Tuesday, 19 July 2016

ಶೌಚಾಲಯ ಸ್ವಾಭಿಮಾನದ ಸಂಕೇತ : ಕೋಳೂರಿನಲ್ಲಿ ಜಾಗೃತಿ ಕಾರ್ಯಕ್ರಮ

 
ಕೊಪ್ಪಳ ಜು. 18 (ಕರ್ನಾಟಕ ವಾರ್ತೆ): ಈಗಿನ ದಿನಗಳಲ್ಲಿ ಪ್ರತಿಯೊಂದು ಕುಟುಂಬದಲ್ಲಿಯೂ ಬಗೆ ಬಗೆಯ ಸ್ಮಾರ್ಟ್‍ಫೋನ್ ಗಳನ್ನು ಖರೀದಿಸಿ ಬಳಸಲಾಗುತ್ತಿದೆ.  ಆದರೆ ಕುಟುಂಬಕ್ಕೆ ಅತ್ಯಾವಶ್ಯಕವಾಗಿರುವ ಶೌಚಾಲಯ ನಿರ್ಮಿಸಲು ಹಿಂಜರಿಯುತ್ತಾರೆ. ವಾಸ್ತವವಾಗಿ ಶೌಚಾಲಯ ಎಲ್ಲ ಕುಟುಂಬಗಳ ಸ್ವಾಭಿಮಾನದ ಸಂಕೇತವಾಗಿದ್ದು, ಪ್ರತಿಯೊಬ್ಬರೂ ಶೌಚಾಲಯವನ್ನು ನಿರ್ಮಿಸಿಕೊಂಡು, ಕಡ್ಡಾಯವಾಗಿ ಅದನ್ನು ಬಳಸುವಂತಾಗಬೇಕು ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಎಸ್.ಬಿ. ನಾಗರಳ್ಳಿ ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ಗ್ರಾಮಸ್ಥರಲ್ಲಿ ಮನವಿ ಮಾಡಿಕೊಂಡರು.

     ತಾಲೂಕಿನ ಕೊಳೂರು ಗ್ರಾಮಕ್ಕೆ ಮಂಗಳವಾರದಂದು ಬೆಳ್ಳಂಬೆಳಿಗ್ಗೆ ಅಂದರೆ ಸುಮಾರು 5-30 ಗಂಟೆಗೆ ಜಿ.ಪಂ. ಅಧ್ಯಕ್ಷ ಎಸ್.ಬಿ. ನಾಗರಳ್ಳಿ ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರನ್ನೊಳಗೊಂಡ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ತಂಡ, ಗ್ರಾಮದ ಮನೆ, ಮನೆಗೆ ಭೇಟಿ ನೀಡಿ, ಶೌಚಾಲಯದ ಮಹತ್ವವನ್ನು ತಿಳಿಸಿ ಹೇಳಿದರಲ್ಲದೆ, ಪ್ರತಿಯೊಬ್ಬರೂ ಶೌಚಾಲಯವನ್ನು ನಿರ್ಮಿಸಿಕೊಂಡು, ತಪ್ಪದೆ ಬಳಸುವಂತೆ ಜಾಗೃತಿ ಮೂಡಿಸಿದರು. 

      ಜಿಲ್ಲಾ ಪಂಚಾಯತಿ ಅಧ್ಯಕ್ಷ ಎಸ್.ಬಿ. ನಾಗರಳ್ಳಿ ಅವರು ವಯಕ್ತಿಕ ಶೌಚಾಲಯ ನಿರ್ಮಾಣದ ಕಾರ್ಯಾದೇಶ ಪತ್ರವನ್ನು ಫಲಾನುಭವಿಗಳಿ ನೀಡಿ, ಸರ್ಕಾರದ ಸಹಾಯಧನವನ್ನು ಸದುಪಯೋಗ ಪಡಿಸಿಕೊಂಡು, ಗ್ರಾಮದ ಎಲ್ಲ ಕುಟುಂಬಗಳೂ ತಪ್ಪದೆ ವಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಬೇಕು.  ವಯಕ್ತಿಕ ಶೌಚಾಲಯ ನಿರ್ಮಾಣ ಹಾಗೂ ಬಳಕೆಯಿಂದ, ಸುತ್ತಮುತ್ತಲ ಪರಿಸರ ಸ್ವಚ್ಛವಾಗಿರಿಸಿಕೊಳ್ಳಬಹುದಲ್ಲದೆ, ಆರೋಗ್ಯವನ್ನು ಸಹ ಕಾಪಾಡಿಕೊಳ್ಳಬಹುದು ಎಂದು ಮನವಿ ಮಾಡಿದರು.
     ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ಮಾತನಾಡಿ, ಗ್ರಾಮದ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಹ ಗಂಗಾವತಿ ತಾಲೂಕು ಡಣಾಪುರ ಗ್ರಾಮದ ಮಲ್ಲಮ್ಮಳಂತೆ ದಿಟ್ಟತನದಿಂದ ಶೌಚಾಲಯ ನಿರ್ಮಿಸಿಲು ಮನೆಯವರ ಮೇಲೆ ಒತ್ತಡ ಹಾಕಬೇಕು.  ಒಬ್ಬೊಬ್ಬರು ಎರಡೆರಡು ಮೊಬೈಲ್‍ಗಳನ್ನು ಬಳಸುತ್ತೀರಿ.  ಆದರೆ ಶೌಚಾಲಯ ನಿರ್ಮಾಣಕ್ಕೆ ಹಿಂದೇಟು ಹಾಕುತ್ತೀರಿ.  ಶೌಚಾಲಯ ಹೊಂದುವುದು ಸ್ವಾಭಿಮಾನದ ಸಂಕೇತವಾಗಿದ್ದು, ಜನರು ಇದನ್ನರಿತು, ಎಲ್ಲರೂ ಶೌಚಾಲಯ ನಿರ್ಮಿಸಿಕೊಳ್ಳಲು ಮುಂದಾಗಬೇಕು ಎಂದರು.  ಕೋಳೂರು ಗ್ರಾ.ಪಂ. ವಯಾಪ್ತಿಯಲ್ಲಿ ಕೋಳೂರು, ಗುನ್ನಳ್ಳಿ, ಚಿಕ್ಕಸಿಂದೋಗಿ, ಮಂಗಳಾಪುರ, ದದೇಗಲ್, ಕಾಟ್ರಳ್ಳಿ ಮತ್ತು ವರತಟ್ನಾಳ ಸೇರಿದಂತೆ ಒಟ್ಟು 07 ಗ್ರಾಮಗಳಿದ್ದು, ಒಟ್ಟಾರೆ 1409 ಕುಟುಂಬಗಳಿವೆ.  ಈ ಪೈಕಿ 859 ಕುಟುಂಬಗಳು ಶೌಚಾಲಯ ಹೊಂದಿದ್ದು, ಉಳಿದ 550 ಕುಟುಂಬಗಳು ಮಾತ್ರ ಶೌಚಾಲಯ ನಿರ್ಮಿಸಿಕೊಳ್ಳುವುದು ಬಾಕಿ ಇದೆ.  ಸೆಪ್ಟಂಬರ್ ಅಂತ್ಯದೊಳಗೆ ಎಲ್ಲ ಕುಟುಂಬಗಳೂ ಶೌಚಾಲಯ ನಿರ್ಮಿಸಿಕೊಂಡು, ಬಯಲು ಬಹಿರ್ದೆಸೆ ಮುಕ್ತ ಗ್ರಾಮ ಪಂಚಾಯತಿಯನ್ನಾಗಿ ಘೊಷಿಸಲು ಸಕಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
     ಕೋಳೂರು ಗ್ರಾಮದ ಮುಖಂಡ ಪೂಜಾರ್ ಅವರು ಮಾತನಾಡಿ, ಅಧಿಕಾರಿಗಳು ಹಾಗೂ ಗಣ್ಯರಾದ ತಾವು, ಗ್ರಾಮಕ್ಕೆ ಬಂದು, ಮನೆ, ಮನೆಗೆ ಭೇಟಿ ನೀಡಿ ಶೌಚಾಲಯದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿದ್ದರೀರಿ.  ಗ್ರಾಮಸ್ಥರಾದ ನಾವು ಎಲ್ಲರೂ ಶೌಚಾಲಯವನ್ನು ಕಟ್ಟಿಸಿಕೊಂಡು, ಕೋಳೂರು ಗ್ರಾಮವನ್ನು ಶೀಘ್ರವೇ ಬಯಲು ಬಹಿರ್ದೆಸೆ ಮುಕ್ತ ಗ್ರಾಮವನ್ನಾಗಿಸುತ್ತೇವೆ ಎಂಬುದಾಗಿ ಭರವಸೆ ನೀಡಿದರು.
     ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನೇತೃತ್ವದ ತಂಡ, ಗ್ರಾಮದಲ್ಲಿ ಅಲ್ಲಲ್ಲಿ ತೆಗ್ಗಿನಲ್ಲಿ ನಿಂತಿದ್ದ ನೀರನ್ನು ಕಂಡು, ಇಂತಹ ನಿಂತ ನೀರಿನಿಂದ ಆರೋಗ್ಯ ಸಮಸ್ಯೆಗಳು ಉದ್ಭವಿಸುತ್ತವೆ ಎಂಬುದಾಗಿ ಅರಿವು ಮೂಡಿಸಿ, ಅಧಿಕಾರಿಗಳು, ಶಾಲಾ ಮಕ್ಕಳಿಂದ ಶ್ರಮದಾನ ನಡೆಸಿ, ಇದೇ ಸಂದರ್ಭದಲ್ಲಿ ಸ್ವಚ್ಛಗೊಳಿಸಲಾಯಿತು.
     ಕೊಪ್ಪಳ ಎಪಿಎಂಸಿ ಅಧ್ಯಕ್ಷ ಹನಮರೆಡ್ಡಿ ಹಂಗನಕಟ್ಟಿ, ಜಿ.ಪಂ. ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ, ತಾ.ಪಂ. ಕಾರ್ಯನಿವಾಹಕ ಅಧಿಕಾರಿ ಕೃಷ್ಣಮೂರ್ತಿ ಸೇರಿದಂತೆ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು, ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು ಗ್ರಾಮದಲ್ಲಿ ನಡೆಸಿದ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.
 
Post a Comment