Saturday, 23 July 2016

ಅರ್ಕಾ ಕಲ್ಯಾಣ ತಳಿ ಈರುಳ್ಳಿ ಬೀಜ ಮುನಿರಾಬಾದ್‍ನಲ್ಲಿ ಲಭ್ಯ

ಕೊಪ್ಪಳ ಜು. 23 (ಕರ್ನಾಟಕ ವಾರ್ತೆ): ಈರುಳ್ಳಿ ಬೆಳೆಯಲ್ಲಿ ಉತ್ತಮ ತಳಿಯಾಗಿರುವ ಅರ್ಕಾ ಕಲ್ಯಾಣ ಬೀಜ ಮುನಿರಾಬಾದಿನ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಲಭ್ಯವಿದ್ದು, ರೈತರು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ ಎಂದು ಕೊಪ್ಪಳ ತೋಟಗಾರಿಕೆ ಇಲಾಖೆ ಸೂಚನೆ ನೀಡಿದೆ.
     ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ, ಆಗಾಗ ಸುರಿಯುತ್ತಿರುವ ಮಳೆ ರೈತರ ಆಸೆಯನ್ನು ಇನ್ನೂ ಜೀವಂತವಾಗಿಟ್ಟಿದೆ. ಇನ್ನು ಮುಂದೆ ಬರುವ ಕೃತ್ತಿಕಾ/ ರೋಹಿಣಿ ಮಳೆಗಳು ಹುಸಿ ಹೋಗಲಾರವೆಂಬ ನಂಬಿಕೆ ರೈತರಲ್ಲಿ ಆಶಾ ಭಾವನೆ ಮೂಡಿಸಿದೆ.  ಬರುವ ಮಳೆಗೆ ಕೃಷಿ ಬೆಳೆಗಳಾದ ಜೋಳ, ಮೆಕ್ಕೆಜೋಳ, ತೊಗರಿ ಮುಂತಾದ ಬೆಳೆಗಳು ಸೂಕ್ತ. ತೋಟಗಾರಿಕೆ ಬೆಳೆಗಳಾದ ದ್ವಿದಳ ಧಾನ್ಯ ಗಳಾದ ಅಲಸಂದೆ ಅಲ್ಲದೇ, ಈರುಳ್ಳಿ ಯೆಲ್ಬುರ್ಗಾ ಗ್ರಾಮದ ತಳಕಲ್ಲ, ಬನ್ನಿಕೊಪ್ಪ, ಭಾನಾಪುರ ಮುಂತಾದ ಮಳೆಯಾಶ್ರಿತ  ಭಾಗಗಳ ಪ್ರಮುಖ ಬೆಳೆಯಾಗಿದೆ.
     ರೈತರಿಗಾಗಿಯೇ ಉತ್ತಮ ತಳಿಯಾದ ಅರ್ಕಾ ಕಲ್ಯಾಣ ಬೀಜ ತೋಟಗಾರಿಕೆ ಮಹಾವಿದ್ಯಾಲಯ, ಮುನಿರಾಬಾದ ನಲ್ಲಿ ಲಭ್ಯವಿದ್ದು ರೈತರು ಇದರ ಪ್ರಯೋಜನೆ ಪಡೆದುಕೊಂಡು ಬೀಜ ದಾಸ್ತಾನು ಮಾಡಿಕೊಳ್ಳುವಂತೆ ತೋಟಗಾರಿಕೆ ಉಪನಿರ್ದೇಶಕರ ಕಛೇರಿ, ಜಿಲ್ಲಾ ಪಂಚಾಯತ ಕೊಪ್ಪಳ ಪ್ರಕಟಣೆಯಲ್ಲಿ ತಿಳಿಸಿದೆ.
     ಇದೇ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಫಸಲ ಬೀಮಾ ಯೋಜನೆಯಡಿ ಈರುಳ್ಳಿ ಬೆಳೆಯನ್ನು ಸೇರಿಸಲಾಗಿದ್ದು, ಈರುಳ್ಳಿ ಬೆಳೆಗಾರರು ರೂ. 3550/- ಪ್ರತಿ ಹೆ. ಗೆ ಬಿಮಾ ಕಂತನ್ನು ಇದೇ ತಿಂಗಳು 30ನೇ ತಾರೀಖಿನೊಳಗೆ ಪಾವತಿಸುದರ ಮೂಲಕ ಮುಂದೆ ಆಗಬಹುದಾದ ನಷ್ಟವನ್ನು ಭರಿಸಿಕೊಳ್ಳಲು ಅವಕಾಶವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ, ತೊಟಗಾರಿಕೆ ಉಪನಿರ್ದೇಶಕರ ಕಛೇರಿ ಜಿಲ್ಲಾ ಪಂಚಾಯತ, ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿ, ಯಲಬುರ್ಗಾ ಸೇರಿದಂತೆ ಆಯಾ ತಾಲೂಕ ಕಛೇರಿಗಳನ್ನು ಅಥವಾ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ ಕೊಪ್ಪಳ ರವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Post a Comment