Monday, 13 March 2017

ಬಸವರಾಜ ರಾಯರಡ್ಡಿ ಅವರಿಂದ ಸ್ವಚ್ಛ ಭಾರತ ಕ್ಯಾಪ್, ಬ್ಯಾಂಡ್ ಹಾಗೂ ಬ್ಯಾಡ್ಜ್ ಬಿಡುಗಡೆ

ಕೊಪ್ಪಳ ಮಾ. 13 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಶೌಚಾಲಯ ನಿರ್ಮಾಣದ ಜಾಗೃತಿಗಾಗಿ, ಉತ್ತಮ ಕಾರ್ಯ ನಿರ್ವಹಿಸಿರುವವರಿಗೆ ಸ್ವಚ್ಛ ಭಾರತ ಮಿಷನ್ ವತಿಯಿಂದ ಕೊಡಮಾಡುವ ಸ್ವಚ್ಛ ಭಾರತ ಕ್ಯಾಪ್, ಬ್ಯಾಂಡ್ ಹಾಗೂ ಬ್ಯಾಡ್ಜ್‍ಗಳನ್ನು ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಸೋಮವಾರದಂದು ಜಿ.ಪಂ. ಸಭಾಂಗಣದಲ್ಲಿ ಬಿಡುಗಡೆ ಮಾಡಿದರು.
     ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಒಟ್ಟು 246563 ಕುಟುಂಬಗಳಿದ್ದು, ಈ ಪೈಕಿ 123196 ಕುಟುಂಬಗಳು ವಯಕ್ತಿಕ ಶೌಚಾಲಯ ಹೊಂದಬೇಕಿದೆ.  2016-17 ನೇ ಸಾಲಿನಲ್ಲಿ ಫೆಬ್ರವರಿ ಅಂತ್ಯದವರೆಗೆ 19746 ಶೌಚಾಲಯಗಳನ್ನು ನಿರ್ಮಿಸಲಾಗಿದೆ.  ಪ್ರಸಕ್ತ ವರ್ಷ ಜಿಲ್ಲಾ ಪಂಚಾಯತಿಯು ಶಿಕ್ಷಣ ಇಲಾಖೆಯ ಜೊತೆಗೂಡಿ, ಶೌಚಾಲಯ ಇಲ್ಲದ ಮಕ್ಕಳ ಸರ್ವೆ ಮಾಡಿಸಿ, ಇಂತಹ ಮಕ್ಕಳಿಂದ ಅವರ ಪಾಲಕರಿಗೆ ಪತ್ರ ಚಳುವಳಿ ಪ್ರಾರಂಭಿಸಿ, ಶೌಚಾಲಯದ ಅವಶ್ಯಕತೆಯನ್ನು ಮನವರಿಕೆ ಮಾಡಿ, ಮನವೊಲಿಸುವ ಪ್ರಯತ್ನ ನಡೆಸಲಾಯಿತು.  ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶ ಸೇರಿದಂತೆ ಒಟ್ಟು 1. 26 ಲಕ್ಷ ಶಾಲಾ ಮಕ್ಕಳ ಮನೆಗಳಲ್ಲಿ ಶೌಚಾಲಯ ನಿರ್ಮಿಸಬೇಕಿದ್ದು, ಜನವರಿ 2017 ರಿಂದೀಚೆಗೆ ಶೌಚಾಲಯ ನಿರ್ಮಿಸಿದ ಮಕ್ಕಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಜಿ.ಪಂ. ಹಾಗೂ ಯುನಿಸೆಫ್ ಸಂಸ್ಥೆ ವತಿಯಿಂದ ಮಕ್ಕಳಿಗೆ ಸ್ವಚ್ಛ ಭಾರತ ಕ್ಯಾಪ್, ಬ್ಯಾಂಡ್ ಹಾಗೂ ಬ್ಯಾಡ್ಜ್‍ಗಳನ್ನು ಶಿಕ್ಷಣ ಇಲಾಖೆಯ ಮೂಲಕ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ.  ಇದುವರೆಗಿನ ಮಾಹಿತಿಯಂತೆ ಪತ್ರ ಚಳುವಳಿ ಅಭಿಯಾನದ ನಂತರ ಜನವರಿ 26 ರ ನಂತರ 650 ಮಕ್ಕಳ ಮನೆಗಳಲ್ಲಿ ಶೌಚಾಲಯ ನಿರ್ಮಿಸಿದ್ದು, ಇಂತಹ ಮಕ್ಕಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸ್ವಚ್ಛ ಭಾರತ ಕ್ಯಾಪ್, ಬ್ಯಾಂಡ್ ಹಾಗೂ ಬ್ಯಾಡ್ಜ್‍ಗಳನ್ನು ವಿತರಿಸಲಾಗುವುದು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜು ತಿಳಿಸಿದರು.
  ಜಿಲ್ಲಾ ಪಂಚಾಯತಿ ಅಧ್ಯಕ್ಷ ಎಸ್.ಬಿ. ನಾಗರಳ್ಳಿ, ಉಪಾಧ್ಯಕ್ಷೆ ಲಕ್ಷ್ಮಮ್ಮ ನೀರಲೂಟಿ, ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಜಿ.ಪಂ. ಉಪಕಾರ್ಯದರ್ಶಿ ಎನ್.ಕೆ. ತೊರವಿ, ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಮಂತ್ರಿಗಳ ಆಪ್ತ ಕಾರ್ಯದರ್ಶಿ ಡಾ. ಪ್ರವೀಣಕುಮಾರ್ ಜಿ.ಎಲ್. ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ಹಲವು ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Post a Comment