
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಕ್ಕಳ ವಿಶೇಷ ಪೊಲೀಸ್ ಘಟಕದ ಜಗದೀಶ್ವರಯ್ಯ ಹಿರೇಮಠ ಮಾತನಾಡಿ, ಭಾರತ ದೇಶವು ಸಹ ಅಂತರರಾಷ್ಟ್ರೀಯ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಸಹಿಹಾಕಿದ್ದು ದೇಶದ ಎಲ್ಲಾ ಮಕ್ಕಳಿಗೂ ಅವರ ಹಕ್ಕುಗಳನ್ನು ಅವರಿಗೆ ಒದಗಿಸಲು ಕಟಿಬದ್ದವಾಗಿದೆ. ಮಕ್ಕಳಿಗೆ ಬದಕುವ ಹಕ್ಕು, ಅಭಿವೃದ್ಧಿ ಮತ್ತು ವಿಕಾಸಹೊಂದುವ ಹಕ್ಕು, ಶೋಷಣೆಯ ವಿರುದ್ಧ ಸಂರಕ್ಷಣೆ ಹಕ್ಕು ಮತ್ತು ಭಾಗವಹಿಸುವ ಹಕ್ಕುಗಳನ್ನು ನೀಡಿರುವುದಷ್ಟೇ ಅಲ್ಲದೇ ಈ ಹಕ್ಕುಗಳನ್ನು ಅವರಿಗೆ ತಲುಪಿಸಲು ಹಲವಾರು ಕಾನೂನುಗಳನ್ನು ಮತ್ತು ಯೋಜನೆಗಳನ್ನು ಅನುಷ್ಠಾನಗೊಳಿಸಿದೆಂದು ಕಾನೂನು ಮತ್ತು ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಪ್ರಸ್ತುತ ಸಮಾಜದಲ್ಲಿ ಮಕ್ಕಳ ಮೇಲೆ ನಡೆಯುತ್ತಿರುವ ದೌಜನ್ಯಕ್ಕೆ ಸಂಬಂಧಿಸಿದಂತೆ ಸಭೆಯಲ್ಲಿ ಲೈಂಗಿಕ ದೌಜನ್ಯದಿಂದ ಮಕ್ಕಳ ಸಂರಕ್ಷಣೆ ಕಾಯ್ದೆ (ಪೋಸ್ಕೊ) ಬಗ್ಗೆ ಮಾಹಿತಿ ನೀಡಿದರು ಹಾಗೂ ಇತ್ತಿಚೀನ ದಿನಗಳಲ್ಲಿ ಮಹಿಳೆ ಮತ್ತು ಮಕ್ಕಳ ಸಾಗಾಣಿಕ ಹೆಚ್ಚಾಗುತ್ತಿದ್ದು, ಪ್ರಾಥಮಿಕವಾಗಿ ಮಹಿಳೆ ಮತ್ತು ಮಕ್ಕಳ ರಕ್ಷಣೆ ಹೆಚ್ಚಿನ ಜವಬ್ದಾರಿ ಮೂಲತಃ ಕುಟುಂಬದ್ದು ಎಂದು ತಿಳಿಸಿದರು. ಬಾಲ ನ್ಯಾಯ (ಆರೈಕೆ ಮತ್ತು ಪೋಷಣೆ) ಕಾಯ್ದೆ-2000ರನ್ವಯ ಜಿಲ್ಲೆಯಲ್ಲಿ ಮಕ್ಕಳ ವಿಶೇಷ ಪೊಲೀಸ್ ಘಟಕವನ್ನು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗಳ ಕಛೇರಿಯಲ್ಲಿ ಸ್ಥಾಪಿಸಲಾಗಿದೆ. ಅಲ್ಲದೇ ಪೊಲೀಸ್ ಠಾಣೆಯ ಠಾಣಾಧಿಕಾರಿಗಳನ್ನು ಮಕ್ಕಳ ಕಲ್ಯಾಣಾಧಿಕಾರಿಗಳೆಂದು ನೇಮಿಸಿದ್ದು, ಆರೈಕೆ ಮತ್ತು ಪೋಷಣೆ ಅವಶ್ಯಕತೆಯಿರುವ ಯಾವುದೇ ಮಗುವನ್ನು ಯಾರೇ ವ್ಯಕ್ತಿಗಳು ಆರೈಕೆ ಮತ್ತು ಪೋಷಣೆಗಾಗಿ ಮಕ್ಕಳನ್ನು ಹಾಜರಪಡಿಸಬಹುದಾಗಿದೆ. ನಂತರ ಮಕ್ಕಳಿಗೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಿಂದ ಸೂಕ್ತ ಪುರ್ನವಸತಿಯನ್ನು ಕಲ್ಪಿಸಲಾಗುತ್ತದೆಂದು ತಿಳಿಸಿದರು.
ಮಕ್ಕಳ ರಕ್ಷಣಾ ಘಟಕದ ಶಿವಲಿಲಾ ವನ್ನೂರು ಅವರು ಮಾತನಾಡಿ, ಜಿಲ್ಲೆಯಲ್ಲಿ ತಾಯಿ ಮರಣ ಮತ್ತು ಶಿಶು ಮರಣ ಪ್ರಕರಣಗಳಿಗೆ, ಗರ್ಭಿಣಿ ತಾಯಂದಿರಲ್ಲಿ ರಕ್ತ ಹಿನ್ನತೆ ಕಾರಣವಾಗಿದೆ ಅಲ್ಲದೆ ಅಪೌಷ್ಠಿಕ ಮಕ್ಕಳು ಜನಿಸುವುದಕ್ಕೆ ಬಾಲ್ಯ ವಿವಾಹವು ಮುಖ್ಯ ಕಾರಣ. ಈ ಎಲ್ಲಾ ಅಂಶಗಳನ್ನು ಮನಗಂಡು ಭಾರತ ಸರ್ಕಾರವು “ಬಾಲ್ಯ ವಿವಾಹ ನಿಷೇಧ ಕಾಯ್ದೆ-2005”ನ್ನು ಜಾರಿಗೊಳಿಸಿದೆ. ಈ ಕಾಯ್ದೆಯಡಿಯಲ್ಲಿ 18 ವರ್ಷದೂಳಗಿನ ಹೆಣ್ಣು ಮಕ್ಕಳಿಗೆ ಹಾಗೂ 21 ವರ್ಷದೂಳಗಿನ ಗಂಡು ಮಕ್ಕಳಿಗೆ ವಿವಾಹವನ್ನು ಮಾಡುವುದು ಕಾನೂನು ಬಾಹಿರ. ಒಂದು ವೇಳೆ ಮದುವೆಯನ್ನು ಮಾಡಿದ್ದೆ ಆದಲ್ಲಿ ಮದುವೆಯನ್ನು ಮಾಡಿದ ಪಾಲಕ, ಪೋಷಕ ಹಾಗೂ ಪ್ರೋತ್ಸಾಹಿಸಿದವರಿಗೆ ಎರಡು ವರ್ಷದ ಜೈಲು ಶಿಕ್ಷೆ ಅಥವಾ ಒಂದು ಲಕ್ಷ ರೂ ದಂಡ ಅಥವಾ ಎರಡರಿಂದಲೂ ದಂಡಿಸಬಹುದಾಗಿದೆ. ಜಿಲ್ಲೆಯಲ್ಲಿ ಇದುವರೆಗೂ ಬಾಲ್ಯ ವಿವಾಹ ಮಾಡಿದ ಪಾಲಕ, ಪೋಷಕ ಹಾಗೂ ಪ್ರೋತ್ಸಾಹಿಸಿದವರ ವಿರುದ್ಧ ಬಾಲ್ಯ ವಿವಾಹ ಪ್ರಕರಣಗಳನ್ನು ದಾಖಲಿಸಲಾಗಿದೆ. ಆದ್ದರಿಂದ ಬಾಲ್ಯ ವಿವಾಹಗಳನ್ನು ಮಾಡಬೇಡಿ ಎಂದು ವಿನಂತಿಸಿದರು. ಅಲ್ಲದೇ ಸಂಕಷ್ಠದಲ್ಲಿರುವ ಮಕ್ಕಳ ಸಹಾಯಕ್ಕಾಗಿ ಜಿಲ್ಲೆಯಲ್ಲಿ ಮಕ್ಕಳ ಸಹಾಯವಾಣಿಯನ್ನು ಆರಂಬಿಸಿದ್ದು ಸಂಕಷ್ಠದಲ್ಲಿರುವ ಮಕ್ಕಳು ಕಂಡುಬಂದಲ್ಲಿ 1098 ಸಂಖ್ಯೆಗೆ ಕರೆಯನ್ನು ಮಾಡಿ ಮಾಹಿತಿಯನ್ನು ನೀಡಿದಲ್ಲಿ ಮಾಹಿತಿಯು ಲಭ್ಯವಾದ 60 ನಿಮಿಷದೂಳಗಾಗಿ ಸದರಿ ಮಗುವನ್ನು ಸಹಾಯವಾಣಿಯ ಕಾರ್ಯಕರ್ತರು ರಕ್ಷಿಸಿ ನಂತರ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಸಹಾಯದಿಂದ ಅಗತ್ಯ ಪುರ್ನವಸತಿಯನ್ನು ಕಲ್ಪಸಲಾಗುತ್ತದೆಂದು ವಿವರಿಸಿದರು.
ಕುಕನೂರು ಎಎಸ್ಐ ವಾಸನಗೌಡ ಮಾತನಾಡಿ ಜಿಲ್ಲೆಯಲ್ಲಿನ ಯಾವುದೇ ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳಂತಹ ಪ್ರಕರಣಗಳು ಕಂಡು ಬಂದಲ್ಲಿ ಶೋಷಿತರ ನೆರವಿಗೆ ಪೊಲೀಸ್ ಇಲಾಖೆ ಸದಾ ಸಿದ್ದವಿರುತ್ತದೆ ಎಂದು ಹೇಳಿದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರವಿ ಬಡಿಗೇರ ಮಾತನಾಡಿ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಸರ್ಕಾರವು ಸಮಗ್ರ ಮಕ್ಕಳ ರಕ್ಷಣಾ ಯೋಜನೆಯಡಿಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಜಿಲ್ಲೆಯಲ್ಲಿ ಗುರುತಿಸಿದ ತೀವ್ರ ಸಂಕಷ್ಠದಲ್ಲಿರುವ ಎಚ್.ಐ.ವಿ ಭಾದಿತ ಹಾಗೂ ಸೋಂಕಿತ ಮಕ್ಕಳಿಗೆÉ ಆರೈಕೆ ಮತ್ತು ಪೋಷಣೆಗಾಗಿ “ವಿಶೇಷ ಪಾಲನಾ ಯೋಜನೆಯಡಿಯಲ್ಲಿ” ಪ್ರತಿ ಮಾಹೆ ರೂ.650 ರಂತೆ ಮತ್ತು ಮಗು ಶಾಲೆಗೆ ತೆರಳುತ್ತಿದ್ದಲ್ಲಿ ಶೈಕ್ಷಣಿಕ ವೆಚ್ಚವಾಗಿ ರೂ.500 ವಾರ್ಷಿಕವಾಗಿ ಅನುದಾವನ್ನು ಬಿಡುಗಡೆ ಮಾಡಲಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ. ಸದಸ್ಯ ವಿರುಪಣ್ಣ ಸಂಟೂರು ವಹಿಸಿದ್ದರು. ಗ್ರಾಮ ಪಂಚಾಯತ ಸದಸ್ಯರಾದ ಜಂಬಣ್ಣ ನಡುಲಮನಿ, ಸಾಂತ್ವನ ಕೇಂದ್ರದ ಸುನಿತಾ ಭಾಗವಹಿಸಿದ್ದರು.