Friday, 7 October 2016

ಜಿಲ್ಲೆಯ ಎರಡು ರೈಲ್ವೆ ಸೇತುವೆಗೆ ಅನುದಾನ ಒದಗಿಸಲು ರಾಜ್ಯ ಸರ್ಕಾರ ಒಪ್ಪಿಗೆ

ಕೊಪ್ಪಳ ಅ. 07 (ಕರ್ನಾಟಕ ವಾರ್ತೆ) : ಕೊಪ್ಪಳ-ಕುಷ್ಟಗಿ ರಸ್ತೆ ಮಾರ್ಗದಲ್ಲಿ ಬರುವ ರೈಲ್ವೆ ಗೇಟ್ ಸಂ. 66 ಹಾಗೂ ಗಿಣಿಗೇರಾ ಬಳಿಯ ಗಿಣಿಗೇರಾ-ಗಂಗಾವತಿ ರಸ್ತೆ ಮಾರ್ಗದಲ್ಲಿ ಬರುವ ರೈಲ್ವೆ ಗೇಟ್ ಸಂಖ್ಯೆ 72 ಕ್ಕೆ ರಾಜ್ಯ ಸರ್ಕಾರ ಮತ್ತು ರೈಲ್ವೆ ಇಲಾಖೆ ಸಹಭಾಗಿತ್ವದಲ್ಲಿ ತಲಾ ಶೇ. 50 ರಷ್ಟು ಅನುದಾನ ಒದಗಿಸಿ, ಮೇಲ್ಸೇತುವೆ ಅಥವಾ ಕೆಳಸೇತುವೆ ನಿರ್ಮಾಣ ಮಾಡಲು ಕರ್ನಾಟಕ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.

     ರಾಜ್ಯದ ವಿವಿಧ ನಗರ ಮತ್ತು ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿನ ರೈಲ್ವೆ ಕ್ರಾಸ್‍ಗಳಿಗೆ ಶೇ. 50 ಅನುದಾನ ಹಂಚಿಕೆ ಸಹಭಾಗಿತ್ವದಲ್ಲಿ ಮೇಲ್ಸೇತುವೆ ಅಥವಾ ಕೆಳಸೇತುವೆ ನಿರ್ಮಾಣಕ್ಕೆ ಒಪ್ಪಿಗೆ ನೀಡುವಂತೆ ರೈಲ್ವೆ ಇಲಾಖೆ ರಾಜ್ಯ ಸರ್ಕಾರಕ್ಕೆ ಕಳೆದ 2015 ರ ಜುಲೈ 31 ಮತ್ತು 2016 ರ ಮೇ 16 ರಂದು ಪತ್ರ ಬರೆದು ಪ್ರಸ್ತಾವನೆ ಸಲ್ಲಿಸಿತ್ತು.   ಇದೀಗ  ರಾಜ್ಯ ಸರ್ಕಾರ ರಾಜ್ಯದ ಒಟ್ಟು 27 ರೈಲ್ವೆ ಕ್ರಾಸ್‍ಗಳಿಗೆ ಮೇಲ್ಸೇತುವೆ / ಕೆಳಸೇತುವೆ ನಿರ್ಮಾಣಕ್ಕೆ ಅನುದಾನ ಭರಿಸಲು ಒಪ್ಪಿಗೆ ನೀಡಿದ್ದು, ಈ ಪೈಕಿ ಕೊಪ್ಪಳ ರೈಲ್ವೆ ಗೇಟ್ ಸಂ. 66 ಹಾಗೂ ಗಿಣಿಗೇರಾ ಬಳಿಯ ಗಿಣಿಗೇರಾ-ಗಂಗಾವತಿ ರಸ್ತೆ ಮಾರ್ಗದಲ್ಲಿ ಬರುವ ರೈಲ್ವೆ ಗೇಟ್ ಸಂಖ್ಯೆ 72 ಕ್ಕೆ ಶೇ. 50 ರಷ್ಟು ಅನುದಾನ ಒದಗಿಸಿ, ಮೇಲ್ಸೇತುವೆ ಅಥವಾ ಕೆಳಸೇತುವೆ ನಿರ್ಮಾಣ ಮಾಡಲು ಒಪ್ಪಿಗೆ ಸೂಚಿಸಿದೆ. ಕಾಮಗಾರಿಗಳಿಗೆ ಸಂಬಂಧಿಸಿದಂತೆ ರೈಲ್ವೆ ಇಲಾಖೆಯು ಅಂದಾಜು ಪತ್ರಿಕೆಯನ್ನು ತಯಾರಿಸಿ, ರಾಜ್ಯ ಸರ್ಕಾರದಿಂದ ಆಡಳಿತಾತ್ಮಕ ಮಂಜೂರಾತಿ ಪಡೆದ ನಂತರವೇ, ಮುಂದಿನ ಕ್ರಮ ವಹಿಸಬೇಕು ಎಂದು ರಾಜ್ಯ ಸರ್ಕಾರದ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿಗಳು ರೈಲ್ವೆ ಇಲಾಖೆಗೆ ಪತ್ರ ಬರೆದು ತಿಳಿಸಿದ್ದಾರೆ.
     ಕೊಪ್ಪಳ ಜಿಲ್ಲೆಗೆ ಸಂಬಂಧಿಸಿದಂತೆ ಎರಡು ರೈಲ್ವೆ ಸೇತುವೆ ನಿರ್ಮಾಣಕ್ಕೆ ಒಪ್ಪಿಗೆ ನೀಡಿದ್ದಕ್ಕಾಗಿ ಸಂಸದ ಕರಡಿ ಸಂಗಣ್ಣ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ ಎಂದು ಸಂಸದರ ಕಚೇರಿ ಪ್ರಕಟಣೆ ತಿಳಿಸಿದೆ.
Post a Comment