Sunday, 17 July 2016

ಅಧಿಕಾರಿಗಳು ಜನಪರ ಮನೋಭಾವದಿಂದ ಕೆಲಸ ಮಾಡಿ- ಸಚಿವ ಬಸವರಾಜ ರಾಯರಡ್ಡಿ

ಕೊಪ್ಪಳ ಜು. 17 (ಕರ್ನಾಟಕ ವಾರ್ತೆ): ಆಡಳಿತವನ್ನು ಸಂಘರ್ಷದೊಂದಿಗೆ ಕೊಂಡೊಯ್ಯುವ ವ್ಯಕ್ತಿ ನಾನಲ್ಲ.  ಅಧಿಕಾರಿಗಳು ಜನಪರ ಮನೋಭಾವದಿಂದ, ಜನರ ಸಮಸ್ಯೆಗಳನ್ನು ಅರಿತು, ಪರಿಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಅಧಿಕಾರಿಗಳಿಗೆ ಹೇಳಿದರು.
      ಕುಷ್ಟಗಿಯ ಸಕ್ರ್ಯೂಟ್‍ಹೌಸ್‍ನಲ್ಲಿ ಭಾನುವಾರದಂದು, ಅಧಿಕಾರಿಗಳೊಂದಿಗೆ ಔಪಚಾರಿಕ ಸಭೆ ನಡೆಸಿ, ಅವರು ಮಾತನಾಡಿದರು.
     ಅಧಿಕಾರಿಗಳು ಜನಸಂಪರ್ಕ ಬೆಳೆಸಿಕೊಳ್ಳಬೇಕು.  ಕಚೇರಿಯಲ್ಲಿದ್ದುಕೊಂಡು ಮಾತ್ರ ಕೆಲಸ ನಿರ್ವಹಿಸಿದರೆ, ಜನರ ಸಮಸ್ಯೆ ಅರಿವಾಗದು.  ಸಚಿವರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜನಸೇವಕರಾಗಿದ್ದು, ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಜೊತೆ ಜೊತೆಯಲ್ಲಿ ಸಾಗಬೇಕು.  ಸರ್ಕಾರ ಜನರ ಶ್ರೇಯೋಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಲು ಸಾಕಷ್ಟು ಅನುದಾನವನ್ನು ಒದಗಿಸುತ್ತಿದೆ.   ಅದು ಸದುಪಯೊಗ ಆಗಬೇಕು.  ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸೌಲಭ್ಯ ತಲುಪಬೇಕು.  ಆಡಳಿತವನ್ನು ಸಂಘರ್ಷದೊಂದಿಗೆ ಕೊಂಡೊಯ್ಯುವ ವ್ಯಕ್ತಿ ನಾನಲ್ಲ.  ಅಧಿಕಾರಿಗಳು ಜನಪರ ಮನೋಭಾವದಿಂದ ಕೆಲಸ ಮಾಡಬೇಕು.  ಅನುಷ್ಠಾನಾಧಿಕಾರಿಗಳು ಕ್ಷೇತ್ರಗಳಿಗೆ, ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಬೇಕು.  ಇದರಿಂದ ಗುಣಮಟ್ಟ ಅರಿವಿಗೆ ಬರಲಿದೆ.  ನೀತಿ, ನಿಯಮ, ಕಾನೂನಿನ ಚೌಕಟ್ಟಿನಲ್ಲಿಯೇ ಅಧಿಕಾರಿಗಳು ಕೆಲಸ ಮಾಡಬೇಕು.  ಕರ್ತವ್ಯ ಪರಿಪಾಲನೆ ಸರಿಯಾಗಿ ಮಾಡಬೆಕು.  ತಹಸಿಲ್ದಾರರ ಕಚೇರಿಗಳಲ್ಲಿ ಕೆಲಸದ ಒತ್ತಡ ಇರುವುದು ಸಹಜ.  ಆದರೆ ಜನರ ನಿರೀಕ್ಷೆಯೂ ಬಹಳಷ್ಟಿದೆ.  ಅದಕ್ಕೆ ಅನುಗುಣವಾಗಿ ನಾವು ಕೆಲಸ ಮಾಡಬೇಕಿದೆ.  ಮುಂದಿನ ವಾರ ಜಿಲ್ಲಾ ಮಟ್ಟದಲ್ಲಿ ಎರಡು ದಿನಗಳ ಕಾಲ ಇಲಾಖಾವಾರು ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುವುದು.  ಆಗಸ್ಟ್ ತಿಂಗಳಿನಲ್ಲಿ ಪ್ರತಿಯೊಂದು ತಾಲೂಕುವಾರು ಪ್ರತ್ಯೇಕ ಪರಿಶೀಲನಾ ಸಭೆ ಕೈಗೊಳ್ಳಲಾಗುವುದು.  ಅಧಿಕಾರಿಗಳು ಸಮರ್ಪಕ ಮಾಹಿತಿ ಒದಗಿಸಲು ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಎಲ್ಲ ತಾಲೂಕುಗಳಿಗೂ ಸ್ನಾತಕೋತ್ತರ ಕೇಂದ್ರ : ಅಧಿಕಾರಿಗಳೊಂದಿಗಿನ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಸ್ನಾತಕೋತ್ತರ ಅಧ್ಯಯನ ಕೇಂದ್ರ (ಪಿಜಿ. ಸೆಂಟರ್) ಪ್ರಾರಂಭಿಸಲಾಗಿದ್ದು, ಈಗಾಗಲೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ.  ಕೊಪ್ಪಳದಲ್ಲಿ ಪಿಜಿ ಸೆಂಟರ್ ಅನ್ನು ಮಾದರಿಯನ್ನಾಗಿಸುವ ನಿಟ್ಟಿನಲ್ಲಿ ಅಂದರೆ ಗುಣಮಟ್ಟದ ಶಿಕ್ಷಣ ಹಾಗೂ ವಿದ್ಯಾರ್ಥಿಗಳಿಗೆ ವಸತಿ ಸಹಿತ ಕಾಲೇಜು ಲಭ್ಯವಿರುವಂತಾಗಲು ಒಂದೇ ಕಡೆ ಕನಿಷ್ಟ 15 ಎಕರೆ ಜಾಗವನ್ನು ಗುರುತಿಸುವಂತೆ ಜಿಲ್ಲಾಧಿಕಾರಿಗಳಿಗೆ ಹಾಗೂ ಶಾಸಕರಿಗೆ ತಿಳಿಸಲಾಗಿದೆ.  ದದೇಗಲ್ ಬಳಿ ಒಂದೇ ಕಡೆ 15 ಎಕರೆ ಜಾಗ ಲಭ್ಯವಿರದ ಕಾರಣ, ಶಾಸಕರು ಮುನಿರಾಬಾದ್ ಬಳಿ ಭೂಮಿ ಲಭ್ಯವಿರುವುದಾಗಿ ತಿಳಿಸಿದ್ದಾರೆ.  ಪರಿಶೀಲನೆ ನಡೆಸಿ, ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.  ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲೂ ಪಿ.ಜಿ. ಸೆಂಟರ್ ಪ್ರಾರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ಸಚಿವ ಬಸವರಾಜ ರಾಯರಡ್ಡಿ ಅವರು ಹೇಳಿದರು.
     ಕುಷ್ಟಗಿ ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ, ಕೊಪ್ಪಳ ಮಾಜಿ ಶಾಸಕ ಬಸವರಾಜ ಹಿಟ್ನಾಳ, ಪುರಸಭೆ ಅಧ್ಯಕ್ಷ ಕಲ್ಲೇಶ್ ತಾಳದ, ತಾ.ಪಂ. ಅಧ್ಯಕ್ಷೆ ಮಹಾಂತಮ್ಮ ಪೂಜಾರ್, ಜಿ.ಪಂ. ಸದಸ್ಯರುಗಳಾದ ಕೆ. ಮಹೇಶ್, ಹನುಮಗೌಡ ಪಾಟೀಲ್, ವಿಜಯನಾಯಕ್, ಗಣ್ಯರಾದ ಕೆ. ಶರಣಪ್ಪ ಸೇರಿದಂತೆ ಹಲವು ಗಣ್ಯಾತಿಗಣ್ಯರು, ಕುಷ್ಟಗಿ ತಹಸಿಲ್ದಾರ್ ವೇದವ್ಯಾಸ ಮುತಾಲಿಕ್ ಹಾಗೂ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Post a Comment