Saturday, 1 October 2016

ಅಕ್ಟೋಬರ್ ತಿಂಗಳಾಂತ್ಯದೊಳಗೆ ಮುಂಗಾರು ಬೆಳೆ ಹಾನಿ ಸಮೀಕ್ಷಾ ವರದಿ ಸಲ್ಲಿಸಿ- ಬಸವರಾಜ ರಾಯರಡ್ಡಿ

ಕೊಪ್ಪಳ ಅ. 01 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಪ್ರಸಕ್ತ ವರ್ಷವೂ ಮುಂಗಾರು ಮಳೆ ಕೊರತೆಯಿಂದ ಸಾಕಷ್ಟು ಬೆಳೆ ಹಾನಿಯಾಗಿದ್ದು, ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ತಂಡವು ಕೂಡಲೆ ಬೆಳೆ ಹಾನಿಯ ಬಗ್ಗೆ ಸಮೀಕ್ಷೆ ಪ್ರಾರಂಭಿಸಬೇಕು.  ಅಕ್ಟೋಬರ್ ತಿಂಗಳಾಂತ್ಯದೊಳಗೆ ಸಮಗ್ರ ವರದಿಯನ್ನು ಸಲ್ಲಿಸಬೇಕು ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಜಿಲ್ಲೆಯಲ್ಲಿನ ಬರ ಪರಿಸ್ಥಿತಿ ಕುರಿತಂತೆ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶನಿವಾರದಂದು ಏರ್ಪಡಿಸಲಾಗಿದ್ದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಮುಂಗಾರು ಮಳೆ ನಿರೀಕ್ಷೆಯಷ್ಟು ಬಂದಿಲ್ಲ.  ಒಂದೆಡೆ ಹೆಚ್ಚು ಮಳೆಯಾದರೆ, ಇನ್ನೊಂದೆಡೆ ಸಂಪೂರ್ಣ ವಿಫಲವಾಗಿದೆ.  ಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಆತಂಕವಿದೆ.  ಅಧಿಕಾರಿಗಳು ಈಗಿನಿಂದಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.  ಸಮಸ್ಯೆಗಳನ್ನು ಎದುರಿಸಲು ಅಗತ್ಯ ಕ್ರಿಯಾ ಯೋಜನೆಗಳನ್ನು ತಯಾರಿಸಿ ಸಲ್ಲಿಸಬೇಕು.  ಈಗಾಗಲೆ ಜಿಲ್ಲೆಯ ಯಲಬುರ್ಗಾ ಮತ್ತು ಗಂಗಾವತಿ ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳು ಎಂದು ಸರ್ಕಾರ ಘೋಷಿಸಿದೆ.  ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಶೇ. 70 ರಷ್ಟು ಬೆಳೆ ಹಾನಿಯಾಗಿರುವ ಬಗ್ಗೆ ಕೃಷಿ ಅಧಿಕಾರಿಗಳು ಮಾಹಿತಿ ನೀಡಿದ್ದು, ಜಿಲ್ಲೆಯಲ್ಲಿನ ಬೆಳೆ ಹಾನಿಯ ಬಗ್ಗೆ ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ತಂಡ ಸಮೀಕ್ಷೆಯನ್ನು ಕೂಡಲೆ ಪ್ರಾರಂಭಿಸಬೇಕು.  ಅಕ್ಟೋಬರ್ ತಿಂಗಳ ಅಂತ್ಯದೊಳಗೆ ಬೆಳೆ ನಷ್ಟ ಪರಿಹಾರ ನೀಡಬೇಕಾದ ಫಲಾನುಭವಿಗಳ ಪಟ್ಟಿಯ ಸಹಿತ ಸಮಗ್ರ ವರದಿಯನ್ನು ಸಲ್ಲಿಸಬೇಕು.  ನವೆಂಬರ್ 01 ರಂದು ಬರ ಪರಿಸ್ಥಿತಿ ಪರಿಶೀಲನೆಗಾಗಿ ಕೊಪ್ಪಳದಲ್ಲಿ ಅಧಿಕಾರಿಗಳ ಸಭೆ ನಡೆಸಲಾಗುವುದು.  ಈ ಸಭೆಯಲ್ಲಿ ವರದಿಯನ್ನು ಪರಿಶೀಲಿಸಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕ್ರಮ ಕೈಗೊಳ್ಳಲಾಗುವುದು.  ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ತಕ್ಷಣದಿಂದಲೇ ಕಾರ್ಯ ತತ್ಪರಾಗಬೇಕು ಎಂದು ಸಚಿವ ಬಸವರಾಜ ರಾಯರಡ್ಡಿ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ 1. 44 ಲಕ್ಷ ಹೆ. ಬೆಳೆ ಹಾನಿ : ಪ್ರಸಕ್ತ ವರ್ಷ ಈವರೆಗೆ 451 ಮಿ.ಮೀ. ವಾಡಿಕೆ ಮಳೆ ಆಗಬೇಕಿತ್ತು.  ಆದರೆ 376 ಮಿ.ಮೀ. ಮಳೆಯಾಗಿದೆ.  ಜೂನ್‍ನಲ್ಲಿ ಉತ್ತಮ ಮಳೆ ಆಗಿತ್ತು.  ಇದರಿಂದಾಗಿ ಜಿಲ್ಲೆಯಲ್ಲಿ 2. 06 ಲಕ್ಷ ಹೆ. ನಷ್ಟು ಅಂದರೆ ಶೇ. 100 ಕ್ಕಿಂತ ಹೆಚ್ಚು ಬಿತ್ತನೆ ಆಗಿದೆ.  ಆದರೆ ಆಗಸ್ಟ್ ಮತ್ತು ಸೆಪ್ಟಂಬರ್ ತಿಂಗಳಿನಲ್ಲಿ ಮಳೆಯ ತೀವ್ರ ಕೊರತೆ ಆಗಿದ್ದರಿಂದ ಮೆಕ್ಕೆಜೋಳ, ಸಜ್ಜೆ, ಎಳ್ಳು ಮುಂತಾದ ಬೆಳೆಗಳು ಹಾನಿಗೀಡಾಗಿವೆ.  ಸದ್ಯ ಜಿಲ್ಲೆಯಲ್ಲಿ ತೊಗರಿ ಬೆಳೆ ಮಾತ್ರ ಚೆನ್ನಾಗಿದೆ.  ಪ್ರಾಥಮಿಕ ವರದಿಯನ್ವಯ ಬಿತ್ತನೆಯಾದ 2. 06 ಲಕ್ಷ ಹೆ. ಪೈಕಿ 1. 44 ಲಕ್ಷ ಹೆ. ಪ್ರದೇಶದಲ್ಲಿ ಅಂದರೆ ಶೇ. 70 ರಷ್ಟು ಬೆಳೆ, ಮಳೆ ಕೊರತೆಯ ಕಾರಣದಿಂದ ಬೆಳೆ ಹಾನಿಗೀಡಾಗಿದೆ.  ಯಲಬುರ್ಗಾ ಮತ್ತು ಗಂಗಾವತಿ ತಾಲೂಕಿನಲ್ಲಿ ಶೇ. 20 ಕ್ಕಿಂತ ಹೆಚ್ಚು ಮಳೆಯ ಕೊರತೆ ಹಾಗೂ ಮಣ್ಣಿನಲ್ಲಿ ತೀವ್ರ ತೇವಾಂಶ ಕೊರತೆ ಹಾಗೂ 05 ವಾರ ಕ್ಕಿಂತಲೂ ಸತತವಾಗಿ ಮಳೆ ಬಾರದ ಹಿನ್ನೆಲೆಯಲ್ಲಿ ಈ ತಾಲೂಕುಗಳನ್ನು ಬರಪೀಡಿತ ತಾಲೂಕುಗಳು ಎಂದು ಸರ್ಕಾರ ಘೋಷಿಸಿದೆ ಎಂದು ಜಂಟಿಕೃಷಿ ನಿರ್ದೇಶಕ ರಾಮದಾಸ್ ಅವರು ವಿವರಿಸಿದರು.  ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಬಸವರಾಜ ರಾಯರಡ್ಡಿ ಅವರು, ಸದ್ಯ ಜಿಲ್ಲೆಯಲ್ಲಿ ಮಳೆಯಾಗುತ್ತಿದೆ.  ಬರುವ ದಿನಗಳಲ್ಲಿ ರೈತರು ಯಾವ ಬೆಳೆ ಬೆಳೆಯಬೇಕು ಎಂಬುದರ ಬಗ್ಗೆ ರೈತರಲ್ಲಿ ಅರಿವು ಮೂಡಿಸಲು ಕೃಷಿ ಇಲಾಖೆ ಮುಂದಾಗಬೇಕು ಎಂದರು.
ಕೊಪ್ಪಳ, ಕುಷ್ಟಗಿ ಬರ ಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಿ : ಜಿಲ್ಲೆಯ ಯಲಬುರ್ಗಾ ಹಾಗೂ ಗಂಗಾವತಿ ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳೆಂದು ಸರ್ಕಾರ ಘೋಷಿಸಿದೆ.  ಕೊಪ್ಪಳ ಮತ್ತು ಕುಷ್ಟಗಿ ತಾಲೂಕುಗಳಲ್ಲಿಯೂ ಕೂಡ ಮಳೆಯ ತೀವ್ರ ಕೊರತೆ ಕಂಡುಬಂದಿದ್ದು, ಬೆಳೆಗಳು ಹೆಚ್ಚು ಹಾನಿಗೀಡಾಗಿವೆ.  ಈ ಹಿನ್ನೆಲೆಯಲ್ಲಿ ಕೊಪ್ಪಳ ಮತ್ತು ಕುಷ್ಟಗಿ ತಾಲೂಕುಗಳನ್ನೂ ಸಹ ಬರ ಪೀಡಿತ ತಾಲೂಕುಗಳೆಂದು ಘೋಷಿಸಲು ಸರ್ಕಾರಕ್ಕೆ ಪ್ರಸ್ತಾವನೆಯಲ್ಲಿ ಸಲ್ಲಿಸುವಂತೆ ಸಚಿವರು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರಿಗೆ ಸೂಚನೆ ನೀಡಿದರು.
ಹಿಂಗಾರು ಬೆಳೆ ವಿಮೆ ಕಂತು ಸರ್ಕಾರ ಪಾವತಿಲು ಪ್ರಸ್ತಾವನೆ ಸಲ್ಲಿಸಿ : ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಬೆಳೆ ಹಾನಿಗೀಡಾಗಿದ್ದು, ರೈತರು ಹಣಕಾಸಿನ ತೊಂದರೆ ಎದುರಿಸುತ್ತಿದ್ದಾರೆ.  ಇದೀಗ ಹಿಂಗಾರು ಹಂಗಾಮಿನ ಬೆಳೆಗಳಿಗ ಬೆಳೆ ವಿಮೆಗೆ ವಿಮಾ ಕಂತು ತುಂಬಲು ರೈತರಿಗೆ ತೊಂದರೆ ಇದೆ.  ಆದ್ದರಿಂದ ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ, ಹಿಂಗಾರು ಬೆಳೆಗಳಿಗೆ ಬೆಳೆ ವಿಮೆ ಮಾಡಿಸಲು ರೈತರು ಪಾವತಿಸಬೇಕಾಗಿರುವ ವಿಮಾ ಕಂತನ್ನು ಸರ್ಕಾರದ ವತಿಯಿಂದಲೇ ತುಂಬಲು ಬೇಕಾಗಬಹುದಾದ ಅನುದಾನದ ವಿವರದೊಂದಿಗೆ, ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದಲ್ಲಿ, ರಾಜ್ಯ ಮಟ್ಟದಲ್ಲಿ ಅನುಮೋದನೆ ದೊರಕಿಸಲು ಪ್ರಯತ್ನ ಕೈಗೊಳ್ಳಲಾಗುವುದು.  ಅಧಿಕಾರಿಗಳು ಈ ನಿಟ್ಟಿನಲ್ಲಿ ಕೂಡಲೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕುಡಿಯುವ ನೀರಿಗೆ 73 ಕೋಟಿ : ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಗ್ರಾಮೀಣ ಕುಡಿಯುವ ನೀರು ಕಾಮಗಾರಿಗಳಿಗೆ ಹಾಗೂ ಮುಂದುವರೆದ ಕಾಮಗಾರಿಗಳಿಗಾಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ 73 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ.  ಕಳೆದ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರು ಪೂರೈಕೆಗಾಗಿ ಕೈಗೊಂಡ ಕಾಮಗಾರಿಗಳಿಗೆ 6. 34 ಕೋಟಿ ರೂ. ಪಾವತಿಸುವುದು ಬಾಕಿ ಇದೆ ಎಂದು ಕಾರ್ಯಪಾಲಕ ಅಭಿಯಂತರರು ತಿಳಿಸಿದರು.  ಒಟ್ಟು 525 ಕಾಮಗಾರಿಗಳಲ್ಲಿ 368 ಕೊಳವೆ ಬಾವಿಗಳನ್ನು ಕೊರೆಯಿಸಲಾಗಿದ್ದು, 157 ಕ್ಕೆ ಮಾತ್ರ ಪೈಪ್‍ಲೈನ್ ಮತ್ತು ಮೋಟಾರು ಅಳವಡಿಸಲಾಗಿದೆ.  ಈ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸಿ, ತಾಲೂಕುವಾರು ಪರಿಶೀಲನೆ ಕೈಗೊಂಡು, ವರದಿ ಸಲ್ಲಿಸಿದ ನಂತರವೇ ಬಿಲ್ ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿ.ಪಂ. ಉಪಕಾರ್ಯದರ್ಶಿಗಳಿಗೆ ಸೂಚನೆ ನೀಡಿದರು.  ಗಂಗಾವತಿ ತಾಲೂಕಿಗೆ ಜಿ.ಪಂ. ಯೋಜನಾ ನಿರ್ದೇಶಕ, ಕುಷ್ಟಗಿ- ತೋಟಗಾರಿಕೆ ಉಪನಿರ್ದೇಶಕ, ಯಲಬುರ್ಗಾ- ಜಿಲ್ಲಾ ಬಿಸಿಎಂ ಅಧಿಕಾರಿ ಹಾಗೂ ಕುಷ್ಟಗಿ ತಾಲೂಕಿಗೆ ಉಪಕೃಷಿ ನಿರ್ದೇಶಕರನ್ನು ತನಿಖಾ ಅಧಿಕಾರಿಯನ್ನಾಗಿ ನಿಯೋಜಿಸಲಾಯಿತು.  ಒಟ್ಟಾರೆ ಜಿಲ್ಲೆಯಲ್ಲಿ ಬರುವ ದಿನಗಳಲ್ಲಿ ಯಾವುದೇ ಜನವಸತಿ ಪ್ರದೇಶಗಳಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ಈಗಿನಿಂದಲೇ ಮುಂಜಾಗ್ರತಾ ಕ್ರಮಗಳನ್ನು ಸಿದ್ಧವಾಗಿರಿಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
     ಸಭೆಯಲ್ಲಿ ಸಂಸದ ಕರಡಿ ಸಂಗಣ್ಣ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್, ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಜಿ.ಪಂ. ಉಪಕಾರ್ಯದರ್ಶಿ ಎನ್.ಕೆ. ತೊರವಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು, ತಹಸಿಲ್ದಾರರು ಉಪಸ್ಥಿತರಿದ್ದರು.
Post a Comment