Monday, 3 October 2016

ತುಂಗಭದ್ರಾ ಎಡದಂಡೆ ಕಾಲುವೆ ಪ್ರದೇಶದಲ್ಲಿ ನಿಷೇದಾಜ್ಞೆ ಜಾರಿ


ಕೊಪ್ಪಳ, ಅ.03 (ಕರ್ನಾಟಕ ವಾರ್ತೆ):  ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕು ವಡ್ಡರಹಟ್ಟಿ ವಿಭಾಗದಡಿ ಬರುವ ತುಂಗಭದ್ರಾ ಎಡದಂಡೆ ಕಾಲುವೆ ಮೈಲ್ 0. 00 ಆರಂಭದಿಂದ ಸಂಖ್ಯೆ-47  ವರೆಗೆ ಕಾಲುವೆಯ ಎಡ ಹಾಗೂ ಬಲದಂಡೆಯ 100 ಮೀ ಅಂತರದ ಪ್ರದೇಶದಲ್ಲಿ ಅ.21 ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ಆದೇಶ ಹೊರಡಿಸಿದ್ದಾರೆ.
    ತುಂಗಭದ್ರಾ ಎಡದಂಡೆ ಕಾಲುವೆ ಆರಂಭದಿಂದ ಮೈಲ್ ಸಂಖ್ಯೆ 47 ರಲ್ಲಿ ರೈತರು ಗುಂಪಿನಲ್ಲಿ ಬಂದು ನೀರಾವರಿ ಸಿಬ್ಬಂಧಿಗಳಿಗೆ ಹೆದರಿಸಿ ಮುಖ್ಯ ಕಾಲುವೆಗಳ ತೂಬಿನ ಗೇಟುಗಳನ್ನು ಅನಧಿಕೃತವಾಗಿ ಎತ್ತಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ನೀರನ್ನು ಪಡೆಯುವುದು ಅಲ್ಲದೆ ಮುಖ್ಯ ಕಾಲುವೆಯ ಎಡಭಾಗದಲ್ಲಿಯೂ ಸಹ ಅನಧಿಕೃತವಾಗಿ ಪೈಪುಗಳನ್ನು ಹಾಕಿ ನೀರನ್ನು ಸೈಪಲ್ ಮಾಡುತ್ತಿರುವುದರಿಂದ ರಾಯಚೂರು ಭಾಗದ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲವೆಂದು ಅಧೀಕ್ಷಕ ಅಭಿಯಂತರರು ಕನೀನಿನಿ ತುಂಗಭದ್ರಾ ಯೋಜನಾ ವೃತ್ತ ಮುನಿರಾಬಾದ ಇವರು ತಿಳಿಸಿರುತ್ತಾರೆ.  ಇದರಿಂದ ಕಾನೂನು ಸುವ್ಯವಸ್ಥೆಗೆ ತೊಂದರೆಯಾಗುತ್ತಿದ್ದು, ಗಂಗಾವತಿ ತಾಲೂಕು ವಡ್ಡರಹಟ್ಟಿ ವಿಭಾಗದಡಿ ಬರುವ ಮೈಲ್ ಆರಂಭದಿಂದ ಮೈಲ್ ಸಂಖ್ಯೆ-47  ವರೆಗೆ ಕಾಲುವೆಯ ಎಡ ಹಾಗೂ ಬಲದಂಡೆಯ 100 ಮೀ ಅಂತರದ ಪ್ರದೇಶದಲ್ಲಿ ಅ.21 ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
    ನಿಷೇಧಾಜ್ಞೆ ಜಾರಿಯಲ್ಲಿರುವ ಪ್ರದೇಶಗಳು ಇಂತಿವೆ: ತುಂಗಭದ್ರಾ ಎಡದಂಡೆ ಕಾಲುವೆಯ ಉಪಕಾಲುವೆ ಸಂಖ್ಯೆ 01 ಚೈನ್-28 ಹತ್ತಿರ, ಸಂಖ್ಯೆ 02 ಹೊಸಹಳ್ಳಿ, 03 ಹಿಟ್ನಾಳಕ್ರಾಸ್, 08 ಶಿವಪುರ, 09 ಹೊಸ ಬಂಡಿ ಹರ್ಲಾಪೂರ, 10ಎ ಬಸಾಪೂರ, 13, 16 ದಾಸನಾಳ ಬ್ರಿಡ್ಜ್ ಹತ್ತಿರ, 17 ಮುದ್ಲಾಪೂರ ಮೊಬೈಲ್ ಡಿಎಆರ್ ವ್ಯಾನ್, 18.19 ಮುದ್ಲಾಪೂರ, 21 ಕನಕಗಿರಿ ರಸ್ತೆಯ ಮುಖ್ಯ ಕಾಲುವೆ ಕ್ರಾಸಿಂಗ್ ಹತ್ತಿರ, 22.23.23ಎ ಮುದ್ಲಾಪೂರ, 25 ಮುದ್ಲಾಪೂರ, 27. 28. 29. 30 ಮುದ್ಲಾಪೂರ, 31 ಕಾರಟಗಿ-ನವಲಿ ರಸ್ತೆಯ ಮುಖ್ಯ ಕಾಲುವೆಯ ಕ್ರಾಸಿಂಗ್ ಹತ್ತಿರ, ಸಂಖ್ಯೆ 32 ಮೈಲಾಪೂರ.
    ನಿರ್ಬಂಧಿತ ಸ್ಥಳದಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ನಿಯೋಜಿಸಲ್ಪಟ್ಟ ಸಿಬ್ಬಂದಿಗಳು ಮತ್ರ ಪ್ರವೇಶಿಸತಕ್ಕದ್ದು.  ಮೈಲ್ ಸಂಖ್ಯೆ ಸೊನ್ನೆಯಿಂದ 47 ರವರೆಗಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಅನಧಿಕೃತವಾಗಿ ಪಂಪ್‍ಸೆಟ್ ಮೂಲಕ ನೀರು ಎತ್ತುವಳಿ ಮಾಡಿದಲ್ಲಿ ಅಂತಹ ಪಂಪ್‍ಸೆಟ್‍ಗಳನ್ನು ಸಂಬಂಧಿಸಿದ ಅಧಿಕಾರಿಗಳು ಜಪ್ತಿ ಮಾಡಬೇಕು. ನಿಷೇಧಿತ ಪ್ರದೇಶದಲ್ಲಿ ಪೊಲೀಸ್ ಬಂದೋಬಸ್ತ್ ನೀಯೋಜಿಸಬೇಕೆಂದು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ. ನಿಷೇಧಿತ ಪ್ರದೇಶದಲ್ಲಿ ಸಾರ್ವಜನಿಕರು ಮಾರಕಾಸ್ತ್ರ ಹಿಡಿದು ತಿರುಗಾಡುವಂತಿಲ್ಲ. ಮದುವೆ ಹಾಗೂ ಶವ ಸಂಸ್ಕಾರಗಳು ಮತ್ತು ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಿಗೆ ಅನ್ವಯಿಸುವುದಿಲ್ಲ ಎಂದು  ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ಆದೇಶದಲ್ಲಿ ತಿಳಿಸಿದ್ದಾರೆ.
Post a Comment