Saturday, 18 March 2017

ಬಿಸರಳ್ಳಿ ಗ್ರಾ.ಪಂ. ವತಿಯಿಂದ ಮಟ್ಟಿಹಳ್ಳ ಕೆರೆ ಅಭಿವೃದ್ಧಿ : 363 ಜನರಿಗೆ ಉದ್ಯೋಗ


ಕೊಪ್ಪಳ, ಮಾ.17 (ಕರ್ನಾಟಕ ವಾರ್ತೆ): ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೊಪ್ಪಳ ತಾಲೂಕಿನ ಬಿಸರಳ್ಳಿ ಗ್ರಾಮದ ಮಟ್ಟಿಹಳ್ಳ ಕೆರೆ ಅಭಿವೃದ್ಧಿಪಡಿಸುವ ಕಾಮಗಾರಿ ಬಿಸರಳ್ಳಿ ಗ್ರಾಮ ಪಂಚಾಯತಿಯಿಂದ ವತಿಯಿಂದ ನಡೆಯುತ್ತಿದ್ದು, 363 ಜನರಿಗೆ ಉದ್ಯೋಗ ನೀಡಲಾಗಿದೆ.

    ಈ ಕಾಮಗಾರಿಯ ಅಂದಾಜು ಮೊತ್ತ ರೂ. 10.00 ಲಕ್ಷ ಇದ್ದು, ಪ್ರತಿ ದಿನ 363 ಜನ ಕೂಲಿಕಾರರು ಕೂಲಿ ಕೆಲಸವನ್ನು ನಿರ್ವಹಿಸುತ್ತಿದು, ಇಲ್ಲಿಯವರೆಗೆ 3556 ಮಾನವ ದಿನಗಳನ್ನು ಸೃಜಿಸಲಾಗಿದೆ.  ಒಂದು ತಂಡಕ್ಕೆ 20 ಜನ ಕೂಲಿಕಾರರಂತೆ ಒಟ್ಟು 18 ತಂಡಗಳನ್ನಾಗಿ ರಚಿಸಲಾಗಿದೆ.  ಕುಡಿಯುವ ನೀರು, ಪ್ರಥಮ ಚಿಕಿತ್ಸಾ ಪಟ್ಟಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಕಾಮಗಾರಿಯನ್ನು ಗ್ರಾಮ ಪಂಚಾಯತಿಯಿಂದಲೇ ಶೇ.80:20 ರ ಅನುಪಾತದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಕೂಲಿಕಾರರ ಕೂಲಿ ಹಾಜರಾತಿಯನ್ನು ಪಡೆದುಕೊಳ್ಳಲು 10 ಕಾಯಕಬಂಧುಗಳನ್ನು ನಿಯೋಜಿಸಿ ಅವರ ಮುಖಾಂತರವೇ ಹಾಜರಾತಿ ಪಡೆದು ಕಾಮಗಾರಿ ನಿರ್ವಹಿಸುತ್ತಿದೆ.

    ಬಿಸರಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ 1776 ಜಾಬಕಾರ್ಡ ಹೊಂದಿದ ಕುಟುಂಬಗಳಿದ್ದು, ಇಲ್ಲಿಯವರೆಗೆ 66.67 ಲಕ್ಷ ರೂ. ಗಳ ಖರ್ಚಾಗಿದ್ದು 20568 ಮಾನವ ದಿನಗಳ ಕೆಲಸ ನೀಡಲಾಗಿದೆ.  ಒಟ್ಟು 747 ಕುಟುಂಬಗಳಿಗೆ 100 ಮಾನವ ದಿನಗಳ ಕೂಲಿ ಕೆಲಸ ನೀಡಲಾಗಿದ್ದು, ಈ ಪೈಕಿ ಎಸ್.ಸಿ-151, ಎಸ್.ಟಿ-16, ಇತರೆ-580 ಸೇರಿದಂತೆ ಒಟ್ಟು 747 ಕುಟುಂಬಗಳಿಗೆ ಸಕಾಲದಲ್ಲಿ ಉದ್ಯೋಗ ಒದಗಿಸಿ ಅವರ ಬ್ಯಾಂಕ್ ಖಾತೆಗೆ ಕೂಲಿ ಹಣವನ್ನು ಪಾವತಿಸಲಾಗಿದೆ.  ಮಾಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ ಕೂಲಿಕಾರರ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಕಾಮಗಾರಿ ನಡೆಯುವ ಸ್ಥಳದಲ್ಲಿಯೇ, ಗ್ರಾಮ ಪಂಚಾಯತ ವತಿಯಿಂದ ಅಕ್ಷರಜ್ಞಾನ ಇರುವ ಪುರುಷ ಮತ್ತು ಮಹಿಳೆಯೊಂದಿಗೆ ಚಿಕ್ಕ ಮಕ್ಕಳಿಗೆ ಅಕ್ಷರ ಮಾಲೆ ಮತ್ತು ಅವರಿಗೆ ಆಟವಾಡಲು ಆಟದ ಸಾಮಗ್ರಿಗಳ ಮೂಲಕ ಅವರ ಗುಣಾತ್ಮಕ ಚಟುವಟಿಕೆಗಳನ್ನು ವ್ಯಕ್ತಪಡಿಸಲು ಅವಕಾಶ ಮಾಡಿಕೊಡಲಾಗಿದೆ.  ಅಲ್ಲದೆ ಮಕ್ಕಳಿಗೆ ಬ್ರೆಡ್, ಬಿಸ್ಕೆಟ್ ಪೂರೈಕೆಗೂ ಕ್ರಮ ವಹಿಸಲಾಗಿದೆ ಎಂದು ಕೊಪ್ಪಳ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment