Tuesday, 4 October 2016

ಭಕ್ತಿ-ಭಾವದಿಂದ ವಾಲ್ಮೀಕಿ ಜಯಂತಿ ಆಚರಣೆಗೆ ನಿರ್ಧಾರ

ಕೊಪ್ಪಳ ಅ. 04 (ಕರ್ನಾಟಕ ವಾರ್ತೆ) : ಆದಿಕವಿ ಮಹರ್ಷಿ ವಾಲ್ಮೀಕಿಯವರ ಜಯಂತಿಯನ್ನು ಅ. 15 ರಂದು ಜಿಲ್ಲಾ ಕೇಂದ್ರದಲ್ಲಿ ಎಲ್ಲ ಸಮುದಾಯದ ಸಹಭಾಗಿತ್ವದಲ್ಲಿ ಭಕ್ತಿ ಭಾವದಿಂದ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ   ಅವರು ಹೇಳಿದರು.
     ಮಹರ್ಷಿ ವಾಲ್ಮೀಕಿಯವರ ಜಯಂತಿಯನ್ನು ಆಚರಿಸುವ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
      ಅಕ್ಟೋಬರ್ 15 ರಂದು ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಜಿಲ್ಲಾಡಳಿತವು ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಗುವುದು.   ವಾಲ್ಮೀಕಿ ಜಯಂತಿಯ ಅಂಗವಾಗಿ ಅಂದು ಬೆಳಿಗ್ಗೆ 8-30 ಗಂಟೆಗೆ ನಗರದ ಸಿರಸಪ್ಪಯ್ಯನ ಮಠ ಆವರಣದಿಂದ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರದೊಂದಿಗೆ ಅದ್ಧೂರಿ ಮೆರವಣಿಗೆ ಏರ್ಪಡಿಸಲಾಗುವುದು.  ವಾಲ್ಮೀಕಿಯವರ ಭಾವಚಿತ್ರದ ಮೆರವಣಿಗೆಗೆ ಈ ಬಾರಿ ವೈಭವದ ಸಾರೋಟ್ ಬಳಸಲು ನಿರ್ಧರಿಸಲಾಗಿದೆ.  ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ವೀರಗಾಸೆ ಸೇರಿದಂತೆ ವಿವಿಧ ಸಾಂಸ್ಕøತಿಕ ಕಲಾತಂಡಗಳು, ಸ್ತಬ್ಧ ಚಿತ್ರಗಳು ಪಾಲ್ಗೊಂಡು ಮೆರವಣಿಗೆಯನ್ನು ಆಕರ್ಷಕಗೊಳಿಸಲಿವೆ.  ಮೆರವಣಿಗೆಯಲ್ಲಿ ಎಲ್ಲಾ ಸಂಘಟನೆಗಳು, ಜನಪ್ರತಿನಿಧಿಗಳು, ಸಾರ್ವಜನಿಕರು, ಅಧಿಕಾರಿ, ಸಿಬ್ಬಂದಿಗಳು ಭಾಗವಹಿಸಬೇಕು.  ಮೆರವಣಿಗೆಯ ನಂತರ ಮಧ್ಯಾಹ್ನ 12 ಗಂಟೆಗೆ ಸಾಹಿತ್ಯ ಭವನದಲ್ಲಿ ಸಮಾರಂಭ ಏರ್ಪಡಿಸಲಾಗಿದ್ದು, ಸಮಾರಂಭದಲ್ಲಿ ಗಣ್ಯಾತಿಗಣ್ಯರೆಲ್ಲರು ಭಾಗವಹಿಸಲಿದ್ದಾರೆ.  ಮಹರ್ಷಿ ವಾಲ್ಮೀಕಿಯವರ ಕುರಿತು ಹಾಗೂ ಜಯಂತಿ ಕಾರ್ಯಕ್ರಮದ ಮಹತ್ವ ಕುರಿತಂತೆ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೊಪ್ಪಳದ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಲ್.ಜಿ. ರಾಟಿಮನಿ ಅವರು ಉಪನ್ಯಾಸ ನೀಡುವರು.  ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಾಗೂ ಗಣನೀಯ ಸೇವೆ ಸಲ್ಲಿಸಿದವರಿಗೆ ಸನ್ಮಾನಿಸಲಾಗುವುದು.  ಮೆರವಣಿಗೆಗೆ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗುವುದು. ಸಾರ್ವಜನಿಕರು, ಸಂಘಟನೆಗಳ ಪದಾಧಿಕಾರಿಗಳು ವಾಲ್ಮೀಕಿ ಜಯಂತಿಯನ್ನು ನಗರದ ಪ್ರಮುಖ ವೃತ್ತಗಳಿಗೆ ದೀಪಾಲಂಕಾರ ಸೇರಿದಂತೆ ಹಬ್ಬದ ವಾತಾವರಣದೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ಹೇಳಿದರು.  ವಾಲ್ಮೀಕಿ ಜಯಂತಿ ದಿನದಂದು ಹಾಗೂ ಮುನ್ನಾ ದಿನದಂದು, ನಗರದ ಜವಾಹರ ರಸ್ತೆ ಹಾಗೂ ನಗರದ ಪ್ರಮುಖ ರಸ್ತೆಯನ್ನು ಸ್ವಚ್ಛಗೊಳಿಸಲು ಅಲ್ಲದೆ ಮೆರವಣಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕೈಗೊಳ್ಳಲು ನಗರಸಭೆ ಅಧಿಕಾರಿಗಳಿಗೆ ಹಾಗೂ ಎಲ್ಲ ಶಾಲಾ ಕಾಲೇಜುಗಳು, ಗ್ರಾಮ ಪಂಚಾಯತಿಗಳಲ್ಲಿ ವಾಲ್ಮೀಕಿ ಜಯಂತಿ ಅಚರಣೆ ಸಂಬಂಧ ಸೂಕ್ತ ಸುತ್ತೋಲೆ ಹೊರಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಬಾಕಿ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ವಾಲ್ಮೀಕಿ ಭವನಗಳ ನಿರ್ಮಾಣ, ಪ.ಪಂಗಡದ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ ಹಾಗೂ ಕುಷ್ಟಗಿಯಲ್ಲಿ ಪರಿಶಿಷ್ಟ ಪಂಗಡ ಇಲಾಖೆ ಕಚೇರಿ ಪ್ರಾರಂಭಿಸುವುದರ ಸಂಬಂಧ ಸೂಕ್ತ ಕ್ರಮ ವಹಿಸುವಂತೆ ಅಪರ ಜಿಲ್ಲಾಧಿಕಾರಿಗಳು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
       ಸಭೆಯಲ್ಲಿ ಜಿಲ್ಲಾ ಪಂಚಾಯತಿ ಸದಸ್ಯ ರಾಮಣ್ಣ ಚೌಡ್ಕಿ,  ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಿ. ಕಲ್ಲೇಶ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ದೇಸಾಯಿ, ನಗರಸಭೆ ಪೌರಾಯುಕ್ತರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಮಾಜದ ಮುಖಂಡರಾದ ರತ್ನಾಕರ್ ಟಿ, ಹನುಮಂತಪ್ಪ ನಾಯಕ್, ರಾಮಣ್ಣ ಕಲ್ಲನ್ನವರ್, ಲಕ್ಷ್ಮಣ್, ಮಂಜುನಾಥ ಗೊಂಡಬಾಳ, ಬಸವರಾಜ್ ಹಾಗೂ ಹಲವು ಮುಖಂಡರು, ಗಣ್ಯರಾದ ಇಂದಿರಾ ಬಾವಿಕಟ್ಟಿ, ಶಿವಾನಂದ ಹೊದ್ಲೂರ್ ಮತ್ತಿತರರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿ ಉಪಯುಕ್ತ ಸಲಹೆ ಸೂಚನೆಗಳನ್ನು ನೀಡಿದರು.
Post a Comment