Wednesday, 20 July 2016

ಪ್ರಧಾನಮಂತ್ರಿ ವೈದ್ಯಕೀಯ ಪರಿಹಾರ ನಿಧಿ ಮಾರ್ಗಸೂಚಿ ಪರಿಷ್ಕರಣೆಗೆ ಸಂಸದ ಕರಡಿ ಸಂಗಣ್ಣ ಮನವಿ

ಕೊಪ್ಪಳ ಜು. 20 (ಕರ್ನಾಟಕ ವಾರ್ತೆ): ಮಾರಣಾಂತಿಕ ರೋಗದಿಂದ ಬಳಲುತ್ತಿರುವ ಬಡವರಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆಗೆ ನೆರವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದಿಂದ ನೀಡಲಾಗುತ್ತಿರುವ ಪ್ರಧಾನಮಂತ್ರಿ ವೈದ್ಯಕೀಯ ಪರಿಹಾರ ನಿಧಿ ಯೋಜನೆ ಇನ್ನಷ್ಟು ಜನೋಪಯೋಗಿ ಆಗುವ ನಿಟ್ಟಿನಲ್ಲಿ ಮಾರ್ಗಸೂಚಿಯನ್ನು ಪರಿಷ್ಕರಿಸುವ ಅಗತ್ಯವಿದೆ ಎಂದು ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು ಲೋಕಸಭೆ ಅಧಿವೇಶನದಲ್ಲಿ ಸರ್ಕಾರಕ್ಕೆ ಮನವಿ ಮಾಡಿಕೊಂಡರು.
     ನವದೆಹಲಿಯಲ್ಲಿ ನಡೆಯುತ್ತಿರುವ ಲೋಕಸಭೆಯ ಮುಂಗಾರು ಅಧಿವೇಶನದಲ್ಲಿ ಜು. 19 ರಂದು ಮಾತನಾಡಿದ ಸಂಸದ ಕರಡಿ ಸಂಗಣ್ಣ ಅವರು, ಪ್ರಧಾನಮಂತ್ರಿ ವೈದ್ಯಕೀಯ ಪರಿಹಾರ ನಿಧಿ ಯೋಜನೆಗೆ ಸಂಬಂಧಿಸಿದಂತೆ ಗಮನ ಸೆಳೆದು, ಮಾರಣಾಂತಿಕ ರೋಗದಿಂದ ಬಳಲುತ್ತಿರುವ ಬಡವರ ಹಿತಕ್ಕಾಗಿ ಕನಿಷ್ಟ 50 ಸಾವಿರ ರೂ. ಗಳಿಂದ 03 ಲಕ್ಷ ರೂ. ಗಳವರೆಗೆ ವೈದ್ಯಕೀಯ ಪರಿಹಾರ ಸಹಾಯಧನವನ್ನು ನೀಡಲಾಗುತ್ತಿದ್ದು, ಇದೊಂದು ಒಳ್ಳೆಯ ಯೋಜನೆಯಾಗಿದೆ.  ಆದರೆ ಯೋಜನೆಗೆ ಈಗಿರುವ ಮಾರ್ಗಸೂಚಿಯಂತೆ, ರೋಗಿಗಳಿಗೆ ಅಥವಾ ವೈದ್ಯಕೀಯ ವೆಚ್ಚ ಮಾಡಿದ ಕುಟುಂಬಕ್ಕೆ ಪರಿಹಾರಧನ ಸಮರ್ಪಕವಾಗಿ ತಲುಪುತ್ತಿಲ್ಲ.  ಮಾರ್ಗಸೂಚಿಯ ಬಗ್ಗೆ ಸಾರ್ವಜನಿಕರಿಗೆ ಅರಿವಿನ ಕೊರತೆ ಇರುವುದು ಇದಕ್ಕೆ ಕಾರಣವಾಗಿದೆ.  ಈ ಯೋಜನೆಯನ್ನು ಇನ್ನಷ್ಟು ಜನೋಪಯೋಗಿಯನ್ನಾಗಿಸುವ ನಿಟ್ಟಿನಲ್ಲಿ ಯೋಜನೆಗೆ ಕೆಲ ಮಾರ್ಪಾಡು ಮಾಡುವುದು ಅಗತ್ಯವಾಗಿದೆ.  ಈ ಯೋಜನೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ರೂಪಿತವಾಗಬೇಕು.  ರೋಗಿಯು ಮೃತರಾದಲ್ಲಿ, ಪರಿಹಾರಧನವನ್ನು ಹಿಂಪಡೆಯದೆ, ವೈದ್ಯೋಪಚಾರಕ್ಕೆ ಖರ್ಚು ಮಾಡಿದ ಕುಟುಂಬಕ್ಕೆ ಪಾವತಿಸುವಂತಾಗಬೇಕು.  ಹಾಗೂ ರೋಗಿಯು ಆಸ್ಪತ್ರೆಗೆ ದಾಖಲಾದ ದಿನಾಂಕದಿಂದಲೇ ಅನ್ವಯವಾಗುವಂತೆ ಪರಿಹಾರಧನ ಪಾವತಿಸುವಂತಾಗಬೇಕು.  ಬಡ ಜನರ ಹಿತದೃಷ್ಟಿಯಿಂದ ಯೋಜನೆಯ ಮಾರ್ಗಸೂಚಿಯನ್ನು ಆದಷ್ಟು ಶೀಘ್ರ ಪರಿಷ್ಕರಿಸುವಂತೆ ಸಂಸದ ಕರಡಿ ಸಂಗಣ್ಣ ಅವರು ಅಧಿವೇಶನ ಸಂದರ್ಭದಲ್ಲಿ ಮಾತನಾಡಿ, ಸರ್ಕಾರದ ಗಮನ ಸೆಳೆದಿದ್ದಾರೆ ಎಂದು ಸಂಸದರ ಕಚೇರಿ ಪ್ರಕಟಣೆ ತಿಳಿಸಿದೆ.
Post a Comment