Wednesday, 8 March 2017

ಮಗುವಿನ ಬಾಳಿಗೆ ಆಶಾಕಿರಣವಾದ ಕೊಪ್ಪಳ ಕಿಮ್ಸ್ ಸಂಸ್ಥೆ


ಕೊಪ್ಪಳ ಮಾ. 08 (ಕರ್ನಾಟಕ ವಾರ್ತೆ): ಸುಮಾರು ಎರಡು ಲಕ್ಷ ಮಕ್ಕಳ ಪೈಕಿ ಒಂದು ಮಗುವಿಗೆ  ಒಟ್ಟಿಗೇ ಬರಬಹುದಾದ ಪೊಳ್ಳು ಎಲುಬು ಹಾಗೂ ಹರ್ನಿಯಾ ಕಾಯಿಲೆಯಿಂದ ಬಳಲುತ್ತಿದ್ದ ಎರಡು ವರ್ಷದ ಮಗುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸುವ ಮೂಲಕ, ಕೊಪ್ಪಳದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಆ ಮಗುವಿನ ಬಾಳಿಗೆ ಆಶಾಕಿರಣವಾಗಿದೆ.

     ಎರಡು ವರ್ಷದ ಮಗುವಿಗೆ ಜನನಾಂಗದ ಬಳಿ ಹರ್ನಿಯಾ ಕಾಯಿಲೆಯ ಚಿಕಿತ್ಸೆಗಾಗಿ ಕೊಪ್ಪಳ ಬೋಧಕ ಜಿಲ್ಲಾಸ್ಪತ್ರೆಗೆ ಇತ್ತೀಚೆಗೆ ದಾಖಲಾಗಿತ್ತು. ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರು ಹಾಗೂ ಚಿಕ್ಕ ಮಕ್ಕಳ ಶಸ್ತ್ರ ಚಿಕಿತ್ಸಕರಾದ ಡಾ.ಶಂಕರ ಮಲಪುರೆಯವರು ಮಗುವನ್ನು ಕೂಲಂಕಷವಾಗಿ ಪರಿಶೀಲಿಸಿ, ಮಗುವಿನ ಬಹುತೇಕ ಕೈ-ಕಾಲಿನ ಎಲ್ಲ ಮೂಳೆಗಳು ಭಾಗಶಃ ಮುರಿದಿದ್ದನ್ನು ಗಮನಿಸಿದರು.  ಆಸ್ಪತ್ರೆಯ ಚಿಕ್ಕ ಮಕ್ಕಳ ವೈದ್ಯರ ಜೊತೆಗೆ ಸಮಾಲೋಚಿಸಿದಾಗ ಈ ಮಗುವಿನ ಎಲುಬುಗಳ ಬೆಳವಣಿಗೆಯಲ್ಲಿ ಕೊರತೆ ಕಂಡುಬಂದಿದೆ. ಎಲುಬುಗಳು ಗಟ್ಟಿ-ಮುಟ್ಟಾಗಿರದೇ ಅತಿ ಮೃದುವಾಗಿದ್ದುದು ಕಂಡು ಬಂದಿದೆ. ಎಲುಬು ನಿರ್ಮಾಣ ಮಾಡುವ ಜೀವಕೋಶಗಳ ಕೊರತೆಯಿಂದಾಗಿ ಎಲುಬು ಪೊಳ್ಳಾಗಿ  ಬೇಗನೆ ಮುರಿಯುತ್ತವೆ. ಈ ಕಾಯಿಲೆಗೆ ಆಸ್ಟೀಯೋ ಜನಿಸೀಸ್ ಇಂಪ್‍ರ್ಫೆಕ್ಟಾ ಎಂದು ಕರೆಯುತ್ತಾರೆ. ಈ ಕಾಯಿಲೆ ಅನುವಂಶಿಕವಾಗಿದ್ದು, ಯಾವುದೇ ನಿಖರ ಚಿಕಿತ್ಸೆ ಇರುವುದಿಲ್ಲ. ಈ ಕಾಯಿಲೆ ಜೊತೆಗೆ ಜನನಾಂಗದ ಬಳಿ ಹರ್ನಿಯಾ ಉಂಟಾಗಿದ್ದು ಅದರಲ್ಲಿ ಕರಳು ಹೊರಗೆ ಚಾಚಿ ಬರುತ್ತಿತ್ತು. ಇದಕ್ಕೆ ತಕ್ಷಣ ಶಸ್ತ್ರಕ್ರಿಯೆ ಮಾಡುವುದು ಅತ್ಯಗತ್ಯವಾಗಿತ್ತು.  ಸಂಸ್ಥೆಯ ಅರವಳಿಕೆ ತಜ್ಞರು, ಕೌಶಲ್ಯದಿಂದ ಅರವಳಿಕೆ ನೀಡಿರುವುದರಿಂದ, ಮಗುವಿಗೆ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನೆರವೇರಿಸಲಾಗಿದೆ.  ಮಕ್ಕಳಲ್ಲಿ ಹರ್ನಿಯಾ ಕಾಯಿಲೆ ಸಾಮಾನ್ಯವಾಗಿ ಕಾಣಿಸಿಕೊಂಡರೂ, ಇದರ ಜೊತೆಗೆ ಪೊಳ್ಳು ಎಲುಬು ರೋಗವೂ ಸೇರಿಕೊಂಡು ಎರಡೂ ರೋಗಗಳು ಒಟ್ಟೊಟ್ಟಿಗೆ ಕಾಣಿಸಿಕೊಳ್ಳುವುದು ಸುಮಾರು 02 ಲಕ್ಷ ಮಕ್ಕಳ ಪೈಕಿ ಒಂದು ಮಗುವಿಗೆ ಇಂತಹ ರೋಗ ಕಂಡುಬರುವ ಸಾಧ್ಯತೆ ಇದೆ ಎನ್ನುತ್ತಾರೆ ಡಾ. ಶಂಕರ ಮಲಪುರೆ ಅವರು.  ಮಗುವಿಗೆ ಪೊಳ್ಳು ಎಲುಬು ರೋಗಕ್ಕೂ ಚಿಕಿತ್ಸೆಯನ್ನು ಉಚಿತವಾಗಿ ದೊರಕಿಸಿಕೊಡಲು ಕಿಮ್ಸ್‍ನ ನಿರ್ದೇಶಕ ಡಾ. ಶಂಕರ ಮಲಪುರೆ ಅವರು ಮುಂದಾಗಿದ್ದು, ಮಗುವಿಗೆ ಮೂರು ತಿಂಗಳಿಗೊಮ್ಮೆ ಇಂಜೆಕ್ಷನ್ ಕೊಡುವ ಔಷಧಿಯನ್ನು ಬೇರೆಡೆಯಿಂದ ತರಿಸಿಕೊಳ್ಳಲು ಸಿದ್ಧತೆ ಮಾಡಿಕೊಂಡಿದ್ದಾರೆ.  ಹೆಚ್ಚಿನ ಹಣ ಖರ್ಚು ಮಾಡಿ, ಮಕ್ಕಳಿಗೆ ಚಿಕಿತ್ಸೆ ಕೊಡಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿರುವ ಬಡವರ ಪಾಲಿಗೆ ಕೊಪ್ಪಳದ ಕಿಮ್ಸ್ ಸಂಸ್ಥೆ ಆಶಾಕಿರಣವಾಗಿ ಮೂಡಿ ಬಂದಿರುವುದು ಸಂತಸದ ಸಂಗತಿಯಾಗಿದೆ.
Post a Comment