Monday, 11 September 2017

ಸೆ. 22 ಮುಖ್ಯಮಂತ್ರಿಗಳ ಕಾರ್ಯಕ್ರಮ : ಸಮಾರಂಭಕ್ಕೆ ಫಲಾನುಭವಿಗಳನ್ನು ಕರೆತರಲು 966 ಬಸ್ ಸೇವೆ ಬಳಕೆ- ಬಸವರಾಜ ರಾಯರಡ್ಡಿ


ಕೊಪ್ಪಳ ಸೆ. 11 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹಾಗೂ ವಿವಿಧ ಯೋಜನೆ ಫಲಾನುಭವಿಗಳ ಸಮಾವೇಶದಲ್ಲಿ ಪಾಲ್ಗೊಳ್ಳಲು ಸೆ. 22 ರಂದು ಮುಖ್ಯಮಂತ್ರಿಗಳು ಕೊಪ್ಪಳಕ್ಕೆ ಆಗಮಿಸಲಿದ್ದು, ಸಮಾರಂಭಕ್ಕೆ ಜಿಲ್ಲೆಯ ವಿವಿಧೆಡೆಗಳಿಂದ ಫಲಾನುಭವಿಗಳನ್ನು ಕರೆತರಲು ಸಾರಿಗೆ ಸಂಸ್ಥೆಯ 966 ಬಸ್‍ಗಳ ಸೇವೆ ಪಡೆಯಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ತಿಳಿಸಿದರು.
     ಮುಖ್ಯಮಂತ್ರಿಗಳ ಕಾರ್ಯಕ್ರಮ ಸಂಬಂಧ ಸಿದ್ಧತೆಗಳನ್ನು ಕೈಗೊಳ್ಳಲು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಸೋಮವಾರದಂದು ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಕೊಪ್ಪಳ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವುದು ಹಾಗೂ ವಿವಿಧ ಯೋಜನೆ ಫಲಾನುಭವಿಗಳ ಸಮಾವೇಶದಲ್ಲಿ ಭಾಗವಹಿಸಲು ಮುಖ್ಯಮಂತ್ರಿಗಳು ಸೆ. 22 ರಂದು ಕೊಪ್ಪಳಕ್ಕೆ ಆಗಮಿಸುವರು.  ಅನ್ನಭಾಗ್ಯ, ಕ್ಷೀರಭಾಗ್ಯ, ವಿದ್ಯಾಸಿರಿ ಸೇರಿದಂತೆ ಹಲವು ಯೋಜನೆಗಳ ಮೂಲಕ ಸರ್ಕಾರ ಪ್ರತಿ ವರ್ಷ ಸಬ್ಸಿಡಿಗಾಗಿ ಸುಮಾರು 20 ಸಾವಿರ ಕೋಟಿ ರೂ. ಗಳನ್ನು ಫಲಾನುಭವಿಗಳಿಗಾಗಿ ಒದಗಿಸುತ್ತಿದೆ.  ಪ್ರಸಕ್ತ ವರ್ಷ ಸುಮಾರು 28 ಸಾವಿರ ಕೋಟಿ ರೂ. ಸಬ್ಸಿಡಿಯನ್ನು ಹಲವು ಯೋಜನೆಗಳಿಗಾಗಿ ಸರ್ಕಾರ ಖರ್ಚು ಮಾಡುತ್ತಿದೆ.  ಸಹಕಾರಿ ಸಂಘಗಳಲ್ಲಿನ 50 ಸಾವಿರ ರೂ. ವರೆಗಿನ ಸಾಲವನ್ನು ಮನ್ನಾ ಮಾಡುವ ಮಹತ್ವದ ಕಾರ್ಯವನ್ನು ನಮ್ಮ ಸರ್ಕಾರ ಕೈಗೊಂಡು, ರೈತರ ಹಿತ ಕಾಪಾಡಿದೆ.  ಸರ್ಕಾರದ ಈ ಸಾಧನೆ ಹಾಗೂ ಯೋಜನೆಗಳ ಕುರಿತು ಫಲಾನುಭವಿಗಳಿಂದಲೇ, ಅವರ ಅಭಿಪ್ರಾಯವನ್ನು ಆಲಿಸಬೇಕಾಗುತ್ತದೆ.  ಹೀಗಾಗಿ ವಿವಿಧ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ಸೆ. 22 ರಂದು ಆಯೋಜಿಸಲಾಗುತ್ತಿದ್ದು, ಇದು ಯಾವುದೇ ರಾಜಕೀಯ ಸಮಾವೇಶ ಆಗಿರುವುದಿಲ್ಲ.  ಕಾರ್ಯಕ್ರಮವನ್ನು ಅರ್ಥಪೂರ್ಣವನ್ನಾಗಿಸಲು ನಾವು ಯೋಜನೆ ರೂಪಿಸುತ್ತಿದ್ದೇವೆ.  ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿಗಳಿಂದ ಅನ್ನಭಾಗ್ಯ, ಕೃಷಿಭಾಗ್ಯ, ರೈತರ ಸಾಲ ಮನ್ನಾ ಹೀಗೆ ಹಲವು ಯೋಜನೆಗಳ ಫಲಾನುಭವಿಗಳನ್ನು ಕೊಪ್ಪಳಕ್ಕೆ ಸೆ. 22 ರಂದು ಕರೆಯಿಸಲಾಗುತ್ತಿದೆ.  ಇದಕ್ಕಾಗಿ ಸಾರಿಗೆ ಸಂಸ್ಥೆಯ 966 ಬಸ್‍ಗಳ ಸೇವೆ ಪಡೆಯಲು ನಿರ್ಧರಿಸಲಾಗಿದೆ.  ಯೋಜನೆ ಹಾಗೂ ಫಲಾನುಭವಿಗಳ ಸಂಖ್ಯೆಯ ಆಧಾರದ ಮೇಲೆ ವಿವಿಧ ತಾಲೂಕುಗಳಿಗೆ ಇಂತಿಷ್ಟು ಬಸ್‍ಗಳನ್ನು ಪಡೆಯಲು ಯೋಜನೆ ರೂಪಿಸಲಾಗಿದ್ದು, ಕೊಪ್ಪಳ ತಾಲೂಕಿಗೆ 250 ಬಸ್, ಯಲಬುಗಾ- 289, ಕುಷ್ಟಗಿ-177, ಗಂಗಾವತಿ ತಾಲೂಕಿಗೆ 250 ಬಸ್‍ಗಳನ್ನು ಫಲಾನುಭವಿಗಳನ್ನು ಕರೆತರಲು ಒದಗಿಸಲಾಗುವುದು.  ಕೊಪ್ಪಳ ಜಿಲ್ಲೆಯೂ ಸೇರಿದಂತೆ ನೆರೆಹೊರೆಯ ಜಿಲ್ಲೆಗಳಿಂದಲೂ ಸಾರಿಗೆ ಸಂಸ್ಥೆಗಳ ಬಸ್‍ಗಳನ್ನು ಬಳಸಲಾಗುತ್ತಿದ್ದು, ಆಯಾ ಜಿಲ್ಲೆಗಳ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿಗಳು, ಈಗಿನಿಂದಲೇ ಸಿದ್ಧತೆಗಳನ್ನು ಕೈಗೊಳ್ಳಬೇಕು.  ಗದಗ ಜಿಲ್ಲೆಯಿಂದ 227 ಬಸ್, ಬಾಗಲಕೋಟೆ- 120, ರಾಯಚೂರು-84, ಹೊಸಪೇಟೆ ವಿಭಾಗ- 166, ಬಳ್ಳಾರಿ ಜಿಲ್ಲೆ 105 ಅಲ್ಲದೆ ಉಳಿದಂತೆ ಕೊಪ್ಪಳ ಜಿಲ್ಲಾ ವಿಭಾಗದ ಎಲ್ಲ ಘಟಕಗಳಲ್ಲಿ ಲಭ್ಯವಿರುವ ಬಸ್‍ಗಳನ್ನು ಒದಗಿಸಬೇಕು, ಅಲ್ಲದೆ ಆಯಾ ತಹಸಿಲ್ದಾರರೊಂದಿಗೆ ಸಮನ್ವಯತೆಯಿಂದ ಕಾರ್ಯ ನಿರ್ವಹಿಸುವಂತೆ ಆಯಾ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಸೂಚನೆ ನೀಡಿದರು.
     ಪ್ರತಿ ಗ್ರಾಮ ಪಂಚಾಯತಿಯಿಂದ ಫಲಾನುಭವಿಗಳನ್ನು ಕರೆದುಕೊಂಡುಬಂದು, ಪುನಃ ಆಯಾ ಗ್ರಾಮಗಳಿಗೆ ಹಿಂದಿರುಗಲು ಅಗತ್ಯ ಕ್ರಮಗಳನ್ನು ಆಯಾ ಅಧಿಕಾರಿಗಳು ನಿರ್ವಹಿಸಬೇಕು, ಇದಕ್ಕಾಗಿ ಮೇಲ್ವಿಚಾರಣೆ ನಡೆಸಲು ಅಧಿಕಾರಿಗಳನ್ನು ನಿಯೋಜಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಮಂತ್ರಿಗಳು ಸೂಚನೆ ನೀಡಿದರು.
     ಸಭೆಯಲ್ಲಿ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್ ಶೆಟ್ಟಿ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಗದಗ, ಬಳ್ಳಾರಿ, ಹೊಸಪೇಟೆ, ಬಾಗಲಕೋಟೆ, ರಾಯಚೂರು, ಕೊಪ್ಪಳ ವಿಭಾಗಗಳ ಸಾರಿಗೆ ನಿಯಂತ್ರಣ ಅಧಿಕಾರಿಗಳು, ಜಿಲ್ಲೆಯ ತಾಲೂಕುಗಳ ತಹಸಿಲ್ದಾರರು, ಸಿಡಿಪಿಓಗಳು ವಿವಿಧ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

Post a Comment