Wednesday, 19 October 2016

ಗಂಗಾವತಿ : ವಿವಿಧ ಸೌಲಭ್ಯಗಳಿಗಾಗಿ ಅರ್ಜಿ ಆಹ್ವಾನ

ಕೊಪ್ಪಳ, ಅ.19  (ಕರ್ನಾಟಕ ವಾರ್ತೆ) : ಗಂಗಾವತಿ ನಗರಸಭೆಯಿಂದ ಪ್ರಸಕ್ತ ಸಾಲಿನ ವಿವಿಧ ಯೋಜನೆಯಡಿ ಪ.ಜಾತಿ ಹಾಗೂ ಪ.ಪಂಗಡ, ಹಿಂದುಳಿದ ವರ್ಗ ಹಾಗೂ ವಿಕಲಚೇತನ ಅಭ್ಯರ್ಥಿಗಳಿಗಾಗಿ ವಿವಿಧ ಸೌಲಭ್ಯಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಶೇ.24.10 ಯೋಜನೆಯಡಿ ಪ.ಜಾತಿ ಹಾಗೂ ಪ.ಪಂಗಡದ ಅಭ್ಯರ್ಥಿಗಳಿಗಾಗಿ ಪಕ್ಕಾಮನೆ ನಿರ್ಮಾಣ, ಸ್ವಯಂ ಉದ್ಯೋಗ, ವಾರ್ಡ್ ನಂ-30 ರಲ್ಲಿ ವಾಸಿಸುವ ಭಜಂತ್ರಿ ಜನಾಂಗದ ಅಭ್ಯರ್ಥಿಗಳಿಗೆ ವೃತ್ತಿಪರ ಸಲಕರಣೆಗಳಿಗಾಗಿ ಹಾಗೂ ಬಿ.ಇ/ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ಲ್ಯಾಪ್‍ಟಾಪ್ ಖರೀದಿಗೆ ಸಹಾಯಧನ ಸೌಲಭ್ಯ ಒದಗಿಸಲಾಗುವುದು.  ಶೇ.7.25 ಯೋಜನೆಯಡಿ ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗಾಗಿ ಪಕ್ಕಾಮನೆ ನಿರ್ಮಾಣ, ವೃತ್ತಿ ನಿರತ ವಕೀಲರಿಗೆ ಕಾನೂನು ಪುಸ್ತಕಗಳಿಗಾಗಿ ಸಹಾಯಧನ ಹಾಗೂ ಶೇ.3 ರ ಯೋಜನೆಯಡಿ ವಿಕಲಚೇತನ ಅಭ್ಯರ್ಥಿಗಳಿಗೆ ಅನಿಲ ಸಂಪರ್ಕ ಹಾಗೂ ಯಂತ್ರಚಾಲಿತ ವಾಹನ ಸೌಲಭ್ಯಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವವರು ಗಂಗಾವತಿ ನಗರ ಪ್ರದೇಶದ ನಿವಾಸಿಯಾಗಿರಬೇಕು. ಅರ್ಜಿಯೊಂದಿಗೆ ಪಡಿತರ ಚೀಟಿ, ಚುನಾವಣೆ ಗುರುತಿನ ಚೀಟಿ, ಆಧಾರ ಕಾರ್ಡ್, ಹಾಗೂ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವ್ಯಾಸಂಗ ಪ್ರಮಾಣ ಪತ್ರ ಹಾಗೂ ಇತರೆ ದಾಖಲಾತಿಗಳ ಜರಾಕ್ಸ್ ಪ್ರತಿಗಳಿಗೆ ಗೆಜೆಟೆಡ್ ಅಧಿಕಾರಿಗಳಿಂದ ದೃಡೀಕರಿಸಿದ ಪ್ರತಿಗಳೊಂದಿಗೆ ನವಂಬರ್ 15 ರೊಳಗಾಗಿ ಅರ್ಜಿ ಸಲ್ಲಿಸಬಹುದು. ಅವಧಿಮೀರಿ ಬಂದ ಅರ್ಜಿಗಳನ್ನು ಹಿಂಬರಹ ನೀಡದೇ ತಿರಸ್ಕರಿಸಲಾಗುವುದು. ಹೆಚ್ಚಿನ ಮಾಹಿತಿಯನ್ನು ಗಂಗಾವತಿ ನಗರಸಭೆ ಕಾರ್ಯಾಲಯದಲ್ಲಿ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.
Post a Comment