Friday, 10 March 2017

ಸಮಾಜಕ್ಕೆ ಜೀವನ ಮುಡುಪಾಗಿಡುವವರೇ ಮಹನೀಯರು : ಡಾ. ರುದ್ರೇಶ ಘಾಳಿ


ಕೊಪ್ಪಳ, ಮಾ.10 (ಕರ್ನಾಟಕ ವಾರ್ತೆ):  ಸಮಾಜದ ಸೇವೆಗಾಗಿ ತಮ್ಮ ಜೀವನವನ್ನು ಯಾರು ಮುಡುಪಾಗಿಡುವರೋ ಅವರೇ ಮಹನೀಯರಾಗಲು ಸಾಧ್ಯ ಎಂದು ಕೊಪ್ಪಳ ಅಪರ ಜಿಲ್ಲಾಧಿಕಾರಿ ಡಾ.ರುದ್ರೇಶ ಘಾಳಿ ಹೇಳಿದರು.

    ಕೊಪ್ಪಳ ಜಿಲ್ಲಾಡಳಿತ ವತಿಯಿಂದ ಶುಕ್ರವಾರದಂದು ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ದಲಿತ ವಚನಕಾರರ ಜಯಂತಿ ಆಚರಣೆ ಕಾರ್ಯಕ್ರಮದ ಉದ್ಘಾಟನೆ ನೆರೆವೇರಿಸಿ ಅವರು ಮಾತನಾಡಿದರು.

    12ನೇ ಶತಮಾನದಲ್ಲಿ ಆದ ಧಾರ್ಮಿಕ ಸುಧಾರಣೆ, ಭಕ್ತಿ ಚಳುವಳಿ ಹಾಗೂ ವಚನ ಚಳುವಳಿಗಳು ಇಡಿ ವಿಶ್ವಕ್ಕೆ ಮಾದರಿಯಾಗಿವೆ.  ಮಹಿಳೆಯ ರಕ್ಷಣೆ, ಮಹಿಳಾ ಸಮಾನತೆ, ಜಾತಿ ಪದ್ಧತಿಯ ನಿರ್ಮೂಲನೆ ಹೀಗೆ ಅನೇಕ ಬಗೆಯ ಸುಧಾರಣಾ ಪ್ರಯತ್ನಗಳು ನಡೆದಿವೆ.  ಪರಂಪರೆಯಿಂದ ನಿರ್ಲಕ್ಷ್ಯಕ್ಕೊಳಗಾದ ಸಮಾಜದ ಕಣ್ಣು ತೆರೆಯಿಸಿ, ಅವರಲ್ಲಿ ಆತ್ಮವಿಶ್ವಾಸ ಮೂಡಿಸಿದ ಸತ್ಯ ಶುದ್ಧ ಕಾಯಕದಿಂದ ಬದುಕನ್ನು ನಡೆಸುವ ಆದರ್ಶಗಳನ್ನು ಮುಂದಿಟ್ಟ ಮಹಾಪುರುಷರುಗಳಾದ ಮಾದಾರ ಚನ್ನಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಮಾದಾರ ಧೂಳಯ್ಯ ಮತ್ತು ಉರಿಲಿಂಗ ಪೆದ್ದಿ ಅವರು ಸಮಾಜಕ್ಕೆ ನೀಡಿದ ಕೊಡುಗೆಗಳು ಅಪಾರ.  ಇವರ ವಚನಗಳು ಹಾಗೂ ಬೋಧನೆಗಳನ್ನು ಸ್ಮರಿಸಲು ಹಾಗೂ ಜನರಲ್ಲಿ ಅರಿವು ಮೂಡಿಸಲು ಇಂತಹ ಮಹನಿಯರ ಜಂಯಂತಿಗಳನ್ನು ಸರ್ಕಾರದ ವತಿಯಿಂದ ಆಚರಿಸಲಾಗುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ರುದ್ರೇಶ ಘಾಳಿ ಹೇಳಿದರು.
    ದಲಿತ ವಚನಕಾರರ ಕುರಿತು ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಸಂಗಮೇಶ ಉಪಾಸೆ ಅವರು ವಿಶೇಷ ಉಪನ್ಯಾಸ ನೀಡಿ, ವಚನ ಎನ್ನುವಂತಹದ್ದೇ ಬಹಳ ವಿಚಿತ್ರ, ಮನುಷ್ಯನಿಗೆ ಅತಿ ಅವಶ್ಯಕವಾದುದ್ದು.  ಕರ್ನಾಟಕದಲ್ಲಿ 12ನೇ ಶತಮಾನದಲ್ಲಿ ವಚನ ಚಳುವಳಿಗಳು ಪ್ರಾರಂಭಗೊಂಡವು.  ಇದಕ್ಕೆ ಮೂಲ ಕಾರಣೀಕರ್ತ ಜೇಡರ ದಾಸಿಮಯ್ಯ.  ವೇದ, ಪುರಾಣಗಳು ಸಂಸ್ಕøತದಲ್ಲಿದ್ದು, ಜನರಿಗೆ ಅವುಗಳ ಬಗ್ಗೆ ತಿಳುವಳಿಕೆ ಇಲ್ಲದ ಕಾರಣ ವಚನಕಾರರು, ಜನಸಮಾನ್ಯರಿಗೆ ತಮ್ಮ ವಚನಗಳ ಮೂಲಕ ಅರಿವು ಮೂಡಿಸಿದರು.  ದಲಿತ ವಚನಕಾರರಾದ ಮಾದಾರ ಚನ್ನಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಮಾದಾರ ಧೂಳಯ್ಯ ಹಾಗೂ ಉರಿಲಿಂಗ ಪೆದ್ದಿ ಅವರ ಜೀವನ, ವಚನ ಹಾಗೂ ಬೋಧನೆಗಳ ಕುರಿತು ತಮ್ಮ ಉಪನ್ಯಾಸದಲ್ಲಿ ಸವಿವರ ಮಾಹಿತಿ ನೀಡಿದರು.
    ಕಾರ್ಯಕ್ರಮದ ಪೂರ್ವದಲ್ಲಿ ದಲಿತ ವಚನಕಾರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಅಲ್ಲದೆ ದಲಿತ ವಚನಕಾರರ ಕುರಿತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಿಸಿರುವ ‘ನಮ್ಮ ಹೆಮ್ಮೆಯ ವಚನಕಾರರು’ ಮಡಿಕೆ ಪತ್ರವನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿ, ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.  ಸಮಾರಂಭದಲ್ಲಿ ಪುರಸಭೆ ತಹಶಿಲ್ದಾರ ಶಿವಲಿಂಗಪ್ಪ ಪಟ್ಟದಕಲ್ಲ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿಜಯಕುಮಾರ, ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ. ಶಿವಣ್ಣ, ಮಹಾಂತೇಶ ಮಲ್ಲನಗೌಡರ, ಶಿವಾನಂದ ಹೊದ್ಲೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.  ದಲಿತ ವಚನಕಾರರ ವಚನಗಳನ್ನು ಹಾಡಿದ ವಿದ್ಯಾರ್ಥಿಗಳಿಗೆ ಹಾಗೂ ವಿಶೇಷ ಉಪನ್ಯಾಸ ನೀಡಿದ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಸಂಗಮೇಶ ಉಪಾಸೆ ಅವರಿಗೆ ಸನ್ಮಾನಿಸಲಾಯಿತು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಿರ್ದೇಶಕ ಕೃಷ್ಣಮೂರ್ತಿ ದೇಸಾಯಿ ಸ್ವಾಗತಿಸಿದರು.  ಸಿ.ಬಿ. ಜಡಿಯವರ್ ಕಾರ್ಯಕ್ರಮವನ್ನು ನಿರೂಪಿಸಿ ಕೊನೆಯಲ್ಲಿ ವಂದಿಸಿದರು. 
Post a Comment