Monday, 18 September 2017

ಮುಖ್ಯಮಂತ್ರಿಗಳ ಸ್ವಯಂ ಉದ್ಯೋಗ ಯೋಜನೆ : ಅರ್ಜಿ ಆಹ್ವಾನ


ಕೊಪ್ಪಳ ಸೆ. 18 (ಕರ್ನಾಟಕ ವಾರ್ತೆ): ಕೊಪ್ಪಳ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ವತಿಯಿಂದ ಗ್ರಾಮೀಣ ನಿರುದ್ಯೋಗ ವಿದ್ಯಾವಂತ ಯುವಕ/ ಯುವತಿಯರಿಗೆ ಸ್ವಯಂ ಉದ್ಯೋಗ ಕಲ್ಪಿಸಲು ಮುಖ್ಯ ಮಂತ್ರಿಗಳ ಸ್ವಯಂ ಉದ್ಯೋಗ ಯೋಜನೆ (ಸಿಎಂಇಜಿಪಿ) ಯನ್ನು ಪ್ರಸಕ್ತ ಸಾಲಿಗೂ ಮುಂದುವರೆಸಲಾಗಿದ್ದು ಸೌಲಭ್ಯ ಪಡೆಯಲು ಆಸಕ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
    ಯೋಜನೆಯ ಗರಿಷ್ಠ ವೆಚ್ಚ ರೂ.10 ಲಕ್ಷ ರೂ. ಗಳು, ಉತ್ಪಾದನಾ ಮತ್ತು ಸೇವಾ ಚಟುವಟಿಕೆಗಳಿಗೆ ಬ್ಯಾಂಕುಗಳು ನೀಡುವ ಸಾಲದ ಮೊತ್ತದ ಮೇಲೆ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಶೇ. 25% (ಗರಿಷ್ಠ ಮೊತ್ತ ರೂ.2.50 ಲಕ್ಷ ಮಾತ್ರ) ಮತ್ತು ವಿಶೇಷ ವರ್ಗದ (ಪ.ಜಾತಿ/ ಪ.ಪಂಗಡ/ ಹಿಂದುಳಿದ ವರ್ಗ/ ಅಲ್ಪಸಂಖ್ಯಾತರು/ ಅಂಗವಿಕಲರು/ ಮಾಜಿ ಸೈನಿಕ/ ಮಹಿಳೆ) ಫಲಾನುಭವಿಗಳಿಗೆ ಶೇ. 35% (ಗರಿಷ್ಠ ಮೊತ್ತ ರೂ.3.50 ಲಕ್ಷ) ಸಹಾಯಧನ ಸೌಲಭ್ಯ ಇರುತ್ತದೆ.  ಉದ್ದಿಮೆಯನ್ನು ಪ್ರಾರಂಭ ಮಾಡುವ ಸಾಮಾನ್ಯ ವರ್ಗದವರು ಯೋಜನೆಯ ವೆಚ್ಚದ ಶೇ. 10% ಮತ್ತು ವಿಶೇಷ ವರ್ಗದವರಿಗೆ ಶೇ. 5% ರಷ್ಟು ಸ್ವಂತ ಭಂಡವಾಳ ಹೂಡಬೇಕಾಗಿರುತ್ತದೆ. 
    ಅರ್ಜಿ ಸಲ್ಲಿಸಲು 21 ವರ್ಷ ತುಂಬಿರಬೇಕು.  ಸಾಮಾನ್ಯ ವರ್ಗದವರಿಗೆ ಗರಿಷ್ಠ 35 ವರ್ಷ, ವಿಶೇಷವರ್ಗದವರಿಗೆ (ಪ.ಜಾತಿ/ ಪ.ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಮಾಜಿ ಸೈನಿಕ ಮತ್ತು ಮಹಿಳೆಯರು) ಗರಿಷ್ಠ 45 ವರ್ಷ.  ಈ ಯೋಜನೆಯು ಹೊಸ ಘಟಕಗಳಿಗೆ ಮಾತ್ರ ಲಭ್ಯವಿರುತ್ತದೆ.  ಅಭ್ಯರ್ಥಿಯ ವಿದ್ಯಾರ್ಹತೆ 8ನೇ ತರಗತಿ ಪಾಸಾಗಿರಬೇಕು, ಅಥವಾ ಗುರುತಿಸಿದ ಶಿಕ್ಷಣ ಸಂಸ್ಥೆಗಳಿಂದ ವೃತ್ತಿಪರ ತರಬೇತಿ ಸಂಸ್ಥೆಯಿಂದ ವೃತ್ತಿಪರ ತರಬೇತಿ, ಐಟಿಐ, ಡಿಪ್ಲೋಮಾ ಪದವಿ ಹೊಂದಿರಬೇಕು.  ಆಸಕ್ತರು ಅರ್ಜಿಗಳನ್ನು ವೆಬ್‍ಸೈಟ್  http://cmegp.kar.nic.in ನಲ್ಲಿ ಅಕ್ಟೋಬರ್. 02 ರೊಳಗಾಗಿ ಸಲ್ಲಿಸಿ, ಅರ್ಜಿಯ ಪ್ರತಿ ಹಾಗೂ ನಿಗಧಿತ ದಾಖಲಾತಿಯೊಂದಿಗೆ ಕೊಪ್ಪಳ ಜಿಲ್ಲಾ ಕೈಗಾರಿಕ ಕೇಂದ್ರ, ಕಛೇರಿಗೆ ಸಲ್ಲಿಸಲುಬೇಕು.  ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08539-231473 ಕ್ಕೆ ಸಂಪರ್ಕಿಸಬಹುದು ಎಂದು ಕೊಪ್ಪಳ ಜಿಲ್ಲಾ ಖಾದಿ ಮತ್ತು ಗ್ರಾಮೋದ್ಯೋಗ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
Post a Comment