Monday, 13 March 2017

ಶುದ್ಧ ಕುಡಿಯುವ ನೀರು ಘಟಕಗಳ ಗುಣಮಟ್ಟದ ಪರಿಶೀಲನೆ- ಬಸವರಾಜ ರಾಯರಡ್ಡಿ

ಕೊಪ್ಪಳ ಮಾ. 13 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಿಂದ ಸ್ಥಾಪಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ವಸ್ತುಸ್ಥಿತಿ ಹಾಗೂ ನೀರಿನ ಗುಣಮಟ್ಟದ ಬಗ್ಗೆ ಪರಿಶೀಲಿಸಿ, ಹದಿನೈದು ದಿನಗಳ ಒಳಗಾಗಿ ವರದಿ ಸಲ್ಲಿಸುವಂತೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಜಿಲ್ಲಾ ಪಂಚಾಯತಿಯ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಸೋಮವಾರದಂದು ಏರ್ಪಡಿಸಲಾಗಿದ್ದ ಜಿಲ್ಲಾ ಪಂಚಾಯತಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಕೊಪ್ಪಳ ಜಿಲ್ಲೆಯ ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ಯೋಜನೆಗಳಡಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ.  ಆದರೆ, ಈ ಪೈಕಿ ಶೇ. 50 ರಷ್ಟು ಘಟಕಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ.  ಇನ್ನು ಕೆಲವು ಸ್ಥಗಿತಗೊಂಡಿವೆ. ಕೆಲ ಘಟಕಗಳು ನೆಪಮಾತ್ರಕ್ಕೆ ಇದ್ದು, ಬೋರ್‍ವೆಲ್ ನೀರನ್ನು ಶುದ್ಧೀಕರಿಸದೆ, ಯಥಾವತ್ತಾಗಿ, ಜನರಿಗೆ ಪೂರೈಕೆ ಮಾಡಲಾಗುತ್ತಿದೆ ಎನ್ನುವ ದೂರುಗಳು ವ್ಯಾಪಕವಾಗಿದೆ.  ಸರ್ಕಾರದ ಯೋಜನೆಯನ್ನು ಅನುಷ್ಟಾನಗೊಳಿಸುವ ಅಧಿಕಾರಿಗಳು, ಗುತ್ತಿಗೆದಾರರು, ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತರದೇ ಇರುವುದರಿಂದ, ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ.  ಹೀಗಾಗಿ ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಸ್ಥಾಪಿಸಲಾಗಿರುವ ಎಲ್ಲ ಶುದ್ಧ ಕುಡಿಯುವ ನೀರಿನ ಘಟಕಗಳ ನಗರ, ಪಟ್ಟಣ ಮತ್ತು ಗ್ರಾಮವಾರು ವರದಿ ಸಿದ್ಧಗೊಳ್ಳಬೇಕು.  ಎಲ್ಲ ಘಟಕಗಳ ನೀರಿನ ಮಾದರಿಯನ್ನು ಸಂಗ್ರಹಿಸಿ, ಪ್ರಯೋಗಾಲಯದಲ್ಲಿ ನೀರಿನ ಗುಣಮಟ್ಟದ ಪರೀಕ್ಷೆ ಕೈಗೊಂಡು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯವರು ವರದಿ ಸಲ್ಲಿಸಬೇಕು.  ಈ ರೀತಿ ಸಂಗ್ರಹಿಸುವ ಸಮಗ್ರ ವರದಿಯ ಜೊತೆಗೆ  ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿರುವ ಇಲಾಖೆ ಹೆಸರು, ಕಂಪನಿ ಹೆಸರು, ನೀರಿನ ಮೂಲ, ಘಟಕದ ವಸ್ತು ಸ್ಥಿತಿಯನ್ನು ಮಾ. 25 ರೊಳಗಾಗಿ ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಿಕ್ಷಕರ ನೇಮಕಾತಿಗೆ ಪ್ರಸ್ತಾವನೆ ಸಲ್ಲಿಸಿ :
***************ಜಿಲ್ಲೆಯಲ್ಲಿ ಖಾಲಿ ಇರುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ನೇಮಕಾತಿಗಾಗಿ ಕೂಡಲೆ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಡಿಡಿಪಿಐ ಅವರಿಗೆ ಸೂಚನೆ ನೀಡಿದರು.  ಜಿಲ್ಲೆಯಲ್ಲಿ 955- ಪ್ರಾಥಮಿಕ ಶಾಲಾ ಶಿಕ್ಷಕರು, 262- ಪ್ರೌಢಶಾಲಾ ಶಿಕ್ಷಕರ ಹುದ್ದೆಗಳು ಖಾಲಿ ಇವೆ.  ಅಲ್ಲದೆ ಕೆಲವು ಪ್ರೌಢಶಾಲೆಗಳಲ್ಲಿ ಇಂಗ್ಲೀಷ್ ಶಿಕ್ಷಕರ ಹುದ್ದೆ ಮಂಜೂರಿಯೇ ಆಗಿಲ್ಲ.  ಇದರಿಂದ ಗುಣಮಟ್ಟದ ಶಿಕ್ಷಣ ನೀಡಲು ಹೇಗೆ ಸಾಧ್ಯ ಎಂದು ಜಿಲ್ಲಾ ಮಂತ್ರಿಗಳು ಅಸಮಾಧಾನ ವ್ಯಕ್ತಪಡಿಸಿದರು.  ಕೂಡಲೆ ಈ ಎಲ್ಲ ಹುದ್ದೆಗಳ ಭರ್ತಿಗಾಗಿ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಕೊಡಬೇಕು.  ಶಿಕ್ಷಣ ಮಂತ್ರಿಗಳೊಂದಿಗೆ ಶೀಘ್ರದಲ್ಲಿಯೇ ಸಭೆ ನಡೆಸಿ, ಎಲ್ಲ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸುವವರ ವಿರುದ್ಧ ದೂರು ದಾಖಲಿಸಿ :
**************** ಕೊಪ್ಪಳ ಜಿಲ್ಲೆಯಲ್ಲಿ ಸರ್ಕಾರಿ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿರ್ಭೀತಿಯಿಂದ ಕೈಗೊಳ್ಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.  ನಿಷ್ಠೆ ಹಾಗೂ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾಧಿಕಾರಿಗಳಿಗೇ ಇತ್ತೀಚೆಗೆ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವರನ್ನು ಹೆದರಿಸುವ ಘಟನೆಗಳು ಜರುಗಿವೆ.  ಅಲ್ಲದೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೂ ಸಹ ಇಂತಹದೇ ಅನುಭವಗಳಾಗುತ್ತಿವೆ.  ಹೀಗಾಗಿ ಅಧಿಕಾರಿಗಳು ನಿರ್ಭೀತಿಯಿಂದ ಕಾರ್ಯ ನಿರ್ವಹಿಸುವ ರೀತಿ ವಾತಾವರಣವನ್ನು ಜಿಲ್ಲೆಯಲ್ಲಿ ಒದಗಿಸುವ ಅಗತ್ಯವಿದೆ ಎಂದು ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್ ಅವರು ಮಂತ್ರಿಗಳಲ್ಲಿ ಮನವಿ ಮಾಡಿಕೊಂಡರು.   ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸುವವರ ವಿರುದ್ಧ ಕಾನೂನು ರೀತ್ಯ ದೂರು ದಾಖಲಿಸಿ, ಅಂತಹವರು ಶಿಕ್ಷೆಗೆ ಗುರಿಯಾಗುವಂತೆ ನೋಡಿಕೊಳ್ಳಬೇಕು.  ಅಧಿಕಾರಿಗಳನ್ನು ಬೆದರಿಸುವ ಮೂಲಕ ಒತ್ತಡ ಹೇರುವವರನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಹಾಗೂ ಅಂತಹವರಿಗೆ ಯಾರೂ ಕೂಡ ಬೆಂಬಲ ನೀಡಬಾರದು ಎಂದು ಮಂತ್ರಿಗಳು ಹೇಳಿದರು.
     ಸಭೆಯಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಎಸ್.ಬಿ. ನಾಗರಳ್ಳಿ, ಉಪಾಧ್ಯಕ್ಷೆ ಲಕ್ಷ್ಮಮ್ಮ ನೀರಲೂಟಿ, ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಜಿ.ಪಂ. ಉಪಕಾರ್ಯದರ್ಶಿ ಎನ್.ಕೆ. ತೊರವಿ, ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಮಂತ್ರಿಗಳ ಆಪ್ತ ಕಾರ್ಯದರ್ಶಿ ಡಾ. ಪ್ರವೀಣಕುಮಾರ್ ಜಿ.ಎಲ್. ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ಹಲವು ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
Post a Comment