Monday, 3 October 2016

ಕೊಪ್ಪಳ : ಅ. 01 ರಿಂದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣಾ ಕಾರ್ಯಕ್ರಮ

ಕೊಪ್ಪಳ ಅ. 03 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿನ ಎಲ್ಲ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿ ವಿಶೇಷ ಪರಿಷ್ಕರಣಾ ಕಾರ್ಯಕ್ರಮ ಅ. 01 ರಿಂದ 31 ರವರೆಗೆ ಒಂದು ತಿಂಗಳ ಕಾಲ ಏರ್ಪಡಿಸಲಾಗಿದ್ದು, 2017 ರ ಜನವರಿ 01 ರ ದಿನಾಂಕವನ್ನು ಅರ್ಹತಾ ದಿನಾಂಕವನ್ನಾಗಿಸಿಕೊಂಡು, ಅರ್ಹರನ್ನು ಮತದಾರರ ಪಟ್ಟಿಗೆ ಸೇರ್ಪಡೆ, ತಿದ್ದುಪಡಿ ಸೇರಿದಂತೆ ಪರಿಷ್ಕರಣೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ತಿಳಿಸಿದ್ದಾರೆ.
     ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯಕ್ರಮದ ವೇಳಾಪಟ್ಟಿ ವಿವರ ಇಂತಿದೆ. ವಿಧಾನಸಭಾ ಕ್ಷೇತ್ರವಾರು ಕರಡು ಮತದಾರರ ಪಟ್ಟಿಯನ್ನು ಅಕ್ಟೋಬರ್ 01 ರಂದು ತಹಸಿಲ್ದಾರರ ಕಚೇರಿಯಲ್ಲಿ ಹಾಗೂ ಮತದಾನ ಕೇಂದ್ರಗಳಲ್ಲಿ ಪ್ರಕಟಿಸಲಾಗಿದೆ.  2017 ರ ಜನವರಿ 01 ರ ದಿನಾಂಕವನ್ನು ಅರ್ಹತಾ ದಿನಾಂಕವನ್ನಾಗಿ ನಿಗದಿಪಡಿಸಿದ್ದು, ಸಾರ್ವಜನಿಕರು ಮತದಾರರ ಪಟ್ಟಿಗೆ ಹೆಸರು ಸೇರಿಸಲು, ತಿದ್ದುಪಡಿ ಮಾಡಿಸಲು ಅಥವಾ ಪಟ್ಟಿಯಿಂದ ಹೆಸರು ಕೈಬಿಡುವ ಕುರಿತು ಹಾಗೂ ಆಕ್ಷೇಪಣೆಗಳ ಕುರಿತು ಅರ್ಜಿಯನ್ನು ಅಕ್ಟೋಬರ್ 01 ರಿಂದ 31 ರವರೆಗೆ ಸಲ್ಲಿಸಬಹುದು.  ಕರಡು ಮತದಾರರ ಪಟ್ಟಿಗಳನ್ನು ಗ್ರಾಮ/ಪಟ್ಟಣ/ವಾರ್ಡ್‍ಗಳ ಸಭೆಯಲ್ಲಿ ಅಕ್ಟೋಬರ್ 07 ಮತ್ತು 14 ರಂದು ಓದಲಾಗುವುದು.  ಅಕ್ಟೋಬರ್ 16 ಮತ್ತು 23 ರ ದಿನವನ್ನು ವಿಶೇಷ ಆಂದೋಲನಾ ದಿನವನ್ನಾಗಿ ಆಚರಿಸಲಾಗುವುದು.  ಸಾರ್ವಜನಿಕರಿಂದ ಸಲ್ಲಿಕೆಯಾಗುವ ಹಕ್ಕು ಮತ್ತು ಆಕ್ಷೇಪಣೆ ಅರ್ಜಿಗಳನ್ನು ನವೆಂಬರ್ 31 ರೊಳಗೆ ವಿಲೇವಾರಿ ಮಾಡಲಾಗುವುದು.  ಸೇರ್ಪಡೆ/ತಿದ್ದುಪಡಿ/ ಬಿಡತಕ್ಕವುಗಳ ಪೂರಕ ಯಾದಿಗಳನ್ನು ಮುದ್ರಿಸಿ ಅಂತಿಮಗೊಳಿಸಲು ಡಿಸೆಂಬರ್ 24 ಕೊನೆಯ ದಿನಾಂಕವಾಗಿದೆ.  ಅಂತಿಮ ಮತದಾರರ ಪಟ್ಟಿಯನ್ನು 2017 ರ ಜನವರಿ 10 ರಂದು ಪ್ರಕಟಿಸಲಾಗುವುದು.
     ಸಾರ್ವಜನಿಕರು ಮತದಾರರ ಪಟ್ಟಿಗೆ ಹೆಸರನ್ನು ಸೇರಿಸಲು ನಮೂನೆ-06, ಮತದಾರರ ಹೆಸರನ್ನು ಸೇರ್ಪಡೆಗೊಳಿಸಿರುವುದಕ್ಕೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಅಥವಾ ಹೆಸರನ್ನು ತೆಗೆದು ಹಾಕಲು ನಮೂನೆ-07.  ತಿದ್ದುಪಡಿಗಾಗಿ ನಮೂನೆ-08.  ಪಟ್ಟಿಯಲ್ಲಿರುವ ಹೆಸರನ್ನು ವಿಧಾನಸಭಾ ಕ್ಷೇತ್ರದ ಬೇರೆ ಪ್ರದೇಶಕ್ಕೆ ಅಥವಾ ಭಾಗಕ್ಕೆ ಅಂದರೆ ಒಂದು ಮತಗಟ್ಟೆಯಿಂದ ಇನ್ನೊಂದು ಮತಗಟ್ಟೆಗೆ ವರ್ಗಾವಣೆ ಮಾಡುವುದಕ್ಕಾಗಿ ನಮೂನೆ 8ಎ ಸಲ್ಲಿಸಬೇಕು.  ಅಕ್ಟೋಬರ್ 01 ರಿಂದ 31 ರವರೆಗೆ ಅರ್ಜಿಗಳನ್ನು ಇಂಟರ್‍ನೆಟ್ ಮೂಲಕ ಆನ್‍ಲೈನ್‍ನಲ್ಲಿಯೂ ನೋಂದಾಯಿಸಬಹುದಾಗಿದೆ.  ನಮೂನೆ 06 ರ ಜೊತೆಗೆ ಇತ್ತೀಚಿನ ಪಾಸ್‍ಪೋರ್ಟ್ ಅಳತೆಯ ಕಲರ್ ಭಾವಚಿತ್ರವನ್ನು ಲಗತ್ತಿಸುವುದು ಕಡ್ಡಾಯವಾಗಿರುತ್ತದೆ. 
     ಸಾರ್ವಜನಿಕರು ಮತ್ತು ಅರ್ಹ ಮತದಾರರ ಇದರ ಸದುಪಯೋಗ ಪಡೆದುಕೊಳ್ಳಬೇಕು.  ಹೆಚ್ಚಿನ ವಿವರಗಳನ್ನು ನಾಡ ಕಚೇರಿಗಳಲ್ಲಿ, ಉಪತಹಸಿಲ್ದಾರರು, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು, ಬೂತ್ ಮಟ್ಟದ ಅಧಿಕಾರಿಗಳು, ಸಹಾಯಕ ಆಯುಕ್ತರು ಅಥವಾ  ತಹಸಿಲ್ದಾರರ ಕಚೇರಿಯಲ್ಲಿ ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment