಹಾಗೂ ಅಲ್ಬೆಂಡಾಜೋಲ್ ಮಾತ್ರೆಗಳನ್ನು ಕಿನ್ನಾಳ, ತಾವರಗೇರಾ ಮತ್ತು ಹನುಮಸಾಗರ ಗ್ರಾಮಗಳಲ್ಲಿರುವ ಪ್ರತಿಯೊಬ್ಬರು ಅಂದರೇ ಎರಡು ವರ್ಷದೊಳಗಿನ ಮಕ್ಕಳು, ಗರ್ಭೀಣಿ ಸ್ತ್ರೀಯರು ಹಾಗೂ ತೀವ್ರತರನಾದ ರೋಗಗಳಿಂದ ಬಳಲುವ ವ್ಯಕ್ತಿಗಳನ್ನು ಹೊರತುಪಡಿಸಿ ಎಲ್ಲರೂ ಸೇವಿಸಿ ಆನೆಕಾಲು ರೋಗದಿಂದ ಪಾರಾಗಲು ಸಾರ್ವಜನಿಕರಿಗೆ ಮನವಿ ಮಾಡಿದರು.    
    ಕೊಪ್ಪಳ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ. ವಿರುಪಾಕ್ಷರೆಡ್ಡಿ ಎಸ್. ಮಾದಿನೂರ ಅವರು ಮಾತನಾಡಿ, ಆನೆಕಾಲು ರೋಗ ಒಂದು ಭಯಂಕರ ರೋಗವಾಗಿದ್ದು, ಒಮ್ಮೆ ಈ ರೋಗದಿಂದ ಪೀಡಿತರಾದರೇ ಈ ರೋಗವನ್ನು ವಾಸಿಮಾಡಲು ಸಾಧ್ಯವಿಲ್ಲ.  ಕಿನ್ನಾಳ, ತಾವರಗೇರಾ ಮತ್ತು ಹನುಮಸಾಗರ ಗ್ರಾಮಗಳಲ್ಲಿ ವಾಸಿಸುವ ವ್ಯಕ್ತಿಗಳು ಮೇಲ್ನೋಟಕ್ಕೆ  ಆರೋಗ್ಯವಂತರಾಗಿ ಕಂಡರೂ ಸಹ ಅವರುಗಳ ದೇಹದಲ್ಲಿ ಈ ರೋಗವನ್ನು ಉಂಟುಮಾಡುವ ರೋಗಾಣುಗಳು ಇರುವ ಸಾಧ್ಯತೆ ಅಧಿಕವಾಗಿರುತ್ತದೆ.  ಆನೆಕಾಲು ರೋಗ ಕ್ಯುಲೆಕ್ಸ್ ಜಾತಿಯ ಸೋಂಕಿತ ಸೊಳ್ಳೆಯ ಕಚ್ಚುವಿಕೆಯಿಂದ ಹರಡುತ್ತದೆ.  ಸೋಂಕಿತ ಸೊಳ್ಳೆ ಕಚ್ಚಿದ ವ್ಯಕ್ತಿಗಳಲ್ಲಿ 06 ರಿಂದ 08 ವರ್ಷಗಳ ನಂತರ ಕಾಲುಗಳು, ಕೈಗಳು, ವೃಷಣಗಳು ಅಥವಾ ಸ್ತನಗಳು ದಪ್ಪವಾಗುವುದರ ಮೂಲಕ ಲಕ್ಷಣಗಳು ಕಾಣಿಸಿಕೊಳ್ಳುವುದರಿಂದ ರೋಗವನ್ನು ಶೀಘ್ರವಾಗಿ ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ. ಕಾರಣ ಈ ಗ್ರಾಮಗಳಲ್ಲಿರುವ ಎಲ್ಲಾ ಸಾರ್ವಜನಿಕರು ಆರೋಗ್ಯ ಇಲಾಖೆಯವರು ನೀಡುವ ಮಾತ್ರೆಗಳನ್ನು ಕಡ್ಡಾಯವಾಗಿ ಸೇವಿಸಿ ಆನೆಕಾಲು ರೋಗ ಮುಕ್ತ ಸಮಾಜವನ್ನು ನಿರ್ಮಿಸವಲ್ಲಿ ಸಹಕರಿಸಬೇಕು.  ಮಾತ್ರೆಗಳನ್ನು ಜನರಿಗೆ ಖುದ್ದಾಗಿ ನುಂಗಿಸುವ ಕಾರ್ಯಕ್ಕೆ ಪ್ರತಿ 50 ಮನೆಗಳಿಗೆ ಒಬ್ಬರು ಆಶಾ/ಅಂಗನವಾಡಿ ಕಾರ್ಯಕರ್ತೆಯರನ್ನು ನಿಯೋಜಿಸಲಾಗಿದೆ.  ಇವರು ಮಾತ್ರೆಯನ್ನು ಆಯಾ ಮನೆಯವರು ಸೇವಿಸಿದ್ದನ್ನು ಖಚಿತಪಡಿಸಿಕೊಂಡೇ ಮುಂದಿನ ಮನೆಗೆ ತೆರಳಬೇಕಾಗುತ್ತದೆ.  ಅಲ್ಲದೆ ಪ್ರತಿ 10 ಮನೆಗಳಿಗೆ ಒಬ್ಬರು ಮೇಲ್ವಿಚಾರಕರನ್ನು ಪರಿಶೀಲನೆಗೆ ನೇಮಿಸಲಾಗಿದೆ ಎಂದರು. 
ಜಿಲ್ಲೆಯಲ್ಲಿ 192 ರೋಗಿಗಳು ಪತ್ತೆ :
************ ಆನೆಕಾಲು ರೋಗಿಗಳನ್ನು ಪತ್ತೆ ಹಚ್ಚುವ ಸಲುವಾಗಿ 2016 ರಲ್ಲಿ ಕೈಗೊಂಡ ಸರ್ವೆ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಒಟ್ಟು 192 ಆನೆಕಾಲು ರೋಗಿಗಳು ಪತ್ತೆಯಾಗಿದ್ದಾರೆ.  ಈ ಪೈಕಿ ಕುಷ್ಟಗಿ ತಾಲೂಕಿನಲ್ಲಿ ಅತಿ ಹೆಚ್ಚು ಅಂದರೆ 112 ರೋಗಿಗಳು ಪತ್ತೆಯಾಗಿದ್ದಾರೆ.  ಗಂಗಾವತಿ- 42, ಯಲಬುರ್ಗಾ-20 ಹಾಗೂ ಕೊಪ್ಪಳ ತಾಲೂಕಿನಲ್ಲಿ 18 ರೋಗಿಗಳನ್ನು ಪತ್ತೆ ಹಚ್ಚಲಾಗಿದೆ.  ಕುಷ್ಟಗಿ ತಾಲೂಕಿನ ಹನುಮಸಾಗರ ಗ್ರಾಮದಲ್ಲಿಯೇ 56 ರೋಗಿಗಳು ಪತ್ತೆಯಾಗಿದ್ದರೆ, ತಾವರಗೇರಾದಲ್ಲಿ 28 ರೋಗಿಗಳು ಕಂಡುಬಂದಿದ್ದಾರೆ.  ಕಳೆದ ಜನವರಿಯಲ್ಲಿ ಜಿಲ್ಲೆಯಲ್ಲಿ 8152 ರಕ್ತಲೇಪನಗಳನ್ನು ಪರೀಕ್ಷೆಗೆ ಒಳಪಡಿಸಿದ್ದು ಈ ಪೈಕಿ 43 ಹೊಸ ರೋಗಿಗಳನ್ನು ಪತ್ತೆ ಮಾಡಲಾಗಿದೆ.  ಈ ಪೈಕಿ ಕೊಪ್ಪಳ ತಾಲೂಕಿನ ಕಿನ್ನಾಳದಲ್ಲಿಯೂ 06 ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಹನುಮಸಾಗರ, ತಾವರಗೇರಾ ಮತ್ತು ಕಿನ್ನಾಳ ಗ್ರಾಮದಲ್ಲಿ ಸಾಮೂಹಿಕವಾಗಿ ಮಾತ್ರೆ ನುಂಗಿಸುವ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ.  ರಾಜ್ಯದಲ್ಲಿ ಉತ್ತರಕನ್ನಡ, ದಕ್ಷಿಣಕನ್ನಡ, ರಾಯಚೂರು, ಯಾದಗಿರಿ, ಬಾಗಲಕೋಟೆ, ಬಿಜಾಪುರ ಜಿಲ್ಲೆಗಳಲ್ಲಿ ಆನೆಕಾಲು ರೋಗ ಪ್ರಕರಣಗಳು ಹೆಚ್ಚಾಗಿದ್ದು, ಕೊಪ್ಪಳ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ ಎಂದು ಡಾ. ವಿರುಪಾಕ್ಷರೆಡ್ಡಿ ಮಾದಿನೂರ ಅವರು ತಿಳಿಸಿದರು.
    ಜಿಲ್ಲಾ ಕೀಟ ಜನ್ಯ ರೋಗಗಳ ಸಲಹೆಗಾರರಾದ ರಮೇಶ ಕೆ. ಅವರು ಮಾತನಾಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ರಾಜ್ಯ ಮಟ್ಟದ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದ ಸಹಯೋಗದಲ್ಲಿ ಕೊಪ್ಪಳ ಜಿಲ್ಲೆಯಾದ್ಯಂತ ನಡೆದ ಆನೆಕಾಲು ರೋಗದ ರಾತ್ರಿ ರಕ್ತಲೇಪನ ಸಮೀಕ್ಷೆಯಲ್ಲಿ ಕೊಪ್ಪಳ ತಾಲೂಕಿನ ಕಿನ್ನಾಳ ಹಾಗೂ ಕುಷ್ಟಗಿ ತಾಲೂಕಿನ ತಾವರಗೇರಾ ಮತ್ತು ಹನುಮಸಾಗರ ಗ್ರಾಮಗಳಲ್ಲಿ ಆನೆಕಾಲು ರೋಗವನ್ನುಂಟು ಮಾಡುವ ರೋಗಾಣುಗಳು ನಿಗದಿತ ಪ್ರಮಾಣಕ್ಕಿಂತ ಹೆಚ್ಚಿಗೆ ಇರುವುದು ಪ್ರಯೋಗಾಲಯ ಪರೀಕ್ಷೆಯಲ್ಲಿ ಖಚಿತಪಟ್ಟಿರುತ್ತದೆ.  ಆದ್ದರಿಂದ ಈ ಮೂರು ಗ್ರಾಮಗಳಲ್ಲಿರುವ ಪ್ರತಿಯೊಬ್ಬರು ಆರೋಗ್ಯ ಇಲಾಖೆಯವರ ನೀಡುವ ಮಾತ್ರೆಗಳನ್ನು ತಪ್ಪದೇ ಸೇವಿಸಿ ಆನೆಕಾಲು ರೋಗದಿಂದ ಮುಕ್ತರಾಗಲು “ಸಾಮೂಹಿಕ ಮಾತ್ರೆ ನುಂಗಿಸುವ ಕಾರ್ಯಕ್ರಮ”ಕ್ಕೆ ಸಹಕರಿಸಬೇಕು. ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.
    ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಂಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಕಾರ್ಯಾಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ನೊಣಗಳ ಹಾವಳಿ ನಿಯಂತ್ರಣಕ್ಕೆ ಪಶುಪಾಲನಾ ಇಲಾಖೆ ತಾಕೀತು


ಕೊಪ್ಪಳ ನ.24 (ಕರ್ನಾಟಕ ವಾರ್ತೆ): ಕೋಳಿ ಫಾರಂಗಳಿಂದ ಉಂಟಾಗುವ ನೊಣಗಳ ಹಾವಳಿಯನ್ನು ತಡೆಗಟ್ಟಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ  ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಕಟ್ಟು ನಿಟ್ಟಿನ ಸೂಚನೆ ನೀಡಿದೆ.
     ನೊಣಗಳ ಹಾವಳಿ ಹೆಚ್ಚಾಗಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಪೌಲ್ಟ್ರಿ  ಫಾರ್ಮ ಮಾಲೀಕರಿಗೆ ಕೋಳಿಗಳ ಆಹಾರದೊಂದಿಗೆ ಲಾರ್ವಿಸೈಡ್ ಔಷಧಿ ಬಳಸಿ ನೊಣಗಳ ಹತೋಟಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.
    ಕೋಳಿಗಳ ಆಹಾರ ಮಿಶ್ರಣದಲ್ಲಿ ಪ್ರತಿ ಟನ್ ಕೋಳಿ ಆಹಾರಕ್ಕೆ ಒಂದು ಕೆ.ಜಿ ಲಾರ್ವಿಡೆಕ್ಸ್ ಔಷಧವನ್ನು ನಿಯಮಿತವಾಗಿ ಮಿಶ್ರಣ ಮಾಡಬೇಕು. ಇದರಿಂದ ನೊಣಗಳ ಲಾರ್ವಾ ಉತ್ಪತ್ತಿ ನಿಯಂತ್ರಣಗೊಂಡು, ನೊಣಗಳ ಉತ್ಪತ್ತಿಯೂ ಕಡಿಮೆಯಾಗುತ್ತದೆ.   ಕೋಳಿ ಶೆಡ್ಡುಗಳ ಸುತ್ತಲೂ ನೊಣಗಳ ಹಾವಳಿ ತಪ್ಪಿಸಲು ಪೈರೆಥ್ರಿನ ಸಿಂಪರಣೆ ನಿಯಮಿತವಾಗಿ ಮಾಡಬೇಕು.  ಲಾರ್ವಾಫಿಕ್ಸ್ ಘನತ್ಯಾಜ್ಯ ಹಾಗೂ ಕೋಳಿ ಹಿಕ್ಕೆಯನ್ನು ನಿಯಮಿತವಾಗಿ ಮತ್ತು ನಿರಂತರವಾಗಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಕೋಳಿ ಫಾರಂನ ಸುತ್ತಲೂ 8 ಕಿ.ಮೀ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಹಳ್ಳಿಗಳಲ್ಲಿ ನಿಯಮಿತವಾಗಿ ನೊಣಗಳ ನಿರೋಧಕ ಔಷಧಿಯನ್ನು ಸಿಂಪಡಿಸಬೇಕು ಎಂದು ಜಿಲ್ಲೆಯ ಪೌಲ್ಟ್ರಿ ಫಾರ್ಮ ಮಾಲೀಕರುಗಳಿಗೆ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಕೊಪ್ಪಳ ಜಿಲ್ಲಾ ಉಸ್ತುವಾರಿ ಮಂತ್ರಿಗಳ ಪ್ರವಾಸ ಕಾರ್ಯಕ್ರಮ


ಕೊಪ್ಪಳ ನ. 25 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
     ಮಂತ್ರಿಗಳು ನ. 26 ರಂದು ಬೆಳಿಗ್ಗೆ 10 ಗಂಟೆಗೆ ಯಲಬುರ್ಗಾ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಜನಸಂಪರ್ಕ ಸಭೆಯಲ್ಲಿ ಪಾಲ್ಗೊಳ್ಳುವರು.  ರಾತ್ರಿ 9 ಗಂಟೆಗೆ ಕೊಪ್ಪಳಕ್ಕೆ ಆಗಮಿಸಿ ವಾಸ್ತವ್ಯ ಮಾಡುವರು.  ನ. 27 ರಂದು ಯಲಬುರ್ಗಾದಲ್ಲಿ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.  ಮಧ್ಯಾಹ್ನ ಯಲಬುರ್ಗಾ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಜನಸಂಪರ್ಕ ಸಭೆಯಲ್ಲಿ ಭಾಗವಹಿಸುವರು.  ರಾತ್ರಿ 8 ಗಂಟೆಗೆ ಕೊಪ್ಪಳಕ್ಕೆ ಆಗಮಿಸಿ, ಹಂಪಿ ಎಕ್ಸ್‍ಪ್ರೆಸ್ ರೈಲು ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಎಂದು ಮಂತ್ರಿಗಳ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.

Friday, 24 November 2017

ಆನೆಕಾಲು ರೋಗ ನಿವಾರಣೆಗಾಗಿ ನ. 27 ರಿಂದ ಸಾಮೂಹಿಕ ಮಾತ್ರೆ ನುಂಗಿಸುವ ಕಾರ್ಯಕ್ರಮ


ಕೊಪ್ಪಳ ನ. 24 (ಕರ್ನಾಟಕ ವಾರ್ತೆ): ಕೊಪ್ಪಳ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆನೆಕಾಲು ರೋಗ ನಿವಾರಣೆಗಾಗಿ ಸಾಮೂಹಿಕ ಮಾತ್ರೆ ನುಂಗಿಸುವ ಕಾರ್ಯಕ್ರಮವನ್ನು ನ. 27 ರಿಂದ ಡಿಸೆಂಬರ್. 04 ರವರೆಗೆ ಜಿಲ್ಲೆಯ ಕೊಪ್ಪಳ ತಾಲೂಕಿನ ಕಿನ್ನಾಳ, ಕುಷ್ಟಗಿ ತಾಲೂಕಿನ ತಾವರಗೇರಾ ಮತ್ತು ಹನುಮಸಾಗರ ಗ್ರಾಮಗಳಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ತಿಳಿಸಿದ್ದಾರೆ.
    ಆನೆಕಾಲು ರೋಗ ನಿವಾರಣೆಗಾಗಿ ಸಾಮೂಹಿಕ ಮಾತ್ರೆ ನುಂಗಿಸುವ ಕಾರ್ಯಕ್ರಮ ದಿನದಂದು ಆರೋಗ್ಯ ಇಲಾಖೆಯವರು ಸಂಬಂಧಪಟ್ಟ ಗ್ರಾಮಗಳಲ್ಲಿನ ಮನೆ-ಮನೆಗೆ ಹಾಗೂ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಖದ್ದಾಗಿ ಡಿ.ಇ.ಸಿ ಹಾಗೂ ಅಲ್ಬೆಂಡಾಜೋಲ್ ಮಾತ್ರೆಗಳನ್ನು ಉಚಿತವಾಗಿ ನೀಡುವರು.  ಈ ಮಾತ್ರೆಗಳು ಅತ್ಯಂತ ಸುರಕ್ಷಿತವಾಗಿದ್ದು, ಯಾವುದೇ ತೀವ್ರತರನಾದ ಅಡ್ಡ ಪರಿಣಾಮಗಳು ಇರುವುದಿಲ್ಲ.  ಡಿ.ಇ.ಸಿ ಹಾಗೂ ಅಲ್ಬೆಂಡಾಜೋಲ್ ಮಾತ್ರೆಗಳನ್ನು ಗ್ರಾಮಗಳಲ್ಲಿರುವ ಪ್ರತಿಯೊಬ್ಬರು ಸೇವಿಸಿ ಆನೆಕಾಲು ರೋಗದಿಂದ ಪಾರಾಗಲು ಸಹಕರಿಸಬೇಕು. 
    ಆನೆಕಾಲು ರೋಗ ಒಂದು ಭಯಂಕರ ರೋಗವಾಗಿದ್ದು, ಒಮ್ಮೆ ಈ ರೋಗದಿಂದ ಪೀಡಿತರಾದರೆ ಈ ರೋಗವನ್ನು ವಾಸಿ ಮಾಡಲು ಸಾಧ್ಯವಿಲ್ಲ.  ಕೊಪ್ಪಳ ತಾಲೂಕಿನ ಕಿನ್ನಾಳ, ಕುಷ್ಟಗಿ ತಾಲೂಕಿನ ತಾವರಗೇರಾ ಮತ್ತು ಹನುಮಸಾಗರ ಗ್ರಾಮಗಳನ್ನು ಆನೆಕಾಲು ರೋಗದ ಹೈರಿಸ್ಕ್ ವಲಯವೆಂದು ಪರಿಗಣಿಸಿದ್ದು, ಈ ಗ್ರಾಮಗಳಲ್ಲಿ ವಾಸಿಸುವ ವ್ಯಕ್ತಿಗಳು ಮೇಲ್ನೋಟಕ್ಕೆ ಆರೋಗ್ಯವಂತರಾಗಿ ಕಂಡರೂ ಕೂಡ ಅವರುಗಳ ದೇಹದಲ್ಲಿ ಈ ರೋಗವನ್ನು ಉಂಟುಮಾಡುವ ರೋಗಾಣುಗಳು ಇರುವ ಸಾಧ್ಯತೆ ಅಧಿಕವಾಗಿರುತ್ತದೆ.   ಆನೆಕಾಲು ರೋಗ ಕ್ಯುಲೆಕ್ಸ್ ಜಾತಿಯ ಸೋಂಕಿತ ಸೊಳ್ಳೆಯ ಕಚ್ಚುವಿಕೆಯಿಂದ ಹರಡುತ್ತದೆ.  ಸೋಂಕಿತ ಸೊಳ್ಳೆ ಕಚ್ಚಿದ ವ್ಯಕ್ತಿಗಳಲ್ಲಿ 06 ರಿಂದ 08 ವರ್ಷಗಳ ನಂತರ ರೋಗಲಕ್ಷಣಗಳು ಕಾಣಿಸಿಕೊಳ್ಳುವುದರಿಂದ ರೋಗವನ್ನು ಶೀಘ್ರವಾಗಿ ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ. 
    ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ರಾಜ್ಯ ಮಟ್ಟದ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದ ಸಹಯೋಗದಲ್ಲಿ ಜಿಲ್ಲೆಯಾದ್ಯಂತ ನಡೆದ ಆನೆಕಾಲು ರೋಗದ ರಾತ್ರಿ ರಕ್ತಲೇಪನ ಸಮೀಕ್ಷೆಯಲ್ಲಿ ಕೊಪ್ಪಳ ತಾಲೂಕಿನ ಕಿನ್ನಾಳ ಹಾಗೂ ಕುಷ್ಟಗಿ ತಾಲೂಕಿನ ತಾವರಗೇರಾ ಮತ್ತು ಹನುಮಸಾಗರ ಗ್ರಾಮಗಳಲ್ಲಿ ಆನೆಕಾಲು ರೋಗವನ್ನುಂಟು ಮಾಡುವ ರೋಗಾಣುಗಳು ನಿಗದಿತ ಪ್ರಮಾಣಕ್ಕಿಂತ ಹೆಚ್ಚಿಗೆ ಇರುವುದು ಪ್ರಯೋಗಾಲಯ ಪರೀಕ್ಷೆಯಲ್ಲಿ ಖಚಿತಪಟ್ಟಿರುತ್ತದೆ.  ಈ ಹಿನ್ನೆಲೆಯಲ್ಲಿ ಈ ಮೂರೂ ಗ್ರಾಮಗಳಲ್ಲಿರುವ ಪ್ರತಿಯೊಬ್ಬರು ಆರೋಗ್ಯ ಇಲಾಖೆಯ ವತಿಯಿಂದ ನೀಡುವ ಡಿ.ಇ.ಸಿ ಹಾಗೂ ಅಲ್ಬೆಂಡಾಜೋಲ್ ಮಾತ್ರೆಗಳನ್ನು ತಪ್ಪದೇ ಸೇವಿಸಿ, ಆನೆಕಾಲು ರೋಗದಿಂದ ಮುಕ್ತರಾಗಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ನ. 27 ರಂದು ಕೊಪ್ಪಳದಲ್ಲಿ ಸಫಾಯಿ ಕರ್ಮಚಾರಿಗಳ/ ಪೌರಕಾರ್ಮಿಕರ ಕುಂದುಕೊರತೆ ಸಭೆ


ಕೊಪ್ಪಳ ನ. 24 (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ಬೆಂಗಳೂರು ಇವರಿಂದ ಸಫಾಯಿ ಕರ್ಮಚಾರಿಗಳ/ ಪೌರಕಾರ್ಮಿಕರ ಕುಂದುಕೊರತೆ ಸಭೆಯನ್ನು ನ. 27 ರಂದು ಮಧ್ಯಾಹ್ನ 12-00 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. 
    ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷರಾದ ಎಂ.ಆರ್. ವೆಂಕಟೇಶ್ ಅವರು ಸಭೆಯ ಅಧ್ಯಕ್ಷತೆ ವಹಿಸುವರು.  ಸಭೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಚ್ಛತಾ ಕಾರ್ಮಿಕರ, ಗುತ್ತಿಗೆ ಪೌರ ಕಾರ್ಮಿಕರ, ಮತ್ತು ಖಾಯಂ ಪೌರಕಾರ್ಮಿಕರ ಸಂಖ್ಯೆ, ಕಾರ್ಮಿಕ ಕಾಯ್ದೆಯಂತೆ ಕನಿಷ್ಠ ವೇತನ ಜಾರಿ, ಪಿ.ಎಫ್ ಮತ್ತು ಇ.ಎಸ್.ಐ  ಕುರಿತ ದಾಖಲೆಗಳ ಪರಿಶೀಲನೆ, ಸಫಾಯಿ ಕರ್ಮಚಾರಿಗಳ ಗುರುತಿನ ಚೀಟಿ, ಸಫಾಯಿ ಕರ್ಮಚಾರಿಗಳಿಗೆ ಪರಿಕರಗಳನ್ನು ನೀಡುತ್ತಿರುವ ಕುರಿತು, ಆರೋಗ್ಯ ತಪಾಸಣೆ ಮಾಡಿಸಿರುವ ಬಗ್ಗೆ ವಿವರ, ಪುನರ್ವಸತಿ ಯೋಜನೆ ಅನುಷ್ಠಾನ ಕುರಿತು ಪ್ರಗತಿ ಪರಿಶಿಲನೆ, ಪಿ.ಇ.ಎಂ.ಎಸ್ & ಆ್ಯಕ್ಟ್ 2013 ರ ಅನುಷ್ಠಾನ ಕುರಿತು ಪ್ರಗತಿ ಪರಿಶೀಲನೆ, ಸಫಾಯಿ ಕರ್ಮಚಾರಿಗಳ ಬಗ್ಗೆ ಕುಂದು ಕೊರತೆಗಳ ಬಗ್ಗೆ ವಿಚಾರಣೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ತಿಳಿಸಿದ್ದಾರೆ. 

ಭಾಗ್ಯನಗರ : ವಿವಿಧ ತರಬೇತಿಗಳಿಗೆ ಅರ್ಜಿ ಆಹ್ವಾನ


ಕೊಪ್ಪಳ ನ. 24 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕಿನ ಭಾಗ್ಯನಗರ ಪಟ್ಟಣ ಪಂಚಾಯತ ವತಿಯಿಂದ ಪ್ರಸಕ್ತ ಸಾಲಿನ ದೀನದಯಾಳ್ ಅಂತ್ಯೋದಯ ಯೋಜನೆ ನಲ್ಮ್ (ಡೇ-ನಲ್ಮ್) ಅಭಿಯಾನದಡಿ ಕೌಶಲ್ಯ ತರಬೇತಿ ಮೂಲಕ ಉದ್ಯೋಗ ಮತ್ತು ಸ್ಥಳ ನಿಯುಕ್ತಿ ಉಪಘಟಕದಡಿ ವಿವಿಧ ಸರ್ಕಾರಿ ಸ್ವಾಮ್ಯದ ತರಬೇತಿ ಸಂಸ್ಥೆಗಳ ಮೂಲಕ ಭಾಗ್ಯನಗರ ವ್ಯಾಪ್ತಿಯಲ್ಲಿ ಅಭ್ಯರ್ಥಿಗಳಿಗೆ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
    ದೀನದಯಾಳ್ ಅಂತ್ಯೋದಯ ಯೋಜನೆ ನಲ್ಮ್ (ಡೇ-ನಲ್ಮ್) ಅಭಿಯಾನದಡಿ ಕೌಶಲ್ಯ ತರಬೇತಿ ಮೂಲಕ ಉದ್ಯೋಗ ಮತ್ತು ಸ್ಥಳ ನಿಯುಕ್ತಿ ಉಪಘಟಕದಡಿ ವಿವಿಧ ಸರ್ಕಾರಿ ಸ್ವಾಮ್ಯದ ತರಬೇತಿ ಸಂಸ್ಥೆಗಳ ಮೂಲಕ ಕೈಮಗ್ಗ ಮತ್ತು ಜವಳಿ ಇಲಾಖೆ ಅಡಿಯಲ್ಲಿ ಸೆವಿಂಗ್ ಮಷಿನ್ ಆಪರೇಟರ್ – 15, ಹಾಗೂ ಸ್ಪೆಷಲಿಸ್ಟ್ ಸೆವಿಂಗ್ ಮಷಿನ್ ಆಪರೇಟರ್ – 24 ಸೇರಿದಂತೆ ಒಟ್ಟು 39 ಅಭ್ಯರ್ಥಿಗಳಿಗೆ ತರಬೇತಿ ನೀಡಲು ಉದ್ದೇಶಿಸಲಾಗಿದೆ. 
    ಅರ್ಜಿ ಸಲ್ಲಿಸಲು ಕನಿಷ್ಠ 5ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.  ಅರ್ಹ ಅಭ್ಯರ್ಥಿಗಳು ಜಾತಿ ಪ್ರಮಾಣಪತ್ರ, ಪ್ರಸಕ್ತ ಸಾಲಿನ ಆದಾಯ ಪ್ರಮಾಣ ಪತ್ರ,  ವಿದ್ಯಾರ್ಹತೆ ಪ್ರಮಾಣ ಪತ್ರ, ಮತದಾರರ ಭಾವಚಿತ್ರವಿರುವ ಗುರುತಿನ ಚೀಟಿ, ಆಧಾರ ಕಾರ್ಡ್ ಇತ್ಯಾದಿ ದಾಖಲೆಗಳನ್ನು ಕಡ್ಡಾಯವಾಗಿ ದೃಢೀಕರಿಸಿ ಲಗತ್ತಿಸಿ, 2 ಭಾವಚಿತ್ರಗಳೊಂದಿಗೆ ಅರ್ಜಿಯನ್ನು ಡಿಸೆಂಬರ್. 08 ರೊಳಗಾಗಿ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗಾಗಿ ಕಾರ್ಯಾಲಯದ ವೇಳೆಯಲ್ಲಿ ವಿಷಯ ನಿರ್ವಾಹಕರಿಂದ ಪಡೆಯಬಹುದು ಎಂದು ಭಾಗ್ಯನಗರ ಪಟ್ಟಣ ಪಂಚಾಯತ ಮುಖ್ಯಾದಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ನ. 27 ರಂದು ಜಿ.ಪಂ. ಸಾಮಾನ್ಯ ಸಭೆ


ಕೊಪ್ಪಳ ನ. 24 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಪಂಚಾಯತಿ ಸಾಮಾನ್ಯ ಸಭೆ ನ. 27 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತಿಯ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ನಡೆಯಲಿದೆ. 
      ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯತಿ ಅಧ್ಯಕ್ಷ ರಾಜಶೇಖರ ಹಿಟ್ನಾಳ ಅವರು ವಹಿಸುವರು.  ಸಭೆಯಲ್ಲಿ ವಸತಿ ನಿಲಯ ಹಾಗೂ ವಸತಿ ಶಾಲೆಗಳ ನಿರ್ವಹಣೆ, ಬಹುಗ್ರಾಮ ಕುಡಿಯುವ ನೀರು ಯೋಜನೆಗಳು ಮತ್ತು ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಸೇರಿದಂತೆ ವಿವಿಧ ಇಲಾಖೆಗಳ ಯೋಜನೆಗಳ ಕುರಿತು ಚರ್ಚೆ ನಡೆಯಲಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ತಿಳಿಸಿದ್ದಾರೆ.

ಡಿಸೆಂಬರ್. 12 ರಂದು ಕೊಪ್ಪಳ ತಾ.ಪಂ ಸಾಮಾನ್ಯ ಸಭೆ


ಕೊಪ್ಪಳ ನ. 24 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕಾ ಪಂಚಾಯತಿ ಸಾಮಾನ್ಯ ಸಭೆ ಡಿಸೆಂಬರ್. 12 ರಂದು ಬೆಳಿಗ್ಗೆ 10-30 ಗಂಟೆಗೆ ತಾಲೂಕ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
    ಕೊಪ್ಪಳ ತಾಲೂಕ ಪಂಚಾಯತ್ ಸಾಮಾನ್ಯ ಸಭೆಯನ್ನು ತಾ.ಪಂ ಅಧ್ಯಕ್ಷ ಬಾಲಚಂದ್ರನ ಅವರ ಅಧ್ಯಕ್ಷತೆಯಲ್ಲಿ ಡಿ. 12 ರಂದು ಬೆಳಿಗ್ಗೆ 10-30 ಗಂಟೆಗೆ ಜರುಗಲಿದ್ದು, ಕೊಪ್ಪಳ ತಾಲೂಕ ಮಟ್ಟದ ಎಲ್ಲಾ ಅನುಷ್ಠಾನಾಧಿಕಾರಿಗಳು ತಪ್ಪದೇ ಸಭೆಗೆ ಹಾಜರಾಗಬೇಕು.  ಸೆಪ್ಟೆಂಬರ್ ತಿಂಗಳ ಅಂತ್ಯದ ವರೆಗೆ ತಮ್ಮ ಇಲಾಖಾ ಪ್ರಗತಿ ವರದಿಯ ಪ್ರತಿಗಳನ್ನು ಡಿ. 01 ರೊಳಗಾಗಿ ಕಾಯಾಲಯಕ್ಕೆ ಸಲ್ಲಿಸಬೇಕು ಎಂದು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ ತಿಳಿಸಿದ್ದಾರೆ.

ನೇರ ನಗದು ವರ್ಗಾವಣೆ ವ್ಯವಸ್ಥೆಯಿಂದ ಅಕ್ರಮಗಳಿಗೆ ಕಡಿವಾಣ : ಕರಡಿ ಸಂಗಣ್ಣ

ಕೊಪ್ಪಳ ನ. 24 (ಕರ್ನಾಟಕ ವಾರ್ತೆ): ಸರ್ಕಾರದಿಂದ ರೈತರು ಹಾಗೂ ಇತರೆ ಯೋಜನೆ ಫಲಾನುಭವಿಗಳಿಗೆ ನೀಡಲಾಗುವ ಸಹಾಯಧನವನ್ನು ನೇರ ನಗದು ವರ್ಗಾವಣೆ ವ್ಯವಸ್ಥೆಯಲ್ಲಿ ಆಯಾ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಿರುವುದರಿಂದ ಅಕ್ರಮಗಳಿಗೆ ಕಡಿವಾಣ ಹಾಕಿದಂತಾಗಿದೆ ಎಂದು ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು ಹೇಳಿದರ
 
    ಧಾರವಾಡ-ವಿಜಯಪುರ ಕೇತ್ರ ಪ್ರಚಾರ ನಿರ್ದೇಶನಾಲಯ,  ಬೆಂಗಳೂರು ಸಂಗೀತ ಮತ್ತು ನಾಟಕ ವಿಭಾಗ, ಕೊಪ್ಪಳ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಪಶುಪಾಲನ ಇಲಾಖೆ, ಕೃಷಿ ವಿಸ್ತರಣಾ ಮತ್ತು ಶಿಕ್ಷಣ ಕೇಂದ್ರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಹಲಗೇರಿ ಗ್ರಾಮ ಪಂಚಾಯತ ಸಹಯೋಗದಲ್ಲಿ “ಕೃಷಿ ಮತ್ತು ರೈತ ಕಲ್ಯಾಣ ಯೋಜನೆಗಳ ಕುರಿತು ಹಲಗೇರಿ ಗ್ರಾಮದ ಶಾಂಭವಿ ದೇವಸ್ಥಾನದ ಆವರಣದಲ್ಲಿ ಶುಕ್ರವಾರಂದು ಹಮ್ಮಿಕೊಳ್ಳಲಾಗಿದ್ದ, ವಿಶೇಷ ಜನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  
 
    ರಾಜ್ಯದ ಸುಮಾರು 13 ಲಕ್ಷ ಮಂದಿ ರೈತರು ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯಲ್ಲಿ ಪ್ರೀಮಿಯಮ್ ಹಣ ತುಂಬಿದ್ದಾರೆ.  ಇದೀಗ ರೈತರು ವಿಮಾ ಲಾಭವನ್ನು ಪಡೆಯುತ್ತಿರುವುದು ರೈತರ ಬಾಳಿಗೆ ಸಂಜೀವಿನಿಯಾಗಿದೆ  ಕೊಪ್ಪಳ ಜಿಲ್ಲೆಯಲ್ಲಿ ಸುಮಾರು 57 ಕೋಟಿ ರೂ. ವಿಮಾ ಹಣವನ್ನು ರೈತರ ಖಾತೆಗೆ ಜಮಾ ಮಾಡಲಾಗಿದೆ.  ಗೊಬ್ಬರ, ಯಂತ್ರೋಪಕರಣಗಳ ಖರೀದಿಗೆ ಕೇಂದ್ರ ಸರಕಾರದ ವತಿಯಿಂದ ಸಹಾಯಧನವನ್ನು ನೀಡಲಾಗುತ್ತಿದ್ದು, ಹೆಚ್ಚು ಹೆಚ್ಚು ರೈತರು ಇದರ ಲಾಭ ಪಡೆದುಕೊಳ್ಳಬೇಕು.  ಭೂಮಿಯ ಫಲವತ್ತತೆಯನ್ನು ಕಾಪಾಡಲು ರೈತರು ರಸಗೊಬ್ಬರ ಬಳಕೆಯನ್ನು ಕಡಿಮೆ ಮಾಡಿ, ಸಾವಯವ ಕೃಷಿಯ ಕಡೆಗೆ ಹೆಚ್ಚಿನ ಆದ್ಯತೆ ನೀಡಬೇಕು.  ಕೇಂದ್ರ ಸರ್ಕಾರದ ಸುಕನ್ಯಾ ಸಮೃದ್ಧಿ ಯೋಜನೆ, ಪ್ರಧಾನ ಮಂತ್ರಿ ಮುದ್ರಾ ಯೋಜನೆ, ಕೌಶಲ್ಯ, ಉದ್ಯೋಗ ಮತ್ತು ಸಬಲೀಕರಣ ಸೇರಿದಂತೆ ಹಲವಾರು ಯೋಜನೆಗಳ ಸವಲತ್ತು ಪಡೆಯಬೇಕು. ರೈತ ಮಹಿಳೆಯರ ಆರೋಗ್ಯ ಸುಧಾರಣೆಗಾಗಿ ಕಟ್ಟಿಗೆಯಿಂದ ಅಡುಗೆ ಮಾಡುವುದನ್ನು ತಪ್ಪಿಸಲು ಉಜ್ವಲ ಯೋಜನೆಯ ಮೂಲಕ ಕೊಪ್ಪಳ ಜಿಲ್ಲೆಯಲ್ಲಿ 8,000 ಮಹಿಳೆಯರಿಗೆ ಉಚಿತ ಎಲ್.ಪಿ.ಜಿ ಸೌಲಭ್ಯ ನೀಡಲಾಗಿದೆ ಎಂದು ಹೇಳಿದ ಸಂಸದ ಕರಡಿ ಸಂಗಣ್ಣ ಅವರು ರೈತರಿಗೆ ರಾಜ್ಯ ಸರ್ಕಾರದ ಕೃಷಿ ಭಾಗ್ಯ ಯೋಜನೆಯಡಿ ಡೀಸೆಲ್ ಪಂಪ್‍ಸೆಟ್ ಅನ್ನು ಇದೇ ಸಂದರ್ಭದಲ್ಲಿ ವಿತರಣೆ ಮಾಡಿದರು.
    ಕೊಪ್ಪಳ ಕೃಷಿ ಇಲಾಖೆ ಜಂಟಿ ನಿರ್ದೇಶಕ ವೀರೇಶ ಹುನಗುಂದ ಅವರು ಮಾತನಾಡಿ, ಪ್ರಸಕ್ತ ಸಾಲಿನಲ್ಲಿ 27322 ರೈತರಿಗೆ ಮಣ್ಣು ಆರೋಗ್ಯ ಚೀಟಿ ವಿವರ ನೀಡಲಾಗಿದ್ದು, ಇದರಿಂದ ರೈತರಿಗೆ ತಮ್ಮ ಭೂಮಿಯ ಫಲವತ್ತತೆ ಬಗ್ಗೆ ನಿಖರ ಮಾಹಿತಿ ಸಿಗಲಿದೆ.  ಇದರ ಆಧಾರದ ಮೇಲೆ ಸೂಕ್ತ ಬೆಳೆಯನ್ನು ಹಾಕುವುದರಿಂದ ಖರ್ಚು ಕಡಿಮೆಯಾಗಿ ಇಳುವರಿ ಹೆಚ್ಚಾಗಿ ರೈತನ ಆದಾಯ ಹೆಚ್ಚಾಗಲಿದೆ ಎಂದರು.  
    ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ. ಟಿ. ವೇಣುಗೋಪಾಲ ಅವರು ಮಾತನಾಡಿ, “ಪಶುಭಾಗ್ಯ ಯೋಜನೆ” ಅಡಿಯಲ್ಲಿ 2 ಆಕಳು ಅಥವಾ 2 ಎಮ್ಮೆಗಳ ಹೈನುಗಾರಿಕೆ ಘಟಕ ನೀಡಲಾಗುತ್ತಿದೆ.  ಕುಕ್ಕಟ ಘಟಕಕ್ಕೆ 500 ಕೋಳಿ, ವಿಶೇಷವಾಗಿ 2017-18ನೇ ಸಾಲಿನಲ್ಲಿ ವಿವಿಧ ಯೋಜನೆಗಳಡಿ ಜಿಲ್ಲೆಗೆ 516 ಫಲಾನುಭವಿಗಳ ಗುರಿ ನಿಗದಿಪಡಿಸಲಾಗಿದೆ.  ಆಕಸ್ಮಿಕವಾಗಿ ಮರಣಿಸಿದ ಕುರಿ ಅಥವಾ ಮೇಕೆಗಳಿಗೆ ಪರಿಹಾರವಾಗಿ ಇಲಾಖೆ ವತಿಯಿಂದ ಪ್ರತಿ ಕುರಿಗೆ ರೂ. 5,000 ಗಳಂತೆ ಪರಿಹಾರ ಧನವನ್ನು ವಿತರಿಸಲಾಗುತ್ತಿದೆ.  ದನ ಅಥವಾ ಎಮ್ಮೆಗಳಿಗೆ ರೂ. 10,000 ಗಳಂತೆ ಪರಿಹಾರ ಧನವನ್ನು ನೀಡಲಾಗುತ್ತಿದೆ ಎಂದರು.  
    ತೋಟಗಾರಿಕೆ ಇಲಾಖೆಯ ವಾಮನಮೂರ್ತಿ ಮತ್ತು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಪ್ರದೀಪ ಬಿರಾದರ ಅವರ ತಮ್ಮ ಇಲಾಖೆಗಳಿಂದ ಬರುವ ಸರ್ಕಾರದ ಯೋಜನೆಗಳ ಕುರಿತು ರೈತರಿಗೆ ಮಾಹಿತಿ ನೀಡಿದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಲಗೇರಿ ಗ್ರಾಮ ಪಂಚಾಯತ ಅಧ್ಯಕ್ಷ ದೇವಪ್ಪ ಬಸಪ್ಪ ಓಜಿನಹಳ್ಳಿ ಅವರು ವಹಿಸಿದ್ದರು.  ತಾ.ಪಂ ಸದಸ್ಯೆ ಲಕ್ಷ್ಮೀದೇವಿ ಅಶೋಕ ಅಬ್ಬಿಗೇರಿ ಸೇರಿದಂತೆ ಹಲಗೇರಿ ಗ್ರಾಮ ಪಂಚಾಯತಿಯ ಉಪಾಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.  
     ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ನಾಗರೀಕರು ಜಾಗೃತಿ ಜಾಥಾ ನಡೆಸಿದರು.  ಕೃಷಿ ಇಲಾಖೆಯಿಂದ ನಾಲ್ಕು ಮಂದಿ ಫಲಾನುಭವಿಗಳಿಗೆ ಕೃಷಿ ಭಾಗ್ಯ ಯೋಜನೆಯಡಿ ಡಿಸೆಲ್ ಪಂಪ್‍ಸೆಟ್ ವಿತರಿಸಲಾಯಿತು.  ಕೇತ್ರ ಪ್ರಚಾರ ನಿರ್ದೇಶನಾಲಯದ ಉಪ ನಿರ್ದೇಶಕ ಕೆ.ಪಿ. ರಾಜೀವನ್ ಪ್ರಾಸ್ತಾವಿಕವಾಗಿ ಮಾತನಾಡಿದರು.  ಮುರಳಿಧರ್ ಖಾರಬಾರಿ ಕಾರ್ಯಕ್ರಮ ನಿರೂಪಿಸಿದರು.  ಸಿ.ಕೆ. ಸುರೇಶ ಸ್ವಾಗತಿಸಿದರು.  ಹಲಗೇರಿ ಗ್ರಾಮ ಪಂಚಾಯತ ಪಿಡಿಒ ಅಶೋಕ ರಾಂಪೂರ ಕೊನೆಯಲ್ಲಿ ವಂದಿಸಿದರು. 

Thursday, 23 November 2017

ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ಅಧ್ಯಕ್ಷರ ಪ್ರವಾಸ ಕಾರ್ಯಕ್ರಮ


ಕೊಪ್ಪಳ ನ. 23 (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗವು ನ. 26 ಮತ್ತು 27 ರಂದು ಎರಡು ದಿನಗಳ ಕಾಲ ಕೊಪ್ಪಳ ಜಿಲ್ಲಾ ಪ್ರವಾಸವನ್ನು ಹಮ್ಮಿಕೊಂಡಿದೆ. 
    ಆಯೋಗದ ಅಧ್ಯಕ್ಷರಾದ ಎಂ.ಆರ್ ವೆಂಕಟೇಶ್, ಸದಸ್ಯರುಗಳಾದ ಜೆ.ಕೆ. ಮೀನಾಕ್ಷಮ್ಮ ಹಾಗೂ ಗೋಕುಲನಾರಾಯಣಸ್ವಾಮಿ ಮತ್ತು ಕಾರ್ಯದರ್ಶಿಗಳನ್ನು ಒಳಗೊಂಡ ಆಯೋಗವು ನ. 26 ರಂದು ಬೆಳಿಗ್ಗೆ 7-30 ಗಂಟೆಗೆ ಗಂಗಾವತಿಗೆ ಆಗಮಿಸಿ,  ನಗರಸಭೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಫಾಯಿ ಕರ್ಮಚಾರಿಗಳ/ ಸ್ವಚ್ಛತಾ ಕೆಲಸಗಾರರ ಕುಂದುಕೊರತೆಗಳ ವಿಚಾರಣೆ ನಡೆಸಲಿದೆ.  ನಂತರ ಕೊಪ್ಪಳಕ್ಕೆ ಆಗಮಿಸಿ ವಾಸ್ತವ್ಯ ಮಾಡಲಿದೆ. 
          ನ. 27 ರಂದು ಬೆಳಿಗ್ಗೆ 9-30 ಗಂಟೆಗೆ ಸಫಾಯಿ ಕರ್ಮಚಾರಿಗಳ ಕಾಲೋನಿ ಭೇಟಿ, 10-30 ಕ್ಕೆ ನಗರ ಸ್ಥಳೀಯ ಸಂಸ್ಥೆ ಮತ್ತು ಇತರೆ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಫಾಯಿ ಕರ್ಮಚಾರಿಗಳ/ ಪೌರಕಾರ್ಮಿಕರ ನೇರ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ.  ಮಧ್ಯಾಹ್ನ. 12 ಗಂಟೆಗೆ ಕೊಪ್ಪಳ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸಫಾಯಿ ಕರ್ಮಚಾರಿಗಳ/ ಪೌರಕಾರ್ಮಿಕರ ಕುಂದುಕೊರತೆಗಳ ಸಭೆ ಹಾಗೂ 2-30 ಕ್ಕೆ ಪತ್ರಿಕಾ ಗೋಷ್ಠಿಯನ್ನು ನಡೆಸಲಿದೆ.  ನಂತರ ಆಯೋಗವು ಸಂಜೆ 5 ಗಂಟೆಗೆ ಗದಗ ಜಿಲ್ಲೆಗೆ ಪ್ರಯಾಣ ಬೆಳೆಸಲಿದೆ ಎಂದು ಆಯೋಗದ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ಅಧಿಕಾರ ಸ್ವೀಕಾರ


ಕೊಪ್ಪಳ ನ. 23 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಗೃಹರಕ್ಷಕದಳದ ನೂತನ ಸಮಾದೇಷ್ಟರಾಗಿ ವಕೀಲರಾದ ಹನುಮಂತರಾವ್ ಎ. ಅವರು ಅಧಿಕಾರ ಸ್ವೀಕರಿಸಿದ್ದಾರೆ. 
    ಕೊಪ್ಪಳ ಜಿಲ್ಲಾ ಗೃಹರಕ್ಷಕದಳದ ನೂತನ ಸಮಾದೇಷ್ಟರಾಗಿ ವಕೀಲರಾದ ಹನುಮಂತರಾವ್ ಎ. ಅವರು ನೇಮಕಗೊಂಡಿದ್ದು, ಇವರು ಕಳೆದ ಅ. 30 ರಂದು ಅಧಿಕಾರವನ್ನು ವಹಿಸಿಕೊಂಡಿರುತ್ತಾರೆ. ಅವರಿಗೆ ಜಿಲ್ಲೆಯ ಗೃಹರಕ್ಷಕ ಅಧಿಕಾರಿಗಳು, ಗೃಹರಕ್ಷಕ ದಳದ ಎಲ್ಲ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. 

ಕೊಪ್ಪಳ ನಗರಸಭೆ ವತಿಯಿಂದ ವಿವಿಧ ಯೋಜನೆ : ಅರ್ಜಿ ಆಹ್ವಾನ


ಕೊಪ್ಪಳ ನ. 23 (ಕರ್ನಾಟಕ ವಾರ್ತೆ): ಕೊಪ್ಪಳ ನಗರಸಭೆ ವತಿಯಿಂದ ಪ್ರಸಕ್ತ ಸಾಲಿನ ದೀನದಯಾಳ್ ಅಂತ್ಯೋದಯ ಯೋಜನೆಯ-ನಲ್ಮ್ ಅಭಿಯಾನದಡಿ ಸ್ವಯಂ ಉದ್ಯೋಗ ಹಾಗೂ ಗುಂಪು (ಕ್ರೆಡಿಟ್ ಲಿಂಕೇಜ್) ಉದ್ಯೋಗದ ಸಾಲಕ್ಕಾಗಿ ಮತ್ತು ವಿವಿಧ ತರಬೇತಿಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
    ದೀನದಯಾಳ್ ಅಂತ್ಯೋದಯ ಯೋಜನೆಯ-ನಲ್ಮ್ ಅಭಿಯಾನದಡಿ ಸ್ವಯಂ ಉದ್ಯೋಗ ಹಾಗೂ ಗುಂಪು (ಕ್ರೆಡಿಟ್ ಲಿಂಕೇಜ್) ಉದ್ಯೋಗದ ಸಾಲಕ್ಕಾಗಿ ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ಇರುವ ಹಾಗೂ ನಗರಸಭೆ ಕಾರ್ಯಾಲಯದಿಂದ ರಚಿಸಿರುವ 04 ಗುಂಪುಗಳಿಗೆ ಮಾತ್ರ ಗುಂಪು ಸಾಲಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ (ಶೇ.7 ಕ್ಕೆ ಮೇಲ್ಪಟ್ಟು ಬಡ್ಡಿದರಕ್ಕೆ ಸಂಬಂಧಿಸಿದಂತೆ ಬಡ್ಡಿ ಸಹಾಯಧನವು ಲಭ್ಯವಿರುತ್ತದೆ.  ಹಾಗೂ ಸಾಲವನ್ನು ಸಕಾಲಕ್ಕೆ ಮರು ಪಾವತಿಸುವ ಎಲ್ಲಾ ಸ್ವಸಹಾಯ ಗುಂಪುಗಳಿಗೆ ಹೆಚ್ಚುವರಿಯಾಗಿ ಶೇ.3 ರಷ್ಟು ಬಡ್ಡಿ ಸಹಾಯಧನ ನೀಡಲಾಗುವುದು.) ಅಲ್ಲದೆ  ವಿವಿಧ ತರಬೇತಿಗಳಿಗೂ ಅರ್ಜಿ ಆಹ್ವಾನಿಸಿದೆ.
    ಅರ್ಜಿಯನ್ನು ಕೊಪ್ಪಳ ನಗರಸಭೆ ಕಾರ್ಯಾಲಯದ ವಿಷಯ ನಿರ್ವಾಹಕರಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ, ಜಾತಿ ಪ್ರಮಾಣ ಪತ್ರ, ಪ್ರಸಕ್ತ ಸಾಲಿನ ಆದಾಯ ಪ್ರಮಾಣ ಪತ್ರ, ವಿದ್ಯಾರ್ಹತೆ ಪ್ರಮಾಣ ಪತ್ರ, ಭಾವಚಿತ್ರವಿರುವ ಮತದಾರರ ಚೀಟಿ ಅಥವಾ ಆಧಾರ ಕಾರ್ಡ್, 03 ಭಾವಚಿತ್ರ, ಬಿ.ಪಿ.ಎಲ್ ರೇಷನ್ ಕಾರ್ಡ್ ಇತ್ಯಾದಿ ದಾಖಲೆ ಲಗತ್ತಿಸಿ ಡಿಸೆಂಬರ್. 04 ರೊಳಗಾಗಿ   ಸಲ್ಲಿಸಬೇಕು ಎಂದು ಕೊಪ್ಪಳ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ಹಿಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ ಬೆಳೆವಿಮೆ ನೊಂದಾಯಿಸಿಕೊಳ್ಳಲು ಸೂಚನೆ


ಕೊಪ್ಪಳ ನ. 23 (ಕರ್ನಾಟಕ ವಾರ್ತೆ): ಕೊಪ್ಪಳ ಕೃಷಿ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಹಿಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ ಬೆಳೆವಿಮೆ ನೊಂದಾಯಿಸಿಕೊಳ್ಳುವಂತೆ ರೈತರಿಗೆ ಕೊಪ್ಪಳ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
        ಬೆಳೆ ವಿಮೆಯನ್ನು ಹಿಂಗಾರು ಹಂಗಾಮು ಬೆಳೆಗಳಾದ ಮಳೆ ಆಶ್ರಿತ & ನೀರಾವರಿ ಜೋಳ, ಮಳೆ ಆಶ್ರಿತ ಅಗಸೆ, ಮಳೆ ಆಶ್ರಿತ & ನೀರಾವರಿ ಮುಸಕಿನಜೋಳ, ಮಳೆ ಆಶ್ರಿತ ಕುಸುಮೆ, ಮಳೆ ಆಶ್ರಿತ & ನೀರಾವರಿ ಸೂರ್ಯಕಾಂತಿ ಮತ್ತು ಮಳೆ ಆಶ್ರಿತ ಅಗಸಿ ಬೆಳೆಗಳನ್ನು ಅಧಿಸೂಚಿಸಲಾಗಿದ್ದು, ನ. 30 ರೊಳಗೆ ನೋಂದಾಯಿಸಿಕೊಳ್ಳಬೇಕು.  ಮಳೆ ಆಶ್ರಿತ ಗೋಧಿ ಬೆಳೆಗೆ ಡಿಸೆಂಬರ್. ರೊಳಗೆ, ನೀರಾವರಿ ಗೋಧಿ ಹಾಗೂ ಮಳೆ ಆಶ್ರಿತ & ನೀರಾವರಿ ಕಡಲೆ ಬೆಳೆಗಳಿಗೆ ಡಿಸೆಂಬರ್. 30 ರೊಳಗೆ ನೋಂದಾಯಿಸಿಕೊಳ್ಳಬೇಕು.  ಬೇಸಿಗೆ ಹಂಗಾಮು ಬೆಳೆಗಳಾದ ನೀರಾವರಿ ಶೇಂಗಾ, ಭತ್ತ ಮತ್ತು ಸೂರ್ಯಕಾಂತಿ ಬೆಳೆಗಳನ್ನು 2018 ರ ಫೆಬ್ರವರಿ. 28 ರೊಳಗೆ ಬೆಳೆವಿಮೆಗಾಗಿ ನೋಂದಾಯಿಸಿಕೊಳ್ಳಬೇಕು.  ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಎಲ್ಲಾ ವರ್ಗದ ರೈತರು ಪಾಲ್ಗೊಂಡು, ಬೆಳೆ ವಿಮೆ ಪ್ರೀಮಿಯಮ್ ತುಂಬಿ ಯೋಜನೆಯ ಪ್ರಯೋಜನೆ ಪಡೆಯಬಹುದಾಗಿದೆ. 
      ಹೆಚ್ಚಿನ ವಿವರಗಳಿಗಾಗಿ ಕೃಷಿ ಇಲಾಖೆ, ಕಂದಾಯ ಇಲಾಖೆ, ಸಹಕಾರಿ ಇಲಾಖೆ, ಸ್ಥಳೀಯ ವಾಣಿಜ್ಯ ಗ್ರಾಮೀಣ ಬ್ಯಾಂಕ್ ಸಿಬ್ಬಂದಿಗಳನ್ನು ಸಂಪರ್ಕಿಸಬಹುದು ಎಂದು ಕೊಪ್ಪಳ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊಪ್ಪಳ ಜಿಲ್ಲಾ ಉಸ್ತುವಾರಿ ಮಂತ್ರಿಗಳ ಪ್ರವಾಸ ಕಾರ್ಯಕ್ರಮ


ಕೊಪ್ಪಳ ನ. 23 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ನ. 24 ರಂದು ಸಂಜೆ 06 ಗಂಟೆಗೆ ಕೊಪ್ಪಳಕ್ಕೆ ಆಗಮಿಸುವರು.  ನಂತರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹೆಚ್‍ಕೆಆರ್‍ಡಿಬಿ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆ ನಡೆಸುವರು.  ಮಂತ್ರಿಗಳು ಅದೇ ದಿನ ರಾತ್ರಿ ಧಾರವಾಡಕ್ಕೆ ಪ್ರಯಾಣ ಬೆಳೆಸುವರು ಎಂದು ಮಂತ್ರಿಗಳ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.

ನ. 24 ರಂದು ಹಲಗೇರಿಯಲ್ಲಿ ವಿಶೇಷ ಜನ ಜಾಗೃತಿ ಕಾರ್ಯಕ್ರಮ


ಕೊಪ್ಪಳ ನ. 23 (ಕರ್ನಾಟಕ ವಾರ್ತೆ): ಧಾರವಾಡ-ವಿಜಯಪುರ ಕೇತ್ರ ಪ್ರಚಾರ ನಿರ್ದೇಶನಾಲಯ,  ಬೆಂಗಳೂರು ಸಂಗೀತ ಮತ್ತು ನಾಟಕ ವಿಭಾಗ, ಕೊಪ್ಪಳ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಪಶುಪಾಲನ ಇಲಾಖೆ, ಕೃಷಿ ವಿಸ್ತರಣಾ ಮತ್ತು ಶಿಕ್ಷಣ ಕೇಂದ್ರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಹಲಗೇರಿ ಗ್ರಾಮ ಪಂಚಾಯತ ಸಹಯೋಗದಲ್ಲಿ “ಕೃಷಿ ಮತ್ತು ರೈತ ಕಲ್ಯಾಣ ಯೋಜನೆಗಳ ಕುರಿತು ವಿಶೇಷ ಜನ ಜಾಗೃತಿ ಕಾರ್ಯಕ್ರಮವನ್ನು ನ. 24 ರಂದು ಬೆಳಿಗ್ಗೆ 10-30 ಗಂಟೆಗೆ ಹಲಗೇರಿ ಗ್ರಾಮದ ಶಾಂಭವಿ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಲಾಗಿದೆ.    
    ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು.  ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ, ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಹಾಗೂ ಜಿಲ್ಲಾ ಪಂಚಾಯತ ಅಧ್ಯಕ್ಷ ರಾಜಶೇಖರ ಹಿಟ್ನಾಳ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವ ಈ ಕಾರ್ಯಕ್ರಮದಲ್ಲಿ  ಹಲಗೇರಿ ಗ್ರಾಮ ಪಂಚಾಯತ ಅಧ್ಯಕ್ಷ ದೇವಪ್ಪ ಬಸಪ್ಪ ಓಜಿನಹಳ್ಳಿ ಅವರು ಅಧ್ಯಕ್ಷತೆ ವಹಿಸುವರು.  ವಿಶೇಷ ಆಹ್ವಾನಿತರಾಗಿ ಜಿ.ಪಂ. ಉಪಾಧ್ಯಕ್ಷೆ ಲಕ್ಷ್ಮಮ್ಮ ಸಿದ್ದಪ್ಪ ನೀರಲೂಟಿ, ಜಿಲ್ಲಾ ಪಂಚಾಯತ ಕೃಷಿ ಮತ್ತು ಕೈಗಾರಿಕ ಸ್ಥಾಯಿ ಸಮಿತಿ ಅಧ್ಯಕ್ಷ ಭೀಮಣ್ಣ ಶರಣಪ್ಪ ಅಗಸಿಮುಂದಿನ, ತಾ.ಪಂ. ಅಧ್ಯಕ್ಷ ಬಾಲಚಂದ್ರನ್, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಶಿವಣ್ಣ ಮೂಲಿಮನಿ, ತಾ.ಪಂ ಉಪಾಧ್ಯಕ್ಷೆ ಶಂಕ್ರಮ್ಮ ಅಮರೇಶ ಉಲಾಪುರ, ಜಿ.ಪಂ ಸದಸ್ಯ ಗವಿಸಿದ್ದಪ್ಪ ಕರಡಿ, ತಾ.ಪಂ ಸದಸ್ಯೆ ಲಕ್ಷ್ಮೀದೇವಿ ಅಶೋಕ ಅಬ್ಬಿಗೇರಿ, ಕೃಷಿ ವಿಸ್ತರಣಾ ಮತ್ತು ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ. ಎಮ್.ಬಿ ಪಾಟೀಲ, ಹಲಗೇರಿ ಗ್ರಾಮ ಪಂಚಾಯತ ಉಪಾಧ್ಯಕ್ಷೆ ಸರ್ವ ಮಂಗಳ ಶರಣಯ್ಯ ಹಾಗೂ ಸರ್ವ ಸದಸ್ಯರು ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.

Wednesday, 22 November 2017

ಪ್ರವಾಸಿ ಟ್ಯಾಕ್ಸಿ ಯೋಜನೆ : ಸಹಾಯಧನಕ್ಕಾಗಿ ಅರ್ಜಿ ಆಹ್ವಾನ


ಕೊಪ್ಪಳ ನ. 22 (ಕರ್ನಾಟಕ ವಾರ್ತೆ): ಪ್ರವಾಸೋದ್ಯಮ ಇಲಾಖೆಯ ಕೊಪ್ಪಳ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಇವರ ವತಿಯಿಂದ 2017-18 ನೇ ಸಾಲಿನಲ್ಲಿ ಪ್ರವಾಸಿ ಟ್ಯಾಕ್ಸಿ ಯೋಜನೆಯಡಿ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ವರ್ಗ ಹಾಗೂ ಎಸ್.ಸಿ.ಪಿ/ ಟಿ.ಎಸ್.ಪಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಕ್ಕೆ ಸೇರಿದ ಅರ್ಹ ವಿದ್ಯಾವಂತ ನಿರುದ್ಯೋಗಿ ಅಭ್ಯರ್ಥಿಗಳಿಗೆ ಪ್ರವಾಸಿ ಟ್ಯಾಕ್ಸಿ ಖರೀದಿಸಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.  
    ಪ್ರವಾಸಿ ಟ್ಯಾಕ್ಸಿ ಯೋಜನೆಯಡಿ ಆಯ್ಕೆಗೊಳ್ಳುವ ಫಲಾನುಭವಿಗಳಿಗೆ ತಲಾ 3 ಲಕ್ಷ ರೂ. ಗಳನ್ನು ಸಹಾಯಧನ ರೂಪದಲ್ಲಿ ನೀಡಲಾಗುವುದು.  ವಾಹನ ಬೆಲೆಯ ಶೇ. 5% ರಷ್ಟು ಮೊತ್ತವನ್ನು ಆಯ್ಕೆಯಾದ ಅಭ್ಯರ್ಥಿಗಳು ಭರಿಸಬೇಕು.  ಉಳಿದ ಮೊತ್ತವನ್ನು ರಾಷ್ಟ್ರೀಕೃತ/ ವಾಣಿಜ್ಯ ಬ್ಯಾಂಕ್/ ಸಹಕಾರಿ ಬ್ಯಾಂಕ್‍ಗಳ ಮೂಲಕ ಸಾಲವನ್ನು ಫಲಾನುಭವಿ ಪಡೆದುಕೊಳ್ಳಬೇಕಾಗುತ್ತದೆ. ಕೊಪ್ಪಳ ಜಿಲ್ಲೆಗೆ ಹಿಂದುಳಿದ ಅಥವಾ ಅಲ್ಪಸಂಖ್ಯಾತ ವರ್ಗಕ್ಕೆ ಒಟ್ಟು 17, ಪರಿಶಿಷ್ಟ ಜಾತಿ-13 ಹಾಗೂ ಪರಿಶಿಷ್ಟ ಪಂಗಡ-06 ಸೇರಿದಂತೆ ಒಟ್ಟು 19 ಪ್ರವಾಸಿ ಟ್ಯಾಕ್ಸಿಗಳ ಗುರಿ ನಿಗದಿಪಡಿಸಲಾಗಿದೆ. 
    ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 20 ರಿಂದ 40 ವರ್ಷ ವಯೋಮಿತಿಯಲ್ಲಿರಬೇಕು.  ಕನಿಷ್ಠ 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.  ಲಘು ವಾಹನ ಚಾಲನಾ ಪರವಾನಗಿ ಪಡೆದು ಕನಿಷ್ಟ ಒಂದು ವರ್ಷವಾಗಿರಬೇಕು ಮತ್ತು ಅದರ ಜೊತೆಗೆ ಬ್ಯಾಡ್ಜ್ ಹೊಂದಿರಬೇಕು.  ಹಿಂದುಳಿದ ಅಥವಾ ಅಲ್ಪಸಂಖ್ಯಾತರ ವರ್ಗಕ್ಕೆ ವಾರ್ಷಿಕ ಆದಾಯ, ನಗರ ಪ್ರದೇಶದವರಿಗೆ ರೂ. 55,000/-ಗಳು ಹಾಗೂ ಗ್ರಾಮಾಂತರ ಪ್ರದೇಶದವರಿಗೆ ರೂ. 40,000/- ಮೀರಿರಬಾರದು.  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಕ್ಕೆ ವಾರ್ಷಿಕ ಆದಾಯ ನಗರ ಪ್ರದೇಶದವರಿಗೆ ರೂ. 2.00 ಲಕ್ಷ ಹಾಗೂ ಗ್ರಾಮಾಂತರ ಪ್ರದೇಶದವರಿಗೆ ರೂ. 1.50 ಲಕ್ಷ ಮೀರಿರಬಾರದು.  ಅರ್ಜಿದಾರರು ಸರ್ಕಾರಿ ಇಲಾಖೆಯಲ್ಲಿ ಅಥವಾ ನಿಗಮ ಮಂಡಳಿಗಳಲ್ಲಿ ಖಾಯಂ ನೌಕರಿಯಲ್ಲಿರಬಾರದು.  ಕೊಪ್ಪಳ ಜಿಲ್ಲೆಯವರಾಗಿರಬೇಕು.
    ನಿಗದಿ ಪಡಿಸಿದ ಅರ್ಜಿ ನಮೂನೆಯಲ್ಲಿ ಭರ್ತಿ ಮಾಡಿ ಇತ್ತೀಚಿನ ಭಾವಚಿತ್ರಗಳನ್ನು ದ್ವಿಪ್ರತಿಯಲ್ಲಿ ಸಲ್ಲಿಸಬೇಕು.  ಪಡಿತರ ಚೀಟಿ ಹಾಗೂ ಆಧಾರ್ ಕಾರ್ಡ್‍ನ ಪ್ರತಿಗಳು, ಜಾತಿ ಪ್ರಮಾಣ ಪತ್ರ, ವಾಸಸ್ಥಳ ಪ್ರಮಾಣ ಪತ್ರ, ಎಸ್.ಎಸ್.ಎಲ್.ಸಿ ಪ್ರಮಾಣ ಪತ್ರ, ಖಾಯಂ ಲಘುವಾಹನ ಚಾಲನಾ ಪರವಾನಿಗೆ ಪತ್ರ ಹಾಗೂ ಆರ್.ಟಿ.ಓ ರವರಿಂದ ಪಡೆದಿರುವ ಡಿ.ಎಲ್. ಎಕ್ಸ್‍ಟ್ರಾಕ್‍ಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ ಸಹಾಯಕ ನಿರ್ದೇಶಕರ ಕಛೇರಿ ಪ್ರವಾಸೋದ್ಯಮ ಇಲಾಖೆ 2ನೇ ಮಹಡಿ ಜಿಲ್ಲಾಡಳಿತ ಭವನ ಕೊಪ್ಪಳ, ರವರ ಕಛೇರಿಗೆ ಡಿಸೆಂಬರ್. 23 ರೊಳಗಾಗಿ ಸಲ್ಲಿಸಬೇಕು.  ನಿಗದಿತ ಅರ್ಜಿ ನಮೂನೆ ಹಾಗೂ ಹೆಚ್ಚಿನ ವಿವರಗಳನ್ನು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಿಂದ ಪಡೆಯಬಹುದಾಗಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಎಂ. ಕನಗವಲ್ಲಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಂಪಾ ವಿರುಪಾಕ್ಷೇಶ್ವರ ಸ್ವಾಮಿಯ ಫಲಪೂಜಾ ಮಹೋತ್ವವ


ಕೊಪ್ಪಳ ನ.22 (ಕರ್ನಾಟಕ ವಾರ್ತೆ): ಹಿಂದೂ, ಧಾರ್ಮಿಕ ದತ್ತಿ ಇಲಾಖೆ ಅಧೀನದಲ್ಲಿರುವ ಹಂಪಿ ವಿರುಪಾಕ್ಷೇಶ್ವರ ಸ್ವಾಮಿಯ ಫಲಪೂಜಾ ಮಹೋತ್ವವ ಡಿ.03 ರಿಂದ 05 ರ ವರೆಗೆ ಹಂಪಿಯಲ್ಲಿ ನಡೆಯಲಿದೆ.
    ಡಿ.03 ರಂದು ರಾತ್ರಿ.8 ಗಂಟೆಗೆ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿಯ ತೆಪ್ಪೋತ್ಸವ ಕಾರ್ಯಕ್ರಮವು ಮನ್ಮುಖ ತೀರ್ಥದಲ್ಲಿ ಜರುಗಲಿದೆ. ಡಿ.05 ರಂದು ರಾತ್ರಿ 10 ಗಂಟೆಗೆ ಫಲಪೂಜಾ ಮಹೋತ್ಸವ ಶ್ರೀ ಚಕ್ರ ತೀರ್ಥ ಕೋದಂಡರಾಮಸ್ವಾಮಿಯ ಸನ್ನಿಧಿಯಲ್ಲಿ ಶ್ರೀ ವಿದ್ಯಾರಣ್ಯ ಭಾರತಿ ಸ್ವಾಮಿಗಳ ಆಶೀರ್ವಾದನುಸಾರವಾಗಿ ಜರುಗುವುದು.
    ಡಿ.3 ರಿಂದ 5 ರವರೆಗೆ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿಯವರಿಗೆ ವಿಜಯನಗರದ ಅರಸರಾದ ಶ್ರೀ ಕೃಷ್ಣದೇವರಾಯರು ಸಮರ್ಪಿಸಿದ ನವರತ್ನ ಖಚಿತವಾದ ಸುವರ್ಣ ಕಮಲದೊಂದಿಗೆ ಅಲಂಕರಿಸಲಾಗುವುದು. ಶ್ರೀ ಸ್ವಾಮಿಯ ಫಲಪೂಜಾ ನಂತರ ಜಗದ್ಗುರುಗಳಿಂದ ಆಶೀರ್ವಚನ ಜರುಗಲಿದ್ದು, ಭಕ್ತರು ತಮ್ಮ ಬಂಧು-ಮಿತ್ರರೊಡನೆ ಶ್ರೀ ಪುಣ್ಯ ಕ್ಷೇತ್ರಕ್ಕೆ ಆಗಮಿಸಿ, ಸ್ವಾಮಿಯ ಸರ್ವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಭುವನೇಶ್ವರಿ ಸಹಿತ ಪಂಪಾ ವಿರುಪಾಕ್ಷೇಶ್ವರ ಸ್ವಾಮಿಯ ಸಂಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕು ಎಂದು ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಯಂ.ಎಚ್. ಪ್ರಕಾಶ್‍ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಏಕ ವ್ಯಕ್ತಿ ಮತ್ತು ಸಮೂಹ ಕಲಾ ಪ್ರದರ್ಶನಗಳಿಗೆ ಧನಸಹಾಯ : ಅರ್ಜಿ ಆಹ್ವಾನ


ಕೊಪ್ಪಳ ನ. 22 (ಕರ್ನಾಟಕ ವಾರ್ತೆ): ಕರ್ನಾಟಕ ಲಲಿತಕಲಾ ಅಕಾಡೆಮಿ ವತಿಯಿಂದ ಪ್ರಸಕ್ತ ಸಾಲಿನಲ್ಲಿ ರಾಜ್ಯದ ಕಲಾವಿದರಿಗೆ, ರಾಜ್ಯದ ಒಳಗೆ ಮತ್ತು ಹೊರ ರಾಜ್ಯಗಳಲ್ಲಿ ಏಕ ವ್ಯಕ್ತಿ ಮತ್ತು ಸಮೂಹ ಕಲಾಪ್ರದರ್ಶನ ಏರ್ಪಡಿಸಲು ಧನಸಹಾಯ ನೀಡಲು ಅರ್ಜಿ ಆಹ್ವಾನಿಸಿದೆ.
    ಕರ್ನಾಟಕ ಲಲಿತಕಲಾ ಅಕಾಡೆಮಿಯು ರಾಜ್ಯದ ಕಲಾವಿದರಿಗೆ ರಾಜ್ಯದ ಒಳಗೆ ಮತ್ತು ಹೊರ ರಾಜ್ಯಗಳಲ್ಲಿ ಏಕ ವ್ಯಕ್ತಿ ಮತ್ತು ಸಮೂಹ ಕಲಾಪ್ರದರ್ಶನ ಏರ್ಪಡಿಸಲು ಧನಸಹಾಯ ನೀಡುತ್ತಿದೆ.  ಅಂತೆಯೇ ಪ್ರಸಕ್ತ ಸಾಲಿನ ಏಕ ವ್ಯಕ್ತಿ ಮತ್ತು ಸಮೂಹ ಕಲಾಪ್ರದರ್ಶನಕ್ಕೆ ಧನಸಹಾಯ ನೀಡಲು ಅರ್ಜಿ ಆಹ್ವಾನಿಸಿದ್ದು, ಈ ಪ್ರದರ್ಶನದಲ್ಲಿ ಭಾಗವಹಿಸಲಿಚ್ಚಿಸುವ ಕಲಾವಿದರಿಗೆ ನೀಡುವ ಧನಸಹಾಯದ ಮೊತ್ತ ವಿವರ ಇಂತಿದೆ.  ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ 10 ಜನರಿಗೆ (ರಾಜ್ಯದಲ್ಲಿ) 10000, ರೂ. ಗಳು,  10 ಜನ (ಹೊರರಾಜ್ಯದಲ್ಲಿ) 15000, ಸಮೂಹ ಚಿತ್ರ ಪ್ರದರ್ಶನ  7 ತಂಡಕ್ಕೆ (ರಾಜ್ಯದಲ್ಲಿ) 15000, 5 ತಂಡಕ್ಕೆ (ಹೊರರಾಜ್ಯದಲಿ)್ಲ 20000 ರೂ. ಧನ ಸಾಹಾಯ ನೀಡಲಿದೆ.
ಅರ್ಜಿ ಸಲ್ಲಿಸಲು ಕಲಾವಿದರು ತಾವು ರಚಿಸಿದ ಕಲಾಕೃತಿಗಳ 5*7 ಇಂಚು ಅಳತೆಯ ಛಾಯಾಚಿತ್ರಗಳನ್ನು ಕಳುಹಿಸಬೇಕಾಗಿದ್ದು, ಅವು ಕಳೆದ ಎರಡು ವರ್ಷದಿಂದೀಚೆಗೆ ರಚಿಸಿದ ಕಲಾಕೃತಿಗಳಾಗಿರಬೇಕು. ಈ ಮೊದಲು ಎಲ್ಲೂ ಪ್ರದರ್ಶನಗೊಂಡಿರಬಾರದು.  ಈ ಧನಸಹಾಯಕ್ಕೆ ಆಸಕ್ತ ಕಲಾವಿದರು ಇಲಾಖೆಯ ವೆಬ್‍ಸೈಟ್  www.lalitkalakarnataka.org ಹಾಗೂ ಫೇಸ್‍ಬುಕ್ ನಲ್ಲಿ ಅರ್ಜಿಯನ್ನು ಪಡೆದುಕೊಂಡು, ತಮ್ಮ ಕನಿಷ್ಠ ಐದು ಕಲಾಕೃತಿಗಳ ಛಾಯಾಚಿತ್ರಗಳು, ಮತ್ತು ಕಲಾವಿದರ ಭಾವಚಿತ್ರ, ಪರಿಚಯ ಪತ್ರದೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ, ಕರ್ನಾಟಕ ಲಲಿತಕಲಾ ಅಕಾಡೆಮಿ ಕಛೇರಿ, ಭವನ, ಜೆ.ಸಿ. ರಸ್ತೆ ಬೆಂಗಳೂರು-560002, ಇಲ್ಲಿಗೆ ಖುದ್ದಾಗಿ ಅಥವಾ 5ರೂ ಅಂಚೆಚೀಟಿ ಲಗತ್ತಿಸಿದ ಸ್ವ ವಿಳಾಸವಿರುವ ಮತ್ತು ದೂರವಾಣಿ ಸಂಖ್ಯೆಯುಳ್ಳ ಲಕೋಟೆಯನ್ನು ಡಿಸೆಂಬರ್. 16 ರೋಳಗಾಗಿ ಕಳುಹಿಸಿಕೊಡಬೇಕು. 
ಹೆಚ್ಚಿನ ಮಾಹಿತಿಗಾಗಿ ಇ-ಮೇಲ್  kla.karnataka@gmail.com ನ್ನು ಅಥವಾ ಅಕಾಡೆಮಿಯ ದೂರವಾಣಿ ಸಂಖ್ಯೆ 080-22480297 ಕ್ಕೆ ಸಂಪರ್ಕಿಸಬಹುದು ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿಯ ರಿಜಿಸ್ಟ್ರಾರ್ ಇಂದ್ರಮ್ಮ ಹೆಚ್.ವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರವಾಸಿ ಟ್ಯಾಕ್ಸಿ ಯೋಜನೆ ಆಯ್ಕೆ ಮತ್ತು ಕಾಯ್ದಿರಿಸಿದ ಪಟ್ಟಿ ಪ್ರಕಟ : ಆಕ್ಷೇಪಣೆ ಆಹ್ವಾನ


ಕೊಪ್ಪಳ ನ. 22 (ಕರ್ನಾಟಕ ವಾರ್ತೆ): ಕೊಪ್ಪಳ ಪ್ರವಾಸೋದ್ಯಮ ಇಲಾಖೆ ವತಿಯಿಂದ 2016-17 ನೇ ಸಾಲಿನಲ್ಲಿ ಪ್ರವಾಸಿ ಟ್ಯಾಕ್ಸಿ ಯೋಜನೆಯಡಿ ಕೈಗೊಂಡ ಫಲಾನುಭವಿಗಳ ಆಯ್ಕೆ ಮತ್ತು ಕಾಯ್ದಿರಿಸಿದ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ. 
ಎಸ್‍ಸಿಎಸ್‍ಪಿ, ಟಿಎಸ್‍ಪಿ ಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ, ಅಲ್ಪಸಂಖ್ಯಾತ ವರ್ಗದ ಅರ್ಹ ನಿರುದ್ಯೋಗಿ ಫಲಾನುಭವಿಗಳಿಗೆ 2 ಲಕ್ಷ ಸಹಾಯ ಧನ ಸಹಾಯದೊಂದಿಗೆ ಸಾಲ ಸೌಲಭ್ಯ ನೀಡಿ, ಪ್ರವಾಸಿ ಟ್ಯಾಕ್ಸಿ ಒದಗಿಸಲು ಫಲಾನುಭವಿಗಳ ಆಯ್ಕೆ ಮತ್ತು ಕಾಯ್ದಿರಿಸಿದ ಪಟ್ಟಿಯನ್ನು ಸಿದ್ಧಪಡಿಸಿ  ಕೊಪ್ಪಳ ಜಿಲ್ಲಾ ಪ್ರವಾಸೋದ್ಯಮ ಕಛೇರಿಯಲ್ಲಿ ಪ್ರಕಟಿಸಲಾಗಿದೆ.   
ಈ ಕುರಿತು ಯಾವುದೇ ಆಕ್ಷೇಪಣೆಗಳಿದ್ದಲ್ಲಿ, ಸಹಾಯಕ ನಿರ್ದೇಶಕರ ಕಛೇರಿ ಪ್ರವಾಸೋದ್ಯಮ ಇಲಾಖೆ 2ನೇ ಮಹಡಿ ಜಿಲ್ಲಾಡಳಿತ ಭವನ ಕೊಪ್ಪಳ, ಇವರಿಗೆ ಡಿಸೆಂಬರ್. 05 ರ ಸಂಜೆ 5 ಗಂಟೆಯೊಳಗಾಗಿ ಸಲ್ಲಿಸಬಹುದು.  ತಡವಾಗಿ ಬಂದ ಅಕ್ಷೇಪಣೆಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಕೊಪ್ಪಳ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಎಂ. ಕನಗವಲ್ಲಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗಂಗಾವತಿ ನಗರಸಭೆ ವತಿಯಿಂದ ವಿವಿಧ ಯೋಜನೆ : ಅರ್ಜಿ ಆಹ್ವಾನ


ಕೊಪ್ಪಳ ನ. 22 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಗಂಗಾವತಿ ನಗರಸಭೆ ವತಿಯಿಂದ ಪ್ರಸಕ್ತ ಸಾಲಿನ ಡೇ-ನಲ್ಮ್ ಯೋಜನೆಯ ಇ.ಎಸ್.ಟಿ.ಪಿ. ಉಪಯೋಜನೆಯ ಅಡಿಯಲ್ಲಿ ನಗರಸಭೆ ವ್ಯಾಪ್ತಿಯಲ್ಲಿರುವ ಬಿ.ಪಿ.ಎಲ್. ರಹಿವಾಶಿಗಳಿಗೆ, ವಿವಿಧ ವಾರ್ಡ್ ಮತ್ತು ಪ್ರದೇಶ ಮಟ್ಟದ ಒಕ್ಕೂಟಗಳಲ್ಲಿ ವಿವಿಧ ತರಬೇತಿಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
    ತರಬೇತಿಯಲ್ಲಿ ಸೇವಿಂಗ್ ಮೇಶಿನ್ ಆಪರೇಟರ್ - 50, ಸ್ಪೇಶಲಾಯಿಜ್ಡ್ ಸೇವಿಂಗ್ ಮೇಶಿನ್ ಆಪರೇಟರ್ - 50, ಸೇಲ್ಫ್ ಎಂಪ್ಲಾಯಿಡ್ ಟೈಲರ್ – 50, ಡೋಮ್ಯಾಸ್ಟೀಕ್ ಡಾಟಾ ಎಂಟ್ರಿ ಆಪರೇಟರ್ – 35, ವಬ ಡೆವ್ಹಲಪರ್ – 35, ಟ್ಯಾಕ್ಸಿ ಡ್ರೈವರ್ – 60, ವಾಷಿಂಗ್ ಮಶೀನ್ ಆಪರೇಟರ್ – 30 ಅಭ್ಯರ್ಥಿಗಳಿಗೆ ತರಬೇತಿಯನ್ನು ನೀಡಲು ಉದ್ದೇಶಿಸಲಾಗಿದೆ.  ಅರ್ಜಿ ಸಲ್ಲಿಸಲು ಅಭ್ಯರ್ಥಿಯು  kaushalkar.com  ದಲ್ಲಿ ನೋಂದಣಿಯಾಗಿರಬೇಕು.  ಆಸಕ್ತರು ಅರ್ಜಿಯನ್ನು ಗಂಗಾವತಿ ನಗರಸಭೆ ಕಾರ್ಯಾಲಯದ ನಲ್ಮ್ ವಿಭಾಗದಲ್ಲಿ ಪಡೆದು, ಭರ್ತಿ ಮಾಡಿ, ಜಾತಿ ಪ್ರಮಾಣ ಪತ್ರ / ಟಿ.ಸಿ., ಆದಾಯ ಪ್ರಮಾಣ ಪತ್ರ (ರೂ.23,124/- ಒಳಗಿರಬೇಕು), ವಿದ್ಯಾರ್ಹತೆ ಪ್ರಮಾಣ ಪತ್ರ (5 – 12 ನೇ ತರಗತಿ), ಮತದಾರರ ಚೀಟಿ, ರೇಷನ್ ಕಾರ್ಡ್, ಆಧಾರ ಕಾರ್ಡ್ ಇತ್ಯಾದಿ ದಾಖಲೆಗಳನ್ನು ಕಡ್ಡಾಯವಾಗಿ ಸ್ವಯಂ ದೃಢೀಕರಿಸಿ ಲಗತ್ತಿಸಿ ನ. 30 ರ ಸಾಯಂಕಾಲ 4 ಗಂಟೆಯೊಳಗಾಗಿ ಸಲ್ಲಿಸಬೇಕು ಎಂದು ಗಂಗಾವತಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚಳಿಗಾಲಕ್ಕೆ ಉತ್ತಮ ಲಾಭದಾಯಕ ಹೂ/ಎಲೆ ಕೋಸು : ರೈತರಿಗೆ ಸಲಹೆ

ಕೊಪ್ಪಳ ನ.22 (ಕರ್ನಾಟಕ ವಾರ್ತೆ): ಚಳಿಗಾಲದಲ್ಲಿ ಕೇವಲ 70 ದಿನಗಳೊಳಗೆ ಕಟಾವಿಗೆ ಬರುವ ಎಲೆ ಮತ್ತು ಹೂ ಕೋಸು ಬೆಳೆ ರೈತರಿಗೆ ಲಾಭದಾಯಕವಾಗಲಿದೆ ಎಂದು ತೋಟಗಾರಿಕೆ ವಿಷಯ ತಜ್ಞ ವಾಮನಮೂರ್ತಿ ತಿಳಿಸಿದ್ದಾರೆ.

     ಎಲೆ ಮತ್ತು ಹೂ ಕೋಸು ಕುಕರಬಟೇಸಿ ಕುಟುಂಬಕ್ಕೆ ಸೇರಿದ ಚಳಿಗಾಲದ ಮುಖ್ಯ ಬೆಳೆಗಳಾಗಿವೆ. ಇವು ಕೇವಲ 70 ದಿನದೊಳಗೆ ಕಟಾವಿಗೆ ಬರುವ ಹಾಗೂ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ತರುವ ಬೆಳೆಗಳಾಗಿವೆ.  ಈ ಬೆಳೆ ‘ಎ’ ಮತ್ತು ‘ಸಿ’ ಅನ್ನಾಂಗ ಹೊಂದಿದ ಲಾಭದಾಯಕ ಬೆಳೆಗಳಾಗಿದ್ದು, ಪಟ್ಟಣದ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಇದಕ್ಕೆ ಉತ್ತಮ ಬೇಡಿಕೆ ಇದೆ.
ಬಿತ್ತನೆಯ ಕಾಲ: ಚಳಿಗಾಲದ ಬೆಳೆ ಆರಂಭಿಸಲು ಅಕ್ಟೋಬರ್-ನವೆಂಬರ್ ಸೂಕ್ತ ಕಾಲ. ಚಳಿ ಹೆಚ್ಚಾದಲ್ಲಿ ಹೂ ಕೋಸು ಅಷ್ಟೊಂದು ಚನ್ನಾಗಿ ಬರುವುದಿಲ್ಲ, ಈ ಬೆಳೆ ಆರಂಭ ಮಾಡುವವರು ಈಗಲೇ ಬಿತ್ತನೆ/ನಾಟಿ ಮಾಡುವುದು ಸೂಕ್ತ. ಈ ಬೆಳೆಗಳು ಕೆಂಪು ಮಿಶ್ರಿತ ಮಣ್ಣಿನಲ್ಲಿ ಉತ್ತಮ ಇಳುವರಿ ಕೊಡುತ್ತವೆ.  ಸ್ವಲ್ಪ ಸವಳು ಇರುವ ಸಾಧಾರಣ ಮಣ್ಣು ಮತ್ತು ರಸಸಾರ 8 ಈ ಬೆಳೆಗಳಿಗೆ ಸೂಕ್ತ.  ಇದರಲ್ಲಿ ಅನೇಕ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಎಲೆಕೋಸು ಬೆಳೆಗಳಲ್ಲಿ ಗೋಲ್ಡನ್ ಎಕೆರ, ಪ್ರೈಡ್ ಆಫ್ ಇಂಡಿಯಾ ಇವರು 60-70 ದಿನಗಳಲ್ಲಿ ಕಟಾವಿಗೆ ಬರುವ ಚಪ್ಪಟೆಯಾಕಾರದ ಅರ್ಲಿಡ್ರಮ್ ಹೆಡ್ ಇದಲ್ಲದೇ ಮಾರುಕಟ್ಟೆಯಲ್ಲಿ ಅನೇಕ ಕಂಪನಿಗಳ ಹೈಬ್ರಿಡ್ ಗಳು ಲಭ್ಯವಿವೆ. ಇನ್ನು ಹೂಕೋಸು ಬೆಳಗೆಳಲ್ಲಿ ಅರ್ಲಿ ಸ್ನೋಬಾಲ್, ಅರ್ಕಾ ಸ್ಪೂರ್ತಿ, ಅರ್ಕಾ ವಿಮಲ ಇವು 80 ದಿನಗಳಲ್ಲಿ ಕಟಾವಿಗೆ ಬರುವ ಎಲೆ ಚುಕ್ಕೆ ರೋಗಕ್ಕೆ ನಿರೋಧಕ ಶಕ್ತಿ ಹೊಂದಿರುವ ಕೆನೆ ಬಣ್ಣದ ಕರ್ಡ(ಹೂಗುಚ್ಛ) ಹೊಂದಿರುವ ಶ್ರೇಷ್ಠ ತಳಿ. ಈ ತಳಿಯ ಸರಾಸರಿ ತೂಕ 375 ಗ್ರಾಂ. ದೀರ್ಘಾವಧಿ ತಳಿಗಳನ್ನು ಈ ತಿಂಗಳು ನಾಟಿ ಮಾಡುವುದು ಸೂಕ್ತವಾಗಿದೆ.

ಬಿತ್ತನೆಯ ವಿಧಾನ:
***** ರೈತರು ಆಯ್ಕೆ ಮಾಡಿದ ತಳಿಯ ಬೀಜಗಳನ್ನು ನರ್ಸರಿಯಲ್ಲಿ 1 ಪ್ರೊಟ್ರೇನ್‍ನಲ್ಲಿ ಬೆಳೆಸುವುದು ಆಧುನಿಕ ವಿಧಾನವಾಗಿದೆ. ಈ ವಿಧಾನದಲ್ಲಿ 3-4 ವಾರಗಳಲ್ಲಿ ಏಕಕಾಲಕ್ಕೆ ನಾಟಿಗೆ ಸಿದ್ದವಾಗುತ್ತವೆ. ಸಸಿಗಳು ಸಿದ್ಧವಾಗುವ ಸಮಯದಲ್ಲಿ ಭೂಮಿ ಸಿದ್ಧತೆ ಮಾಡಿಕೊಂಡು 60-75 ಸೆಂ.ಮೀ ಅಂತರದಲ್ಲಿ ನಾಟಿ ಮಾಡಬೇಕು. ಹನಿ ನೀರಾವರಿ ಸೌಲಭ್ಯ ಇದ್ದಲ್ಲಿ ಕಳೆಯ ಪರಿಣಾಮಕಾರಿ ನಿಯಂತ್ರಣ ಸಾಧ್ಯ.  ನಾಟಿಗೆ 25-30 ದಿನಗಳ ಮುಂಚಿತವಾಗಿ ಎಕರೆಗೆ 10 ಟನ್ ಕೊಟ್ಟಿಗೆ ಗೊಬ್ಬರದ ಜೊತೆಗೆ ಟ್ರೈಕೊಡರ್ಮಾ 5-10 ಕಿ.ಗ್ರಾಂ ರಂಜಕ ಹಾಗೂ 50 ಕಿ.ಗ್ರಾಂ ಪೊಟ್ಯಾಶ್ ಬೆರೆಸಿ ನಾಟಿ ಮಾಡಬೇಕು. ನಾಟಿ ಮಾಡಿದ ಮೂರು ವಾರಗಳ ನಂತರ ಎಕರೆಗೆ 30 ಕಿ.ಗ್ರಾಂ ಸಾರಜನಕ, 5 ಕಿ.ಗ್ರಾಂ. ಜಿಂಕ ಜೊತೆಗೆ ಇತರೆ ಲಘು ಪೋಷಕಾಂಶವನ್ನು ಕೊಡಬೇಕು. ಹೂ ಕೋಸಿಗೆ ಬೋರಾನ್ ಲಘು ಪೋಷಕಾಂಶದ ಬಳಕೆ ಅವಶ್ಯಕತೆ ಇರುತ್ತದೆ. ಎಕರೆಗೆ 10 ಕಿ.ಗ್ರಾಂ. ಬೇವಿನ ಹಿಂಡಿ ಕೊಡಬೇಕು. ಮತ್ತು ತೆಳುವಾಗಿ ನೀರು ಹರಿಸಬೇಕು.
ಸೂಚನೆ: ನಾಟಿ ಮಾಡುವ 15 ದಿನಗಳ ಮೊದಲು ಹಾಗೂ ನಾಟಿಮಾಡಿದ 15 ದಿನಗಳ ನಂತರ 25 ಸಾಲುಗಳ ನಂತರ  ಎರಡು ಸಾಲು ಸಾಸವಿ ಬೀಜ ಬಿತ್ತಿದರೆ ಈ ಬೆಳೆಗೆ ಬರುವ ಕೀಟಗಳ ಪರಿಣಾಮಕಾರಿ ನಿಯಂತ್ರಣ ಮಾಡಬಹುದು. ಎರೆಹುಳು ಗೊಬ್ಬರ ಉಪಯೋಗಿಸಿದರೆ ಯೂರಿಯಾದ ಪ್ರಮಾಣ ಅರ್ಧದಷ್ಟು ಕಡಿಮೆ ಮಾಡಬಹುದು. ತಳಿಗಳನ್ನಾಧರಿಸಿ 70-80 ಮತ್ತು 110-120 ದಿನಗಳ ನಂತರವೇ ಉತ್ತಮ ಇಳುವರಿ ಕೊಡಬಲ್ಲದು.  ಎಕೆರೆಗೆ ಮದ್ಯಮಾವಧಿ ತಳಿಗಳಿಂದ 16-20 ಟನ್ ಎಲೆ ಮತ್ತು 10 ರಿಂದ 12 ಟನ್ ಗಳಷ್ಟು ಹೂ ಕೋಸಿನ ಇಳುವರಿಯನ್ನು ನಿರೀಕ್ಷಿಸಬಹುದಾಗಿದೆ. ಅಂದರೆ ಎಕರೆಗೆ ರೂ.1.5 ರಿಂದ 2 ಲಕ್ಷದ ವರೆಗೆ ಆದಾಯ ನಿರೀಕ್ಷಿಸಬಹುದು. ಇದರಲ್ಲಿ ವಿಶೇಷ ಸೂಚನೆಯಂದರೆ ಎಲೆ ಕೋಸಿನಲ್ಲಿ ಹೂವಿನ ಬಣ್ಣ ಕಾಪಾಡಲು ಬಿಸಿಲಿನಿಂದ ರಕ್ಷಿಸಲು ಎಲೆಗಳಿಂದ ಮುಚ್ಚಬೇಕಾಗುತ್ತದೆ.
ಪ್ರಮುಖ ಕೀಟಗಳು:
************
ವಜ್ರ ಬೆನ್ನಿನ ಚಿಟ್ಟೆ:
********** ಕೀಟಗಳು ಎಲೆ ಹಾಗೂ ಪತ್ರ ಹರಿತ್ತನ್ನು ತಿಂದು ಹಾಳು ಮಾಡುವುದರಿಂದ ಎಲೆಗಳ ಮೇಲೆ ಎಳೆ ಹಾಗೂ ಬಿಳಿ ಪದರಗಳು ಉಂಟಾಗುತ್ತವೆ. ಗಡ್ಡೆ ಕೋರೆಹುಳು ಗಡ್ಡೆ ಕೊರೆದು ತಿಂದಾಗ ಗಡ್ಡೆಗಳು ಹಿಕ್ಕೆಗಳಿಂದ ತುಂಬಿ ಸಂಪೂರ್ಣ ನಾಶವಾಗುತ್ತವೆ. ಈ ಕೀಟ ಎರಡೂ ಬದಿ ಚೂಪಾಗದ್ದು ಹಸಿರು ಬಣ್ಣದಿಂದ ಕೂಡಿರುತ್ತದೆ.  ಇದರ ಹತೋಟಿಗೆ ಈಗಾಗಲೆ ತಿಳಿಸಿದಂತೆ ಸಾಸಿವೆ ಬೀಜ ಬಿತ್ತನೆ ಮಾಡಬೇಕು. ಹಾವಳಿ ಕಾಣಿಸಿಕೊಂಡಾಗ ಬೇವಿನ ಕಷಾಯ, ಕ್ವಿನಾಲ್ ಫಾಸ್, 25 ಇ.ಸಿ ಮತ್ತು ಡೈಕ್ಲೋರೋವಾಸ್ ಅಲ್ಲದೇ ಫಪೋನಿಲ ಎನ್ನುವ ಕೀಟ ನಾಶಕಗಳ ಬಳಕೆ ಈ ಕೀಟದ ಹತೋಟಿಗೆ ತುಂಬಾ ಪರಿಣಾಮಕಾರಿ.
ಸಸ್ಯಹೇನು: ಸುರುಳಿ ಪೂಚಿ ಕೀಟಗಳಿಂದಾಗಿ ಈ ಬೆಳೆ ನಾಶವಾಗುತ್ತದೆ. ಈ ಕೀಟಗಳ ನಿರ್ವಹಣೆಗೆ, ನಾಟಿ ಮಾಡಿದ 15 ದಿನಗಳೊಳಗೆ ಮತ್ತು ನಂತರ ಮೂರು ವಾರಗಳಿಗೊಮ್ಮೆ ಡೈಮೆಥೋಯೆಟ್ 30 ಇ.ಸಿ. 1.70 ಮಿ.ಲೀ ಮತ್ತು ಮ್ಯಾಲಾಥಿಯಾನ್ 50 ಇ.ಸಿ 2 ಮಿ.ಲೀ 1 ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
ಪ್ರಮುಖ ರೋಗಗಳು:
********** ಎಲೆ ಮಚ್ಚೆ ರೋಗ, ದುಂಡಾಣು ಕಪ್ಪು ಕೊಳೆ ರೋಗ ಮತ್ತು ಬುಡಕೊಳೆ ರೋಗಗಳು ಈ ಬೆಳೆಗಳನ್ನು ಕಾಡುವ ಮುಖ್ಯ ರೋಗಗಳು. ನಿರ್ವಹಣೆ ಕೈಗೊಳ್ಳುವ ವಿಧಾನ ಇಂತಿದೆ. ಸಿ.ಒ.ಸಿ 30 ಗ್ರಾಂ, ಜೊತೆಗೆ ಸ್ರ್ಟೆಪ್ಟೋಮೈಸಿನ್ 0.50 ಮಿ.ಗ್ರಾಂ ಅಥವಾ ಅಗ್ರಿ ಮೈಸಿನ್ 1 ಲೀ ನೀರಿಗೆ ಬೆರೆಸಿ ಸಿಂಪಡಿಸಬೇಕು. ನಾಟಿ ಮಾಡಿದ ಎರಡರಿಂದ ನಾಲ್ಕು ಮತ್ತು ಆರರಿಂದ ಎಂಟನೇ ವಾರದ ಅವಧಿಯಲ್ಲಿ ಮೇಲೆ ತಿಳಿಸಿದ ರಾಸಾಯನಗಳ ನಿಯಮಿತ ಸಿಂಪಡಣೆಯಿಂದ ಈ ರೋಗಗಳ ಪರಿಣಾಮಕಾರಿ ಹತೋಟಿ ಸಾಧ್ಯ. ಹಾಗೇ ಬೆಳೆ ಕಟಾವಿಗೆ ಬರುವ 15 ದಿನಗಳ ಮೊದಲೇ ರಾಸಾಯನಿಕಗಳ ಸಿಂಪಡಣೆ ನಿಲ್ಲಿಸಬೇಕು.
      ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಉಪನಿರ್ದೇಶಕರ ಕಚೇರಿ, ಕೊಪ್ಪಳ ಅಥವಾ ಆಯಾ ತಾಲೂಕ ಕಚೇರಿಗಳಲ್ಲಿ ಅಥವಾ ತೋಟಗಾರಿಕೆ ವಿಷಯ ತಜ್ಞರರು ಮಾಹಿತಿ ಮತ್ತು ಸಲಹಾ ಕೇಂದ್ರ(ಹಾರ್ಟಿಕ್ಲಿನಿಕ್) ಕೊಪ್ಪಳ ಇವರನ್ನು ಸಂಪರ್ಕಿಸಬುದು ಎಂದು ತೋಟಗಾರಿಗೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಯಲಬುರ್ಗಾ : ಪ್ಲಾಸ್ಟಿಕ್ ಬ್ಯಾನರ್ಸ್ ಮತ್ತು ಬಂಟಿಂಗ್ಸ್ ಬಳಕೆ ನಿಷೇಧ


ಕೊಪ್ಪಳ ನ. 22 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನಲ್ಲಿ ಹಬ್ಬ ಹರಿದಿನಗಳಲ್ಲಿ ಅಥವಾ ವಿಶೇಷ ಸಂದರ್ಭಗಳಲ್ಲಿ, ಜಾಹೀರಾತು ನೀಡಲು ಯಾವುದೇ ಪ್ಲಾಸ್ಟಿಕ್‍ನಿಂದ ತಯಾರಿಸಿದ ಬ್ಯಾನರ್ಸ್ ಮತ್ತು ಬಂಟಿಂಗ್ಸ್ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ತಿಳಿಸಿದ್ದಾರೆ.
    ಸರ್ಕಾರವು ರಾಜ್ಯಾದ್ಯಂತ ಕೆಲವೊಂದು ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ನಿಷೇಧಿಸಿದ್ದು, ಹಬ್ಬ ಹರಿದಿನಗಳಲ್ಲಿ ಅಥವಾ ವಿಶೇಷ ಸಂದರ್ಭಗಳಲ್ಲಿ ಜಾಹೀರಾತು ನೀಡಲು ಯಾವುದೇ ಪ್ಲಾಸ್ಟಿಕ್‍ನಿಂದ ತಯಾರಿಸಿದ ಬ್ಯಾನರ್ಸ್ ಮತ್ತು ಬಂಟಿಂಗ್ಸ್ ಬಳಸದಂತೆ ಕ್ರಮ ವಹಿಸಲು ಸೂಚನೆ ನೀಡಲಾಗಿದೆ.  ಈಗಾಗಲೇ ಪ್ರಕಟಣೆ ಮೂಲಕ ತಿಳಿಸಿದ್ದಾಗ್ಯೂ ಪ್ಲಾಸ್ಟಿಕ್‍ನಿಂದ ತಯಾರಿಸಿದ ಬ್ಯಾನರ್ಸ್ ಮತ್ತು ಬಂಟಿಂಗ್ಸ್‍ಗಳನ್ನು ಅನಧಿಕೃತವಾಗಿ ಬಳಕೆ ಮಾಡುತ್ತಿರುವುದು ಮತ್ತು ಕಾರ್ಯಾಲಯದಿಂದ ಪರವಾನಿಗೆ ಪಡೆಯದೆ ಬ್ಯಾನರ್ ಮತ್ತು ಬಂಟಿಂಗ್ಸ್‍ಗಳನ್ನು ಅಳವಡಿಸುತ್ತಿರುವುದು ಕಂಡು ಬಂದಿರುತ್ತದೆ.  ಕಾರಣ ಪ್ಲಾಸ್ಟಿಕ್‍ನಿಂದ ತಯಾರಿಸಿದ ಬ್ಯಾನರ್ಸ್ ಮತ್ತು ಬಂಟಿಂಗ್ಸ್‍ಗಳನ್ನು ಬಳಕೆ ಮಾಡದಂತೆ ಸೂಚನೆ ನೀಡಲಾಗಿದೆ.
ಒಂದು ವೇಳೆ ಈ ಆದೇಶವನ್ನು ಉಲ್ಲಂಘಿಸಿ ಪ್ಲಾಸ್ಟಿಕ್ ಬಳಕೆ ಮಾಡಿದ್ದು ಕಂಡುಬಂದಲ್ಲಿ ಮತ್ತು ಅನಧಿಕೃತವಾಗಿ ಬ್ಯಾನರ್ ಮತ್ತು ಬಂಟಿಂಗ್ಸ್‍ಗಳನ್ನು ಅಳವಡಿಸಿದ್ದು ಕಂಡುಬಂದಲ್ಲಿ ಅಂಥವರ ವಿರುದ್ದ ಪರಿಸರ(ಸಂರಕ್ಷಣೆ) ಕಾಯಿದೆ 1986ರ ಸೆಕ್ಷನ್ 19ರ ಅನ್ವಯ ಪ್ರದತ್ತವಾಗಿರುವ ಅಧಿಕಾರದಂತೆ ಸೂಕ್ತ ಕ್ರಮ ಜರುಗಿಸಲಾಗುತ್ತದೆ. ಅದಕ್ಕೆ ಅವಕಾಶ ಕೊಡದಂತೆ ಸಾರ್ವಜನಿಕರು ಪ್ಲಾಸ್ಟೀಕ್ ನಿಂದ ತಯಾರಿಸುವ ಬ್ಯಾನರ್ಸ್ ಮತ್ತು ಬಂಟಿಂಗ್ಸ್‍ಗಳನ್ನು ಬಳಸದೆ ಪರಿಸರ ಸಂರಕ್ಷಣೆಗೆ ಪಟ್ಟಣ ಪಂಚಾಯತಿಯೊಂದಿಗೆ ಕೈಜೋಡಿಸಲು ಹಾಗೂ ಇತರೆ ಬ್ಯಾನರ್ ಹಾಗೂ ಜಾಹೀರಾತು ಫಲಕಗಳನ್ನು ಅಳವಡಿಸಲು ಪಟ್ಟಣ ಪಂಚಾಯತಿಯಿಂದ ಪರವಾನಿಗೆ ಪಡೆದು ನಿಗದಿತ ಸ್ಥಳದಲ್ಲಿ ಅಳವಡಿಸಿ ಸಹಕರಿಸಲು ಯಲಬುರ್ಗಾ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾರತ ದೇಶಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ಕೊಡುಗೆ ಅಪಾರ : ಎಂ. ಕನಗವಲ್ಲಿ



ಕೊಪ್ಪಳ ನ. 22 (ಕರ್ನಾಟಕ ವಾರ್ತೆ): ದೇಶಕ್ಕಾಗಿ ಡಾ. ಬಿ.ಆರ್ ಅಂಬೇಡ್ಕರ್ ರವರ ಕೊಡುಗೆಗಳು ಅಪಾರವಾಗಿದ್ದು, ಶಿಕ್ಷಣ ಮತ್ತು ಅಧ್ಯಯನದಿಂದಲೇ ಬಾಬಾ ಸಾಹೇಬ್ ರವರು ಉನ್ನತ ಮಟ್ಟಕ್ಕೇರಲು ಸಾಧ್ಯವಾಯಿತು, ಆದ್ದರಿಂದ ಪ್ರತಿಯೊಬ್ಬರೂ ಓದುವ ಹಾಗೂ ಅಧ್ಯಯನ ಕೈಗೊಳ್ಳುವ ಹವ್ಯಾಸವನ್ನು ಬೆಳಸಿಕೊಳ್ಳಿ ಎಂದು ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.  
 
    ಬೆಂಗಳೂರು ಸಮಾಜ ಕಲ್ಯಾಣ ಇಲಾಖೆ, ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಬಹುಶಿಸ್ತಿಯ ಸಂಶೋಧನಾ ಕೇಂದ್ರ ಹಾಗೂ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ 125ನೇ ಜಯಂತಿ ವರ್ಷಾಚರಣೆ ಅಂಗವಾಗಿ ಅಂತರ್ ರಾಷ್ಟ್ರೀಯ ಸಮ್ಮೇಳನ ಆಯೋಜನ ಸಮಿತಿ, ಬೆಂಗಳೂರು ಮತ್ತು ಕೊಪ್ಪಳ ಸ್ನಾತಕೋತ್ತರ ಕೇಂದ್ರ ಇವರ ಸಹಯೋಗದಲ್ಲಿ "ತಳ ಸಮುದಾಯ ಮತ್ತು ಸಾಮಾಜಿಕ ನ್ಯಾಯ" ಡಾ. ಬಿ.ಆರ್ ಅಂಬೇಡ್ಕರ್ ರವರ ಚಿಂತನೆಗಳ ಕುರಿತು ನಗರದ ಸ್ನಾತಕೋತ್ತರ ಕೇಂದ್ರದಲ್ಲಿ ಬುಧವಾರದಂದು ಆಯೋಜಿಸಲಾಗಿದ್ದ, ಒಂದು ದಿನದ ಜಿಲ್ಲಾ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
 
ಡಾ. ಬಿ.ಆರ್. ಅಂಬೇಡ್ಕರ್ ರವರು ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದ ಮೊದಲ ಭಾರತೀಯರಾಗಿದ್ದಾರೆ.  ಅವರು ನೀಡಿದ   ಸಂವಿಧಾನ ಭಾರತಕ್ಕೆ ಮಾತ್ರವಲ್ಲ, ಇಡೀ ವಿಶ್ವಕ್ಕೆ ಮಾದರಿಯಾಗಿದೆ.  ಇಂತಹ ಮಹಾ ಮಾನವತಾವಾದಿ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು.  ಮುಖ್ಯವಾಗಿ ವಿದ್ಯಾರ್ಥಿಗಳು ಅವರ ಜೀವನ, ಚಿಂತನೆ ಹಾಗೂ ವಿಶೇಷವಾಗಿ ಸಂವಿಧಾನವನ್ನು ಅರಿತುಕೊಳ್ಳಬೇಕು.  ಬಾಬಾ ಸಾಹೇಬ್ ರವರ 125ನೇ ಜಯಂತಿ ವರ್ಷಾಚರಣೆ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಆಯೋಜಿಸಲಾಗಿದ್ದ, “ಭಾರತ ಭಾಗ್ಯವಿದಾತ” ಧ್ವನಿ-ಬೆಳಕು ಕಾರ್ಯಕ್ರಮ ನಿಜವಾಗಿಯೂ ಒಂದು  ಅತ್ಯುತ್ತಮ ಕಾರ್ಯಕ್ರಮವಾಗಿತ್ತು.  ಇಂತಹ ಕಾರ್ಯಕ್ರಮಗಳು ಆಗಾಗ್ಗೆ ಜರುಗಬೇಕು.  ವಿದ್ಯಾರ್ಥಿಗಳು ತಮ್ಮ ಪದವಿ ಶಿಕ್ಷಣದ ಜೊತೆ ಜೊತೆಯಲ್ಲಿಯೇ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಬಗ್ಗೆ ಅಧ್ಯಯನ ಕೈಗೊಂಡು ತಿಳಿದುಕೊಳ್ಳಬೇಕು.  ಸ್ನಾತಕೊತ್ತರ ಕೇಂದ್ರದಲ್ಲಿಂದು ಹಮ್ಮಿಕೊಳ್ಳಲಾಗಿದ್ದ, ಅಂಬೇಡ್ಕರ್ ರವರ ಚಿಂತನೆಗಳ ಕುರಿತ ವಿಚಾರ ಸಂಕಿರಣದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಆಸಕ್ತಿಯಿಂದ ವಿಚಾರಗಳನ್ನು ತಿಳಿದು ಹಿಂದಿರುಗಿ, ಅಂದಾಗ ಮಾತ್ರ ಇಂತಹ ಕಾರ್ಯಾಗಾರಗಳಿಗೆ ಅರ್ಥ ಬರುತ್ತದೆ.  ಮೊಬೈಲ್ ಬಳಕೆಯನ್ನು ಕಡಿಮೆಗೊಳಿಸಿ, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಿ, ಶಿಕ್ಷಣವಂತರಾದಾಗ ಮಾತ್ರ ಜೀವನದಲ್ಲಿ ಯಶಸ್ಸನ್ನು ಕಾಣಲು ಸಾಧ್ಯ ಎಂದು ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ವಿದ್ಯಾರ್ಥಿಗಳಿಗೆ ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಬಳ್ಳಾರಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಸುಭಾಶ್ ಎಮ್.ಎಸ್. ಅವರು ಮಾತನಾಡಿ, ತಳ ಸಮುದಾಯಕ್ಕೆ ಸ್ಥಾನಮಾನ, ಅಸ್ಪ್ರಶ್ಯತೆ ನಿವಾರಣೆ, ಮಹಿಳೆಯರಿಗೆ ಸಮಾನತೆ ಒದಗಿಸಿದ್ದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು.  ಸರ್ಕಾರದಿಂದ ಅಂಬೇಡ್ಕರ್ ರವರ 125ನೇ ಜಯಂತಿ ವರ್ಷಾಚರಣೆ ಆಚರಿಸಲಾಗುತ್ತಿದೆ.  ಸಮಾಜದಲ್ಲಿ ಇಂದಿಗೂ ನಡೆಯುತ್ತಿರುವ ಅಸ್ಪ್ರಶ್ಯತೆ, ಇತ್ಯಾದಿ ಸಾಮಾಜಿಕ ವ್ಯವಸ್ಥೆಗಳನ್ನು ಹೋಗಲಾಡಿಸಿದಾಗ ಮಾತ್ರ ಅವರ ಚಿಂತನೆಗಳಿಗೆ ಬೆಲೆ ಬರುತ್ತದೆ.   ವಿಶ್ವಸಂಸ್ಥೆಯಲ್ಲಿ ಕೂಡ ಅಂಬೇಡ್ಕರ್ ಅವರ ಬಗ್ಗೆ ಚಿಂತನೆ ನಡೆಯುತ್ತಿದೆ.  ಅವರು ಕೇವಲ ಯಾವುದೇ ಒಂದು ಸಮುದಾಯಕ್ಕೆ ಸೀಮಿತರಲ್ಲ, ಅವರು ರಾಷ್ಟ್ರದ ಆಸ್ತಿ ಹಾಗೂ ಮಹಾ ಮಾನವತಾವಾದಿಗಳಾಗಿದ್ದಾರೆ.  ಬಾಬಾ ಸಾಹೇಬರ್ ರವರ ಚಿಂತನೆ, ತತ್ವಾದರ್ಶಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಎಸ್.ಎ ಪಾಟೀಲ್, ಮೌಲ್ಯಮಾಪನ ಕುಲಸಚಿವ ಪ್ರೊ. ಸಿ.ಬಿ ಹೊನ್ನುಸಿದ್ಧಾರ್ಥ, ಸಿಂಡಿಕೇಟ್ ಸದಸ್ಯರಾದ ಕೆ.ಬಿ ಬ್ಯಾಳಿ, ಸಾವಿತ್ರಿ ಮುಜುಂದಾರ್ ಹಾಗೂ ಅಲ್ಲಾವಲಿ ಭಾಷಾ ಕೋಲ್ಮಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಬಹು ಶಿಸ್ತಿಯ ಸಂಶೋಧನಾ ಕೇಂದ್ರದ ಸಂಯೋಜಕ ಡಾ. ಮೋಹನ್ ದಾಸ್,  ಕೊಪ್ಪಳ  ಸ್ನಾತಕೋತ್ತರ ಕೇಂದ್ರದ ವಿಶೇಷಾಧಿಕಾರಿ ಡಾ. ಮನೋಜ್ ಡೊಳ್ಳಿ ಉಪಸ್ಥಿತರಿದ್ದರು.  ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.