ಕೊಪ್ಪಳ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ನಡೆಸಿದ ಪರಿಶೀಲನಾ ಸಭೆಯ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ರಾಜ್ಯದಲ್ಲಿ ಬಹಳಷ್ಟು ರೈಲ್ವೆ ಯೋಜನೆಗಳು ಜಾರಿಯಲ್ಲಿವೆ. ಆದರೆ ಇದಕ್ಕಾಗಿ ಅಗತ್ಯವಿರುವ ರೈಲ್ವೆ ಇಂಜಿನಿಯರ್ಗಳು ನಮಗೆ ಸಮರ್ಪಕವಾಗಿ ಲಭ್ಯವಾಗುತ್ತಿಲ್ಲ. ಅದೇ ರೀತಿ ರಾಜ್ಯದಲ್ಲಿ ವೈಮಾನಿಕ ಕ್ಷೇತ್ರ ವ್ಯಾಪಕವಾಗಿ ಅಭಿವೃದ್ಧಿಯಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ವಿಮಾನ ನಿಲ್ದಾಣಗಳು ನಿರ್ಮಾಣಗೊಂಡು, ವಿಮಾನಗಳ ಸಂಚಾರವೂ ಹೆಚ್ಚಾಗುವುದರಿಂದ ಪೈಲಟ್ಗಳ ಬೇಡಿಕೆಯೂ ಹೆಚ್ಚಾಗಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಕರ್ನಾಟಕ ರಾಜ್ಯದ ಆಯ್ದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ರೈಲ್ವೆ ಇಂಜಿನಿಯರಿಂಗ್ ಕೋರ್ಸ್ ಹಾಗೂ ವೈಮಾನಿಕ ಇಂಜಿನಿಯರಿಂಗ್ ಕೋರ್ಸ್ ಅನ್ನು ಬರುವ ಶೈಕ್ಷಣಿಕ ವರ್ಷದಿಂದ ಪ್ರಾರಂಭಿಸಲು ಗಂಭೀರ ಚಿಂತನೆ ನಡೆದಿದೆ. ಇದಕ್ಕಾಗಿ ಕೇಂದ್ರ ಸರ್ಕಾರದ ಸಹಕಾರ ಅಗತ್ಯವಾಗಿದ್ದು, ಕೇಂದ್ರ ರೈಲ್ವೆ ಸಚಿವರಾದ ಸುರೇಶ್ ಪ್ರಭು ಅವರನ್ನು ಖುದ್ದು ಭೇಟಿಯಾಗಿ, ಅವರ ಸಹಕಾರ ಕೋರಲಾಗುವುದು. ರೈಲ್ವೆ ಸಚಿವರು ಇದಕ್ಕೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಾರೆಂಬ ವಿಶ್ವಾಸ ತಮಗಿದೆ. ಅದೇ ರೀತಿ ವೈಮಾನಿಕ ಇಂಜಿನಿಯರಿಂಗ್ ಕೋರ್ಸ್ ಅನ್ನು ಬೆಂಗಳೂರಿನಲ್ಲಿಯೇ ಪ್ರಾರಂಭಿಸುವ ಯೋಜನೆ ಇದೆ. ಅಂತರರಾಷ್ಟ್ರೀಯ ಗುಣಮಟ್ಟದ ಸ್ಕೂಲ್ ಆಫ್ ಎಕನಾಮಿಕ್ಸ್ ಇದುವರೆಗೂ ನಮ್ಮ ರಾಜ್ಯದಲ್ಲಿ ಇಲ್ಲ, ಇದೀಗ ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ಮಟ್ಟದ ಸ್ಕೂಲ್ ಆಫ್ ಎಕನಾಮಿಕ್ಸ್ ಅನ್ನು ಪ್ರಾರಂಭಿಸಲು ಯೋಜಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಹೇಳಿದರು.
ರಾಜ್ಯದಲ್ಲಿ ಒಟ್ಟು 23 ವಿಶ್ವವಿದ್ಯಾಲಯಗಳು ಕಾರ್ಯ ನಿರ್ವಹಿಸುತ್ತಿದ್ದು, ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳೊಂದಿಗೆ ಕನಿಷ್ಟ 02 ದಿನಗಳ ಶೃಂಗಸಭೆ ನಡೆಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ಜುಲೈ 04 ರಂದು ರಾಜ್ಯಪಾಲರನ್ನು ಭೇಟಿಯಾಗಿ ಆಹ್ವಾನಿಸಲಾಗುವುದು. ಗುಣಮಟ್ಟದ ಶಿಕ್ಷಣ, ವಿವಿಗಳ ಸಮಸ್ಯೆಗಳು, ವಿದ್ಯಾರ್ಥಿಗಳಿಗೆ ಸೌಲಭ್ಯ ಮುಂತಾದ ವಿಷಯಗಳ ಕುರಿತು ಶೃಂಗಸಭೆಯಲ್ಲಿ ಸಮಗ್ರವಾಗಿ ಚರ್ಚೆ ನಡೆಸುವ ಉದ್ದೇಶ ಹೊಂದಲಾಗಿದೆ ಎಂದು ಸಚಿವರು ಹೇಳಿದರು.
ರಾಜ್ಯದ ಬಹಳಷ್ಟು ಪದವಿ ಕಾಲೇಜುಗಳಲ್ಲಿ ಖಾಯಂ ಉಪನ್ಯಾಸಕರು ಇಲ್ಲದಿರುವುದರಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರಕಿಸುವಲ್ಲಿ ತೊಂದರೆ ಉಂಟಾಗಿದೆ. ಅತಿಥಿ ಉಪನ್ಯಾಸಕರುಗಳಿಗೆ ಸಂಬಂಧಿಸಿದಂತೆ ಕಾನೂನಿನ ಚೌಕಟ್ಟಿನಲ್ಲಿ ಮಾನವೀಯತೆಯ ದೃಷ್ಟಿಯಿಂದ ಯಾವ ರೀತಿ ಸಹಾಯ ಮಾಡಬಹುದು ಎನ್ನುವುದನ್ನು ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಹೇಳಿದರು.
ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್, ಜಿ.ಪಂ. ಅಧ್ಯಕ್ಷ ಶೇಖರಪ್ಪ ಬಿ. ನಾಗರಳ್ಳಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.