Friday, 15 July 2016

ನಗರ ಮತ್ತು ಪಟ್ಟಣ ಪ್ರದೇಶದವರು ಜು. 25 ರೊಳಗೆ ಸೀಮೆಎಣ್ಣೆ ಪಡೆಯಲು ಸೂಚನೆ

ಕೊಪ್ಪಳ, ಜು.15 (ಕರ್ನಾಟಕ ವಾರ್ತೆ) : ಕೊಪ್ಪಳ ನಗರವೂ ಸೇರಿದಂತೆ ಜಿಲ್ಲೆಯ ಎಲ್ಲ ನಗರ ಮತ್ತು ಪಟ್ಟಣ ಪ್ರದೇಶಗಳ ಪಡಿತರ ಚೀಟಿದಾರರು ಜುಲೈ ತಿಂಗಳ ಪಡಿತರ ಸೀಮೆಎಣ್ಣೆಯನ್ನು ಬಾರ್ ಕೋಡೆಡ್ ಕೂಪನ್ ಆಧಾರದ ಮೇಲೆ ಜುಲೈ 25 ರೊಳಗೆ ಸಂಬಂಧಿಸಿದ ನ್ಯಾಯಬೆಲೆ ಅಂಗಡಿಯವರಿಂದ ಪಡೆದುಕೊಳ್ಳಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರು ಸೂಚನೆ ನೀಡಿದ್ದಾರೆ.
     ಬಾರ್ ಕೋಡೆಡ್ ಕೂಪನ್ ಆಧಾರದ ಮೇಲೆ ಸೀಮೆ ಎಣ್ಣೆ ವಿತರಿಸುವ ಯೋಜನೆಯನ್ನು ಜೂನ್ ತಿಂಗಳಿನಿಂದ ಕೊಪ್ಪಳ ನಗರದಲ್ಲಿ ಜಾರಿಗೊಳಿಸಲಾಗಿತ್ತು.  ಸರ್ಕಾರದ ಸೂಚನೆಯಂತೆ ಈ ವ್ಯವಸ್ಥೆಯನ್ನು ಜಿಲ್ಲೆಯ ಗಂಗಾವತಿ ನಗರ, ಕುಷ್ಟಗಿ, ಯಲಬುರ್ಗಾ, ಕನಕಗಿರಿ, ಕಾರಟಗಿ, ತಾವರಗೇರಾ ಮತ್ತು ಕುಕನೂರು ಪಟ್ಟಣ ಪ್ರದೇಶಗಳಲ್ಲಿ ಬಾರ್ ಕೋಡೆಡ್ ಕೂಪನ್ ಆಧಾರದ ಮೇಲೆ ಸೀಮೆಎಣ್ಣೆ ವಿತರಿಸುವ ಯೋಜನೆಯನ್ನು ಜುಲೈ ತಿಂಗಳಿನಿಂದ ಜಾರಿಗೊಳಿಸಲಾಗಿದೆ.  ನಗರ ಮತ್ತು ಪಟ್ಟಣ ಪ್ರದೇಶದ ಪಡಿತರ ಚೀಟಿದಾರರು ಆಯಾ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಸ್ಥಾಪಿಸಲಾಗಿರುವ ಪೋಟೋ ಬಯೋ ಕೇಂದ್ರಕ್ಕೆ ತೆರಳಿ, ಉಚಿತವಾಗಿ ಬಾರ್ ಕೋಡೆಡ್ ಕೂಪನ್ ಪಡೆದುಕೊಳ್ಳಬೇಕು.  ಆದರೆ ಅನಿಲ ಸಂಪರ್ಕ (ಗ್ಯಾಸ್ ಸಿಲಿಂಡರ್) ಹೊಂದಿರುವವರು ಸೀಮೆಎಣ್ಣೆ ಪಡೆಯುವಂತಿಲ್ಲ.  ಜುಲೈ 20 ನೇ ತಾರೀಕಿನ ಒಳಗೆ ಸೀಮೆಎಣ್ಣೆ ಕೂಪನ್ ಪಡೆದುಕೊಂಡು, ಸಂಬಂಧಿಸಿದ ನ್ಯಾಯಬೆಲೆ ಅಂಗಡಿ/ಚಿಲ್ಲರೆ ಸೀಮೆಎಣ್ಣೆ ವಿತರಕರಿಂದ ಜುಲೈ 25 ರ ಒಳಗಾಗಿ ಸೀಮೆಎಣ್ಣೆ ಪಡೆದುಕೊಳ್ಳಬೇಕು ಎಂದು  ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ವೈ.ಹೆಚ್. ಲಂಬು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment