Tuesday, 18 October 2016

ಯಲಬುರ್ಗಾ : ಅಂಬೇಡ್ಕರ್ ನಿವಾಸ್ ಯೋಜನೆಯಡಿ ವಸತಿ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಕೊಪ್ಪಳ ಅ. 18 (ಕರ್ನಾಟಕ ವಾರ್ತೆ) : ಯಲಬುರ್ಗಾ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ 2016-17 ನೇ ಸಾಲಿನ ಡಾ. ಬಿ.ಆರ್. ಅಂಬೇಡ್ಕರ್ ನಿವಾಸ್ ಯೋಜನೆಯಡಿ ವಸತಿ ಸೌಲಭ್ಯ ಕಲ್ಪಿಸಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
     ಪ್ರಸಕ್ತ ಸಾಲಿಗೆ ಡಾ. ಬಿ.ಆರ್. ಅಂಬೇಡ್ಕರ್ ನಿವಾಸ್ ಯೋಜನೆಯಡಿ ಪ.ಜಾತಿ-36, ಪ.ಪಂಗಡ-16 ಸೇರಿದಂತೆ ಒಟ್ಟು 52 ಮನೆಗಳ ಮಂಜೂರಾತಿಗೆ ಗುರಿ ನಿಗದಿಪಡಿಸಲಾಗಿದೆ.  ಯಲಬುರ್ಗಾ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಖಾಯಂ ಆಗಿ ವಾಸವಾಗಿರುವ, ನಿವೇಶನ ಹೊಂದಿದ ವಸತಿ ರಹಿತರು ಅರ್ಜಿ ಸಲ್ಲಿಸಬಹುದು.  ಅರ್ಜಿದಾರರು ಮಹಿಳಾ ಫಲಾನುಭವಿಗಳಾಗಿರಬೇಕು.  ಆದರೆ ಮಾಜಿ ಯೋಧರು, ವಿಧುರರು, ಅಂಗವಿಕಲರು ಮತ್ತು ಹಿರಿಯ ನಾಗರೀಕರಾಗಿದ್ದಲ್ಲಿ ಪುರುಷರು ಸಹ ಅರ್ಜಿ ಸಲ್ಲಿಸಬಹುದು.  ನಿವೇಶನಕ್ಕೆ ಸಂಬಂಧಿಸಿದ ದಾಖಲೆಗಳು ಪುರುಷರ ಹೆಸರಿನಲ್ಲಿದ್ದಲ್ಲಿ, 20 ರೂ. ಛಾಪಾ ಕಾಗದದ ಮೇಲೆ ಒಪ್ಪಿಗೆ ಪತ್ರವನ್ನು ನೀಡಬೇಕು.  ಸ್ವಂತ ಹೆಸರಿನಲ್ಲಿ ಅಥವಾ ಕುಟುಂಬದ ಇತರೆ ಸದಸ್ಯರ ಹೆಸರಿನಲ್ಲಿ ವಸತಿ/ಮನೆ ಹೊಂದಿಲ್ಲವೆಂದು ಹಾಗೂ ಸರ್ಕಾರದ ಇತರೆ ಯೋಜನೆಯಡಿ ವಸತಿ ಪಡೆದಿಲ್ಲವೆಂದು 50 ರೂ. ಛಾಪಾ ಕಾಗದದಲ್ಲಿ ಮುಚ್ಚಳಿಕೆ ಪತ್ರ ಬರೆದುಕೊಡಬೇಕು.  ಅರ್ಜಿಯೊಂದಿಗೆ ಪಾಸ್‍ಪಾರ್ಟ್ ಅಳತೆಯ 04 ಭಾವಚಿತ್ರ, ಆಸ್ತಿ ನಿವೇಶನ/ಜಾಗಕ್ಕೆ ಸಂಬಂಧಿಸಿದ ದಾಖಲಾತಿಗಳು, ಹಕ್ಕುಪತ್ರ / ಕ್ರಮ ಪತ್ರ/ ದಾನಪತ್ರ, ಫಾರಂ ನಂ. 03 / ಖಾತಾ ವರ್ಗಾವಣೆ ಚಾಲ್ತಿ ಸಾಲಿಗೆ ತೆರಿಗೆ ರಸೀದಿ, ನಿವೇಶನದ ಪ್ರಸ್ತುತ ಸ್ಥಿತಿಯ ಭಾವಚಿತ್ರ, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಪಡಿತರ ಚೀಟಿ, ಜಾತಿ ಆದಾಯ ಪ್ರಮಾಣ ಪತ್ರ ಲಗತ್ತಿಸಿ, ಮುಖ್ಯಾಧಿಕಾರಿಗಳು, ಪಟ್ಟಣ ಪಂಚಾಯತಿ, ಯಲಬುರ್ಗಾ ಇವರಿಗೆ ಅ. 21 ರ ಒಳಗಾಗಿ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.
Post a Comment