Friday, 15 September 2017

ಕಾರಟಗಿ: ಅಂಬೇಡ್ಕರ್ ನಿವಾಸ ಯೋಜನೆ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ


ಕೊಪ್ಪಳ ಸೆ. 15 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆ ಕಾರಟಗಿ ಪುರಸಭೆ ವತಿಯಿಂದ ಪ್ರಸಕ್ತ ಸಾಲಿನ ಡಾ. ಬಿ.ಆರ್. ಅಂಬೇಡ್ಕರ್ ನಿವಾಸ ಯೋಜನೆಯಡಿ ಪುರಸಭೆ ವ್ಯಾಪ್ತಿಯ ಸಾರ್ವಜನಿಕರಿಗಾಗಿ ಮನೆಗಳನ್ನು ಕಟ್ಟುವ ಸೌಲಭ್ಯ ಮಂಜೂರಾತಿಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. 
     ಕಾರಟಗಿ ಪುರಸಭೆ ವ್ಯಾಪ್ತಿಯ ವಿವಿಧ ವಾರ್ಡ್‍ಗಳಲ್ಲಿರುವ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ – 37 ಭೌತಿಕ ಗುರಿ ನಿಗದಿಪಡಿಸಿದ್ದು, ಪರಿಶಿಷ್ಟ ಪಂಗಡ – 59, ಸಾಮಾನ್ಯ – 35, ಹಾಗೂ ಅಲ್ಪಸಂಖ್ಯಾತರ - 6 ಫಲನಾಭವಿಗಳಿಗೆ  ಸೌಲಭ್ಯ ಮಂಜೂರಾತಿಗೆ ಗುರಿ ನಿಗದಿಪಡಿಸಿದೆ.  ಅರ್ಜಿ ಸಲ್ಲಿಸಲು ಅರ್ಜಿದಾರರು ಆಸ್ತಿ ಹೊಂದಿರಬೇಕು.  ಈ ಹಿಂದೆ ಸರ್ಕಾರದಿಂದ ಯಾವುದೇ ವಸತಿ ಯೋಜನೆಗಳಲ್ಲಿ ಈ ಸೌಲಭ್ಯ ಪಡೆದಿರಬಾರದು.  ಕಾರಟಗಿ ಪುರಸಭೆ ವ್ಯಾಪ್ತಿಯವರಾಗಿರಬೇಕು. 
ಆಸಕ್ತಿಯುಳ್ಳವರು ಅರ್ಜಿ ನಮೂನೆಯನ್ನು ಕಾರಟಗಿ ಪುರಸಭೆ ಕಾರ್ಯಾಲಯದಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಮತದಾರರ ಚೀಟಿ, ರೇಶನ್ ಕಾರ್ಡ್, ಆಧಾರ ಕಾರ್ಡ್, ತೆರಿಗೆ ಪಾವತಿಸಿದ ರಸೀದಿ, ಬ್ಯಾಂಕ್ ಖಾತೆಯ ಪ್ರಸ್ತಕ ಪ್ರತಿ, ನಮೂನೆ-3, ಮತ್ತು ಆಸ್ತಿಗೆ ಸಂಬಂಧಿಸಿದ ಇತರೆ ದಾಖಲಾತಿಗಳನ್ನು ಕಡ್ಡಾಯವಾಗಿ ಸ್ವಯಂ ದೃಢೀಕರಿಸಿ ಲಗತ್ತಿಸಿ ಸೆ. 18 ರೊಳಗಾಗಿ ಪುರಸಭೆ ಕಾರ್ಯಾಲಯಕ್ಕೆ ಸಲ್ಲಿಸಬೇಕು.  ಅವಧಿ ಮೀರಿ ಬಂದ ಹಾಗೂ ಅಸಂಪೂರ್ಣ ದಾಖಲೆಗಳನ್ನು ಒಳಗೊಂಡ ಅರ್ಜಿಗಳನ್ನು ಯಾವುದೇ ಕಾರಣ ನೀಡದೆ ತಿರಸ್ಕರಿಸಲಾಗುವುದು ಎಂದು ಕಾರಟಗಿ ಪುರಸಭೆ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment