Thursday, 29 September 2016

ಅ. 02 ರಂದು ಕೊಪ್ಪಳದಲ್ಲಿ ಮಹಾತ್ಮ ಗಾಂಧೀಜಿ ಜಯಂತಿ

ಕೊಪ್ಪಳ ಸೆ. 29 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಇದೇ ಅ. 02 ರಂದು ಮಹಾತ್ಮ ಗಾಂಧೀಜಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ತಿಳಿಸಿದ್ದಾರೆ.
     ಅಕ್ಟೋಬರ್ 02 ರಂದು ಬೆಳಿಗ್ಗೆ 10 ಗಂಟೆಗೆ ಕೊಪ್ಪಳ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಮಹಾತ್ಮ ಗಾಂಧೀಜಿ ಜಯಂತಿಯನ್ನು ಆಚರಿಸಲಾಗುವುದು.  ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವರಾದ ಬಸವರಾಜ ರಾಯರಡ್ಡಿ ಅವರು ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಭಕ್ತಿ ನಮನ ಸಲ್ಲಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡುವರು.  ಶಿಷ್ಟಾಚಾರದಂತೆ ಎಲ್ಲ ಗಣ್ಯಾತಿಗಣ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು.  ಮಹಾತ್ಮ ಗಾಂಧೀಜಿ ಅವರಿಗೆ ಪ್ರಿಯವಾದ     ‘ರಘುಪತಿ ರಾಜಾರಾಂ’ ಸೇರಿದಂತೆ ವಿವಿಧ ಗೀತೆಗಳ ಗಾಯನ ಈ ಸಂದರ್ಭದಲ್ಲಿ ನಡೆಸಲಾಗುವುದು ಹಾಗೂ ಗಾಂಧೀಜಿಯವರ ಜೀವನ ಸಾಧನೆ ಕುರಿತಂತೆ  ವಿಶೇಷ ಉಪನ್ಯಾಸ ಏರ್ಪಡಿಸಲಾಗಿದೆ.  ಗಾಂಧೀಜಿ ಜಯಂತಿ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಪ್ರಕಟಿಸಲಾಗಿರುವ ‘ನಮ್ಮ ಗ್ರಾಮ ನಮ್ಮ ಯೋಜನೆ, ಬಾಪೂಜಿ ಸೇವಾ ಕೇಂದ್ರ, ನಮ್ಮ ಗಾಂಧಿ ತಾತ, ನನ್ನ ಜೀವನವೇ ನನ್ನ ಸಂದೇಶ ಪುಸ್ತಕಗಳ ಜೊತೆಗೆ ಅಕ್ಟೋಬರ್ ಮಾಹೆಯ ಜನಪದ ಮತ್ತು ಮಾರ್ಚ್ ಆಫ್ ಕರ್ನಾಟಕ ಸಂಚಿಕೆಯ ಗಾಂಧೀಜಿ ವಿಶೇಷಾಂಕಗಳ ಬಿಡುಗಡೆ ಕಾರ್ಯಕ್ರಮ ಜರುಗಲಿದೆ.  ಗಾಂಧೀಜಿಯವರ ಜೀವನ ಚರಿತ್ರೆ ಕುರಿತು 25 ನಿಮಿಷಗಳ ಅವಧಿಯ ಕಿರು ಚಿತ್ರ ಪ್ರದರ್ಶನಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ತಿಳಿಸಿದ್ದಾರೆ.

ಕುಷ್ಟಗಿ : ಅ. 01 ರಿಂದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣಾ ಕಾರ್ಯಕ್ರಮ

ಕೊಪ್ಪಳ ಸೆ. 29 (ಕರ್ನಾಟಕ ವಾರ್ತೆ): ಕುಷ್ಟಗಿ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣಾ ಕಾರ್ಯಕ್ರಮ ಅ. 01 ರಿಂದ 31 ರವರೆಗೆ ಒಂದು ತಿಂಗಳ ಕಾಲ ಏರ್ಪಡಿಸಲಾಗಿದ್ದು, 2017 ರ ಜನವರಿ 01 ರ ದಿನಾಂಕವನ್ನು ಅರ್ಹತಾ ದಿನಾಂಕವನ್ನಾಗಿಸಿಕೊಂಡು, ಅರ್ಹರನ್ನು ಮತದಾರರ ಪಟ್ಟಿಗೆ ಸೇರ್ಪಡೆ, ತಿದ್ದುಪಡಿ ಸೇರಿದಂತೆ ಪರಿಷ್ಕರಣೆ ಮಾಡಲಾಗುವುದು ಎಂದು ಕುಷ್ಟಗಿ ತಹಸಿಲ್ದಾರ್ ಎಂ. ಗಂಗಪ್ಪ ತಿಳಿಸಿದ್ದಾರೆ.
     ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯಕ್ರಮದ ವೇಳಾಪಟ್ಟಿ ವಿವರ ಇಂತಿದೆ.  ಕುಷ್ಟಗಿ ವಿಧಾನಸಭಾ ಕ್ಷೇತ್ರದ ಕರಡು ಮತದಾರರ ಪಟ್ಟಿಯನ್ನು ಅಕ್ಟೋಬರ್ 01 ರಂದು ತಹಸಿಲ್ದಾರರ ಕಚೇರಿಯಲ್ಲಿ ಪ್ರಕಟಿಸಲಾಗುವುದು.  2017 ರ ಜನವರಿ 01 ರ ದಿನಾಂಕವನ್ನು ಅರ್ಹತಾ ದಿನಾಂಕವನ್ನಾಗಿ ನಿಗದಿಪಡಿಸಿದ್ದು, ಸಾರ್ವಜನಿಕರು ಮತದಾರರ ಪಟ್ಟಿಗೆ ಹೆಸರು ಸೇರಿಸಲು, ತಿದ್ದುಪಡಿ ಮಾಡಿಸಲು ಅಥವಾ ಪಟ್ಟಿಯಿಂದ ಹೆಸರು ಕೈಬಿಡುವ ಕುರಿತು ಹಾಗೂ ಆಕ್ಷೇಪಣೆಗಳ ಕುರಿತು ಅರ್ಜಿಯನ್ನು ಅಕ್ಟೋಬರ್ 01 ರಿಂದ 31 ರವರೆಗೆ ಸಲ್ಲಿಸಬಹುದು.  ಕರಡು ಮತದಾರರ ಪಟ್ಟಿಗಳನ್ನು ಗ್ರಾಮ/ಪಟ್ಟಣ/ವಾರ್ಡ್‍ಗಳ ಸಭೆಯಲ್ಲಿ ಅಕ್ಟೋಬರ್ 07 ಮತ್ತು 14 ರಂದು ಓದಲಾಗುವುದು.  ಅಕ್ಟೋಬರ್ 16 ಮತ್ತು 23 ರ ದಿನವನ್ನು ವಿಶೇಷ ಆಂದೋಲನಾ ದಿನವನ್ನಾಗಿ ಆಚರಿಸಲಾಗುವುದು.  ಸಾರ್ವಜನಿಕರಿಂದ ಸಲ್ಲಿಕೆಯಾಗುವ ಹಕ್ಕು ಮತ್ತು ಆಕ್ಷೇಪಣೆ ಅರ್ಜಿಗಳನ್ನು ನವೆಂಬರ್ 31 ರೊಳಗೆ ವಿಲೇವಾರಿ ಮಾಡಲಾಗುವುದು.  ಸೇರ್ಪಡೆ/ತಿದ್ದುಪಡಿ/ ಬಿಡತಕ್ಕವುಗಳ ಪೂರಕ ಯಾದಿಗಳನ್ನು ಮುದ್ರಿಸಿ ಅಂತಿಮಗೊಳಿಸಲು ಡಿಸೆಂಬರ್ 24 ಕೊನೆಯ ದಿನಾಂಕವಾಗಿದೆ.  ಅಂತಿಮ ಮತದಾರರ ಪಟ್ಟಿಯನ್ನು 2017 ರ ಜನವರಿ 10 ರಂದು ಪ್ರಕಟಿಸಲಾಗುವುದು.
     ಸಾರ್ವಜನಿಕರು ಮತದಾರರ ಪಟ್ಟಿಗೆ ಹೆಸರನ್ನು ಸೇರಿಸಲು ನಮೂನೆ-06, ಮತದಾರರ ಹೆಸರನ್ನು ಸೇರ್ಪಡೆಗೊಳಿಸಿರುವುದಕ್ಕೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಅಥವಾ ಹೆಸರನ್ನು ತೆಗೆದು ಹಾಕಲು ನಮೂನೆ-07.  ತಿದ್ದುಪಡಿಗಾಗಿ ನಮೂನೆ-08.  ಪಟ್ಟಿಯಲ್ಲಿರುವ ಹೆಸರನ್ನು ವಿಧಾನಸಭಾ ಕ್ಷೇತ್ರದ ಬೇರೆ ಪ್ರದೇಶಕ್ಕೆ ಅಥವಾ ಭಾಗಕ್ಕೆ ಅಂದರೆ ಒಂದು ಮತಗಟ್ಟೆಯಿಂದ ಇನ್ನೊಂದು ಮತಗಟ್ಟೆಗೆ ವರ್ಗಾವಣೆ ಮಾಡುವುದಕ್ಕಾಗಿ ನಮೂನೆ 8ಎ ಸಲ್ಲಿಸಬೇಕು.  ಅಕ್ಟೋಬರ್ 01 ರಿಂದ 31 ರವರೆಗೆ ಅರ್ಜಿಗಳನ್ನು ಇಂಟರ್‍ನೆಟ್ ಮೂಲಕ ಆನ್‍ಲೈನ್‍ನಲ್ಲಿಯೂ ನೋಂದಾಯಿಸಬಹುದಾಗಿದೆ.  ನಮೂನೆ 06 ರ ಜೊತೆಗೆ ಇತ್ತೀಚಿನ ಪಾಸ್‍ಪೋರ್ಟ್ ಅಳತೆಯ ಕಲರ್ ಭಾವಚಿತ್ರವನ್ನು ಲಗತ್ತಿಸುವುದು ಕಡ್ಡಾಯವಾಗಿರುತ್ತದೆ. 
     ಸಾರ್ವಜನಿಕರು ಮತ್ತು ಅರ್ಹ ಮತದಾರರ ಇದರ ಸದುಪಯೋಗ ಪಡೆದುಕೊಳ್ಳಬೇಕು.  ಹೆಚ್ಚಿನ ವಿವರಗಳನ್ನು ನಾಡ ಕಚೇರಿಗಳಲ್ಲಿ, ಉಪತಹಸಿಲ್ದಾರರು, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು, ಬೂತ್ ಮಟ್ಟದ ಅಧಿಕಾರಿಗಳು ಅಥವಾ ಕುಷ್ಟಗಿ ತಹಸಿಲ್ದಾರರ ಕಚೇರಿಯಲ್ಲಿ ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದು ತಹಸಿಲ್ದಾರ್ ಎಂ. ಗಂಗಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅ. 17 ರಂದು ಜಿಲ್ಲಾ ಪಂಚಾಯತಿ ತ್ರೈಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆ

ಕೊಪ್ಪಳ ಸೆ. 29 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಪಂಚಾಯತಿಯ ಪ್ರಸಕ್ತ ಸಾಲಿನ ಎರಡನೆ ತ್ರೈಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆ ಅ. 17 ರಂದು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
     ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ವಹಿಸುವರು.  ಸಂಬಂಧಪಟ್ಟ ಅನುಷ್ಠಾನಾಧಿಕಾರಿಗಳು ಜುಲೈ 2016 ರಿಂದ ಸೆಪ್ಟಂಬರ್ 2016 ವರೆಗಿನ ಅವಧಿಯ ಪ್ರಗರಿ ವರದಿಗಳನ್ನು ಜಿಲ್ಲಾ ಪಂಚಾಯತಿ ಕಾರ್ಯಾಲಯಕ್ಕೆ ಅ. 01 ರ ಒಳಗಾಗಿ ಸಲ್ಲಿಸಬೇಕು ಹಾಗೂ ಸಭೆಗೆ ಖುದ್ದಾಗಿ ಹಾಜರಾಗಬೇಕು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ತಿಳಿಸಿದ್ದಾರೆ.

ಅ. 02 ರಂದು ಈಶಾನ್ಯದ ಐಸಿರಿ ಸರಣಿಯ 03 ನೇ ಸಂಚಿಕೆ ಪ್ರಸಾರ

ಕೊಪ್ಪಳ ಸೆ. 29 (ಕರ್ನಾಟಕ ವಾರ್ತೆ): ಹೈದ್ರಾಬಾದ್ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿ, ಇಲ್ಲಿನ ಕಲೆ, ಸಂಸ್ಕøತಿ, ಐತಿಹಾಸಿಕ ಹಾಗೂ ಪ್ರವಾಸಿ ತಾಣಗಳು, ಇಲ್ಲಿನ ಪ್ರತಿಭೆಗಳು, ಸಾಧಕರು ಮುಂತಾದ ಸಂಗತಿಗಳನ್ನು ಪರಿಚಯಿಸುವ “ಈಶಾನ್ಯದ ಐಸಿರಿ” ಸರಣಿಯ ಎರಡನೆ ಸಂಚಿಕೆ ಅಕ್ಟೋಬರ್ 02 ರಂದು ಬೆಳಿಗ್ಗೆ 10 ಗಂಟೆಗೆ ಹೊಸಪೇಟೆ, ರಾಯಚೂರು ಹಾಗೂ ಕಲಬುರಗಿ ಆಕಾಶವಾಣಿ ಕೇಂದ್ರಗಳಿಂದ ಏಕಕಾಲಕ್ಕೆ ಪ್ರಸಾರವಾಗಲಿದೆ.
        ಹೈ.ಕ. ಪ್ರದೇಶ ಅಭಿವೃದ್ಧಿ ಮಂಡಳಿ ಈ ಸಂಪೂರ್ಣ ಸರಣಿಯನ್ನು ಪ್ರಾಯೋಜಿಸಿದ್ದು, 03 ನೇ  ಸಂಚಿಕೆಯಲ್ಲಿ ಮೂಡಿ ಬರಲಿರುವ ಕಾರ್ಯಕ್ರಮದ ವಿವರಗಳು ಹೀಗಿವೆ.  ನಿವೃತ್ತ ನ್ಯಾಯಮೂರ್ತಿಗಳಾದ ಎಂ.ಬಿ. ಬಿರಾದರ ಅವರಿಂದ ಎಫ್.ಐ.ಆರ್. ದಾಖಲಿಸುವ ಕುರಿತು ಮಾಹಿತಿ.  ಮೆದುಳು ಹಾಗೂ ಮೆದುಳಿನ ಸಾಮಥ್ರ್ಯ ಕುರಿತಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕರಾದ ಎಂ.ಬಿ. ಪಾಟೀಲ ಅವರಿಂದ ವಿವರಣೆ.  ಮಾಡಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡುತ್ತಿರುವ ಅಶ್ವಿನಿ ಕಾವಳೆ ಅವರೊಂದಿಗೆ ಮಾತುಕತೆ.  ಆಳಂದ ತಾಲೂಕ ಗುಂಜ ಬಬಲಾದ ಗ್ರಾಮದ ಚೆನ್ನಮ್ಮ ಮಹಿಳಾ ಸ್ವಸಹಾಯ ಸಂಘದ ಪರಿಚಯ.  ಕಲಾವಿದ ಹಣಮಂತರಾವ ಜಮಾದಾರ ಮತ್ತು ಸಂಗಡಿಗರಿಂದ ಮಹಾತ್ಮ ಗಾಂಧೀಜಿ ಕುರಿತಾದ ಗೀಗೀಪದ.  ಊರು-ಟೂರಿನಲ್ಲಿ ಸುರಪುರದ ಪ್ರಸಿದ್ಧ ಸ್ಥಳಗಳ ಪರಿಚಯ.  ಹಾಸ್ಯ ಕಲಾವಿದ ವೈಜನಾಥ ಸಜ್ಜನಶೆಟ್ಟಿ ಅವರಿಂದ ನಗೆ ಹನಿ.  ಇವುಗಳಲ್ಲದೆ ಕಳೆದ ವಾರದಲ್ಲಿ ಈ ಭಾಗದ ಆರು ಜಿಲ್ಲೆಗಳಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಕಾರ್ಯಕ್ರಮಗಳು, ಘಟಿಸಿದ ಪ್ರಮುಖ ಸಂಗತಿಗಳನ್ನು ಒಳಗೊಂಡ ವಾರದ ವರದಿ, ನುಡಿಮುತ್ತು, ಪುಟ್ಟ ಸಂದೇಶಗಳು ಮೂಡಿ ಬರಲಿವೆ.  ಸರಣಿಯ ನಿರೂಪಣಾ ಸಾಹಿತ್ಯ ಹಾಗೂ ನಿರ್ಮಾಣದ ಜವಾಬ್ದಾರಿಯನ್ನು ಸೋಮಶೇಖರ ಎಸ್. ರುಳಿಯವರು ವಹಿಸಿಕೊಂಡಿದ್ದಾರೆ ಎಂದು ಕಲಬುರಗಿ ಆಕಾಶವಾಣಿ ಕೇಂದ್ರದ ಮುಖ್ಯಸ್ಥೆ ಅಂಜನಾ ಯಾತನೂರ ತಿಳಿಸಿದ್ದಾರೆ.

ಚನ್ನಮ್ಮ ಹಳ್ಳಿಕೇರಿಯವರಿಗೆ ಮಹಾತ್ಮಾ ಗಾಂಧೀ ಸೇವಾ ಪ್ರಶಸ್ತಿ

ಕೊಪ್ಪಳ ಸೆ.29 (ಕರ್ನಾಟಕ ವಾರ್ತೆ) : ಮಹಾತ್ಮಾ ಗಾಂಧೀಜಿಯವರ ವಿಚಾರಧಾರೆಗಳನ್ನು ಸಾಕಾರಗೊಳಿಸುವ ಕಾರ್ಯದಲ್ಲಿ ಸಕ್ರಿಯರಾಗಿರುವ ಹಿರಿಯ ಚೇತನ ಚನ್ನಮ್ಮ ಹಳ್ಳಿಕೇರಿಯವರಿಗೆ  ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರಸಕ್ತ ಸಾಲಿನ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ-ಕರ್ನಾಟಕ  ನೀಡಿ ಗೌರವಿಸುತ್ತಿದೆ.
       ಅ.2 ರಂದು ಸಂಜೆ 6 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡುವರು.  ಕಲಾವಿದ ಎಂ.ಎಸ್.ಮೂರ್ತಿ ಚಿತ್ರಿಸಿರುವ ಮಹಾತ್ಮ ಗಾಂಧಿ ರೇಖಾ ಚಿತ್ರ ದರ್ಶನ ಹಾಗೂ ರೇಖಾರಾಣಿ ನಿರ್ದೇಶಿಸಿರುವ ಚನ್ನಮ್ಮ ಹಳ್ಳಿಕೇರಿ ಅವರ ಕುರಿತ ಸಾಕ್ಷ್ಯಚಿತ್ರವನ್ನು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ.ಹೊ.ಶ್ರೀನಿವಾಸಯ್ಯ ಬಿಡುಗಡೆ ಮಾಡುವರು. ಕೇಂದ್ರ ರಸಗೊಬ್ಬರ ಸಚಿವ ಅನಂತಕುಮಾರ್,ಬೆಂಗಳೂರು ಅಭಿವೃದ್ಧಿ ಹಾಗೂ ನಗರ ಯೋಜನೆ ಸಚಿವ ಕೆ.ಜೆ.ಜಾರ್ಜ, ಮಹಾತ್ಮಾ ಗಾಂಧೀ ಸೇವಾ ಪ್ರಶಸ್ತಿ –ಕರ್ನಾಟಕ ಆಯ್ಕೆ ಸಮಿತಿ ಅಧ್ಯಕ್ಷ ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಚಿಕ್ಕಪೇಟೆ ವಿಧಾನಸಬಾ ಕ್ಷೇತ್ರದ ಸದಸ್ಯ ಆರ್.ವಿ.ದೇವರಾಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
      ಸಂಜೆ 5 ಗಂಟೆಗೆ ಹೆಸರಾಂತ ಗಾಯಕಿ ಸಂಗೀತಾ ಕಟ್ಟಿ ಕುಲಕರ್ಣಿಯವರಿಂದ ಗಾಂಧಿ ಪ್ರಿಯ ಗೀತೆಗಳ ಗಾಯನ ಕಾರ್ಯಕ್ರಮ ಜರುಗಲಿದೆ. ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮೀನಾರಾಯಣ, ನಿರ್ದೇಶಕ ಎನ್.ಆರ್.ವಿಶುಕುಮಾರ್ ತಿಳಿಸಿದ್ದಾರೆ.
ಚನ್ನಮ್ಮ ಹಳ್ಳಿಕೇರಿ; ಹಾವೇರಿ ಜಿಲ್ಲೆಯ ಹೊಸರಿತ್ತಿಯಲ್ಲಿ 1931 ಜನವರಿ 02 ರಂದು ಜನಿಸಿದರು. ತಾತ ಗುದ್ಲೆಪ್ಪ ಹಳ್ಳಿಕೇರಿ,ತಂದೆ ಚನ್ನಬಸಪ್ಪ ಹಳ್ಳಿಕೇರಿ, ವೆಂಕಟೇಶ ಮಾಗಡಿ, ಮೈಲಾರ ಮಹದೇವಪ್ಪ, ಪ್ರಭುಜೀ ಸವಣೂರ, ರಮಾನಂದ ಮನ್ನಂಗಿ, ಚಿಕ್ಕಮ್ಮ ಮನ್ನಂಗಿ ದೇವಕ್ಕ ಅವರಿಂದ ಬಾಲ್ಯದಲ್ಲಿಯೇ ರಾಷ್ಟ್ರೀಯ ಭಾವನೆಗಳ ಪ್ರೇರಣೆ. ಹುಬ್ಬಳ್ಳಿಯಲ್ಲಿ ಪಠಿಸಿದ ರಾಷ್ಟ್ರಾಭಿಮಾನದ ಗೀತೆಗೆ ಸಭೆಯಲ್ಲಿ ಜವಾಹರಲಾಲ ನೆಹರೂ ಅವರಿಂದ ಪ್ರಶಂಸೆ ಪಡೆದರು. ಸ್ವಾತಂತ್ರ್ಯ ಹೋರಾಟಗಾರ್ತಿ ಮೀರಾ ತಾಯಿ ಕೊಪ್ಪೀಕರ್ ಅವರ ಸಾಂಗತ್ಯದಲ್ಲಿ ಸಮಾಜ ಸೇವೆ, ಅಸ್ಪøಷ್ಯತೆ ನಿವಾರಣೆ, ಗ್ರಾಮ ¸ಫಾಯಿ, ಖಾದಿ ಉತ್ಪಾದನೆ ಚಟುವಟಿಕೆಗಳು ಹಾಗೂ ಆಚಾರ್ಯ ವಿನೋಬಾ ಭಾವೆ ಅವರ ಪ್ರಭಾವದಿಂದ ಭೂದಾನ ಚಳವಳಿಯಲ್ಲಿಯೂ ತೊಡಗಿಸಿಕೊಂಡವರು.  ಅಮರಗೋಳದ ಕಸ್ತೂರಬಾ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದು,ಗದುಗಿನ ಆಸ್ಪತ್ರೆಯಲ್ಲಿ ದಾದಿಯಾಗಿ ರೋಗಿಗಳ ಸೇವೆಯಲ್ಲಿ ನಿರತರಾದರು.  ಸಮಾಜ ಸೇವೆಗೆ ಕಂಕಣ ತೊಟ್ಟು ಮದುವೆಯನ್ನೇ ನಿರಾಕರಿಸಿ ರಾಷ್ಟ್ರದ ಕೆಲಸಗಳಲ್ಲಿ ಇಂದಿಗೂ ತೊಡಗಿಸಿಕೊಂಡಿದ್ದಾರೆ.

ವಿದ್ಯಾರ್ಥಿ ವೇತನಕ್ಕೆ ಆನ್‍ಲೈನ್ ಮೂಲಕ ಅರ್ಜಿ : ಅವಧಿ ವಿಸ್ತರಣೆ

ಕೊಪ್ಪಳ, ಸೆ.29 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕ ಸಮಾಜ ಕಲ್ಯಾಣ ಇಲಾಖೆಯಿಂದ ಪ.ಜಾತಿ ಹಾಗೂ ಪ.ಪಂಗಡದ 1 ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಸಕ್ತ ಸಾಲಿನ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಮಂಜೂರಾತಿಗೆ ಆನ್‍ಲೈನ್ ಮೂಲಕ ಅರ್ಜಿs ಸಲ್ಲಿಸಲು 2017 ರ ಮಾರ್ಚ್ 31 ರವರೆಗೆ ಅವಧಿ ವಿಸ್ತರಿಸಲಾಗಿದೆ.
 ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಕಿರಿಯ, ಹಿರಿಯ ಹಾಗೂ ಪ್ರೌಢ ಶಾಲೆಗಳ ಮುಖ್ಯೋಪಾದ್ಯಾಯರುಗಳು ಪ.ಜಾತಿ ಹಾಗೂ ಪ.ಪಂಗಡ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಕ್ಕಾಗಿ ಪ್ರಸಕ್ತ ಸಾಲಿನ ಒಂದನೇ ತರಗತಿಯ ವಿದ್ಯಾರ್ಥಿಗಳ ಅರ್ಜಿಗಳನ್ನು ಆನ್‍ಲೈನ್ ಮೂಲಕ 2017 ರ ಮಾರ್ಚ್ 31 ರೊಳಗಾಗಿ ಸಲ್ಲಿಸಬೇಕು. ಇದುವರೆಗೂ ಆನ್‍ಲೈನ್ ಮೂಲಕ ನೋಂದಣಿ ಮಾಡದ 2 ರಿಂದ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ನೋಂದಣಿ ಅರ್ಜಿಯ ನಮೂನೆ, ನವೀಕರಣ ವಿದ್ಯಾರ್ಥಿಗಳು ಅನುಬಂಧ-2 ರಲ್ಲಿ ಹಾಗೂ ವರ್ಗಾವಣೆಯಾಗಿ ಬಂದ ವಿದ್ಯಾರ್ಥಿಗಳು ಅನುಬಂಧ-1 ರಲ್ಲಿ ಮಾಹಿತಿ ಭರ್ತಿ ಮಾಡಿ ಕಾರ್ಯಲಯಕ್ಕೆ ಸಲ್ಲಿಸಲು ಸೂಚಿಸಲಾಗಿದೆ. ಅನುಬಂಧಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಪಡೆಯಬಹುದು. ಅರ್ಜಿಯೊಂದಿಗೆ ಮುಖ್ಯೋಪಾದ್ಯಾಯರ ದೂರವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು. ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸದೆ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ಮಂಜೂರಾಗದಿದ್ದಲ್ಲಿ ಸಂಬಂಧಿಸಿದ ಶಾಲಾ ಮುಖ್ಯ ಗುರುಗಳನ್ನೆ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಕೊಪ್ಪಳ ತಾಲೂಕ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬನ್ನಿಕೊಪ್ಪದಲ್ಲಿ ಅ.5 ರಿಂದ ಹಂಪಿ ಎಕ್ಸ್‍ಪ್ರೆಸ್ ಹಾಗೂ ತಿರುಪತಿ ರೈಲು ನಿಲುಗಡೆ

ಕೊಪ್ಪಳ, ಸೆ.29 (ಕರ್ನಾಟಕ ವಾರ್ತೆ): ಹಂಪಿ ಎಕ್ಸ್‍ಪ್ರೆಸ್ ಹಾಗೂ ಹುಬ್ಬಳ್ಳಿ-ತಿರುಪತಿ ಫಾಸ್ಟ್ ಪ್ಯಾಸೆಂಜರ್ ರೈಲುಗಳು ಅ. 5 ರಿಂದ ಬನ್ನಿಕೊಪ್ಪ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆಯಾಲಿವೆ.
       ಸಂಸದ ಕರಡಿ ಸಂಗಣ್ಣ ಅವರು ಬನ್ನಿಕೊಪ್ಪ ರೈಲೈ ನಿಲ್ದಾಣದಲ್ಲಿ ಈ ಎರಡು ರೈಲುಗಳ ನಿಲುಗಡೆಗೆ ರೈಲ್ವೆ ಇಲಾಖೆಗೆ ಮನವಿ ಮಾಡಿಕೊಂಡ ಹಿನ್ನೆಲೆ ರೈಲ್ವೆ ಇಲಾಖೆ ಸಮ್ಮತಿಸಿದ್ದು, ಇದೀಗ  ಅ.5 ರಿಂದ ಹಂಪಿ ಎಕ್ಸ್‍ಪ್ರೆಸ್ ಗಾಡಿ ಸಂಖ್ಯೆ-16591/16592 ಹಾಗೂ ಹುಬ್ಬಳ್ಳಿ-ತಿರುಪತಿ ಫಾಸ್ಟ್ ಪ್ಯಾಸಿಂಜರ್ ಗಾಡಿ ಸಂಖ್ಯೆ-57273/57274 ರೈಲುಗಳು ನಿಲುಗಡೆಯಾಗುವಂತೆ ರೈಲ್ವೆ ಇಲಾಖೆ ವೇಳಾಪಟ್ಟಿ ಪ್ರಕಟಿಸಿದೆ.
     ಪ್ರಯಾಣಿಕರ ಅನುಕೂಲಕ್ಕಾಗಿ ಹಂಪಿ ಎಕ್ಸ್‍ಪ್ರೆಸ್ ರೈಲಿಗೆ ಹೆಚ್ಚುವರಿಯಾಗಿ 3 ಎಸಿ ಮತ್ತು 1 ಸ್ಲೀಪರ್ ರಿಜರ್ವೆಶನ್ ಬೋಗಿಗಳನ್ನು ಜೋಡಣೆ ಮಾಡಲು ಇಲಾಖೆ ಕ್ರಮ ವಹಿಸಿದೆ.  ಈ ಸೌಲಭ್ಯಗಳನ್ನು ಒದಗಿಸಿದ ಕೇಂದ್ರ ರೈಲ್ವೆ ಸಚಿವರಿಗೆ ಹಾಗೂ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಸಂಸದ ಕರಡಿ ಸಂಗಣ್ಣ ಅಭಿನಂದನೆ ಸಲ್ಲಿಸಿದ್ದು, ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಂಸದರು ಕೋರಿದ್ದಾರೆ ಎಂದು ಸಂಸದರ ಕಚೇರಿ ಪ್ರಕಟಣೆ ತಿಳಿಸಿದೆ.

ಅ.1 ರಂದು ಕೊಪ್ಪಳದಲ್ಲಿ ಕರಡು ಮತದಾರರ ಪಟ್ಟಿ ಪ್ರಕಟಣಾ ಸಮಾರಂಭ

ಕೊಪ್ಪಳ, ಸೆ.29 (ಕರ್ನಾಟಕ ವಾರ್ತೆ): ಭಾರತ ಚುನಾವಣಾ ಆಯೋಗದಿಂದ ಮತದಾರರ ಪಟ್ಟಿಗಳ ಪರಿಷ್ಕರಣೆ-2017 ರ ಕರಡು ಮತದಾರರ ಪಟ್ಟಿ ಪ್ರಕಟಣಾ ಸಮಾರಂಭ ಅ.01 ರಂದು ಮ.3 ಗಂಟೆಗೆ ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಏರ್ಪಡಿಸಲಾಗಿದೆ.
     ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ ತ್ಯಾಗರಾಜನ್, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್.ರಾಮಚಂದ್ರನ್, ಅಪರ ಜಿಲ್ಲಾಧಿಕಾರಿ ಡಾ.ರುದ್ರೇಶ ಎಸ್.ಘಾಳಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಉಪವಿಭಾಗಾಧಿಕಾರಿ ಇಸ್ಮಾಯಿಲ್‍ಸಾಬ್ ಶಿರಹಟ್ಟಿ, ಕೊಪ್ಪಳ ತಹಸೀಲ್ದಾರ ಕೆ.ಎಂ ಗುರುಬಸವರಾಜ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಉಪನ್ಯಾಸಕ ಡಾ. ಪ್ರಭುರಾಜ ಕೆ.ಎಸ್ ಅವರು ಉಪನ್ಯಾಸ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಅ. 05 ರಂದು ಕೊಪ್ಪಳದಲ್ಲಿ ಸಾರಿಗೆ ಅದಾಲತ್

ಕೊಪ್ಪಳ ಸೆ. 29 (ಕರ್ನಾಟಕ ವಾರ್ತೆ): ಕೊಪ್ಪಳದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಿಂದ ಅ. 05 ರಂದು ಮಧ್ಯಾಹ್ನ 03 ಗಂಟೆಗೆ ಸಾರ್ವಜನಿಕರ ಕುಂದುಕೊರತೆಗಳ ಅಹವಾಲು ಸ್ವೀಕರಿಸಲು ಕೊಪ್ಪಳ ಆರ್‍ಟಿಓ ಕಚೇರಿಯಲ್ಲಿ ಸಾರಿಗೆ ಅದಾಲತ್ ನಡೆಯಲಿದೆ.
     ಸಾರಿಗೆ ಇಲಾಖೆಯ ಉನ್ನತ ಅಧಿಕಾರಿಗಳು ಸಾರಿಗೆ ಅದಾಲತ್‍ನಲ್ಲಿ ಉಪಸ್ಥಿತರಿದ್ದು, ಸಾರ್ವಜನಿಕರ ಕುಂದುಕೊರತೆಗಳ ಅಹವಾಲು ಸ್ವೀಕರಿಸಲಿದ್ದಾರೆ.  ಸಾರ್ವಜನಿಕರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ ಅಥವಾ ಸಾರಿಗೆ ಇಲಾಖೆಗೆ ಸಂಬಂಧಿತ ಯಾವುದೇ ಕುಂದುಕೊರತೆ ಅಹವಾಲುಗಳನ್ನು ಸಾರಿಗೆ ಅದಾಲತ್‍ಗೆ ಹಾಜರಾಗಿ ಸಲ್ಲಿಸಬಹುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗಂಗಾವತಿ : ವಾಜಪೇಯಿ ನಗರ ವಸತಿ ಯೋಜನೆಗೆ ಅರ್ಜಿ ಆಹ್ವಾನ

ಕೊಪ್ಪಳ ಸೆ. 29 (ಕರ್ನಾಟಕ ವಾರ್ತೆ): ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿ 2016-17 ಮತ್ತು 2017-18 ನೇ ಸಾಲಿನ ವಾಜಪೇಯಿ ನಗರ ವಸತಿ ಯೋಜನೆಯಡಿ ವಸತಿ ಸೌಲಭ್ಯಕ್ಕೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
     2016-17 ಮತ್ತು 2017-18 ನೇ ಸಾಲಿನ ವಾಜಪೇಯಿ ನಗರ ವಸತಿ ಯೋಜನೆಯಡಿ  ಮನೆಗಳನ್ನು ನಿರ್ಮಿಸಲು ಗುರಿ ನಿಗದಿಪಡಿಸಲಾಗಿದೆ.  ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿ ಖಾಯಂ ಆಗಿ ವಾಸವಿದ್ದು, ನಿವೇಶನ ಹೊಂದಿದ ವಸತಿ ರಹಿತರು ಅರ್ಜಿ ಸಲ್ಲಿಸಬಹುದು.   ಸ್ವಂತ ಹೆಸರಿನಲ್ಲಿ ಅಥವಾ ಕುಟುಂಬದ ಇತರೆ ಸದಸ್ಯರ ಹೆಸರಿನಲ್ಲಿ ವಸತಿ/ಮನೆ ಹೊಂದಿಲ್ಲವೆಂದು ಮತ್ತು ಸರ್ಕಾರದ ಇತರೆ ಯೋಜನೆಯಡಿ ವಸತಿ ಸೌಲಭ್ಯ ಪಡೆದಿಲ್ಲವೆಂದು 50 ರೂ. ಛಾಪಾ ಕಾಗದದ ಮೇಲೆ ಮುಚ್ಚಳಿಕೆ ಪತ್ರ ಬರೆದುಕೊಡಬೇಕು. ನಿಗದಿತ ಅರ್ಜಿಯೊಂದಿಗೆ ಪಾಸ್‍ಪೋರ್ಟ ಅಳತೆಯ 04 ಭಾವಚಿತ್ರ, ಆಸ್ತಿ (ನಿವೇಶನ/ಜಾಗ)ಕ್ಕೆ ಸಂಬಂಧಿಸಿದ ದಾಖಲಾತಿಗಳು, ಹಕ್ಕುಪತ್ರ/ಕ್ರಯಪತ್ರ/ದಾನಪತ್ರ ಫಾರಂ ನಂ.03/ಖಾತಾ ವರ್ಗಾವಣೆ ಚಾಲ್ತಿ ಸಾಲಿನ ತೆರಿಗೆ ರಸೀದಿ. ನಿವೇಶನದ (ಜಾಗ/ಕಚ್ಚಾಮನೆ/ಬಿದ್ದಮನೆ/ಗುಡಿಸಲು) ಪ್ರಸ್ತುತ ಸ್ಥಿತಿಯ ಭಾವಚಿತ್ರ ಚುನಾವಣಾ ಗುರುತಿನ ಚೀಟಿ/ಆಧಾರ್ ಕಾರ್ಡ ರೇಷನ್ ಕಾರ್ಡ ಜಾತಿ ಆದಾಯ ಪ್ರಮಾಣ ಪತ್ರ ಲಗತ್ತಿಸಿ ಪೌರಾಯುಕ್ತರು,  ನಗರಸಭೆ, ಗಂಗಾವತಿ ಇವರಿಗೆ ಅಕ್ಟೋಬರ್-15 ರ ಒಳಗಾಗಿ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

Wednesday, 28 September 2016

ಯಲಬುರ್ಗಾ : ವಾಜಪೇಯಿ ನಗರ ನಿವೇಶನ ಯೋಜನೆಯಡಿ ವಸತಿ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಕೊಪ್ಪಳ ಸೆ. 28 (ಕರ್ನಾಟಕ ವಾರ್ತೆ): ಯಲಬುರ್ಗಾ ಪಟ್ಟಣದ ವ್ಯಾಪ್ತಿಯಲ್ಲಿ 2016-17 ನೇ ಸಾಲಿನ ವಾಜಪೇಯಿ ನಗರ ನಿವೇಶನ ಯೋಜನೆಯಡಿ ವಸತಿ ಸೌಲಭ್ಯಕ್ಕೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
     2016-17ನೇ ಸಾಲಿನ ವಾಜಪೇಯಿ ನಗರ ನಿವೇಶನ ಯೋಜನೆಯಡಿ ಪರಿಶಿಷ್ಟ ಜಾತಿ- 17, ಪರಿಶಿಷ್ಟ ಪಂಗಡ-03, ಅಲ್ಪಸಂಖ್ಯಾತರು-08 ಹಾಗೂ ಇತರೆ ವರ್ಗದವರಿಗೆ-19 ಸೇರಿದಂತೆ ಒಟ್ಟು 47 ಮನೆಗಳನ್ನು ನಿರ್ಮಿಸಲು ಗುರಿ ನಿಗದಿಪಡಿಸಲಾಗಿದೆ. ಯಲಬುರ್ಗಾ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಖಾಯಂ ಆಗಿ ವಾಸವಿದ್ದು, ನಿವೇಶನ ಹೊಂದಿದ ವಸತಿ ರಹಿತರು ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಮಹಿಳಾ ಫಲಾನುಭವಿಗಳಾಗಿರಬೇಕು. ಆದರೆ ಮಾಜಿ ಯೋಧರು, ವಿಧುರರು, ಅಂಗವಿಕಲರು ಮತ್ತು ಹಿರಿಯ ನಾಗರೀಕರಾಗಿದ್ದಲ್ಲಿ ಪುರುಷರು ಸಹ ಅರ್ಜಿ ಸಲ್ಲಿಸಬಹುದು. ನಿವೇಶನಕ್ಕೆ ಸಂಬಂಧಿಸಿದ ದಾಖಲೆಗಳು ಪುರುಷರ ಹೆಸರಿನಲ್ಲಿ ಇದ್ದಲ್ಲಿ, ರೂ.20ರ ಛಾಪಾ ಕಾಗದದ ಮೇಲೆ ಒಪ್ಪಿಗೆ ಪತ್ರವನ್ನು ನೀಡಬೇಕು. ಸ್ವಂತ ಹೆಸರಿನಲ್ಲಿ ಅಥವಾ ಕುಟುಂಬದ ಇತರೆ ಸದಸ್ಯರ ಹೆಸರಿನಲ್ಲಿ ವಸತಿ/ಮನೆ ಹೊಂದಿಲ್ಲವೆಂದು ಮತ್ತು ಸರ್ಕಾರದ ಇತರೆ ಯೋಜನೆಯಡಿ ವಸತಿ ಸೌಲಭ್ಯ ಪಡೆದಿಲ್ಲವೆಂದು 50 ರೂ. ಛಾಪಾ ಕಾಗದದ ಮೇಲೆ ಮುಚ್ಚಳಿಕೆ ಪತ್ರ ಬರೆದುಕೊಡಬೇಕು. ಅರ್ಜಿಯೊಂದಿಗೆ ಪಾಸ್‍ಪೋರ್ಟ ಅಳತೆಯ 04 ಭಾವಚಿತ್ರ, ಆಸ್ತಿ (ನಿವೇಶನ/ಜಾಗ)ಕ್ಕೆ ಸಂಬಂಧಿಸಿದ ದಾಖಲಾತಿಗಳು, ಹಕ್ಕುಪತ್ರ/ಕ್ರಯಪತ್ರ/ದಾನಪತ್ರ ಫಾರಂ ನಂ.03/ಖಾತಾ ವರ್ಗಾವಣೆ ಚಾಲ್ತಿ ಸಾಲಿನ ತೆರಿಗೆ ರಸೀದಿ. ನಿವೇಶನದ (ಜಾಗ/ಕಚ್ಚಾಮನೆ/ಬಿದ್ದಮನೆ/ಗುಡಿಸಲು)ಪ್ರಸ್ತುತ ಸ್ಥಿತಿಯ ಭಾವಚಿತ್ರ ಚುನಾವಣಾ ಗುರುತಿನ ಚೀಟಿ/ಆಧಾರ್ ಕಾರ್ಡ ರೇಷನ್ ಕಾರ್ಡ ಜಾತಿ ಆದಾಯ ಪ್ರಮಾಣ ಪತ್ರ ಲಗತ್ತಿಸಿ ಮುಖ್ಯಾಧಿಕಾರಿಗಳು ಪಟ್ಟಣ ಪಂಚಾಯತ ಯಲಬುರ್ಗಾರವರಿಗೆ ಅಕ್ಟೋಬರ್-15ರ ಒಳಗಾಗಿ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ ಕಾರ್ಯಕ್ರಮ

ಕೊಪ್ಪಳ ಸೆ. 28 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವರಾದ ಬಸವರಾಜ ರಾಯರಡ್ಡಿ ಅವರು ಅ. 01 ಮತ್ತು 02 ರಂದು ಎರಡು ದಿನಗಳ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
     ಸಚಿವರು ಅ. 01 ಹಂಪಿ ಎಕ್ಸ್‍ಪ್ರೆಸ್ ರೈಲು ಮೂಲಕ ಬೆಳಿಗ್ಗೆ 08 ಗಂಟೆಗೆ ಕೊಪ್ಪಳಕ್ಕೆ ಆಗಮಿಸುವರು.  ಬೆ. 10-15 ಗಂಟೆಗೆ ಭಾನಾಪುರ ಪ್ರವಾಸಿ ಮಂದಿರದಲ್ಲಿ ಯಲಬುರ್ಗಾ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸುವರು.  ಸಂಜೆ 04 ಗಂಟೆಗೆ ಕೊಪ್ಪಳ ತಾಲೂಕು ಕವಲೂರು ಗ್ರಾಮಕ್ಕೆ ತೆರಳಿ ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಳ್ಳುವರು.  ಸಂಜೆ 07 ಗಂಟೆಗೆ ಹುಲಿಗಿಗೆ ತೆರಳಿ ಶ್ರೀ ಹುಲಿಗೆಮ್ಮ ದೇವಿ ದಸರಾ ಮಹೋತ್ಸವದ ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವರು.  ರಾತ್ರಿ 09 ಗಂಟೆಗೆ ಕೊಪ್ಪಳಕ್ಕೆ ಆಗಮಿಸಿ ವಾಸ್ತವ್ಯ ಮಾಡುವರು.
     ಸಚಿವರು ಅ. 02 ರಂದು ಬೆಳಿಗ್ಗೆ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.  ನಂತರ ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ಕೈಗೊಳ್ಳುವರು.  ಸಚಿವರು ಅದೇ ದಿನ ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಎಂದು ಸಚಿವರ ವಿಶೇಷ ಕರ್ತವ್ಯಾಧಿಕಾರಿಗಳು ತಿಳಿಸಿದ್ದಾರೆ.

ಅ. 01 ರಿಂದ ಹುಲಿಗೆಮ್ಮ ದೇವಿ ದಸರಾ ಮಹೋತ್ಸವ : ವೈವಿಧ್ಯಮಯ ಕಾರ್ಯಕ್ರಮಗಳು

ಕೊಪ್ಪಳ ಸೆ. 28 (ಕರ್ನಾಟಕ ವಾರ್ತೆ): ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಕೊಪ್ಪಳ ಜಿಲ್ಲೆ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ದೇವಾಲಯದ ವತಿಯಿಂದ ಪ್ರಸಕ್ತ ವರ್ಷದ ದಸರಾ ಮಹೋತ್ಸವ ಅ. 01 ರಿಂದ 11 ರವರೆಗೆ ವಿಜೃಂಭಣೆಯಿಂದ ನೆರವೇರಲಿದ್ದು, ಹಲವು ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
     ಹುಲಿಗೆಮ್ಮ ದೇವಿ ದಸರಾ ಮಹೋತ್ಸವದ ಉದ್ಘಾಟನಾ ಸಮಾರಂಭ ಅ. 01 ರಂದು ಸಂಜೆ 6-30 ಗಂಟೆಗೆ ಹುಲಿಗೆಮ್ಮ ದೇವಾಲಯದಲ್ಲಿ ನೆರವೇರಲಿದ್ದು, ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಕಾರ್ಯಕ್ರಮ ಉದ್ಘಾಟಿಸುವರು.  ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಜಿ.ಪಂ. ಅಧ್ಯಕ್ಷ ಶೇಖರಪ್ಪ ನಾಗರಳ್ಳಿ, ಸಂಸದ ಕರಡಿ ಸಂಗಣ್ಣ, ಶಾಸಕರುಗಳಾದ ಶಿವರಾಜ ತಂಗಡಗಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್, ವಿಧಾನಪರಿಷತ್ ಸದಸ್ಯರುಗಳಾದ ಬಸವರಾಜ ಪಾಟೀಲ್ ಇಟಗಿ, ಅಮರನಾಥ ಪಾಟೀಲ್, ಶರಣಪ್ಪ ಮಟ್ಟೂರ, ತಾ.ಪಂ. ಅಧ್ಯಕ್ಷ ಬಾಲಚಂದ್ರನ್, ಗ್ರಾ.ಪಂ. ಅಧ್ಯಕ್ಷೆ ರೇಣುಕಾ ರಾಮಣ್ಣ, ಜಿ.ಪಂ. ಸದಸ್ಯೆ ಗಾಯತ್ರಿ ವೆಂಕಟೇಶ್ ವಡ್ಡರ್, ತಾ.ಪಂ. ಸದಸ್ಯ ಪಾಲಾಕ್ಷಪ್ಪ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಿ.ಎಸ್. ವಸ್ತ್ರದ್, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರ ತ್ಯಾಗರಾಜನ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ವಿವಿಧ ಕಾರ್ಯಕ್ರಮಗಳು : ಹುಲಿಗೆಮ್ಮ ದೇವಿ ದಸರಾ ಮಹೋತ್ಸವದ ಅಂಗವಾಗಿ ಅ. 01 ರಿಂದ 10 ರವರೆಗೆ ಸಂಜೆ 6-30 ಗಂಟೆಗೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ.  ಅ. 01 ರಂದು ಸಂಜೆ 6-30 ಗಂಟೆಗೆ ಮಂಗಲವಾದ್ಯದೊಂದಿಗೆ ಘಟ ಸ್ಥಾಪನೆ ನೆರವೇರಲಿದೆ.  ಅ. 02 ರಂದು ಸ್ಥಳೀಯ ಕಲಾವಿದರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು.  ಅ. 3 ರಂದು ಹೊಸಪೇಟೆಯ ಭೂಮಿಕಾ ಹಾಗೂ ಗುಳೇದಗುಡ್ಡದ ಸುರೇಶ ಪರ್ವತೀಕರ್ ಅವರಿಂದ ಭಕ್ತಿ ಸಂಗೀತ.  ಅ. 04 ರಂದು ಬಳ್ಳಾರಿಯ ಕವಿತಾ ವಸಂತಕುಮಾರ್ ದಂಪತಿಗಳಿಂದ ಜಾನಪದ ವೈಭವ.  ಅ. 05 ರಂದು ಹುಬ್ಬಳ್ಳಿಯ ಪಂಡಿತ್ ವೇದಮೂರ್ತಿ ಪತ್ರಯ್ಯ ಸ್ವಾಮಿ ಹಿರೇಮಠ ಅವರಿಂದ ಕೀರ್ತನೆ.  ಅ. 06 ರಂದು ಬಾಗಲಕೋಟೆಯ ಆಕಾಶವಾಣಿ ಮತ್ತು ದೂರದರ್ಶನ ಕಲಾವಿದ ಅನಂತ ಕುಲಕರ್ಣಿ ಇವರಿಂದ ದಾಸವಾಣಿ.  ಅ. 07 ರಂದು ಗಂಗಾವತಿಯ ಪ್ರಾಣೇಶ್ ಮತ್ತು ತಂಡದಿಂದ ಹಾಸ್ಯಸಂಜೆ.  ಅ. 08 ರಂದು ಹೊಸಪೇಟೆಯ ಅಂಜಲಿ ಭರತ ನಾಟ್ಯ ಸಂಘದಿಂದ ಭರತನಾಟ್ಯ ಮತ್ತು ನೃತ್ಯ ರೂಪಕ.  ಅ. 09 ರಂದು ಮಾನ್ವಿಯ ಆಕಾಶವಾಣಿ ಮತ್ತು ದೂರದರ್ಶನ ಕಲಾವಿದ ಅಂಬಯ್ಯನುಲಿ ಅವರಿಂದ ವಚನ ಸಂಗೀತ.  ಅ. 10 ರಂದು ಸಂಜೆ 06 ಗಂಟೆಗೆ ಕಿನ್ನಾಳಿನ ಲಚ್ಚಣ್ಣ ಇವರಿಂದ ಭಕ್ತಿ ಸಂಗೀತ.  ರಾತ್ರಿ 08 ಗಂಟೆಗೆ ಹುಲಿಗಿಯ ಎಚ್.ಎಂ. ಕೊಟ್ರಯ್ಯಸ್ವಾಮಿ ಮಿತ್ರಮಂಡಳಿಯಿಂದ ರಕ್ತರಾತ್ರಿ ಸಂಗೀತಮಯ ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದೆ.
     ದಸರಾ ಮಹೋತ್ಸವದ ಅಂಗವಾಗಿ ಪ್ರತಿನಿತ್ಯ ಬೆಳಗಿನ ಜಾವ ದೇವಸ್ಥಾನದಲ್ಲಿ ಸುಪ್ರಭಾತ ಪೂಜೆ, ಮಹಾನೈವೇದ್ಯ ಹಾಗೂ ಹೊಸಪೇಟೆಯ ನಾಗಭೂಷಣಂ ಅವರಿಂದ ಚಿದಾನಂದಾವಧೂತ ವಿರಚಿತ ಶ್ರೀದೇವಿ ಪುರಾಣ ಪಠಣಗೊಳ್ಳಲಿದೆ.  ಅ. 11 ರಂದು ವಿಜಯದಶಮಿ ಅಂಗವಾಗಿ ಮಧ್ಯಾಹ್ನ 03 ಗಂಟೆಯಿಂದ ದೇವಿಯವರ ದಶಮಿ ದಿಂಡಿನ ಉತ್ಸವದೊಂದಿಗೆ ಶಮಿ ಪೂಜೆ, ತೊಟ್ಟಿಲು ಸೇವೆ, ಮಹಾ ಮಂಗಳಾರತಿ, ಮಂತ್ರ ಪುಷ್ಪ ಸಮರ್ಪಣೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.  ಭಕ್ತಾದಿಗಳು ದಸರಾ ಮಹೋತ್ಸವದ ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್. ಚಂದ್ರಮೌಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಿಸಿಲ ನಾಡು ಕೊಪ್ಪಳ ಜಿಲ್ಲೆಯಲ್ಲೊಂದು ರಮಣೀಯ ತಾಣ : ಕೈಬೀಸಿ ಕರೆಯುತಿದೆ ಕಬ್ಬರಗಿ ಜಲಪಾತ



ಕೊಪ್ಪಳ ಸೆ. 28 (ಕರ್ನಾಟಕ ವಾರ್ತೆ): ಸಾಮಾನ್ಯವಾಗಿ ಜಲಪಾತಗಳನ್ನು ನೋಡಬೇಕು ಎಂದರೆ ನಾವು ಮಲೆನಾಡಿಗೆ ಹೋಗಬೇಕು.   ಆದರೆ, ಬಿಸಿಲನಾಡಲ್ಲಿ ಜಲಪಾತ ನೋಡಲು ಸಿಗುತ್ತೆ  ಅಂದರೆ ನಂಬುವುದೇ ಕಷ್ಟ.  ಆದರೂ ಇದು ನಿಜ.  ಅದು ಹೈದ್ರಾಬಾದ್ ಕರ್ನಾಟಕದಲ್ಲಿ ಇರೋ ಏಕೈಕ ಜಲಪಾತವಾಗಿದೆ.  ಅರೇ ಇದೇನಪ್ಪ ಬರದ ನಾಡಲ್ಲಿ ಜಲಪಾತ ಅಂತೀರಾ? ಹೌದು ಇಂತಹದ್ದೊಂದು ಅಪರೂಪದ ಜಲಪಾತವನ್ನು ನಾವು ಬಿಸಿಲ ನಾಡಾದ ಕೊಪ್ಪಳ ಜಿಲ್ಲೆಯಲ್ಲಿ ಕಾಣಬಹುದು.
 
    ಸೆ. 27 ರಂದು ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ನಿಮಿತ್ಯ ಕೊಪ್ಪಳ ಜಿಲ್ಲೆಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಮಾಧ್ಯಮದವರಿಗೆ ವಿಶೇಷ ಪ್ರವಾಸಿ ತಾಣಕ್ಕೆ ಪ್ರವಾಸ ಏರ್ಪಡಿಸಲಾಗಿತ್ತು.
 
     ಒಂದೇಡೆ ಹಚ್ಚ ಹಸಿರಿನ ಕಾಡು, ಇನ್ನೊಂದಡೆ ರಭಸವಾಗಿ ಬೋರ್ಗರೆಯುತ್ತಿರುವ ಜಲಪಾತ, ಇನ್ನೊಂದಡೆ ಭೋರ್ಗೆರೆಯೋ ನೀರಿನಲ್ಲಿ ಮನಸು ಬಿಚ್ಚಿ ಆಟ ಆಡುತ್ತಿರೋ ಜನ.  ಮತ್ತೊಂದೆಡೆ ಜಲಪಾತದ ದ್ರಶ್ಯ ವೈಭೋಗವನ್ನು ತಮ್ಮ ಮೊಬೈಲ್ ಅಥವಾ ಇನ್ಯಾವುದೋ ಕ್ಯಾಮೆರಾದಲ್ಲಿ ಸೆರೆಹಿಡಿಯಲು ತಲ್ಲೀನವಾಗಿರೋ ಪ್ರವಾಸಿಗರ ದ್ರಶ್ಯ.  ಇದನ್ನೆಲ್ಲ ನೋಡಿ ಇದ್ಯಾವುದೋ ಮಲೆನಾಡಿನ ಜಲಪಾತ ಎಂದು ಭಾವಿಸಿದಲ್ಲಿ ಅದು ಅವರ ತಪ್ಪು ಕಲ್ಪನೆ.  ಈ ಜಲಪಾತ ಯಾವುದೇ ಮಲೆನಾಡಿನಲ್ಲಿ ಇರುವ ಜಲಪಾತವಲ್ಲ.  ಬದಲಾಗಿ ಬಿಸಿಲನಾಡು ಕೊಪ್ಪಳ ಜಿಲ್ಲೆಯಲ್ಲಿ ಇರುವ ಜಲಪಾತ.  ಜಿಲ್ಲೆಯ ಕುಷ್ಟಗಿ ತಾಲೂಕಿನ ಕಬ್ಬರಗಿ ಗ್ರಾಮದ ಬೆಟ್ಟದ ಮೇಲಿರುವ  ಕಪೀಲತೀರ್ಥ ಜಲಪಾತ.  ಕೊಪ್ಪಳ ಜಿಲ್ಲೆ ಕುಷ್ಟಗಿಯಿಂದ ಹನುಮಸಾಗರ ಮಾರ್ಗವಾಗಿ ಇಲ್ಲಿಗೆ ತೆರಳಬೇಕು.  ಕುಷ್ಟಗಿಯಿಂದ ಕಬ್ಬರಗಿ ಜಲಪಾತ ಸುಮಾರು 30 ಕಿ.ಮೀ. ದೂರದಲ್ಲಿದೆ.  ಸುಮಾರು 02.5 ಕಿ.ಮಿ. ನಡೆದುಕೊಂಡೇ ಹೋಗಬೇಕು.  ಮಹಾಭಾರತ ಕಾಲದಲ್ಲಿ ಕಪಿಲಮುನಿಗಳು ಈ ಸ್ಥಳದಲ್ಲಿ ತಪಸ್ಸು ಮಾಡಿ, ಗಂಗೆಯನ್ನು ಇಲ್ಲಿಗೆ ಕರೆತಂದರು.  ಇದರಿಂದಾಗಿಯೇ ಇಲ್ಲಿ ಜಲಪಾತ ಸೃಷ್ಠಿಯಾಯಿತೆಂಬ ಐತಿಹ್ಯ ಜನಪದರಲ್ಲಿ ಮನೆ ಮಾಡಿದೆ.  ಕೇವಲ ಮಳೆಗಾದಲ್ಲಿ ಮಾತ್ರ ಸೃಷ್ಠಿಯಾಗುವ ಈ ಜಲಪಾತವನ್ನು ನೋಡಲು ಕೊಪ್ಪಳ ಜಿಲ್ಲೆ ಸೇರಿದಂತೆ ಗದಗ, ಬಾಗಲಕೋಟೆ, ವಿಜಯಪುರ ಹಾಗೂ ಬಳ್ಳಾರಿ ಸೇರಿದಂತೆ ನೆರೆಹೊರೆಯ ವಿವಿಧ ಜಿಲ್ಲೆಗಳ ಸಾವಿರಾರು ಪ್ರವಾಸಿಗರು ಆಗಮಿಸಿ ಭೋರ್ಗರೆಯುವ ಜಲಪಾತದ ಸೌಂದರ್ಯ ಸವಿಯುವ ಮೂಲಕ ಖುಷಿ ಪಡುತ್ತಾರೆ.
     ಇನ್ನು ಕಬ್ಬರಗಿ ಗ್ರಾಮದಿಂದ ಎರಡು ಕಿಲೋಮೀಟರ್ ದೂರವಿರುವ ಈ ಜಲಪಾತಕ್ಕೆ ಬೆಟ್ಟದಲ್ಲಿ ಒಂದು ಕಿಲೋ ಮೀಟರ್‍ನಷ್ಟು ದೂರವನ್ನು ನಡೆದುಕೊಂಡೇ ಹೋಗಬೇಕು.    ಜಲಪಾತದ ಸ್ಥಳದ ಹತ್ತಿರಕ್ಕೆ ಹೋದರೂ ಸಹ ನಮಗೆ ಇಲ್ಲಿ ಒಂದು ಜಲಪಾತ ಇದೇ ಅನ್ನುವುದು ಅರಿವಿಗೆ ಬರುವುದಿಲ್ಲ.   ಬೆಟ್ಟದಿಂದ ಸ್ವಲ್ಪ ಕೆಳಗೆ ಇಳಿದಲ್ಲಿ ಭೋರ್ಗೆರೆಯೋ ನೀರಿನ ನಿನಾದ ಕೇಳಿದಾಗಲೆ ಗೊತ್ತಾಗುತ್ತದೆ ಇಲ್ಲಿ ಜಲಪಾತ ಇದೆ ಎಂದು.  ಸಾಮಾನ್ಯವಾಗಿ ಮಲೆನಾಡು ಹಾಗೂ ಇತರೆ ಭಾಗಗಳಲ್ಲಿರುವ ಜಲಪಾತಗಳನ್ನು ದೂರದಿಂದಲೇ ನೋಡಿ ಖುಷಿ ಪಡುವ ಸ್ಥಿತಿ ಇದೆ.  ಆದರೆ, ಕೊಪ್ಪಳ ಜಿಲ್ಲೆಯ ಕಪೀಲತೀರ್ಥ ಜಲಪಾತದ ಕೆಳಗೆ ನಿಂತು ಅದರ ಸೊಬಗು ಸವಿಯುತ್ತ ಸ್ನಾನವನ್ನೂ ಸಹ ಮಾಡಬಹುದಾಗಿದೆ.  ಇಲ್ಲಿನ ವೈಶಿಷ್ಟ್ಯ ಎಂದರೆ, ಕೇವಲ  20 ಅಡಿ ಎತ್ತರದಿಂದ ರಭಸವಾಗಿ ಹರಿಯುವ ನೀರಿನ ಕೆಳಗೆ ನಿಂತು ಸ್ನಾನ ಮಾಡುವುದು.  ಈ ಜಲಪಾತದಲ್ಲಿ ಕೆಳಗೆ ನಿಂತು ಸ್ನಾನ ಮಾಡಿದರೆ ಮೈಯೆಲ್ಲಾ ಹಗುರವಾದ ಅನುಭವವನ್ನು ನೀಡುತ್ತದೆ.  ಆದರೆ ಕಪಿಲ ತೀರ್ಥದ ಸೊಬಗನ್ನು ಆನಂದಿಸಲು ಸುಲಭವಾಗಿ ಹೋಗುವ ರಸ್ತೆ ಸಂಪರ್ಕ ಇಲ್ಲ. ಈ ಜಲಪಾತ ರಕ್ಷಿತ ಅರಣ್ಯ ಪ್ರದೇಶವಾಗಿರುವುದರಿಂದ ಇಲ್ಲಿ ರಸ್ತೆ ಮಾಡಲು ಅರಣ್ಯ ಇಲಾಖೆಯ ಕಟ್ಟುನಿಟ್ಟಿನ ನಿಯಮಗಳ ಅಡ್ಡಿ ಇದೆ.   ಅರಣ್ಯ ಇಲಾಖೆಯ ಈ ಕಟ್ಟುನಿಟ್ಟಿನ ನಿಯಮಗಳೇ ಇಲ್ಲಿನ ಕಾಡು ಪ್ರದೇಶ ವಿಸ್ತಾರವಾಗಲು ಹಾಗೂ ಅರಣ್ಯದ ಸೊಬಗು ಉಳಿಯಲು ನೆರವಾಗಿದೆ ಎನ್ನುವುದು ಕೆಲವರ ಅಭಿಪ್ರಾಯ.  ಭೋರ್ಗರೆಯುತ್ತಿರುವ ಕಪಿಲತೀರ್ಥ ಜಲಪಾತಕ್ಕೆ ತಂಡೋತಂಡವಾಗಿ ಆಗಮಿಸುತ್ತಿರುವ ಜನ, ತಮ್ಮೊಂದಿಗೆ ಊಟ, ಉಪಹಾರದ ಬುತ್ತಿಯನ್ನು ಹೊತ್ತು ತರಲೇಬೇಕು.  ಈ ಪ್ರದೇಶದಲ್ಲಿ ಬುತ್ತಿ ಕಟ್ಟಿಕೊಂಡು ಬಂದು, ಜಲಪಾತದಲ್ಲಿ ಸ್ನಾನ ಮಾಡಿ, ಪ್ರಕೃತಿಯ ರಮ್ಯ ತಾಣದಲ್ಲಿ ಊಟ ಮಾಡುವುದೇ ಒಂದು ವಿಶೇಷ ಆನಂದ ನೀಡುತ್ತದೆ ಎಂದು ಕೆಲ ಪ್ರವಾಸಿಗರ ಅಭಿಪ್ರಾಯ. 
     ಒಟ್ಟಿನಲ್ಲಿ ಕಪೀಲತೀರ್ಥ ಜಲಪಾತಕ್ಕೆ ಉತ್ತಮ ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಗಳು ಲಭ್ಯವಾದಲ್ಲಿ, ಕಪೀಲತೀರ್ಥ ಜಲಪಾತಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಿದೆ.   ಇನ್ನೇಕೆ ತಡ ನೀವು ಒಮ್ಮೆ ಕಬ್ಬರಗಿಯ ಕಪೀಲತೀರ್ಥ ಜಲಪಾತಕ್ಕೆ ಭೇಟಿ ನೀಡಿ ಎಂಜಾಯ್ ಮಾಡಿ.

ಅ.01 ರಂದು ಕೊಪ್ಪಳದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ

ಕೊಪ್ಪಳ, ಸೆ.28 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಸೇವಾನಿರತ ಸ್ವಯಂ ಸೇವಾ ಸಂಸ್ಥೆಗಳು ಹಾಗೂ  ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ  ಇವರುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾಯಕ್ರಮ ಅ.01 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ಏರ್ಪಡಿಸಲಾಗಿದೆ. 
    ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರಾದ ವಿಜಯಲಕ್ಷ್ಮೀ ಎಸ್. ಉಪನಾಳ ಅವರು ಕಾರ್ಯಕ್ರಮ ಉದ್ಘಾಟಿಸುವರು. ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಕಾರ್ಯಕ್ರಮದ ಘನ ಉಪಸ್ಥಿತಿ ವಹಿಸುವರು. ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಸಮಾರಂಭದ ಅಧ್ಯಕ್ಷತೆ ವಹಿಸುವರು.
    ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ದಶರಥ, ಸಿವಿಲ್ ಜಡ್ಜ್ ಜೆಎಂ.ಎಫ್.ಸಿ ವಿಜಯಕುಮಾರ ಕನ್ನೂರ, ಜಿ.ಪಂ ಅಧ್ಯಕ್ಷ ನಾಗರಳ್ಳಿ ಶೇಖರಪ್ಪ ಬಸವರಡ್ಡೆಪ್ಪ, ಸಂಸದ ಕರಡಿ ಸಂಗಣ್ಣ, ಶಾಸಕರುಗಳಾದ ಶಿವರಾಜ ಎಸ್.ತಂಗಡಗಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್,  ವಿಧಾನಪರಿಷತ್ ಸದಸ್ಯರುಗಳಾದ ಬಸವರಾಜ ಪಾಟೀಲ್ ಇಟಗಿ, ಶರಣಪ್ಪ ಮಟ್ಟೂರ, ಜಿ. ಪಂ ಉಪಾಧ್ಯಕ್ಷೆ ಲಕ್ಷ್ಮಮ್ಮ ಸಿದ್ದಪ್ಪ ನೀರಲೂಟಿಲ, ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ, ತಾ.ಪಂಅಧ್ಯಕ್ಷ ಬಾಲಚಂದ್ರನ್,  ಜಿ.ಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಕೆ. ಮಹೇಶ ನವಲಳ್ಳಿ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಭೀಮಣ್ಣ ಅಗಸಿಮನಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶಾಂತಾ ರಮೇಶ ನಾಯಕ,  ಜಿಲ್ಲಾಧಿಕಾರಿ ಎಂ.ಕನಗವಲ್ಲಿ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್.ರಾಮಚಂದ್ರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ ತ್ಯಾಗರಾಜನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯವಾದಿ ವ್ಹಿ.ಎಂ ಭೂಸನೂರಮಠ ಅವರು ಅತಿಥಿ ಉಪನ್ಯಾಸ ನೀಡಲಿದ್ದಾರೆ ಎಂದು ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಿ.ಎಸ್ ಕಲಾದಗಿ   ತಿಳಿಸಿದ್ದಾರೆ.

ವಿಕಲಚೇತನರ ಕಲ್ಯಾಣ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ: ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ

ಕೊಪ್ಪಳ, ಸೆ.28 (ಕರ್ನಾಟಕ ವಾರ್ತೆ) : ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆಯಿಂದ ಡಿ.3 ರಂದು ಆಚರಿಸಲಾಗುವ ವಿಶ್ವ ಅಂಗವಿಕಲರ ದಿನಾಚರಣೆ ಅಂಗವಾಗಿ  ವಿಕಲಚೇತನರ ಕಲ್ಯಾಣ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ/ಸಲ್ಲಿಸಿಉವ ವ್ಯಕ್ತಿ, ಸಂಸ್ಥೆಮತ್ತು ವಿಶೇಷ ಶಿಕ್ಷಕರಿಗೆ ರಾಜ್ಯ ಪ್ರಶಸ್ತಿ ನೀಡಲು ಉದ್ದೇಶಿಸಿದ್ದು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
     ಕೊಪ್ಪಳ ಜಿಲ್ಲೆಯಲ್ಲಿ ಅಂಗವಿಕಲರ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ವ್ಯಕ್ತಿ, ಸಂಸ್ಥೆ ಮತ್ತು ವಿಶೇಷ ಶಾಲೆಗಳಲ್ಲಿ 15 ವರ್ಷಗಳಿಗೂ ಮೇಲ್ಪಟ್ಟು ಸೇವೆ ಸಲ್ಲಿಸುತ್ತಿರುವ ಹಾಗೂ ಸೇವೆ ಸಲ್ಲಿಸಿರುವ ಶಿಕ್ಷಕರು ರಾಜ್ಯ ಪ್ರಶಸ್ತಿಗೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.  ಅರ್ಜಿ ನಮೂನೆಯನ್ನು ಇಲಾಖೆಯ ವೆಬ್‍ಸೈಟ್ http://www.welfareofdisabled.kar.nic ಇಲ್ಲಿ  ಡೌನ್‍ಲೋಡ್ ಮಾಡಿಕೊಳ್ಳಬಹುದು  ಅಥವಾ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಪಡೆದು ಅ. 14 ರೊಳಗಾಗಿ ಸಲ್ಲಿಸಬೇಕು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯಮಟ್ಟದ ದಸರಾ ಕ್ರೀಡಾಕೂಟಕ್ಕೆ ಜಿಲ್ಲೆಯ ಕ್ರೀಡಾಪಟುಗಳ ಆಯ್ಕೆ

ಕೊಪ್ಪಳ, ಸೆ.28 (ಕರ್ನಾಟಕ ವಾರ್ತೆ) : ಕಲಬುರಗಿ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಕೊಪ್ಪಳ ಜಿಲ್ಲೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾ ವಸತಿ ನಿಲಯದ ಕ್ರೀಡಾಪಟುಗಳು ಅತ್ಯುತ್ತಮ ಸಾಧನೆ ಮಾಡಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
     ಕ್ರೀಡಾ ವಸತಿ ನಿಲಯದ ಕ್ರೀಡಾಪಟುಗಳಾದ ಬಾಲಮ್ಮ 3000 ಮೀ. ಮತ್ತು 1500 ಮೀ ಓಟದಲ್ಲಿ ಪ್ರಥಮ, ದೀಪಾ 200 ಮೀ. ಓಟದಲ್ಲಿ ಪ್ರಥಮ, 100 ಮತ್ತು 400 ಮೀ ಓಟದಲ್ಲಿ ದ್ವಿತೀಯ ಸ್ಥಾನ, ಮಲ್ಲಮ್ಮ 200 ಮತ್ತು 800 ಮೀ. ಓಟದಲ್ಲಿ ತೃತೀಯ ಸ್ಥಾನ, ಮಂಜುಳಾ 800 ಮೀ. ಓಟದಲ್ಲಿ ಪ್ರಥಮ,  ಗವಿಸಿದ್ದಮ್ಮ 3000 ಮತ್ತು 1500 ಮೀ. ಓಟದಲ್ಲಿ ದ್ವಿತೀಯ ಸ್ಥಾನ, ರೇಣುಕಾ 400 ಮತ್ತು 100 ಮೀ. ಹರ್ಡಲ್ಸ್‍ನಲ್ಲಿ ಪ್ರಥಮ ಹಾಗೂ ತ್ರಿವಿಧ ಜಿಗಿತದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಅಲ್ಲದೇ 400*100 ಮೀ ಮತ್ತು 4*400 ಮೀ ರಿಲೇ ಓಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರ ಸಾಧನೆಗೆ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಹಾಗೂ ಸಿಬ್ಬಂದಿ ಅಭಿನಂದನೆ ಸಲ್ಲಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Monday, 26 September 2016

ಯಲಬುರ್ಗಾ : ಸೆ.28 ರಂದು ಎಸಿಬಿ ಪೊಲೀಸ್ ಉಪಾಧೀಕ್ಷಕರಿಂದ ಅಹವಾಲು ಸ್ವೀಕಾರ

ಕೊಪ್ಪಳ, ಸೆ.26 (ಕರ್ನಾಟಕ ವಾರ್ತೆ) : ಕೊಪ್ಪಳ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಉಪಾಧೀಕ್ಷಕರು ಸೆ. 28 ರಂದು ಯಲಬುರ್ಗಾ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಂದ ಕುಂದು ಕೊರತೆ ದೂರು ಸ್ವೀಕರಿಸಿ ಮತ್ತು ಅಹವಾಲುಗಳನ್ನು ಆಲಿಸಲಿದ್ದಾರೆ.
     ಸಾರ್ವಜನಿಕರು ತಮ್ಮ ಕುಂದು ಕೊರತೆ, ದೂರುಗಳಿಗೆ ಸಂಬಂಧಿಸಿದ ಅರ್ಜಿ ನೀಡಬಹುದು. ಹಾಗೂ ಯಾರಾದರು ಸರ್ಕಾರಿ ನೌಕರರು ಲಂಚದ ಹಣಕ್ಕೆ ಬೇಡಿಕೆ, ಅಕ್ರಮ ಸಂಪತ್ತು ಹೊಂದಿದ್ದಲ್ಲಿ ದೂರು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಆರಕ್ಷಕ ಉಪಾಧೀಕ್ಷಕರು, ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆ, ಪಿಡಬ್ಲೂಡಿ ಕ್ವಾಟರ್ಸ ನಂ-5, ಈಶ್ವರ ಗುಡಿ ಹಿಂದುಗಡೆ, ಕೊಪ್ಪಳ ದೂ.ಸಂ: 08539-221833, 9480806319, 9480806320 ಇಲಿಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಆಕಾಶವಾಣಿಯಲ್ಲಿ ಭಾಗ್ಯವಾಣಿ: ಋಣಮುಕ್ತ ಸಾಲದ ಬೇವಿನ ಕಹಿಯ ನೋವಿನ ದಿನ ಮುಗಿದು ಭರವಸೆಯ ಹೊಂಗಿರಣ ಮೂಡಿದೆ

ಕೊಪ್ಪಳ ಸೆ. 26 (ಕರ್ನಾಟಕ ವಾರ್ತೆ): ರಾಜ್ಯದ ಪರಿಶಿಷ್ಟರು, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ 10.18 ಲಕ್ಷ ಕುಟುಂಬಗಳ, ವಿವಿಧ ಅಭಿವೃದ್ಧಿ ನಿಗಮಗಳಲ್ಲಿ ಬಾಕಿ ಇದ್ದ 1340 ಕೋಟಿಯ ರೂ.ಗಳ ಸಾಲ ಮತ್ತು ಬಡ್ಡಿ ಮನ್ನಾ ಮಾಡುವ ಮೂಲಕ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರು ನಮ್ಮನ್ನು ಋಣಮುಕ್ತರನ್ನಾಗಿ ಮಾಡಿದ್ದಾರೆ ಎಂದು ಭಾನುವಾರದಂದು ಆಕಾಶವಾಣಿಯಲ್ಲಿ ಭಾಗ್ಯವಾಣಿ ಸರಣಿ ಕಾರ್ಯಕ್ರಮದಲ್ಲಿ ಪ್ರಸಾರವಾದ ಋಣಮುಕ್ತ ಕಾರ್ಯಕ್ರಮದಲ್ಲಿ ಫಲಾನುಭವಿಗಳು ತಮ್ಮ ಸಂತಸವನ್ನು ಹಂಚಿಕೊಂಡರು.
     ರಾಜ್ಯದ ಪರಿಶಿಷ್ಟರು, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ 10.18 ಲಕ್ಷ ಕುಟುಂಬಗಳಿಗೆ 13-5-2013 ಕ್ಕೆ  1980 ರಿಂದ ಬಾಕಿ ಇದ್ದ ವಿವಿಧ ಅಭಿವೃದ್ಧಿ ನಿಗಮಗಳ 1340 ಕೋಟಿಯ ರೂ.ಗಳ  ಸಾಲ ಮತ್ತು ಬಡ್ಡಿ ಸೇರಿದಂತೆ ಒಟ್ಟಾರೆ ಸಾಲ ಮನ್ನಾ ಮಾಡಿ ಅದರ ಭಾರದಿಂದ ಕುಗ್ಗಿ ಹೋಗಿದ್ದವರನ್ನು ಋಣಮುಕ್ತಗೊಳಿಸಿ ಹೊಸ ಬದುಕಿನ ಆಶಯಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಕಿಕೊಟ್ಟ ಮುನ್ನಡಿಯೇ ಋಣಮುಕ್ತ ಯೋಜನೆ. ಮೈಸೂರು ಆಕಾಶವಾಣಿ ಸಹಯೋಗದಲ್ಲಿ ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ರಾಜ್ಯ ಸರ್ಕಾರದ ಮಹತ್ವದ ಜನಪರ ಯೋಜನೆಗಳ ಮಾಹಿತಿಯನ್ನು ಜನರಿಗೆ ತಲುಪಿಸುವ ಪ್ರಯತ್ನ ಭಾಗ್ಯವಾಣಿ ಸರಣಿ ಕಾರ್ಯಕ್ರಮದಲ್ಲಿ (ರವಿವಾರ ದಿ.25) ಸಂಜೆ 7ರಿಂದ 7-30ರ ವರೆಗೆ ರಾಜ್ಯಾದ್ಯಂತ ಎಲ್ಲ ಆಕಾಶವಾಣಿ ಕೇಂದ್ರಗಳಿಂದ ಋಣಮುಕ್ತರಾದ  ಫಲಾನುಭವಿಗಳು ಅನುಭವಿಸುತ್ತಿರುವ ಹೊಸ ಆರ್ಥಿಕ ಬದುಕಿನ ಮಾಹಿತಿ ಪ್ರಸಾರವಾಯಿತು.
        ಡಾ. ಬಿ.ಆರ್.ಅಂಬೇಡ್ಕರ  ನಿಗಮದ ಅಧಿಕಾರಿ ಡಾ ಸಿದ್ದರಾಜು ಕಾರ್ಯಕ್ರಮದಲ್ಲಿ ಮಾಹಿತಿ ನೀಡಿ, ತಮ್ಮ ನಿಗಮ ಒಂದರಿಂದಲೇ 3,17,932 ಪರಿಶಿಷ್ಟ ಫಲಾನುಭವಿಗಳಿಂದ ಬಾಕಿ ಇದ್ದ 390 ಕೋಟಿ ರೂ ಸಾಲದ ಅಸಲು ಹಾಗೂ 121 ಕೋಟಿ ಬಡ್ಡಿ ಸೇರಿದಂತೆ ಒಟ್ಟು 512 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಮನ್ನಾ ಮಾಡಿತು ಎಂದರು. ಇದರಿಂದ ಕೃಷಿ ಹಾಗೂ ಕೃಷಿಯೇತರ ಕಾರಣಗಳಿಗಾಗಿ ಸಾಲ ಮಾಡಿ ಸಾಮಾಜಿಕ, ಆರ್ಥಿಕ ಹಾಗೂ ಪ್ರಾಕೃತಿಕ ಕಾರಣಗಳಿಂದ ವರ್ಷಾನುಗಟ್ಟಲೇ ಸಾಲ ತೀರಿಸಲಾಗದೆ ಒದ್ದಾಡುತಿದ್ದವರಿಗೆ ಅಸಲು ಬಡ್ಡಿ ಮನ್ನಾದಿಂದ ಹೊಸ ಜೀವನ ಸಿಕ್ಕಂತಾಗಿದೆ.  ಇದೇ ರೀತಿ ಮಹರ್ಷಿ ವಾಲ್ಮಿಕಿ, ಡಿ.ದೇವರಾಜ ಅರಸು ಹಾಗೂ ಅಲ್ಪಸಂಖ್ಯಾರ ನಿಗಮಗಳ ಲಕ್ಷಾಂತರ ಫಲಾನುಭವಿಗಳಿಗೆ ಕೂಡಾ ಅನುಕೂಲವಾಗಿದೆ. ಇವರಿಗೆ ನಿಗಮಗಳಿಂದ ಹೊಸ ಸಾಲ ಸಿಗದೇ ಇದ್ದರೂ ಸಾಲ ತೀರುವಳಿ ಪತ್ರಗಳು ಹಾಗೂ  ಅಡಮಾನವಿದ್ದ ಸ್ವತ್ತುಗಳು ಬಿಡುಗಡೆಗೊಂಡು ಬೇರೆ ಆರ್ಥಿಕ ಮೂಲಗಳಿಂದ ಅಗತ್ಯದ ಹಣಕಾಸು ಸೌಲಭ್ಯ ಪಡೆಯಲು ಸಹಕಾರಿಯಾಗಿದೆ ಎಂದ ಡಾ. ಸಿದ್ದರಾಜು ಅವರ ಅಭಿಪ್ರಾಯಕ್ಕೆ ಋಣಮುಕ್ತ ಯೋಜನೆಯಿಂದ ಸಾಲದ ಹೊರೆ ಇಳಿಸಿಕೊಂಡು ನೆಮ್ಮದಿಯ ಜೀವನ ನಡೆಸುತ್ತಿರುವ ಮೈಸೂರಿನ ಮಸ್ದೂರಿ ಬೇಗಂ, ಹೊಸಕೋಟೆ ತಾಲೂಕಿನ ಅತ್ತಿಬೆಲೆಯ ಮುರುಳಿ ದೊಡ್ಡಬಳ್ಳಾಪುರ ಜಿಲ್ಲೆಯ ಕೃಷ್ಣಾನಾಯ್ಕ, ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಫಲಾನುಭವಿಗಳು ರಾಜ್ಯದ ಮುಖ್ಯ ಮಂತ್ರಿಗಳ ದೂರಗಾಮಿ ವಿಚಾರದ ಮೂಲಕ ಲಕ್ಷಾಂತರ ಬಡವರಿಗೆ ನೇರವಾಗಿ ಹೊಸ ಜೀವನ ನೀಡಿದ ಕೃತಜ್ಞತಾ ಭಾವದ ಮಾತುಗಳೇ ಸಾಕ್ಷಿಯಾದವು.
     ಭಾಗ್ಯ ವಾಣಿಯ  ಪಾತ್ರಗಳು, ಈ ಬಾರಿ ಕೆಳಗಿನಟ್ಟಿಯ ಸಿದ್ದಣ್ಣ ನಿಗಮದಲ್ಲಿ ಮಾಡಿಕೊಂಡ ಹಳೆಸಾಲದಿಂದ ಜೀವನ ನಡೆಸೋದು ಹೇಗೆ ಎಂಬ ಇಕ್ಕಟ್ಟಿನ ಪರಸ್ಥಿತಿ ನಿರ್ಮಿಸಿತ್ತು. ಬಡವರಿಗೆ ಸಾಲ ತೀರಿಸಲಾಗದಿದ್ದರೇ ಅದು ಹೇಗೆ ಶೂಲವಾಗಿ ಕುಟುಂಬಕ್ಕೂ, ಮನಸ್ಸಿಗೂ ಹೊರೆಯಾಗಿ ಕಾಡುತ್ತೆ,  ಋಣಮುಕ್ತ ಯೋಜನೆ ಹೇಗೆ ಅವರುಗಳಿಗೆ ಸಂಜೀವಿನಿಯಾಯಿತು ಎಂದು ಗ್ರಾಮೀಣ ಭಾಷೆ, ಸಹಜ ಸಂಭಾಷಣೆ ರೂಪದಲ್ಲಿ ನೀಡಿದ ಮಾಹಿತಿ  ಇಂತಹ ಕಷ್ಟದ ಜೀವಗಳು ಸಾಲ ಮಾಡುವ ಅನಿವಾರ್ಯತೆ, ಸಂಕಷ್ಟಗಳಿಂದಾಗಿ ಅದನ್ನು ತೀರಿಸಲಾಗದ ಒದ್ದಾಟ ಹಾಗೂ ರಾಜ್ಯ ಸರ್ಕಾರದ ಋಣಮುಕ್ತ ಯೋಜನೆ ಅವರಲ್ಲಿ ಜೀವನದ ಕುರಿತು ಮರುಹುಟ್ಟು ನೀಡಿದ  ಕುರಿತು ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಅವರ ಹಳೆಸಾಲದಿಂದ ಮುಕ್ತಿ... ದೊರೆತಿದೆ ಸಾಲದ ಬೇವಿ ಕಹಿಯಿಂದ ನೋವಿನ ದಿನ ಮುಗಿದು ನಗೆಯ ನವಿಲು ತುಂಬಿದ...ಎನ್ನುವ ಹಾಡು ಕಾರ್ಯಕ್ರಮದ ಮಹತ್ವವನ್ನು ಹೆಚ್ಚಿಸಿದವು. ಮೈಸೂರು ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಎನ್. ಕೇಶವ್‍ಮೂರ್ತಿ ನಿರ್ಮಿಸಿ ಕಾರ್ಯಕ್ರಮದಲ್ಲಿ ಜಯಣ್ಣ ರೂಪದಲ್ಲಿ ಹನುಮಕ್ಕನಾಗಿ ಡಾ. ವಿಜಯಾ ಹರಣ, ಶರಣಪ್ಪನಾಗಿ ಪ್ರಭುಸ್ವಾಮಿ ಮಳಿಮಠ ಕಾರ್ಯಕಮಕ್ಕೆ ಜೀವತುಂಬಿದರು.

Saturday, 24 September 2016

ಕುಷ್ಟಗಿ: ಸೆ.26 ರಂದು ತಾಲೂಕಾ ಪಂಚಾಯತಿ ತ್ರೈಮಾಸಿಕ ಕೆಡಿಪಿ ಸಭೆ

ಕೊಪ್ಪಳ, ಸೆ.24 (ಕರ್ನಾಟಕ ವಾರ್ತೆ) : ಕುಷ್ಟಗಿ ತಾಲೂಕ ಪಂಚಾಯತಿಯ ಪ್ರಸಕ್ತ ಸಾಲಿನ ಮೊದಲನೇ ತ್ರೈಮಾಸಿಕ ಕೆಡಿಪಿ ಸಭೆ ಸೆ.26 ರಂದು ಬೆಳಿಗ್ಗೆ 11 ಗಂಟೆಗೆ ಕುಷ್ಟಗಿ ತಾಲೂಕ ಪಂಚಾಯತಿ ಸಭಾಂಗಣದಲ್ಲಿ ನಡೆಯಲಿದೆ.
     ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್ ಸಭೆಯ ಅಧ್ಯಕ್ಷತೆ ವಹಿಸುವರು. ಸಂಬಂಧಿಸಿದ ಅಧಿಕಾರಿಗಳು ಪ್ರಗತಿ ವರದಿಯೊಂದಿಗೆ ಸಭೆಗೆ ಹಾಜರಾಗುವಂತೆ ಕುಷ್ಟಗಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕುಷ್ಟಗಿ-ಯಲಬುರ್ಗಾ ತಾಲೂಕುಗಳಿಗೆ ಶುದ್ಧ ಕುಡಿಯುವ ನೀರು : ಆಲಮಟ್ಟಿಯಿಂದ ನೀರು ಪೂರೈಸುವ ಕಾಮಗಾರಿಗೆ ಜನವರಿಯಲ್ಲಿ ಚಾಲನೆ- ಬಸವರಾಜ ರಾಯರಡ್ಡಿ


ಕೊಪ್ಪಳ ಸೆ. 24 (ಕರ್ನಾಟಕ ವಾರ್ತೆ) : ಕುಡಿಯುವ ನೀರಿನ ತೀವ್ರ ತೊಂದರೆ ಎದುರಿಸುತ್ತಿರುವ ಕುಷ್ಟಗಿ ಮತ್ತು ಯಲಬುರ್ಗಾ ತಾಲೂಕಿನ 359 ಜನವಸತಿ ಪ್ರದೇಶಗಳಿಗೆ ಆಲಮಟ್ಟಿಯಿಂದ ಕೃಷ್ಣಾ ನೀರನ್ನು ಪೂರೈಕೆ ಮಾಡುವ 650 ಕೋಟಿ ರೂ. ಗಳ ಶಾಶ್ವತ ಶುದ್ಧ ಕುಡಿಯುವ ನೀರು ಸರಬರಾಜು ಯೋಜನೆಗೆ ಟೆಂಡರ್ ಕರೆಯಲಾಗಿದ್ದು, ಬರುವ ಜನವರಿ ತಿಂಗಳಿನಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಹೇಳಿದರು.

     ಕುಷ್ಟಗಿ ಪಟ್ಟಣದ ಬುತ್ತಿ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಸಾರ್ವಜನಿಕ ಕುಂದುಕೊರತೆಗಳ ಅರ್ಜಿ ವಿಚಾರಣೆ ಮತ್ತು ಅಹವಾಲು ಆಲಿಸುವ ಸಲುವಾಗಿ ಶನಿವಾರದಂದು ಆಯೋಜಿಸಲಾಗಿದ್ದ ಜನಸಂಪರ್ಕ ಸಭೆಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.


     ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿರುವ ಕುಷ್ಟಗಿ ಹಾಗೂ ಯಲಬುರ್ಗಾ ತಾಲೂಕಿನ 359 ಜನವಸತಿ ಪ್ರದೇಶಗಳಿಗೆ ಕೃಷ್ಣಾ ನದಿಯಿಂದ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಮಹತ್ವದ ಯೋಜನೆಗೆ ನಮ್ಮ ಸರ್ಕಾರ ಆದ್ಯತೆ ನೀಡಿದ್ದು, ಈಗಾಗಲೆ 650 ಕೋಟಿ ರೂ. ವೆಚ್ಚದ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ನೀಡಿ, ಟೆಂಡರ್ ಕರೆಯಲಾಗಿದೆ.  ಬರುವ ಡಿಸೆಂಬರ್ ಅಂತ್ಯ ಅಥವಾ ಜನವರಿ ತಿಂಗಳಿನಲ್ಲಿ ಯೋಜನೆಯ ಕಾಮಗಾರಿಗೆ ಚಾಲನೆ ನೀಡಲಾಗುವುದು.  ಯೋಜನೆಯ ಜಾರಿಯಿಂದ ಸುಮಾರು 06 ಲಕ್ಷ ಜನರು ಶುದ್ಧ ಕುಡಿಯುವ ನೀರಿನ ಸೌಲಭ್ಯ ಪಡೆಯಲಿದ್ದಾರೆ.  ಕಳೆದ 03 ವರ್ಷಗಳಿಂದ ನೀರಾವರಿ ಯೋಜನೆಗಳಿಗೆ ನಮ್ಮ ಸರ್ಕಾರ ಹೆಚ್ಚಿನ ಮಹತ್ವವನ್ನು ಕೊಟ್ಟಿದ್ದು, ಸುಮಾರು 36 ಸಾವಿರ ಕೋಟಿ ರೂ. ಗಳನ್ನು ನೀರಾವರಿ ಯೋಜನೆಗಳಿಗೆ ವೆಚ್ಚ ಮಾಡಿದೆ. ಕೊಪ್ಪಳ ಜಿಲ್ಲೆಗೆ ಕೃಷ್ಣಾ ನ್ಯಾಯಾಧೀಕರಣ-02 ರ ಆದೇಶದಂತೆ 12. 83 ಟಿ.ಎಂ.ಸಿ. ನೀರು ಬಳಕೆ ಮಾಡಿಕೊಳ್ಳಲು ಕ್ರಮ ಕೈಗೊಂಡಿದ್ದು,  ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕುಷ್ಟಗಿ, ಯಲಬುರ್ಗಾ, ಕನಕಗಿರಿ ಮತ್ತು ಕೊಪ್ಪಳ ತಾಲೂಕಿನ ಆಯ್ದ ಪ್ರದೇಶಗಳಿಗೆ ನೀರಾವರಿಗಾಗಿ ಮುಖ್ಯ ಕಾಲುವೆ ಕಾಮಗಾರಿಗಾಗಿ ಕೃಷ್ಣಾ ಭಾಗ್ಯ ಜಲನಿಗಮ ವತಿಯಿಂದ 1,200 ಕೋಟಿ ರೂ. ಗಳಿಗೆ ಸಮಗ್ರ ಯೋಜನಾ ವರದಿ ಸಿದ್ಧಪಡಿಸಲಾಗಿದ್ದು, ಶೀಘ್ರದಲ್ಲಿಯೇ ಇದಕ್ಕೆ ಅನುಮೋದನೆ ನೀಡಿ, ಟೆಂಡರ್ ಕರೆಯಲಾಗುವುದು.  ಫೆಬ್ರುವರಿ 2016 ರಲ್ಲಿ ಸರ್ಕಾರವು ಇನ್‍ವೆಸ್ಟ್ ಕರ್ನಾಟಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಕುಷ್ಟಗಿ ತಾಲೂಕಿನ ಬೋದೂರು ಗ್ರಾಮದಲ್ಲಿ ಸುಮಾರು 3 ಸಾವಿರ ಎಕರೆ ಜಮೀನಲ್ಲಿ ಇಂಡಸ್ಟ್ರೀಯಲ್ ಟೌನ್‍ಶಿಪ್ ಸ್ಥಾಪಿಸುವ ಬಗ್ಗೆ ಜಿಲ್ಲಾಧಿಕಾರಿಗಳು ಈಗಾಗಲೆ ಕ್ರಮ ಕೈಗೊಂಡಿದ್ದಾರೆ.  ಗದಗ-ವಾಡಿ ರೈಲ್ವೆ ಮಾರ್ಗದ ಕಾಮಗಾರಿಗೆ ಭೂಸ್ವಾಧೀನ ಮಾಡಿಕೊಳ್ಳುವ ಕಾರ್ಯ ತಿಂಗಳಾಂತ್ಯದೊಳಗೆ ಪೂರ್ಣಗೊಳ್ಳಲಿದ್ದು, ಬರುವ ಡಿಸೆಂಬರ್ ತಿಂಗಳಿನಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ.  ಕುಷ್ಟಗಿ-ಕೊಪ್ಪಳ ರಸ್ತೆಯನ್ನು 55 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಈಗಾಗಲೆ ಟೆಂಡರ್ ಪ್ರಕ್ರಿಯೆ ಕೈಗೊಳ್ಳಲಾಗಿದೆ.  ಕುಷ್ಟಗಿಯಲ್ಲಿ ಉನ್ನತ ಶಿಕ್ಷಣ ಕೇಂದ್ರ ಪ್ರಾರಂಭಿಸಲು ಅಗತ್ಯ ಭೂಮಿಯನ್ನು ಗುರುತಿಸಿ ನೀಡಿದಲ್ಲಿ, ಇಲಾಖೆಯಿಂದ ಅಗತ್ಯ ಅನುದಾನ ಒದಗಿಸಿ, ಉನ್ನತ ಶಿಕ್ಷಣ ಕುಷ್ಟಗಿ ತಾಲೂಕಿನಲ್ಲಿಯೂ ದೊರೆಯುವಂತೆ ಮಾಡಲು ತಾವು ಸಿದ್ಧ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಅವರು ಹೇಳಿದರು.

ಬರದ ಆತಂಕ- ಮುಂಜಾಗ್ರತೆಗೆ ಕ್ರಮ : ಜಿಲ್ಲೆಯಲ್ಲಿ ಈ ಬಾರಿಯೂ ಬರದ ಛಾಯೆ ಕಂಡುಬರುತ್ತಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಆಗಿಲ್ಲ.  ಅಕ್ಟೋಬರ್ 01 ರಂದು ಜಿಲ್ಲಾ ಮಟ್ಟದಲ್ಲಿ ಇಲಾಖಾ ಅಧಿಕಾರಿಗಳ ಪರಿಶೀಲನಾ ಸಭೆಯನ್ನು ಕರೆಯಲಾಗಿದ್ದು, ಕುಡಿಯುವ ನೀರು ಹಾಗೂ ಬರ ಪರಿಸ್ಥಿತಿಯ ಬಗ್ಗೆ ಪರಾಮರ್ಶೆ ನಡೆಸಲಾಗುವುದು.  ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ಕ್ರಿಯಾ ಯೋಜನೆ ರೂಪಿಸಲು ಸೂಕ್ತ ರೀತಿಯಲ್ಲಿ ಅಧಿಕಾರಿಗಳಿಗೆ ತಿಳಿಸಲಾಗುವುದು.  ಬರ ಪರಿಸ್ಥಿತಿಯ ಪರಾಮರ್ಶೆ ಕುರಿತಂತೆ ರಾಜ್ಯ ಮಟ್ಟದ ಉನ್ನತ ಅಧಿಕಾರಿಗಳ ಸಭೆ ಸಧ್ಯದಲ್ಲಿಯೇ ಬೆಂಗಳೂರಿನಲ್ಲಿ ಜರುಗಲಿದ್ದು, ಈ ಸಂದರ್ಭದಲ್ಲಿ ಬರ ಪರಿಸ್ಥಿತಿಯ ಸಮಗ್ರ ಚಿತ್ರಣ ದೊರೆಯಲಿದೆ ಎಂದು ಸಚಿವರು ಹೇಳಿದರು.
ಜನಸಂಪರ್ಕಕ್ಕೆ ಆದ್ಯತೆ : ಸಾರ್ವಜನಿಕರ ಕುಂದುಕೊರತೆಗಳನ್ನು ಸ್ಥಳೀಯ ಮಟ್ಟದಲ್ಲಿಯೇ ಬಗೆಹರಿಸುವ ಸಲುವಾಗಿ ಹಾಗೂ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ, ಅವರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಆಶಯದಂತೆ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಜನಸಂಪರ್ಕ ಸಭೆಯನ್ನು ಆಯೋಜಿಸಲಾಗುತ್ತಿದೆ.  ಜನರ ಹಿತದೃಷ್ಟಿಯಿಂದ ಜನಸಂಪರ್ಕ ಸಭೆಯನ್ನು ತಾಲೂಕು ಮಟ್ಟದಲ್ಲಿಯೂ ಹಮ್ಮಿಕೊಳ್ಳಲಾಗುತ್ತಿದೆ.  ಅಧಿಕಾರಿಗಳು ಕಾನೂನಿನ ಚೌಕಟ್ಟಿನಲ್ಲಿ ಜನಪರ ಕೆಲಸ ಮಾಡಬೇಕು.  ಪ್ರಜಾಪ್ರಭುತ್ವದಲ್ಲಿ ಜನರೇ ಸರ್ಕಾರದ ಮಾಲೀಕರು, ಜನರ ಸಮಸ್ಯೆಗಳಿಗೆ ಅಧಿಕಾರ ವರ್ಗ ಸ್ಪಂದಿಸುವ ಕೆಲಸ ಆಗಬೇಕು.  ಅಧಿಕಾರಿಗಳು ಕಚೇರಿಗಳಲ್ಲಿ ಕುಳಿತು ಕೆಲಸ ಮಾಡಿದರೆ, ಜನರ ಸಮಸ್ಯೆಗಳು ಅರಿವಿಗೆ ಬರುವುದಿಲ್ಲ.  ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ಷೇತ್ರಗಳಿಗೆ ಭೇಟಿ ಮಾಡಿ, ಜನರೊಂದಿಗೆ ಬೆರೆತರೆ ಮಾತ್ರ ಜನಸಾಮಾನ್ಯರ ತೊಂದರೆಗಳು ಗೊತ್ತಾಗುತ್ತವೆ ಎಂದು ಸಚಿವ ಬಸವರಾಜ ರಾಯರಡ್ಡಿ ಅವರು ಹೇಳಿದರು.
    ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟಿಲ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕುಷ್ಟಗಿ ತಾಲೂಕಿನಲ್ಲಿ ಈ ಬಾರಿಯೂ ಮಳೆಯ ತೀವ್ರ ಕೊರತೆ ಕಂಡುಬಂದಿದ್ದು, ಅಂತರ್ಜಲ ಮಟ್ಟ ಕುಸಿಯುತ್ತಿರುವುದರಿಂದ ಬೋರ್‍ವೆಲ್‍ಗಳಲ್ಲೂ ನೀರು ಕಡಿಮೆಯಾಗುತ್ತಿದೆ.  ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಕುಡಿಯುವ ನೀರಿನ ತೊಂದರೆ ಎದುರಾಗುವ ಆತಂಕವಿದೆ.  ಕೃಷ್ಣಾ ಬಿ-ಸ್ಕೀಂ ನಡಿ ಕೊಪ್ಪಳ ಏತ ನೀರಾವರಿ ಯೋಜನೆ ಮಂದಗತಿಯಲ್ಲಿ ಸಾಗಿದ್ದು, ಕಾಮಗಾರಿಯ ವೇಗವನ್ನು ಹೆಚ್ಚಿಸಬೇಕಿದೆ.  ಕುಷ್ಟಗಿ ಮತ್ತು ಯಲಬುರ್ಗಾ ತಾಲೂಕುಗಳ ಗ್ರಾಮಗಳಿಗೆ ಕೃಷ್ಣಾ ನದಿಯಿಂದ ನೀರು ಪೂರೈಸುವ ಬೃಹತ್ ಯೋಜನೆಯನ್ನು ತ್ವರಿತವಾಗಿ ಆರಂಬಿಸಬೇಕು ಎಂದು ಮನವಿ ಮಾಡಿದರು.
     ಜನಸಂಪರ್ಕ ಸಭೆಯ ಅಂಗವಾಗಿ ಸಾರ್ವಜನಿಕರು ತಮ್ಮ ಕುಂದುಕೊರತೆ, ಅಹವಾಲು ಅರ್ಜಿಗಳನ್ನು ಸಲ್ಲಿಸಿದರು.  ಸುಮಾರು 85 ಅರ್ಜಿಗಳು ಸಾರ್ವಜನಿಕರಿಂದ ಜನಸಂಪರ್ಕ ಸಭೆಗೆ ಸಲ್ಲಿಕೆಯಾದವು.  ಹೆಣ್ಣು ಮಕ್ಕಳಿಗೆ ರಾಜ್ಯ ಸರ್ಕಾರದ ಭಾಗ್ಯಲಕ್ಷ್ಮಿ ಯೋಜನೆಯಡಿ ಕೊಡಮಾಡುವ ಎಲ್‍ಐಸಿ ಬಾಂಡ್ ಗಳನ್ನು ಇದೇ ಸಂದರ್ಭದಲ್ಲಿ ಸಚಿವರು ವಿತರಿಸಿದರು.
     ಜನಸಂಪರ್ಕ ಸಭೆಯಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ, ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್, ಮಾಜಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ, ತಾ.ಪಂ. ಅಧ್ಯಕ್ಷೆ ಮಹಾಂತಮ್ಮ ಪೂಜಾರ್, ಉಪಾಧ್ಯಕ್ಷೆ ಮಂಜುಳಾ ಪಾಟೀಲ, ಜಿ.ಪಂ. ಸದಸ್ಯರುಗಳಾದ ಕೆ. ಮಹೇಶ್, ವಿಜಯ ನಾಯಕ್, ವಿಜಯಲಕ್ಷ್ಮಿ ಪಲ್ಲೇದ, ಭೀಮಣ್ಣ ಅಗಸಿ ಮುಂದಿನ, ಹನುಮಂತಗೌಡ ಕಿಲ್ಲಾರಟ್ಟಿ, ಪುರಸಭೆ ಅಧ್ಯಕ್ಷ ಕಲ್ಲೇಶ್ ತಾಳದ, ಉಪವಿಭಾಗಾಧಿಕಾರಿ ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ, ತಹಸಿಲ್ದಾರ್ ಗಂಗಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಬರ ಪರಿಸ್ಥಿತಿಯಲ್ಲೂ ರೈತನ ಕೈ ಹಿಡಿದ ಕನಕಾಂಬರ


ಕೊಪ್ಪಳ ಸೆ. 24 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಈ ಬಾರಿಯೂ ಮಳೆಯ ಕೊರತೆ ಕಂಡುಬಂದಿದ್ದು, ಬರದ ಛಾಯೆ ರೈತರನ್ನು ಆತಂಕಕ್ಕೀಡು ಮಾಡಿದೆ.  ಆದರೆ, ಬರ ಪರಿಸ್ಥಿತಿಯಲ್ಲೂ ಶ್ರಮ ವಹಿಸಿ, ಸ್ವಲ್ಪ ಪ್ರಮಾಣದ ಜಮೀನಿನಲ್ಲಿಯೇ ಭರ್ಜರಿ ಕನಕಾಂಬರ ಹೂವಿನ ಬೆಳೆ ಬೆಳೆದು, ಲಕ್ಷಗಟ್ಟಲೆ ಆದಾಯ ಗಳಿಸುತ್ತಿರುವ ಯಲಬುರ್ಗಾ ತಾಲೂಕು ಹೊಸಳ್ಳಿ ಗ್ರಾಮದ ರೈತ ಕರಿಬಸಯ್ಯ ಬಳಿಗೇರ ಇತರೆ, ರೈತರಿಗೆ ಮಾದರಿಯಾಗಿದ್ದಾರೆ.

     ಮಳೆಯೇ ಬಾರದೇ ಬರ ಪರಿಸ್ಥಿತಿಯಲ್ಲಿ ಎದೆಗುಂದದೇ ಇದ್ದ ಸ್ವಲ್ಪೇ ಜಮೀನಿನಲ್ಲಿ ಕನಕಾಂಬರಿ ಪುಷ್ಪ ಬೆಳೆದು ರೂ.1.00 ಲಕ್ಷಕ್ಕೂ ಹೆಚ್ಚಿನ ಆದಾಯ ಗಳಿಸಿರುವ ಯಲಬುರ್ಗಾ ತಾಲ್ಲೂಕಿನ ಹೊಸಳ್ಳಿ ಗ್ರಾಮದ ರೈತ ಕರಿಬಸಯ್ಯ ತಂ.ಬಸಣ್ಣ ಬಳಿಗೇರ ನಿಜಕ್ಕೂ ಅಬಿನಂದನಾರ್ಹರು.
     ರೈತ ಕರಿಬಸಯ್ಯ ಬಳಿಗೇರ,  2015 ರ ಅಗಸ್ಟ್ ತಿಂಗಳಿನಲ್ಲಿ ಅರ್ಕ ಕನಕ ಎಂಬ ತಳಿಯನ್ನು ಜಿನ್ನಾಪುರದಿಂದ ಒಂದು ರೂಪಾಯಿಗೆ ಎರಡು ಗಿಡಗಳಂತೆ ಒಟ್ಟು, ರೂ.3200 ಕೊಟ್ಟು ಒಟ್ಟು 6000 ಸಸಿಗಳನ್ನು ಖರೀದಿ ಮಾಡಿ, ತಮ್ಮ 18 ಗುಂಟೆ ಜಮೀನಿನಲ್ಲಿ ನಾಟಿ ಮಾಡಿದರು.  ಬೇಸಿಗೆಯಲ್ಲಿ ಮಾಗಿ ಉಳುಮೆ ಮಾಡಿ ಹನಿ ನೀರಾವರಿ ಅಳವಡಿಸಿಕೊಂಡು 2 1/2 * 1 1/2  ಅಡಿ ಅಂತರದಲ್ಲಿ ನಾಟಿ ಮಾಡಿದರು.  ತೋಟಗಾರಿಕೆ ಇಲಾಖೆಯ ನೆರವನ್ನು ಪಡೆದು, ಸಾವಯವ ಗೊಬ್ಬರ ಮತ್ತು ಶಿಫಾರಸ್ಸು ಮಾಡಿದ ರಾಸಾಯನಿಕ ಗೊಬ್ಬರ ಮತ್ತು ಲಘು ಪೋಷಕಾಂಶಗಳಾದ ಜಿಂಕ್, ಬೋರಾನ್ ಅನ್ನು ಗಿಡಗಳಿಗೆ ಒದಗಿಸಿದರು.  ನಾಟಿ ಮಾಡಿದ 2 ತಿಂಗಳ ನಂತರ ಕುಡಿ ಚಿವುಟಿ ಸಸ್ಯ ಚೋದಕ ಸಿಂಪಡಿಸಿದರು.  ಈ ರೀತಿ ಆರೈಕೆ ಮಾಡಿದ ಬೆಳೆ 2015 ರ ಡಿಸೆಂಬರ್ ತಿಂಗಳಿನಿಂದ ಇಳುವರಿ ಕೊಡಲು ಆರಂಬಿಸಿದೆ.  ಪುಷ್ಪಕೃಷಿಗಾಗಿ ಹನಿ ನೀರಾವರಿ ವ್ಯವಸ್ಥೆ ಅಳವಡಿಸಿದ್ದು, ತೋಟಗಾರಿಕೆ ಇಲಾಖೆಯಿಂದ ಶೇ. 90 ರಷ್ಟು ಸಬ್ಸಿಡಿ ರೈತನಿಗೆ ದೊರೆತಿದೆ.
    ಮೊದಲು 2-2 1/2 ಕೆ.ಜಿ. ಇಳುವರಿ ಕೊಡುತ್ತಿದ್ದ ಬೆಳೆ ಜನೆವರಿ ತಿಂಗಳಿನಿಂದ ಪ್ರತಿ ದಿನ 5 ಕೆ.ಜಿ. ಯಷ್ಟು ಇಳುವರಿಯನ್ನು ಕೊಟ್ಟಿದೆ.  ಇದುವರೆಗೂ ಸುಮಾರು 5 ಕ್ವಿಂಟಾಲ್ ನಷ್ಟು ಕನಕಾಂಬರ ಹೂವಿನ ಇಳುವರಿ ಪಡೆದಿದ್ದು, ಪ್ರತಿ ಕ್ವಿಂಟಾಲ್‍ಗೆ ಸರಾಸರಿ 20,000 ರೂ. ಗಳಂತೆ, ಗಜೇಂದ್ರಗಡ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ, ಈವರೆಗೆ ಸುಮಾರು 1. 20 ಲಕ್ಷ ರೂ. ಆದಾಯ ಗಳಿಸಿದ್ದಾರೆ ರೈತ ಕರಿಬಸಯ್ಯ.       ಯಲಬುರ್ಗಾ ತಾಲೂಕಿನ ಹೊಸಳ್ಳಿ ಗ್ರಾಮದ ಸುತ್ತಮುತ್ತ ರೈತರಿಂದ 20-25 ಎಕರೆ ಪ್ರದೇಶದಲ್ಲಿ ಕನಕಾಂಬರ ಹೂ ಬೆಳೆಯಲಾಗುತ್ತಿದೆ. ಬೇಸಿಗೆಯಲ್ಲಿ ಒಳ್ಳೆಯ ಇಳುವರಿ ಕೊಡುವ ಈ ಬೆಳೆ, ರೈತರಿಗೆ, ಅದರಲ್ಲೂ ಸಣ್ಣ ರೈತರಿಗೆ ಆಶಾದಾಯಕ ಬೆಳೆಯಾಗಿದೆ. ಕನಕಾಂಬರ ಕುಟುಂಬಕ್ಕೆ ಸೇರಿದ ಅತ್ಯಂತ ಸುಂದರ ಹಗುರವಾದ ಬಹು ಬೇಡಿಕೆವುಳ್ಳ ಪುಷ್ಪ ಇದೊಂದು ಮಧ್ಯಮಾವಧಿ ಅಂದರೆ 2-3 ವರ್ಷದ ಬೆಳೆ ಆಗಿದೆ.  3 ನೇ ವರ್ಷದಿಂದ ಗಿಡದಲ್ಲಿ ಇಳುವರಿ ಕುಂಠಿತವಾಗುತ್ತದೆ.  ಸದ್ಯ ಹವಾಮಾನಕ್ಕೆ ಅನುಗುಣವಾಗಿ ಇಳುವರಿ ಕಡಿಮೆ ಇದ್ದು, ಇನ್ನೂ ಒಂದೆರಡು ತಿಂಗಳು ಆದಾಯ ಕೊಡಬಲ್ಲ ಈ ಬೆಳೆಯಿಂದ ಅಂದಾಜು ರೂ.1. 50 ಲಕ್ಷ ಆದಾಯದ ನಿರೀಕ್ಷೆ ಇದೆ ಎನ್ನುತ್ತಾರೆ ರೈತ.
       ಸೊರಗು ರೋಗ, ರಸಹೀರುವ ಕೀಟಗಳು ಈ ಬೆಳೆಯ ಮುಖ್ಯ ಶತ್ರುಗಳು.   ಕೊಪ್ಪಳದ ತೋಟಗಾರಿಕೆ ಇಲಾಖೆ ವಿಷಯ ತಜ್ಞ ವಾಮನಮೂರ್ತಿ, ಇನ್ನೋರ್ವ ಸಲಹೆಗಾರ ಚಂದ್ರಶೇಖರ ಅವರ ಮಾರ್ಗದರ್ಶನ ಮತ್ತು  ಅವರ ಸಲಹೆಯಂತೆ ಕೀಟನಾಶಕ, ಲಘುಪೋಷಕಾಂಶಗಳು ಮತ್ತು ಶಿಲೀಂದ್ರ ನಾಶಕಗಳನ್ನು ಸಿಂಪಡಿಸಿ ಕೀಟ ಮತ್ತು ರೋಗಗಳ ನಿಯಂತ್ರಣ ಕೈಗೊಳ್ಳಲಾಯಿತು.  ಈ ಬೆಳೆಗೆ ಮುಖ್ಯ ಖರ್ಚೆಂದರೆ ಕಟಾವು ಮಾಡಲು ಆಳುಗಳು.  ದಿನಾಲು ಕನಿಷ್ಟ 8 ರಿಂದ 10 ಆಳುಗಳ ಅವಶ್ಯಕತೆ ಇದೆ.  ಪುಷ್ಪ ಕೃಷಿಯಿಂದ ತಮ್ಮ ಕುಟುಂಬವಷ್ಟೇ ಅಲ್ಲ, ಗ್ರಾಮದ 8 ರಿಂದ 10 ಕುಟುಂಬಗಳಿಗೂ ಸಹ ಉದ್ಯೋಗ ದೊರೆಯುತ್ತಿದ್ದು, ಇದು ನನಗೆ ಹೆಮ್ಮೆಯ ವಿಷಯವಾಗಿದೆ ಎನ್ನುತ್ತಾರೆ ರೈತ ಕರಿಬಸಯ್ಯ.
     ``ಬರಗಾಲದಲ್ಲಿಯೂ ಎದೆಗುಂದದೆ ಇದ್ದ ಸ್ವಲ್ಪೇ ಜಮೀನಿನಲ್ಲಿ ಯಶಸ್ವಿಯಾಗಿ ಪುಷ್ಪ ಕೃಷಿ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ ರೈತ ಕರಿಬಸಯ್ಯ.   ರೈತರು ಎಂತಹ ಪರಿಸ್ಥಿತಿಯಲ್ಲೂ ಆತ್ಮ ಸ್ಥೈರ್ಯ ಕಳೆದುಕೊಳ್ಳದೇ ಇಲಾಖೆ ಯೋಜನೆಗಳ ಸದ್ಬಳಕೆ ಮಾಡಿಕೊಂಡು ಸ್ವಾವಲಂಬನೆ ಬದುಕು ರೂಪಿಸಿಕೊಳ್ಳಬೇಕು ಎನ್ನುತ್ತಾರೆ ಸಹಾಯಕ ತೋಟಗಾರಿಕೆ ನಿರ್ದೇಶಕ ಮಂಜುನಾಥ ಲಿಂಗಣ್ಣನವರ ಅವರು.
    ಹೆಚ್ಚಿನ ಮಾಹಿತಿಗಾಗಿ ಯಲಬುರ್ಗಾ ತೋಟಗಾರಿಕೆ ಇಲಾಖೆ ಅಥವಾ ಕೊಪ್ಪಳದ ತೋಟಗಾರಿಕೆ ವಿಷಯ ತಜ್ಞ ವಾಮನಮೂರ್ತಿರವರನ್ನು ಸಂಪರ್ಕಿಸಬಹುದಾಗಿದೆ.

ಸೆ.27 ರಂದು ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸ್ಪರ್ಧೆ ಉದ್ಘಾಟನೆ ಕಾರ್ಯಕ್ರಮ

ಕೊಪ್ಪಳ, ಸೆ.24 (ಕರ್ನಾಟಕ ವಾರ್ತೆ) : ಜಿಲ್ಲಾ ಪಂಚಾಯತ್ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸ್ಪರ್ಧೆ ಸೆ.27 ರಂದು ಬೆಳಿಗ್ಗೆ 10.30 ಗಂಟೆಗೆ ಕೊಪ್ಪಳ ನಗರದ ಕಾಳಿದಾಸ ಪ್ರೌಢ ಶಾಲೆಯಲ್ಲಿ ಆಯೋಜಿಸಲಾಗಿದೆ. 
           ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು ಕಾರ್ಯಕ್ರಮದ ಉದ್ಘಾಟನೆ  ನೆರವೇರಿಸುವರು.  ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅಧ್ಯಕ್ಷತೆ ವಹಿಸುವರು.  ಜಿಲ್ಲಾ ಪಂಚಾಯತ್ ಅಧ್ಯಕ್ಷ ನಾಗರಳ್ಳಿ ಶೇಖರಪ್ಪ ಬಸವರಡ್ಡೆಪ್ಪ, ಸಂಸದ ಕರಡಿ ಸಂಗಣ್ಣ, ಶಾಸಕರುಗಳಾದ ಶಿವರಾಜ ಎಸ್ ತಂಗಡಗಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್, ವಿಧಾನ ಪರಿಷತ್ ಸದಸ್ಯರುಗಳಾದ ಬಸವರಾಜ ಪಾಟೀಲ ಇಟಗಿ, ಅಮರನಾಥ ಪಾಟೀಲ್, ಶರಣಪ್ಪ ಮಟ್ಟೂರ್,  ಜಿ.ಪಂ ಉಪಾಧ್ಯಕ್ಷೆ ಲಕ್ಷ್ಮಮ್ಮ ಸಿದ್ದಪ್ಪ ನೀರಲೂಟಿ, ಜಿ.ಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಶಾಂತಾ ರಮೇಶ ನಾಯಕ, ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ, ಕೊಪ್ಪಳ ತಾ.ಪಂ ಅಧ್ಯಕ್ಷ ಬಾಲಚಂದ್ರನ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಿ.ಎಸ್ ವಸ್ತ್ರದ, ಜಿಲ್ಲಾಧಿಕಾರಿ ಕನಗವಲ್ಲಿ ಎಂ, ಜಿ.ಪಂ ಸಿಇಒ ಆರ್.ರಾಮಚಂದ್ರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ತ್ಯಾಗರಾಜನ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮಣ್ಣನವರ್, ಪ್ರಧಾನ ಕಾರ್ಯದರ್ಶಿ ಶಿವಪ್ಪ ಜ್ಯೋಗಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಾಜ್ಯ ಉಪಾಧ್ಯಕ್ಷ ಶಂಭುಲಿಂಗನಗೌಡ, ಪ್ರೌಢ ಶಾಲಾ ಸಹ ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ವೆಂಕಟೇಶ ಗೌಡರ್, ಪ್ರಧಾನ ಕಾರ್ಯದರ್ಶಿ ಎಸ್.ಬಿ ಕುರಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್, ಪ್ರಧಾನ ಕಾರ್ಯದರ್ಶಿ ಶರಣಬಸನಗೌಡ ಪಾಟೀಲ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.

ಹೆಎಎಲ್ ನಲ್ಲಿ ನೇಮಕಾತಿ : ಮಾಜಿ ಸೈನಿಕರಿಂದ ಅರ್ಜಿ ಆಹ್ವಾನ

ಕೊಪ್ಪಳ, ಸೆ.24 (ಕರ್ನಾಟಕ ವಾರ್ತೆ) : ಸೈನಿಕರ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಬಾಗಲಕೋಟ ಇವರು ಮಾಜಿ ಸೈನಿಕರ ಅವಲಂಬಿತರಿಗಾಗಿ ಹಿಂದುಸ್ತಾನ ಏರೋನ್ಯಾಟಿಕ್ಸ್ ನಲ್ಲಿ ಖಾಲಿ ಇರುವ ಅಸಿಸ್ಟೆಂಟ್ ಟ್ರೈನಿಂಗ್ ಆಫೀಸರ್, ಏರ್‍ಕ್ರಾಫ್ಟ್ ಪವರ್ ಪ್ಲಾಂಟ್ ಮತ್ತು ಅಸಿಸ್ಟೆಂಟ್ ಟ್ರೈನಿಂಗ್ ಆಫೀಸರ್, ಏರ್‍ಕ್ರಾಫ್ಟ್ ಸ್ಟ್ರಕ್ಚರ್ (ಏರ್‍ಫ್ರೇಮ್)ನಲ್ಲಿ ಖಾಲಿ ಇರುವ 2 ಹುದ್ದೆಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದಾರೆ.
     ಅರ್ಜಿ ಸಲ್ಲಿಸವವರು  www.hal.india.com (careers)  ಇಲ್ಲಿ ಅಕ್ಟೋಬರ್ 7 ರೊಳಗಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ದೂ.ಸಂ:080- 22314261/2232 ಇಲ್ಲಿಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Friday, 23 September 2016

ಸೆ. 27, 28 ರಂದು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ

ಕೊಪ್ಪಳ, ಸೆ.23  (ಕರ್ನಾಟಕ ವಾರ್ತೆ): ಸಾರ್ವಜನಿಕ ಶಿಕ್ಷಣ ಇಲಾಖೆಯು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮವನ್ನು ಸೆ.27, 28 ರಂದು ಎರಡು ದಿನಗಳ ಕಾಲ ಕೊಪ್ಪಳ ನಗರದ ಕಾಳಿದಾಸ ಪ್ರೌಢಶಾಲೆಯಲ್ಲಿ ಆಯೋಜಿಸಿದೆ.
       ಸೆ. 27 ರಂದು ಪ್ರಾಥಮಿಕ ಶಾಲಾ ವಿಭಾಗದ ಪ್ರತಿಭಾ ಕಾರಂಜಿ ಕಾರ್ಯಕ್ರಮಗಳು ನಡೆಯಲಿವೆ. ಸೆ. 28 ರಂದು ಪ್ರೌಢ ಶಾಲಾ ವಿಭಾಗದ ಕಾರ್ಯಕ್ರಮಗಳು ನಡೆಯಲಿವೆ. ತಾಲೂಕ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆ. 25 ರಂದು ಆಕಾಶವಾಣಿಯಲ್ಲಿ ವಿಜಯನಗರದ ಐಸಿರಿ


ಕೊಪ್ಪಳ ಸೆ. 23 (ಕರ್ನಾಟಕ ವಾರ್ತೆ): ಆಕಾಶವಾಣಿ ಹೊಸಪೇಟೆ ಕೇಂದ್ರವು ಪ್ರಾರಂಭಿಸಿರುವ ‘ವಿಜಯನಗರದ ಐಸಿರಿ’ ಸರಣಿ ಕಾರ್ಯಕ್ರಮದಡಿ ಇದೇ ರವಿವಾರ ಸೆ. 25 ರಂದು ಹಲವು ಮಹತ್ವದ ವಿಷಯಗಳು ಮೂಡಿ ಬರಲಿವೆ. 
ವಿಜಯನಗರದ ಐಸಿರಿ ಕಾರ್ಯಕ್ರಮದಲ್ಲಿ ಸೆ. 25 ರಂದು ಸಂಜೆ 05 ಗಂಟೆಗೆ ಪ್ರಸಾರವಾಗಲಿದ್ದು, ಚಿತ್ತವಾಡ್ಗಿಯ ‘ಹಾಡಿನ ಕಣಜ’ ಮಾಲತಿಬಾಯಿ ಪುಟ್ಟಾಭಟ್ ಅವರ ಹಾಡುಗಳು. ಭಾರತದ ಪ್ರಮುಖ ತತ್ವಶಾಸ್ತ್ರೀಯ ನೆಲೆಗಳು ಈ ಕುರಿತು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಡಾ|| ಹೆಚ್.ಡಿ. ಪ್ರಶಾಂತ ಅವರಿಂದ ಮಾಹಿತಿ. ಗಿನ್ನಿಸ್ ದಾಖಲೆ ಮಾಡಿರುವ ಕಂಪ್ಲಿಯ ಬಿ.ಲಕ್ಷ್ಮೀ ಅವರೊಂದಿಗೆ ಸಂದರ್ಶನ. ಪುರಾತತ್ವ ಇಲಾಖೆ ಹಂಪಿ ಮಿನಿಸರ್ಕಲ್, ಉಪಅಧೀಕ್ಷಕ ಡಾ|| ಎನ್.ಸಿ.ಪ್ರಕಾಶ್ ಅವರಿಂದ ವಿರುಪಾಕ್ಷ ದೇವಾಲಯ ಆವರಣದಲ್ಲಿನ ಉತ್ಖನನ ಕುರಿತು ಮಾಹಿತಿ ಪ್ರಸಾರವಾಗಲಿದೆ ಎಂದು ಹೊಸಪೇಟೆ ಆಕಾಶವಾಣಿ ಕೇಂದ್ರದ ಮುಖ್ಯಸ್ಥೆ ಡಾ|| ಅನುರಾಧಕಟ್ಟಿ ತಿಳಿಸಿದ್ದಾರೆ.

ಕೊಪ್ಪಳ ಕಿಮ್ಸ್ ನಿರ್ದೇಶಕ ಡಾ. ಶಂಕರ ಮಲಪುರೆ ಅವರಿಂದ ಪ್ರೋಸ್ಪೇಟ್ ಗಡ್ಡೆಯ ಯಶಸ್ವಿ ಶಸ್ತ್ರಚಿಕಿತ್ಸೆ

ಕೊಪ್ಪಳ ಸೆ. 23 (ಕರ್ನಾಟಕ ವಾರ್ತೆ): ಪ್ರೋಸ್ಪೇಟ್ ಗಡ್ಡೆಯ ತೊಂದರೆಯಿಂದ ನರಳುತ್ತಿದ್ದ ಇಬ್ಬರು ರೋಗಿಗಳಿಗೆ ಕೊಪ್ಪಳ ಕಿಮ್ಸ್ ನಿರ್ದೇಶಕ ಶಂಕರ ಮಲಪುರೆ ಅವರು ಜಿಲ್ಲಾಸ್ಪತ್ರೆಯಲ್ಲಿಯೇ ತೆರೆದ ಶಸ್ತ್ರ ಚಿಕಿತ್ಸೆ ಮೂಲಕ ಪ್ರೋಸ್ಪೇಟ್ ಗಡ್ಡೆಯನ್ನು ತೆಗೆದು, ಮೂತ್ರ ವಿಸರ್ಜನೆಯ ತೊಂದರೆ ಎದುರಿಸುತ್ತಿದ್ದ ರೋಗಿಗಳು ನಿರಾಳರಾಗುವಂತೆ ಮಾಡಿದ್ದಾರೆ.
     ಬೆಳಿಗ್ಗೆಯಿಂದ ಮೂತ್ರ ಮಾಡ್ಲಿಕ್ಕೆ ಆಗಿಲ್ಲ, ನೋವು ತಡಕೊಳಾಕ ಆಗ್ತಾ ಇಲ್ಲ ಏನಾದ್ರು ಮಾಡ್ರಿ ಡಾಕ್ಟ್ರೆ ಎಂದು ವಯಸ್ಕರೊಬ್ಬರು ಕೂಗುತ್ತಿದ್ದರೆ, ಇನ್ನೊಬ್ಬರು ದೋತ್ರವೆಲ್ಲ ಮೂತ್ರದಿಂದ ಒದ್ದೆಯಾಗಿ ಮುಜುಗರದಿಂದ ಅಸಹ್ಯ ಪಡುತ್ತ ಎಲ್ಲರಿಂದ ದೂರವಿರಲು ಪ್ರಯತ್ನಿಸುವುದನ್ನು ಕೆಲವು ವಯಸ್ಕರಲ್ಲಿ ಕಾಣುತ್ತೇವೆ. ಇದಕ್ಕೆ ಪ್ರೋಸ್ಟೇಟ್ ಕಾರಣವಿರಬಹುದು.   ಪ್ರತಿ ಪುರುಷರಲ್ಲಿ ಒಳಪುರುಷ ಜನನಾಂಗವಾಗಿ ಪ್ರೊಸ್ಟೇಟ ಎಂಬ ಅವಯವ, ಮೂತ್ರಕೋಶದ ದ್ವಾರಕ್ಕೆ ಸುತ್ತುವರಿದಿರುತ್ತದೆ. ಈ ಜನನಾಂಗವು ರೇಚಕ ರಾಸಾಯನಿಕ ದ್ರವ್ಯ(Harmone) ಕ್ಕೆ ಸ್ಪಂದಿಸುತ್ತಾ, ವೀರ್ಯಕ್ಕೆ ಹಾಗೂ ಸಂತಾನೋತ್ಪತ್ತಿಗೆ ಕೊಡುಗೆ ನೀಡುತ್ತದೆ. ವೃದ್ದಾಪ್ಯ ಸಮೀಪಿಸುತ್ತಿದ್ದಂತೆ ಗೆಡ್ಡೆಯ ಗಾತ್ರ ಸಹ ಬೆಳೆಯುವುದು ಸಾಮಾನ್ಯ.   ಕೆಲವೊಂದು ಸಲ ಗಾತ್ರ ಚಿಕ್ಕದಾಗಲೂಬಹುದು. ಗಾತ್ರದ ಹೊರತಾಗಿ ವಯಸ್ಕ ಪುರುಷರಲಿ,್ಲ ಮೂತ್ರ ವಿಸರ್ಜನೆಗೆ ತಡೆ ಉಂಟುಮಾಡಬಹುದು. ಪ್ರೋಸ್ಟೇಟನಿಂದಾಗಿ ತೊಂದರೆಯಾದ ಪುರುಷರಿಗೆ ಬಹಳ ಸಲ ಮೂತ್ರ ಮಾಡುವದು,  ತಡೆದುಕೊಳ್ಳಲು ಸಾಧ್ಯವಾಗದಿರುವುದು, ಬೇಗನೆ ಮೂತ್ರ ಬಾರದಿರುವುದು ಅಥವಾ ಕೆಲವು ಸಲ ಒಮ್ಮೆಗೆ ಮೂತ್ರ ವಿಸರ್ಜನೆಗೆ ಅಸಾಧ್ಯವಾಗುವುದು ಮುಂತಾದ ಲಕ್ಷಣಗಳು ಕಂಡುಬರುತ್ತವೆ.  ನಿರ್ಲಕ್ಷ ವಹಿಸಿದಲ್ಲಿ ಮೂತ್ರಪಿಂಡಗಳ ವೈಫಲ್ಯವೂ ಆಗಬಹುದು. ರೋಗ ಲಕ್ಷಣ, ರೋಗಚಿನ್ಹೆ ಹಾಗೂ ಪ್ರೋಸ್ಟೇಟ ಗ್ರಂಥಿಯನ್ನು ಗುದದ್ವಾರದ ಮೂಲಕ ಬೆರಳಿನಿಂದ ತಪಾಸಣೆ ನೆಡೆಸಿ ಹಾಗೂ ಅಲ್ಟ್ರಾಸೌಂಡ ಸ್ಕ್ಯಾನಿನಿಂದ ತಪಾಸಣೆ ನಡೆಸಿ ಕಾಯಿಲೆಯ ತೀವ್ರತೆ ಹಾಗೂ ಶಸ್ತ್ರಚಿಕಿತ್ಸೆಯ ಅವಶ್ಯಕತೆಯನ್ನು ಸುಲಭವಾಗಿ ನಿರ್ಧರಿಸಬಹುದು.  ಮಾತ್ರೆಗಳಿಂದ ತಾತ್ಕಾಲಿಕವಾಗಿ ಪರಿಹಾರ ಹೊಂದಬಹುದು.
        ಇತ್ತೀಚೆಗೆ ಮೂತ್ರರೋಗ ತಜ್ಞರು ದುರ್ಬಿನಿನಿಂದ, ತಡೆ ಒಡ್ಡುತ್ತಿರುವ ಪ್ರೋಸ್ಟೇಟ ಭಾಗವನ್ನು ತೆಗೆದು ಮೂತ್ರ ವಿಸರ್ಜನೆ ಸರಾಗವಾಗುವಂತೆ ಮಾಡುತ್ತಾರೆ. ಹಲವು ಸಲ ವೈಯಕ್ತಿಕ ಕಾರಣಗಳಿಂದಾಗಿ, ಹಣಕಾಸಿನ ತೊಂದರೆಯಿಂದಾಗಿ ಅಥವಾ ಅತಿಯಾಗಿ ಬೆಳೆದ ಪ್ರೋಸ್ಟೇಟ ಗಡ್ಡ್ಡೆಯನ್ನು ತೆರೆದ ಶಸ್ತ್ರಚಿಕಿಸ್ತೆಯಿಂದ ತೆಗೆಯಬೇಕಾಗುತ್ತದೆ.  ಇಂತಹ ಕಾಯಿಲೆಯಿಂದ ಬಳಲುತ್ತಿದ್ದ 56 ಮತ್ತು 58 ವರ್ಷದ ವ್ಯಕ್ತಿಗಳಿಗೆ ಕಿಮ್ಸ್ ಕೊಪ್ಪಳ ನಿರ್ದೇಶಕರಾದ ಡಾ|| ಶಂಕರ ಮಲಪುರೆಯವರು ತೆರೆದ ಪ್ರೋಸ್ಟೇಟ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿರುತ್ತಾರೆ, ರೋಗಿಗಳು ಈಗ ಯಾವುದೇ ತೊಂದರೆ ಇಲ್ಲದೆ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. 
     ಕೊಪ್ಪಳದ ಕಿಮ್ಸ್ ನಲ್ಲಿ ಇಂತಹ ಅಪರೂಪದ ಶಸ್ತ್ರಚಿಕಿತ್ಸೆಗಳು ಯಶಸ್ವಿಯಾಗುತ್ತಿದ್ದು, ಬಡ ಜನರಿಗೆ ಉತ್ತಮ ಚಿಕಿತ್ಸೆ ದೊರಕಿಸುವ ಮೂಲಕ ಕಿಮ್ಸ್ ಸಂಸ್ಥೆಯು ಜನಮನ್ನಣೆ ಗಳಿಸುವುದರಲ್ಲಿ ಸಂದೇಹವಿಲ್ಲ ಎನ್ನುತ್ತಾರೆ ಕಿಮ್ಸ್ ನಿರ್ದೇಶಕ ಡಾ. ಶಂಕರ ಮಲಪುರೆ ಅವರು.

ಡಿಜಿಟಲ್ ಇಂಡಿಯಾ ಪ್ರಚಾರ ಆಂದೋಲನಕ್ಕೆ ಡಿಸಿ ಕನಗವಲ್ಲಿ ಚಾಲನೆ


ಕೊಪ್ಪಳ, ಸೆ.23  (ಕರ್ನಾಟಕ ವಾರ್ತೆ): ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಕುರಿತ ಮಾಹಿತಿ ನೀಡುವ ಡಿಜಿಟಲ್ ಇಂಡಿಯಾ ಪ್ರಚಾರ ವಾಹನಕ್ಕೆ ಗುರುವಾರ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ಜಿಲ್ಲಾಡಳಿತ ಭವನದ ಆವರಣದಲ್ಲಿ ಚಾಲನೆ ನೀಡಿದರು.

     ವಿಶೇಷ ಕ್ಯಾಂಪೇನ್ ವಾಹನದ ಮೂಲಕ ಜನಸಾಮಾನ್ಯರಿಗೆ ಅವಶ್ಯವಿರುವ ವಿವಿಧ ಸೇವೆ ಪಡೆಯುವ ಕುರಿತು ವಿವರಣೆ ನೀಡಲಾಗುವುದು.  ಡಿಜಿ ಲಾಕರ್ ಸೇವೆ ಬಳಸುವ ಕುರಿತು ಹಾಗೂ ಆಧಾರ ಕಾರ್ಡ್ ನೋಂದಣಿ, ಕಾಮನ್ ಸರ್ವಿಸ್ ಸೆಂಟರ್‍ಗಳಲ್ಲಿ ದೊರೆಯುವ ಸೇವೆಗಳ ಕುರಿತು ವಿಡಿಯೋ ಪ್ರಾತ್ಯಕ್ಷಿತೆ, ಜನಧನ ಹಾಗೂ ಇತರೆ ಯೋಜನೆಗಳ ವಿವರಗಳನ್ನು ವಾಹನದಲ್ಲಿ ಅಳವಡಿಸಲಾಗಿರುವ ದೊಡ್ಡ ಪರದೆಯ ಮೂಲಕ ಸಾರ್ವಜನಿಕರಿಗೆ ಸರಳವಾಗಿ ಅರ್ಥವಾಗುವ ರೀತಿಯಲ್ಲಿ ವಿವರಗಳನ್ನು ನೀಡಲಾಗುವುದು.  ವಾಹನವು ಜಿಲ್ಲೆಯ ಆಯ್ದ ಗ್ರಾಮಗಳಲ್ಲಿ 15 ದಿನಗಳ ಕಾಲ 36 ಗ್ರಾಮಗಳಲ್ಲಿ ಸಂಚರಿಸಿ ಯೋಜನೆಗಳ ಕುರಿತು ಮಾಹಿತಿ ನೀಡಲಿದ್ದು ಗ್ರಾಮಸ್ಥರು ಇದರ ಸದುಪಯೋಗ ಪಡೆಯುವಂತೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಮನವಿ ಮಾಡಿಕೊಂಡರು.
     ಈ ಸಂದರ್ಭದಲ್ಲಿ ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿರಿ ಆರ್.ರಾಮಚಂದ್ರನ್, ಅಪರ ಜಿಲ್ಲಾಧಿಕಾರಿ ಡಾ.ರುದ್ರೇಶ್ ಘಾಳಿ, ಎನ್‍ಐಸಿ ಜಿಲ್ಲಾ ಅಧಿಕಾರಿ ವೀರಣ್ಣ ಏಳುಬಾವಿ ಮುಂತಾದವರು ಉಪಸ್ಥಿತರಿದ್ದರು.

ಸೆ.28 ರಂದು ಕೊಪ್ಪಳದಲ್ಲಿ ಮಿನಿ ಉದ್ಯೋಗ ಮೇಳ

ಕೊಪ್ಪಳ, ಸೆ.23  (ಕರ್ನಾಟಕ ವಾರ್ತೆ): ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗೂ ಸಾಯಿ ಬಯೋ ಫರ್ಟಿಲೈಜರ್ ಹುಬ್ಬಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಫೀಲ್ಡ್ ಆಫಿಸರ್ ಮತ್ತು ಗ್ರೂಪ್ ಲೀಡರ್ ಹುದ್ದೆಗಳ ಭರ್ತಿಗಾಗಿ ಸೆ. 28 ರಂದು ಬೆಳಿಗ್ಗೆ 10. 30 ರಿಂದ ಮ. 3 ಗಂಟೆಯವರೆಗೆ ಕೊಪ್ಪಳ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಮಿನಿ ಉದ್ಯೋಗ ಮೇಳ ಆಯೋಜಿಸಲಾಗಿದೆ.
ಆಸಕ್ತ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಪಾಲ್ಗೊಳ್ಳಬಹುದು. ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಫೀಲ್ಡ್ ಆಫಿಸರ್ ಹುದ್ದೆಗಾಗಿ ಎಸ್‍ಎಸ್‍ಎಲ್‍ಸಿ ಪಾಸಾಗಿರಬೇಕು. ವಯೋಮಿತಿ 18 ರಿಂದ 30 ವರ್ಷದೊಳಗಿರಬೇಕು. ಗ್ರೂಪ್ ಲೀಡರ್ ಹುದ್ದೆಗೆ ಯಾವುದೇ ಪದವಿ ಪಡೆದಿರಬೇಕು. ವಯೋಮಿತಿ 18 ರಿಂದ 30 ವರ್ಷದೊಳಗಿರಬೇಕು. ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಎಲ್ಲಾ ದಾಖಲಾತಿಗಳೊಂದಿಗೆ ಹಾಜರಾಗಬೇಕು. 
       ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಜಿಲ್ಲಾಡಳಿತ ಭವನ, ಮೊದಲನೇ ಮಹಡಿ, ಕೊಪ್ಪಳ ದೂ.ಸಂ:08539-220859 ಇಲ್ಲಿಗೆ ಸಂಪರ್ಕಿಸಬಹುದು ಎಂದು ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾ ಮಟ್ಟದ ಸ್ತ್ರೀ ಶಕ್ತಿ ಒಕ್ಕೂಟ ರಚನೆ

ಕೊಪ್ಪಳ, ಸೆ.23  (ಕರ್ನಾಟಕ ವಾರ್ತೆ): ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಇತ್ತೀಚೆಗೆ ಜಿಲ್ಲಾ ಮಟ್ಟದ ಸ್ತ್ರೀಶಕ್ತಿ ಒಕ್ಕೂಟ ರಚನೆ ಮಾಡಿದೆ.
     ಜಿಲ್ಲಾ ಮಟ್ಟದ ಸ್ತ್ರೀಶಕ್ತಿ ಒಕ್ಕೂಟಕ್ಕೆ ದಾನ ಚಿಂತಾಮಣಿ ಅತ್ತಿಮಬ್ಬೆ ಸ್ತ್ರೀಶಕ್ತಿ ಒಕ್ಕೂಟ ಎಂದು ನಾಮಕರಣ ಮಾಡಲಾಗಿದೆ.  ಜಿಲ್ಲಾ ಮಟ್ಟದ ಒಕ್ಕೂಟದ ವಿವರ ಇಂತಿದೆ: ಪ್ರೇಮಲತಾ ಬಸನಗೌಡ (ಜಿಲ್ಲಾಧ್ಯಕ್ಷೆ), ಶಂಕ್ರಮ್ಮ ಚಂದ್ರಶೇಖರ (ಉಪಾಧ್ಯಕ್ಷೆ), ಮಂಜುಳಾ ಸತ್ಯನಾರಾಯಣ ರೆಡ್ಡಿ( ಪ್ರಧಾನ ಕಾರ್ಯದರ್ಶಿ), ಮಲ್ಲಮ್ಮ ಶರಣಪ್ಪ (ಸಹ ಕಾರ್ಯದರ್ಶಿ), ಶಕುಂತಲಾ ಬಸವರಾಜ (ಸಂಘಟನಾ ಕಾರ್ಯದರ್ಶಿ), ಖಾಜಾಬನಿ ಶೇಖ್ ಹುಸೇನ್ (ಖಜಾಂಚಿ), ಸದಸ್ಯರುಗಳಾಗಿ ಮಾಲತಿ ನಾಗೇಶ್ವರರಾವ್, ಪಾವನಿ ಗಂನಾಗೇಶ್ವರರಾವ್, ಗಂಗಮ್ಮ ಮಲ್ಲಪ್ಪ, ಸುಬೇರಾಬೇಗಂ ಲಾಲಸಾಬ್, ಈರಮ್ಮ ಮಂಜುನಾಥ, ನೀಲಮ್ಮ ಮಲ್ಲಪ್ಪ, ಈರಮ್ಮ ನಾಗಪ್ಪ, ಶಂಕ್ರಮ್ಮ ಚಂದಪ್ಪ ಆಯ್ಕೆಯಾಗಿದ್ದಾರೆ. ಒಟ್ಟು 14 ಜನ ಸದಸ್ಯರನ್ನೊಳಗೊಂಡ ಒಕ್ಕೂಟವನ್ನು ಜಿಲ್ಲಾ ನಿರೂಪಣಾಧಿಕಾರಿ ಮಂಜುನಾಥ ನೇತೃತ್ವದಲ್ಲಿ ರಚನೆ ಮಾಡಲಾಯಿತು ಎಂದು ಪ್ರಕಟಣೆ ತಿಳಿಸಿದೆ.

ಸೆ. 25 ರಂದು ಈಶಾನ್ಯದ ಐಸಿರಿ ಸರಣಿಯ 02 ನೇ ಸಂಚಿಕೆ ಪ್ರಸಾರ

ಕೊಪ್ಪಳ ಸೆ. 23 (ಕರ್ನಾಟಕ ವಾರ್ತೆ): ಹೈದ್ರಾಬಾದ್ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿ, ಇಲ್ಲಿನ ಕಲೆ, ಸಂಸ್ಕøತಿ, ಐತಿಹಾಸಿಕ ಹಾಗೂ ಪ್ರವಾಸಿ ತಾಣಗಳು, ಇಲ್ಲಿನ ಪ್ರತಿಭೆಗಳು, ಸಾಧಕರು ಮುಂತಾದ ಸಂಗತಿಗಳನ್ನು ಪರಿಚಯಿಸುವ “ಈಶಾನ್ಯದ ಐಸಿರಿ” ಸರಣಿಯ ಎರಡನೆ ಸಂಚಿಕೆ ಸೆಪ್ಟಂಬರ್ 25 ರಂದು ಬೆಳಿಗ್ಗೆ 9-55 ಗಂಟೆಗೆ ಹೊಸಪೇಟೆ, ರಾಯಚೂರು ಹಾಗೂ ಕಲಬುರಗಿ ಆಕಾಶವಾಣಿ ಕೇಂದ್ರಗಳಿಂದ ಏಕಕಾಲಕ್ಕೆ ಪ್ರಸಾರವಾಗಲಿದೆ.
        ಹೈ.ಕ. ಪ್ರದೇಶ ಅಭಿವೃದ್ಧಿ ಮಂಡಳಿ ಈ ಸಂಪೂರ್ಣ ಸರಣಿಯನ್ನು ಪ್ರಾಯೋಜಿಸಿದ್ದು, ಎರಡನೆ  ಸಂಚಿಕೆಯಲ್ಲಿ ಮೂಡಿ ಬರಲಿರುವ ಕಾರ್ಯಕ್ರಮದ ವಿವರಗಳು ಹೀಗಿವೆ.  ಆಸ್ತಿ ವರ್ಗಾವಣೆ – ಮ್ಯೂಟೇಷನ್ ಕುರಿತು ನಿವೃತ್ತ ನ್ಯಾಯಮೂರ್ತಿಗಳಾದ ಎಮ್.ಬಿ.ಬಿರಾದರ ಅವರಿಂದ ಮಾಹಿತಿ.  CET/ NEET (ನೀಟ್) ಪರೀಕ್ಷೆಗಳ ಕುರಿತಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕರಾದ ಎನ್.ಬಿ.ಪಾಟೀಲ ಅವರಿಂದ ವಿಶೇಷ ಮಾಹಿತಿ.  ಸಾಧಕ ನಟ - ನಿರ್ದೇಶಕ ಯುಸೂಫ್ ಅವರೊಂದಿಗೆ ಮಾತುಕತೆ.  ಬಸವಕಲ್ಯಾಣ ತಾಲೂಕಿನ ಮೈಸಲಗಾ ಗ್ರಾಮದ ಸೌಭಾಗ್ಯಲಕ್ಷ್ಮೀ ಸ್ವ ಸಹಾಯ ಸಂಘದ ಪರಿಚಯ.  ಕವಿತಾ ಷಣ್ಮುಖ ಅವರಿಂದ ಹಾಡು.  ಊರು – ಟೂರಿನಲ್ಲಿ ಶಹಾಪೂರ ತಾಲೂಕಿನ ಪ್ರೇಕ್ಷಣೀಯ ಸ್ಥಳಗಳ ದರ್ಶನ.  ಬೀದರ ಜಿಲ್ಲೆ ಬಗದಲ್ ಗ್ರಾಮದ ಹಾಸ್ಯ ಕಲಾವಿದ ವೈಜನಾಥ ಸಜ್ಜನ ಶೆಟ್ಟಿ ಅವರಿಂದ ನಗೆಹನಿ.
      ಇವುಗಳಲ್ಲದೆ ಕಳೆದ ವಾರದಲ್ಲಿ ಈ ಭಾಗದ ಆರು ಜಿಲ್ಲೆಗಳಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಕಾರ್ಯಕ್ರಮಗಳು, ಘಟಿಸಿದ ಪ್ರಮುಖ ಸಂಗತಿಗಳನ್ನು ಒಳಗೊಂಡ ವಾರದ ವರದಿ, ನುಡಿಮುತ್ತು, ಪುಟ್ಟ ಸಂದೇಶಗಳು ಮೂಡಿ ಬರಲಿವೆ.  ಸರಣಿಯ ನಿರೂಪಣಾ ಸಾಹಿತ್ಯ ಹಾಗೂ ನಿರ್ಮಾಣದ ಜವಾಬ್ದಾರಿಯನ್ನು ಸೋಮಶೇಖರ ಎಸ್. ರುಳಿಯವರು ವಹಿಸಿಕೊಂಡಿದ್ದಾರೆ ಎಂದು ಕಲಬುರಗಿ ಆಕಾಶವಾಣಿ ಕೇಂದ್ರದ ಮುಖ್ಯಸ್ಥೆ ಅಂಜನಾ ಯಾತನೂರ ತಿಳಿಸಿದ್ದಾರೆ.

ಗಂಗಾವತಿ : ಅಂಬೇಡ್ಕರ್ ನಿವಾಸ ಯೋಜನೆಯಡಿ ವಸತಿ ಸೌಲಭ್ಯ- ಅರ್ಜಿ ಆಹ್ವಾನ

ಕೊಪ್ಪಳ ಸೆ. 23 (ಕರ್ನಾಟಕ ವಾರ್ತೆ): ಗಂಗಾವತಿ ನಗರಸಭೆ ವತಿಯಿಂದ 2016-17 ಮತ್ತು 2017-18 ನೇ ಸಾಲಿನ ಡಾ. ಬಿ.ಆರ್. ಅಂಬೇಡ್ಕರ್ ನಿವಾಸ ಯೋಜನೆಯಡಿ ವಸತಿ ಸೌಲಭ್ಯ ಕಲ್ಪಿಸಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
     ಡಾ. ಬಿ.ಆರ್. ಅಂಬೇಡ್ಕರ್ ನಿವಾಸ ಯೋಜನೆಯಡಿ 2016-17 ಮತ್ತು 2017-18 ನೇ ಸಾಲಿಗಾಗಿ ಶ್ರೇಣಿಯಡಿ ಮನೆಗಳನ್ನು ನಿರ್ಮಿಸಲು ಗುರಿ ನಿಗದಿಪಡಿಸಲಾಗಿದೆ.  ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿ ಖಾಯಂ ಆಗಿ ವಾಸವಾಗಿರುವ ನಿವೇಶನ ಹೊಂದಿದ ವಸತಿ ರಹಿತರು ಅರ್ಜಿ ಸಲ್ಲಿಸಬಹುದು.  ಅರ್ಜಿದಾರರು ಮಹಿಳಾ ಫಲಾನುಭಿಗಳಾಗಿರಬೇಕು.  ಆದರೆ ಮಾಜಿ ಯೋಧರು, ವಿಧುರರು, ಅಂಗವಿಕಲರು ಮತ್ತು ಹಿರಿಯ ನಾಗರೀಕರಾಗಿದ್ದಲ್ಲಿ ಪುರುಷರು ಸಹ ಅರ್ಜಿ ಸಲ್ಲಿಸಬಹುದು.    ನಿವೇಶನಕ್ಕೆ ಸಂಬಂಧಿಸಿದ ದಾಖಲೆಗಳು ಪುರುಷರ ಹೆಸರಿನಲ್ಲಿ ಇದ್ದಲ್ಲಿ, ರೂ. 20 ರ ಛಾಪಾ ಕಾಗದದ ಮೇಲೆ ಒಪ್ಪಿಗೆ ಪತ್ರವನ್ನು ನೀಡಬೇಕು.  ಸ್ವಂತ ಹೆಸರಿನಲ್ಲಿ ಅಥವಾ ಕುಟುಂಬದ ಇತರೆ ಸದಸ್ಯರ ಹೆಸರಿನಲ್ಲಿ ವಸತಿ/ಮನೆ ಹೊಂದಿಲ್ಲವೆಂದು ಮತ್ತು ಸರ್ಕಾರದ ಇತರೆ ಯೋಜನೆಯಡಿ ವಸತಿ ಸೌಲಭ್ಯ ಪಡೆದಿಲ್ಲವೆಂದು 50 ರೂ. ಛಾಪಾ ಕಾಗದದ ಮೇಲೆ ಮುಚ್ಚಳಿಕೆ ಪತ್ರ ಬರೆದುಕೊಡಬೇಕು.
     ಅರ್ಜಿಯೊಂದಿಗೆ ಪಾಸ್‍ಪೋರ್ಟ್ ಅಳತೆಯ 04 ಭಾವಚಿತ್ರ, ಆಸ್ತಿ (ನಿವೇಶನ/ಜಾಗ)ಕ್ಕೆ ಸಂಬಂಧಿಸಿದ ದಾಖಲಾತಿಗಳು, ಹಕ್ಕುಪತ್ರ/ಕ್ರಮಪತ್ರ/ದಾನಪತ್ರ.  ಫಾರಂ ನಂ. 03/ಖಾತಾ ನೋಂದಣಿ / ಖಾತಾ ವರ್ಗಾವಣೆ/ ಚಾಲ್ತಿ ಸಾಲಿನ ತೆರಿಗೆ ರಸೀದಿ.  ನಿವೇಶನದ (ಜಾಗ/ ಕಚ್ಚಾಮನೆ/ ಬಿದ್ದಮನೆ/ ಗುಡಿಸಲು) ಪ್ರಸ್ತುತ ಸ್ಥಿತಿಯ ಭಾವಚಿತ್ರ.  ಚುನಾವಣಾ ಗುರುತಿನ ಚೀಟಿ/ ಆಧಾರ್ ಕಾರ್ಡ್/ ರೇಷನ್ ಕಾರ್ಡ್.  ಜಾತಿ ಆದಾಯ ಪ್ರಮಾಣಪತ್ರ ಲಗತ್ತಿಸಿ ಪೌರಾಯುಕ್ತರು, ನಗರಸಭೆ, ಗಂಗಾವತಿ ಇವರಿಗೆ ಅಕ್ಟೋಬರ್ 07 ರ ಒಳಗಾಗಿ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

Thursday, 22 September 2016

ಜಿಲ್ಲಾ ಉಸ್ತುವಾರಿ ಸಚಿವರ ಪರಿಷ್ಕøತ ಪ್ರವಾಸ ಕಾರ್ಯಕ್ರಮ

ಕೊಪ್ಪಳ ಸೆ. 22 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಪರಿಷ್ಕøತಗೊಂಡಿದೆ.
     ಪರಿಷ್ಕøತ ಪ್ರವಾಸ ಪಟ್ಟಿಯನ್ವಯ ಸಚಿವರು ಹಂಪಿ ಎಕ್ಸ್‍ಪ್ರೆಸ್ ರೈಲಿನ ಮೂಲಕ ಸೆ. 24 ರಂದು ಬೆಳಿಗ್ಗೆ 8 ಗಂಟೆಗೆ ಕೊಪ್ಪಳಕ್ಕೆ ಆಗಮಿಸುವರು.  ನಂತರ ಬೆಳಿಗ್ಗೆ 10-30 ಗಂಟೆಗೆ ಕುಷ್ಟಗಿಗೆ ಆಗಮಿಸಿ ತಾಲೂಕು ಮಟ್ಟದ ಜನಸಂಪರ್ಕ ಸಭೆಯಲ್ಲಿ ಭಾಗವಹಿಸುವರು.  ಮಧ್ಯಾಹ್ನ 03 ಗಂಟೆಗೆ ಯಲಬುರ್ಗಾಕ್ಕೆ ಆಗಮಿಸಿ ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ಕೈಗೊಳ್ಳುವರು.  ರಾತ್ರಿ 7-45 ಗಂಟೆಗೆ ಕೊಪ್ಪಳಕ್ಕೆ ಆಗಮಿಸಿ ಹಂಪಿ ಎಕ್ಸ್‍ಪ್ರೆಸ್ ರೈಲಿನ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸುವರು.

ಸೆಪ್ಟಂಬರ್ ತಿಂಗಳ ಪಡಿತರ ಧಾನ್ಯ ಬಿಡುಗಡೆ

ಕೊಪ್ಪಳ, ಸೆ. 22 (ಕರ್ನಾಟಕ ವಾರ್ತೆ) : ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ  ಇಲಾಖೆಯು ಕೊಪ್ಪಳ ಜಿಲ್ಲೆಯ ನಗರ, ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶದ ಪಡಿತರದಾರರಿಗೆ ಸೆಪ್ಟಂಬರ್ ತಿಂಗಳಿಗಾಗಿ ಆಹಾರಧಾನ್ಯ, ಸಕ್ಕರೆ, ಸೀಮೆಎಣ್ಣೆ, ತಾಳೆಎಣ್ಣೆ ಮತ್ತು ಆಯೋಡಿನ್‍ಯುಕ್ತ ಉಪ್ಪು ಬಿಡುಗಡೆ ಮಾಡಿದೆ.
       ಕೊಪ್ಪಳ ಜಿಲ್ಲೆಯ ಅಂತ್ಯೋದಯ ಕಾರ್ಡುದಾರರಿಗೆ ಉಚಿತವಾಗಿ 29 ಕೆ.ಜಿ ಅಕ್ಕಿ, 6 ಕೆ.ಜಿ ಗೋಧಿ, ಕೆ.ಜಿ ಗೆ 15 ರೂ.ಗಳಂತೆ 01 ಕೆ.ಜಿ ಸಕ್ಕರೆ, ಲೀಟರ್‍ಗೆ 25 ರೂ.ಗಳಂತೆ 01 ಲೀ ತಾಳೆ ಎಣ್ಣೆ ಹಾಗೂ ಕೆ.ಜಿ ಗೆ 02 ರೂ.ಗಳಂತೆ 01.ಕೆ.ಜಿ ಉಪ್ಪು ಬಿಡುಗಡೆ ಮಾಡಲಾಗಿದೆ.
       ಬಿಪಿಎಲ್ ಪಡಿತರದಾರರಿಗೆ ಯಾವುದೇ ಪರಿಮಿತಿಯಿಲ್ಲದೇ ಪ್ರತಿ ಸದಸ್ಯರಿಗೆ ಉಚಿತವಾಗಿ 03 ಕೆ.ಜಿ ಅಕ್ಕಿ, 2 ಕೆ.ಜಿ ಗೋಧಿ, ಕೆ.ಜಿ ಗೆ 15 ರೂ.ಗಳಂತೆ 01 ಕೆ.ಜಿ ಸಕ್ಕರೆ, ಲೀಟರ್‍ಗೆ 25 ರೂ.ಗಳಂತೆ 01.ಲೀ ತಾಳೆ ಎಣ್ಣೆ ಹಾಗೂ ಕೆ.ಜಿ ಗೆ 02 ರೂ.ಗಳಂತೆ 01 ಕೆ.ಜಿ ಉಪ್ಪು ಬಿಡುಗಡೆ ಮಾಡಲಾಗಿದೆ.
      ಎಪಿಎಲ್ ಪಡಿತರ ಚೀಟಿದಾರರಿಗೆ ಕೆ.ಜಿ ಗೆ 15 ರೂ.ನಂತೆ ಏಕ ಸದಸ್ಯರಿಗೆ 03, ದ್ವಿ ಮತ್ತು ಹೆಚ್ಚಿನ ಸದಸ್ಯರಿಗೆ 05 ಕೆ.ಜಿ  ಅಕ್ಕಿ, ಕೆ.ಜಿ.ಗೆ 10.ರೂ.ನಂತೆ ಏಕ ಸದಸ್ಯರಿಗೆ 02, ದ್ವಿ ಮತ್ತು ಹೆಚ್ಚಿನ ಸದಸ್ಯರಿಗೆ 05 ಕೆ.ಜಿ ಗೋಧಿ ಬಿಡುಗಡೆ ಮಾಡಲಾಗಿದೆ.
       ಅಂತ್ಯೋದಯ ಪಡಿತರ ಚೀಟಿದಾರರಿಗೆ (ಪಟ್ಟಣ/ಗ್ರಾಮಾಂತರ ಪ್ರದೇಶದವರಿಗೆ)  1 ಮತ್ತು 2 ಸದಸ್ಯರಿಗೆ 3 ಲೀ. ಸೀಮೆ ಎಣ್ಣೆ, 3 ಮತ್ತು ಅದಕ್ಕಿಂತ ಮೇಲ್ಪಟ್ಟ ಸದಸ್ಯರಿದ್ದಲ್ಲಿ 03 ಲೀಟರ್. ಬಿಪಿಎಲ್ ಅನಿಲ ರಹಿತ ಕುಟುಂಬಗಳಿಗೆ (ಪಟ್ಟಣ/ಗ್ರಾಮಾಂತರ ಪ್ರದೇಶದವರಿಗೆ)  1 ಮತ್ತು 2 ಜನ ಸದಸ್ಯರಿದ್ದಲ್ಲಿ 3 ಲೀಟರ್ ಹಾಗೂ 3 ಮತ್ತು ಮೇಲ್ಪಟ್ಟ ಸದಸ್ಯರಿದ್ದಲ್ಲಿ 03 ಲೀ. ಸೀಮೆಎಣ್ಣೆ ಹಂಚಿಕೆ ಮಾಡಲಾಗಿದೆ. ಗ್ರಾಮಾಂತರ ಪ್ರದೇಶದ ಅನಿಲ ರಹಿತ ಎ.ಪಿ.ಎಲ್ ಪಡಿತರದಾರರಿಗೆ 02 ಲೀ. ಸೀಮೆಎಣ್ಣೆ ಬಿಡುಗಡೆ ಮಾಡಲಾಗಿದೆ. ಸೀಮೆಎಣ್ಣೆ ಪ್ರತಿ ಲೀಟರ್‍ಗೆ ರೂ.18 ರಂತೆ ದರ ನಿಗದಿಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಅಂಗವಿಕಲರ ಗುರುತಿನ ಚೀಟಿ ದುರ್ಬಳಕೆ ತಡೆಗೆ ಅಗತ್ಯ ಕ್ರಮ ಜರುಗಿಸಿ- ಡಾ. ರುದ್ರೇಶ್ ಘಾಳಿ


ಕೊಪ್ಪಳ ಸೆ. 22 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಅಂಗವಿಕಲರಿಗೆ ನೀಡಲಾಗುತ್ತಿರುವ ಗುರುತಿನ ಚೀಟಿಯನ್ನು, ಕೆಲವರು ಸಂದರ್ಭಕ್ಕೆ ಹಾಗೂ ಬೇಡಿಕೆಗೆ ಅನುಗುಣವಾಗಿ, ಅಂಗವೈಕಲ್ಯತೆಯ ಪ್ರಮಾಣವನ್ನು ಬದಲಾಯಿಸಿಕೊಂಡು, ದುರ್ಬಳಕೆ ಮಾಡಿಕೊಳ್ಳುತ್ತಿರುವ ಕುರಿತು ವ್ಯಾಪಕವಾಗಿ ದೂರುಗಳು ಕೇಳಿ ಬರುತ್ತಿವೆ.  ಈ ನಿಟ್ಟಿನಲ್ಲಿ ಇಂತಹ ದುರ್ಬಳಕೆಯನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕೊಪ್ಪಳ ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರದಂದು ಏರ್ಪಡಿಸಲಾಗಿದ್ದ ವಿಕಲಚೇತನರ ಕುಂದುಕೊರತೆ ನಿವಾರಣೆ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಿಂದ ಜಿಲ್ಲೆಯಲ್ಲಿ ಅಂಗವಿಕಲರಿಗೆ ತಜ್ಞ ವೈದ್ಯರ ಶಿಫಾರಸ್ಸಿಗೆ ಅನುಗುಣವಾಗಿ ಗುರುತಿನ ಚೀಟಿಯನ್ನು ನೀಡಲಾಗುತ್ತಿದೆ.  ಅಂಗವೈಕಲ್ಯದ ಪ್ರಮಾಣವನ್ನು ಕೆಲವರು ಸಂದರ್ಭಕ್ಕೆ ಹಾಗೂ ಬೇಡಿಕೆಗೆ ಅನುಗುಣವಾಗಿ ಬದಲಾಯಿಸಿಕೊಳ್ಳಲು, ಗುರುತಿನ ಚೀಟಿಯನ್ನು ಪಡೆದಿದ್ದರೂ, ಕಳೆದು ಹೋಗಿದೆ ಎಂಬುದಾಗಿ ಸುಳ್ಳು ಹೇಳಿ, ಪದೇ ಪದೇ ಗುರುತಿನ ಚೀಟಿ ಪಡೆದುಕೊಳ್ಳಲು ಮುಂದಾಗುತ್ತಿದ್ದಾರೆ.  ಮಾಸಾಶನ, ಸರ್ಕಾರದ ವಿವಿಧ ಸೌಲಭ್ಯ ಪಡೆಯಲು ಹೆಚ್ಚು ಅಂಗವೈಕಲ್ಯ ಪ್ರಮಾಣವನ್ನು ನಮೂದಿಸಬೇಕು, ಉದ್ಯೋಗ, ತ್ರಿಚಕ್ರ ಮೋಟಾರು ವಾಹನ ಹಾಗೂ ಇನ್ನಿತರೆ ಸೌಲಭ್ಯಕ್ಕಾಗಿ ಕಡಿಮೆ ಪ್ರಮಾಣವನ್ನು ನಮೂದಿಸಬೇಕು ಎಂಬುದಾಗಿ ವೈದ್ಯರ ಮೇಲೆ ಒತ್ತಡ ಹೇರುತ್ತಿದ್ದಾರೆ.  ಅಲ್ಲದೆ, ಒಮ್ಮೆ ಗುರುತಿನ ಚೀಟಿ ಪಡೆದಿದ್ದರೂ, ಪದೇ ಪದೇ ಸಂದರ್ಭ ಹಾಗೂ ಸೌಲಭ್ಯಕ್ಕೆ ಅನುಗುಣವಾಗಿ ಗುರುತಿನ ಚೀಟಿ ಪಡೆಯಲು, ವೈದ್ಯರಿಂದ ಪ್ರಮಾಣ ಪತ್ರ ಪಡೆಯಲು ಬರುವ ಅಂಗವಿಕಲರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ.  ಇದರಿಂದಾಗಿ ಆಸ್ಪತ್ರೆಯಲ್ಲಿ ಇತರೆ ಕೆಲಸ ನಿರ್ವಹಿಸಲು ತೀವ್ರ ತೊಂದರೆಯಾಗುತ್ತಿದೆ.  ಇಂತಹ ತೊಂದರೆಯನ್ನು ನಿವಾರಿಸಲು, ಅಂಗವಿಕಲರಿಗೆ ಶಾಶ್ವತ ಗುರುತಿನ ಚೀಟಿ ವಿತರಿಸಬೇಕು.  ಇದಕ್ಕೆ ಆಧಾರ್ ಸಂಖ್ಯೆಯನ್ನು ಜೋಡಿಸುವ ಮೂಲಕ ಗಣಕೀಕೃತ ಮಾಹಿತಿ ಇಲಾಖೆಯಲ್ಲಿ ಲಭ್ಯವಾಗಬೇಕು.  ಗುರುತಿನ ಚೀಟಿ ಕಳೆದುಹೋದರೂ, ಹಳೆಯ ದತ್ತಾಂಶದಿಂದ, ಇನ್ನೊಂದು ಗುರುತಿನ ಚೀಟಿ ನೀಡಲು ಸಾಧ್ಯವಿದೆ.  ಇದರಿಂದ ದುರ್ಬಳಕೆ ತಡೆಯಬಹುದಾಗಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ದಾನರೆಡ್ಡಿ ಅವರು ಸಭೆಯ ಗಮನಕ್ಕೆ ತಂದರು.  ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜಗದೀಶ್ ಅವರು, ಜಿಲ್ಲೆಯಲ್ಲಿ ಗುರುತಿನ ಚೀಟಿ ದುರ್ಬಳಕೆ ಆಗುತ್ತಿರುವುದು ತಮ್ಮ ಗಮನಕ್ಕೆ ಬಂದರೂ, ಏನೂ ಮಾಡಲಾಗುತ್ತಿಲ್ಲ ಎಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು.  ಇದನ್ನು ಗಂಭೀರವಾಗಿ ಪರಿಗಣಿಸಿದ ಅಪರ ಜಿಲ್ಲಾಧಿಕಾರಿಗಳು, ಗುರುತಿನ ಚೀಟಿ ದುರ್ಬಳಕೆ ತಡೆಗಟ್ಟುವ ನಿಟ್ಟಿನಲ್ಲಿ ಗಣಕೀಕೃತ ಗುರುತಿನ ಚೀಟಿ ವಿತರಣೆಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಂಡು, ವರದಿ ಸಲ್ಲಿಸುವಂತೆ ಅಂಗವಿಕಲರ ಕಲ್ಯಾಣಾಧಿಕಾರಿಗೆ ಸೂಚನೆ ನೀಡಿದರು.
ಜಿಲ್ಲೆಗೆ 93 ಲಕ್ಷ ಅನುದಾನ : ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜಗದೀಶ್ ಅವರು ಮಾತನಾಡಿ, ಪ್ರಸಕ್ತ ವರ್ಷ ವಿಕಲಚೇತನರಿಗಾಗಿ ವಿದ್ಯಾರ್ಥಿ ವೇತನ, ಸಾಧನ ಸಲಕರಣೆ, ವೈದ್ಯಕೀಯ ಪರಿಹಾರ, ವಿವಾಹ ಪ್ರೋತ್ಸಾಹಧನ ಸೇರಿದಂತೆ ಒಟು 28 ವಿವಿಧ ಯೋಜನೆಗಳಿಗಾಗಿ ಸರ್ಕಾರದಿಂದ 93. 47 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ.  ಪ್ರಸಕ್ತ ವರ್ಷ ಆಗಸ್ಟ್ ಅಂತ್ಯದವರೆಗೆ ಇಲಾಖೆಯಿಂದ 50. 99 ಲಕ್ಷ ಅನುದಾನ ವೆಚ್ಚ ಮಾಡಲಾಗಿದ್ದು, 551 ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಲಾಗಿದೆ ಎಂದರು.  ವಿಕಲಚೇತನರಿಗಾಗಿ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಹೆಚ್ಚಿನ ಪ್ರಚಾರ ನೀಡಬೇಕು.  ಸೌಲಭ್ಯ ಅರ್ಹ ಅಂಗವಿಕಲರಿಗೆ ತಲುಪುವಂತಾಗಬೇಕು.  ಇದುವರೆಗೂ ಯಾವುದೇ ಸೌಲಭ್ಯ ಪಡೆಯದಿರುವ ಅಂಗವಿಕಲರ ಕುರಿತು ಗ್ರಾಮೀಣ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಂದ ಮಾಹಿತಿ ಪಡೆಯಬೇಕು.  ವಿಕಲಚೇತನರು ಹಾಗೂ ಹಿರಿಯ ನಾಗರೀಕರಿಗಾಗಿ ಸರ್ಕಾರದಿಂದ ಸೌಲಭ್ಯ ಪಡೆದು ಸಂಸ್ಥೆಗಳನ್ನು ನಡೆಸುತ್ತಿರುವವರು, ಸಮರ್ಪಕವಾಗಿ ನಡೆಸುತ್ತಿದ್ದಾರೆಯೇ ಇಲ್ಲವೆ ಎಂಬುದರ ಬಗ್ಗೆ ನಿಯಮಿತವಾಗಿ ಭೇಟಿ ನೀಡಿ ಪರಿಶೀಲಿಸಬೇಕು.  ತಾವೂ ಸಹ ಆಕಸ್ಮಿಕ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ಅಪರ ಜಿಲ್ಲಾಧಿಕಾರಿಗಳು ತಿಳಿಸಿದರು.
ಶೇ. 03 ರ ಅನುದಾನದ ಮಾಹಿತಿ ಸಂಗ್ರಹಿಸಿ : ಜಿಲ್ಲೆಯಲ್ಲಿನ ಅರ್ಹ ವಿಕಲಚೇತನರಿಗೆ ತ್ರಿಚಕ್ರ ಮೋಟಾರು ವಾಹನವನ್ನು ವಿತರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಸೂಚನೆ ನೀಡಿದ್ದು, ಈಗಾಗಲೆ ಅರ್ಜಿಯನ್ನು ಆಹ್ವಾನಿಸಲಾಗಿತ್ತು.  ಸುಮಾರು 400 ಅರ್ಜಿಗಳು ಈಗಾಗಲೆ ಸ್ವೀಕೃತಗೊಂಡಿವೆ.  ಅದರಂತೆ ಜಿಲ್ಲೆಯ ಎಲ್ಲ ತಾಲೂಕಾ ಪಂಚಾಯಿತಿ, ನಗರ, ಸ್ಥಳೀಯ ಸಂಸ್ಥೆಗಳು ತಮ್ಮ ಕ್ರಿಯಾ ಯೋಜನೆಯಲ್ಲಿ ಶೇ. 03 ರ ಅನುದಾನದಲ್ಲಿ ಲಭ್ಯವಿರುವ ಅನುದಾನದ ಒಟ್ಟು ಮೊತ್ತದ ವಿವರವನ್ನು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳಿಗೆ ಒಂದು ವಾರದ ಒಳಗಾಗಿ ಸಲ್ಲಿಸುವಂತೆ ಅಪರ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
     ಸಭೆಯಲ್ಲಿ ಪಾಲ್ಗೊಂಡಿದ್ದ ಕೆಲ ವಿಕಲಚೇತನರು, ಶ್ರವಣದೋಷವುಳ್ಳ ಅಂಗವಿಕಲರಿಗೆ ಪರೀಕ್ಷೆ ನಡೆಸಿ ಪ್ರಮಾಣ ಪತ್ರ ನೀಡಲು ಜಿಲ್ಲೆಯಲ್ಲಿ ತಜ್ಞ ವೈದ್ಯರು ಹಾಗೂ ಅಗತ್ಯ ಉಪಕರಣಗಳು ಜಿಲ್ಲೆಯಲ್ಲಿ ಲಭ್ಯವಿಲ್ಲದಿರುವುದರಿಂದ, ಬೆಂಗಳೂರಿಗೆ ತೆರಳಿ ಪರೀಕ್ಷೆಗೆ ಒಳಪಟ್ಟು, ಪ್ರಮಾಣ ಪತ್ರ ಪಡೆದುಕೊಳ್ಳುವ ಸ್ಥಿತಿ ಇದೆ.  ವಿಕಲಚೇತನರಿಗೆ ವೈದ್ಯಕೀಯ ತಪಾಸಣೆ ಶಿಬಿರವನ್ನು ಜಿಲ್ಲಾ ಮಟ್ಟದಲ್ಲಿ ಮಾತ್ರ ಆಯೋಜಿಸುತ್ತಿರುವುದರಿಂದ, ದೂರದ ಊರುಗಳಿಂದ ಬಂದು ಹೋಗಲು ತೊಂದರೆಯಾಗುತ್ತಿದೆ.  ತ್ರಿಚಕ್ರ ಮೋಟಾರು ವಾಹನದ ವಾಹನ ಚಾಲನಾ ಕಲಿಕೆ ಅನುಜ್ಞಾ ಪತ್ರವನ್ನು ಆರ್‍ಟಿಓ ಕಚೇರಿಯಿಂದ ಪಡೆಯಲು ಕೆಲವು ಮಾರ್ಗಸೂಚಿಗಳಿಂದ ಅನಾನುಕೂಲವಾಗುತ್ತಿದೆ.  ದಯಮಾಡಿ ಈ ತೊಂದರೆಯನ್ನು ನಿವಾರಿಸುವಂತೆ ಮನವಿ ಮಾಡಿಕೊಂಡರು.  ಇದಕ್ಕೆ ಪ್ರತಿಕ್ರಿಯಿಸಿದ ಅಪರ ಜಿಲ್ಲಾಧಿಕಾರಿಗಳು, ಶ್ರವಣದೋಷ ಪರೀಕ್ಷೆಗೆ ತಜ್ಞ ವೈದ್ಯರ ನೇಮಕ, ಉಪಕರಣ ಖರೀದಿಗೆ ಕ್ರಮ ವಹಿಸಲು ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಸೂಚನೆ ನೀಡಿದರು.  ಅಲ್ಲದೆ ತ್ರಿಚಕ್ರ ವಾಹನ ಕಲಿಕಾ ಅನುಜ್ಞಾ ಪತ್ರ ನೀಡುವ ಸಂದರ್ಭದಲ್ಲಿ ಅಂಗವಿಕಲರಿಗೆ ವಿನಾಕಾರಣ ತೊಂದರೆ ಕೊಡದೆ, ಕೆಲಸ ಮಾಡಿಕೊಡುವಂತೆ ಆರ್‍ಟಿಓ ಕಚೇರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಸಭೆಯಲ್ಲಿ ಉಪವಿಭಾಗಾಧಿಕಾರಿ ಐ.ಎಸ್. ಶಿರಹಟ್ಟಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ದಾನರಡ್ಡಿ ಸೇರಿದಂತೆ ಎಲ್ಲ ತಾಲೂಕಾ ಪಂಚಾಯಿತಿಗಳ ಕಾರ್ಯನಿವಾಹಕ ಅಧಿಕಾರಿಗಳು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು, ಅಂಗವಿಕಲರು ಪಾಲ್ಗೊಂಡಿದ್ದರು.

ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ಹೆಸರು ನಾಮಕರಣ- ಸಚಿವ ಡಾ. ಎಂ.ಬಿ. ಪಾಟೀಲ

ಕೊಪ್ಪಳ ಸೆ. 22 (ಕರ್ನಾಟಕ ವಾರ್ತೆ): ವಿಜಯಪುರದ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯಕ್ಕೆ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಎಂದು ನಾಮಕರಣಗೊಳಿಸಲು  ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ  ಜಲಸಂಪನ್ಮೂಲ ಹಾಗೂ ವಿಜಯಪುರ ಜಿಲ್ಲೆ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಬೆಂಗಳೂರಿನಿಂದ ನೀಡಿದ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
     ಶೈಕ್ಷಣಿಕ ಕ್ಷೇತ್ರದಲ್ಲಿ ಮಹಿಳೆಯರ ಸರ್ವಾಂಗೀಣ ಉನ್ನತಿಗಾಗಿ ಹಾಗೂ ಉನ್ನತ ಶಿಕ್ಷಣ ಸಂಶೋಧನೆಯಲ್ಲಿ ಪ್ರಗತಿ ಸಾಧಿಸುವಂತೆ ಒತ್ತು ನೀಡುವ ಉದ್ದೇಶದಿಂದ ವಿಜಯಪುರದಲ್ಲಿ 2003-04ನೇ ಶೈಕ್ಷಣಿಕ ವರ್ಷದಿಂದ ಮಹಿಳಾ ವಿಶ್ವವಿದ್ಯಾಲಯ ಸ್ಥಾಪಿಸಲಾಗಿದೆ. ಈ ವಿಶ್ವವಿದ್ಯಾಲಯಕ್ಕೆ ಶ್ರೇಷ್ಠ, ಮಹೋನ್ನತ ಹಾಗೂ ಐತಿಹಾಸಿಕ ಮಹಿಳಾ ಸಂತರ ಹೆಸರು ಇಡಲು ಅನೇಕ ಕೋರಿಕೆಗಳು ಬಂದಿದ್ದವು. ಮಧ್ಯ ಯುಗದ ಕಾಲಘಟ್ಟದಲ್ಲಿ ಕನ್ನಡದ ಶ್ರೇಷ್ಠ ಸಾಹಿತಿ, ಸಾಮಾಜಿಕ ಕ್ರಾಂತಿಕಾರಿ ಹಾಗೂ ಅನುಭಾವಿಯಾಗಿದ್ದ 12ನೇ ಶತಮಾನದ ಸಮಾಜಿಕ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶಿವಶರಣೆ ಅಕ್ಕಮಹಾದೇವಿಯವರು ನೀತಿ ಭೋಧನೆಯ ಕಾವ್ಯ ಪ್ರಕಾರವಾದ ವಚನಗಳ ಮೂಲಕ ಕನ್ನಡ ಭಕ್ತಿ ಸಾಹಿತ್ಯಕ್ಕೆ ಅತ್ಯಂತ ಮಹತ್ವದ ಕೊಡುಗೆ ನೀಡಿದ್ದು, 2014ನೇ ಡಿಸೆಂಬರ್ನಲ್ಲಿ ವಿಜಯಪುರದಲ್ಲಿ ನಡೆದ ಅಖಿಲ ಭಾರತ 12ನೇ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಅಕ್ಕಮಹಾದೇವಿಯವರ ಹೆಸರನ್ನು ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯಕ್ಕೆ ಇಡುವ ಸಂಬಂಧ ಸರ್ಕಾರಕ್ಕೆ ಕೋರಿ ಗೊತ್ತುವಳಿಯನ್ನು ಅಂಗಿಕರಿಸಲಾಗಿತ್ತು ಎಂದು ಸಚಿವ ಪಾಟೀಲ ತಿಳಿಸಿದ್ದಾರೆ.
     ಮಧ್ಯ ಯುಗದ ಕಾಲಘಟ್ಟದಲ್ಲಿ ಅಕ್ಕಮಹಾದೇವಿಯವರು ಶ್ರಮಿಸಿದ ಮಹಿಳೆಯ ಸಬಲೀಕರಣದ ಹಾಗೂ ಜಾಗತೀಕರಣದ ಮನ್ವಂತರದ ಸವಾಲುಗಳನ್ನು ಎದುರಿಸಲು ಮಹಿಳೆಯನ್ನು ಶಸಕ್ತಗೊಳಿಸುವ ಸಲುವಾಗಿ ಸ್ಥಾಪನೆಗೊಂಡಿರುವ ಈ ವಿಶ್ವವಿದ್ಯಾಲಯಕ್ಕೆ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಎಂದು ಮರುನಾಮಕರಣಗೊಳಿಸಲು ವಿನಂತಿಸಲಾಗಿತ್ತು. ನಾಮಕರಣಗೊಳಿಸಲು ವಿಶೇಷ ಕಾಳಜಿ ವಹಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಹಾಗೂ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿಯವರನ್ನು ಸಮಸ್ತ ಕನ್ನಡ ನಾಡಿನ ಮಹಿಳೆಯರ ಪರವಾಗಿ, ಬಸವಣ್ಣ ಹಾಗೂ ಅಕ್ಕಮಹಾದೇವಿ ಸೇರಿದಂತೆ ಎಲ್ಲ ಶರಣರ ಸಮುದಾಯಗಳ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಚಿವ ಡಾ.ಎಂ.ಬಿ.ಪಾಟೀಲ ತಿಳಿಸಿದ್ದಾರೆ.

ಭಾರತೀಯ ವಾಯು ಸೇನೆಯಲ್ಲಿ ನಾನ್ ಟೆಕ್ನಿಕಲ್ ಹುದ್ದೆಗಳಿಗೆ ಆನ್‍ಲೈನ್ ಅರ್ಜಿ ಆಹ್ವಾನ

ಕೊಪ್ಪಳ, ಸೆ.22  (ಕರ್ನಾಟಕ ವಾರ್ತೆ): ಭಾರತೀಯ ವಾಯು ಸೇನೆಯಲ್ಲಿ ಖಾಲಿ ಇರುವ ನಾನ್ ಟೆಕ್ನಿಕಲ್ ಹುದ್ದೆಗಳಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಮಾಜಿ ಸೈನಿಕರ ಅವಲಂಬಿತ ಕುಟುಂಬದವರು ಅರ್ಜಿ ಸಲ್ಲಿಸಬಹುದಾಗಿದೆ.
     ಕೊಪ್ಪಳ ಮತ್ತು ಬಾಗಲಕೋಟೆ ಜಿಲ್ಲೆಯ ಯುವಕರು ಸೆ.29 ರೊಳಗಾಗಿ ತಮ್ಮ ಹೆಸರನ್ನು ಆನ್‍ಲೈನ್ ಮೂಲಕ ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗಾಗಿ ಉಪನಿದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಬಾಗಲಕೋಟ ದೂ.ಸಂ: 080-25592199 ಇಲ್ಲಿಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Wednesday, 21 September 2016

ಅಕ್ಟೋಬರ್‍ನಲ್ಲಿ ಜಿಲ್ಲೆಯಲ್ಲಿ 24 ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳ ಘೋಷಣೆ- ಆರ್. ರಾಮಚಂದ್ರನ್

ಕೊಪ್ಪಳ, ಸೆ. 21 (ಕರ್ನಾಟಕ ವಾರ್ತೆ) : ಮಹಾತ್ಮಾ ಗಾಂಧೀಜಿಯವರ ಜನ್ಮದಿನವಾದ ಅಕ್ಟೋಬರ್ 02 ರ ಒಳಗಾಗಿ ಜಿಲ್ಲೆಯ ಒಟ್ಟು 24 ಗ್ರಾಮಗಳನ್ನು ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳನ್ನಾಗಿಸಲು ಜಿಲ್ಲಾ ಪಂಚಾಯತಿ ವತಿಯಿಂದ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕೊಪ್ಪಳ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ತಿಳಿಸಿದ್ದಾರೆ.
     2012-13 ನೇ ಸಾಲಿನಲ್ಲಿ ಮಾಡಿದ ಬೇಸ್‍ಲೈನ್ ಸಮೀಕ್ಷೆಯ ಮಾಹಿತಿಯಂತೆ ಒಟ್ಟು 2,34,128 ಶೌಚಾಲಯ ರಹಿತ ಕುಟುಂಬಗಳನ್ನು ಗುರುತಿಸಲಾಗಿತ್ತು.  ನಂತರದ ದಿನಗಳಲ್ಲಿ ಅಂದರೆ 2013-14 ನೇ ಸಾಲಿನಿಂದ 2015-16 ರವರೆಗೆ ಒಟ್ಟು 1,03,625 ವಯಕ್ತಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ.  ಈ ಪೈಕಿ 1,30,507 ಶೌಚಾಲಯ ನಿರ್ಮಿಸುವುದು ಬಾಕಿ ಉಳಿದಿದ್ದು, ಈ ಬಾಕಿ ಶೌಚಾಲಯಗಳ ನಿರ್ಮಾಣ ಹಾಗೂ ಹೊಸದಾಗಿ 22, 144 ಶೌಚಾಲಯ ರಹಿತ ಕುಟುಂಬಗಳನ್ನು ಗುರುತಿಸುವುದರ ಮೂಲಕ ಒಟ್ಟಾರೆ ಜಿಲ್ಲೆಯಲ್ಲಿ 1,52,651 ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸುವ ಗುರಿಯನ್ನು ಪ್ರಸಕ್ತ ಸಾಲಿಗೆ ಪರಿಗಣಿಸಲಾಗಿದೆ.  ಪ್ರಸಕ್ತ ಸಾಲಿನಲ್ಲಿ ಏಪ್ರಿಲ್ ತಿಂಗಳಿನಿಂದ ಆಗಸ್ಟ್ ವರೆಗೆ 8309 ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಲಾಗಿದ್ದು, ಏಪ್ರಿಲ್ ನಿಂದ ಜೂನ್‍ವರೆಗೆ ಮಳೆಯ ಅಭಾವದಿಂದ ಪ್ರಗತಿಗೆ ಕೊಂಚ ಮಟ್ಟಿಗೆ ಹಿನ್ನಡೆಯಾಗಿರುತ್ತದೆ.  ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಒಟ್ಟಾರೆ 1,44,342 ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸುವುದು ಬಾಕಿ ಇದೆ. 
     ಮಹಾತ್ಮಾ ಗಾಂಧೀಜಿಯವರ ಜನ್ಮದಿನವಾದ ಅಕ್ಟೋಬರ್ 02 ರ ಸಮಯದೊಳಗೆ ಗಂಗಾವತಿ ತಾಲೂಕಿನ 09 ಗ್ರಾಮಗಳು, ಕೊಪ್ಪಳ ತಾಲೂಕಿನ 08 ಗ್ರಾಮ, ಕುಷ್ಟಗಿ ತಾಲೂಕಿನ 03 ಹಾಗೂ ಯಲಬುರ್ಗಾ ತಾಲುಕಿನ 04 ಗ್ರಾಮಗಳು ಸೇರಿದಂತೆ ಒಟ್ಟು 24 ಗ್ರಾಮಗಳನ್ನು ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳು ಎಂದು ಘೊಷಿಸಲು ಗುರುತಿಸಲಾಗಿದೆ.  ಶೌಚಾಲಯ ರಹಿತ ಕುಟುಂಬಗಳು, ಇನ್ನಾದರೂ ಶೌಚಾಲಯದ ಮಹತ್ವವನ್ನರಿತು, ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಮುಂದಾಗಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

ದೀನ ದಲಿತರ ಏಳ್ಗೆಗೆ ಶ್ರಮಿಸಿದವರು ಬ್ರಹ್ಮಶ್ರೀ ನಾರಾಯಣ ಗುರುಗಳು- ಶೇಖರಪ್ಪ ನಾಗರಳ್ಳಿ

ಕೊಪ್ಪಳ, ಸೆ.21  (ಕರ್ನಾಟಕ ವಾರ್ತೆ): ದೀನ ದಲಿತರ, ಹಿಂದುಳಿದವರ ಏಳಿಗೆಗೆ ಶ್ರಮಿಸಿದ, ದೇಶ ಕಂಡ ಅದ್ಭುತ ದಾರ್ಶನಿಕರು ಬ್ರಹ್ಮಶ್ರೀ ನಾರಾಯಣ ಗುರುಗಳು ಎಂದು ಕೊಪ್ಪಳ ಜಿಲ್ಲಾ ಪಂಚಾಯತಿ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ ಅವರು ಬಣ್ಣಿಸಿದರು.

     ಕೊಪ್ಪಳ ಜಿಲ್ಲಾಡಳಿತದಿಂದ ನಗರದ ಸಾಹಿತ್ಯ ಭವನದಲ್ಲಿ ಬುಧವಾರದಂದು ಇದೇ ಮೊದಲ ಬಾರಿಗೆ ಸರ್ಕಾರಿ ಕಾರ್ಯಕ್ರಮವನ್ನಾಗಿ ಏರ್ಪಡಿಸಲಾಗಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

     ಕೇರಳ ರಾಜ್ಯದಲ್ಲಿ ಹುಟ್ಟಿ, ದಕ್ಷಿಣ ಭಾರತದ ದೀನ ದಲಿತರು, ಹಿಂದುಳಿದ ವರ್ಗಗಳ ಏಳಿಗೆಗೆ ಶ್ರಮಿಸಿದ ಅದ್ಭುತ ದಾರ್ಶನಿಕರು ಬ್ರಹ್ಮಶ್ರೀ ನಾರಾಯಣ ಗುರುಗಳು.  ಅಸ್ಪøಷ್ಯತೆಯ ನಿವಾರಣೆ ನಿಟ್ಟಿನಲ್ಲಿ ಮಹಾತ್ಮಾಗಾಂಧೀಜಿ ಅವರೊಂದಿಗೆ ಜೊತೆಯಾಗಿ ಸಮಾಜಕ್ಕೆ ಜಾಗೃತಿ ಮೂಡಿಸಲು ಶ್ರಮಿಸಿದರು.  ಮನುಷ್ಯ, ಮನುಷ್ಯನಂತೆ ಜೀವಿಸಬೇಕು ಎಂಬ ಅರ್ಥಗರ್ಭಿತ ನುಡಿಗಳನ್ನು ತಮ್ಮ ಜಾಗೃತಿ ಸಂದೇಶಗಳಲ್ಲಿ ನುಡಿದ ನಾರಾಯಣ ಗುರುಗಳು, ಪ್ರಾಣಿಬಲಿ ಕೊಡುವಂತಹ ಪದ್ಧತಿಯನ್ನು ಆಗಿನ ಸಂದರ್ಭದಲ್ಲಿಯೇ ವಿರೋಧಿಸಿದ್ದರು.  ದಲಿತ ವರ್ಗದವರಿಗೆ ದೇವಾಲಯದ ಪ್ರವೇಶ ನಿರಾಕರಿಸುವ ವ್ಯವಸ್ಥೆ ಇರುವ ಸಂದರ್ಭದಲ್ಲಿ, ದಲಿತರ ಪ್ರವೇಶಕ್ಕಾಗಿಯೇ ತಾವೇ ಅನೇಕ ದೇವಾಲಯಗಳನ್ನು ಕಟ್ಟಿದರು.  ಸಮಾಜ ಸುಧಾರಣೆಯ ನಿಟ್ಟಿನಲ್ಲಿ ದಿಟ್ಟತನದಿಂದ ನಾರಾಯಣ ಗುರುಗಳು ಕೈಗೊಂಡ ಮಹತ್ವದ ಕಾರ್ಯಗಳೇ, ಇಂದಿಗೂ ಅವರನ್ನು ಜನಮಾನಸದಲ್ಲಿ ಉಳಿಯುವಂತೆ ಮಾಡಿದೆ ಎಂದು ಜಿ.ಪಂ. ಅಧ್ಯಕ್ಷ ಶೇಕರಪ್ಪ ನಾಗರಳ್ಳಿ ಅವರು ಹೇಳಿದರು.

     ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು, ಮಾನವೀಯ ಮೌಲ್ಯಯುತ ಸಿದ್ಧಾಂತಗಳು ಕುಸಿಯುತ್ತಿರುವ ಈ ಸಂದರ್ಭದಲ್ಲಿ, ದಾರ್ಶನಿಕರ ಜಯಂತಿ ಆಚರಣೆಗಳು, ಮನುಕುಲದ ಶ್ರೇಯಸ್ಸಿಗೆ ಪೂರಕವೆನಿಸುತ್ತಿವೆ.  ಮನುಕುಲ ಒಂದೇ ಆಗಿರುವಾಗ, ಜಾತಿಗಳಿಂದ ಬೇರೆ, ಬೇರೆ ಮಾಡುವುದು ಸಲ್ಲದೆ ಎಂಬುದು ಬ್ರಹ್ಮಶ್ರೀ ನಾರಾಯಣ ಗುರುಗಳ ನಿಲುವಾಗಿತ್ತು.  ಎಲ್ಲ ಸಮಾಜದ ಅಭಿವೃದ್ಧಿಯಾದಾಗಲೇ ದೇಶದ ಸಮಗ್ರ ಅಭಿವೃದ್ಧಿಯಾಗಲು ಸಾಧ್ಯ.  ಈ ನಿಟ್ಟಿನಲ್ಲಿ ಶಿಕ್ಷಣದಿಂದ ಮಾತ್ರ, ಸಮಾಜ ಸುಧಾರಣೆ ಹಾಗೂ ಅಭಿವೃದ್ಧಿ ಸಾಧ್ಯವಿದೆ ಎಂದರು.

     ಜವಳಗೇರಾದ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಡಾ. ಎಸ್. ಶಿವರಾಜ ಅವರು ವಿಶೇಷ ಉಪನ್ಯಾಸ ನೀಡಿ, ಬಸವಣ್ಣನವರು, ಮಹಾತ್ಮಾ ಗಾಂಧೀಜಿ, ಅಂಬೇಡ್ಕರ್ ನಂತಹ ಅನೇಕ ಮಹನೀಯರು ಮನುಕುಲಕ್ಕೆ ಕೊಡುಗೆಯನ್ನು ನೀಡಿದ್ದಾರೆ.  12 ನೇ ಶತಮಾನದಲ್ಲಿ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಶ್ರಮಿಸಿದ ಬಸವಣ್ಣನವರು ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಿದ್ಧಾಂತಗಳಲ್ಲಿ ಸಾಮಿಪ್ಯವಿದೆ.  ಮನುಕುಲದ ಒಳಿತಿಗಾಗಿ ದುಡಿದ ಯಾವುದೇ ಮಹನೀಯರನ್ನು ಒಂದೇ ಜಾತಿಗೆ ಸೀಮಿತರನ್ನಾಗಿಸಬಾರದು.  1854 ರಲ್ಲಿ ಕೇರಳದಲ್ಲಿ ನಾರಾಯಣ ಗುರುಗಳು ಜನಿಸಿದ ಕಾಲಘಟ್ಟದಲ್ಲಿ, ದೇಶದಲ್ಲಿ ಬ್ರಿಟೀಷರ ಆಳ್ವಿಕೆಯಿತ್ತು.  ಕೆಲ ರಾಜಮನೆತನಗಳು ಬ್ರಿಟೀಷರ ಆಜ್ಞಾ ಪಾಲಕರಾಗಿದ್ದರು.  ಜನರ ಮೇಲೆ ನಾನಾ ತರದ ತೆರಿಗೆಗಳನ್ನು ವಿಧಿಸಲಾಗುತ್ತಿತ್ತು.  ಕೇರಳ ರಾಜ್ಯದಲ್ಲಿ ಆಗಿನ ಸಂದರ್ಭದಲ್ಲಿ ಸ್ತ್ರೀಯರು ಕುಪ್ಪಸ ತೊಡಲೂ ಸಹ ರಾಜರ ಅನುಮತಿ ಪಡೆಯುವಂತಹ ಸ್ಥಿತಿ ಹಾಗೂ ಅಸ್ಪøಷ್ಯತೆ ವ್ಯವಸ್ಥೆ ತಾಂಡವವಾಡುತ್ತಿತ್ತು.  ಇವುಗಳ ಮಧ್ಯೆಯೇ ಬೆಳೆದ ನಾರಾಯಣ ಗುರುಗಳು, ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಸುಧಾರಣೆ ತರಲು ಸಾಧ್ಯವೆಂದರಿತು. ವೇದ, ಸಂಸ್ಕøತಗಲ ಅಧ್ಯಯನ ಮಾಡುವುದರ ಜೊತೆಗೆ, ಆಯುರ್ವೇದಲ್ಲೂ ಪಾಂಡಿತ್ಯವನ್ನು ಪಡೆದುಕೊಂಡರು.  ಆಯುರ್ವೇದ ಚಿಕಿತ್ಸೆಯನ್ನು ನೀಡುವ ಅವಕಾಶವನ್ನೂ ಸಹ ಜನರಲ್ಲಿ ಜಾಗೃತಿ ಮೂಡಿಸಲು ಬಳಸಿಕೊಂಡರು.  ಕೇರಳ, ಕರ್ನಾಟಕ, ತಮಿಳುನಾಡು ರಾಜ್ಯಗಳಲ್ಲಿ ಸಂಚರಿಸಿ, ಸಮಾಜದ ಸುಧಾರಣೆಗೆ ಶ್ರಮಿಸಿದರು.  ಅವರ ಕೀರ್ತಿ ಶ್ರೀಲಂಕಾ ದೇಶಕ್ಕೂ ಹಬ್ಬಿದ್ದು, ಶ್ರೀಲಂಕಾದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಅಂಚೆ ಚೀಟಿಯನ್ನು ಅಲ್ಲಿನ ಸರ್ಕಾರ ಬಿಡುಗಡೆ ಮಾಡಿದೆ.  ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುವುದು ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಗೌರವ ಸಲ್ಲಿಸಿದಂತೆ ಎಂದು ಶಿವರಾಜ ಅವರು ಹೇಳಿದರು.

     ತಾಲೂಕಾ ಪಂಚಾಯತಿ ಅಧ್ಯಕ್ಷ ಬಾಲಚಂದ್ರನ್, ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ, ಜಿ.ಪಂ. ಸದಸ್ಯರುಗಳಾದ ಗವಿಸಿದ್ದಪ್ಪ ಕರಡಿ, ರಾಮಣ್ಣ ಚೌಡ್ಕಿ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಖಾಜಾವಲಿ ಬನ್ನಿಕೊಪ್ಪ, ಸದಸ್ಯ ಮುತ್ತು ಕುಷ್ಟಗಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.   ಸಮಾರಂಭಕ್ಕೂ ಮುನ್ನ ನಗರದ   ಸಿರಸಪ್ಪಯ್ಯನ ಮಠದ ಆವರಣದಿಂದ ಜವಾಹರ ರಸ್ತೆ ಮೂಲಕ ಸಾಹಿತ್ಯ ಭವನದವರೆಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರದ ಮೆರವಣಿಗೆ ರಥದಲ್ಲಿ ಅದ್ಧೂರಿಯಿಂದ ಸಾಗಿತು. ಮೆರವಣಿಗೆಯಲ್ಲಿ ಪೂರ್ಣಕುಂಭ ಹೊತ್ತ ಮಹಿಳೆಯರು, ಕಲಾತಂಡಗಳನ್ನು ಒಳಗೊಂಡಂತೆ ವಿವಿಧ ವೇಷಧಾರಿಗಳ ನೃತ್ಯವು ಮೆರವಣಿಗೆಯನ್ನು ಆಕರ್ಷಕವಾಗಿಸಿತು.

ಪೊಲೀಸ್ ವಿರುದ್ಧ ದೂರಿದ್ದಲ್ಲಿ ಪ್ರಾಧಿಕಾರಕ್ಕೆ ಸಲ್ಲಿಸಿ

ಕೊಪ್ಪಳ, ಸೆ.21  (ಕರ್ನಾಟಕ ವಾರ್ತೆ): ರಾಜ್ಯ ಸರ್ಕಾರವು ಕರ್ನಾಟಕ ಪೊಲೀಸ್ ಕಾಯ್ದೆ 2012 ರ ತಿದುಪಡಿ ಪ್ರಕಾರ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಮೇಲಿನ ದೂರುಗಳ ವಿಚಾರಣೆಗೆ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ದೂರು ಪ್ರಾಧಿಕಾರಗಳನ್ನು ರಚಿಸಿದ್ದು, ಜಿಲ್ಲೆಯ ಪೊಲೀಸ್ ಅಧಿಕಾರಿ ಅಥವಾ ಸಿಬ್ಬಂದಿಗಳ ವಿರುದ್ಧ ದೂರುಗಳಿದ್ದಲ್ಲಿ, ಸಾರ್ವಜನಿಕರು ಪ್ರಾಧಿಕಾರಕ್ಕೆ ದೂರು ಸಲ್ಲಿಸಬಹುದಾಗಿದೆ ಎಂದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ತ್ಯಾಗರಾಜ್ ತಿಳಿಸಿದ್ದಾರೆ.
    ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರವು ಡಿಎಸ್‍ಪಿ ಮತ್ತು ಅದಕ್ಕಿಂತ ಕೆಳದರ್ಜೆ ಅಧಿಕಾರಿ/ಸಿಬ್ಬಂದಿಗಳ ವಿರುದ್ಧದ ಆರೋಪ ಅಂದರೆ ಯಾವುದೇ ಸಾರ್ವಜನಿಕ ಹಕ್ಕುಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವಂತಹ, ಪೊಲೀಸ್ ವಶದಲ್ಲಿದ್ದಾಗ ಮರಣ, ಐಪಿಸಿ ಸೆಕ್ಷನ್-320 ರಲ್ಲಿ ತಿಳಿಸಲಾದಂತಹ ಗಂಭೀರ ಗಾಯ, ಮಾನಭಂಗ, ಅಥವಾ ಮಾನಭಂಗಕ್ಕೆ ಯತ್ನ ಅಥವಾ ಕಾನೂನು ಪ್ರಕಾರವಲ್ಲದ ಬಂಧನ ಇಲ್ಲವೇ ವಶದಲ್ಲಿರಿಸಿಕೊಳ್ಳುವುದು, ಇತರ ಗಂಭೀರ ದುರ್ನಡತೆ ದೂರುಗಳ ವಿಚಾರಣೆ ಮಾಡಲಿದೆ.
    ಪೊಲೀಸ್ ಉಪಾಧೀಕ್ಷರು ಮತ್ತು ಅದಕ್ಕಿಂತ ಕೆಳ ಹಂತದ ಅಧಿಕಾರಿ/ಸಿಬ್ಬಂಧಿಗಳ ವಿರುದ್ದದ ದೂರುಗಳನ್ನು, ಸಾರ್ವಜನಿಕರು ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರ, ಜಿಲ್ಲಾ ಪೊಲೀಸ್ ಅಧೀಕ್ಷಕರವರ ಕಛೇರಿ, ಅಶೋಕ ಸರ್ಕಲ್ ಹತ್ತಿರ, ಕೊಪ್ಪಳ, ದೂರವಾಣಿ-08539-230111 ಇಲ್ಲಿಗೆ ಸಲ್ಲಿಸಬಹುದು.
     ಡಿಎಸ್‍ಪಿ ಹುದ್ದೆಯ ಅಧಿಕಾರಿಗಿಂತ ಮೇಲಿನ ದರ್ಜೆಯ ಅಧಿಕಾರಿಗಳ ವಿರುದ್ದದ ದೂರುಗಳನ್ನು ಅಧ್ಯಕ್ಷರು, ರಾಜ್ಯ ಪೊಲೀಸ್ ದೂರು ಪ್ರಾಧಿಕಾರ, ಕೊಠಡಿ ಸಂ.36, ನೆಲಮಹಡಿ, ವಿಕಾಸ ಸೌಧ, ಬೆಂಗಳೂರು-01, ದೂರವಾಣಿ- 080-22386063 ಅಥವಾ 22034220 ಇಲ್ಲಿಗೆ ಸಲ್ಲಿಸಬಹುದಾಗಿದೆ.   

 ಅಲ್ಲದೆ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದಿಂದ ಸಾರ್ವಜನಿಕರಿಗಾಗಿ ವೆಬ್‍ಸೈಟ್ ಪ್ರಾರಂಭಿಸಿದ್ದು,  www.karntaka.gov.in/spcablr@   ಸಾರ್ವಜಿನಿಕರು ವೀಕ್ಷಿಸಬಹುದು. ಹಾಗೂ ಕೊಪ್ಪಳ ಪೊಲೀಸ್ ದೂರು ಪ್ರಾಧಿಕಾರದ ಇ-ಮೇಲ್  dpcakpl@karnataka.gov.in   ಮೂಲಕ ಸಂಪರ್ಕಿಸಿ ದೂರು ಸಲ್ಲಿಸಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾಗ್ಯನಗರ: ಪ್ಲಾಸ್ಟಿಕ್ ವಸ್ತುಗಳ ಬಳಕೆ ನಿಷೇಧ

ಕೊಪ್ಪಳ, ಸೆ.21  (ಕರ್ನಾಟಕ ವಾರ್ತೆ): ಭಾಗ್ಯನಗರ ಪ.ಪಂ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್‍ನಿಂದ ಮಾಡಲ್ಪಟ್ಟ ದಿನಬಳಕೆ ವಸ್ತುಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದ್ದು, ವಾಣಿಜ್ಯ ಚಟುವಟಿಕೆಯ ಅಂಗಡಿಗಳಲ್ಲಿ ಮಾರಾಟ ಮಾಡುವಂತಿಲ್ಲ. ಹಾಗೂ ಸಾರ್ವಜನಿಕರು ಸಹ ತಮ್ಮ ಮನೆಗಳಲ್ಲಿ ಪ್ಲಾಸ್ಟಿಕ್ ವಸ್ತುಗಳಾದ ಕ್ಯಾರಿಬ್ಯಾಗ್, ಇತ್ಯಾದಿ ಪ್ಲಾಸ್ಟಿಕ್ ವಸ್ತುಗಳನ್ನು ಬಳಸದಂತೆ ಸೂಚನೆ ನೀಡಲಾಗಿದೆ.
    ಪ್ಲಾಸ್ಟಿಕ್ ಬಳಕೆಯಿಂದ ರೋಗ ರುಜಿನಗಳು ಬರುತ್ತಿದ್ದು, ಜನರ ಆರೋಗ್ಯದ ಮೇಲೆ ಪ್ಲಾಸ್ಟಿಕ್ ಬಳಕೆ ದುಷ್ಪರಿಣಾಮ ಉಂಟು ಮಾಡುತ್ತಿದೆ ಅಲ್ಲದೆ ಮಾರಕ ರೋಗಗಳಿಗೆ ಕಾರಣವಾಗಿದೆ. ಆದ್ದರಿಂದ ಇಂತಹ ಸಮಸ್ಯೆಗಳು ಪುನರಾವರ್ತನೆಯಾಗದಂತೆ ಪರಿಣಾಮಕಾರಿಯಾಗಿ ತೆಗೆಯುವ ದೃಷ್ಟಿಯಿಂದ ಪರಿಸರ (ಸಂರಕ್ಷಣೆ) ಕಾಯಿದೆ ಪ್ರಕಾರ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಪ್ಲಾಸ್ಟಿಕ್ ಚಮಚ, ಪ್ಲಾಸ್ಟಿಕ್ ಭಿತ್ತಿಪತ್ರ, ಊಟದ ಮೇಜಿನ ಮೇಲೆ ಹಾಕುವ ಪ್ಲಾಸ್ಟಿಕ್ ಹಾಳೆ, ಥರ್ಮಕೋಲ್ ಮತ್ತು ಪ್ಲಾಸ್ಟಿಕ್ ಮೈಕ್ರೋ ಬೀಡ್ಸ್‍ನಿಂದ ತಯಾರಾದ ವಸ್ತುಗಳ ತಯಾರಿಕೆ, ಸರಬರಾಜು ಮತ್ತು ಬಳಕೆಯನ್ನು ಭಾಗ್ಯನಗರ ಪ.ಪಂಚಾಯಿತಿ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ನಿಷೇಧಿಸಲಾಗಿದೆ.
     ಸಾರ್ವಜನಿಕರು ಮನೆಗಳಲ್ಲಿ ಹಾಗೂ ಉದ್ದಿಮೆದಾರರು ತಮ್ಮ ಉದ್ದಿಮೆಗಳಲ್ಲಿ ಯಾವುದೇ ತರಹದ ಪ್ಲಾಸ್ಟಿಕ್ ವಸ್ತುಗಳನ್ನು ಬಳಸದಂತೆ ಸೂಚನೆ ನೀಡಲಾಗಿದೆ. ಉದ್ದಿಮೆಗಳಲ್ಲಿ ಪ್ಲಾಸ್ಟಿಕ್ ಸಾಮಗ್ರಿಗಳನ್ನು ಬಳಸಿದಲ್ಲಿ ಅಂತಹ ಉದ್ದಿಮೆಗಳನ್ನು ಸ್ಥಗಿತಗೊಳಿಸಲು ಸೂಕ್ತ ಕ್ರಮ ವಹಿಸಲಾಗುವುದು ಎಂದು ಭಾಗ್ಯನಗರ ಪ.ಪಂ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tuesday, 20 September 2016

ಕೊಪ್ಪಳ : ವಸತಿ ಯೋಜನೆಯ ವಂತಿಕೆ ಹಣ ಭರಿಸಲು ಸೂಚನೆ

ಕೊಪ್ಪಳ, ಸೆ.20  (ಕರ್ನಾಟಕ ವಾರ್ತೆ): ಕೊಪ್ಪಳ ನಗರಸಭೆಯಿಂದ 2012-13 ನೇ ಸಾಲಿನಲ್ಲಿ ಗುಂಪು ಮನೆ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳು ವಂತಿಕೆ ಹಣ ಪಾವತಿಸುವಂತೆ ಸೂಚನೆ ನೀಡಲಾಗಿದೆ.
      ವಾಜಪೇಯಿ ನಗರ ವಸತಿ ಯೋಜನೆ ಅಡಿ ನಗರ ನಿವೇಶನ/ವಸತಿ ರಹಿತರಿಗೆ ಮನೆಗಳನ್ನು ನಿರ್ಮಾಣ ಮಾಡಲು 2012-13 ನೇ ಸಾಲಿನಲ್ಲಿ 2 ಸಾವಿರ ಗುಂಪು ಮನೆಗಳನ್ನು ರಚನೆ ಮಾಡಲಾಗಿದ್ದು, ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮದಿಂದ 2000 ಅರ್ಹ ಫಲಾನುಭವಿಗಳನ್ನು ಈಗಾಗಲೇ ಆಯ್ಕೆ ಮಾಡಲಾಗಿರುತ್ತದೆ. ಅದರಲ್ಲಿ ಕೆಲವು ಫಲಾನುಭವಿಗಳು ವಂತಿಕೆ ಹಣ ರೂ.30,000 ಕಾರ್ಯಾಲಯಕ್ಕೆ ಭರಿಸಿರುತ್ತಾರೆ. ಆದರೆ ಇನ್ನು ಸುಮಾರು 1000 ಫಲಾನಿಭವಿಗಳು ವಂತಿಕೆ ಹಣ ಭರಿಸಿರುವುದಿಲ್ಲ ಈ ಕುರಿತು ಈ ಹಿಂದೆ ಪ್ರಕಟಣೆ ನೀಡಿದ್ದರೂ ಸಹ ಬಾಕಿ ಉಳಿದ ಫಲಾನುಭವಿಗಳು ವಂತಿಕೆ ಹಣ ಪಾವತಿ ಮಾಡಿರುವುದಿಲ್ಲ.  ಇದರಿಂದ ಮುಂದಿನ ಪ್ರಕ್ರಿಯೆ ನಡೆಸಲು ವಿಳಂಬವಾಗಿದೆ. ಆದ್ದರಿಂದ ವಂತಿಕೆ ಹಣ ಪಾವತಿ ಮಾಡಲು ಅಕ್ಟೋಬರ್-17 ಕೊನೆಯ ದಿನಾಂಕವಾಗಿ ನಿಗದಿಪಡಿಸಲಾಗಿದೆ. ನಿಗದಿತ ಅವಧಿಯೊಳಗಾಗಿ ವಂತಿಕೆ ಹಣ ಪಾವತಿಸದೇ ಇರುವ ಅಭ್ಯರ್ಥಿಗಳನ್ನು ಆಯ್ಕೆಪಟ್ಟಿಯಿಂದ ಕೈಬಿಟ್ಟು ಬೇರೆ ಫಲಾನಿಭವಿಗಳನ್ನು ಆಯ್ಕೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅವಧಿ ಮೀರಿ ವಂತಿಕೆ ಹಣ ಭರಿಸಲು ಅವಕಾಶ ಇರುವುದಿಲ್ಲ.  ನಿಗದಿತ ಅವಧಿಯೊಳಗಾಗಿ ವಂತಿಕೆ ಹಣ ಪಾವತಿಸುವಂತೆ ಕೊಪ್ಪಳ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾಗ್ಯನಗರ: ಬಡಾವಣೆಗಳ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಸೂಚನೆ

ಕೊಪ್ಪಳ, ಸೆ.20  (ಕರ್ನಾಟಕ ವಾರ್ತೆ): ಭಾಗ್ಯನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಖಾಸಗಿ ಬಡಾವಣೆಗಳಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿ ಪಡಿಸಿ ನಿವೇಶನಗಳನ್ನು ಮಾರಾಟ ಮಾಡುವಂತೆ ಬಡಾವಣೆಗಳ ಮಾಲೀಕರಿಗೆ ಹಾಗೂ ಲ್ಯಾಂಡ್ ಡೆವಲಪರ್ಸ್‍ಗಳಿಗೆ ಸೂಚನೆ ನೀಡಲಾಗಿದೆ.
       ಭಾಗ್ಯನಗರ ಪ.ಪಂ ವ್ಯಾಪ್ತಿಯಲ್ಲಿ ಕೆಲವು ಬಡಾವಣೆ ಮಾಲೀಕರು, ಲ್ಯಾಂಡ್ ಡೆವಲಪರ್ಸ್‍ಗಳು, ಖಾಸಗಿ ಬಡಾವಣೆಗಳನ್ನು ಹಿಂದಿನ ಗ್ರಾಮ ಪಂಚಾಯಿತಿಯಲ್ಲಿ ಮಂಜೂರು ಪಡೆಯುವಾಗ ಸರಿಯಾದ ಮಾನದಂಡ ಅನುಸರಿಸಿರುವುದಿಲ್ಲ. ಉದ್ಯಾನವನ, ನಾಗರಿಕ ಸೌಲಭ್ಯಕ್ಕಾಗಿ ನಿವೇಶನ ಕಾಯ್ದಿರಿಸಿರುವುದಿಲ್ಲ, ಅಲ್ಲದೆ ಮೂಲ ಸೌಕರ್ಯಗಳಾದ ರಸ್ತೆ, ಚರಂಡಿ, ವಿದ್ಯುತ್, ಕುಡಿಯುವ ನೀರು ಇನ್ನಿತರೆ ಸೌಕರ್ಯಗಳನ್ನು ಒದಗಿಸದೇ ನಿವೇಶನಗಳನ್ನು ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಈ ಹಿಂದೆ ಬಡಾವಣೆಗಳನ್ನು ಮಂಜೂರಿ ಪಡೆದು, ಅವುಗಳನ್ನು ಅಭಿವೃದ್ಧಿ ಪಡಿಸದೆ ಮಾರುಕಟ್ಟೆ ದರದ ಹೆಚ್ಚಳಕ್ಕಾಗಿ ನಿರೀಕ್ಷೆ ಮಾಡುತ್ತಿರುವುದು ಸಹ ತಿಳಿದು ಬಂದಿದೆ. ಖಾಸಗಿ ಜಮೀನು ಮಾಲೀಕರು ಮೂಲ ಸೌಕರ್ಯ ಒದಗಿಸದೇ ಮಾರಾಟ ಮಾಡುತ್ತಿರುವುದರಿಂದ ನಾಗರಿಕರು ಮೂಲ ಸೌಕರ್ಯಗಳ ಬೇಡಿಕೆಗಳನ್ನು ಪಟ್ಟಣ ಪಂಚಾಯತಿಗೆ ನೀಡುತ್ತಿದ್ದಾರೆ.  ಪಟ್ಟಣ ಪಂಚಾಯಿತಿ ವ್ಯವಸ್ಥೆಯಲ್ಲಿ ಸ್ವೀಕೃತವಾಗುವ ಬಜೆಟ್‍ನಲ್ಲಿ  ಅಭಿವೃದ್ಧಿ ಮಾಡಲು ಸಾಧ್ಯವಾಗುವುದಿಲ.್ಲ  ಆದ್ದರಿಂದ ಬಡಾವಣೆ ಮಾಲೀಕರು ತಮ್ಮ ತಮ್ಮ ಬಡಾವಣೆಗಳಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಕ್ರಮವಹಿಸಬೇಕು ಹಾಗೂ ಉದ್ಯಾನವನ, ನಾಗರಿಕ ಸೌಲಭ್ಯಕ್ಕಾಗಿ ನಿವೇಶನ ಕಾಯ್ದಿರಿಸಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟ ಬಡಾವಣೆಗಳನ್ನು ನಿಯಮಾನುಸಾರ ಪುನರ್ ಪರಿಶೀಲಿಸಬೇಕಾಗುತ್ತದೆ. ನಿವೇಶನ ಖರೀದಿದಾರರು ಸಹ ನಿವೇಶನ ಖರೀದಿಸುವಾಗ ಮೂಲ ಸೌಕರ್ಯಗಳ ಅಭಿವೃದ್ಧಿಯಾಗಿರುವುದನ್ನು ಗಮನಿಸಿ ಖರೀದಿಸಬೇಕು. ಕೇವಲ ಹಿಂದಿನ ಗ್ರಾಮ ಪಂಚಾಯತಿ ಮಂಜೂರು ಮಾಡಿದೆ ಎಂಬ ಅಂಶವನ್ನು ಪರಿಗಣಿಸಬಾರದು. ಮೂಲ ಸೌಕರ್ಯಗಳ ಅಭಿವೃದ್ಧಿ ತುಂಬಾ ಮಹತ್ವವಾಗಿದ್ದು, ಜಮೀನು ಮಾಲೀಕರಿಂದ ಅಭಿವೃದ್ಧಿ ಪಡಿಸಿಕೊಡುವುದಾಗಿ ಕರಾರು ಮಾಡಿಕೊಂಡು ಮತ್ತು ಪಟ್ಟಣ ಪಂಚಾಯಿತಿಗೆ ಸಹ ಕರಾರು ಆದ ನಂತರ ಖರೀದಿ ಮಾಡುವುದು ಸೂಕ್ತ ಎಂದು ಭಾಗ್ಯನಗರ ಪ.ಪಂ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ ಕಾರ್ಯಕ್ರಮ

ಕೊಪ್ಪಳ ಸೆ. 20 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಸೆ. 23 ರಿಂದ ಮೂರು ದಿನಗಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
     ಸಚಿವರು ಸೆ. 22 ರಂದು ರಾತ್ರಿ ಕೊಪ್ಪಳಕ್ಕೆ ಆಗಮಿಸಿ ವಾಸ್ತವ್ಯ ಮಾಡುವರು.  ಸೆ. 23 ರಂದು ಬೆಳಿಗ್ಗೆ 10 ಗಂಟೆಗೆ ಗಂಗಾವತಿಗೆ ತೆರಳಿ ತಾಲೂಕು ಮಟ್ಟದ ಜನಸಂಪರ್ಕ ಸಭೆಯಲ್ಲಿ ಭಾಗವಹಿಸುವರು.  ಮಧ್ಯಾಹ್ನ 2-30 ಗಂಟೆಗೆ ಗಂಗಾವತಿಯಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.  ಸಂಜೆ 04 ಗಂಟೆಗೆ ಯಲಬುರ್ಗಾ ತೆರಳಿ ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ಕೈಗೊಳ್ಳುವರು. ರಾತ್ರಿ 09 ಗಂಟೆಗೆ ಕೊಪ್ಪಳಕ್ಕೆ ಆಗಮಿಸಿ ವಾಸ್ತವ್ಯ ಮಾಡುವರು.  ಸೆ. 24 ರಂದು ಬೆಳಿಗ್ಗೆ 10-30 ಗಂಟೆಗೆ ಕುಷ್ಟಗಿಗೆ ಆಗಮಿಸಿ ತಾಲೂಕು ಮಟ್ಟದ ಜನಸಂಪರ್ಕ ಸಭೆಯಲ್ಲಿ ಭಾಗವಹಿಸುವರು.  ಮಧ್ಯಾಹ್ನ 03 ಗಂಟೆಗೆ ಯಲಬುರ್ಗಾಕ್ಕೆ ಆಗಮಿಸಿ ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ಕೈಗೊಳ್ಳುವರು.  ರಾತ್ರಿ 09 ಗಂಟೆಗೆ ಕೊಪ್ಪಳಕ್ಕೆ ಆಗಮಿಸಿ ವಾಸ್ತವ್ಯ ಮಾಡುವರು.  ಸೆ. 25 ರಂದು ಮಧ್ಯಾಹ್ನ 12 ಗಂಟೆಗೆ ಮುತ್ತಾಳ ಗ್ರಾಮಕ್ಕೆ ತೆರಳುವರು.  ಮಧ್ಯಾಹ್ನ 2-30 ಗಂಟೆಗೆ ಬೆಂಗಳೂರಿಗೆ ಪ್ರಯಾಣ ಬೆಳೆಸುವರು.

ಸೆ.21 ರಂದು ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆ

ಕೊಪ್ಪಳ, ಸೆ.20  (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾಡಳಿತದಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮ ಸೆ.21 ರಂದು ಬೆಳಿಗ್ಗೆ 11.30 ಗಂಟೆಗೆ ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

     ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಸಮಾರಂಭದ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪಂಚಾಯತ್ ಅಧ್ಯಕ್ಷ ನಾಗರಳ್ಳಿ ಶೇಖರಪ್ಪ ಬಸವರಡ್ಡೆಪ್ಪ, ಸಂಸದ ಕರಡಿ ಸಂಗಣ್ಣ, ಶಾಸಕರುಗಳಾದ ಶಿವರಾಜ ಎಸ್ ತಂಗಡಗಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್, ವಿಧಾನ ಪರಿಷತ್ ಸದಸ್ಯರುಗಳಾದ ಬಸವರಾಜ ಪಾಟೀಲ ಇಟಗಿ, ಅಮರನಾಥ ಪಾಟೀಲ್, ಶರಣಪ್ಪ ಮಟ್ಟೂರ್,  ಜಿ.ಪಂ ಉಪಾಧ್ಯಕ್ಷೆ ಲಕ್ಷ್ಮಮ್ಮ ಸಿದ್ದಪ್ಪ ನೀರಲೂಟಿ, ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ, ಕೊಪ್ಪಳ ತಾ.ಪಂ ಅಧ್ಯಕ್ಷ ಬಾಲಚಂದ್ರನ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಿ.ಎಸ್ ವಸ್ತ್ರದ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
     ಜವಳಗೇರಾದ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಡಾ. ಎಸ್. ಶಿವರಾಜ ಅವರು ವಿಶೇಷ ಉಪನ್ಯಾನ ನೀಡುವರು.
     ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಅಂಗವಾಗಿ ಅಂದು ಬೆಳಿಗ್ಗೆ 8 ಗಂಟೆಗೆ  ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರದ ಮೆರವಣಿಗೆ ನಗರದ ಸಿರಸಪ್ಪಯ್ಯನ ಮಠದಿಂದ, ಜವಾಹರ ರಸ್ತೆ, ಆಜಾದ್ ಸರ್ಕಲ್ ಮೂಲಕ ಸಾಹಿತ್ಯ ಭವನದವರೆಗೆ ನೆರವೇರಲಿದೆ ಎಂದು ಪ್ರಕಟಣೆ ತಿಳಿಸಿದೆ.

ಬಳ್ಳಾರಿಯಲ್ಲಿನ ವಿಭಾಗ ಮಟ್ಟದ ದಸರಾ ಕ್ರೀಡಾಕೂಟ ಸೆ. 25 ಕ್ಕೆ ಮುಂದೂಡಿಕೆ

ಕೊಪ್ಪಳ ಸೆ. 20 (ಕರ್ನಾಟಕ ವಾರ್ತೆ): ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಬಳ್ಳಾರಿಯಲ್ಲಿ ಸೆ. 22 ಮತ್ತು 23 ರಂದು ನಡೆಸಲು ಉದ್ದೇಶಿಸಿದ್ದ ಪ್ರಸಕ್ತ ಸಾಲಿನ ಕಲಬುರಗಿ ವಿಭಾಗ ಮಟ್ಟದ ದಸರಾ ಕ್ರೀಡಾಕೂಟವನ್ನು ಸೆ. 25 ಕ್ಕೆ ಮುಂದೂಡಲಾಗಿದೆ.
        ಕಲಬುರಗಿ ವಿಭಾಗ ಮಟ್ಟದ ದಸರಾ ಕ್ರೀಡಾ ಕೂಟದ ಹಾಕಿ, ಫುಟ್‍ಬಾಲ್, ಬಾಲ್ ಬ್ಯಾಡ್ಮಿಂಟನ್, ಬ್ಯಾಡ್ಮಿಂಟನ್ ಕ್ರೀಡೆಗಳನ್ನು ಬಳ್ಳಾರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಸೆ. 22 ಮತ್ತು 23 ರಂದು ನಡೆಸಲು ಉದ್ದೇಶಿಸಲಾಗಿತ್ತು.  ಆದರೆ ಕಾರಣಾಂತರಗಳಿಂದ ಕ್ರೀಡಾಕೂಟವನ್ನು ಸೆ. 25 ಕ್ಕೆ ಮುಂದೂಡಲಾಗಿದೆ.  ಕ್ರೀಡಾಪಟುಗಳು ಸೆ. 25 ರಂದು ಬೆಳಿಗ್ಗೆ 08 ಗಂಟೆಯ ಒಳಗಾಗಿ ಕ್ರೀಡಾಂಗಣದಲ್ಲಿ ವರದಿ ಮಾಡಿಕೊಳ್ಳಬೇಕು.  ಹೆಚ್ಚಿನ ಮಾಹಿತಿಗೆ ದೂರವಾಣಿ ಸಂ: 08539-201400 ಕ್ಕೆ ಸಂಪರ್ಕಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತುಂಗಭದ್ರಾ ಕಾಲುವೆಗಳಿಗೆ ಆನ್ ಅಂಡ್ ಆಫ್ ವ್ಯವಸ್ಥೆ ಮೂಲಕ ನೀರು ಬಿಡುಗಡೆ

ಕೊಪ್ಪಳ ಸೆ. 20 (ಕರ್ನಾಟಕ ವಾರ್ತೆ): ತುಂಗಭದ್ರಾ ಜಲಾಶಯದಿಂದ ವಿವಿಧ ಕಾಲುವೆಗಳಿಗೆ ಪ್ರಸಕ್ತ ಮುಂಗಾರು ಹಂಗಾಮಿಗಾಗಿ, ನೀರು ಹರಿಸುವಿಕೆ ಹಾಗೂ ನೀರು ನಿಲುಗಡೆ (ಆನ್ ಅಂಡ್ ಆಫ್ ವ್ಯವಸ್ಥೆ) ವ್ಯವಸ್ಥೆಯಡಿ ನೀರು ಹರಿಸಲು ನಿರ್ಧರಿಸಲಾಗಿದ್ದು, ರೈತ ಬಾಂಧವರು ಜಲಸಂಪನ್ಮೂಲ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ತುಂಗಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರ ಭೋಜಾನಾಯ್ಕ ಕಟ್ಟಿಮನಿ ಮನವಿ ಮಾಡಿದ್ದಾರೆ.
      ಇತ್ತೀಚೆಗೆ ಬೆಂಗಳೂರಿನಲ್ಲಿ ಜರುಗಿದ ತುಂಗಭದ್ರಾ ನೀರಾವರಿ ಸಲಹಾ ಸಮಿತಿಯ ತುರ್ತು ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು. ಇದರನ್ವಯ ವಿವಿಧ ಕಾಲುವೆಗಳಿಗೆ ನೀರು ಒದಗಿಸುವ ಮತ್ತು ಸ್ಥಗಿತಗೊಳಿಸುವ ಕಾಲಾವಧಿ ವಿವರ ಇಂತಿದೆ.
ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ : ಈ ಕಾಲುವೆಗೆ ಸೆ. 26 ರವರೆಗೆ ನೀರು ನಿಲುಗಡೆ ಮಾಡಲಾಗುವುದು.  ಸೆ. 27 ರಿಂದ ಅ. 16 ರವರೆಗೆ  ಸರಾಸರಿ 3300 ಕ್ಯೂಸೆಕ್‍ನಂತೆ ಕಾಲುವೆಗೆ ನೀರು ಹರಿಸಲಾಗುವುದು.  ಅ. 17 ರಿಂದ 26 ರವರೆಗೆ ನೀರು ನಿಲುಗಡೆ ಮಾಡಲಾಗುವುದು.  ಅ. 27 ರಿಂದ ನ. 20 ರವರೆಗೆ ಸರಾಸರಿ 3300 ಕ್ಯೂಸೆಕ್‍ನಂತೆ ಕಾಲುವೆಗೆ ನೀರು ಹರಿಸಲಾಗುವುದು.
ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆ : ಈ ಕಾಲುವೆಗೆ ಸೆ. 26 ರವರೆಗೆ ನೀರು ನಿಲುಗಡೆ ಮಾಡಲಾಗುವುದು.  ಸೆ. 27 ರಿಂದ ಅ. 11 ರವರೆಗೆ ಸರಾಸರಿ 600 ಕ್ಯೂಸೆಕ್ ನಂತೆ ಕಾಲುವೆಗೆ ನೀರು ಹರಿಸಲಾಗುವುದು.  ಅ. 12 ರಿಂದ ಅ. 21 ರವರೆಗೆ ನೀರು ನಿಲುಗಡೆ ಮಾಡಲಾಗುವುದು.  ಅ. 22 ರಿಂದ ನ. 05 ರವರೆಗೆ 600 ಕ್ಯೂಸೆಕ್‍ನಂತೆ ಕಾಲುವೆಗೆ ನೀರು ಹರಿಸಲಾಗುವುದು.  ನ. 06 ರಿಂದ ನ. 15 ರವರೆಗೆ ಕಾಲುವೆಗೆ ನೀರು ನಿಲುಗಡೆ.  ನ. 16 ರಿಂದ ನ. 20 ರವರೆಗೆ ಸರಾಸರಿ 600 ಕ್ಯೂಸೆಕ್‍ನಂತೆ ನೀರು ಹರಿಸಲಾಗುವುದು.
ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆ : ಈ ಕಾಲುವೆಗೆ ಸೆ. 26 ರವರೆಗೆ ನೀರು ನಿಲುಗಡೆ ಮಾಡಲಾಗುವುದು.  ಸೆ. 27 ರಿಂದ ಅ. 11 ರವರೆಗೆ ಸರಾಸರಿ 1100 ಕ್ಯೂಸೆಕ್ ನಂತೆ ಕಾಲುವೆಗೆ ನೀರು ಹರಿಸಲಾಗುವುದು.  ಅ. 12 ರಿಂದ ಅ. 21 ರವರೆಗೆ ನೀರು ನಿಲುಗಡೆ ಮಾಡಲಾಗುವುದು.  ಅ. 22 ರಿಂದ ನ. 05 ರವರೆಗೆ 1100 ಕ್ಯೂಸೆಕ್‍ನಂತೆ ಕಾಲುವೆಗೆ ನೀರು ಹರಿಸಲಾಗುವುದು.  ನ. 06 ರಿಂದ ನ. 15 ರವರೆಗೆ ಕಾಲುವೆಗೆ ನೀರು ನಿಲುಗಡೆ.  ನ. 16 ರಿಂದ ನ. 20 ರವರೆಗೆ ಸರಾಸರಿ 1100 ಕ್ಯೂಸೆಕ್‍ನಂತೆ ನೀರು ಹರಿಸಲಾಗುವುದು.
     ರಾಯ ಬಸವಣ್ಣ ಕಾಲುವೆಗೆ ಸೆ. 17 ರಿಂದ ಡಿಸೆಂಬರ್ 10 ರವರೆಗೆ 160 ಕ್ಯೂಸೆಕ್‍ನಂತೆ ನೀರು ಹರಿಸಲಾಗುವುದು.  ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹಣೆ ಕಡಿಮೆ ಇದ್ದು, ಲಭ್ಯವಾಗುವ ನೀರಿನ ಪ್ರಮಾಣಕ್ಕೆ ಅನುಗುಣವಾಗಿ ರೈತರು ಮುಂಗಾರು ಹಂಗಾಮಿಗೆ ಲೋಕಲೈಜ್ ಆದ ಅಚ್ಚುಕಟ್ಟಿನಲ್ಲಿ ನಿಗದಿತ ಬೆಳೆಗಳನ್ನು ಮಾತ್ರ ಬೆಳೆಯಬೇಕು.  ಎಲ್ಲಾ ಕಾಲುವೆಯಡಿ ಈಗ ತಿಳಿಸಿರುವಂತೆ ಅಥವಾ ಕಾಲುವೆಗಳಡಿ ನೀರು ಲಭ್ಯತೆಯ ಅನುಸಾರ ಹರಿಸಲಾಗುವುದು.  ಇದರಲ್ಲಿ ಯಾವುದು ಮೊದಲೋ ಅದು ಅನ್ವಯಿಸುತ್ತದೆ ಎಂದು ತುಂಗಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರ ಭೋಜಾನಾಯ್ಕ ಕಟ್ಟಿಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Monday, 19 September 2016

ಭಾಗ್ಯವಾಣಿ : ಮನಸ್ವಿನಿ ಮೈತ್ರಿ ಪಿಂಚಣಿಗಳಿಂದ ನೊಂದ ಮನಗಳಿಗೆ ಸಾಂತ್ವನ

ಕೊಪ್ಪಳ ಸೆ. 19 (ಕರ್ನಾಟಕ ವಾರ್ತೆ): ‘ಪ್ರಥಮ ಬಾರಿಗೆ ಲಿಂಗತ್ವ ಅಲ್ಪ ಸಂಖ್ಯಾತರಿಗೆ ನೀವು ಕೂಡಾ ಸಮಾಜದ ಒಂದು ಅಂಗ, ನಿಮಗೂ ಆರ್ಥಿಕ ಭದ್ರತೆ ಜೊತೆಗೆ ¸ಮಾಜದಲ್ಲಿ ಸಮಾನ ಗೌರವದ ಅವಶ್ಯಕತೆ ಇದೆ ಎಂದು ಗುರುತಿಸಿ ಮೈತ್ರಿ ಪಿಂಚಣಿ ಯೋಜನೆ ಮೂಲಕ ನೊಂದ ಮನಗಳಿಗೆ ಸಾಂತ್ವನ ಭರವಸೆ ಮೂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರಕ್ಕೆ ಸದಾ ಋಣಿ’  ಇದು ಚಿಕ್ಕಬಳ್ಳಾಪುರದ ಉಷಾಕಿರಣ, ನೆಲಮಂಗಲದ ಚಂದ್ರಿಕಾ, ದೇವನಹಳ್ಳಿ ಮುನಿಯಪ್ಪ ಅವರುಗಳ ಮನದುಂಬಿದ ಮಾತು.
         ಆಕಾಶವಾಣಿ ಸಹಯೋಗದಲ್ಲಿ ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ರಾಜ್ಯ ಸರ್ಕಾರದ ಮಹತ್ವದ ಜನಪರ ಯೋಜನೆಗಳ ಮಾಹಿತಿಯನ್ನು ಜನರಿಗೆ ತಲುಪಿಸುವ ಪ್ರಯತ್ನದ ಭಾಗ್ಯವಾಣಿ ಕಾರ್ಯಕ್ರಮ ಸರಣಿಯಲ್ಲಿ ಭಾನುವಾರದಂದು ಸಂಜೆ 7 ರಿಂದ 7-30ರ ವರೆಗೆ ರಾಜ್ಯಾದ್ಯಂತ 13 ಆಕಾಶವಾಣಿ ಕೇಂದ್ರಗಳಿಂದ ಪ್ರಸಾರವಾದ ಮೈತ್ರಿ ಮತ್ತು ಮನಸ್ವಿನಿ ಸಾಮಾಜಿಕ ಭದ್ರತಾ ಪಿಂಚಣಿಗಳ ಕುರಿತ ಮಾಹಿತಿ ಕಾರ್ಯಕ್ರಮದ ಜನವಾಣಿಯಲ್ಲಿ ವ್ಯಕ್ತಪಡಿಸಿದ ಈ ಮಾತು, ಯಾರು ಕೂಡಾ ಹೊಣೆಯಲ್ಲದ ಈ ಹುಟ್ಟಿನಿಂದಾಗಿ ಲಿಂಗತ್ವ ಅಲ್ಪ ಸಂಖ್ಯಾತರಾದವರ ಹಾಗೂ ನಂತರದ ಬದುಕಿಗೆ ಈಡಾಗಿ ಸಂಕಷ್ಟದಲ್ಲಿರುವ ಒಬ್ಬೊಂಟಿ ಹೆಣ್ಣುಮಕ್ಕಳ ಮನಗಳ ಮಾತು ಕೂಡಾ ಆಗಿರಲು ಸಾಧ್ಯ.
    ಕಂದಾಯ ಇಲಾಖೆಯ ಸಾಮಾಜಿಕ ಭದ್ರತೆ ಪಿಂಚಣಿ ನಿರ್ದೇಶನಾಲಯದ ಉಪ ನಿರ್ದೇಶಕಿ ಡಾ. ಸವಿತಾ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿ, ಮನಸ್ವಿನಿ ಪಿಂಚಣಿ ಯೋಜನೆಯಡಿ 78 ಸಾವಿರ, ಮೈತ್ರಿ ಯೋಜನೆಯಡಿ 16 ಸಾವಿರ ಫಲಾನುಭವಿಗಳಿಗೆ ಪ್ರತಿ ಮಾಹೆ ತಲಾ 500 ರೂ. ಗಳ ಪಿಂಚಣಿಯನ್ನು ಖಜಾನೆ ಮೂಲಕ ನೇರವಾಗಿ ಅವರ ಬ್ಯಾಂಕ, ಅಂಚೆ ಖಾತೆಗೆ ಅಥವಾ ಎಂ.ಓ. ಮೂಲಕ ವಿತರಿಸಲಾಗುತ್ತಿದೆ. ಇನ್ನೂ ಪಿಂಚಣಿ ಪಡೆಯದಿರುವ ಅರ್ಹ ಫಲಾನುಭವಿಗಳು ಸಮೀಪದ ನಾಡ ಕಚೇರಿಗೆ ಹೋಗಿ ಬಿಪಿಎಲ್, ವಿಳಾಸದ ಧೃಢೀಕರಣದ ಜೊತೆಗೆ ಮನಸ್ವಿನಿ ಪಿಂಚಣಿಗೆ 40 ರಿಂದ 64 ವಯೋಮಿತಿಯಲ್ಲಿದ್ದು ಬಡತನ ರೇಖೆಗಿಂತ ಕೆಳಗಿರುವ ಮದುವೆ ಆಗದ ಅಥವಾ ವಿವಾಹ ವಿಚ್ಛೇದಿತ ಮಹಿಳೆ ಅಥವಾ  ಗಂಟ ಬಿಟ್ಟ ಕುರಿತಂತೆ ಹಾಗೂ ಮೈತ್ರಿ ಪಿಂಚಣಿಗಾದರೆ ಹಾಗೂ 25 ವರ್ಷದಿಂದ ಮೇಲ್ಪಟ್ಟ ಲಿಂಗತ್ವ ಅಲ್ಪ ಸಂಖ್ಯಾತರಿರುವ  ಸಂಬಂಧಿತ ಮಾನ್ಯತೆ ಪಡೆದ ಧೃಢೀಕರಣ ಪತ್ರಗಳನ್ನು ಸ್ವವಿವರದ ಅರ್ಜಿಯೊಂದಿಗೆ ನೀಡಬೇಕು. ಈ ಮಾಹಿತಿ ಇರುವ ಎಲ್ಲರೂ ಅರ್ಹರಿರುವವರಿಗೆ ಮಾಹಿತಿ ನೀಡಿ ಈ ವಿಶಿಷ್ಟ ವರ್ಗಗಳ ಆರ್ಥಿಕ ಆಸರೆ ಜೊತೆಗೆ ಜೀವನಕ್ಕೊಂದಿಷ್ಟು ನೆಮ್ಮದಿ ನೀಡುವ ಕಾರ್ಯದಲ್ಲಿ ಭಾಗಿಯಾಗಲು ಮನವಿ ಮಾಡಿದರು.
     ಭಾಗ್ಯ ವಾಣಿಯ ಜಯಣ್ಣ ಹನುಮಕ್ಕ ಹಾಗೂ ಶರಣಪ್ಪನ ಪಾತ್ರಗಳು ಈ ಬಾರಿ ಮೇಗಲಟ್ಟಿಯ ದ್ಯಾವೇರಿಯನ್ನು ಕೇಂದ್ರವಾಗಿಟ್ಟುಕೊಂಡು ಮದುವೆ ಆಗದ ಅಥವಾ ವಿವಾಹ ವಿಚ್ಛೇದಿತ ಮಹಿಳೆ ಅಥವಾ  ಗಂಡ ಬಿಟ್ಟ ಹತಾಶ ಹೆಣ್ಣು ಜೀವನಕ್ಕೆ ಮನಸ್ವಿನಿ ಹೇಗೆ ಸಂಜೀವಿನಿಯಾಗಲಿದೆ ಎಂದು ಗ್ರಾಮೀಣ ಭಾಷೆ, ಸಹಜ ಸಂಭಾಷಣೆ ರೂಪದಲ್ಲಿ ನೀಡಿದ ಮಾಹಿಲಿಯಂತಹ ಹೆಣ್ಣುಮಕ್ಕಳ ಕುರಿತು, ಕಪಿಲ ಶ್ರೀಧರ ಅವರ ನಿರ್ಲಕ್ಷ್ಯದ ಬೇಗೆಯಲಿ ನಲುಗಿದ ಜೀವ ಆಸರೆ ಬಯಸಿದೆ ಎನ್ನುವ ಹಾಡು.  ಲಿಂಗತ್ವ ಅಲ್ಪಸಂಖ್ಯಾತರ ಕುರಿತ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಅವರ ಯಾರು ಕೂಡಾ ಹೊಣೆಯಲ್ಲ ಈ ಹುಟ್ಟಿಗೆ ಎನ್ನುವ ಹಾಡು ಪಾಡು  ಕಾರ್ಯಕ್ರಮದ ಮಹತ್ವವನ್ನು ಹೆಚ್ಚಿಸಿದವು.  ಮೈಸೂರು ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಎನ್. ಕೇಶವ್‍ಮೂರ್ತಿ ಇದನ್ನು ಸಮರ್ಥವಾಗಿ  ಮತ್ತು ಸಹಜತೆಯಿಂದ ನಿರ್ಮಿಸಿ, ಕಾರ್ಯಕ್ರಮದಲ್ಲಿ ಜಯಣ್ಣ ರೂಪದಲ್ಲಿ ಭಾಗಿಯಾಗಿದ್ದರು.
     13 ಸರಣಿಗಳ ಭಾಗ್ಯವಾಣಿ ಸರಣಿ ಪ್ರತಿ ಭಾನುವಾರ ರಾತ್ರಿ 7 ರಿಂದ 7-30 ಗಂಟೆಯವರೆಗೆ ರಾಜ್ಯದ 13 ಆಕಾಶವಾಣಿ ಕೇಂದ್ರಗಳ ಮೂಲಕ ರಾಜ್ಯಾದ್ಯಂತ ಪ್ರಸಾರವಾಗುತ್ತಿದೆ. ಬರುವ ಭಾನುವಾರ ಸೆಪ್ಟೆಂಬರ್ 25 ರಂದು ಪರಿಶಿಷ್ಟರ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಗಳ ಫಲಾನುಭವಿಗಳ ಮತ್ತು ಆಶ್ರಯ ಮನೆಸಾಲದ ಭಾರ ಹೊಂದಿದ್ದವರಿಗೆ ಸಾಲ ಮನ್ನಾ ಮಾಡಿ ಹೊಸ ಬದುಕಿನ ಆಶಯಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುನ್ನಡಿ ಹಾಕಿಕೊಟ್ಟ ಋಣಮುಕ್ತ ಯೋಜನೆ ಕುರಿತು ಕಾರ್ಯಕ್ರಮ ಪ್ರಸಾರವಾಗಲಿದೆ.

ಸೆ. 22 ರಿಂದ ಕಲಬುರಗಿ ಮತ್ತು ಬಳ್ಳಾರಿಯಲ್ಲಿ ವಿಭಾಗ ಮಟ್ಟದ ದಸರಾ ಕ್ರೀಡಾಕೂಟ

ಕೊಪ್ಪಳ ಸೆ. 19 (ಕರ್ನಾಟಕ ವಾರ್ತೆ): ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಪ್ರಸಕ್ತ ಸಾಲಿನ ಕಲಬುರಗಿ ವಿಭಾಗ ಮಟ್ಟದ ದಸರಾ ಕ್ರೀಡಾಕೂಟವನ್ನು ಸೆ. 22 ರಿಂದ 23 ರವರೆಗೆ ಎರಡು ದಿನಗಳ ಕಾಲ ಕಲಬುರಗಿಯ ಚಂದ್ರಶೇಖರ ಪಾಟೀಲ್ ಜಿಲ್ಲಾ ಕ್ರೀಡಾಂಗಣ ಮತ್ತು ಬಳ್ಳಾರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದೆ.
     ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಜರುಗಿದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ವೈಯಕ್ತಿಕ ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ಕ್ರೀಡಾಪಟುಗಳು ಹಾಗೂ ಗುಂಪು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕ್ರೀಡಾಪಟುಗಳು ವಿಭಾಗಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಅರ್ಹರು.  ಹಾಕಿ, ಫುಟ್‍ಬಾಲ್, ಬ್ಯಾಂಡ್‍ಮಿಂಟನ್, ಬಾಲ್ ಬ್ಯಾಡ್‍ಮಿಂಟನ್ ಕ್ರೀಡೆಗಳು ಬಳ್ಳಾರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಲಿವೆ.  ಉಳಿದ ಕ್ರೀಡೆಗಳ ಸ್ಪರ್ಧೆಗಳು ಕಲಬುರಗಿಯ ಚಂದ್ರಶೇಖರ ಪಾಟೀಲ್ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿವೆ.  ಆಯಾ ಕ್ರೀಡಾ ಪಟುಗಳು ನಿಗದಿತ ದಿನದಂದು ನಿಗದಿತ ಜಿಲ್ಲೆಗಳ ಕ್ರೀಡಾಂಗಣಕ್ಕೆ ಸೆ. 21 ರಂದು ಸಂಜೆ 05 ಗಂಟೆಯ ಒಳಗಾಗಿ ತಮ್ಮ ತಂಡದೊಂದಿಗೆ ವರದಿ ಮಾಡಿಕೊಳ್ಳಬೇಕು.  ಹೆಚ್ಚಿನ ಮಾಹಿತಿಗೆ ದೂರವಾಣಿ ಸಂ: 08539-201400 ಕ್ಕೆ ಸಂಪರ್ಕಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಶ್ವಕರ್ಮ ಅಭಿವೃದ್ಧಿ ನಿಗಮದಿಂದ ಸಮಾಜದ ಅಭಿವೃದ್ಧಿಗೆ ಸರ್ಕಾರದ ಕ್ರಮ : ರಾಘವೇಂದ್ರ ಹಿಟ್ನಾಳ

ಕೊಪ್ಪಳ ಸೆ. 19 (ಕರ್ನಾಟಕ ವಾರ್ತೆ): ವಿಶ್ವಕರ್ಮ ಅಭಿವೃದ್ಧಿ ನಿಗಮ ಸ್ಥಾಪನೆಯ ಮೂಲಕ ವಿಶ್ವಕರ್ಮ ಸಮಾಜದ ಅಭಿವೃದ್ಧಿಗೆ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಹೇಳಿದರು.

     ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ವಿಶ್ವಕರ್ಮ ಸಮಾಜದ ಸಹಯೋಗದಲ್ಲಿ ನಗರದ ಸಿರಸಪ್ಪಯ್ಯನಮಠದ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

     ಹಿಂದುಳಿದ ವರ್ಗದ ಸಮಾಜಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಪಣತೊಟ್ಟಿದ್ದು, ಕೊಪ್ಪಳದಲ್ಲಿ ವಿಶ್ವಕರ್ಮ ಸಮುದಾಯ ಭವನ ನಿರ್ಮಾಣಕ್ಕೆ ತಮ್ಮ ಶಾಸಕರ ಅನುದಾನದಲ್ಲಿ 10 ಲಕ್ಷ ರೂ. ನೀಡಲಾಗುವುದು.  ಪ್ರತಿ ಸಮಾಜಕ್ಕೂ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೈಗೊಂಡಿದೆ.  ಈ ಮೂಲಕ ಎಲ್ಲ ಸಮುದಾಯಗಳ ಸಬಲೀಕರಣಕ್ಕೆ ಮುಂದಾಗಿದೆ.  ವಿಶ್ವಕರ್ಮ ಜನಾಂಗದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ವಿಶ್ವಕರ್ಮ ಅಭಿವೃದ್ಧಿ ನಿಗಮವನ್ನು ಪ್ರತ್ಯೇಕವಾಗಿ ಘೋಷಣೆ ಮಾಡಿ ವಿವಿಧ ಯೋಜನೆಯಡಿ ಅನುದಾನ ನೀಡುತ್ತಿದೆ.  ಬಸವಣ್ಣನ ಅನುಭವ ಮಂಟಪದಂತೆ ಈಗಿನ ಸಚಿವ ಸಂಪುಟ ಅಭಿವೃದ್ಧಿ ಪಥದಲ್ಲಿ ಕೆಲಸ ಮಾಡುತ್ತಿದೆ ಎಂದರು.   ದಾರ್ಶನಿಕರ ಜಯಂತಿಗಳ ಆಚರಣೆಗೆ ರಾಜ್ಯ ಸರ್ಕಾರ ಹೆಚ್ಚಿನ ಒತ್ತು ನೀಡಿದ್ದು, ಶೋಷಿತ ಹಾಗೂ ಹಿಂದುಳಿದ ವರ್ಗ ಸಮುದಾಯದವರೂ ಕೂಡ ಸಂಘಟಿತರಾಗಿ ವಿವಿಧ ಸೌಲಭ್ಯ ಪಡೆಯಲಿ ಎನ್ನುವ ಉದ್ದೇಶದಿಂದ ಜಯಂತಿ ಆಚರಣೆ ಮಾಡಲಾಗುತ್ತಿದೆ.  ವಿಶ್ವಕರ್ಮ ಸಮಾಜ ಸೇರಿದಂತೆ ಹಿಂದುಳಿದ ಎಲ್ಲ ಸಮುದಾಯದ ಜನತೆ ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಿದರೆ ಸಮಾಜದ ಅಭಿವೃದ್ಧಿ ಕಾಣಲು ಸಾಧ್ಯ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಹೇಳಿದರು.

     ಕೂಡ್ಲಗಿ ತಾಲೂಕು ಖಾನಾ ಹೊಸಳ್ಳಿಯ ನಿವೃತ್ತ ಪ್ರಾಂಶುಪಾಲ ಹಾಗೂ ಸಾಹಿತಿ ಡಾ. ವೃಷಬೇಂದ್ರಾಚಾರ್ಯ ಅರ್ಕಸಾಲಿ ಅವರು ವಿಶೇಷ ಉಪನ್ಯಾಸ ನೀಡಿ, ರಾಜ್ಯ ಸರ್ಕಾರ ವಿಶ್ವಕರ್ಮ ಸಮಾಜವನ್ನು ಈಗ ಗುರುತಿಸಿ ಜಯಂತಿ ಆಚರಣೆಗೆ ಅನುವು ಮಾಡಿಕೊಟ್ಟಿರುವುದು ಅಭಿನಂದನಾರ್ಹ.   ವಿಶ್ವಕರ್ಮ ಸಮಾಜ ಜಗತ್ತಿಗೆ ಅದ್ಭುತ ಕಲೆ ನೀಡಿದ ಸಮಾಜ. ಈಡಿ ವಿಶ್ವವೇ ದೇಶದತ್ತ ತಿರುಗಿ ನೋಡುವಂತೆ ಮಾಡಿದ ಸಮಾಜ. ನಮ್ಮ ದೇಶದಲ್ಲಿ ಐತಿಹಾಸಿಕ ದೇವಸ್ಥಾನ, ಶಿಲ್ಪಕಲೆ, ವಿವಿಧ ಮಹಲ್‍ಗಳು ವಿಶ್ವಕರ್ಮಿಯ ಜನಾಂಗದವರು ನಿರ್ಮಿಸಿದ್ದು ಎನ್ನುವುದಕ್ಕೆ ಹೆಮ್ಮೆ ಎನಿಸುತ್ತದೆ.  ನಮ್ಮಲ್ಲಿನ ಐತಿಹಾಸಿಕ ಸ್ಥಳಗಳ ವೀಕ್ಷಣೆಗೆ ವಿದೇಶಿಗರು ಆಗಮಿಸುತ್ತಿದ್ದಾರೆ. ಎಲ್ಲ ಸಮಾಜಕ್ಕೂ ವಿಶ್ವಕರ್ಮ ಸಮಾಜ ಗುರು ಸ್ಥಾನದಲ್ಲಿತ್ತು. ಈ ಹಿಂದೆ ರಾಜ ಮಹಾರಾಜರ ಕಾಲಾವಧಿಯಲ್ಲಿ ವಿಶ್ವಕರ್ಮರಿಗೆ ವಿಶ್ವ ಭ್ರಾಹ್ಮಣ ಎಂದು ಗುರು ಸ್ಥಾನದಲ್ಲಿರಿಸಿ ಗೌರವಿಸುತ್ತಿದ್ದರು. ಈ ಸಮಾಜದ ಜನಾಂಗ ಕುಶಲಕರ್ಮಿಗಳಾಗಿ ವಿವಿಧ ವೃತ್ತಿಯಲ್ಲಿ ತೊಡಗಿದವರು.  ನಾವೆಲ್ಲರೂ ನಿರಂತರ ಕರ್ಮ ಯೋಗಿಗಳಾಗಬೇಕು. ಬಸವಣ್ಣನವರ ಕಾಯಕವೇ ಕೈಲಾಸ ಎನ್ನುವ ಮಾತಿನಂತೆ, ಕಾಯಕದಲ್ಲಿ ತೊಡಗಬೇಕು ಎಂದರು.

     ಸಹಾಯಕ ಆಯುಕ್ತ ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಸಮಾರಂಭದಲ್ಲಿ ಸಿರಸಪ್ಪಯ್ಯ ಸ್ವಾಮೀಜಿ, ಗುರುನಾಥ ಸ್ವಾಮಿ ಮುದ್ದಾಬಳ್ಳಿ, ಲೆಕ್ಕಿಹಾಳ ಸಿರಸಪ್ಪಯ್ಯ ಸ್ವಾಮಿ, ಶಂಕರಸ್ವಾಮಿ ಸಾನಿಧ್ಯ ವಹಿಸಿದ್ದರು.   ಅಪರ ಜಿಲ್ಲಾಧಿಕಾರಿ ಡಾ.ರುದ್ರೇಶ ಘಾಳಿ, ತಾಪಂ ಅಧ್ಯಕ್ಷ ಬಾಲಚಂದ್ರನ್, ನಗರಸಭೆ ಸದಸ್ಯ ಮುತ್ತು ಕುಷ್ಟಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಸಿ.ವಿ. ಜಡಿಯವರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.  ಸಮಾರಂಭಕ್ಕೂ ಮುನ್ನ ನಗರದ ಗೋವಿಂದರಾಯ ದೇವಸ್ಥಾನದಿಂದ ಸಿರಸಪ್ಪಯ್ಯನ ಮಠದ ವರೆಗೂ ವಿಶ್ವಕರ್ಮರ ಭಾವಚಿತ್ರದ ಮೆರವಣಿಗೆ ರಥದಲ್ಲಿ ಅದ್ಧೂರಿಯಿಂದ ಸಾಗಿತು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ವಿವಿಧ ವೇಷಧಾರಿಗಳ ನೃತ್ಯವು ನೋಡುಗರ ಗಮನ ಸೆಳೆಯಿತು.  ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಮೆರವಣಿಗೆಗೆ ಚಾಲನೆ ನೀಡಿದರು.

ಕೊಪ್ಪಳ : ಸೆ. 20 ರಂದು ನೀರು ಪೂರೈಕೆಯಲ್ಲಿ ವ್ಯತ್ಯಯ

ಕೊಪ್ಪಳ ಸೆ. 19 (ಕರ್ನಾಟಕ ವಾರ್ತೆ): ಕೊಪ್ಪಳ ನಗರಕ್ಕೆ ನೀರು ಪೂರೈಕೆ ಆಗುವ ಮುಖ್ಯ ಕೇಂದ್ರವಾದ ಕಾತರಕಿ ಗ್ರಾಮದ ವಿದ್ಯುತ್ ಲೈನ್ ಸೆ. 20 ರಂದು ದುರಸ್ತಿ ಮಾಡಲಾಗುತ್ತಿರುವುದರಿಂದ, ಅಂದು ನಗರಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.  ಸಾರ್ವಜನಿಕರು ಕೊಪ್ಪಳ ನಗರಸಭೆಯೊಂದಿಗೆ ಸಹಕರಿಸುವಂತೆ ಪೌರಾಯುಕ್ತರು ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

Saturday, 17 September 2016

ಹೈದ್ರಾಬಾದ್-ಕರ್ನಾಟಕ ವಿಮೋಚನಾ ದಿನಾಚರಣೆ : ಕೊಪ್ಪಳದಲ್ಲಿ ರಾಷ್ಟ್ರ ಧ್ವಜಾರೋಹಣ

ಹೈದ್ರಾಬಾದ್-ಕರ್ನಾಟಕ ವಿಮೋಚನಾ ದಿನಾಚರಣೆ ಅಂಗವಾಗಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಉನ್ನತ ಶಿಕ್ಷಣ ಮಂತ್ರಿಗಳಾದ ಶ್ರೀ ಬಸವರಾಜ ರಾಯರಡ್ಡಿ ಅವರು ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ನಂತರ ಸ್ವಾತಂತ್ರ್ಯ ಯೋಧರಿಗೆ ಸನ್ಮಾನ ಕಾರ್ಯಕ್ರಮ ಜರುಗಿದವು. ವಿದ್ಯಾಥಿಗಳಿಂದ ಆಕರ್ಷಕ ಕಾರ್ಯಕ್ರಮ ನೆರವೇರಿತು.