Friday, 10 March 2017

ಐದು ವರ್ಷದ ಅವಧಿಯಲ್ಲಿ ನೀರಾವರಿ ಯೋಜನೆಗಳಿಗೆ 60 ಸಾವಿರ ಕೋಟಿ ಅನುದಾನ- ಎಂ.ಬಿ. ಪಾಟೀಲ



ಕೊಪ್ಪಳ ಮಾ. 10 (ಕರ್ನಾಟಕ ವಾರ್ತೆ): ಪ್ರಸಕ್ತ ಸರ್ಕಾರ ಮೂರೂವರೆ ವರ್ಷಗಳ ಅಧಿಕಾರಾವಧಿಯಲ್ಲಿ ನೀರಾವರಿ ಯೋಜನೆಗಳಿಗಾಗಿ 40 ಸಾವಿರ ಕೋಟಿ ರೂ. ಅನುದಾನವನ್ನು ಒದಗಿಸಿದ್ದು, ಐದು ವರ್ಷಗಳ ಅಧಿಕಾರಾವಧಿಯಲ್ಲಿ ಒಟ್ಟು 60 ಸಾವಿರ ಕೋಟಿ ಅನುದಾನವನ್ನು ಖರ್ಚು ಮಾಡಿ, ಎಲ್ಲ ನೀರಾವರಿ ಯೋಜನೆಗಳನ್ನು ಅಂತಿಮ ಹಂತಕ್ಕೆ ಕೊಂಡೊಯ್ಯಲಿದೆ ಎಂದು ರಾಜ್ಯ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಅವರು ಹೇಳಿದರು.

     ಕೊಪ್ಪಳ ತಾಲೂಕು ಬೆಟಗೇರಿ ಗ್ರಾಮದಲ್ಲಿ 88 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ಅಳವಂಡಿ-ಬೆಟಗೇರಿ ಏತನೀರಾವರಿ ಯೋಜನೆ ಕಾಮಗಾರಿಯ ಶಿಲಾನ್ಯಾಸ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
     ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ನೀರಾವರಿ ಯೋಜನೆಗಳಿಗಾಗಿ ಪ್ರತಿ ವರ್ಷ 10 ಸಾವಿರ ಕೋಟಿ ರೂ. ಅನುದಾನ ಒದಗಿಸುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದ್ದರು.  ಅದನ್ನು ಮೀರಿ, ಕಳೆದ ಮೂರುವರೆ ವರ್ಷಗಳಲ್ಲಿಯೇ 40 ಸಾವಿರ ಕೋಟಿ ರೂ. ಅನುದಾನವನ್ನು ಸರ್ಕಾರ ಒದಗಿಸಿದೆ.  ಈ ಹಿಂದಿನ ಸರ್ಕಾರ ಐದು ವರ್ಷಗಳ ಅಧಿಕಾರಾವಧಿಯಲ್ಲಿ ಕೇವಲ 18 ಸಾವಿರ ಕೋಟಿ ರೂ. ಗಳ ಹಣ ಮಾತ್ರ ಖರ್ಚು ಮಾಡಿತ್ತು.  ಐದು ವರ್ಷಗಳ ಅಧಿಕಾರಾವಧಿಯಲ್ಲಿ ನಮ್ಮ ಸರ್ಕಾರ ನೀರಾವರಿ ಯೋಜನೆಗಳಿಗಾಗಿಯೇ ಒಟ್ಟು 60 ಸಾವಿರ ಕೋಟಿ ರೂ. ಗಳನ್ನು ಖರ್ಚು ಮಾಡಿ, ಪ್ರಗತಿಯ ಹಂತದಲ್ಲಿರುವ ಎಲ್ಲ ನೀರಾವರಿ ಯೋಜನೆಗಳನ್ನು ಅಂತಿಮ ಘಟಕ್ಕೆ ಕೊಂಡೊಯ್ಯಲಿದೆ.  ಬೆಟಗೇರಿ ಏತನೀರಾವರಿ ಯೋಜನೆ ಪೂರ್ಣಗೊಳಿಸಲು 13 ತಿಂಗಳ ಕಾಲಮಿತಿ ನಿಗದಿಪಡಿಸಲಾಗಿದ್ದು, ಒಂದು ವರ್ಷದೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಿ, ಲೋಕಾರ್ಪಣೆಗೊಳಿಸಲು ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ.  ಯೋಜನೆಯ ಜಾರಿಯಿಂದ 06 ಸಾವಿರ ಎಕರೆ ಭೂಮಿಗೆ ನೀರಾವರಿ ಲಭ್ಯವಾಗಲಿದೆ. ಸಿಂಗಟಾಲೂರು ಏತ ನೀರಾವರಿ ಯೋಜನೆಯನ್ನು ಪರಿಷ್ಕರಿಸಿದ ಕಾರಣದಿಂದ ಸ್ವಲ್ಪ ವಿಳಂಬವಾಗಿದ್ದು, ಬರುವ 6 ತಿಂಗಳ ಒಳಗಾಗಿ ಕೊಪ್ಪಳ ಜಿಲ್ಲೆಯ ಭಾಗಕ್ಕೆ ಯೋಜನೆಯಡಿ ನೀರು ಲಭ್ಯವಾಗಲಿದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಅವರು ಹೇಳಿದರು.


ಬಹದ್ದೂರಬಂಡಿ ಏತನೀರಾವರಿ ಶೀಘ್ರ :
**************** ಕೊಪ್ಪಳ ತಾಲೂಕು ಬಹದ್ದೂರಬಂಡಿ ಏತನೀರಾವರಿ ಯೋಜನೆಗೆ ಈಗಾಗಲೆ 188 ಕೋಟಿ ರೂ. ಗಳ ಅಂದಾಜು  ಯೋಜನೆಯನ್ನು ಸಿದ್ಧಪಡಿಸಲಾಗಿದ್ದು, ಬರುವ ದಿನಗಳಲ್ಲಿ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ, ಅನುಮೋದನೆ ಪಡೆಯಲಾಗುವುದು.  ಬಹದ್ದೂರಬಂಡಿ ಏತನೀರಾವರಿ ಯೋಜನೆಯ ಜಾರಿಯಿಂದ ಈ ಭಾಗದ 12 ಸಾವಿರ ಎಕರೆ ಭೂಮಿ ನೀರಾವರಿಗೆ ಒಳಪಡಲಿದ್ದು, ಮೂರು ತಿಂಗಳ ಒಳಗಾಗಿ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು.  ರಾಜ್ಯದಲ್ಲಿ ಒಟ್ಟು 1500 ಕೆರೆ ತುಂಬಿಸುವ ಕಾಮಗಾರಿಗೆ ಆದ್ಯತೆ ನೀಡಲಾಗಿದ್ದು, ಇದಕ್ಕಾಗಿ ಸರ್ಕಾರ 5 ಸಾವಿರ ಕೋಟಿ ರೂ. ಅನುದಾನ ಒದಗಿಸಲಿದೆ ಎಂದರು.

ನವಲಿ ಬಳಿ ಸಮನಾಂತರ ಜಲಾಶಯ :
************** ತುಂಗಭದ್ರಾ ಜಲಾಶಯ ನಿರ್ಮಿಸಿ ಸುಮಾರು 64 ವರ್ಷಗಳು ಗತಿಸಿದ್ದು, ಪ್ರತಿ ವರ್ಷಕ್ಕೆ ಸುಮಾರು ಅರ್ಧ ಟಿಎಂಸಿ ನಂತೆ ಈವರೆಗೆ ಸುಮಾರು 35 ಟಿಎಂಸಿ ಹೂಳು ತುಂಬಿದೆ.  ಹೂಳು ತೆಗೆಸಲು ಹಲವು ಪ್ರಯತ್ನ ಮಾಡಿದರೂ, ಸುಮಾರು 20 ರಿಂದ 30 ಸಾವಿರ ಕೋಟಿ ರೂ. ವೆಚ್ಚವಾಗುವುದಲ್ಲದೆ, ಹೂಳು ಶೇಖರಿಸಲು 64 ಸಾವಿರ ಎಕರೆ ಭೂಮಿ ಬೇಕಾಗುತ್ತದೆ.  ಹೀಗಾಗಿ ಈ ಯೋಜನೆ ಕಾರ್ಯಸಾಧುವಲ್ಲ ಎಂಬುದಾಗಿ ತೀರ್ಮಾನಿಸಿ, ಸಮಾನಾತಂರ ಜಲಾಶಯ ನಿರ್ಮಿಸಲು ನಿರ್ಧರಿಸಲಾಗಿದೆ.  ಕೊಪ್ಪಳ ಜಿಲ್ಲೆ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಿಸಲು ಸರ್ಕಾರ ನಿರ್ಧರಿಸಿದ್ದು, ಈಗಾಗಲೆ ಸುಮಾರು 6 ಸಾವಿರ ಕೋಟಿ ರೂ. ಗಳ ಕರಡು ಯೋಜನೆ ಸಿದ್ಧವಾಗಿದೆ.  ಇದು ಅಂತರರಾಜ್ಯ ನದಿಯಾಗಿರುವುದರಿಂದ ನಿಯಮಾನುಸಾರ ಶೀಘ್ರವೇ ಆಂಧ್ರಪ್ರದೇಶ ರಾಜ್ಯಕ್ಕೆ ಕರಡು ಯೋಜನೆ ಸಲ್ಲಿಸಿ ಒಪ್ಪಿಗೆ ಪಡೆಯಲಾಗುವುದು.  ಯೋಜನೆ ಜಾರಿಗೊಳಿಸುವ ಮುನ್ನ ಎಲ್ಲರೊಂದಿಗೆ ಸಮಾಲೋಚಿಸಿ, ಯಾರಿಗೂ ಅನ್ಯಾಯವಾಗದ ರೀತಿ ಅನುಷ್ಟಾನಗೊಳಿಸಲಾಗುವುದು ಎಂದರು.
      ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಬೆಟಗೇರಿ ಏತ ನೀರಾವರಿ ಯೋಜನೆ ಸುಮಾರು 60 ವರ್ಷಗಳ ಕನಸಾಗಿದ್ದು, ನಮ್ಮ ಸರ್ಕಾರ ಇದನ್ನು ಜಾರಿಗೊಳಿಸುವ ಮೂಲಕ ಈ ಭಾಗದ ರೈತರ ಕನಸನ್ನು ನನಸಾಗಿಸಿದೆ.  ಈ ಯೋಜನೆಯ ಜಾರಿಯಿಂದ ಇಲ್ಲಿನ ರೈತರು ಆರ್ಥಿಕವಾಗಿ ಸದೃಢರಾಗಲು ಸಹಕಾರಿಯಾಗಲಿದೆ.  ಕೊಪ್ಪಳ ಕ್ಷೇತ್ರ ಹಿಂದೆಂದಿಗಿಂತಲೂ ಹೆಚ್ಚಿನ ಅಭಿವೃದ್ಧಿಯನ್ನು ಸಾಧಿಸುತ್ತಿದ್ದು, ಮೆಡಿಕಲ್ ಕಾಲೇಜು, ಕೆರೆ ತುಂಬಿಸುವ ಯೋಜನೆ, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು, ಪದವಿಪೂರ್ವ ಕಾಲೇಜುಗಳು, ಬ್ರಿಡ್ಜ್ ಕಂ ಬ್ಯಾರೇಜ್‍ಗಳು ಹೀಗೆ ಹತ್ತು ಹಲವು ಯೋಜನೆಗಳನ್ನು ತಮ್ಮ ಅಧಿಕಾರಾವಧಿಯಲ್ಲಿ ಜಾರಿಗೊಳಿಸಲಾಗಿದೆ.  ಭೂ ಒಡೆತನ ಯೋಜನೆಯಲ್ಲಿ ಭೂ ರಹಿತರಿಗೆ ಭೂಮಿ ಮಂಜೂರು ಮಾಡಿಸುವ ಯೋಜನೆ ಜಾರಿಯಲ್ಲಿದೆ.  ಕೊಪ್ಪಳ ಮತ್ತು ಯಲಬುರ್ಗಾ ತಾಲೂಕಿನಲ್ಲಿ 275 ಕೋಟಿ ರೂ. ಅನುದಾನದಲ್ಲಿ ಕೆರೆಗಳನ್ನು ತುಂಬಿಸುವ ಯೋಜನೆಗೆ ಶೀಘ್ರವೇ ಚಾಲನೆ ದೊರೆಯಲಿದೆ. ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿಭಾಗ್ಯ ಯೋಜನೆಗಳ ಮೂಲಕ ಬಡವರಿಗೂ ಸರ್ಕಾರದ ಯೋಜನೆಗಳನ್ನು ತಲುಪಿಸುವ ಕಾರ್ಯ ಆಗುತ್ತಿದೆ ಎಂದರು.
     ಕನಕಗಿರಿ ಶಾಸಕ ಶಿವರಾಜ ತಂಗಡಗಿ ಅವರು ಮಾತನಾಡಿ, ಅಭಿವೃದ್ಧಿ ಕಾರ್ಯಗಳಿಗೆ ಪಕ್ಷ ಬೇಧ ಮರೆತು, ಸಹಕಾರ ನೀಡಬೇಕು.  ಆದರೆ ಈ ಕಾರ್ಯ ಜಿಲ್ಲೆಯಲ್ಲಿ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಕೊಪ್ಪಳ ಜಿಲ್ಲೆಯಲ್ಲಿನ ಕೆರೆಗಳನ್ನು ತುಂಬಿಸುವ ಯೋಜನೆ ಹಾಗೂ ಕೊಪ್ಪಳ ಏತ ನೀರಾವರಿ ಯೋಜನೆಗೆ ಹೆಚ್ಚಿನ ಅನುದಾನ ಒದಗಿಸುವಂತೆ ಜಲಸಂಪನ್ಮೂಲ ಸಚಿವರಲ್ಲಿ ಮನವಿ ಮಾಡಿದರು.
     ಜಿಲ್ಲಾ ಪಂಚಾಯತಿ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ ಅವರು ಸ್ವಾಗತಿಸಿದರು. ಜಿ.ಪಂ. ಉಪಾಧ್ಯಕ್ಷೆ ಲಕ್ಷ್ಮಮ್ಮ ನೀರಲೂಟಿ, ಜಿ.ಪಂ. ಮುಖ್ಯ ಕಾರ್ಯನಿವಾಹಕ ಅಧಿಕಾರಿ ವೆಂಕಟರಾಜಾ, ಉಪವಿಭಾಗಾಧಿಕಾರಿ ಗುರುದತ್ ಹೆಗ್ಡೆ, ತುಂಗಭದ್ರಾ ಯೋಜನಾ ವೃತ್ತದ ಮುಖ್ಯ ಇಂಜಿನಿಯರ್ ಭೋಜಾನಾಯಕ್ ಕಟ್ಟಿಮನಿ, ಕೊಪ್ಪಳ ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ, ಜಿ.ಪಂ. ಸದಸ್ಯರುಗಳಾದ ಗೂಳಪ್ಪ ಹಲಗೇರಿ, ರಾಜಶೇಖರ ಹಿಟ್ನಾಳ, ಬೀನಾಗೌಸ್, ಗಾಯತ್ರಿ ವೆಂಕಟೇಶ್, ತಾ.ಪಂ. ಅಧ್ಯಕ್ಷ ಬಾಲಚಂದ್ರನ್, ಗ್ರಾ.ಪಂ. ಅಧ್ಯಕ್ಷೆ ಹನುಮವ್ವ ಕಂಬಳಿ, ಮಾಜಿ ಶಾಸಕ ಬಸವರಾಜ ಹಿಟ್ನಾಳ, ಕೊಪ್ಪಳ ಎಪಿಎಂಸಿ ಅಧ್ಯಕ್ಷ ಹನುಮರಡ್ಡಿ ಹಂಗನಕಟ್ಟಿ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Post a Comment