Monday, 30 November 2015

ಮಕ್ಕಳ ಸುರಕ್ಷತಾ ನೀತಿ : ಡಿ.01 ರಂದು ಸಮಾಲೋಚನಾ ಸಭೆ

ಕೊಪ್ಪಳ, ನ.30 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ಕರ್ನಾಟಕದಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದಂತೆ ರಾಜ್ಯ ಮಕ್ಕಳ ಸುರಕ್ಷತಾ ನೀತಿ-2015 ರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಮಾಲೋಚನಾ ಸಭೆಯನ್ನು ಡಿ.01 ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾಡಳಿತ ಭವನದ ಅಡಿಟೋರಿಯಂ ಹಾಲ್‍ನಲ್ಲಿ ಏರ್ಪಡಿಸಲಾಗಿದೆ.
     ರಾಜ್ಯ ಮಕ್ಕಳ ಸುರಕ್ಷತಾ ನೀತಿ-2015 ರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳು, ಮಕ್ಕಳ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರುಗಳು, ಆಸಕ್ತರು ಈ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ, ಅಭಿಪ್ರಾಯ ತಿಳಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿ.04 ರಂದು ಬಹಿರಂಗ ವಿಚಾರಣೆ : ಮನವಿ ಆಹ್ವಾನ

ಕೊಪ್ಪಳ, ನ.30 (ಕರ್ನಾಟಕ ವಾರ್ತೆ) : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ವಿವಿಧ ಜಾತಿ ಜನಾಂಗಗಳನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಹೊಸದಾಗಿ ಸೇರಿಸಲು, ಪ್ರವರ್ಗ ಬದಲಾವಣೆ, ಪರ್ಯಾಯ ಪದ ಸೇರ್ಪಡೆ ಮತ್ತು ಕಾಗುಣಿತ ದೋಷ ತಿದ್ದುಪಡಿಗೆ ಸಂಬಂಧಿಸಿದಂತೆ  ಡಿ.04 ರಂದು ಬೆಳಿಗ್ಗೆ 11 ಗಂಟೆಗೆ ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬಹಿರಂಗ ವಿಚಾರಣೆ ಏರ್ಪಡಿಸಿದ್ದು, ಮನವಿಗಳನ್ನು ಆಹ್ವಾನಿಸಲಾಗಿದೆ. 
     ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಹೆಚ್. ಕಾಂತರಾಜ ಅವರು ಬಹಿರಂಗ ವಿಚಾರಣೆ ಸಭೆಯ ಅಧ್ಯಕ್ಷತೆ ವಹಿಸುವರು.  ಬಹಿರಂಗ ವಿಚಾರಣೆಯಲ್ಲಿ ನಾಗರೀಕರ ಯಾವುದೇ ವರ್ಗವನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಬೇಕೆಂದು ಬಂದ ಕೋರಿಕೆಗಳನ್ನು ಪರಿಶೀಲಿಸುವುದು ಮತ್ತು ಯಾವುದೇ ಹಿಂದುಳಿದ ವರ್ಗಗಳನ್ನು ಅಂತಹ ಪಟ್ಟಿಯಲ್ಲಿ ಹೆಚ್ಚಾಗಿ ಸೇರಿಸಲಾಗಿದೆ ಎಂದು ಅಥವಾ ಸೇರಿಸಲಾಗಿಲ್ಲವೆಂದು ಬಂದ ದೂರುಗಳ ವಿಚಾರಣೆ ನಡೆಸಲಾಗುವುದು.  ಅಲ್ಲದೆ ಹಿಂದುಳಿದ  ವರ್ಗಗಳಿಗಾಗಿ ಇರುವ ಅನೇಕ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ಪರಿಶೀಲಿಸಲಾಗುವುದು. ಆಯೋಗದ ಪ್ರಕಾರ್ಯಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಸಂಘ ಸಂಸ್ಥೆಗಳಿಂದ, ಜಾತಿ, ಉಪಜಾತಿ, ಪಂಗಡ, ಉಪ ಪಂಗಡ, ಬುಡಕಟ್ಟು ಹಾಗೂ ಸಮೂಹಗಳ ಪರವಾಗಿ ಆಯೋಗಕ್ಕೆ ಮನವಿಗಳನ್ನು ಸಲ್ಲಿಸಬಹುದಾಗಿದೆ. ಆಯೊಗದ ವೆಬ್‍ಸೈಟ್ ವಿಳಾಸ : www.karnataka.gov.in/kscbc ಅಡಿ  commission questionnaire  ಗೆ  click ಮಾಡಿ ಪ್ರಶ್ನಾವಳಿಯನ್ನು ಪಡೆದು ಮನವಿದಾರರು ತಮ್ಮ ಮನವಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಭರ್ತಿ ಮಾಡಿ, ಅಫಿಡವಿಟ್ ಮಾಡಿಸಬೇಕು.  ನಂತರ ಇವುಗಳ ಹತ್ತು ಪ್ರತಿಗಳನ್ನು ಸಿದ್ಧಪಡಿಸಿ  ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ.  ಸಲ್ಲಿಕೆಯಾದ ಮನವಿಗಳಿಗೆ ಸಂಬಂಧಿಸಿದಂತೆ ಬಹಿರಂಗ ವಿಚಾರಣೆಯ ದಿವಸ ಮನವಿದಾರರು ಖುದ್ದಾಗಿ ಅಥವಾ ನ್ಯಾಯವಾದಿಗಳ ಮೂಲಕ ತಮ್ಮ ಅಹವಾಲನ್ನು ಮಂಡಿಸಬಹುದಾಗಿದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಧಾನ ಪರಿಷತ್ ಚುನಾವಣೆ : ಕರಡು ಮತದಾರರ ಪಟ್ಟಿ ಪ್ರಕಟ- ಆಕ್ಷೇಪಣೆಗಳಿಗೆ ಆಹ್ವಾನ

ಕೊಪ್ಪಳ, ನ.30 (ಕರ್ನಾಟಕ ವಾರ್ತೆ) : ವಿಧಾನಪರಿಷತ್ತಿಗೆ ರಾಯಚೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಚುನಾವಣೆ ನಡೆಸಲು ಕೊಪ್ಪಳ ಜಿಲ್ಲೆಗೆ ಸಂಬಂಧಿಸಿದ ಸ್ಥಳೀಯ ಸಂಸ್ಥೆಗಳ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಈ ಕುರಿತು ಹಕ್ಕು ಮತ್ತು ಆಕ್ಷೇಪಣೆಗಳಿದ್ದಲ್ಲಿ ಡಿ. 03 ರ ಒಳಗಾಗಿ ಸಲ್ಲಿಸುವಂತೆ ಕೊಪ್ಪಳ ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ ಜಿ.ಎಲ್. ಅವರು ತಿಳಿಸಿದ್ದಾರೆ.
     ಕೊಪ್ಪಳ ಜಿಲ್ಲೆಗೆ ಸಂಬಂಧಿಸಿದಂತೆ ಸ್ಥಳೀಯ ಸಂಸ್ಥೆಗಳ ಕರಡು ಮತದಾರರ ಪಟ್ಟಿಯನ್ನು ನ. 27 ರಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿ, ಸಹಾಯಕ ಆಯುಕ್ತರ ಕಚೇರಿ, ಎಲ್ಲ ತಹಸಿಲ್ದಾರರ ಕಚೇರಿ, ತಾ.ಪಂ. ಕಾರ್ಯನಿರ್ವಾಹಕರುಗಳ ಕಚೇರಿ, ಗ್ರಾಮ ಪಂಚಾಯತಿ ಕಚೇರಿ ಹಾಗೂ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ಕಚೇರಿಗಳಲ್ಲಿ ಪ್ರಕಟಿಸಲಾಗಿದೆ.  ಪ್ರಕಟಿತ ಕರಡು ಮತದಾರರ ಪಟ್ಟಿ ಕುರಿತು ಹಕ್ಕು ಮತ್ತು ಆಕ್ಷೇಪಣೆಗಳಿದ್ದಲ್ಲಿ ಡಿ. 03 ರ ಒಳಗಾಗಿ ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣೆ ಶಾಖೆ, ಆಯಾ ತಾಲೂಕು ತಹಸಿಲ್ದಾರರ ಕಚೇರಿಯ ಚುನಾವಣೆ ಶಾಖೆಯಲ್ಲಿ ಖುದ್ದಾಗಿ ಲಿಖಿತ ಆಕ್ಷೇಪಣೆಯನ್ನು, ಪೂರಕ ದಾಖಲೆಗಳೊಂದಿಗೆ ಸಲ್ಲಿಸಬಹುದಾಗಿದೆ ಎಂದು ರಾಯಚೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಸಹಾಯಕ ಮತದಾರರ ನೊಂದಣಾಧಿಕಾರಿಗಳಾದ ಕೊಪ್ಪಳ ಅಪರ ಜಿಲ್ಲಾಧಿಕಾರಿ ಡಾ|| ಪ್ರವೀಣಕುಮಾರ್ ಜಿ.ಎಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಧಾನಪರಿಷತ್ ಚುನಾವಣೆ : ಕೊಪ್ಪಳ ಜಿಲ್ಲೆಯಲ್ಲಿ 161 ಮತಗಟ್ಟೆ, 2988 ಮತದಾರರು

ಕೊಪ್ಪಳ ನ. 30 (ಕರ್ನಾಟಕ ವಾರ್ತೆ) : ವಿಧಾನಪರಿಷತ್ತಿಗೆ ರಾಯಚೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲೆ ವ್ಯಾಪ್ತಿಯಲ್ಲಿ 161 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಒಟ್ಟು 2988 ಮತದಾರರಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್. ಅವರು ತಿಳಿಸಿದ್ದಾರೆ.
     ವಿಧಾನಪರಿಷತ್ ಚುನಾವಣೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲೆಯ 152 ಗ್ರಾಮ ಪಂಚಾಯತಿ ಕಚೇರಿ, 04- ತಾಲೂಕಾ ಪಂಚಾಯತಿ ಕಚೇರಿ, 01-ಜಿ.ಪಂ. ಕಚೇರಿ ಹಾಗೂ 04-ನಗರಸಭೆ/ಪುರಸಭೆ/ಪ.ಪಂಚಾಯತಿ ಕಚೇರಿಗಳಲ್ಲಿ ಸೇರಿದಂತೆ ಒಟ್ಟು 161 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಮತದಾನ ಕೇಂದ್ರಗಳ ವಿವರ : ಜಿಲ್ಲೆಯ ಕೊಪ್ಪಳ ತಾಲೂಕಿನಲ್ಲಿ ಗ್ರಾಮ ಪಂಚಾಯತಿ-38, ತಾಲೂಕಾ ಪಂಚಾಯತಿ-01, ಜಿಲ್ಲಾ ಪಂಚಾಯತಿ-01 ಮತ್ತು ಕೊಪ್ಪಳ ನಗರಸಭೆ-01 ಸೇರಿದಂತೆ ಒಟ್ಟು 41 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗುವುದು.  ಗಂಗಾವತಿ ತಾಲೂಕಿನಲ್ಲಿ ಗ್ರಾಮ ಪಂಚಾಯತಿ-42, ತಾಲೂಕಾ ಪಂಚಾಯತಿ-01, ನಗರಸಭೆ-01 ಕಚೇರಿ ಸೇರಿದಂತೆ ಒಟ್ಟು 44 ಮತದಾನ ಕೇಂದ್ರಗಳು. ಯಲಬುರ್ಗಾ ತಾಲೂಕಿನಲ್ಲಿ  ಗ್ರಾಮ ಪಂಚಾಯತಿ-36, ತಾಲೂಕಾ ಪಂಚಾಯತಿ-01, ಪಟ್ಟಣ ಪಂಚಾಯತಿ-01 ಕಚೇರಿಗಳು ಸೇರಿದಂತೆ ಒಟ್ಟು 38 ಮತದಾನ ಕೇಂದ್ರಗಳನ್ನು ಹಾಗೂ ಕುಷ್ಟಗಿ ತಾಲೂಕಿನಲ್ಲಿ ಗ್ರಾಮ ಪಂಚಾಯಿತಿ-36, ತಾಲೂಕಾ ಪಂಚಾಯತಿ-01, ಪುರಸಭೆ-01 ಕಚೇರಿ ಸೇರಿದಂತೆ ಒಟ್ಟು 38 ಮತದಾನ ಕೇಂದ್ರಗಳನ್ನು ತೆರೆಯಲಾಗುವುದು.
ಮತದಾರರ ವಿವರ : ವಿಧಾನಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯತಿ ಸದಸ್ಯರು, ತಾಲೂಕಾ ಪಂಚಾಯತಿ ಸದಸ್ಯರು, ನಗರಸಭೆ/ಪುರಸಭೆ/ಪಟ್ಟಣ ಪಂಚಾಯತಿ ಸದಸ್ಯರು, ಸಂಸದರು, ಶಾಸಕರುಗಳು ಹಾಗೂ ವಿಧಾನಪರಿಷತ್ ಸದಸ್ಯರು ಮತದಾರರಾಗಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 2988 ಮತದಾರರಿದ್ದಾರೆ.
     ಕೊಪ್ಪಳ ತಾಲೂಕಿನಲ್ಲಿ ಗ್ರಾಮ ಪಂಚಾಯತಿ-729, ತಾಲೂಕಾ ಪಂಚಾಯತಿ-26, ಜಿಲ್ಲಾ ಪಂಚಾಯತಿ-27, ನಗರಸಭೆ-31, ಒಬ್ಬರು ಸಂಸದರು ಹಾಗೂ ಒಬ್ಬರು ಶಾಸಕರು ಸೇರಿದಂತೆ ಒಟ್ಟು 815 ಜನ ಮತದಾರರು ಮತ ಚಲಾಯಿಸಲಿದ್ದಾರೆ. ಗಂಗಾವತಿ ತಾಲೂಕಿನಲ್ಲಿ ಗ್ರಾಮ ಪಂಚಾಯತಿ-797, ತಾಲೂಕಾ ಪಂಚಾಯತಿ-31, ನಗರಸಭೆ-34, ಇಬ್ಬರು ಶಾಸಕರು ಸೇರಿದಂತೆ ಒಟ್ಟು 864 ಜನ ಮತದಾರರಿದ್ದಾರೆ. ಯಲಬುರ್ಗಾ ತಾಲೂಕಿನಲ್ಲಿ ಗ್ರಾಮ ಪಂಚಾಯತಿ-595, ತಾಲೂಕಾ ಪಂಚಾಯತಿ-23, ಪಟ್ಟಣ ಪಂಚಾಯತಿ-14, ಒಬ್ಬರು ವಿಧಾನ ಪರಿಷತ್ ಸದಸ್ಯರು ಹಾಗೂ ಒಬ್ಬರು ಶಾಸಕರು ಸೇರಿದಂತೆ ಒಟ್ಟು 634 ಜನ ಮತದಾರರಿದ್ದಾರೆ. ಕುಷ್ಟಗಿ ತಾಲೂಕಿನಲ್ಲಿ ಗ್ರಾಮ ಪಂಚಾಯತಿ-624, ತಾಲೂಕಾ ಪಂಚಾಯತಿ-22, ಪುರಸಭೆ-28, ಒಬ್ಬರು ಶಾಸಕರು ಸೇರಿದಂತೆ ಒಟ್ಟು 675 ಜನ ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಶೇಂಗಾ ಬೆಳೆಗೆ ಸರಿಗೆ ಹುಳು (ವೈರ್‍ವರ್ಮ್) ಬಾಧೆ : ನಿರ್ವಹಣೆಗೆ ಸಲಹೆ

ಕೊಪ್ಪಳ ನ. 30 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಶೇಂಗಾ ಬೆಳೆಗೆ ಸರಿಗೆ ಹುಳು (ವೈರ್ ವರ್ಮ್) ಕೀಟ ಬಾಧೆ ಕಂಡುಬಂದಿದ್ದು, ಇದರ ನಿರ್ವಹಣೆಗೆ ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಸಲಹೆಗಳನ್ನು ನೀಡಿದೆ.
     ಕೊಪ್ಪಳ ಜಿಲ್ಲೆಯ ಬೆಟಗೇರಿ, ತಿಗರಿ, ಮತ್ತೂರು ಮತ್ತು ಮುಂತಾದ ಗ್ರಾಮಗಳಲ್ಲಿ ತುಂಗಭದ್ರ ನದಿಯ ತೀರದಲ್ಲಿ ಬೆಳೆಯುವ ಬೆಳೆಗಳಿಗೆ ಮುಖ್ಯವಾಗಿ ಶೇಂಗಾ ಬೆಳೆಯಲ್ಲಿ ಸರಿಗೆ ಹುಳು (ವೈರ್ ವರ್ಮ್) ಕೀಟದ ಬಾಧೆ ಕಾಣಿಸಿಕೊಡಿದೆ. ಈ ಕೀಟವು ಬೆಳೆಗಳ ಬೇರುಗಳನ್ನು ತಿನ್ನುವುದರಿಂದ ಗಿಡಗಳು ಒಣಗುತ್ತವೆ.  ಇದರ ನಿರ್ವಹಣೆಗೆ  8-10 ಕೆ.ಜಿ ಕಾರ್ಬೊಫ್ಯುರಾನ್ ಹರಳು (ಶೇ.3) ಅಥವಾ ಫೋರೆಟ 10 ಜಿ ಹರಳನ್ನು ಮಣ್ಣಿಗೆ ಸೇರಿಸಬೇಕು.  ಪ್ರತೀ ಲೀ ನೀರಿಗೆ 10 ಮಿ.ಲೀ ಕ್ಲೋರ್‍ಪೈರಿಫಾಸ್ 20 ಇ.ಸಿ ಬೆರೆಸಿ ಬೆಳೆಯ ಬುಡದಲ್ಲಿ ಭೂಮಿ ನೆನೆಯುವಂತೆ ಮಾಡುವುದರಿಂದ ಹಾನಿಯನ್ನು ಕಡಿಮೆಗೊಳಿಸಬಹುದು. ಬೀಜಗಳನ್ನು ಕೀಟನಾಶಕಗಳಿಂದ ಉಪಚರಿಸಿ ಬಿತ್ತುವುದು ಸೂಕ್ತ ಎಂದು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ. ಎಂ.ಬಿ. ಪಾಟೀಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿ.05 ರಿಂದ ಸರ್ಕಾರಿ ನೌಕರರ ಕ್ರೀಡಾಕೂಟ : ಹೆಸರು ನೋಂದಣಿಗೆ ಸೂಚನೆ

ಕೊಪ್ಪಳ, ನ. 30 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಡಿ.05 ಮತ್ತು 06 ರಂದು ಎರಡು ದಿನಗಳ ಕಾಲ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಸಲಾಗುವುದು ಹಾಗೂ ಇದೇ ಕ್ರೀಡಾಕೂಟದ ಅಂಗವಾಗಿ ವಿವಿಧ ಸಾಂಸ್ಕøತಿಕ ಸ್ಪರ್ಧೆಗಳನ್ನು ನಗರದ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದ್ದು, ಸರ್ಕಾರಿ ನೌಕರರು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಹೆಸರು ನೋಂದಾಯಿಸುವಂತೆ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ನಾಗರಾಜ ಜುಮ್ಮನ್ನವರ್ ಸೂಚನೆ ನೀಡಿದ್ದಾರೆ.     ಸ್ಪರ್ಧೆಗಳ ವಿವರ ಇಂತಿದೆ.  ಕ್ರೀಡಾಕೂಟದ ಪುರುಷ ವಿಭಾಗದಲ್ಲಿ 45 ವರ್ಷದೊಳಗಿನವರಿಗೆ 100 ಮೀ, 200 ಮೀ, 400, 800, 1500 ಮೀ. ಓಟ, ಹರ್ಡಲ್ಸ್, 5000 ಮತ್ತು 10,000 ಮೀ.ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು, ಚಕ್ರ, ಜಾವೆಲಿನ್ ಎಸೆತ, 4*100 ಮತ್ತು 4*400 ರಿಲೇ. ಗುಂಪು ಸ್ಪರ್ಧೆಗಳಲ್ಲಿ ವಾಲಿಬಾಲ್, ಕಬ್ಬಡ್ಡಿ, ಟೇಬಲ್ ಟೆನ್ನಿಸ್ (ಸಿಂಗಲ್ಸ್ ಮತ್ತು ಡಬಲ್ಸ್), ಬ್ಯಾಡ್ಮಿಂಟನ್, ಕೇರಂ, ಕ್ರಿಕೆಟ್ ಕ್ರೀಡೆಗಳನ್ನು ಹಾಗೂ 45 ವರ್ಷ ಮೇಲ್ಪಟ್ಟವರಿಗೆ 100, 200 ಮತ್ತು 400 ಮೀ.ಓಟ, ಗುಂಡು, ಚಕ್ರ ಎಸೆತ ಕ್ರೀಡೆಗಳನ್ನು ಆಯೋಜಿಸಲಾಗುವುದು. 
     ಅದೇ ರೀತಿ ಮಹಿಳಾ ವಿಭಾಗದಲ್ಲಿ 40 ವರ್ಷದೊಳಗಿನವರಿಗೆ 100 ಮೀ, 200 ಮೀ, 400, 800 ಮೀ. ಓಟ, ಹರ್ಡಲ್ಸ್, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು, ಚಕ್ರ, ಜಾವೆಲಿನ್ ಎಸೆತ, 4*100 ಮತ್ತು 4*400 ರಿಲೇ ಹಾಗೂ 40 ವರ್ಷ ಮೇಲ್ಪಟ್ಟವರಿಗೆ 100 ಮೀ, 200 ಮೀ, 400 ಮೀ. ಓಟ, ಗುಂಡು, ಚಕ್ರ ಎಸೆತ, ಗುಂಪು ಆಟಗಳಲ್ಲಿ ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್ (ಸಿಂಗಲ್ಸ್ ಮತ್ತು ಡಬಲ್ಸ್), ಕೇರಂ, ಟೆನಿಕಾಯ್ಟ್, ಥ್ರೋಬಾಲ್ ಕ್ರೀಡೆಗಳನ್ನು ಹಾಗೂ 40 ವರ್ಷ ಮೇಲ್ಪಟ್ಟ ಮಹಿಳೆಯರಿಗೆ 100, 200 ಮತ್ತು 400 ಮೀ. ಓಟ, ಗುಂಡು, ಚಕ್ರ ಎಸೆತ, ಟೇಬಲ್ ಟೆನ್ನಿಸ್, ಬ್ಯಾಡ್ಮಿಂಟನ್ ಸಿಂಗಲ್ಸ್ ಮತ್ತು ಡಬಲ್ಸ್, ಟೆನ್ನಿಕಾಯ್ಡ್ ಸಿಂಗಲ್ಸ್ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು.
     ಕ್ರೀಡಾಕೂಟದ ಅಂಗವಾಗಿ ಏರ್ಪಡಿಸಲಾಗಿರುವ ಸಾಂಸ್ಕøತಿಕ ಸ್ಪರ್ಧೆಗಳ ಹಿಂದುಸ್ತಾನಿ ಸಂಗೀತ ಸ್ಪರ್ಧೆ ವಿಭಾಗದಲ್ಲಿ ಮೌಖಿಕ, ಲಘು ಶಾಸ್ತ್ರೀಯ ಸಂಗೀತ, ಕರ್ನಾಟಕ ಸಂಗೀತ ವಿಭಾಗದಲ್ಲಿ ಶಾಸ್ತ್ರೀಯ ಸಂಗೀತ, ಲಘು ಶಾಸ್ತ್ರೀಯ ಸಂಗೀತ, ನೃತ್ಯ ವಿಭಾಗದಲ್ಲಿ ಜಾನಪದ ನೃತ್ಯ, ಭರತನಾಟ್ಯ, ವಾದ್ಯ ಸಂಗೀತ, ಜಾನಪದ ಗೀತೆ, ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಕಿರು ನಾಟಕ ಸ್ಪರ್ಧೆಗಳನ್ನು ಆಯೋಜಿಸಲಾಗುವುದು.
     ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಬಯಸುವ ಕ್ರೀಡಾಪಟುಗಳು ಕಡ್ಡಾಯವಾಗಿ ಎರಡು ಪಾಸ್‍ಪೋರ್ಟ್ ಅಳತೆಯ ಭಾವಚಿತ್ರ ಹಾಗೂ ಕಾರ್ಯನಿರ್ವಹಿಸುತ್ತಿರುವ ಇಲಾಖೆಯ ಅಧಿಕಾರಿಗಳಿಂದ ಸೇವಾ ಪ್ರಮಾಣ ಪತ್ರದೊಂದಿಗೆ ಡಿ.03 ರ ಸಂಜೆ 4.30 ರೊಳಗಾಗಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರಲ್ಲಿ ಹೆಸರು ನೊಂದಾಸಿಕೊಳ್ಳಬೇಕು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ರಾಜ್ಯ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮನ್ನವರ, ಮೊ :9880670925 ಅಥವಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಛೇರಿ ದೂರವಾಣಿ ಸಂಖ್ಯೆ : 08539-201400 ನ್ನು ಸಂಪರ್ಕಿಸಬಹುದಾಗಿದೆ ಎಂದು  ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮನ್ನವರ್ ಹಾಗೂ ಪ್ರಧಾನ ಕಾರ್ಯದರ್ಶಿ ಶಿವಪ್ಪ ಜೋಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Friday, 27 November 2015

ಕೊಪ್ಪಳದಲ್ಲಿ ಅರ್ಥಪೂರ್ಣ ಕನಕದಾಸರ ಜಯಂತಿ ಆಚರಣೆ




ಕೊಪ್ಪಳ, ನ. 28 (ಕರ್ನಾಟಕ ವಾರ್ತೆ): ಸಂತ ಕವಿ ಭಕ್ತ ಕನಕದಾಸರ ಜಯಂತಿ ಆಚರಣೆಯನ್ನು ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯುಕ್ತ ಆಶ್ರಯದೊಂದಿಗೆ ಶನಿವಾರದಂದು ನಗರದ ಸಾಹಿತ್ಯ ಭವನದಲ್ಲಿ ಅರ್ಥಪೂರ್ಣವಾಗಿ, ಸರಳವಾಗಿ ಆಚರಿಸಲಾಯಿತು. ಜೀವನ ಕೌಶಲ್ಯದ ಬಗ್ಗೆ ಮಾಹಿತಿ ನೀಡಿದರು.

    ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು, ಭಕ್ತ ಕನಕದಾಸರ ಭಾವಚಿತ್ರಕ್ಕೆ ಭಕ್ತಿ ಪೂರ್ವಕ ಪೂಜೆಯೊಂದಿಗೆ, ಪುಷ್ಪ ನಮನ ಸಲ್ಲಿಸುವ ಮೂಲಕ ಜಯಂತಿ ಆಚರಣೆಗೆ ಚಾಲನೆ ನೀಡಿದರು.  ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಭಕ್ತ ಕನಕದಾಸರ ಜಯಂತಿ ಆಚರಣೆಯನ್ನು ಸರಳವಾಗಿ ಆಚರಿಸಲಾಯಿತು. 

 ಕನಕದಾಸರ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಟಿ. ಕೊಟ್ರಪ್ಪ ಅವರು, ಭಕ್ತ ಕನಕದಾಸರು ಏಕಕಾಲಕ್ಕೆ ಕವಿ ಹಾಗೂ ದಾರ್ಶನಿಕರೂ ಆಗಿದ್ದರು.  ಕನಕದಾಸರ ತಲ್ಲಣ, ಮಾನವಿಯ ನೆಲೆಯಲ್ಲಿ ಪ್ರತಿಸ್ಪಂದಿಸಿದ್ದು, ಈ ಕಾರಣಕ್ಕೆ ಅವರ ಕಾವ್ಯಗಳು, ಕೀರ್ತನೆಗಳು ಮನುಷ್ಯ ಸಮಾಜದೊಂದಿಗೆ ಸ್ಪಂದಿಸುತ್ತಲೇ ಇವೆ.  ಕಾಲಮಾನದೊಟ್ಟಿಗೆ ಬೆಳೆಯುತ್ತಲೇ ಬರುತ್ತಿವೆ.  ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಡಾಂಭಿಕತೆಯನ್ನು ಖಂಡಿಸುವ, ಸಮಾಜವನ್ನು ವಿಮರ್ಶಿಸುವ, ಲೋಕನೀತಿಯನ್ನು ಬೋಧಿಸಿ, ಭಕ್ತಿ ಪಾರಮ್ಯವನ್ನು ಮೆರೆಯುವಂತೆ ಮಾಡಿದ್ದಾರೆ.  ಕನಕದಾಸರು, ಪುರಂದರ ದಾಸರಂತಹ ದಾಸ ಶ್ರೇಷ್ಠರು ನಡೆದಾಡಿದ ಈ ನೆಲ ದಾಸ ಪರಂಪರೆಯ ನಾಡಾಗಿದೆ ಎಂದರು.
     ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕನಕದಾಸರ ಜಯಂತಿ ಅಂಗವಾಗಿ ರೂಪಿಸಿದ ‘ಸಂತ ಕವಿ ಕನಕದಾಸರು’ ಮಡಿಕೆ ಪತ್ರವನ್ನು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.  ಗಾಯಕ ಸದಾಶಿವ ಪಾಟೀಲರು ಕನಕದಾಸರ ಕೀರ್ತನೆಗಳನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಶೋಭೆ ತಂದರು. 
       ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ವಿಧಾನಪರಿಷತ್ ಸದಸ್ಯ ಹಾಲಪ್ಪ ಆಚಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್, ತಾ.ಪಂ. ಅಧ್ಯಕ್ಷೆ ಬಾನು ಚಂದುಸಾಬ್, ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್., ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮನ್ನವರ್, ಉಪವಿಭಾಗಾಧಿಕಾರಿ ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ, ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದು ಭಕ್ತ ಕನಕದಾಸರ ಭಾವಚಿತ್ರಕ್ಕೆ ಭಕ್ತಿ ಪೂರ್ವಕ ಪುಷ್ಪ ನಮನ ಸಲ್ಲಿಸಿದರು.  ‘ಸಂತ ಕವಿ ಕನಕದಾಸರು’ ಮಡಿಕೆ ಪತ್ರವನ್ನು ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ವಿತರಿಸಲಾಯಿತು.

ವಾಲಿಬಾಲ್ ಕ್ರೀಡೆಯಲ್ಲಿ ರಾಜ್ಯಕ್ಕೆ ಕೀರ್ತಿ ತನ್ನಿ- ಎಂ. ಕನಗವಲ್ಲಿ




ಕೊಪ್ಪಳ, ನ. 28 (ಕರ್ನಾಟಕ ವಾರ್ತೆ): ಯುವ ಜನತೆಯನ್ನು ಆಕರ್ಷಿಸುವ ವಾಲಿಬಾಲ್ ಕ್ರೀಡೆಯಲ್ಲಿ ಕ್ರೀಡಾಪಟುಗಲು ಉತ್ತಮ ಸಾಧನೆ ತೋರಿ, ಕರ್ನಾಟಕ ರಾಜ್ಯಕ್ಕೆ ಕೀರ್ತಿ ತರುವಂತಾಗಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಆಶಯ ವ್ಯಕ್ತಪಡಿಸಿದರು.

    ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಎರಡು ದಿನಗಳ ಕಾಲ ಆಯೋಜಿಸಿರುವ ರಾಜ್ಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಬಾಲಕ/ಬಾಲಕಿಯರ ವಾಲಿಬಾಲ್ ಪಂದ್ಯಾವಳಿಯನ್ನು ಕ್ರೀಡಾ ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
    ಕೊಪ್ಪಳ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿ ಆಯೋಜನೆಯ ಹೊಣೆಗಾರಿಕೆಯನ್ನು ನೀಡಲಾಗಿದೆ.  ಕಾಲಾವಕಾಶ ಕಡಿಮೆ ಇದ್ದರೂ, ವ್ಯವಸ್ಥಿತ ರೀತಿಯಲ್ಲಿ ಪಂದ್ಯಾವಳಿ ಆಯೋಜಿಸಲು ಸಕಲ ವ್ಯವಸ್ಥೆ ಕೈಗೊಳ್ಳಲಾಗಿದೆ.  ಪಂದ್ಯಗಳು ಹೊನಲು ಬೆಳಕಿನಲ್ಲಿಯೂ ನಡೆಯಲು ಸೂಕ್ತ ವ್ಯವಸ್ಥೆ ಕೈಗೊಳ್ಳಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಕ್ರೀಡಾಪಟುಗಳು ಕೊಪ್ಪಳಕ್ಕೆ ಆಗಮಿಸಿದ್ದು, ಸೂಕ್ತ ವಸತಿ, ಊಟೋಪಹಾರದ ವ್ಯವಸ್ಥೆ ಮಾಡಲಾಗಿದೆ.  ಕ್ರೀಡಾಪಟುಗಳು ವಾಲಿಬಾಲ್ ಪಂದ್ಯಾವಳಿಯಲ್ಲಿ ಉತ್ತಮ ಸಾಧನೆ ತೋರುವತ್ತ ತಮ್ಮ ಗಮನ ಕೇಂದ್ರೀಕರಿಸಬೇಕು.  ಉತ್ತಮ ಸಾಧನೆ ತೋರುವ ಮೂಲಕ ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಕೀರ್ತಿ ತರುವಂತಾಗಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಶುಭ ಹಾರೈಸಿದರು.


     ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್ ಅವರು ಮಾತನಾಡಿ, ರಾಜ್ಯದಲ್ಲಿ ಪ್ರತಿಭಾವಂತ ಕ್ರೀಡಾಪಟುಗಳಿದ್ದು, ತಮ್ಮ ಪ್ರತಿಭೆ ತೋರಿಸಲು ಇಂತಹ ಅವಕಾಶವನ್ನು ಕ್ರೀಡಾಪಟುಗಳು ಸದುಪಯೋಗ ಪಡಿಸಿಕೊಳ್ಳಬೇಕು.  ವಾಲಿಬಾಲ್ ಕ್ರೀಡೆಯು ಸಹ ಅತ್ಯುತ್ತಮ ಕ್ರೀಡೆಯಾಗಿದ್ದು, ಇದನ್ನು ಜನಪ್ರಿಯಗೊಳಿಸಬೇಕಿದೆ ಎಂದರು.


     ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಪವಾರ್, ಉಪವಿಭಾಗಾಧಿಕಾರಿ ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ, ನಗರಸಭೆ ಪೌರಾಯುಕ್ತ ರಮೇಶ್ ಪಟ್ಟೇದಾರ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ನಾಗರಾಜ ಜುಮ್ಮನ್ನವರ್, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಶಾರದಾ ನಿಂಬರಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ್ ಪೂಜಾರ್ ಉಪಸ್ಥಿತರಿದ್ದರು.  ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ಯಾಮಸುಂದರ್ ಸ್ವಾಗತಿಸಿದರು.  ಸುದರ್ಶನ್ ನಿರೂಪಿಸಿದರು.  ರಾಜ್ಯಮಟ್ಟದ ವಾಲಿಬಾಲ್ ಕ್ರೀಡಾಕೂಟದಲ್ಲಿ ಕಲಬುರಗಿ ವಿಭಾಗ, ಬೆಳಗಾವಿ, ಬೆಂಗಳೂರು, ಮೈಸೂರು ವಿಭಾಗ ಮಟ್ಟದಿಂದ ಪ್ರಾಥಮಿಕ, ಪ್ರೌಢಶಾಲಾ ವಿಭಾಗದ ತಲಾ ಒಂದು ತಂಡಗಳು ಹಾಗೂ ಭಾಗವಹಿಸಿದ್ದು, ರಾಜ್ಯದ ಕ್ರೀಡಾ ವಸತಿ ಶಾಲೆಯ ಪ್ರೌಢಶಾಲಾ ವಿಭಾಗದ ಬಾಲಕ ಮತ್ತು ಬಾಲಕಿಯರ ತಲಾ ಒಂದು ತಂಡ ಪಂದ್ಯಾವಳಿಯಲ್ಲಿ ಪಾಲ್ಗೊಂಡಿವೆ.  ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿ ನ. 28 ಮತ್ತು 29 ರಂದು ಎರಡು ದಿನಗಳ ಕಾಲ ನಡೆಯಲಿದೆ.

ಪ್ರತಿಭಾಕಾರಂಜಿ : ರಾಜ್ಯ ಮಟ್ಟಕ್ಕೆ ಆಯ್ಕೆ


ಕೊಪ್ಪಳ ನ. 28 (ಕರ್ನಾಟಕ ವಾರ್ತೆ): ಕೊಪ್ಪಳದಲ್ಲಿ ಇತ್ತೀಚೆಗೆ ಜರುಗಿದ ಜಿಲ್ಲಾ ಮಟ್ಟದ ಪ್ರತಿಭಾಕಾರಂಜಿ ಪ್ರಾಥಮಿಕ ಮತ್ತು ಪ್ರೌಢ ವಿಭಾಗದ ಸ್ಪರ್ಧೆಯಲ್ಲಿ ನಗರದ ಶಿವಶಾಂತವೀರ ಪಬ್ಲಿಕ್ ಶಾಲೆಯ ಅನನ್ಯ ದೇಸಾಯಿ ಮತ್ತು ವರ್ಷಿಣಿ ಸಂಕ್ಲಾಪುರ ವಿದ್ಯಾರ್ಥಿನಿಯರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
     ಶಿವಶಾಂತವೀರ ಪಬ್ಲಿಕ್ ಶಾಲೆಯ 6 ನೇ ತರಗತಿ ವಿದ್ಯಾರ್ಥಿನಿ ಅನನ್ಯ ದೇಸಾಯಿ ಪ್ರಾಥಮಿಕ ವಿಭಾಗದ ಲಘು ಸಂಗೀತದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.  ಅದೇ ರೀತಿ 10 ನೇ ತರಗತಿ ವಿದ್ಯಾರ್ಥಿನಿ ವರ್ಷಿಣಿ ಸಂಕ್ಲಾಪುರ ಪ್ರೌಢ ವಿಭಾಗ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.  ವಿದ್ಯಾರ್ಥಿಗಳ ಸಾಧನೆಗೆ ಗವಿಶ್ರೀಗಳು ಆಶೀರ್ವದಿಸಿದ್ದು, ಶಾಲೆಯ ಮುಖ್ಯೋಪಾಧ್ಯಾಯರು, ಸಿಬ್ಬಂದಿ ಮತ್ತು ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದ್ದಾರೆ.

ಯುವ ವಿಜ್ಞಾನಿ ಪ್ರಶಸ್ತಿ : ಅರ್ಜಿ ಆಹ್ವಾನ

ಕೊಪ್ಪಳ, ನ.26 (ಕರ್ನಾಟಕ ವಾರ್ತೆ) : ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಇವರುಗಳ ಸಹಯೋಗದಲ್ಲಿ ಜಿಲ್ಲಾಮಟ್ಟದ ಯುವ ವಿಜ್ಞಾನಿ 2015-16 ರ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
     9 ರಿಂದ 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಜಿಲ್ಲೆಯ ಆಸಕ್ತ ವಿದ್ಯಾರ್ಥಿಗಳು ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ನಮೂನೆಗಳನ್ನು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಸಂಯೋಜಕರಾದ ಮರಿಶಾಂತವೀರ ಶೆಟ್ಟರ, ಮೊ :9449515911 ಅಥವಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಛೇರಿ, ಕೊಪ್ಪಳ ಇವರಿಂದ ಪಡೆದು ಭರ್ತಿ ಮಾಡಿ, ಡಿ.08 ರೊಳಗಾಗಿ ಸಲ್ಲಿಸಬಹುದಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ  ವೆಬ್‍ಸೈಟ್  www.krvp.org ಗೆ ಭೇಟಿ ನೀಡಬಹುದಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಿಕ್ಷಕರ ಹುದ್ದೆ ನೇಮಕಾತಿ : ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

ಕೊಪ್ಪಳ, ನ.27 (ಕರ್ನಾಟಕ ವಾರ್ತೆ) : ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಾರ್ಯಾಲಯ, ಕೊಪ್ಪಳ ಇವರಿಂದ ಪ್ರಸಕ್ತ ಸಾಲಿನ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿನ ಸಹ ಶಿಕ್ಷಕರ ಹುದ್ದೆಗಳ ನೇಮಕಾತಿಯ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ನ.26 ರಂದು ಇಲಾಖೆಯ ವೆಬ್‍ಸೈಟ್  www.schooleducation.kar.nic.in ನಲ್ಲಿ ಹಾಗೂ ಉಪನಿರ್ದೇಶಕರ ಕಛೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ.
     ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಹೊಸದಾಗಿ ಆಯ್ಕೆಯಾದ ಅಭ್ಯರ್ಥಿಗಳು ಮೂಲ ದಾಖಲೆಗಳ ಎರಡು ಸೆಟ್ ಝರಾಕ್ಸ್ ಪ್ರತಿಗಳನ್ನು ಪರಿಶೀಲನೆಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಾರ್ಯಾಲಯ, ಕೊಪ್ಪಳ ಇವರ ಕಛೇರಿಗೆ ಸಲ್ಲಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎ.ಶ್ಯಾಮಸುಂದರ್ ಅವರು ತಿಳಿಸಿದ್ದಾರೆ.

ಕೌಶಲ್ಯ ತರಬೇತಿ ಕಾರ್ಯಕ್ರಮ : ನೋಂದಣಿಗೆ ಸೂಚನೆ

ಕೊಪ್ಪಳ, ನ.27 (ಕರ್ನಾಟಕ ವಾರ್ತೆ) : ಉತ್ತರ ಕನ್ನಡ ಜಿಲ್ಲೆ ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟ್ ಸಂಸ್ಥೆ (ರಿ) ವತಿಯಿಂದ ಡಿಸೆಂಬರ್ ತಿಂಗಳಿನಲ್ಲಿ ಪ್ರಥಮ ಹಂತದ ಕಛೇರಿ ಸಿಬ್ಬಂದಿಗಳ ಕೆಲಸ ನಿರ್ವಹಣಾ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
     ಹೊಸದಾಗಿ ಕೆಲಸಕ್ಕೆ ಸೇರುವ ಯುವ ಜನತೆ ಕಛೇರಿ ಕೆಲಸಗಳ ಅನುಭವವಿಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ. ಎಷ್ಟೋ ಬಾರಿ ಹಲವರು ಕೆಲಸ ನಿರ್ವಹಣೆ ಗೊತ್ತಿಲ್ಲದೇ ಒಳ್ಳೆಯ ಕೆಲಸವನ್ನೂ ಬಿಟ್ಟಿದ್ದಾರೆ. ಇದನ್ನು ತಪ್ಪಿಸಲು ಶಿಬಿರದಲ್ಲಿ ಉತ್ತಮ ಮಾತನಾಡುವ ಕಲೆ, ಪತ್ರ ವ್ಯವಹಾರ, ಕಡತಗಳ ನಿರ್ವಹಣೆ, ಜವಾಬ್ದಾರಿ ನಿರ್ವಹಣೆ, ವಿವಿಧ ಸಂಘ ಸಂಸ್ಥೆ, ಇಲಾಖೆಗಳ ಸಂಪರ್ಕ, ಹಣಕಾಸು ನಿರ್ವಹಣೆ, ದೂರವಾಣಿಯಲ್ಲಿ ಸಂದರ್ಶನ ಮಾಡುವುದು, ಕಛೇರಿಯ ಎಲ್ಲ ಸ್ಥರದ ಸಿಬ್ಬಂದಿಗಳ ಜೊತೆ ಆಂತರಿಕ ಸಂಬಂಧಗಳ ನಿರ್ವಹಣೆ, ಕಂಪ್ಯೂಟರ್‍ನ ಸಮರ್ಪಕ ಬಳಕೆ, ಇಂಟರ್‍ನೆಟ್ ಉಪಯೋಗ, ಸ್ಪೋಕನ್ ಇಂಗ್ಲೀಷ್, ಸಾರ್ವಜನಿಕವಾಗಿ ವ್ಯವಹರಿಸುವ ಕಲೆ ಮತ್ತು ಬ್ಯಾಂಕಿಂಗ್ ಹೀಗೆ ಹಲವಾರು ಕೌಶಲ್ಯ ತರಬೇತಿಗಳನ್ನು ನೀಡಲಾಗುವುದು. ತರಬೇತಿ ಕಾರ್ಯಕ್ರಮವು ಡಿ.14 ರಿಂದ 2016 ರ ಜನೇವರಿ 03 ರವರೆಗೆ 21 ದಿನಗಳ ಕಾಲ ನಡೆಯಲಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಉಚಿತ ವಸತಿ ಮತ್ತು ಊಟೋಪಚಾರದ ವ್ಯವಸ್ಥೆ ಮಾಡಲಾಗುವುದು. ತರಬೇತಿಯು ಹೊಸದಾಗಿ ಉದ್ಯಮ ಆರಂಭಿಸಿರುವ ಉದ್ಯಮಿಗಳಿಗೂ ಪ್ರಯೋಜನವಾಗಲಿದ್ದು, ಸಂಸ್ಥೆಯ ನುರಿತ ಉಪನ್ಯಾಸಕರು, ವಿವಿಧ ಕಂಪನಿಗಳ ನಿರ್ವಹಣಾ ವ್ಯವಸ್ಥಾಪಕರು ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.
     ಆಸಕ್ತ ಪಿ.ಯು.ಸಿ ಹಾಗೂ ಪದವೀಧರ 18 ರಿಂದ 45 ವಯೋಮಾನದ ಯುವಜನತೆ ತರಬೇತಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಕೆನರಾ ಬ್ಯಾಂಕ್ ದೇಶಪಾಂಡೆ ಆರ್.ಸೆಟ್ ಸಂಸ್ಥೆ, ದಾಂಡೇಲಿ ರಸ್ತೆ, ಉದ್ಯೋಗ ವಿದ್ಯಾನಗರ, ಹಳಿಯಾಳ-581329, ಉತ್ತರ ಕನ್ನಡ ಜಿಲ್ಲೆ, ದೂರವಾಣಿ ಸಂಖ್ಯೆ, 9482188780 ಅಥವಾ 9483485489 ಇವರನ್ನು ಸಂಪರ್ಕಿಸಬಹುದಾಗಿದೆ. ತರಬೇತಿಗೆ ಅಭ್ಯರ್ಥಿಗಳು ಡಿ.09 ರಂದು ಸ್ವತಃ ಸಂಸ್ಥೆಗೆ ಬಂದು ತಮ್ಮ ನೊಂದಾವಣಿಯನ್ನು ಖಾತ್ರಿಪಡಿಸಬೇಕು.

ಬಾಲಕನ ಪೋಷಕರ ಪತ್ತೆಗೆ ಸಹಕರಿಸಲು ಮನವಿ

ಕೊಪ್ಪಳ, ನ.27 (ಕರ್ನಾಟಕ ವಾರ್ತೆ) : ಗದಗ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಿಂದ ವರ್ಗಾವಣೆಯಾಗಿ ಬಾಲಮಂದಿರದ ಸ್ವಾಗತ ಘಟಕಕ್ಕೆ ಬಂದಿರುವ ಕೊಪ್ಪಳ ಜಿಲ್ಲೆಯ ಬಾಲಕ ಆಲಂಪಾಷಾನ ಪೋಷಕರ ಪತ್ತೆಗೆ ಸಹಕರಿಸುವಂತೆ ಸರ್ಕಾರಿ ಬಾಲಕರ ಬಾಲಮಂದಿರದ ಅಧೀಕ್ಷಕರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
      ಕೊಪ್ಪಳ ಜಿಲ್ಲೆಯವನಾಗಿರುವುದರಿಂದ ಬಾಲಕ ಆಲಂಪಾಷಾನನ್ನು ಅ.17 ರಂದು ಬಾಲಮಂದಿರದ ಸ್ವಾಗತ ಘಟಕಕ್ಕೆ ದಾಖಲಿಸಿಕೊಳ್ಳಲಾಗಿದ್ದು, ಅ.29 ರಂದು ನಡದ ಜಿಲ್ಲಾ ಮಕ್ಕಳ ಕಲ್ಯಾಣ ಸಭೆಯಲ್ಲಿ ಜಿಲ್ಲೆಯಲ್ಲಿರುವ ಬಾಲಕನ ಆರೈಕೆ ಮತ್ತು ಪೋಷಣೆಗಾಗಿ ತೆರೆದ ತಂಗುದಾಣಕ್ಕೆ ವರ್ಗಾಯಿಸಲಾಗಿದೆ. ಆದರೆ ಬಾಲಕನು ಪೋಷಕರ ವಿಳಾಸದ ಸರಿಯಾದ ಮಾಹಿತಿ ನೀಡುತ್ತಿಲ್ಲವಾದ ಕಾರಣ ಸಾರ್ವಜನಿಕರು ಬಾಲಕನ ಪೋಷಕರ ಪತ್ತೆಗೆ ಸಹಕರಿಸುವಂತೆ ಸರ್ಕಾರಿ ಬಾಲಕರ ಬಾಲಮಂದಿರದ ಅಧೀಕ್ಷಕರು ಸಾರ್ವಜನಿಕರಲ್ಲಿ ಕೋರಿದ್ದಾರೆ.
ಬಾಲಕನ ವಿವರ : ಹೆಸರು : ಆಲಂಪಾಷಾ, ವಯಸ್ಸು : 12 ವರ್ಷ, ತಂದೆ : ಹುಸೇನಿ, ತಾಯಿ :ಫಾತಿಮಾ ಗೋಸಾ, ಭಾಷೆ : ಹಿಂದಿ, ಜಾತಿ : ಮುಸ್ಲಿಂ, ತೂಕ : 20 ಕೆ.ಜಿ, ಎತ್ತರ : 144 ಸೆಂ.ಮೀ, ಬಣ್ಣ ಮತ್ತು ಚಹರೆ : ಕೆಂಪು ಮೈಬಣ್ಣ, ಹಣೆಯ ಮೇಲೆ ತೆರೆಚಿದ ಗಾಯದ ಕಲೆ ಇರುತ್ತದೆ. ಮೇಲ್ಕಣಿಸಿದ ಚಹರೆಯುಳ್ಳ ಬಾಲಕನ ಪೋಷಕರ ಬಗ್ಗೆ ಮಾಹಿತಿ ದೊರೆತಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೊಪ್ಪಳ. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ಕೊಪ್ಪಳ. ಸರ್ಕಾರಿ ಬಾಲಕರ ಬಾಲ ಮಂದಿರ, ವಿಜಯನಗರ ಬಡಾವಣೆ, ಅನ್ನಪೂರ್ಣೇಶ್ವರಿ ದೇವಸ್ಥಾನದ ಹಿಂದುಗಡೆ, ಕಿನ್ನಾಳ ರಸ್ತೆ, ಕೊಪ್ಪಳ, ದೂರವಾಣಿ ಸಂಖ್ಯೆ : 08539-200755, 9743425259, 9972524215, 08539-225030 ಇವರನ್ನು ಸಂಪರ್ಕಿಸುವಂತೆ ಬಾಲಕರ ಬಾಲಮಂದಿರದ ಅಧೀಕ್ಷಕರು ತಿಳಿಸಿದ್ದಾರೆ.

ನ.30 ರಿಂದ ಚಿಕ್ಕಮಗಳೂರಿನಲ್ಲಿ ರಾಜ್ಯಮಟ್ಟದ ಯುವಜನೋತ್ಸವ

ಕೊಪ್ಪಳ, ನ.27 (ಕರ್ನಾಟಕ ವಾರ್ತೆ) : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ ರಾಜ್ಯಮಟ್ಟದ ಯುವಜನೋತ್ಸವ ಕಾರ್ಯಕ್ರಮವನ್ನು ನ.30 ರಿಂದ ಡಿ.02 ರವರೆಗೆ ಚಿಕ್ಕಮಗಳೂರಿನ ಕುವೆಂಪು ಕಲಾ ಮಂದಿರದಲ್ಲಿ ಏರ್ಪಡಿಸಲಾಗಿದೆ.
     ಕೊಪ್ಪಳದ ಸಾಹಿತ್ಯಭವನದಲ್ಲಿ ನ.25 ರಂದು ನಡೆದ ಜಿಲ್ಲಾ ಮಟ್ಟದ ಯುವಜನೋತ್ಸವದಲ್ಲಿ ಭಾಗವಹಿಸಿ, ವೈಯಕ್ತಿಕ ಮತ್ತು ಗುಂಪು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಸ್ಪರ್ಧಿಗಳು ಮಾತ್ರ ಈ ರಾಜ್ಯಮಟ್ಟದ ಯುವಜನೋತ್ಸವದಲ್ಲಿ ಭಾಗವಹಿಸಲು ಅರ್ಹತೆ ಪಡೆದಿರುತ್ತಾರೆ. ಭಾಗವಹಿಸುವ ಸ್ಪರ್ಧಾಳುಗಳು ನ.30 ರಂದು ಬೆಳಿಗ್ಗೆ 08.00 ಗಂಟೆಗೆ ಸಂಘಟಕರಲ್ಲಿ ತಮ್ಮ ಹೆಸರನ್ನು ನೊಂದಾಯಿಸಿ, ಉದ್ಘಾಟನಾ ಸಮಾರಂಭದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು. ಅದಕ್ಕೂ ಮುನ್ನ ಜಿಲ್ಲೆಯ ಸ್ಪರ್ಧಾಳುಗಳು ಕೊಪ್ಪಳದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಪ್ರವೇಶ ಅರ್ಜಿಯ ನಿಗದಿತ ನಮೂನೆಯನ್ನು ಪಡೆದು, ಭರ್ತಿ ಮಾಡಿ, ಸಹಾಯಕ ನಿರ್ದೇಶಕರಿಂದ ರುಜು ಪಡೆದು ತೆಗೆದುಕೊಂಡು ಹೋಗತಕ್ಕದ್ದು. ಅಲ್ಲದೆ, ಇಲಾಖೆಯ ಎಲ್ಲ ಷರತ್ತುಗಳಿಗೆ ಬದ್ಧರಿರಬೇಕು.
     ರಾಜ್ಯ ಮಟ್ಟದ ಯುವಜನೋತ್ಸವದಲ್ಲಿ ಊಟೋಪಹಾರದ ಹಾಗೂ ವಸತಿ ವ್ಯವಸ್ಥೆಯನ್ನು ಸಂಘಟಕರು ಮಾಡಿರುತ್ತಾರೆ. ಚಿಕ್ಕಮಗಳೂರಿನಲ್ಲಿ ಚಳಿ ಹೆಚ್ಚಾಗಿರುವುದರಿಂದ ಸ್ಪರ್ಧಾಳುಗಳು ಬೆಚ್ಚನೆಯ ಉಡುಪು, ಲಘು ಹಾಸಿಗೆ, ಹೊದಿಕೆ ಬೀಗ ಮತ್ತು ಬೀಗದ ಕೈಗಳನ್ನು ತಮ್ಮೊಂದಿಗೆ ತೆಗೆಂದುಕೊಂಡು ಹೋಗಬೇಕು. ಜಿಲ್ಲೆಯ ಸ್ಪರ್ಧಾಳುಗಳಿಗೆ ಜಿಲ್ಲಾ ಕೇಂದ್ರ ಸ್ಥಾನದಿಂದ ಚಿಕ್ಕಮಗಳೂರು ಜಿಲ್ಲೆಯವರೆಗೆ ಸಾಮಾನ್ಯ ಬಸ್ ಪ್ರಯಾಣ ಭತ್ಯೆಯನ್ನು ನೀಡಲಾಗುವುದು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂರವಾಣಿ ಸಂಖ್ಯೆ : 08539-201400 ನ್ನು ಸಂಪರ್ಕಿಸುವಂತೆ ಕೊಪ್ಪಳದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾ ಮಟ್ಟದ ಯುವಜನೋತ್ಸವ ಸ್ಪರ್ಧೆ : ಫಲಿತಾಂಶ ಪ್ರಕಟ

ಕೊಪ್ಪಳ, ನ.27 (ಕರ್ನಾಟಕ ವಾರ್ತೆ) : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನಗರದ ಸಾಹಿತ್ಯ ಭವನದಲ್ಲಿ ನ.25 ರಂದು ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಯುವಜನೋತ್ಸವದಲ್ಲಿ ವಿಜೇತರಾಗಿ, ರಾಜ್ಯಮಟ್ಟಕ್ಕೆ ಆಯ್ಕೆಯಾದ ಸ್ಪರ್ಧಾಳುಗಳ ವಿವರ :
     ಶಾಸ್ತ್ರೀಯ ಸಂಗೀತ : ಸಂಜಯ ಗಂಗಾವತಿ-ಪ್ರಥಮ, ಶಕುಂತಲಾ ಬೆನ್ನಾಳ-ದ್ವಿತೀಯ. ಕೊಳಲು : ನಾಗರಾಜ್ ಶ್ಯಾವಿ-ಪ್ರಥಮ, ಗಂಗಾಧರ ನವಲಿ-ದ್ವಿತೀಯ. ವೀಣಾ ಸೋಲೋ : ಸುಲೋಚನಾ ಗಂಗಾವತಿ-ಪ್ರಥಮ. ತಬಲಾ ಸೋಲೊ : ಭರಮಪ್ಪ ಭಜಂತ್ರಿ ಕುಷ್ಟಗಿ-ಪ್ರಥಮ. ಭರತನಾಟ್ಯ : ಗುರುರಾಜ್ ಗಂಗಾವತಿ-ಪ್ರಥಮ, ಅಲ್ತಾಫ್ ಭಾಗ್ಯನಗರ-ದ್ವಿತೀಯ. ಆಶು ಭಾಷಣ : ದ್ಯಾಮಣ್ಣ ಗೊಂದಿ-ಪ್ರಥಮ, ಶಂಕರ ಸುಂಕದ-ದ್ವಿತೀಯ. ಜನಪದ ಗೀತೆ : ತಾಯಮ್ಮ ಭಜನಾ ಮಂಡಳಿ ಕಾತರಕಿ-ಪ್ರಥಮ, ಮದರ ತೆರೆಸಾ ಯುವತಿಯರ ಮಂಡಳಿ ದೋಟಿಹಾಳ-ದ್ವಿತೀಯ, ಜನಪದ ನೃತ್ಯ : ಗೌರಿ ಶಂಕರ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ ಭಾಗ್ಯನಗರ-ಪ್ರಥಮ, ಹಾರ್ಮೋನಿಯಂ : ಗುರಪ್ಪ ತೋಪಲಕಟ್ಟಿ-ಪ್ರಥಮ, ಲಲಿತಮ್ಮ ಹಿರೇಮಠ ಕುಷ್ಟಗಿ-ದ್ವಿತೀಯ, ಸಿತಾರ್ ಸೋಲೊ : ಪ್ರತಿಮಾ ಗಂಗಾವತಿ-ಪ್ರಥಮ, ಪವಿತ್ರಾ ಹೊಸಮನಿ-ದ್ವಿತೀಯ. ಮಣಿಪುರಿ ಓಡಿಸ್ಸಿ ಕಥಕ್ : ಗುರುರಾಜ್ ಗಂಗಾವತಿ-ಪ್ರಥಮ, ವಿಮಲಾ ಜೋಷಿ-ದ್ವಿತೀಯ. ಕುಚುಪುಡಿ ನೃತ್ಯ : ಗುರುರಾಜ್ ಗಂಗಾವತಿ-ಪ್ರಥಮ, ವಿಮಲಾ ಗಂಗಾವತಿ-ದ್ವಿತೀಯ. ನಾಟಕ (ಹಿಂದಿ ಅಥವಾ ಇಂಗ್ಲೀಷ್) : ಹಕ್ಕಬುಕ್ಕ ನಾಯಕ ಸಾಂಸ್ಕøತಿಕ ಪರಿಷತ್ ಕೊಪ್ಪಳ-ಪ್ರಥಮ ಸ್ಥಾನವನ್ನು ಪಡೆದು ನ.30 ರಿಂದ ಡಿ.02 ರವರೆಗೆ ಚಿಕ್ಕಮಗಳೂರಿನ ಕುವೆಂಪು ಕಲಾ ಮಂದಿರದಲ್ಲಿ ಏರ್ಪಡಿಸಲಾಗಿರುವ ರಾಜ್ಯಮಟ್ಟದ ಯುವಜನೋತ್ಸವಕ್ಕೆ ಆಯ್ಕೆಯಾಗಿದ್ದಾರೆ ಎಂದು ಕೊಪ್ಪಳದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾಗ್ಯನಗರ ಪಟ್ಟಣ ಪಂಚಾಯಿತಿ ವಾರ್ಡುಗಳ ವ್ಯಾಪ್ತಿ ನಿಗದಿ : ಆಕ್ಷೇಪಣೆಗಳಿಗೆ ಆಹ್ವಾನ

ಕೊಪ್ಪಳ, ನ.27 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲೆಯ ಭಾಗ್ಯನಗರ ಪಟ್ಟಣ ಪಂಚಾಯಿತಿಯ ಎಲ್ಲಾ 19 ವಾರ್ಡುಗಳ ಪ್ರಸ್ತಾವಿತ ಕ್ಷೇತ್ರ ವಿಂಗಡಣೆ ಮಾಡಿ ಕರಡು ಅಧಿಸೂಚನೆ ಹೊರಡಿಸಲಾಗಿದ್ದು, ವಿಂಗಡಣೆಯನ್ನು ಅಂತಿಮಗೊಳಿಸಲು ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.
     ಭಾಗ್ಯನಗರ ಪಟ್ಟಣ ಪಂಚಾಯಿತಿಯನ್ನು 2011 ರ ಜನಗಣತಿ ಆಧಾರದ ಮೇರೆಗೆ ಕ್ಷೇತ್ರ ವಿಂಗಡಣೆ ಮಾಡಲಾಗಿದ್ದು, ವಿಂಗಡಣೆ ಮಾಡಲಾಗಿರುವ ವಿವರ ಈ ಕೆಳಗಿನಂತಿದೆ.
ವಾರ್ಡ್ ನಂ.01 ರಲ್ಲಿ ಜನತಾ ಕಾಲೋನಿ ಹಾಗೂ ಕೀರ್ತಿ ಕಾಲೋನಿ, ವಾರ್ಡ್ ನಂ.02 ರಲ್ಲಿ ಚಿತ್ರಗಾರ ಓಣಿ ಹಾಗೂ ಹರಿಜನ ಕಾಲೋನಿ, ವಾರ್ಡ್ ನಂ.03 ರಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರದೇಶ ಹಾಗೂ ಮುಖ್ಯರಸ್ತೆ, ವಾರ್ಡ್ ನಂ.04 ರಲ್ಲಿ ಶಾಸ್ತ್ರೀ ಕಾಲೋನಿ, ವಾರ್ಡ್ ನಂ.05 ರಲ್ಲಿ ಎಮ್.ಹೆಚ್.ಪಿ.ಎಸ್ ಶಾಲೆ ಪ್ರದೇಶ ಹಾಗೂ ಬಜಾರ ರಸ್ತೆ, ವಾರ್ಡ್ ನಂ.06 ರಲ್ಲಿ ಊರಮ್ಮನ ಗುಡಿ ಪ್ರದೇಶ, ವಾರ್ಡ್ ನಂ.07 ರಲ್ಲಿ ಶ್ರೀರಾಮ ಕಾಲೋನಿ ಹಾಗೂ ಶಂಕರಾಚಾರ್ಯಮಠದ ದಕ್ಷಿಣ ಭಾಗ,  ವಾರ್ಡ್ ನಂ.08ರಲ್ಲಿ ಕೆ.ಹೆಚ್.ಡಿ.ಸಿ ಕಾಲೋನಿ, ವಾರ್ಡ್ ನಂ.09 ರಲ್ಲಿ ಸ್ಮಶಾನ ರಸ್ತೆ ಪ್ರದೇಶಗಳನ್ನು ಸೇರಿಸಲಾಗಿದೆ.
ವಾರ್ಡ್ ನಂ.10 ರಲ್ಲಿ ನವನಗರ ರಸ್ತೆ, ಕರ್ನಾಟಕ ಗೃಹ ಮಂಡಳಿ ಹಾಗೂ ನವನಗರ, ವಾರ್ಡ್ ನಂ.11 ರಲ್ಲಿ ವಾಲ್ಮೀಕಿ ಸರ್ಕಲ್ ಪ್ರದೇಶ, ವಾರ್ಡ್ ನಂ.12 ರಲ್ಲಿ ಕಿನ್ನಾಳ ಮುಖ್ಯರಸ್ತೆ ಹಾಗೂ ಕದಂಬನಗರ, ವಾರ್ಡ್ ನಂ.13 ರಲ್ಲಿ ಹಿರೇಮಸೂತಿ ಪ್ರದೇಶ, ವಾರ್ಡ್ ನಂ.14 ರಲ್ಲಿ ಮೋಚಿ ಓಣಿ, ವಾರ್ಡ್ ನಂ.15 ರಲ್ಲಿ ಹಮಾಲರ ಸಂಘ ಹಾಗೂ ಮೋಚಿ ಓಣಿ, ವಾರ್ಡ್ ನಂ.16 ರಲ್ಲಿ ಕೀರ್ತಿ ಕಾಲೋನಿ, ಪದ್ಮಾವತಿ ಕಾಲೋನಿ ಹಾಗೂ ಧನ್ವಂತರಿ ಕಾಲೋನಿ, ವಾರ್ಡ ನಂ.17 ರಲ್ಲಿ ಧನ್ವಂತರಿ ಕಾಲೋನಿ ಗಣೇಶ ತೆಗ್ಗು, ವಾರ್ಡ್ ನಂ.18 ರಲ್ಲಿ ಗಣೇಶ ತೆಗ್ಗು, ಪ್ರಗತಿ ನಗರ, ಪೊಲೀಸ್ ಕಾಲೋನಿ, ಕಿನ್ನಾಳ ಹಾಗೂ ಕುಷ್ಟಗಿ ರಸ್ತೆ, ವಾರ್ಡ್ ನಂ.19 ರಲ್ಲಿ ಟೀಚರ್ಸ್ ಕಾಲೋನಿ, ದುರಗಮುರಗಿ ಕಾಲೋನಿ, ಎನ್.ಜಿ.ಒ ಕಾಲೋನಿ, ಅಂಬೇಡ್ಕರ್ ಕಾಲೋನಿ, ಬೇಂದ್ರೆ ನಗರ ಪ್ರದೇಶಗಳನ್ನು ಸೇರಿಸಿ, ಈ ರೀತಿಯಾಗಿ ಕ್ಷೇತ್ರ ವಿಂಗಡಗಣೆ ಮಾಡಲಾಗಿದೆ.
     ಕರಡು ಅಧಿಸೂಚನೆಯನ್ನು ಜಿಲ್ಲಾಧಿಕಾರಿಗಳ ಕಚೇರಿ ಕೊಪ್ಪಳ, ಸಹಾಯಕ ಆಯುಕ್ತರ ಕಚೇರಿ ಕೊಪ್ಪಳ, ತಹಸಿಲ್ದಾರರ ಕಾರ್ಯಾಲಯ ಕೊಪ್ಪಳ ಹಾಗೂ ಪಟ್ಟಣ ಪಂಚಾಯಿತಿ ಭಾಗ್ಯನಗರ ಕಾರ್ಯಾಲಯದ ನೋಟಿಸ್ ಫಲಕದಲ್ಲಿ ಪ್ರಚುರಪಡಿಸಲಾಗಿದೆ. ವಾರ್ಡುಗಳ ವಿಂಗಡಣೆ ಬಗ್ಗೆ ಸಂಬಂಧಪಟ್ಟ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿರುವ ಸಾರ್ವಜನಿಕರಲ್ಲಿ ಯಾವುದೇ ಆಕ್ಷೇಪಣೆಗಳು ಅಥವಾ ಸಲಹೆ, ಸೂಚನೆಗಳು ಇದ್ದಲ್ಲಿ, ಸೂಕ್ತ ದಾಖಲಾತಿಗಳೊಂದಿಗೆ ಲಿಖಿತ ರೂಪದಲ್ಲಿ ತಮ್ಮ ಪೂರ್ಣ ವಿಳಾಸದೊಂದಿಗೆ ಕೊಪ್ಪಳ ಉಪವಿಭಾಗಾಧಿಕಾರಿಗಳ ಕಛೇರಿಗೆ ಡಿಸೆಂಬರ್.18 ರೊಳಗಾಗಿ ಸಲ್ಲಿಸಬಹುದಾಗಿದೆ. ನಂತರ ಬಂದಂತಹ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಉಪವಿಭಾಗಾಧಿಕಾರಿ ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಕ್ಕಳ ಸಂರಕ್ಷಣಾ ಚಟುವಟಿಕೆಗಳು ಕೊಪ್ಪಳ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿವೆ

ಕೊಪ್ಪಳ ನ. 27 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಮಕ್ಕಳ ಸಂರಕ್ಷಣಾ ಚಟುವಟಿಕೆ ಮತ್ತು ಕಾರ್ಯಕ್ರಮಗಳು ಮಕ್ಕಳ ರಕ್ಷಣಾ ವ್ಯವಸ್ಥೆಯ ಕ್ರಮಕ್ಕೆ ಉತ್ತಮ ಮಾದರಿಯಾಗಿದೆ ಎಂದು, ಯುನಿಸೆಫ್ ನವದೆಹಲಿಯ ಪ್ರತಿನಿಧಿ ಫಾರುಖ್ ರವರು ಹೇಳಿದರು.
       ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಆಯೋಜಿಸಲಾದ ಬಾಲಿಕಾ ಸಂಘಗಳ ಜಿಲ್ಲಾ ಮಟ್ಟದ ಸಮಾವೇಶ ಮತ್ತು ಮಕ್ಕಳ ಮಾಸಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
      ಕಿಶೋರಿಯರ ಸಬಲೀಕರಣವು ಅಭಿವೃದ್ಧಿಗೆ ಪೂರಕವಾಗಿದೆ. ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿಯಂತಹ ಸಾಮಾಜಿಕ ಸಮಸ್ಯೆಗಳಿಗೆ ಕಿಶೋರಿಯರು ಬಲಿಯಾಗದೇ ತಮ್ಮನ್ನು ತಾವೇ ರಕ್ಷಣೆ ಮಾಡಲು ಬಾಲಿಕಾ ಸಂಘಗಳು ನೆರವಾಗುತ್ತವೆ. ಪೋಷಕರೂ ಕೂಡ ಕಿಶೋರಿಯರ ಭಾವನೆಗಳನ್ನು ಅರಿತು ಅವರ ಪ್ರತಿಭೇಗಳಿಗೆ ಪ್ರೋತ್ಸಾಹಿಸಬೇಕು ಎಂದು ಯುನಿಸೆಫ್‍ನ ದೆಹಲಿಯ ಪ್ರತಿನಿಧಿ ಫಾರುಖ್ ಅವರು ತಿಳಿಸಿದರು.
    ಕಾರ್ಯಕ್ರಮದಲ್ಲಿ ಭಾಗವಹಿಸಿದ ಯುನಿಸೆಫ್- ಹೈದರಾಬಾದ್‍ನ  ರೂತ್‍ಲಿಯಾನೋ ರವರು ಕೊಪ್ಪಳ ಜಿಲ್ಲೆಯಲ್ಲಿ ಮಕ್ಕಳ ರಕ್ಷಣೆಗಾಗಿ ಯುನಿಸೆಫ್ ಮತ್ತು ಕರ್ನಾಟಕ ಸರಕಾರ, ಜಿಲ್ಲಾಡಳಿತದ ಮೂಲಕ ಅನುಷ್ಠಾನಗೊಳಿಸುತ್ತಿರುವ ಮಕ್ಕಳ ರಕ್ಷಣಾ ಯೋಜನೆಯಡಿ ಮುಖಾಂತರ ಹಲವಾರು ಪ್ರಾಯೋಗಿಕ ಯೋಜನೆಗಳನ್ನು ಕಾರ್ಯಗತಗೊಳಿಸಲಾಗಿದೆ ಎಂದರು.
    ಯುನಿಸೆಫ್‍ನ ಮಕ್ಕಳ ರಕ್ಷಣಾ ಪರಿಣಿತರಾದ ಸೋನಿಕುಟ್ಟಿ ಜಾರ್ಜ್, ಸಂಯೋಜಕ ಹರೀಶ್ ಜೋಗಿ, ರಾಘವೇಂದ್ರ ಭಟ್, ಸೋಮಶೇಖರ್, ಶಿವರಾಮ್ ಮೊದಲಾದವರು ಭಾಗವಹಿಸಿದರು. ಜಿಲ್ಲೆಯ ವಿವಿಧ ಗ್ರಾಮಗಳಿಂದ ಕಿಶೋರಿಯರು ಆಗಮಿಸಿದ್ದರು. ಶ್ರೀಮತಿ ವಾಣಿ ಪೆರಿಯೋಡಿ ಮತ್ತು ಅವರ ತಂಡದವರು ಕಿಶೋರಿಯರಿಗೆ ವಿವಿಧ ಚಟಿವಟಿಕೆಗಳ ಮುಖಾಂತರ ಜೀವನ ಕೌಶಲ್ಯದ ಬಗ್ಗೆ ಮಾಹಿತಿ ನೀಡಿದರು.
    ತಂಡವು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರೊಂದಿಗೆ ಸಮಾಲೋಚನೆ ನಡೆಸಿ ನಂತರ ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ತೆರೆದಮೆನ ಕಾರ್ಯಕ್ರಮದಲ್ಲಿ ಭಾಗವಹಿಸಿದರು.  ಅಲ್ಲದೆ ಓಜನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಯತ್ನಟ್ಟಿಯಲ್ಲಿ ಮಕ್ಕಳ ಗ್ರಾಮಸಭೆ, ಮಕ್ಕಳ ರಕ್ಷಣಾ ಸಮಿತಿ ಸಭೆಯಲ್ಲಿ ಭಾಗವಹಿಸಿದರು. ಸಾಮೂಹಿಕ ವಿವಾಹ ಆಯೋಜಕರೊಂದಿಗೆ ಚರ್ಚೆ ನಡೆಸಿದರು.

Thursday, 26 November 2015

ಸಂವಿಧಾನ ದಿನ : ಭ್ರಾತೃಭಾವನೆ ವೃದ್ಧಿಗೆ ಸಂಕಲ್ಪ- ಪ್ರತಿಜ್ಞಾ ವಿಧಿ ಸ್ವೀಕಾರ


ಕೊಪ್ಪಳ ನ. 26 (ಕರ್ನಾಟಕ ವಾರ್ತೆ) : ಸರ್ಕಾರದ ಸೂಚನೆ ಮೇರೆಗೆ ನ. 26 ರ ದಿನವನ್ನು ಸಂವಿಧಾನ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಸಂವಿಧಾನದ ಪ್ರಸ್ತಾವನೆ ಸಾಲುಗಳಲ್ಲಿರುವ ಪ್ರತಿಜ್ಞಾ ವಿಧಿಯನ್ನು ಅಧಿಕಾರಿ, ಸಿಬ್ಬಂದಿಗಳಿಗೆ ಬೋಧಿಸಿದರು.
     ಸಂವಿಧಾನದ ಪ್ರಸ್ತಾವನೆಯಲ್ಲಿ ವಿವರಿಸಿರುವಂತೆ ಪ್ರತಿಜ್ಞಾ ವಿಧಿ ಬೋಧಿಸಿದ ಜಿಲ್ಲಾಧಿಕಾರಿಗಳು, ಭಾರತದ ಜನಗಳಾದ ನಾವು ಭಾರತವನ್ನು ಒಂದು ಸಾರ್ವಭೌಮ ಸಮಾಜವಾದೀ ಸರ್ವಧರ್ಮ ಸಮಭಾವದ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ರಚಿಸಲು ಮತ್ತು ಅದರ ಸಮಸ್ತ ನಾಗರಿಕರಿಗೆ ; ಸಾಮಾಜಿಕ, ಆರ್ಥಿಕ, ವಿಶ್ವಾಸ, ಧರ್ಮಶ್ರದ್ಧೆ ಮತ್ತು ಉಪಾಸನಾ ಸ್ವಾತಂತ್ರ್ಯ, ಸ್ಥಾನಮಾನ ಹಾಗೂ ಅವಕಾಶ ಸಮಾನತೆ ದೊರೆಯುವಂತೆ ಮಾಡಲು ಮತ್ತು ವ್ಯಕ್ತಿ ಗೌರವವನ್ನು, ರಾಷ್ಟ್ರದ ಏಕತೆಯನ್ನು ಹಾಗೂ ಅಖಂಡತೆಯನ್ನು ಸುನಿಶ್ಚಿತಗೊಳಿಸಿ, ಅವರಲ್ಲಿ ಭ್ರಾತೃ ಭಾವನೆಯನ್ನು ವೃದ್ಧಿಗೊಳಿಸಲು ಶ್ರದ್ಧಾಪೂರ್ವಕ ಸಂಕಲ್ಪ ಮಾಡಿದವರಾಗಿ ; ನಮ್ಮ ಸಂವಿಧಾನ ಸಭೆಯಲ್ಲಿ 1949 ರ ನವೆಂಬರ್ 26 ರಂದು ಈ ಮೂಲಕ ಈ ಸಂವಿಧಾನವನ್ನು ಅಂಗೀಕರಿಸಿ, ಅಧಿನಿಯಮಿಸಿ ಅರ್ಪಿಸಿಕೊಂಡಿದ್ದೇವೆ ಎಂದು ಬೋಧಿಸಿದರು.  ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್. ಡಿಡಿಪಿಐ ಶ್ಯಾಮಸುಂದರ್, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ., ನಗರಸಭೆ ಪೌರಾಯುಕ್ತ ರಮೇಶ್ ಪಟ್ಟೇದಾರ್, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಶಾರದಾ ನಿಂಬರಗಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಜಿಲ್ಲಾಧಿಕಾರಿಗಳ ಕಚೇರಿ ಸಿಬ್ಬಂದಿಗಳು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
     ಸಂವಿಧಾನ ದಿನದ ಅಂಗವಾಗಿ ಜಿಲ್ಲಾಪಂಚಾಯತಿ ಕಚೇರಿಯಲ್ಲಿ ಉಪಕಾರ್ಯದರ್ಶಿ ಎನ್.ಕೆ. ತೊರವಿ ಅವರು ಅಧಿಕಾರಿ, ಸಿಬ್ಬಂದಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿ ಕ್ರೀಡಾಕೂಟ ಯಶಸ್ವಿಗೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಸೂಚನೆ


ಕೊಪ್ಪಳ ನ. 26 (ಕರ್ನಾಟಕ ವಾರ್ತೆ) : ಕೊಪ್ಪಳದಲ್ಲಿ ಇದೇ ಮೊದಲ ಬಾರಿಗೆ ರಾಜ್ಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಬಾಲಕ/ಬಾಲಕಿಯರ ವಾಲಿಬಾಲ್ ಪಂದ್ಯಾವಳಿಯನ್ನು ನ. 28 ಮತ್ತು 29 ರಂದು ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗುತ್ತಿದ್ದು, ಕ್ರೀಡಾ ಕೂಟದ ಯಶಸ್ವಿಗೆ ಸಕಲ ಸಿದ್ಧತೆಗಳನ್ನು ಅಚ್ಚುಕಟ್ಟಾಗಿ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

     ಕೊಪ್ಪಳದಲ್ಲಿ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿ ಆಯೋಜಿಸುವ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರದಂದು ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

     ಕೊಪ್ಪಳ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ರಾಜ್ಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಬಾಲಕ/ಬಾಲಕಿಯರ ವಾಲಿಬಾಲ್ ಪಂದ್ಯಾವಳಿಯನ್ನು ನ. 28 ಮತ್ತು 29 ರಂದು ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗುತ್ತಿದೆ.  ಕ್ರೀಡಾಕೂಟಕ್ಕೆ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸುವ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಸಮರ್ಪಕ ವಸತಿ, ಊಟ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕೈಗೊಳ್ಳಬೇಕು.  ಕ್ರೀಡಾಪಟುಗಳಿಗೆ ಈ ಸಂಬಂಧ ಯಾವುದೇ ಗೊಂದಲ ಉಂಟಾಗದಂತೆ ಕ್ರೀಡಾಕೂಟ ನಡೆಯುವ ಸ್ಥಳದಲ್ಲಿ ಹೆಲ್ಪ್ ಡೆಸ್ಕ್ ಸ್ಥಾಪಿಸಿ, ಮಾಹಿತಿ ನೀಡುವಂತಾಗಬೇಕು.  ಬಾಲಕ, ಬಾಲಕಿಯರಿಗೆ ಪ್ರತ್ಯೇಕ ವಸತಿ ವ್ಯವಸ್ಥೆ ಕೈಗೊಳ್ಳಬೇಕು.  ಕ್ರೀಡಾಪಟುಗಳು ವಾಸ್ತವ್ಯ ಮಾಡುವ ಸ್ಥಳದಿಂದ, ಜಿಲ್ಲಾ ಕ್ರೀಡಾಂಗಣಕ್ಕೆ ತೆರಳಲು ಅಗತ್ಯ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು.  ಕ್ರೀಡಾಂಗಣದ ಸ್ವಚ್ಛತೆ ಹಾಗೂ ತಾತ್ಕಾಲಿಕ ಶೌಚಾಲಯ ನಿರ್ಮಾಣಕ್ಕೆ ಆದ್ಯತೆ ನೀಡಬೇಕು.  ಕ್ರೀಡಾಪಟುಗಳಿಗೆ ಶುದ್ಧ ಕುಡಿಯುವ ನೀರಿನ ಮತ್ತು ಸಮರ್ಪಕ ಊಟೋಪಹಾರದ ವ್ಯವಸ್ಥೆಗೊಳಿಸಬೇಕು.  ರಾಜ್ಯ ಮಟ್ಟದ ಕ್ರೀಡಾಕೂಟ ಇದಾಗಿರುವದರಿಂದ, ಕ್ರೀಡಾಕೂಟ ಮುಗಿಸಿಕೊಂಡು ತೆರಳುವ ಬೇರೆ ಜಿಲ್ಲೆಗಳ ಕ್ರೀಡಾಪಟುಗಳು ತೃಪ್ತಿಕರ ಭಾವನೆಯಿಂದ ಹಿಂದಿರಗಬೇಕು.  ಅಲ್ಲದೆ ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದ ಕ್ರೀಡಾಕೂಟಗಳು ಕೊಪ್ಪಳ ಜಿಲ್ಲೆಗೆ ಲಭಿಸುವಂತಾಗಬೇಕು.  ಒಟ್ಟಾರೆಯಾಗಿ ಕ್ರೀಡಾ ಕೂಟ ಯಶಸ್ವಿಗೊಳ್ಳಬೇಕಿದ್ದಲ್ಲಿ, ಸಮರ್ಪಕ ವಸತಿ, ಊಟ, ಶುದ್ಧ ಕುಡಿಯುವ ನೀರು ಹಾಗೂ ಸೂಕ್ತ ಮೂಲಭೂತ ಸೌಕರ್ಯಗಳ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಬೇಕು.  ಕ್ರೀಡಾಕೂಟ ಯಶಸ್ವಿಗೊಳಿಸಲು ರಚಿಸಲಾಗಿರುವ ವಿವಿಧ ಉಪಸಮಿತಿಗಳು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
      ರಾಜ್ಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಬಾಲಕ/ಬಾಲಕಿಯರ ವಾಲಿಬಾಲ್ ಪಂದ್ಯಾವಳಿ   ಆಯೋಜನೆ ಕುರಿತಂತೆ ಮಾಹಿತಿ ನೀಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ಯಾಮಸುಂದರ್ ಅವರು, ಕಲಬುರಗಿ ವಿಭಾಗ, ಬೆಳಗಾವಿ, ಬೆಂಗಳೂರು, ಮೈಸೂರು ವಿಭಾಗ ಮಟ್ಟದಿಂದ ಪ್ರಾಥಮಿಕ, ಪ್ರೌಢಶಾಲಾ ವಿಭಾಗದ ತಲಾ ಒಂದು ತಂಡಗಳು ಭಾಗವಹಿಸಲಿವೆ.  ಇದರಲ್ಲಿ ಬಾಲಕ ಮತ್ತು ಬಾಲಕಿಯರ ಪ್ರತ್ಯೇಕ ತಂಡಗಳು ಪಾಲ್ಗೊಳ್ಳಲಿವೆ.  ರಾಜ್ಯದ ಕ್ರೀಡಾ ವಸತಿ ಶಾಲೆಯ ಪ್ರೌಢಶಾಲಾ ವಿಭಾಗದ ಬಾಲಕ ಮತ್ತು ಬಾಲಕಿಯರ ತಲಾ ಒಂದು ತಂಡ ಪಾಲ್ಗೊಳ್ಳಲಿದೆ.  ಪ್ರತಿ ಒಂದು ತಂಡದಿಂದ ತಲಾ 12 ಕ್ರೀಡಾಪಟುಗಳು ಇರಲಿದ್ದು, ಪ್ರತಿ ತಂಡಕ್ಕೆ ಒಬ್ಬ ತರಬೇತುದಾರ ಮತ್ತು ಒಬ್ಬ ಮೇಲ್ವಿಚಾರಕರು ತಂಡದೊಂದಿಗೆ ಆಗಮಿಸುವರು.  ಕ್ರೀಡಾಕೂಟದಲ್ಲಿ ಒಟ್ಟು 40 ನಿರ್ಣಾಯಕರು ಮತ್ತು ಸಹಾಯಕ ಸಿಬ್ಬಂದಿ ಪಾಲ್ಗೊಳ್ಳುವರು.  ಕ್ರೀಡಾಪಟುಗಳು ಮತ್ತು ಇತರೆ ಸಿಬ್ಬಂದಿ ಸೇರಿದಂತೆ ಒಟ್ಟು 292 ಜನ ಕ್ರೀಡಾಕೂಟಕ್ಕೆ ಆಗಮಿಸುವರು.  ಬಾಲಕಿಯರಿಗೆ ಮತ್ತು ಮಹಿಳಾ ಮೇಲ್ವಿಚಾರಕರಿಗೆ ಕೊಪ್ಪಳದ ಕ್ರೀಡಾ ವಸತಿ ಶಾಲೆ ಮತ್ತು ಪೊಲೀಸ್ ಭವನದಲ್ಲಿ ವಸತಿ ಸೌಕರ್ಯ ಕಲ್ಪಿಸಲಾಗುವುದು.  ಬಾಲಕರಿಗೆ ಮತ್ತು ಪುರುಷ ಮೇಲ್ವಿಚಾರಕರಿಗೆ ಕೊಪ್ಪಳ ಗವಿಮಠದ ಯಾತ್ರಿ ನಿವಾಸ ಮತ್ತು ಪ್ರಸಾದ ನಿಲಯದಲ್ಲಿ ವಸತಿಗಾಗಿ ವ್ಯವಸ್ಥೆಗೊಳಿಸಲು ಕ್ರಮ ಕೈಗೊಳ್ಳಲಾಗುವುದು.  ಅಧಿಕಾರಿಗಳಿಗೆ ಪ್ರವಾಸಿ ಮಂದಿರ ಮತ್ತು ನಿರ್ಣಾಯಕರಿಗೆ ಸರ್ಕಾರಿ ನೌಕರರ ಭವನ ಮತ್ತು ಲಾಡ್ಜ್‍ಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆಗೊಳಿಸಲಾಗುವುದು ಎಂದು ವಿವರಣೆ ನೀಡಿದರು.
     ಕ್ರೀಡಾಕೂಟದ ಯಶಸ್ವಿಗಾಗಿ ಮೇಲ್ವಿಚಾರಣೆ ಮತ್ತು ಮಾರ್ಗದರ್ಶನ, ಸ್ವಾಗತ, ತಾಂತ್ರಿಕ, ವಸತಿ, ಸಾರಿಗೆ ವ್ಯವಸ್ಥೆ, ಊಟೋಪಹಾರ, ಮಾಧ್ಯಮ, ರಕ್ಷಣಾ, ಪ್ರಚಾರ, ನ್ಯಾಯ ನಿರ್ಣಾಯಕ, ವೇದಿಕೆ, ಲೆಕ್ಕ ಪರಿಶೋಧನೆ ಸೇರಿದಂತೆ ಒಟ್ಟು 12 ವಿವಿದಧ ಉಪಸಮಿತಿಗಳನ್ನು ರಚಿಸಲು ನಿರ್ಣಯ ಕೈಗೊಳ್ಳಲಾಯಿತು.
     ಸಭೆಯಲ್ಲಿ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಸುದರ್ಶನ್, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಡಾ. ಶಾರದಾ ನಿಂಬರಗಿ, ನಗರಸಭೆ ಪೌರಾಯುಕ್ತ ರಮೇಶ್ ಪಟ್ಟೇದಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಬೂದಿಹಾಳ ಗ್ರಾಮದಲ್ಲಿ ನ. 27 ರಂದು ಮಕ್ಕಳ ಹಕ್ಕುಗಳ ಗ್ರಾಮ ಸಭೆ

ಕೊಪ್ಪಳ ನ. 26 (ಕರ್ನಾಟಕ ವಾರ್ತೆ) : ಮಕ್ಕಳಿಗೆ ಬದುಕುವ, ಅಭಿವೃದ್ಧಿ ಹೊಂದುವ, ರಕ್ಷಣೆಯ ಹಾಗೂ ಭಾಗವಹಿಸುವ ಹಕ್ಕುಗಳ ಜಾರಿ ಸಂಬಂಧ ಹಿರೇಸಿಂದೋಗಿ ಗ್ರಾಮ ಪಂಚಾಯತಿ ವತಿಯಿಂದ ಮಕ್ಕಳ ಹಕ್ಕುಗಳ ಗ್ರಾಮ ಸಭೆ ನ. 27 ರಂದು ಬೆಳಿಗ್ಗೆ 11 ಗಂಟೆಗೆ ಬೂದಿಹಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದೆ ಎಂದು ಹಿರೇಸಿಂದೋಗಿ ಗ್ರಾಮ ಪಂಚಾಯತಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿ ತಿಳಿಸಿದ್ದಾರೆ.

ಬಾಗಲಕೋಟೆಯಲ್ಲಿ ನ. 28 ರಿಂದ ತೋಟಗಾರಿಕೆ ಮಹಾವಿದ್ಯಾಲಯಗಳ ಕ್ರೀಡಾಕೂಟ

ಕೊಪ್ಪಳ ನ. 26 (ಕರ್ನಾಟಕ ವಾರ್ತೆ): ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟದಲ್ಲಿ ತೋಟಗಾರಿಕೆ ಮಹಾವಿದ್ಯಾಲಯಗಳ 7 ನೇ ಕ್ರೀಡಾಕೂಟವು ನವೆಂಬರ್ 28 ಹಾಗೂ 29 ರಂದು ಎರಡು ದಿನಗಳ ಕಾಲ ವಿಶ್ವವಿದ್ಯಾಲಯದ ಆಟದ ಮೈದಾನದಲ್ಲಿ ಜರುಗಲಿದೆ.
     ಕ್ರೀಡಾಕೂಟದ ಉದ್ಘಾಟನೆಯನ್ನು ತೋಟಗಾರಿಕೆ ವಿವಿ ಕುಲಪತಿ ಡಾ. ಡಿ.ಎಲ್. ಮಹೇಶ್ವರ್ ನೆರವೇರಿಸುವರು.   ಹೆಚ್.ವೈ. ಮೇಟಿ, ಶಾಸಕರು ಹಾಗೂ ತೋವಿವಿ ವ್ಯವಸ್ಥಾಪನಾ ಮಂಡಳಿ ಸದಸ್ಯರು ಅಧ್ಯಕ್ಷರಾಗಿ ಭಾಗವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ವ್ಯವಸ್ಥಾಪನಾ ಮಂಡಳಿ ಸದಸ್ಯರುಗಳಾದ ರಾಜೀವ ಚಾವ್ಲಾ, ಐ.ಎಸ್.ಎನ್.ಪ್ರಸಾದ್,   ಜೆ.ಟಿ. ಪಾಟೀಲ ಶಾಸಕರು, ಬಸವರಾಜ ಎಸ್. ಹೊರಟ್ಟಿ ವಿಧಾನ ಪರಿಷತ್ ಸದಸ್ಯರು,  ಎಸ್. ಬಿ. ಬೊಮ್ಮನಹಳ್ಳಿ, ಡಾ. ಟಿ.ವ್ಹಿ. ಮುನಿಯಪ್ಪ, ಪಿ.ಎಸ್. ಸುರೇಶ, ಬಾಬು ರಾಜೇಂದ್ರ ನಾಯಕ, ಗೋವಿಂದಪ್ಪ ಗುಜ್ಜನ್ನವರ, ಹೆಚ್. ಕೆ. ಶ್ರೀಕಂಠ,   ಲಕ್ಷ್ಮೀಬಾಯಿ ಜಿ. ಗೌರ್,  ಡಾ. ಎಸ್. ಡಿ. ಸಾವಂತ, ಹಾಗೂ ಡಾ. ಎಚ್. ಬಿ. ಲಿಂಗಯ್ಯ, ಡೀನ್, ತೋಮವಿ, ಬೆಂಗಳೂರು ಡಾ. ಎಂ. ಬಿ. ಮಾಡಲಗೇರಿ, ಕುಲಸಚಿವರು, ಭಾಗವಹಿಸಲಿದ್ದಾರೆ ಎಂದು ಡಾ.ವೈ.ಕೆ. ಕೋಟಿಕಲ್, ವಿದ್ಯಾರ್ಥಿ ಕಲ್ಯಾಣ ನಿರ್ದೇಶಕರು ಹಾಗೂ ಆಯೋಜನಾ ಅಧ್ಯಕ್ಷರು ಹಾಗೂ ಡಾ. ಆರ್. ಎಮ್. ಹೀರೆಮಠ, ಸಹಾಯಕ ಪ್ರಾಧ್ಯಾಪಕರು ಹಾಗೂ ಆಯೋಜನಾ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿ ವರ್ಷವೂ ಬಾಗಲಕೋಟೆಯ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಅಂತರ್ ಮಹಾವಿದ್ಯಾಲಯಗಳ ಕ್ರೀಡಾಕೂಟವನ್ನು ಆಯೋಜಿಸುತ್ತಾ ಬಂದಿದೆ. ಪ್ರಸಕ್ತ ಸಾಲಿನ 7ನೇ ಕ್ರೀಡಾಕೂಟವನ್ನು ತೋವಿವಿಯ ಮುಖ್ಯ ಆವರಣದಲ್ಲಿ ಆಯೋಜಿಸಲಾಗಿದೆ. ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಎಂಟು ಮಹಾವಿದ್ಯಾಲಯಗಳಾದ ತೋ.ಮ.ವಿ ಅರಭಾವಿ, ಬಾಗಲಕೋಟ, ಬೆಂಗಳೂರು, ಬೀದರ್, ಕೋಲಾರ್, ಮುನಿರಾಬಾದ್(ಕೊಪ್ಪಳ), ಮೈಸೂರು, ಶಿರಸಿಗಳಿಂದ ತಲಾ 50 ರಂತೆ ಒಟ್ಟು 400 ಸ್ಪರ್ಧಾಳುಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ಆಟೋಟ ಸ್ಪರ್ಧೆಗಳ ಜೊತೆಗೆ ಟೇಬಲ್ ಟೆನ್ನಸ್, ಶಟಲ್‍ಬ್ಯಾಡ್‍ಮಿಂಟನ್ ಸ್ಪರ್ಧೆಗಳು ಕೂಡ ಜರುಗಲಿವೆ.

ಕಲ್‍ತಾವರಗೇರಾಕ್ಕೆ ಯುನಿಸೆಫ್ ಅಧಿಕಾರಿಗಳ ತಂಡ ಭೇಟಿ : ಬಂಡೆ ಮೇಲಿನ ಶೌಚಾಲಯಕ್ಕೆ ಮೆಚ್ಚುಗೆ


ಕೊಪ್ಪಳ ನ. 26 (ಕರ್ನಾಟಕ ವಾರ್ತೆ): ಯುನಿಸೆಫ್‍ನ ದೆಹಲಿ ಮತ್ತು ಹೈದ್ರಾಬಾದಿನ ಅಧಿಕಾರಿಗಳ ತಂಡ ಕೊಪ್ಪಳ ತಾಲೂಕಿನ ಕಲ್‍ತಾವರಗೇರಾ ಗ್ರಾಮಕ್ಕೆ ಭೇಟಿ ನೀಡಿ, ಇಲ್ಲಿ ಕಲ್ಲು ಬಂಡೆಯ ಮೇಲೆ ನಿರ್ಮಿಸಲಾಗಿರುವ ಶೌಚಾಲಯ ನಿರ್ಮಾಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ.
     ಯುನಿಸೆಫ್‍ನ ದೆಹಲಿ ಪ್ರತಿನಿಧಿ ಫಾರೂಖ್, ದೀಪಕ್, ಹೈದ್ರಾಬಾದಿನ ಯುನಿಸೆಫ್ ಮುಖ್ಯಸ್ಥೆ ರೂಥ್, ಎಸ್.ಆರ್. ನಲ್ಲಿ, ಬೆಂಗಳೂರಿನ ಯುನಿಸೆಫ್ ಅಧಿಕಾರಿ ರಾಮಸ್ವಾಮಿ ಕೃಷ್ಣನ್ ಅವರು ತಾಲೂಕಿನ ಕಲ್‍ತಾವರಗೇರಾ ಗ್ರಾಮಕ್ಕೆ ಭೇಟಿ ನೀಡಿ, ಇಲ್ಲಿ ಕಲ್ಲು ಬಂಡೆಗಳ ಮೇಲೆ ವಿಶೇಷ ವಿನ್ಯಾಸದಲ್ಲಿ ನಿರ್ಮಿಸಲಾಗಿರುವ ವಯಕ್ತಿಕ ಶೌಚಾಲಯಗಳನ್ನು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿತು.  ಅಲ್ಲಿನ ಇದೇ ಗ್ರಾ.ಪಂ. ವ್ಯಾಪ್ತಿಯ ಕೆಂಚನಡೋಣಿ ಗ್ರಾಮಕ್ಕೂ ಭೇಟಿ ನೀಡಿದ ಯುನಿಸೆಫ್ ತಂಡ, ಸ್ವಚ್ಛ ಭಾರತ ಮಿಷನ್ ಅಡಿ, ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ಗ್ರಾಮವಾಗಿ ಕೆಂಚನಡೋಣಿ ಘೋಷಣೆಯಾಗಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿತು.  ನಂತರ ಕಲ್‍ತಾವರಗೇರಾ ಗ್ರಾಮ ಪಂಚಾಯತಿಯ ಅಧ್ಯಕ್ಷರು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರೊಂದಿಗೆ ಸ್ವಚ್ಛ ಭಾರತ ಮಿಷನ್ ಯೋಜನೆ ಅನುಷ್ಠಾನ ಕುರಿತು ಸಮಾಲೋಚನೆ ನಡೆಸಿದರು.
     ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು, ಜಿಲ್ಲೆಯಲ್ಲಿ ವಯಕ್ತಿಕ ಶೌಚಾಲಯಗಳ ಪ್ರಗತಿ ಹಾಗೂ ಕಾರ್ಯ ಸಾಧನೆಗೆ ಅನುಸರಿಸಿದ ಕ್ರಮಗಳ ಕುರಿತು ವಿವರಣೆ ನೀಡಿ, ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ಸಾಧಿಸಲು ನೆರವಾಯಿತು.  ಈಗಾಗಲೆ ಜಿಲ್ಲೆಯಲ್ಲಿ 39 ಗ್ರಾಮಗಳು ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳೆಂದು ಅಧಿಕೃತವಾಗಿ ಘೋಷಣೆಯಾಗಿದೆ.  ಇನ್ನೂ 100 ಗ್ರಾಮಗಳನ್ನು ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳನ್ನಾಗಿಸಲಾಗಿದ್ದು, ಅಧಿಕೃತವಾಗಿ ಘೋಷಣೆಯಾಗುವುದು ಬಾಕಿ ಇದೆ ಎಂದು ಯುನಿಸೆಫ್ ತಂಡಕ್ಕೆ ವಿವರಣೆ ನೀಡಿದರು.     ಕಲ್ ತಾವರಗೇರಾ ಗ್ರಾ.ಪಂ. ಅಧ್ಯಕ್ಷ ಬಂಡೆಪ್ಪ ಕತ್ತಿ, ಜಿ.ಪಂ. ಯೋಜನಾ ನಿರ್ದೇಶಕ ಹಾಗೂ ಸ್ವಚ್ಛ ಭಾರತ ಮಿಷನ್ ನೋಡಲ್ ಅಧಿಕಾರಿ ರವಿ ಬಸರಿಹಳ್ಳಿ, ಪಿಡಿಓ ಶರಣಯ್ಯ ಸಸಿಮಠ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Wednesday, 25 November 2015

ಹಿಂಗಾರು ಮತ್ತು ಬೇಸಿಗೆ ಹಂಗಾಮಿನ ಬೆಳೆ ವಿಮೆ : ರೈತರಿಗೆ ಸೂಚನೆ

ಕೊಪ್ಪಳ ನ. 25 (ಕರ್ನಾಟಕ ವಾರ್ತೆ) : ಕೃಷಿ ಇಲಾಕೆಯು 2015-16 ನೇ ಸಾಲಿನ ಹಿಂಗಾರು ಮತ್ತು ಬೇಸಿಗೆ ಹಂಗಾಮಿನ ಬೆಳೆ ವಿಮೆ ಕುರಿತು ರೈತರಿಗೆ ಸೂಚನೆಗಳನ್ನು ನೀಡಿದೆ.
     ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನ ಬೆಳೆ ವಿಮೆಗೆ ಸಂಬಂಧಿಸಿದಂತೆ ಬೆಳೆ ಸಾಲ ಪಡೆದ ಹಾಗೂ ಬೆಳೆ ಸಾಲ ಪಡೆಯದ ರೈತರಿಗೆ ವಿಮಾ ಕಂತನ್ನು ತುಂಬಲು ಡಿಸೆಂಬರ್ 31 ಕೊನೆಯ ದಿನಾಂಕವಾಗಿರುತ್ತದೆ.  ಪ್ರಸಕ್ತ ಬೇಸಿಗೆ ಹಂಗಾಮಿನ ಬೆಳೆ ವಿಮೆಗೆ ಸಂಬಂಧಿಸಿದಂತೆ ಬೆಳೆ ಸಾಲ ಪಡೆದ ಮತ್ತು ಪಡೆಯದ ರೈತರಿಗೆ ವಿಮಾ ಕಂತನ್ನು ತುಂಬಲು 2016 ರ ಫೆಬ್ರವರಿ 29 ಕೊನೆಯ ದಿನಾಂಕವಾಗಿರುತ್ತದೆ.  ಬೆಳೆ ಸಾಲ ಪಡೆದ ರೈತರಿಗೆ ಈ ಯೋಜನೆ ಕಡ್ಡಾಯವಾಗಿದ್ದು, ಬೆಳೆ ಸಾಲದ ಮೊತ್ತಕ್ಕೆ ರೈತರ ವಿಮಾ ಕಂತನ್ನು ಹೆಚ್ಚುವರಿಯಾಗಿ ಮಂಜೂರು ಮಾಡಲಾಗುವುದು.  ಈ ಯೋಜನೆಯಡಿ ಪಾಲ್ಗೊಳ್ಳುವ ರೈತರು ಬೆಳೆ ವಿಮೆ ಪ್ರೀಮಿಯಮ್ ತುಂಬಿ, ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ.  ಹೆಚ್ಚಿನ ವಿವರಗಳಿಗೆ ಕೃಷಿ ಇಲಾಖೆ, ಕಂದಾಯ ಇಲಾಖೆ, ಸಹಕಾರಿ ಇಲಾಖೆ, ಸ್ಥಳೀಯ ವಾಣಿಜ್ಯ ಬ್ಯಾಂಕ್ ಸಿಬ್ಬಂದಿಗಳನ್ನು ಸಂಪರ್ಕಿಸಬಹುದು ಎಂದು ಜಂಟಿಕೃಷಿ ನಿರ್ದೇಶಕ ಡಾ. ಎ. ರಾಮದಾಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನಕ ಸಾಹಿತ್ಯಲೋಕ ಪ್ರಬಂಧ ಸ್ಪರ್ಧೆ ಫಲಿತಾಂಶ ಪ್ರಕಟ

ಕೊಪ್ಪಳ ನ. 25 (ಕರ್ನಾಟಕ ವಾರ್ತೆ): ರಾಷ್ಟ್ರೀಯ ಸಂತ ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಬೆಂಗಳೂರು ಮತ್ತು ರಾಜ್ಯ ಶಿಕ್ಷಣ ಸಂಶೋಧನಾ ಮತ್ತು ತರಬೇತಿ ಇಲಾಖೆ ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಕನಕ ಸಾಹಿತ್ ಲೋಕ ಪ್ರಬಂಧ ರಚನಾ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ.
     ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳ ಹೆಸರು ಮತ್ತು ಶಾಲೆಯ ವಿವರ ಇಂತಿದೆ.  ಓಂಕಾರ, ಕೊಪ್ಪಳದ ಕಾಳಿದಾಸ ಪ್ರೌಢಶಾಲೆ  - ಪ್ರಥಮ.  ಸರೋಜ ಗೊಣ್ಣಾಗರ, ಆದರ್ಶ ವಿದ್ಯಾಲಯ, ಕುಷ್ಟಗಿ- ದ್ವಿತೀಯ.  ಶಿವಕುಮಾರ ಇಜೇರಿ, ಸ.ಪ.ಪೂ. ಕಾಲೇಜು, ಮಂಗಳೂರು- ತೃತೀಯ.  ಹಾಗೂ ಕೆ.ಬಿ. ಶ್ರೀಲಕ್ಷ್ಮಿ/ಕೆ.ಭೀಮಪ್ಪ, ಬೆತಲ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಗಂಗಾವತಿ ಮತ್ತು ವಸಂತ/ಈರಪ್ಪ, ಆದರ್ಶ ವಿದ್ಯಾಲಯ, ಕನಕಗಿರಿ ಇವರಿಗೆ ಸಮಾಧಾನಕರ ಬಹುಮಾನಕ್ಕೆ ಆಯ್ಕೆಯಾಗಿದ್ದಾರೆ.  ವಿಜೇತ ವಿದ್ಯಾರ್ಥಿಗಳಿಗೆ ನ. 28 ರಂದು ಕೊಪ್ಪಳದ ಸಾಹಿತ್ಯ ಭವನದಲ್ಲಿ ಜರುಗುವ ಕನಕದಾಸರ ಜಯಂತಿ ಕಾರ್ಯಕ್ರಮ ಸಂದರ್ಭದಲ್ಲಿ ಬಹುಮಾನ ವಿತರಣೆ ನಡೆಯಲಿದೆ ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಭಕ್ತ ಕನಕದಾಸರ ಜಯಂತಿ ಆಚರಣೆ

ಕೊಪ್ಪಳ ನ. 25 (ಕರ್ನಾಟಕ ವಾರ್ತೆ): ಸಂತ ಶ್ರೇಷ್ಠ ಭಕ್ತ ಕನಕದಾಸರ ಜಯಂತಿಯನ್ನು ಚುನಾವಣೆ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನ. 28 ರಂದು ಬೆಳಿಗ್ಗೆ 10-30 ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ತಿಳಿಸಿದ್ದಾರೆ.
     ಭಕ್ತ ಕನಕದಾಸರ ಜಯಂತಿಯನ್ನು ಸರ್ಕಾರದ ವತಿಯಿಂದ ಪ್ರತಿ ವರ್ಷ ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಲಾಗುತ್ತಿದ್ದು, ಈ ವರ್ಷದ ಜಯಂತಿಯನ್ನು ನ. 28 ರಂದು ಆಚರಿಸಬೇಕಾಗಿರುತ್ತದೆ.  ಆದರೆ ಭಾರತ ಚುನಾವಣಾ ಆಯೋಗವು ಕರ್ನಾಟಕ ವಿಧಾನಪರಿಷತ್ ಚುನಾವಣೆ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ನ. 24 ರಿಂದಲೇ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿರುತ್ತದೆ.  ಈ ಹಿನ್ನೆಲೆಯಲ್ಲಿ ಕನಕದಾಸರ ಜಯಂತಿಯ ದಿನದಂದು ಭಕ್ತ ಕನಕದಾಸರ ಭಾವಚಿತ್ರದ ಮೆರವಣಿಗೆ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದ್ದು, ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ವೇದಿಕೆ ಕಾರ್ಯಕ್ರಮವನ್ನು ಮಾತ್ರ ನ. 28 ರಂದು ಬೆಳಿಗ್ಗೆ 10-30 ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಧಾನಪರಿಷತ್ ಚುನಾವಣೆ : ವೇಳಾಪಟ್ಟಿ ಪ್ರಕಟ-ನೀತಿ ಸಂಹಿತೆ ಜಾರಿಗೆ

ಕೊಪ್ಪಳ, ನ. 25 (ಕರ್ನಾಟಕ ವಾರ್ತೆ): ವಿಧಾನಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ತಕ್ಷಣದಿಂದಲೇ ನೀತಿ ಸಂಹಿತೆ ಜಾರಿಗೆ ಬಂದಿದೆ.
     ಕರ್ನಾಟಕ ವಿಧಾನಪರಿಷತ್ತಿನ 25 ಸದಸ್ಯರ ಅವಧಿ 2016 ರ ಜನವರಿ 05 ಕ್ಕೆ ಮುಗಿಯಲಿರುವ ಹಿನ್ನೆಲೆಯಲ್ಲಿ, ಇದೀಗ ವಿಧಾನಪರಿಷತ್ತಿನ 25 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸಲು ವೇಳಾಪಟ್ಟಿ ಪ್ರಕಟಗೊಂಡಿದೆ.  ರಾಯಚೂರು ಕ್ಷೇತ್ರದ ವಿಧಾನಪರಿಷತ್ ಸದಸ್ಯರಾದ ಹಾಲಪ್ಪ ಬಸಪ್ಪ ಆಚಾರ್ ಅವರ ಅವಧಿ 2016 ರ ಜನವರಿ 05 ಕ್ಕೆ ಮುಕ್ತಾಯವಾಗಲಿದೆ.  ಪ್ರಕಟಿತ ವೇಳಾಪಟ್ಟಿ ಅನ್ವಯ ಚುನಾವಣಾ ಅಧಿಸೂಚನೆ ಡಿ. 02 ರಂದು ಹೊರಡಿಸಲಾಗುವುದು.  ನಾಮಪತ್ರ ಸಲ್ಲಿಸಲು ಡಿ. 09 ಕೊನೆಯ ದಿನಾಂಕವಾಗಿರುತ್ತದೆ.  ನಾಮಪತ್ರಗಳ ಪರಿಶೀಲನೆ ಡಿ. 10 ರಂದು ನಡೆಯಲಿದ್ದು, ಉಮೇದುವಾರಿಕೆ ಹಿಂಪಡೆಯಲು ಡಿ. 12 ಕೊನೆಯ ದಿನವಾಗಿರುತ್ತದೆ.  ಮತದಾನ ಡಿ. 27 ರಂದು ಬೆಳಿಗ್ಗೆ 08 ಗಂಟೆಯಿಂದ ಸಂಜೆ 04 ಗಂಟೆಯವರೆಗೆ ನಡೆಯಲಿದೆ.  ಮತಗಳ ಎಣಿಕೆ ಡಿ. 30 ರಂದು ನಡೆಯಲಿದೆ.  ಚುನಾವಣೆ ಪ್ರಕ್ರಿಯೆ 2016 ರ ಜನವರಿ 01 ರೊಳಗೆ ಪೂರ್ಣಗೊಳ್ಳಲಿದೆ.  ವಿಧಾನಪರಿಷತ್ ಚುನಾವಣೆ ವೇಳಾಪಟ್ಟಿ ಘೋಷಣೆಯಾಗಿರುವುದರಿಂದ, ಚುನಾವಣೆ ನೀತಿ ಸಂಹಿತೆ ತಕ್ಷಣದಿಂದಲೇ ಜಾರಿಗೆ ಬಂದಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ನ.26 ರಂದು ಕೊಪ್ಪಳದಲ್ಲಿ ಬಾಲಿಕಾ ಸಂಘಗಳ ಸಮಾವೇಶ

ಕೊಪ್ಪಳ, ನ.25 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲಾಡಳಿತ, ಯುನಿಸೆಫ್, ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆ ಇವರುಗಳ ಸಂಯುಕ್ತಾಶ್ರಯದಲ್ಲಿ ಬಾಲಿಕಾ ಸಂಘಗಳ ಸಮಾವೇಶವನ್ನು ನ.26 ರಂದು ಜಿಲ್ಲಾಡಳಿತ ಭವನದ ಅಡಿಟೋರಿಯಂ ಹಾಲ್‍ನಲ್ಲಿ ಆಯೋಜಿಸಲಾಗಿದೆ.
     ಜಿಲ್ಲೆಯಲ್ಲಿ ಈಗಾಗಲೇ ಸುಮಾರು 90 ಗ್ರಾಮ ಪಂಚಾಯತಿಗಳಲ್ಲಿರುವ ಬಾಲಿಕಾ ಸಂಘಗಳಿಗೆ ಮಕ್ಕಳ ಸಂರಕ್ಷಣೆ, ಲಿಂಗತ್ವ, ಮಕ್ಕಳ ಹಕ್ಕುಗಳು ಹಾಗೂ ಮಕ್ಕಳಿಗೆ ಸಂಬಂಧಿಸಿದ ವಿವಿಧ ಕಾಯ್ದೆಗಳ ಬಗ್ಗೆ ತರಬೇತಿಯನ್ನು ನೀಡಲಾಗಿದ್ದು, ಬಾಲಿಕಾ ಸಂಘಗಳ ಸಮಾವೇಶದಲ್ಲಿ ತರಬೇತಿಯ ಸಾಧಕ-ಬಾದಕಗಳು ಹಾಗೂ ವಿಮರ್ಶೆ ನಡೆಸಲಾಗುವುದು. ನಂತರದಲ್ಲಿ ಬಾಲಿಕೆಯರ ಸಬಲೀಕರಣಕ್ಕಾಗಿ ಕ್ರಿಯಾ ಯೋಜನೆಯನ್ನು ತಯಾರಿಸಲಾಗುವುದು. ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಬಾಲಿಕಾ ಸಂಘಗಳ ಸುಮಾರು 300 ಜನ ಸದಸ್ಯರು ಭಾಗವಹಿಸಲಿದ್ದಾರೆ. ಅಲ್ಲದೆ, ದೆಹಲಿಯಿಂದ ಯುನಿಸೆಫ್ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆಯ ಸಂಯೋಜಕರು ತಿಳಿಸಿದ್ದಾರೆ.  

ಜಿಲ್ಲೆಯ ಪ್ರತಿಭೆಗಳು ರಾಜ್ಯ, ರಾಷ್ಟ್ರಮಟ್ಟದಲ್ಲಿ ಮಿಂಚಲಿ : ಡಾ|| ಶಾರದಾ ನಿಂಬರಗಿ

ಕೊಪ್ಪಳ, ನ.25 (ಕರ್ನಾಟಕ ವಾರ್ತೆ) : ಜಿಲ್ಲಾ ಮಟ್ಟದ ಯುವಜನೋತ್ಸವ ಸ್ಪರ್ಧೆಯಲ್ಲಿ ಭಾಗವಹಿಸಿ ಆಯ್ಕೆಗೊಳ್ಳುವ ಜಿಲ್ಲೆಯ ಸ್ಪರ್ಧಾಳುಗಳು ರಾಜ್ಯ, ರಾಷ್ಟ್ರಮಟ್ಟದಲ್ಲಿ ಜಿಲ್ಲೆಗೆ ಕೀರ್ತಿಯನ್ನು ತರಲಿ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಡಾ|| ಶಾರದಾ ನಿಂಬರಗಿ ಅವರು ಕ್ರೀಡಾಪಟುಗಳನ್ನು ಹಾರೈಸಿದರು.
     ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ವಂದೇ ಮಾತರಂ ಯುವ ಸಾಂಸ್ಕøತಿಕ ಸೇವಾ ಸಂಘ (ರಿ), ಹಾಗೂ ಜಾಗೃತಿ ಸಾಂಸ್ಕøತಿಕ ಗ್ರಾಮೀಣಾಭಿವೃದ್ಧಿ ಸೇವಾ ಸಂಘ (ರಿ), ಕೊಪ್ಪಳ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಸಾಹಿತ್ಯ ಭವನದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಕೊಪ್ಪಳ ಜಿಲ್ಲಾ ಮಟ್ಟದ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿರುವ ಅತ್ಯುತ್ತಮ ಯುವ ಪ್ರತಿಭೆಗಳನ್ನು ಆಯ್ಕೆಗೊಳಿಸಿ, ನ.30 ರಂದು ಚಿಕ್ಕಮಗಳೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಸ್ಪರ್ಧೆಗೆ ಕಳುಹಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಇಲಾಖೆಯು ಜಿಲ್ಲೆಯ ಸಂಘ, ಸಂಸ್ಥೆಗಳ ಸಂಪೂರ್ಣ ಸಹಕಾರವನ್ನು ಪಡೆದುಕೊಂಡು, ಈ ಜಿಲ್ಲಾಮಟ್ಟದ ಯುವಜನೋತ್ಸವ ಕಾರ್ಯಕ್ರಮ ಆಯೋಜಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಸ್ಪರ್ಧಾಳುಗಳು ತಮ್ಮ ಶಕ್ತಿ ಮೀರಿ ಪ್ರತಿಭೆಯನ್ನು ಪ್ರದರ್ಶಿಸಿ, ಜಿಲ್ಲೆಯ ಹೆಸರನ್ನು ಉನ್ನತ ಮಟ್ಟಕ್ಕೆ ಒಯ್ಯುವಲ್ಲಿ ಶ್ರಮಿಸಬೇಕು. ರಾಜ್ಯದಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಕಾರ್ಯಕ್ರಮವನ್ನು ಚುಟುಕುಗೊಳಿಸಲಾಗಿದ್ದು, ಎಲ್ಲಾ ಸ್ಪರ್ಧಿಗಳು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
     ಪ್ರಾಸ್ತಾವಿಕವಾಗಿ ಮಾತನಾಡಿದ ವಂದೇ ಮಾತರಂ ಯುವ ಸಾಂಸ್ಕøತಿಕ ಸೇವಾ ಸಂಘದ ಗೌರವ ಸಲಹೆಗಾರ ರಾಜಶೇಖರ ಅಂಗಡಿ, ಸಮಾಜ ಕಟ್ಟುವಲ್ಲಿ ಯುವಜನತೆಯ ಪಾತ್ರ ಮಹತ್ವದ್ದಾಗಿದ್ದು, ಯುವಜನತೆ ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಬೇಕು. ಈ ನಿಟ್ಟಿನಲ್ಲಿ ತಿಳಿದವರು ಯುವಜನತೆಯನ್ನು ಹುರಿದುಂಬಿಸಿ, ಅವರನ್ನು ಸರಿ ದಾರಿಯಲ್ಲಿ ನಡೆಸಿ, ದೇಶದ ಅಭಿವೃದ್ಧಿಗೆ ಶ್ರಮಿಸಬೇಕು.  ಜಿಲ್ಲೆಯ ಯುವ ಸಮೂಹದಲ್ಲಿರುವ ಪ್ರತಿಭೆಯನ್ನು ಹೊರತರುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಚುನಾವಣೆ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಕಾರ್ಯಕ್ರಮವನ್ನು ಸರಳಗೊಳಿಸಲಾಗಿರುವುದು ಬೇಸರ ಮೂಡಿಸಿದೆ. ಆದರೂ ಕೂಡಾ ಸ್ಪರ್ಧಾಳುಗಳು ಉತ್ಸಾಹದಿಂದ ಯುವಜನೋತ್ಸವದಲ್ಲಿ ಪಾಲ್ಗೊಂಡಿರುವುದು ಅವರ ಪ್ರತಿಭೆಗೆ ಸಾಕ್ಷಿಯಾಗಿದೆ ಎಂದು ರಾಜಶೇಖರ ಅಂಗಡಿ ಅವರು ಹೇಳಿದರು.
     ಜಾಗೃತಿ ಸಾಂಸ್ಕøತಿಕ ಗ್ರಾಮೀಣಾಭಿವೃದ್ಧಿ ಸೇವಾ ಸಂಘದ (ರಿ) ಅಧ್ಯಕ್ಷರಾದ ಡಾ|| ಕೊಟ್ರೇಶ ಶೇಡ್ಮಿ ಹಾಗೂ ಕಾಯಕ ಯೋಗಿ ಸಾಂಸ್ಕøತಿಕ ಸೇವಾ ಸಂಘದ ಅಧ್ಯಕ್ಷ ಮತ್ತು ರೆಡ್‍ಕ್ರಾಸ್ ಸಂಸ್ಥೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಡಾ|| ಶ್ರೀನಿವಾಸ ಹ್ಯಾಟಿ ಅವರು ಜಂಟಿಯಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಿರ್ಣಾಯಕರಾಗಿ ಆಗಮಿಸಿದ್ದ ಸಂಗೀತ ಶಿಕ್ಷಕರುಗಳಾದ  ದೇವರೆಡ್ಡಿ ಹಾಗೂ ಕವಿತಾ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಸಮಾರಂಭದಲ್ಲಿ ವಂದೇ ಮಾತರಂ ಯುವ ಸಾಂಸ್ಕøತಿಕ ಸೇವಾ ಸಂಘದ ಅಧ್ಯಕ್ಷ ರಾಕೇಶ ಕಾಂಬ್ಳೇಕರ್, ರಾಜ್ಯ ಯುವ ಪ್ರಶಸ್ತಿ ಪುರಸ್ಕøತರಾದ ಜಗದಯ್ಯ ಸಾಲಿಮಠ, ಮಂಜುನಾಥ ಜಿ.ಗೊಂಡಬಾಳ, ವೆಂಕಟೇಶ ಈಳಿಗೇರ, ಸಂಗೀತ ಶಿಕ್ಷಕ ವೈ.ಎಸ್.ಭಜಂತ್ರಿ ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಸ್ಪರ್ಧಾಳುಗಳು ಉಪಸ್ಥಿತರಿದ್ದರು.

ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿ : ನ. 26 ರಂದು ಪೂರ್ವಭಾವಿ ಸಭೆ

ಕೊಪ್ಪಳ, ನ.25 (ಕರ್ನಾಟಕ ವಾರ್ತೆ) : ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಬಾಲಕ/ಬಾಲಕಿಯರ ವಾಲಿಬಾಲ್ ಪಂದ್ಯಾವಳಿಯನ್ನು ಕೊಪ್ಪಳ ಜಿಲ್ಲೆಯಲ್ಲಿ ಇದೇ ನ. 28 ಮತ್ತು 29 ರಂದು ಎರಡು ದಿನಗಳ ಕಾಲ ಆಯೋಜಿಸುವುದಕ್ಕೆ ಸಂಬಂಧಿಸಿದಂತೆ ಪೂರ್ವಭಾವಿ ಸಭೆಯನ್ನು ನ. 26 ರಂದು ಬೆಳಿಗ್ಗೆ 10-30 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
     ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ವಹಿಸುವರು ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಡಿ.19 ರಿಂದ ಬಾಗಲಕೋಟೆಯಲ್ಲಿ ತೋಟಗಾರಿಕೆ ಮೇಳ

ಕೊಪ್ಪಳ, ನ.25 (ಕರ್ನಾಟಕ ವಾರ್ತೆ) : ಬಾಗಲಕೋಟೆಯ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ತೋಟಗಾರಿಕೆ ಇಲಾಖೆ ಹಾಗೂ ಇತರೆ ಅಭಿವೃದ್ಧಿ ಇಲಾಖೆಗಳ ಸಹಯೋಗದೊಂದಿಗೆ ‘ತೋಟಗಾರಿಕೆ ಮೇಳ-2015’ ನ್ನು ಡಿ.19 ರಿಂದ 21 ರವರೆಗೆ ಬಾಗಲಕೋಟೆಯ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಲಾಗಿದೆ.
     ಒಟ್ಟು ಮೂರು ದಿನಗಳ ಕಾಲ ನಡೆಯಲಿರುವ ಈ ಬೃಹತ್ ತೋಟಗಾರಿಕೆ ಮೇಳವು ‘ಆರೋಗ್ಯ ಜೀವನಕ್ಕೆ ಆರೋಗ್ಯಯುತ ಮಣ್ಣು’ ಎಂಬ ಶೀರ್ಷಿಕೆಯಡಿ ಚಾಲನೆಗೊಳ್ಳಲಿದೆ. ಮೇಳದಲ್ಲಿ ರಾಜ್ಯದ ಎಲ್ಲ ರೈತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮಗ್ರ ಮಣ್ಣಿನ ಆರೋಗ್ಯದ ತಾಂತ್ರಿಕತೆ, ಹೈಟೆಕ್ ತೋಟಗಾರಿಕೆ, ಫಲ ಪುಷ್ಪ ತರಕಾರಿಗಳ ಪ್ರದರ್ಶನ, ತೋಟಗಾರಿಕೆ ಉತ್ಪನ್ನಗಳ ಮೌಲ್ಯವರ್ಧಿತ ಪದಾರ್ಥಗಳು, ಗುಣಮಟ್ಟದ ಸಸ್ಯಗಳ ಮಾರಾಟ, ಹಸಿರು ಮನೆ, ನೆರಳು ಮನೆ, ನಿಖರ ಬೇಸಾಯ ತಂತ್ರಜ್ಞಾನ, ಜೈವಿಕ ಹಾಗೂ ಸಾವಯುವ ಗೊಬ್ಬರಗಳು, ನಡುತೋಪು, ಔಷಧೀಯ ಮತ್ತು ಸುಗಂಧಿ ಸಸ್ಯಗಳ ಮಾಹಿತಿ, ಜಾನುವಾರು, ಮತ್ಸ್ಯ ಹಾಗೂ ಶ್ವಾನಗಳ ಪ್ರದರ್ಶನ, ಯಂತ್ರೋಪಕರಣಗಳು ಮತ್ತು ಸಲಕರಣೆಗಳು, ರಾಸಾಯನಿಕ ಗೊಬ್ಬರಗಳು ಹಾಗೂ ಪೀಡೆನಾಶಕಗಳು, ಜೇನು ಕೃಷಿ, ಸಮಗ್ರ ಕೃಷಿ ಪದ್ಧತಿ, ಸುಸ್ಥಿರ ಕೃಷಿ ಪದ್ಧತಿಗಳು, ವಿಜ್ಞಾನಿಗಳಿಂದ ತಾಂತ್ರಿಕ ಮಾಹಿತಿ, ಕೃಷಿ ಬ್ಯಾಂಕಿಂಗ್ ವ್ಯವಹಾರಗಳು, ಕೃಷಿ ಪರಿಕರಗಳ ಪ್ರದರ್ಶನ, ಕೃಷಿ ಮತ್ತು ತೋಟಗಾರಿಕಾ ಪ್ರಕಟಣೆಗಳು, ತೋಟಗಾರಿಕೆ ಹಾಗೂ ಖಾದಿ ಉದ್ದಿಮೆಗಳು, ಶ್ರೇಷ್ಠ ರೈತ/ ರೈತ ಮಹಿಳೆ ಪ್ರಶಸ್ತಿ ಸಮಾರಂಭ, ಶ್ರೇಷ್ಠ ತೋಟಗಾರಿಕೆ ರೈತ ಉದ್ಯಮಿ ಪ್ರಶಸ್ತಿ ಸಮಾರಂಭ, ರೈತರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯಕ್ರಮಗಳು ಇತ್ಯಾದಿಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಪಡೆದು, ತೋಟಗಾರಿಕೆಯಲ್ಲಿ ಹೆಚ್ಚಿನ ಆದಾಯ ಪಡೆದುಕೊಳ್ಳುವಂತೆ ಮುನಿರಾಬಾದ್ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಅವರು ತಿಳಿಸಿದ್ದಾರೆ.

Tuesday, 24 November 2015

ನ.28 ರಂದು ಕೊಪ್ಪಳದಲ್ಲಿ ಭಕ್ತ ಕನಕದಾಸರ ಜಯಂತಿ


ಕೊಪ್ಪಳ, ನ.24 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ನ.28 ರಂದು ಬೆಳಿಗ್ಗೆ 11.30 ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದೆ.
     ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವರಾದ ಶಿವರಾಜ ಎಸ್.ತಂಗಡಗಿ ಅವರು ಕಾರ್ಯಕ್ರಮ ಉದ್ಘಾಟಿಸುವರು. ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಅಮರೇಶ ಕುಳಗಿ, ಲೋಕಸಭಾ ಸದಸ್ಯ ಕರಡಿ ಸಂಗಣ್ಣ, ಶಾಸಕರುಗಳಾದ ಬಸವರಾಜ ರಾಯರೆಡ್ಡಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್, ಹಾಲಪ್ಪ ಆಚಾರ್, ಅಮರನಾಥ ಪಾಟೀಲ್, ಶರಣಪ್ಪ ಮಟ್ಟೂರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯದ್ ಜುಲ್ಲು ಖಾದರ್ ಖಾದ್ರಿ, ಕೊಪ್ಪಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಟಿ.ಕೆ. ಅನಿಲ್‍ಕುಮಾರ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ವಿನಯಕುಮಾರ ಎಂ.ಮೇಲಿನಮನಿ,  ನಗರಸಭೆ ಅಧ್ಯಕ್ಷೆ ಬಸಮ್ಮ ಹಳ್ಳಿಗುಡಿ, ತಾಲೂಕಾ ಪಂಚಾಯತ್ ಅಧ್ಯಕ್ಷೆ ಬಾನು ಚಂದುಸಾಬ   ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಇರಕಲ್‍ಗಡಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ||ಹುಲಿಗೆಮ್ಮ ವಿಶೇಷ ಉಪನ್ಯಾಸ ನೀಡಲಿದ್ದಾರೆ.
     ಕಾರ್ಯಕ್ರಮಕ್ಕೂ ಮುನ್ನ ಭಕ್ತ ಕನಕದಾಸರ ಭಾವಚಿತ್ರದ ಮೆರವಣಿಗೆಯು ಅಂದು ಬೆಳಿಗ್ಗೆ 09 ಗಂಟೆಗೆ ನಗರದ ಸಿರಸಪ್ಪಯ್ಯನಮಠದಿಂದ ಆರಂಭಗೊಳ್ಳಲಿದ್ದು, ಜವಾಹರ ರಸ್ತೆ ಮೂಲಕ ಸಾಹಿತ್ಯ ಭವನದವರೆಗೆ ಸಾಗಿ ಬರಲಿದೆ. 

ಕ್ರೀಡಾಪಟುಗಳು ಹಾಗೂ ಪೋಷಕರಿಗೆ ಪ್ರೋತ್ಸಾಹಧನ : ಅರ್ಜಿ ಆಹ್ವಾನ

ಕೊಪ್ಪಳ, ನ.24 (ಕರ್ನಾಟಕ ವಾರ್ತೆ) : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಸಕ್ತ ಸಾಲಿನ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿಯಲ್ಲಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಕ್ರೀಡೆಗಳಲ್ಲಿ ಪದಕ ವಿಜೇತ ಕ್ರೀಡಾಪಟುಗಳು ಹಾಗೂ ಪೋಷಕರಿಗೆ ಪ್ರೋತ್ಸಾಹಧನ ನೀಡಲು ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಂಗಳೂರು ಇವರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
     ಈ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಕ್ರೀಡಾಪಟುಗಳು ನಿರಂತರವಾಗಿ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿರುವುದಕ್ಕಾಗಿ, ಅವರ ಕುಟುಂಬಕ್ಕೆ ಆರ್ಥಿಕ ಭದ್ರತೆ ನೀಡುವುದಕ್ಕಾಗಿ, ರಾಷ್ಟ್ರ ಮಟ್ಟದ ಕ್ರೀಡಾಕೂಟಗಳಲ್ಲಿ ಪದಕ ವಿಜೇತ ಕ್ರೀಡಾಪಟುಗಳಿಗೆ ಹಾಗೂ ಅಂಗೀಕೃತ ಅಂತರ್‍ರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿದ ಕ್ರೀಡಾಪಟುಗಳ ಪೋಷಕರಿಗೆ ಪ್ರೋತ್ಸಾಹಧನ ನೀಡಿ ಪ್ರೋತ್ಸಾಹಿಸಲಾಗುವುದು. 2014-15ನೇ ಸಾಲಿನಲ್ಲಿ ಸಾಧನೆ ಮಾಡಿರುವ ಕ್ರೀಡಾಪಟುಗಳು ಡಿ.05 ರೊಳಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ , ಕೊಪ್ಪಳ ಇವರಲ್ಲಿ ಅರ್ಜಿಗಳನ್ನು ಸ್ವೀಕರಿಸಿ, ಭರ್ತಿ ಮಾಡಿ ಸಲ್ಲಿಸಬಹುದಾಗಿದೆ. ಕ್ರೀಡಾಪಟುಗಳು ಅರ್ಜಿಯಲ್ಲಿ ಪೋಷಕರ ಹೆಸರು, ಬ್ಯಾಂಕ್ ಖಾತೆ ಸಂಖ್ಯೆ, ಐಎಫ್‍ಎಸ್‍ಸಿ ಕೋಡ್ ನಮೂದಿಸಬೇಕು.
       ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂರವಾಣಿ ಸಂಖ್ಯೆ : 08539-201400 ನ್ನು ಸಂಪರ್ಕಿಸುವಂತೆ ಕೊಪ್ಪಳ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ನಗರ ಬಡ ಜನರ ಕಲ್ಯಾಣ ಕಾರ್ಯಕ್ರಮಗಳಡಿ ವಿವಿಧ ಸೌಲಭ್ಯ : ಅರ್ಜಿ ಆಹ್ವಾನ

ಕೊಪ್ಪಳ, ನ.24 (ಕರ್ನಾಟಕ ವಾರ್ತೆ) : ಕೊಪ್ಪಳ ನಗರಸಭೆ ಕಾರ್ಯಾಲಯದ ವತಿಯಿಂದ ಪ್ರಸಕ್ತ ಸಾಲಿನ ಶೇಕಡಾ 7.25 ರ ಎಸ್.ಎಫ್.ಸಿ, ನಗರಸಭೆ ನಿಧಿಗಳ ನಗರ ಬಡ ಜನರ ಕಲ್ಯಾಣ ಕಾರ್ಯಕ್ರಮ ಹಾಗೂ ಶೇಕಡಾ 40ರ ವ್ಯಕ್ತಿ ಸಂಬಂಧಿತ ಅನುಕೂಲತೆಗಳ ಕಾರ್ಯಕ್ರಮಗಳಡಿಯಲ್ಲಿ ವಿವಿಧ ಸೌಲಭ್ಯಗಳನ್ನು ವಿತರಿಸಲಾಗುತ್ತಿದ್ದು, ಅರ್ಜಿ ಆಹ್ವಾನಿಸಲಾಗಿದೆ.
      ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಉದ್ಯೋಗ ಆಧಾರಿತ ಡಿಪ್ಲೋಮಾ, ಬಿ.ಎ, ಬಿ.ಎಸ್.ಸಿ, ಬಿ.ಕಾಂ ಇತರೆ ಪದವಿ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿಶೇಷ ನೆರವು. ಬಡ ಜನರ ಶಸ್ತ್ರ ಚಿಕಿತ್ಸೆಗಾಗಿ ಆರ್ಥಿಕ ಸಹಾಯ ಧನ, ಶೇಕಡಾ 3 ರ ಎಸ್.ಎಫ್.ಸಿ ಮತ್ತು ನಗರಸಭೆ ನಿಧಿಗಳಡಿಯಲ್ಲಿ ನಗರದ ವಿಕಲಚೇತನರಿಗೆ ವೈಯಕ್ತಿಕ ಶೌಚಾಲಯ ನಿರ್ಮಾಣ ಹಾಗೂ ನಳ ಸಂಪರ್ಕ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳನ್ನು ಹೊರತುಪಡಿಸಿ ಉಳಿದವರು ಅರ್ಜಿ ಸಲ್ಲಿಸಬಹುದಾಗಿದೆ.
     ಈ ಯೋಜನೆಯಡಿ ಅರ್ಜಿ ಸಲ್ಲಿಸುವ ಕೊನೆ ದಿನಾಂಕವನ್ನು ನ.21 ಕ್ಕೆ ನಿಗದಿಪಡಿಸಲಾಗಿತ್ತು. ಆದರೆ, ನಗರದ ಸಾರ್ವಜನಿಕರು, ವಿದ್ಯಾರ್ಥಿಗಳು ಮತ್ತು ವಿಕಲಚೇತನರ ಹಿತ ದೃಷ್ಠಿಯಿಂದ ಅರ್ಜಿ ಸಲ್ಲಿಸುವ ಕೊನೆ ದಿನಾಂಕವನ್ನು ಡಿ.5 ರವರೆಗೆ ವಿಸ್ತರಿಸಲಾಗಿದೆ. ಅರ್ಜಿ ನಮೂನೆ ಹಾಗೂ ಈ ಕುರಿತು ಹೆಚ್ಚಿನ ಮಾಹಿತಿಗಾಗಿ ನಗರಸಭೆ ಕಾರ್ಯಾಲಯವನ್ನು ಸಂಪರ್ಕಿಸುವಂತೆ ನಗರಸಭೆ ಪೌರಾಯುಕ್ತ ರಮೇಶ ಪಟ್ಟೇದಾರ್ ತಿಳಿಸಿದ್ದಾರೆ.  

ಮೃತ ವ್ಯಕ್ತಿಯ ವಾರಸುದಾರರ ಪತ್ತೆಗೆ ಸಹಕರಿಸಲು ಮನವಿ

ಕೊಪ್ಪಳ, ನ.24 (ಕರ್ನಾಟಕ ವಾರ್ತೆ) : ಕೊಪ್ಪಳ ನಗರದ ಕಿಮ್ಸ್ ಆಸ್ಪತ್ರೆಯ ಮುಂದೆ ಇರುವ ಗದಗ-ಹೊಸಪೆಟೆ ರಾಷ್ಟ್ರೀಯ ಹೆದ್ದಾರಿ ದಾಟುತ್ತಿರುವಾಗ ಅಪಘಾತದಿಂದ ಮೃತಪಟ್ಟಿರುವ ಒರಿಸ್ಸಾ ರಾಜ್ಯದ ಗಣಪತಿ ಮಾಜಿ ಎಂಬ ವ್ಯಕ್ತಿಯ ವಾರಸುದಾರರ ಗುರುತು ಪತ್ತೆಗೆ ಸಹಕರಿಸುವಂತೆ ಸಂಚಾರ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
     ಒರಿಸ್ಸಾ ರಾಜ್ಯದವನೆಂದು ಗುರುತಿಸಲಾದ ಗಣಪತಿ ಮಾಜಿ ಈತನು ನ.21 ರಂದು ಬೆಳಿಗ್ಗೆ 4.30 ಗಂಟೆಗೆ ಕೊಪ್ಪಳ ನಗರದ ಕಿಮ್ಸ್ ಆಸ್ಪತ್ರೆಯ ಮುಂದೆ ಇರುವ ಗದಗ-ಹೊಸಪೆಟೆ ರಾಷ್ಟ್ರೀಯ ಹೆದ್ದಾರಿ-63 ನ್ನು ದಾಟುತ್ತಿರುವಾಗ ಲಾರಿಯಿಂದ ಅಪಘಾತಗೊಂಡು ಮೃತಪಟ್ಟಿದ್ದು, ಈ ಕುರಿತು ಕೊಪ್ಪಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಮೃತನು ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಾಗ ಅಲ್ಲಿ ತನ್ನ ಹೆಸರನ್ನು ಗಣಪತಿ ಮಾಜಿ, ಓರಿಸ್ಸಾ ರಾಜ್ಯ ಎಂದು ಬರೆಸಿದ್ದಾನೆ. ಮೃತನ ಚಹರೆ ವಿವರ ಇಂತಿದೆ. ಹೆಸರು : ಗಣಪತಿ ಮಾಜಿ, ವಯಸ್ಸು : 35-40 ವರ್ಷ, ಎತ್ತರ :5.6 ಅಡಿ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ಕೋಲುಮುಖ, ಕಪ್ಪು ತಲೆಕೂದಲು, ಹಿಂದಿ ಮತ್ತು ಓಡಿಸ್ಸಿ ಭಾಷೆಯನ್ನು ಮಾತನಾಡುತ್ತಾನೆ, ಒಂದು ಪರ್ಪಲ್ ಬಣ್ಣದ ಲೈನಿಂಗ್ ಇರುವ ಟೀ ಶರ್ಟ್, ವಿವಿಧ ಬಣ್ಣಗಳ ಮಿಶ್ರಿತ ಫುಲ್ ತೋಳಿನ ಅಂಗಿ, ಆಕಾಶ ನೀಲಿ ಬಣ್ಣದ ಅಂಡರ್‍ವೇರ್ ಮತ್ತು ಒಂದು ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾನೆ. ಈ ಚಹರೆಯುಳ್ಳ ವ್ಯಕ್ತಿಯ ಬಗ್ಗೆ ಅಥವಾ ವಾರಸುದಾರರ ಬಗ್ಗೆ ಮಾಹಿತಿ ದೊರೆತಲ್ಲಿ ಕೊಪ್ಪಳ ನಗರದ ಸಂಚಾರ ಪೊಲೀಸ್ ಠಾಣೆ ಪಿ.ಎಸ್.ಐ ಬೂದೆಪ್ಪ, ಮೊ : 9902574223 ಇವರಿಗೆ ಅಥವಾ ನಿಯಂತ್ರಣ ಕೊಠಡಿಗೆ ಮಾಹಿತಿ ತಿಳಿಸುವಂತೆ ಸಂಚಾರ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕರು ಸಾರ್ವಜನಿಕರಲ್ಲಿ ಕೋರಿದ್ದಾರೆ.

ಡಿ.01 ರಂದು ತಾಲೂಕಾ ಪಂಚಾಯತಿ ಕೆ.ಡಿ.ಪಿ ಸಭೆ

ಕೊಪ್ಪಳ, ನ.24 (ಕರ್ನಾಟಕ ವಾರ್ತೆ) : ಕೊಪ್ಪಳ ತಾಲೂಕಾ ಪಂಚಾಯತಿಯ ಪ್ರಸಕ್ತ ಸಾಲಿನ ದ್ವಿತೀಯ ತ್ರೈಮಾಸಿಕ ಕೆ.ಡಿ.ಪಿ ಸಭೆಯನ್ನು ಡಿ.01 ರಂದು ಬೆಳಿಗ್ಗೆ 11.00 ಗಂಟೆಗೆ ತಾಲೂಕಾ ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
     ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ಸಭೆಯ ಅಧ್ಯಕ್ಷತೆ ವಹಿಸುವರು. ಕೊಪ್ಪಳ ತಾಲೂಕಾ ಮಟ್ಟದ ಎಲ್ಲ ಅನುಷ್ಠಾನಾಧಿಕಾರಿಗಳು 2015ರ ಸೆಪ್ಟಂಬರ್ ಅಂತ್ಯದವರೆಗೆ ತಮ್ಮ ಇಲಾಖೆ ಸಾಧಿಸಿದ ಪ್ರಗತಿ ವರದಿಯೊದಿಗೆ ಕಡ್ಡಾಯವಾಗಿ ಹಾಗೂ ಖುದ್ದಾಗಿ ಸಭೆಗೆ ಹಾಜರಾಗುವಂತೆ ತಾಲೂಕಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಟಿ.ಕೃಷ್ಣಮೂರ್ತಿ ಅವರು ತಿಳಿಸಿದ್ದಾರೆ. 

ಆಕಾಶವಾಣಿ ಸರಣಿ ಕಾರ್ಯಕ್ರಮಗಳ ಸ್ಪರ್ಧೆ : ಕಲಬುರ್ಗಿ ಆಕಾಶವಾಣಿ ಪ್ರಥಮ

ಕೊಪ್ಪಳ, ನ.24 (ಕರ್ನಾಟಕ ವಾರ್ತೆ) : ರಾಜ್ಯಮಟ್ಟದ ಆಕಾಶವಾಣಿ ಕಾರ್ಯಕ್ರಮಗಳ 2015ನೇ ಸಾಲಿನ ಸ್ಪರ್ಧೆಯ  ‘ರೇಡಿಯೋ ಸರಣಿ’ ವಿಭಾಗದಲ್ಲಿ ಕಲಬುರ್ಗಿ ಆಕಾಶವಾಣಿ ಕೇಂದ್ರಕ್ಕೆ ಪ್ರಥಮ ಬಹುಮಾನ ಲಭಿಸಿದೆ.
     ಎಚ್.ಎನ್. ಅನಿಲಕುಮಾರ ಅವರು ನಿರ್ಮಾಣ ಮಾಡಿರುವ ‘ರಂಗ ದೀವಟಿಗೆಗಳು’ ಎನ್ನುವ ಸರಣಿಗೆ ಈ ಬಹುಮಾನ ಲಭಿಸಿದೆ. ವೃತ್ತಿ ನಾಟಕ ಕಂಪನಿಗಳ ಕುರಿತಾದ ಈ ಸರಣಿಯನ್ನು ರಂಗಕರ್ಮಿ ಹಾಗೂ ರಂಗ ಚಿಂತಕರಾದ ಗವೀಶ ಹಿರೇಮಠ ಅವರು ರಚಿಸಿದ್ದು, ಮಧು ದೇಶಮುಖ ಅವರು ನಿರ್ಮಾಣದಲ್ಲಿ ನೆರವು ನೀಡಿದ್ದಾರೆ. ಪ್ರಭು ನಿಷ್ಠಿ ಹಾಗೂ ಶಿವಲಿಂಗಪ್ಪ ಕೊಟನೂರ್ ಅವರ ತಾಂತ್ರಿಕ ಸಹಯೋಗದಲ್ಲಿ ಈ ಸರಣಿ ಅಚ್ಚುಕಟ್ಟಾಗಿ ಮೂಡಿಬಂದಿದೆ. ತೀರಾ ಇತ್ತೀಚಿನವರೆಗೂ ವೃತ್ತಿ ರಂಗಭೂಮಿ ನಾಟಕ ಕಂಪನಿಗಳು ನಾಡಿನಾದ್ಯಂತ ಜನಸಮೂಹದಲ್ಲಿ ಮನರಂಜನೆಯ ಪ್ರಮುಖ ಮೂಲಗಳಾಗಿದ್ದವು. ಆದರೆ ಬದಲಾದ ಸಮಯ ಹಾಗೂ ಮನರಂಜನೆಯ ನೂತನ ತಂತ್ರಜ್ಞಾನದ ಆಗಮನದೊಂದಿಗೆ ಈ ಕಂಪನಿಗಳು ಒಂದರ ಹೊಂದೊಂದರಂತೆ ನೇಪಥ್ಯಕ್ಕೆ ಸರಿದು ಈಗ ಬೆರಳೆಣಿಕೆಯಷ್ಟು ಕಂಪನಿಗಳು ಮಾತ್ರ ಉಳಿದುಕೊಂಡಿವೆ. ಅಂತಹ ಕೆಲವು ವೃತ್ತಿ ನಾಟಕ ಕಂಪನಿಗಳ ಹೋರಾಟದ ಬದುಕಿನ ಪರಿಚಯ ಮಾಡಿಕೊಡುವುದೇ ಈ ಸರಣಿಯ ಉದ್ದೇಶವಾಗಿದೆ. ಸರಣಿಯಲ್ಲಿ ಕಂಪನಿಯ ಇದುವರೆಗಿನ ಪಯಣ, ಅನುಭವಿಸಿದ ಏಳು ಬೀಳುಗಳು, ಕಲಾವಿದರ ಬದುಕಿನ ಸುಖ ದುಖಃಗಳು ಇವೆಲ್ಲವುಗಳನ್ನು ಪರಿಣಾಮಕಾರಿಯಾಗಿ ಅನಾವರಣಗೊಳಿಸಲಾಗಿದೆ.
     ಪ್ರಶಸ್ತಿ ವಿಜೇತರನ್ನು ನಿಲಯದ ಮುಖ್ಯಸ್ಥರಾದ ಅಂಜನಾ ಯಾತನೂರ್ ಹಾಗೂ ಸಹಾಯಕ ಎಂಜಿನೀಯರ್ ಟಿ.ತ್ರಿಪುರ ಸುಂದರಿ ಅವರು ಅಭಿನಂದಿಸಿದ್ದಾರೆ ಕಲಬುರಗಿ ಆಕಾಶವಾಣಿ ಕೇಂದ್ರ ಪ್ರಕಟಣೆಯಲ್ಲಿ ತಿಳಿಸಿದೆ.

ನ.26 ರಂದು ಸಂವಿಧಾನ ದಿನ ಆಚರಣೆಗೆ ಸೂಚನೆ

ಕೊಪ್ಪಳ, ನ.24 (ಕರ್ನಾಟಕ ವಾರ್ತೆ) : ರಾಜ್ಯಾದ್ಯಂತ ನ.26 ರಂದು ‘ಸಂವಿಧಾನ ದಿನ’ ವನ್ನು ಆಚರಿಸಲಾಗುತ್ತಿದ್ದು., ಅಂದು ಜಿಲ್ಲೆಯ ಎಲ್ಲಾ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಸರ್ಕಾರಿ ಕಾರ್ಯಾಲಯಗಳಲ್ಲಿ ಸಂವಿಧಾನದ ಪ್ರಿಮೆಂಬಲ್ ಅನ್ನು ತಪ್ಪದೆ ಓದುವ ಮೂಲಕ ಸಂವಿಧಾನ ದಿನವನ್ನು ಆಚರಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ||ಪ್ರವೀಣಕುಮಾರ್ ಜಿ.ಎಲ್ ಅವರು ತಿಳಿಸಿದ್ದಾರೆ.

ನ.25 ರಂದು ಜಿಲ್ಲಾ ಮಟ್ಟದ ಯುವಜನೋತ್ಸವ


ಕೊಪ್ಪಳ, ನ.24 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ವಂದೇ ಮಾತರಂ ಯುವ ಸಾಂಸ್ಕøತಿಕ ಸೇವಾ ಸಂಘ (ರಿ), ಹಾಗೂ ಜಾಗೃತಿ ಸಾಂಸ್ಕøತಿಕ ಗ್ರಾಮೀಣಾಭಿವೃದ್ಧಿ ಸೇವಾ ಸಂಘ (ರಿ), ಕೊಪ್ಪಳ ಇವರುಗಳ ಸಂಯುಕ್ತಾಶ್ರಯದಲ್ಲಿ ಕೊಪ್ಪಳ ಜಿಲ್ಲಾ ಮಟ್ಟದ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮವನ್ನು ನ.25 ರಂದು ಬೆಳಿಗ್ಗೆ 10 ಗಂಟೆಗೆ ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಏರ್ಪಡಿಸಲಾಗಿದೆ.
     ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವರಾದ ಶಿವರಾಜ ಎಸ್.ತಂಗಡಗಿ ಅವರು ಕಾರ್ಯಕ್ರಮ ಉದ್ಘಾಟಿಸುವರು. ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಅಮರೇಶ ಕುಳಗಿ, ಲೋಕಸಭಾ ಸದಸ್ಯ ಸಂಗಣ್ಣ ಕರಡಿ, ಶಾಸಕರುಗಳಾದ ದೊಡ್ಡನಗೌಡ ಪಾಟೀಲ್, ಇಕ್ಬಾಲ್ ಅನ್ಸಾರಿ, ಬಸವರಾಜ ರಾಯರೆಡ್ಡಿ, ಹಾಲಪ್ಪ ಆಚಾರ್, ಅಮರನಾಥ ಪಾಟೀಲ್, ಶರಣಪ್ಪ ಮಟ್ಟೂರು, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಎಂ.ವಿನಯಕುಮಾರ ಮೇಲಿನಮನಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ವೀರೇಶ್ ಸಾಲೋಣಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಅರವಿಂದಗೌಡ ಪಾಟೀಲ್, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಪರಸಪ್ಪ ಕತ್ತಿ, ತಾಲೂಕಾ ಪಂಚಾಯತ್ ಅಧ್ಯಕ್ಷೆ ಬಾನು ಚಂದುಸಾಬ್, ನಗರಸಭೆ ಅಧ್ಯಕ್ಷೆ ಬಸಮ್ಮ ಹಳ್ಳಿಗುಡಿ, ಉಪಾಧ್ಯಕ್ಷ ಬಾಳಪ್ಪ ಬಾರಕೇರ, ಕೊಪ್ಪಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅನಿಲ್‍ಕುಮಾರ್ ಟಿ.ಕೆ, ಜಿಲ್ಲಾಧಿಕಾರಿ ಎಮ್.ಕನಗವಲ್ಲಿ, ಅಪರ ಜಿಲ್ಲಾಧಿಕಾರಿ ಡಾ|| ಪ್ರವೀಣ ಕುಮಾರ ಜಿ.ಎಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ||ಕೆ.ತ್ಯಾಗರಾಜನ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಹೆಚ್.ಎಸ್.ಪಾಟೀಲ್ ಅವರು ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ. 

Monday, 23 November 2015

ಜವಾಹರಲಾಲ್ ನೆಹರು ಅಪೂರ್ವ ಛಾಯಾಚಿತ್ರ ಪ್ರದರ್ಶನಕ್ಕೆ ಕೃಷ್ಣ ಉದಪುಡಿ ಚಾಲನೆ



ಕೊಪ್ಪಳ ನ. 23 (ಕರ್ನಾಟಕ ವಾರ್ತೆ)-  ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ 125ನೇ ಹುಟ್ಟು ಹಬ್ಬದ ವರ್ಷಾಚರಣೆ ಅಂಗವಾಗಿ ನಗರದ ಸಾಹಿತ್ಯ ಭವನದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿರವ ನವಭಾರತದ ನಿರ್ಮಾತೃ ಪಂಡಿತ ಜವಾಹರಲಾಲ್ ನೆಹರು ಅವರ ಜೀವನ ಸಾಧನೆಯ ಎರಡು ದಿನಗಳ ಅಪೂರ್ವ ಛಾಯಾಚಿತ್ರ ಪ್ರದರ್ಶನಕ್ಕೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಸೋಮವಾರದಂದು ಚಾಲನೆ ನೀಡಿದರು. 

        ಜವಾಹರಲಾಲ್ ನೆಹರೂ ಅವರ ಜೀವನದ ಸಾಧನೆಯ  ಛಾಯಾಚಿತ್ರ ಪ್ರದರ್ಶನ ವೀಕ್ಷಿಸಿದ ಕೃಷ್ಣ ಉದಪುಡಿ ಅವರು ಮಾತನಾಡಿ, ಈ ಪ್ರದರ್ಶನವು ವಿದ್ಯಾರ್ಥಿಗಳಿಗೆ ಅತ್ಯುಪಯುಕ್ತವಾದ ಪ್ರದರ್ಶನವಾಗಿದ್ದು, ಇತಿಹಾಸದ ಪಾಠದೊಂದಿಗೆ ಛಾಯಾಚಿತ್ರಗಳ ಪ್ರತ್ಯಕ್ಷ ವೀಕ್ಷಣೆ ವಿದ್ಯಾರ್ಥಿಗಳಿಗೆ ಚೇತೋಹಾರಿಯಾಗಿದೆ,  ಪಂಡಿತ ಜವಾಹರಲಾಲ್ ನೆಹರು ಅವರ ಜೀವನ ಸಾಧನೆಯ  ಛಾಯಾಚಿತ್ರ ಮನಸ್ಸನಿನಲ್ಲಿ ಉಳಿಯಲಿದೆ  ಎಂದು ಅಭಿಪ್ರಾಯಪಟ್ಟರು.  ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ಯಾಮಸುಂದರ್ ಅವರು ಛಾಯಾಚಿತ್ರ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಯತ್ನ ಶ್ಲಾಘನೀಯವಾಗಿದೆ ಎಂದರು.  ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಶಾಲಾ ಮಕ್ಕಳ ಗಮನ ಸೆಳೆದ ಛಾಯಾಚಿತ್ರ ಪ್ರದರ್ಶನ: ಭಾರತದ ಪ್ರಥಮ ಪ್ರಧಾನಮಂತ್ರಿ ಹಾಗೂ ನವಭಾರತದ ನಿರ್ಮಾತೃ ಪಂಡಿತ ಜವಾಹರಲಾಲ್ ನೆಹರು ಅವರ ಜೀವನ ಸಾಧನೆಯ ಎರಡು ದಿನಗಳ ಅಪೂರ್ವ ಛಾಯಾಚಿತ್ರ ಪ್ರದರ್ಶನವು ಶುಕ್ರವಾರ ಶಾಲಾ-ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಗೂ ಸಾರ್ವಜನಿಕರ ಗಮನ ಸೆಳೆಯಿತು.
     ಪಂಡಿತ್ ಜವಾಹರಲಾಲ್ ನೆಹರು ಅವರ 125ನೇ ಹುಟ್ಟು ಹಬ್ಬದ ವರ್ಷಾಚರಣೆ ಅಂಗವಾಗಿ ಆಯೋಜಿಸಲಾಗಿರುವ ಈ ಅಪರೂಪದ ಛಾಯಾಚಿತ್ರ ಪ್ರದರ್ಶನದಲ್ಲಿ ಒಟ್ಟು 81 ಚಿತ್ರಗಳಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಾರ್ತಾ ಸಚಿವ ಆರ್. ರೋಷನ್‍ಬೇಗ್ ಅವರ ಸಂದೇಶದೊಂದಿಗೆ ಪ್ರದರ್ಶನ ಆರಂಭಗೊಳ್ಳುತ್ತದೆ. 1947ರಿಂದ 1964ರ ವರೆಗೆ ದೇಶದ ಪ್ರಧಾನಿಯಾಗಿದ್ದ ನೆಹರು ಭಾರತೀಯ ರಾಜಕಾರಣದಲ್ಲಿ ಅಪೂರ್ವ ಜನಪ್ರಿಯತೆ ಗಳಿಸಿದ್ದು, ಕೃಷಿ, ಕೈಗಾರಿಕೆ, ವಿಜ್ಞಾನ, ನೀರಾವರಿ ವಲಯಗಳಿಗೆ ಉತ್ತೇಜನ ನೀಡಿ ಭವ್ಯ ಭಾರತದ ನಿರ್ಮಾಣಕ್ಕೆ ಹಾಗೂ ದೇಶದ ಸಂಪೂರ್ಣ ಬೆಳವಣಿಗೆ ಸಾಧಿಸುವ ಪಂಚವಾರ್ಷಿಕ ಯೋಜನೆಗಳ ಅನುಷ್ಠಾನದಂತಹ ಅನೇಕ ಸಾಧನೆಯ ಮತ್ತು ಆಗರ್ಭ ಶ್ರೀಮಂತ ಮನೆತನದಲ್ಲಿ ಜನಿಸಿದ ಯುವಕ ಜವಾಹರಲಾಲರ ಅಲಹಾಬಾದ ಮನೆ “ಆನಂದ ಭವನ”, ತಂದೆ ಮೋತಿಲಾಲ್ ನೆಹರು, ಪ್ರಿಯದರ್ಶಿನಿ ಇಂದಿರಾಗಾಂಧಿ ಮತ್ತು ಮೊಮ್ಮಕ್ಕಳು ಹಾಗೂ ಸಹೋದರಿ ವಿಜಯಲಕ್ಷ್ಮೀ ಪಂಡಿತ್  ಅವರೊಂದಿಗೆ ಕಳೆದ ಕ್ಷಣಗಳ ಚಿತ್ರಣ ಪ್ರದರ್ಶನದಲ್ಲಿ ಒಡಮೂಡಿದೆ. 


     ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮಾ ಗಾಂಧೀಜಿಯರೊಂದಿಗಿನ ನಿಕಟ ಸಂಪರ್ಕ, ನೇತಾರ ವಿನೋಬಾಭಾವೆ ಮತ್ತು ಬಾಬು ರಾಜೇಂದ್ರ ಪ್ರಾಸಾದರೊಂದಿಗಿನ ಒಡನಾಟದ, ಖ್ಯಾತ ಅರ್ಥಶಾಸ್ತ್ರಜ್ಞ ಪಿ.ಸಿ. ಮಹಾಲನೋಬಿಸ್ ಅವರೊಂದಿಗಿನ, ಭಾರತದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ವಿಶ್ವದ ಹಲವಾರು ದೇಶಗಳ ನೆರವು ಬಯಸಿ ಪ್ರವಾಸ ಕೈಗೊಂಡ ಬಗ್ಗೆ, ಮಕ್ಕಳು ಹಾಗೂ ಯುವ ಜನತೆಯ ಸರ್ವಾಂಗೀಣ ವಿಕಾಸಕ್ಕೆ ಹಲವು ಕಾರ್ಯಕ್ರಮ ಜಾರಿ, ಕರ್ನಾಟಕದ ಮೇಲಿನ ಪ್ರೀತಿಗಾಗಿ ವಿವಿಧ ಸಂದರ್ಭಗಳಲ್ಲಿ ವಿಶೇಷವಾಗಿ ವಿಧಾನ ಸೌಧದ ಶಿಲಾನ್ಯಾಸ ಮತ್ತಿತರ ಕಾರ್ಯಕ್ರಮಗಳಗಾಗಿ ಹಲವು ಬಾರಿ ಭೇಟಿ ನೀಡಿದ, ಪಂಚವಾರ್ಷಿಕ ಯೋಜನೆಗಳ ಜಾರಿ ಸಂದರ್ಭದಲ್ಲಿ ತಜ್ಞರೊಂದಿಗಿನ ಚರ್ಚೆ, ನೆಹರು ಚಿತಾಭಸ್ಮ ಬೆಂಗಳೂರಿಗೆ ಬಂದಾಗ ಗೌರವಾರ್ಪಣೆಯ ಛಾಯಾಚಿತ್ರಗಳು ಗಮನ ಸೆಳೆಯುತ್ತವೆ. 

     ಜವಹರಲಾಲ್ ನೆಹರು ಅವರ ಜೀವನ ಗಾಥೆಯೊಂದಿಗೆ ಪ್ರದರ್ಶನ ಕೊನೆಗೊಳ್ಳುತ್ತದೆ. ಪ್ರದರ್ಶನದ ಪ್ರವೇಶ ದ್ವಾರದಲ್ಲಿಟ್ಟ ಪಂಡಿತ್ ನೆಹರು ಪುತ್ಥಳಿ, ಟಿವಿ ಪ್ರದರ್ಶನ ಹಾಗೂ ಬಯಸ್ಕೋಪ್ ಮೂಲಕ ನೆಹರು ಚಿತ್ರ ದರ್ಶಕ ವೀಕ್ಷಣಾ ವ್ಯವಸ್ಥೆ ಪ್ರದರ್ಶನದ ವಿಶೇಷ ಆಕರ್ಷಣೆಯಾಗಿದೆ. ಬಯಸ್ಕೋಪ್‍ನಲ್ಲಿ 22 ಚಿತ್ರಗಳನ್ನು ವೀಕ್ಷಿಸಬಹುದಾಗಿದೆ.
       ಜವಾಹರಲಾಲ್ ನೆಹರೂ ಅವರ ವಿಶೇಷ ಛಾಯಾಚಿತ್ರ ಪ್ರದರ್ಶನಕ್ಕೆ ಪ್ರವೇಶ ಉಚಿತವಾಗಿದ್ದು, ಜಿಲ್ಲೆಯ ಶಾಲಾ ಹಾಗೂ ಕಾಲೇಜಿನ ವಿದ್ಯಾರ್ಥಿಗಳು, ಸಾರ್ವಜನಿಕರು, ನೆಹರೂ ಅಭಿಮಾನಿಗಳು ನ. 24 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯ ವರೆಗೂ ನಗರದ ಸಾಹಿತ್ಯ ಭವನದಲ್ಲಿ ಚಿತ್ರ ಪ್ರದರ್ಶನ ವೀಕ್ಷಿಸಬಹುದಾಗಿದೆ.

ನವಭಾರತದ ನಿರ್ಮಾಣಕ್ಕೆ ನೆಹರೂ ಅವರ ಕೊಡುಗೆ ಅಪಾರ- ಕೃಷ್ಣ ಉದಪುಡಿ

 
ಕೊಪ್ಪಳ, ನ.23 (ಕರ್ನಾಟಕ ವಾರ್ತೆ) : ಸ್ವಾತಂತ್ರ್ಯಾ ನಂತರದ ದಿನಗಳಲ್ಲಿ ಭಾರತದ ಸಮಗ್ರ ಅಭಿವೃದ್ಧಿಗೆ ಪಂಚವಾರ್ಷಿಕ ಯೋಜನೆಗಳನ್ನು ರೂಪಿಸುವ ಮೂಲಕ ನವಭಾರತದ ನಿರ್ಮಾಣಕ್ಕೆ ಪಂಡಿತ್ ಜವಾಹರಲಾಲ್ ನೆಹರೂ ಅವರ ಕೊಡುಗೆ ಅಪಾರವಾಗಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಹೇಳಿದರು.

     ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿಯ ಸಹಯೋಗದಲ್ಲಿ ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರ 125ನೇ ಜನ್ಮ ವರ್ಷಾಚರಣೆ ಅಂಗವಾಗಿ ನಗರದ ಸಾಹಿತ್ಯ ಭವನದಲ್ಲಿ ಸೋಮವಾರದಂದು ಏರ್ಪಡಿಸಲಾಗಿದ್ದ ವಿಚಾರಸಂಕಿರಣದಲ್ಲಿ ನೆಹರೂ ಕುರಿತ ಮಡಿಕೆ ಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

     ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಸುಮಾರು ಹದಿನೇಳು ವರ್ಷಗಳ ಕಾಲ ಪ್ರಧಾನಿಯಾಗಿ ಯಶಸ್ವಿ ಆಡಳಿತ ನಡೆಸಿದ್ದು, ಭಾರತೀಯ ರಾಜಕಾರಣದಲ್ಲಿ ಅಪೂರ್ವ ಜನಪ್ರಿಯತೆ ಗಳಿಸಿದ್ದರು.  ಕೃಷಿ, ಕೈಗಾರಿಕೆ, ವಿಜ್ಞಾನ-ತಂತ್ರಜ್ಞಾನ ಹಾಗೂ ನೀರಾವರಿ ವಲಯಗಳಿಗೆ ಉತ್ತೇಜನ ನೀಡಿ, ಭಾರತದ ಭವಿಷ್ಯವನ್ನು ಭವ್ಯವಾಗಿ ರೂಪಿಸಲು ಶ್ರಮಿಸುವ ಮೂಲಕ ನವಭಾರತದ ನಿರ್ಮಾತೃ ಎನಿಸಿಕೊಂಡರು.  ಮುದ್ದು ಮಕ್ಕಳಿಗೆ ಚಾಚಾ ನೆಹರೂ ಎಂದೇ ಖ್ಯಾತಿ ಗಳಿಸಿದ ಇವರು, ಮಕ್ಕಳೇ ಮುಂದಿನ ನಾಯಕರು ಮತ್ತು ಪ್ರಜೆಗಳು, ಮಕ್ಕಳ ಶ್ರೇಯೋಭಿವೃದ್ಧಿಗೆ ಕಡ್ಡಾಯ ಶಿಕ್ಷಣ ಅಗತ್ಯವಾಗಿದ್ದು, ಸಂವಿಧಾನದಲ್ಲಿ ಕಡ್ಡಾಯ ಶಿಕ್ಷಣಕ್ಕೆ ಆಗಿನ ದಿನಗಳಲ್ಲೇ ನೀತಿ ರೂಪಿಸಿದರು.  ದೇಶದ ಸಮಗ್ರ ಅಭಿವೃದ್ಧಿಗೆ ಪಂಚವಾರ್ಷಿಕ ಯೋಜನೆಗಳನ್ನು ರೂಪಿಸಿ, ಕೃಷಿ, ಕೈಗಾರಿಕೆ, ಶಿಕ್ಷಣ, ವಿಜ್ಞಾನ ಮತ್ತು ನೀರಾವರಿ ವಲಯಗಳಿಗೆ ಹೆಚ್ಚಿನ ಆದ್ಯತೆ ನೀಡಿದರು.  ಇವರ ದೂರದೃಷ್ಟಿ ಯೋಜನೆಗಳಿಂದಲೇ ದೇಶದ ಎಲ್ಲ ರಾಜ್ಯಗಳು ಅಭಿವೃದ್ಧಿಯತ್ತ ಸಾಗಲು ಸಾಧ್ಯವಾಯಿತು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಹೇಳಿದರು.

     ವಿಚಾರಸಂಕಿರಣದ ಉದ್ಘಾಟನೆ ನೆರವೇರಿಸಿದ ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್. ಅವರು ಮಾತನಾಡಿ, ಜವಾಹರಲಾಲ್ ನೆಹರೂರವರ ಜೀವನದ ಸಾಧನೆ, ಅವಿರತ ಪರಿಶ್ರಮ, ಅವರ ದೂರದೃಷ್ಟಿ ಯೋಜನೆಗಳ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಳ್ಳಲೇಬೇಕಾಗಿದೆ ಎಂದರು.

     ನೆಹರೂರವರ ಜೀವನ ಸಾಧನೆ ಕುರಿತು ವಿಶೇಷ ಉಪನ್ಯಾಸ ನೀಡಿದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರಭುರಾಜ್ ನಾಯಕ್ ಅವರು ಮಾತನಾಡಿ, ಮಕ್ಕಳ ಬಗ್ಗೆ ಅಪಾರ ಪ್ರೀತಿ ಮತ್ತು ಕಾಳಜಿಯನ್ನು ಹೊಂದಿದ್ದ ನೆಹರೂರವರು, ಮಕ್ಕಳನ್ನು ಮಾನವ ಲೋಕದ ಪುಷ್ಪಗಳು, ಮಕ್ಕಳ ಉನ್ನತಿಯಲ್ಲಿಯೇ ದೇಶದ ಭವಿಷ್ಯ ಅಡಗಿದೆ ಎಂದು ನಂಬಿದ್ದವರು.  ವಿಜ್ಞಾನ-ತಂತ್ರಜ್ಞಾನದ ಅಭಿವೃದ್ಧಿ ಇಲ್ಲದೆ ದೇಶಕ್ಕೆ ಮಾನ್ಯತೆ ಇಲ್ಲ.  ಬಡತನ, ಅಜ್ಞಾನ ಮತ್ತು ಅನಕ್ಷರತೆ ದೇಶದ ಪ್ರಮುಖ ಶತ್ರುಗಳೆಂದು ತಮ್ಮ ಮಾತುಗಳಲ್ಲಿ ಬಿಂಬಿಸುತ್ತಿದ್ದರು.  ತಮ್ಮ ಆಡಳಿತಾವಧಿಯಲ್ಲಿ ದೇಶ-ವಿದೇಶಗಳೊಂದಿಗೆ ಉತ್ತಮ ಬಾಂಧವ್ಯ ವೃದ್ಧಿಗೆ ಶ್ರಮಿಸಿದರು.  ಎರಡನೆ ಜಾಗತಿಕ ಯುದ್ಧದ ನಂತರ ಅಲಿಪ್ತ ನೀತಿಯನ್ನು ಅನುಸರಿಸುವ ಮೂಲಕ ಭಾರತದ ಸಾರ್ವಭೌಮತೆ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸಿದರು.  ಆಗಿನ ಕಾಲದಲ್ಲಿಯೇ ಸಂಭವಿಸಬೇಕಾಗಿದ್ದ ಮೂರನೇ ಮಹಾ ಯುದ್ಧವನ್ನು ತಪ್ಪಿಸಿದ ಕೀರ್ತಿ ನೆಹರೂ ಅವರಿಗೆ ಸಲ್ಲಬೇಕು ಎಂದರು.

     ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ಯಾಮಸುಂದರ್, ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ್ ಪೂಜಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.  ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಅವರು ಸ್ವಾಗತಿಸಿ, ವಂದಿಸಿದರು.  ಬಸವರಾಜ್ ಕರುಗಲ್ ಅವರು ಕಾರ್ಯಕ್ರಮದ ನಿರೂಪಣೆಗೈದರು.   ಜವಾಹರಲಾಲ್ ನೆಹರೂ ಅವರ ಜೀವನ ಕುರಿತು ಕಿರು ಚಿತ್ರವನ್ನು ಇದೇ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು.

Saturday, 21 November 2015

ಜ.06 ರಿಂದ ಬೀದರ್‍ನಲ್ಲಿ ಸೇನಾ ಭರ್ತಿ ರ್ಯಾಲಿ : ಆನ್‍ಲೈನ್‍ನಲ್ಲಿ ಅರ್ಜಿ ಆಹ್ವಾನ

ಕೊಪ್ಪಳ, ನ.21 (ಕರ್ನಾಟಕ ವಾರ್ತೆ) : ರಿಕ್ರೊಟ್‍ಮೆಂಟ್ ಆಫೀಸ್ ಪೋರ್ಟ ಬೆಳಗಾವಿ ಇವರಿಂದ 2016ರ ಜ.06 ರಿಂದ 16 ರವರೆಗೆ ಬೀದರ್ ಜಿಲ್ಲೆಯಲ್ಲಿ ಸೇನಾ ನೇಮಕಾತಿ (ಜನರಲ್ ಡ್ಯೂಟಿ) ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ.
     ಕೊಪ್ಪಳ ಜಿಲ್ಲೆಯ ಅಭ್ಯರ್ಥಿಗಳು ಈ ಸೇನಾ ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸಬಹುದಾಗಿದ್ದು, ಅಭ್ಯರ್ಥಿಗಳು ನ.07 ರಿಂದ ಡಿ.22 ರವರೆಗೆ ವೆಬ್‍ಸೈಟ್ ವಿಳಾಸ  www.joinindianarmy.nic.in ಮೂಲಕ ಆನ್‍ಲೈನ್ ಅರ್ಜಿ ಸಲ್ಲಿಸಬಹುದಾಗಿದೆ.  ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಬಾಗಲಕೋಟೆ, ದೂರವಾಣಿ ಸಂಖ್ಯೆ : 08354-235434 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು  ಬಾಗಲಕೋಟೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜೀವಿತ ಪ್ರಮಾಣ ಪತ್ರ ಸಲ್ಲಿಸಲು ಸೂಚನೆ

ಕೊಪ್ಪಳ, ನ.21 (ಕರ್ನಾಟಕ ವಾರ್ತೆ) : ಮಾಸಿಕ ಗೌರವಧನ ಪಡೆಯುತ್ತಿರುವ ಮಾಜಿ ಸೈನಿಕರು, ಅವಲಂಬಿತರು ಅವರ ಜೀವಿತಾ ಪ್ರಮಾಣ ಪತ್ರವನ್ನು ಸಲ್ಲಿಸುವಂತೆ ಬಾಗಲಕೋಟೆಯ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಉಪನಿರ್ದೇಶಕರ ಕಾರ್ಯಾಲಯ ಇವರಿಂದ ಸೂಚನೆ ನೀಡಲಾಗಿದೆ.
     ಪ್ರತಿ ವರ್ಷದ ನವೆಂಬರ್ ತಿಂಗಳಿನಲ್ಲಿ ಬ್ಯಾಂಕ್‍ನಿಂದ ಪಿಂಚಣಿ ಪಡೆಯುತ್ತಿರುವ ಪಿಂಚಣಿದಾರರಿಂದ ಜೀವಿತ ಪ್ರಮಾಣ ಪತ್ರವನ್ನು ಬ್ಯಾಂಕ್ ಪ್ರಾಧಿಕಾರಗಳು ಪಡೆಯುವ ಪ್ರಕ್ರಿಯೆಯಂತೆ, ಪ್ರಪಂಚದ ಎರಡನೇ ಮಹಾಯುದ್ಧದ ಮಾಸಿಕ ಗೌರವಧನ ಪಡೆಯುತ್ತಿರುವ ಮಾಜಿ ಸೈನಿಕರು ಹಾಗೂ ಅವರ ಅವಲಂಬಿತರು ತಮ್ಮ ಜೀವಿತ ಪ್ರಮಾಣ ಪತ್ರವನ್ನು ಪ್ರತಿ ವರ್ಷ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಪ್ರಪಂಚದ ಎರಡನೇ ಮಹಾಯುದ್ಧದ ಮಾಸಿಕ ಗೌರವಧನ ಪಡೆಯುತ್ತಿರುವ ಬಾಗಲಕೋಟ ಮತ್ತು ಕೊಪ್ಪಳ ಜಿಲ್ಲೆಯಲ್ಲಿರುವ ಮಾಜಿ ಸೈನಿಕರು ಹಾಗೂ ಅವರ ಅವಲಂಬಿತರು ತಮ್ಮ ಜೀವಿತ ಪ್ರಮಾಣ ಪತ್ರದ ನಿಗದಿತ ಫಾರ್ಮನ್ನು ನ.25 ರೊಳಗಾಗಿ ಪಡೆದು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಉಪನಿರ್ದೇಶಕರ ಕಾರ್ಯಾಲಯ, ಬಾಗಲಕೋಟ ಇವರಿಗೆ ಸಲ್ಲಿಸಬೇಕು. ಇಲ್ಲವಾದಲ್ಲಿ ಜೀವಿತ ಪ್ರಮಾಣ ಪತ್ರವನ್ನು ಸೂಕ್ತ ಸಮಯದಲ್ಲಿ ಸಲ್ಲಿಸದೇ ಇರುವ ಫಲಾನುಭವಿಗಳ ಮಾಸಿಕ ಗೌರವಧನವನ್ನು ಸ್ಥಗಿತಗೊಳಿಸಲಾಗುವುದು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಬಾಗಲಕೋಟೆ, ದೂರವಾಣಿ ಸಂಖ್ಯೆ : 08354-235434 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು  ಬಾಗಲಕೋಟೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಧಾನ ಮಂತ್ರಿಗಳ ಶಿಷ್ಯವೇತನ : ಮಾಜಿ ಸೈನಿಕರ ಮಕ್ಕಳಿಂದ ಅರ್ಜಿ ಆಹ್ವಾನ

ಕೊಪ್ಪಳ, ನ.21 (ಕರ್ನಾಟಕ ವಾರ್ತೆ) : ಬಾಗಲಕೋಟೆಯ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಉಪನಿರ್ದೇಶಕರ ಕಾರ್ಯಾಲಯ ಇವರ ವತಿಯಿಂದ ಕರ್ನಾಟಕದ ಮೂಲ ನಿವಾಸಿ ಮಿಲಿಟರಿ ಪಿಂಚಣಿದಾರ ಮಾಜಿ ಸೈನಿಕರ ಮಕ್ಕಳಿಗೆ ಪ್ರಸಕ್ತ ಸಾಲಿನ ಪ್ರಧಾನ ಮಂತ್ರಿಗಳ ಶಿಷ್ಯವೇತನ ನೀಡಲಾಗುತ್ತಿದ್ದು, ಅರ್ಜಿ ಆಹ್ವಾನಿಸಲಾಗಿದೆ.
     ವೃತ್ತಿಪರ ಪದವಿಗಳಾದ ಎಂಜನೀಯರಿಂಗ್, ಎಂಬಿಬಿಎಸ್, ಬಿಡಿಎಸ್, ಎಂಬಿಎ ಇನ್ನಿತರ ಪದವಿಗಳಿಗೆ ಪ್ರಸಕ್ತ ಸಾಲಿನಲ್ಲಿ ಬಾಗಲಕೋಟ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಪ್ರವೇಶ ಪಡೆದ ಮಾಜಿ ಸೈನಿಕರ ಮಕ್ಕಳಿಗೆ ಭಾರತ ಸರ್ಕಾರದ ರಕ್ಷಣಾ ಮಂತ್ರಾಲಯ, ಕೇಂದ್ರೀಯ ಸೈನಿಕ ಬೋರ್ಡ್, ನವದೆಹಲಿ ಇವರಿಂದ ಪ್ರಧಾನ ಮಂತ್ರಿಗಳ ಶಿಷ್ಯ ವೇತನ ನೀಡಲಾಗುತ್ತಿದೆ. ಅರ್ಜಿ ಸಲ್ಲಿಸಲಿಚ್ಛಿಸುವವರು ಈ ಮೇಲ್ಕಾಣಿಸಿದ ಪದವಿಗಳ ಪ್ರವೇಶಕ್ಕೆ ನಿಗದಿಪಡಿಸಿದ ಶಿಕ್ಷಣದಲ್ಲಿ ಕನಿಷ್ಠ ಪ್ರತಿಶತ 60 ರಷ್ಟು ಅಂಕಗಳನ್ನು ಹೊಂದಿರಬೇಕು. ನಿಗದಿತ ನಮೂನೆಯ ಹೊಸ ಅರ್ಜಿ ಫಾರ್ಮಗಳನ್ನು ವೆಬ್‍ಸೈಟ್ ವಿಳಾಸ  http//www.desw.gov.in  ನಿಂದ ಪಡೆದು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಲಗತ್ತಿಸಿ, ನ.25 ರೊಳಗಾಗಿ ಉಪನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಬಾಗಲಕೋಟೆ ಇವರಿಗೆ ಸಲ್ಲಿಸಬಹುದಾಗಿದೆ. 
      ಹೆಚ್ಚಿನ ಮಾಹಿತಿಗಾಗಿ ರಕ್ಷಣಾ ಮಂತ್ರಾಲಯದ ದೂರವಾಣಿ ಸಂಖ್ಯೆ : 011-26715250 ನ್ನು ಅಥವಾ ವೆಬ್‍ಸೈಟ್ http//www.desw.gov.in ನ್ನು ಅಥವಾ ಉಪನಿರ್ದೇಶಕರ ಕಾರ್ಯಾಲಯ,  ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಬಾಗಲಕೋಟೆ, ದೂರವಾಣಿ ಸಂಖ್ಯೆ : 08354-235434 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು  ಬಾಗಲಕೋಟೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜವಾಹರಲಾಲ್ ನೆಹರೂ ಅವರ ಅಪರೂಪದ ಛಾಯಾಚಿತ್ರ ಪ್ರದರ್ಶನ ಮತ್ತು ವಿಚಾರಸಂಕಿರಣ

ಕೊಪ್ಪಳ ನ. 21 (ಕರ್ನಾಟಕ ವಾರ್ತೆ) : ನವಭಾರತದ ನಿರ್ಮಾತೃ ಹಾಗೂ ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರ 125ನೇ ಜನ್ಮ ವರ್ಷಾಚರಣೆ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ನೆಹರೂ ರವರ ಸಾಧನೆ ಕುರಿತ ಅಪೂರ್ವ ಹಾಗೂ ಅಪರೂಪದ ಛಾಯಾಚಿತ್ರಗಳ ಪ್ರದರ್ಶನ ಕಾರ್ಯಕ್ರಮವನ್ನು ನ. 23 ಮತ್ತು 24 ರಂದು ಎರಡು ದಿನಗಳ ಕಾಲ ಕೊಪ್ಪಳದ ಸಾಹಿತ್ಯ ಭವನದಲ್ಲಿ ಆಯೋಜಿಸಿದೆ.
     ನೆಹರೂ ರವರ ಅಪರೂಪದ ಛಾಯಾಚಿತ್ರ ಪ್ರದರ್ಶನವನ್ನು ನ. 23 ಮತ್ತು 24 ರಂದು ಎರಡು ದಿನಗಳ ಕಾಲ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದೆ.  ಅಲ್ಲದೆ ನೆಹರೂ ಅವರ ಕುರಿತು ವಿಚಾರಸಂಕಿರಣವನ್ನು ನ. 23 ರಂದು ಬೆಳಿಗ್ಗೆ 10-30 ಗಂಟೆಗೆ ಸಾಹಿತ್ಯ ಭವನದಲ್ಲಿ ಏರ್ಪಡಿಸಲಾಗಿದೆ.  ಛಾಯಾಚಿತ್ರ ಪ್ರದರ್ಶನದ ಉದ್ಘಾಟನೆಯನ್ನು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಹಾಗೂ ವಿಚಾರಸಂಕಿರಣದ ಉದ್ಘಾಟನೆಯನ್ನು ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್. ಅವರು ನೆರವೇರಿಸುವರು.  ಜಿ.ಪಂ. ಉಪಕಾರ್ಯದರ್ಶಿ ಎನ್.ಕೆ. ತೊರವಿ, ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ, ಉಪವಿಭಾಗಾಧಿಕಾರಿ ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿವಮೂರ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ. ಶ್ಯಾಮಸುಂದರ್, ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ್ ಪೂಜಾರ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.  ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರಭುರಾಜ್ ನಾಯಕ್ ಅವರು ನೆಹರೂ ಅವರ ಜೀವನ ಸಾಧನೆ ಕುರಿತು ವಿಶೇಷ ಉಪನ್ಯಾಸ ನೀಡುವರು ಎಂದು ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಅವರು ತಿಳಿಸಿದ್ದಾರೆ.

ಉದ್ಯೋಗ ಸೃಜನ ಯೋಜನೆ : ನ.25 ಮತ್ತು 27 ರಂದು ಸಂದರ್ಶನ

ಕೊಪ್ಪಳ, ನ.21 (ಕರ್ನಾಟಕ ವಾರ್ತೆ) : ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೊದ್ಯೋಗ ಮಂಡಳಿ ಇವರಿಂದ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆಯಡಿ ಕೊಪ್ಪಳ ಜಿಲ್ಲೆಯಲ್ಲಿ ಘಟಕ ಸ್ಥಾಪಿಸಲು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲಾದ ಅಭ್ಯರ್ಥಿಗಳಿಗೆ ಆಯ್ಕೆ ಸಂದರ್ಶನವನ್ನು ನ.25 ಮತ್ತು ನ.27 ರಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರ ಕಛೇರಿ, ಕೊಪ್ಪಳದಲ್ಲಿ ಏರ್ಪಡಿಸಲಾಗಿದೆ.
ಯೋಜನೆಯಡಿ ಜಿಲ್ಲಾ ಕೈಗಾರಿಕಾ ಕೇಂದ್ರ (ಡಿಐಸಿ)ದ ಹೆಸರಿನಲ್ಲಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ನ.25 ರಂದು ಬೆಳಿಗ್ಗೆ 10.30 ಗಂಟೆಗೆ ಹಾಗೂ ಖಾದಿ ಗ್ರಾಮೋದ್ಯೋಗ ಮಂಡಳಿ (ಕೆವಿಐಬಿ) ಮತ್ತು ಖಾದಿ ಗ್ರಾಮೋದ್ಯೋಗ ಆಯೋಗ (ಕೆವಿಐಸಿ) ಹೆಸರಿನಲ್ಲಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ನ.27 ರಂದು ಬೆಳಿಗ್ಗೆ 10.30 ಗಂಟೆಗೆ ಅವಶ್ಯಕ ಮೂಲ ದಾಖಲಾತಿ ಮತ್ತು ದ್ವಿಪ್ರತಿ ನಕಲು ಪ್ರತಿಯೊಂದಿಗೆ ಸ್ವಂತ ಖರ್ಚಿನಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರ ಕಛೇರಿ, ಕೊಪ್ಪಳದಲ್ಲಿ ಏರ್ಪಡಿಸಲಾಗಿರುವ ಆಯ್ಕೆ ಸಂದರ್ಶನದಲ್ಲಿ ಹಾಜರಾಗುವಂತೆ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಕೊಪ್ಪಳ ಮತ್ತು ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿಗಳು, ಕೊಪ್ಪಳ ಇವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ನ.30 ರಂದು ಜಿಲ್ಲಾ ಪಂಚಾಯತ್ ಕೆ.ಡಿ.ಪಿ ತ್ರೈಮಾಸಿಕ ಸಭೆ

ಕೊಪ್ಪಳ, ನ.21 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲಾ ಪಂಚಾಯತ್‍ನ ಪ್ರಸಕ್ತ ಸಾಲಿನ 2ನೇ ತ್ರೈಮಾಸಿಕ ಕೆ.ಡಿ.ಪಿ ಸಭೆಯನ್ನು ನ.30 ರಂದು ಬೆಳಿಗ್ಗೆ 11.30 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
     ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವರಾದ ಶಿವರಾಜ ಎಸ್.ತಂಗಡಗಿ ಅವರು ಸಭೆಯ ಅಧ್ಯಕ್ಷತೆ ವಹಿಸುವರು. ಸಂಬಂಧಪಟ್ಟ ಅನುಷ್ಠಾನಾಧಿಕಾರಿಗಳು 2015ರ ಜುಲೈ ನಿಂದ ಸೆಪ್ಟಂಬರ್‍ವರೆಗಿನ ತಮ್ಮ ಇಲಾಖೆಯ ಭೌತಿಕ ಗುರಿ ಮತ್ತು ಸಾಧನೆಗಳ ಪ್ರಗತಿ ವರದಿಗಳನ್ನು ವಿವರವಾದ ಮಾಹಿತಿಯೊಂದಿಗೆ ಜಿಲ್ಲಾ ಪಂಚಾಯತ್ ಕಾರ್ಯಾಲಯಕ್ಕೆ ಸಲ್ಲಿಸುವಂತೆ ಹಾಗೂ ಖುದ್ದಾಗಿ, ಸಮಯಕ್ಕೆ ಸರಿಯಾಗಿ ಸಭೆಗೆ ಹಾಜರಾಗುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ ಅವರು ತಿಳಿಸಿದ್ದಾರೆ.

Friday, 20 November 2015

ನ. 21 ರಂದು ಕೊಪ್ಪಳದಲ್ಲಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ

ಕೊಪ್ಪಳ, ನ.20 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಾರ್ಯಾಲಯ ಹಾಗೂ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಇವರುಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ ಸ್ಪರ್ಧೆಗಳ ಉದ್ಘಾಟನಾ ಸಮಾರಂಭ ನ.21 ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ.
     ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವರಾದ ಶಿವರಾಜ ಎಸ್.ತಂಗಡಗಿ ಕಾರ್ಯಕ್ರಮ ಉದ್ಘಾಟಿಸುವರು. ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಅಮರೇಶ ಕುಳಗಿ, ಲೋಕಸಭಾ ಸದಸ್ಯ ಸಂಗಣ್ಣ ಕರಡಿ, ಶಾಸಕರುಗಳಾದ ದೊಡ್ಡನಗೌಡ ಹೆಚ್.ಪಾಟೀಲ್, ಇಕ್ಬಾಲ್ ಅನ್ಸಾರಿ, ಬಸವರಾಜ ರಾಯರೆಡ್ಡಿ, ಹಾಲಪ್ಪ ಆಚಾರ್, ಅಮರನಾಥ ಪಾಟೀಲ್, ಶರಣಪ್ಪ ಮಟ್ಟೂರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯ್ಯದ್ ಜುಲ್ಲು ಖಾದರ್ ಖಾದ್ರಿ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಎಂ.ವಿನಯಕುಮಾರ ಮೇಲಿನಮನಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ವೀರೇಶ್ ಸಾಲೋಣಿ, ನಗರಸಭೆ ಅಧ್ಯಕ್ಷೆ ಬಸಮ್ಮ ಹಳ್ಳಿಗುಡಿ, ತಾಲೂಕಾ ಪಂಚಾಯತ್ ಅಧ್ಯಕ್ಷೆ ಬಾನು ಚಂದುಸಾಬ್, ಕೊಪ್ಪಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅನಿಲ್‍ಕುಮಾರ್ ಟಿ.ಕೆ, ಪ್ರಭಾರಿ ಜಿಲ್ಲಾಧಿಕಾರಿ ಡಾ|| ಪ್ರವೀಣ ಕುಮಾರ ಜಿ.ಎಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೆ. ತ್ಯಾಗರಾಜನ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮಣ್ಣವರ, ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವೆಂಕಟೇಶ ಗೌಡರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಡಿಡಿಪಿಐ ಎ. ಶ್ಯಾಮಸುಂದರ್ ತಿಳಿಸಿದ್ದಾರೆ.

ಕೊಪ್ಪಳ ನೂತನ ಜಿಲ್ಲಾಧಿಕಾರಿಯಾಗಿ ಎಂ. ಕನಗವಲ್ಲಿ ಅಧಿಕಾರ ಸ್ವೀಕಾರ

ಕೊಪ್ಪಳ ನ. 20 (ಕರ್ನಾಟಕ ವಾರ್ತೆ) : ಕೊಪ್ಪಳ ನೂತನ ಜಿಲ್ಲಾಧಿಕಾರಿಯಾಗಿ ಎಂ. ಕನಗವಲ್ಲಿ ಅವರು ಶುಕ್ರವಾರದಂದು ಅಧಿಕಾರ ವಹಿಸಿಕೊಂಡರು.
     ಈ ಮೊದಲು ಕೊಪ್ಪಳ ಜಿಲ್ಲಾಧಿಕಾರಿಯಾಗಿದ್ದ ರಮಣದೀಪ್ ಚೌಧರಿ ಅವರು ಹಾವೇರಿ ಜಿಲ್ಲೆಗೆ ವರ್ಗಾವಣೆಯಾದ ಪ್ರಯುಕ್ತ ಡಿಸಿ ಹುದ್ದೆ ತೆರವಾಗಿತ್ತು.  ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್. ಅವರು ಪ್ರಭಾರಿ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.   ಉಡುಪಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಂ. ಕನಗವಲ್ಲಿ ಅವರನ್ನು ಕೊಪ್ಪಳ ಜಿಲ್ಲಾಧಿಕಾರಿ ಹುದ್ದೆಗೆ ವರ್ಗಾವಣೆಗೊಳಿಸಿ ಸರ್ಕಾರ ಇತ್ತೀಚೆಗೆ ಆದೇಶ ಹೊರಡಿಸಿತ್ತು.  ಎಂ. ಕನಗವಲ್ಲಿ ಅವರು ನೂತನ ಜಿಲ್ಲಾಧಿಕಾರಿಯಾಗಿ ಶುಕ್ರವಾರ ಅಧಿಕಾರ ವಹಿಸಿಕೊಂಡರು.   ಎಂ. ಕನಗವಲ್ಲಿ ಅವರು ಮೂಲತಃ ತಮಿಳುನಾಡು ರಾಜ್ಯದವರಾಗಿದ್ದು, ಅಗ್ರಿಕಲ್ಚರ್ ಇಂಜಿನಿಯರಿಂಗ್‍ನಲ್ಲಿ ಪದವಿ ಪಡೆದಿದ್ದು,   2010 ರ ಬ್ಯಾಚ್‍ನಲ್ಲಿ 15 ನೇ ರ್ಯಾಂಕಿಂಗ್ ಪಡೆದು ಐಎಎಸ್ ಅಧಿಕಾರಿಯಾಗಿ ಆಯ್ಕೆಯಾದವರು.  ಮಂಡ್ಯ ಜಿಲ್ಲೆಯಲ್ಲಿ ಪ್ರೊಬೆಷನರಿ ಅಧಿಕಾರಿಯಾಗಿ ತರಬೇತಿ ಪಡೆದು, 2013 ರಲ್ಲಿ ಬೀದರ್ ಜಿಲ್ಲೆ ಉಪವಿಭಾಗಾಧಿಕಾರಿಯಾಗಿ ಒಂದು ವರ್ಷ ಸೇವೆ ಸಲ್ಲಿಸಿದ್ದಾರೆ.  ನಂತರ 2014 ರ ಜನವರಿಯಿಂದ 2015 ರ ನವೆಂಬರ್ 18 ರವರೆಗೆ ಉಡುಪಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.

ಮುಖ್ಯಮಂತ್ರಿಗಳ ಜಿಲ್ಲಾ ಪ್ರವಾಸ ಕಾರ್ಯಕ್ರಮ

ಕೊಪ್ಪಳ, ನ.20 (ಕರ್ನಾಟಕ ವಾರ್ತೆ) : ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ನ. 21 ರಂದು ಕೊಪ್ಪಳ ಜಿಲ್ಲೆ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
     ಮುಖ್ಯಮಂತ್ರಿಗಳು ಅಂದು ಬೆಳಿಗ್ಗೆ ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಹೊರಟು, ಬೆ. 10-50 ಕ್ಕೆ ಗಿಣಿಗೇರಾ ಏರ್‍ಸ್ಟ್ರಿಪ್ (ಎಂಎಸ್‍ಪಿಎಲ್ ವಿಮಾನ ನಿಲ್ದಾಣ) ಕ್ಕೆ ಆಗಮಿಸುವರು. ನಂತರ ತಳಕಲ್ ಗ್ರಾಮಕ್ಕೆ ಭೇಟಿ ನೀಡಿ, ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ಅವರ ತಂದೆಯವರಾದ ದಿವಂಗತ ಬಸವಲಿಂಗಪ್ಪ ರಾಯರಡ್ಡಿ ಅವರ ಪಾರ್ಥೀವ ಶರೀರಕ್ಕೆ ಅಂತಿಮ ಗೌರವ ಸಲ್ಲಿಸುವರು.  ಬೆಳಿಗ್ಗೆ 11-40 ಗಂಟೆಗೆ ಗಿಣಿಗೇರಾ ಏರ್‍ಸ್ಟ್ರಿಪ್‍ಗೆ ಆಗಮಿಸಿ, ಹೆಲಿಕಾಪ್ಟರ್ ಮೂಲಕ ಬಳ್ಳಾರಿ ಜಿಲ್ಲೆ ಹೂವಿನಹಡಗಲಿಗೆ ಪ್ರಯಾಣ ಬೆಳೆಸುವರು.  ಹಡಗಲಿ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನಾ ಸಮಾರಂಭದಲ್ಲಿ ಭಾಗವಹಿಸಿ, ಹೆಲಿಕಾಪ್ಟರ್ ಮೂಲಕ ಕೊಪ್ಪಳ ತಾಲೂಕು ಗಿಣಿಗೇರಾ ಏರ್‍ಸ್ಟ್ರಿಪ್‍ಗೆ ಆಗಮಿಸುವರು.  ಮಧ್ಯಾಹ್ನ 3-45 ಗಂಟೆಗೆ ವಿಶೇಷ ವಿಮಾನ ಮೂಲಕ ಮುಖ್ಯಮಂತ್ರಿಗಳು ಬೆಂಗಳೂರಿಗೆ ಪ್ರಯಾಣ ಬೆಳೆಸುವರು.

ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ ಕಾರ್ಯಕ್ರಮ

ಕೊಪ್ಪಳ ನ. 20 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ನ. 21 ಮತ್ತು 22 ರಂದು ಎರಡು ದಿನಗಳ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
     ಸಚಿವರು ಬೆಳಿಗ್ಗೆ 7-30 ಗಂಟೆಗೆ ಮುನಿರಾಬಾದಿನ ಇಂದ್ರಭವನ ಅತಿಥಿ ಗೃಹಕ್ಕೆ ಆಗಮಿಸುವರು.  ಬೆ. 10-45 ಗಂಟೆಗೆ ಗಿಣಿಗೇರಾ ಏರ್‍ಸ್ಟ್ರಿಪ್‍ಗೆ ಆಗಮಿಸಿ, ಬೆ. 11 ಗಂಟೆಗೆ ಮುಖ್ಯಮಂತ್ರಿಗಳ ಜೊತೆಯಲ್ಲಿ ಯಲಬುರ್ಗಾ ತಾಲೂಕು ತಳಕಲ್ ಗ್ರಾಮಕ್ಕೆ ತೆರಳುವರು.  ನಂತರ ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ಅವರ ತಂದೆಯವರಾದ ದಿವಂಗತ ಬಸವಲಿಂಗಪ್ಪ ರಾಯರಡ್ಡಿ ಅವರ ಪಾರ್ಥೀವ ಶರೀರಕ್ಕೆ ಅಂತಿಮ ಗೌರವ ಸಲ್ಲಿಸಿ,  ಬೆಳಿಗ್ಗೆ 11-40 ಗಂಟೆಗೆ ಗಿಣಿಗೇರಾ ಏರ್‍ಸ್ಟ್ರಿಪ್‍ಗೆ ಆಗಮಿಸುವರು.  ಮಧ್ಯಾಹ್ನ 12-10 ಗಂಟೆಗೆ ಕಾರಟಗಿಗೆ ತೆರಳಿ ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ಕೈಗೊಂಡು ವಾಸ್ತವ್ಯ ಮಾಡುವರು.  ನ. 22 ರಂದು ಕಾರಟಗಿಯಲ್ಲಿ ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ಕೈಗೊಂಡು, ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿಗೆ ಪ್ರಯಾಣ ಬೆಳೆಸುವರು.

ಮಧ್ಯವರ್ತಿಗಳ ಮೋಸಕ್ಕೆ ಬಲಿಯಾಗದಿರಲು ದೇವದಾಸಿ ಮಹಿಳೆಯರಿಗೆ ಸೂಚನೆ

ಕೊಪ್ಪಳ, ನ.20 (ಕರ್ನಾಟಕ ವಾರ್ತೆ) : ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಮಾಜಿ ದೇವದಾಸಿ ಮಹಿಳೆಯರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, ಈ ಸೌಲಭ್ಯಗಳನ್ನು ಒದಗಿಸುವ ನೆಪದಲ್ಲಿ ಕೆಲ ಮಧ್ಯವರ್ತಿಗಳು ಫಲಾನುಭವಿಗಳಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಮಧ್ಯವರ್ತಿಗಳ ಮೋಸಕ್ಕೆ ಬಲಿಯಾಗದಂತೆ ದೇವದಾಸಿ ಪುನರ್ವಸತಿ ಯೋಜನೆಯ ಯೋಜನಾಧಿಕಾರಿಗಳು ಮಾಜಿ ದೇವದಾಸಿ ಮಹಿಳೆಯರಿಗೆ ಸೂಚನೆ ನೀಡಿದ್ದಾರೆ.
     ಕೊಪ್ಪಳ ಜಿಲ್ಲೆಯಲ್ಲಿರುವ 2844 ಮಾಜಿ ದೇವದಾಸಿ ಮಹಿಳೆಯರಿಗೆ ಸರ್ಕಾರದಿಂದ ಪ್ರತಿ ತಿಂಗಳಿಗೆ 1,000 ರೂ ಮಾಶಾಸನವನ್ನು ಎನ್.ಇ.ಎಫ್.ಟಿ ಮುಖಾಂತರ ನೇರವಾಗಿ ಫಲಾನುಭವಿಗಳ ಖಾತೆಗೆ ಬೆಂಗಳೂರಿನ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಜಮಾ ಮಾಡಲಾಗುತ್ತಿದೆ. ಅಲ್ಲದೆ ವಸತಿ ರಹಿತ ನಿವೇಶನ ಹೊಂದಿದ ಫಲಾನುಭವಿಗಳಿಗೆ 1.20 ಲಕ್ಷ ರೂ.ಗಳಲ್ಲಿ ವಸತಿ ಸೌಲಭ್ಯ ಒದಗಿಸಲಾಗುತ್ತಿದೆ. ಈ ಹಿಂದೆ ಮಾಸಿಕ 500 ರೂ. ಇದ್ದ ಮಾಶಾಸನವನ್ನು 2015 ಜುಲೈ ತಿಂಗಳಿನಿಂದ ಮಾಸಿಕ 1,000 ರೂ.ಗಳಿಗೆ ಹೆಚ್ಚಿಸಲಾಗಿದೆ. ಇದನ್ನರಿತ ಕೆಲ ಮಧ್ಯವರ್ತಿಗಳು ಫಲಾನುಭವಿಗಳಿಂದ ಹಣ ವಸೂಲಿ ಮಾಡುತ್ತಿರುವುದಾಗಿ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಫಲಾನುಭವಿಗಳು ನಿಗಮದ ವಸತಿ, ಮಾಶಾಸನ, ಪ್ರೋತ್ಸಾಹಧನ ಸೇರಿದಂತೆ ಇತರೆ ಸೌಲಭ್ಯಗಳನ್ನು ಕೊಡಿಸುವುದಾಗಿ ಬರುವ ಮಧ್ಯವರ್ತಿಗಳ ಮೋಸಕ್ಕೆ ಬಲಿಯಾಗಬಾರದು ಹಾಗೂ ಅಂತಹ ವ್ಯಕ್ತಿಗಳು ಅಥವಾ ಸಂಘ, ಸಂಸ್ಥೆಗಳು ಹಣ ಕೊಡುವಂತೆ ಒತ್ತಾಯಿಸಿದಲ್ಲಿ ಸಮೀಪದ ಪೊಲೀಸ್ ಠಾಣೆಗೆ ದೂರು ಸಲ್ಲಿಸಬೇಕು ಹಾಗೂ ಅಂತಹ ವ್ಯಕ್ತಿಗಳನ್ನು ಸ್ಥಳೀಯ ಪ್ರಮುಖರ ಸಹಾಯದಿಂದ ಪೊಲೀಸರ ವಶಕ್ಕೆ ಒಪ್ಪಿಸಿ, ಈ ಕಛೇರಿಗೆ ಮಾಹಿತಿ ತಿಳಿಸಬೇಕು. ಮಧ್ಯವರ್ತಿಗಳಿಗೆ ಹಣ ನೀಡಿ ವಂಚನೆಗೆ ಬಲಿಯಾದಲ್ಲಿ ಮಾಜಿ ದೇವದಾಸಿ ಫಲಾನುಭವಿಗಳೇ ನೇರವಾಗಿ ಹೊಣೆಗಾರರಾಗುತ್ತಾರೆ ಎಂದು ದೇವದಾಸಿ ಪುನರ್ವಸತಿ ಯೋಜನೆಯ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶೌಚಾಲಯ ನಿರ್ಮಾಣದಿಂದ ಕುಟುಂಬದ ಆರೋಗ್ಯ ಸುಧಾರಣೆ : ರವಿ ಬಸರಿಹಳ್ಳಿ

ಕೊಪ್ಪಳ, ನ.20 (ಕರ್ನಾಟಕ ವಾರ್ತೆ) : ಪ್ರತಿಯೊಂದು ಕುಟುಂಬ ವೈಯಕ್ತಿಕ ಶೌಚಾಲಯವನ್ನು ನಿರ್ಮಿಸಿಕೊಳ್ಳುವುದರಿಂದ ಕುಟುಂಬದ ಆರೋಗ್ಯ ಸುಧಾರಿಸುವುದರ ಜೊತೆಗೆ ಪರಿಸರದ ನೈರ್ಮಲ್ಯ ಕಾಪಾಡಿದಂತಾಗುತ್ತದೆ ಎಂದು ಕೊಪ್ಪಳ ಜಿಲ್ಲಾ ಪಂಚಾಯತ್‍ನ ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ ಹೇಳಿದರು.
     ಕೊಪ್ಪಳ ತಾಲೂಕಾ ಪಂಚಾಯತಿ ವತಿಯಿಂದ ವಿಶ್ವ ಶೌಚಾಲಯ ದಿನಾಚರಣೆ ಅಂಗವಾಗಿ ತಾಲೂಕಿನ ಹಾಸಗಲ್ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಶಾಲಾ ಮಕ್ಕಳಿಂದ ಶೌಚಾಲಯ ಜಾಗೃತಿ ಜಾಥಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
     ರಾಜ್ಯದಲ್ಲಿ ಕಳೆದ ಸಾಲಿನಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ವೈಯಕ್ತಿಕ ಶೌಚಾಲಯ ಹೊಂದಿ ರಾಜ್ಯದಲ್ಲಿ ಕೊಪ್ಪಳ ಜಿಲ್ಲೆ ಮಾದರಿ ಜಿಲ್ಲೆಯಾಗಿದೆ. ಈ ನಿಟ್ಟಿನಲ್ಲಿ ಇನ್ನು ಹೆಚ್ಚಿನ ಪ್ರಮಾಣದಲ್ಲಿ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಲು ಜಿಲ್ಲಾ ಪಂಚಾಯಿತಿಯು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿದೆ ಎಂದು ಅವರು ತಿಳಿಸಿದರು.
     ಕಾರ್ಯಕ್ರಮದಲ್ಲಿ ತಾಲೂಕಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಟಿ.ಕೃಷ್ಣಮೂರ್ತಿ, ಗ್ರಾಮ ಪಂಚಾಯತಿ ಅಧ್ಯಕ್ಷ ಶರಣಪ್ಪ ಬೊಮ್ಮನಾಳ, ಉಪಾಧ್ಯಕ್ಷೆ ದುರುಗವ್ವ ಪೂಜಾರ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕೆ.ವಾಗೀಶ, ಕಾರ್ಯದರ್ಶಿ ಅಮರೇಶ ಕುದ್ರಿಮೋತಿ, ಶಾಲಾ ಮುಖ್ಯೋಪಾಧ್ಯಾಯರು, ಶಾಲಾ ಮಕ್ಕಳು, ಅಂಗನವಾಡಿ ಕಾರ್ಯರ್ತೆಯರು, ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಬಳಿಕ ಶೌಚಾಲಯ ಜಾಗೃತಿ ಜಾಥಾವು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ಡಿ.05 ರಿಂದ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ

ಕೊಪ್ಪಳ, ನ.20 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಡಿ.05 ಮತ್ತು 06 ರಂದು ಎರಡು ದಿನಗಳ ಕಾಲ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಸಲಾಗುವುದು ಹಾಗೂ ಇದೇ ಕ್ರೀಡಾಕೂಟದ ಅಂಗವಾಗಿ ವಿವಿಧ ಸಾಂಸ್ಕøತಿಕ ಸ್ಪರ್ಧೆಗಳನ್ನು ನಗರದ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ. 
     ಸ್ಪರ್ಧೆಗಳ ವಿವರ ಇಂತಿದೆ.  ಕ್ರೀಡಾಕೂಟದ ಪುರುಷ ವಿಭಾಗದಲ್ಲಿ 45 ವರ್ಷದೊಳಗಿನವರಿಗೆ 100 ಮೀ, 200 ಮೀ, 400, 800, 1500 ಮೀ. ಓಟ, ಹರ್ಡಲ್ಸ್, 5000 ಮತ್ತು 10,000 ಮೀ.ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು, ಚಕ್ರ, ಜಾವೆಲಿನ್ ಎಸೆತ, 4*100 ಮತ್ತು 4*400 ರಿಲೇ. ಗುಂಪು ಸ್ಪರ್ಧೆಗಳಲ್ಲಿ ವಾಲಿಬಾಲ್, ಕಬ್ಬಡ್ಡಿ, ಟೇಬಲ್ ಟೆನ್ನಿಸ್ (ಸಿಂಗಲ್ಸ್ ಮತ್ತು ಡಬಲ್ಸ್), ಬ್ಯಾಡ್ಮಿಂಟನ್, ಕೇರಂ, ಕ್ರಿಕೆಟ್ ಕ್ರೀಡೆಗಳನ್ನು ಹಾಗೂ 45 ವರ್ಷ ಮೇಲ್ಪಟ್ಟವರಿಗೆ 100, 200 ಮತ್ತು 400 ಮೀ.ಓಟ, ಗುಂಡು, ಚಕ್ರ ಎಸೆತ ಕ್ರೀಡೆಗಳನ್ನು ಆಯೋಜಿಸಲಾಗುವುದು. 
     ಅದೇ ರೀತಿ ಮಹಿಳಾ ವಿಭಾಗದಲ್ಲಿ 40 ವರ್ಷದೊಳಗಿನವರಿಗೆ 100 ಮೀ, 200 ಮೀ, 400, 800 ಮೀ. ಓಟ, ಹರ್ಡಲ್ಸ್, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು, ಚಕ್ರ, ಜಾವೆಲಿನ್ ಎಸೆತ, 4*100 ಮತ್ತು 4*400 ರಿಲೇ ಹಾಗೂ 40 ವರ್ಷ ಮೇಲ್ಪಟ್ಟವರಿಗೆ 100 ಮೀ, 200 ಮೀ, 400 ಮೀ. ಓಟ, ಗುಂಡು, ಚಕ್ರ ಎಸೆತ, ಗುಂಪು ಆಟಗಳಲ್ಲಿ ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್ (ಸಿಂಗಲ್ಸ್ ಮತ್ತು ಡಬಲ್ಸ್), ಕೇರಂ, ಟೆನಿಕಾಯ್ಟ್, ಥ್ರೋಬಾಲ್ ಕ್ರೀಡೆಗಳನ್ನು ಹಾಗೂ 40 ವರ್ಷ ಮೇಲ್ಪಟ್ಟ ಮಹಿಳೆಯರಿಗೆ 100, 200 ಮತ್ತು 400 ಮೀ. ಓಟ, ಗುಂಡು, ಚಕ್ರ ಎಸೆತ, ಟೇಬಲ್ ಟೆನ್ನಿಸ್, ಬ್ಯಾಡ್ಮಿಂಟನ್ ಸಿಂಗಲ್ಸ್ ಮತ್ತು ಡಬಲ್ಸ್, ಟೆನ್ನಿಕಾಯ್ಡ್ ಸಿಂಗಲ್ಸ್ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು.
     ಕ್ರೀಡಾಕೂಟದ ಅಂಗವಾಗಿ ಏರ್ಪಡಿಸಲಾಗಿರುವ ಸಾಂಸ್ಕøತಿಕ ಸ್ಪರ್ಧೆಗಳ ಹಿಂದುಸ್ತಾನಿ ಸಂಗೀತ ಸ್ಪರ್ಧೆ ವಿಭಾಗದಲ್ಲಿ ಮೌಖಿಕ, ಲಘು ಶಾಸ್ತ್ರೀಯ ಸಂಗೀತ, ಕರ್ನಾಟಕ ಸಂಗೀತ ವಿಭಾಗದಲ್ಲಿ ಶಾಸ್ತ್ರೀಯ ಸಂಗೀತ, ಲಘು ಶಾಸ್ತ್ರೀಯ ಸಂಗೀತ, ನೃತ್ಯ ವಿಭಾಗದಲ್ಲಿ ಜಾನಪದ ನೃತ್ಯ, ಭರತನಾಟ್ಯ, ವಾದ್ಯ ಸಂಗೀತ, ಜಾನಪದ ಗೀತೆ, ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಕಿರು ನಾಟಕ ಸ್ಪರ್ಧೆಗಳನ್ನು ಆಯೋಜಿಸಲಾಗುವುದು.
     ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಬಯಸುವ ಕ್ರೀಡಾಪಟುಗಳು ಕಡ್ಡಾಯವಾಗಿ ಎರಡು ಪಾಸ್‍ಪೋರ್ಟ್ ಅಳತೆಯ ಭಾವಚಿತ್ರ ಹಾಗೂ ಕಾರ್ಯನಿರ್ವಹಿಸುತ್ತಿರುವ ಇಲಾಖೆಯ ಅಧಿಕಾರಿಗಳಿಂದ ಸೇವಾ ಪ್ರಮಾಣ ಪತ್ರದೊಂದಿಗೆ ಡಿ.03 ರ ಸಂಜೆ 4.30 ರೊಳಗಾಗಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರಲ್ಲಿ ಹೆಸರು ನೊಂದಾಸಿಕೊಳ್ಳಬೇಕು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ರಾಜ್ಯ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮಣ್ಣವರ, ಮೊ :9880670925 ಅಥವಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಛೇರಿ ದೂರವಾಣಿ ಸಂಖ್ಯೆ : 08539-201400 ನ್ನು ಸಂಪರ್ಕಿಸಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಲಬುರ್ಗಾ ಪಟ್ಟಣ ಪಂಚಾಯತಿಯಿಂದ ವಿವಿಧ ಸೌಲಭ್ಯ : ಅರ್ಜಿ ಆಹ್ವಾನ

ಕೊಪ್ಪಳ, ನ.20 (ಕರ್ನಾಟಕ ವಾರ್ತೆ) : ಪಟ್ಟಣ ಪಂಚಾಯತ್ ಕಾರ್ಯಾಲಯ, ಯಲಬುರ್ಗಾ ಇವರಿಂದ ಪ್ರಸಕ್ತ ಸಾಲಿನ ಎಸ್.ಎಫ್.ಸಿ ಅನುದಾನದಲ್ಲಿ ಶೇಕಡಾ 7.25 ರ ವೈಯಕ್ತಿಕ ಯೋಜನೆಯಡಿ ಪಟ್ಟಣದ ವಾರ್ಡ್ ನಂ.5 ಮತ್ತು 8 ರಲ್ಲಿ 2 ಪಕ್ಕಾ ಮನೆ ಹಾಗೂ 1 ವೈಯಕ್ತಿಕ ಶೌಚಾಲಯ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
     ಯೋಜನೆಯಡಿ ಯಲಬುರ್ಗಾ ಪಟ್ಟಣದ ವಾರ್ಡ್ ನಂ.5 ಮತ್ತು 8 ರಲ್ಲಿ ಬಡತನ ರೇಖೆಗಿಂತ ಕೆಳಗಿರುವ ಅಲ್ಪಸಂಖ್ಯಾತ ಹಾಗೂ ಇತರೆ ವರ್ಗದ ಜನರು ಆಸ್ತಿ ದಾಖಲಾತಿ, ಆಧಾರ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್ ಬುಕ್, ಪಡಿತರ ಚೀಟಿ, 4 ಸ್ಟಾಂಪ್‍ಸೈಜ್ ಅಳತೆಯ ಭಾವಚಿತ್ರ, ಜಾತಿ ಮತ್ತು ಆದಾಯ ಪ್ರಮಾಣಪತ್ರ ದಾಖಲೆಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ, ಪ್ರಕಟಣೆಗೊಂಡ 7 ದಿನಗಳೊಳಗಾಗಿ ಪಟ್ಟಣ ಪಂಚಾಯತ್ ಕಾರ್ಯಾಲಯ ಯಲಬುರ್ಗಾ ಇವರಿಗೆ ಸಲ್ಲಿಸಬಹುದಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಕಾರ್ಯಾಲಯವನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಯಲಬುರ್ಗಾ ಪಟ್ಟಣ ಪಂಚಾಯತ್ ಕಾರ್ಯಾಲಯದ ಮುಖ್ಯಾಧಿಕಾರಿ ನಾಗೇಶ ತಿಳಿಸಿದ್ದಾರೆ.

ನ. 22 ರಂದು ಈಶಾನ್ಯದ ಐಸಿರಿ 10 ನೇ ಸಂಚಿಕೆ ಪ್ರಸಾರ

ಕೊಪ್ಪಳ ನ. 20 (ಕರ್ನಾಟಕ ವಾರ್ತೆ): ಹೈದ್ರಾಬಾದ್ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿ, ಇಲ್ಲಿನ ಕಲೆ, ಸಂಸ್ಕøತಿ, ಐತಿಹಾಸಿಕ ಹಾಗೂ ಪ್ರವಾಸಿ ತಾಣಗಳು, ಇಲ್ಲಿನ ಪ್ರತಿಭೆಗಳು, ಸಾಧಕರು ಮುಂತಾದ ಸಂಗತಿಗಳನ್ನು ಪರಿಚಯಿಸುವ “ಈಶಾನ್ಯದ ಐಸಿರಿ” ಸರಣಿಯ 10 ನೇ ಸಂಚಿಕೆ ನ. 22 ರಂದು ಬೆಳಿಗ್ಗೆ 10 ಗಂಟೆಗೆ ಹೊಸಪೇಟೆ, ರಾಯಚೂರು ಹಾಗೂ ಕಲಬುರಗಿ ಆಕಾಶವಾಣಿ ಕೇಂದ್ರಗಳಿಂದ ಏಕಕಾಲಕ್ಕೆ ಪ್ರಸಾರವಾಗಲಿದೆ.
      10ನೇ ಸಂಚಿಕೆಯಲ್ಲಿ ಮೂಡಿ ಬರಲಿರುವ ಕಾರ್ಯಕ್ರಮದ ವಿವರಗಳು ಹೀಗಿವೆ. ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರೂ, ಹೈ.ಕ. ಪ್ರದೇಶಾಭಿವೃಧ್ಧಿ ಮಂಡಳಿಯ ಅಧ್ಯಕ್ಷರೂ ಆಗಿರುವ ಡಾ. ಖಮರುಲ್ ಇಸ್ಲಾಂ ಅವರು ಭಾಗವಹಿಸಿ ಕ್ಷೀರಭಾಗ್ಯ ಯೋಜನೆಯ ಕುರಿತು ಮಾತನಾಡಲಿದ್ದಾರೆ. ಬಳ್ಳಾರಿ ಜಿಲ್ಲೆ ವಿಜಯನಗರದ ಶಾಸಕ ಆನಂದ ಸಿಂಗ್ ಅವರು ತಮ್ಮ ಮತಕ್ಷೇತ್ರದ ಅಭಿವೃದ್ಧಿಯ ಬಗ್ಗೆ ತಾವು ಕಂಡಿರುವ ಕನಸುಗಳನ್ನು ಹಂಚಿಕೊಳ್ಳಲಿದ್ದಾರೆ.  ಪರಿಣಿತಾ ಗುಂಪಿನ ಮಹಿಳೆಯರು ಬೀಟರೂಟ್‍ನÀ ಸೌಂದರ್ಯ ಹಾಗೂ ಔಷಧೀಯ ಗುಣಗಳನ್ನು ತಿಳಿಸಿಕೊಡಲಿದ್ದಾರೆ.  ಕಾಂದಾ ಭಜಿ ಮಾಡುವ ವಿಧಾನವನ್ನು ಹೇಳಿಕೊಡಲಿದ್ದಾರೆ.  ನಿವೃತ್ತ ನ್ಯಾಯ ಮೂರ್ತಿ ಎಂ.ಬಿ. ಬಿರಾದಾರ ಅವರು ಆಸ್ತಿ ವರ್ಗಾವಣೆ (ಮ್ಯುಟೇಶನ್) ಮಾಡುವ ವಿಧಾನಗಳ ಬಗ್ಗೆ ಬೆಳಕು ಚೆಲ್ಲಲಿದ್ದಾರೆ.  ಯಾದಗಿರಿಯ ಸಾಹೇಬಗೌಡÀ ವಾಯ್. ಬಿರಾದಾರ ಅವರು ಸೂತ್ರಗಳ ಮೂಲಕ ಭೂಗೋಳದ ಕಲಿಕೆಯನ್ನು ಸುಲಭ ಮಾಡುವ ಬಗೆಯನ್ನು ಕಲಿಸಲಿದ್ದಾರೆ.  ಸೇಡಂ ತಾ. ಕೋಡ್ಲಾ ಗ್ರಾಮದ ಸಾವಯವ ಕೃಷಿಕರಾಗಿರುವ ಸೋಮನಾಥ ರೆಡ್ಡಿಯವರು ತಾವು ಕೃಷಿಯಲ್ಲಿ ಮಾಡಿರುವ ಸಾಧನೆಗಳ ಬಗ್ಗೆ ಹೇಳಲಿದ್ದಾರೆ.  ಹೊಸಪೇಟೆಯ ಹಾಸ್ಯ ಕಲಾವಿದ, ದಂತ ವೈದ್ಯರಾಗಿರುವ ಡಾ.ರಾಘವೇಂದ್ರ ಕಟ್ಟಿಯವರು ನಗೆಹನಿಗಳನ್ನು ಪ್ರಸ್ತುತ ಪಡಿಸಲಿದ್ದಾರೆ.  ಬುಧವಾರ ನ. 25 ರಂದು ಗುರುನಾನಕ್ ಜಯಂತಿ ಇರುವುದರಿಂದ ಈ ಕಾರ್ಯಕ್ರಮದಲ್ಲಿ ‘ಶಬದ್’ ಹಾಡನ್ನು ಕೂಡ ಅಳವಡಿಸಲಾಗಿದೆ.  ಇವುಗಳ ಜೊತೆಗೆ. ಕಳೆದ ವಾರದಲ್ಲಿ ಈ ಭಾಗದ ಆರು ಜಿಲ್ಲೆಗಳಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಕಾರ್ಯಕ್ರಮಗಳು, ಘಟಿಸಿದ ಪ್ರಮುಖ ಸಂಗತಿಗಳನ್ನು ಒಳಗೊಂಡ ‘ವಾರದ ವರದಿ’,  ಸಾಮಾಜಿಕ ವಿಷಯಗಳ ಕುರಿತು ಜಿಂಗಲ್‍ಗಳು ಮೂಡಿ ಬರಲಿವೆ.
     ಸರಣಿಯ ನಿರೂಪಣಾ ಸಾಹಿತ್ಯ ಹಾಗೂ ನಿರ್ಮಾಣದ ಜವಾಬ್ದಾರಿಯನ್ನು ಶ್ರೀs ಸೋಮಶೇಖರ ಎಸ್. ರುಳಿಯವರು  ವಹಿಸಿಕೊಂಡಿದ್ದಾರೆ ಎಂದು ಕಲಬುರಗಿ ಆಕಾಶವಾಣಿ ಮುಖ್ಯಸ್ಥೆ ಅಂಜನಾ ಯಾತನೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಡುಗೆ ಅನಿಲ ಸಿಲಿಂಡರ್, ಒಲೆ ಸೌಲಭ್ಯ : ಅಂಗವಿಕಲರಿಂದ ಅರ್ಜಿ ಆಹ್ವಾನ

ಕೊಪ್ಪಳ, ನ.20 (ಕರ್ನಾಟಕ ವಾರ್ತೆ) : ಪಟ್ಟಣ ಪಂಚಾಯತ್ ಕಾರ್ಯಾಲಯ, ಯಲಬುರ್ಗಾ ಇವರಿಂದ ಪ್ರಸಕ್ತ ಸಾಲಿನ ಎಸ್.ಎಫ್.ಸಿ ಅನುದಾನದಲ್ಲಿ ಶೇ. 3 ರ ಅಂಗವಿಕಲರ ಯೋಜನೆಯಡಿ ನೀಡಲಾಗುತ್ತಿರುವ ಅಡುಗೆ ಅನಿಲ ಸಿಲೆಂಡರ್, ಒಲೆ  ಸೌಲಭ್ಯಕ್ಕಾಗಿ ಅಂಗವಿಕಲರಿಂದ ಅರ್ಜಿ ಆಹ್ವಾನಿಸಲಾಗಿದೆ.
     ಯೋಜನೆಯಡಿ ಸೌಲಭ್ಯ ಪಡೆಯಲಿಚ್ಛಿಸುವ ಯಲಬುರ್ಗಾ ಪಟ್ಟಣ ಪಂಚಾಯತಿ ವ್ಯಾಪ್ತಿಯ ಅಂಗವಿಕಲರು ಭರ್ತಿ ಮಾಡಿದ ಅರ್ಜಿ ನಮೂನೆಯೊಂದಿಗೆ ಅಂಗವಿಕಲರ ಪ್ರಮಾಣ ಪತ್ರ,  ಆಧಾರ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್ ಬುಕ್, ಪಡಿತರ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣಪತ್ರ, 4 ಸ್ಟಾಂಪ್‍ಸೈಜ್ ಅಳತೆಯ ಭಾವಚಿತ್ರ  ದಾಖಲೆಗಳನ್ನು ಲಗತ್ತಿಸಿ, ಪ್ರಕಟಣೆಗೊಂಡ 7 ದಿನಗಳೊಳಗಾಗಿ ಪಟ್ಟಣ ಪಂಚಾಯತ್ ಕಾರ್ಯಾಲಯ ಯಲಬುರ್ಗಾ ಇವರಿಗೆ ಸಲ್ಲಿಸಬಹುದಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಕಾರ್ಯಾಲಯವನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಯಲಬುರ್ಗಾ ಪಟ್ಟಣ ಪಂಚಾಯತ್ ಕಾರ್ಯಾಲಯದ ಮುಖ್ಯಾಧಿಕಾರಿ ನಾಗೇಶ ತಿಳಿಸಿದ್ದಾರೆ.  

Thursday, 19 November 2015

ನ. 21 ರಂದು ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆ

ಕೊಪ್ಪಳ ನ. 19 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆ ನ. 21 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆಯಲಿದೆ.
     ಸಭೆಯ ಅಧ್ಯಕ್ಷತೆಯನ್ನು ಸಂಸದ ಸಂಗಣ್ಣ ಕರಡಿ ಅವರು ವಹಿಸುವರು.  ಸಭೆಯಲ್ಲಿ ಕೇಂದ್ರ ಹಾಗೂ ಕೇಂದ್ರ ಪುರಸ್ಕøತ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಯಲಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ತಿಳಿಸಿದ್ದಾರೆ.

ಕೃಷಿ ಲಾಭದಾಯಕವಾಗಲು ಅನವಶ್ಯಕ ವೆಚ್ಚ ನಿಯಂತ್ರಣ ಅಗತ್ಯ- ಡಾ. ರಾಮದಾಸ್

ಕೊಪ್ಪಳ ನ. 19 (ಕರ್ನಾಟಕ ವಾರ್ತೆ): ಕೃಷಿಯಲ್ಲಿ ರೈತರು ಅನವಶ್ಯಕ ವೆಚ್ಚವನ್ನು ನಿಯಂತ್ರಿಸಿದಲ್ಲಿ, ಕೃಷಿ ಲಾಭದಾಯಕವಾಗಲು ಸಹಕಾರಿಯಾಗಲಿದೆ ಎಂದು ಜಂಟಿಕೃಷಿ ನಿರ್ದೇಶಕ ಡಾ. ಎ. ರಾಮದಾಸ್ ಅವರು ಅಭಿಪ್ರಾಯಪಟ್ಟರು.
     ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೃಷಿ ಸಂಶೋಧನಾ ಕೇಂದ್ರ, ಸಿರಗುಪ್ಪ, ಕೃಷಿ ಇಲಾಖೆ ಹಾಗೂ ಹೈದರಾಬಾದ ಇವರ ಆಶ್ರಯದಲ್ಲಿ ಜಿಲ್ಲೆಯ ಕೃಷಿ ಅಧಿಕಾರಿಗಳಿಗೆ ಮೆಕ್ಕೆಜೋಳ ಪೋಷಕಾಂಶ ನಿರ್ವಹಣೆಯ ಕುರಿತು ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಒಂದು ದಿನದ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
       ಕೃಷಿಯಲ್ಲಿ ಅನವಶ್ಯಕ ವೆಚ್ಚ ನಿಯಂತ್ರಿಸಿದರೆ ಕೃಷಿ ಲಾಭದಾಯಕವಾಗಲಿದೆ.  ದುಬಾರಿಯಾದಂತಹ ರಸಗೊಬ್ಬರಗಳ ಬಳಕೆಯಿಂದ ಕೃಷಿ ಭೂಮಿ ತನ್ನ ಫಲವತ್ತತೆಯನ್ನು ಕಳೆದುಕೊಳ್ಳುವುದರ ಜೊತೆಗೆ, ಇದರಲ್ಲಿ ರೋಗ ಮತ್ತು ಕೀಟಬಾಧೆ ಹೆಚ್ಚಾಗಿ ಕಾಡಲಿದೆ.  ಸಾವಯವ ಕೃಷಿ ಪದ್ಧತಿ ಕೃಷಿಯನ್ನು ಲಾಭದಾಯಕವಾಗಿಸಲು ಸಹಕಾರಿಯಾಗಲಿದೆ ಎಂದು ಜಂಟಿಕೃಷಿ ನಿರ್ದೇಶಕ ಡಾ. ರಾಮದಾಸ್ ಅಭಿಪ್ರಾಯಪಟ್ಟರು.
      ಅಂತರ ರಾಷ್ಟ್ರೀಯ ಸಸ್ಯ ಪೋಷಕಾಂಶಗಳ ಸಂಸ್ಥೆ ನಿರ್ದೇಶಕ ಡಾ. ಟಿ. ಸತ್ಯನಾರಾಯಣ ರವರು ಮಾತನಾಡಿ ರೈತರಿಗೆ ಬೆಳೆಯಲ್ಲಿ ಉತ್ಪಾದಕತೆ ಹೆಚ್ಚಿಸುವುದು ಮತ್ತು ಅದನ್ನು ಲಾಭದಾಯಕವಾಗಿಸುವ ನಿಟ್ಟಿನಲ್ಲಿ ಬೆಳೆಗಳಿಗೆ ಸೂಕ್ತ ಪೋಷಕಾಂಶÀಗಳನ್ನು ಅಭಿವೃದ್ಧಿಪಡಿಸಿ ರೈತರಿಗೆ ನೆರವಾಗುವುದು ನಮ್ಮ ಸಂಸ್ಥೆಯ ಉದ್ದೇಶ ಎಂದು ತಿಳಿಸಿದರು. 
     ವಿಸ್ತರಣಾ ಮುಂದಾಳು, ಡಾ. ಎಮ್. ಬಿ. ಪಾಟೀಲ ರವರು ಅಧ್ಯಕ್ಷತೆ ವಹಿಸಿ ಕೊಪ್ಪಳ ಜಿಲ್ಲೆಯಲ್ಲಿ ಮೆಕ್ಕಜೋಳವು ಮುಖ್ಯ ಬೆಳೆಯಾಗಿದ್ದು, ಅದಕ್ಕೆ ಸಮಗ್ರ ಪೋಷಕಾಂಶಗಳ ನಿರ್ವಹಣೆ ಮಾಡಿದಲ್ಲಿ ಹೆಚ್ಚಿನ ಲಾಭಗಳಿಸಲು ಸಾಧ್ಯ ಎಂದು ತಿಳಿಸಿದರು.  ಡಾ. ಬಸವಣ್ಣೆಪ್ಪ, ಆವರಣ ಮುಖ್ಯಸ್ಥರು, ಕೃಷಿ ಸಂಶೋಧನಾ ಕೇಂದ್ರ, ಸಿರಗುಪ್ಪ, ಪ್ರಾಸ್ತಾವಿಕವಾಗಿ ಮಾತನಾಡಿದರು.  ಗಂಗಾವತಿ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕ ಡಾ. ಎಸ್.ಎನ್.ಭಟ್ಟ ರವರು ಜಿಲ್ಲೆಯ ಮಣ್ಣಿನ ಪೋಷಕಾಂಶಗಳ ಕೊರತೆ ಹಾಗೂ ನಿರ್ವಹಣೆ ಬಗ್ಗೆ ತಿಳಿಸಿದರು.  ಡಾ. ಸಿ.ಎಮ್. ಕಾಲಿಬಾವಿ, ವಿಸ್ತರಣಾ ಮುಂದಾಳು, ಕೃವಿಶಿಕೇಂದ್ರ, ಹಡಗಲಿ, ಡಾ. ಅಶೋಕ ಕುಮಾರ್ ಗಡ್ಡಿ, ಮಣ್ಣು ಮತ್ತು ನೀರು ವಿಜ್ಞಾನಿಗಳು, ಕೃಸಂಕೇ, ಸಿರಗುಪ್ಪ, ಡಾ. ರೂಪಶ್ರೀ, ವಿಷಯ ತಜ್ಞರು, ಕೃವಿಕೇ, ಗಂಗಾವತಿ ರವರು ಉಪಸ್ಥಿತರಿದ್ದರು,   ಕವಿತಾ ಉಳ್ಳಿಕಾಶಿ   ವಂದಿಸಿದರು, ಯುಸೂಫಅಲಿ ನಿಂಬರಗಿ ರವರು ಕಾರ್ಯಕ್ರಮ ನಿರೂಪಿಸಿದರು.

ಚಳಿಗಾಲದಲ್ಲಿ ಲಾಭ ತರುವ ತೋಟಗಾರಿಕೆ ಬೆಳೆಗಳು : ರೈತರಿಗೆ ಸಲಹೆ

ಕೊಪ್ಪಳ ನ. 19 (ಕರ್ನಾಟಕ ವಾರ್ತೆ): ರಾಜ್ಯದಲ್ಲಿ ಮಳೆಗಾಲ ಮುಗಿದು, ಚಳಿಗಾಲ ಆರಂಭವಾಗುತ್ತಿದೆ.  ಈ ಸಂದರ್ಭದಲ್ಲಿ ತೋಟಗಾರಿಕೆಯ ಅಲ್ಪಾವಧಿ ಬೆಳೆಗಳನ್ನು ಬೆಳೆದು ಲಾಭ ಕಂಡುಕೊಳ್ಳುವುದರ ಬಗ್ಗೆ ಕೊಪ್ಪಳ ತೋಟಗಾರಿಕೆ ಇಲಾಖೆ ರೈತರಿಗೆ ಸಲಹೆಗಳನ್ನು ನೀಡಿದೆ
     ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಮಳೆಗಾಲ ಮುಗಿದು, ಚಳಿಗಾಲ ಆರಂಭವಾಗುತ್ತಿದೆ. ಉತ್ತಮ ಮಳೆ ಇಲ್ಲದ ಕಾರಣ ರೈತರಲ್ಲಿ ಆತಂಕವಿರುವುದು ಸಹಜ. ಇಂತಹ ಸಂದರ್ಭದಲ್ಲಿ ಅಲ್ಪಾವಧಿ ಬೆಳೆಗಳನ್ನು ಬೆಳೆದು ರೈತರು ಲಾಭ ಕಂಡುಕೊಳ್ಳುವ ನಿಟ್ಟಿನಲ್ಲಿ ತೋಟಗಾರಿಕೆ  ಇಲಾಖೆ ರೈತರಿಗೆ ಸಲಹೆ ನೀಡಿದೆ.
ಹೂವಿನ ಬೆಳೆಗಳಾದ, ಚೆಂಡು ಹೂ, ಗಲಾಟೆ ಹೂಗಳು ಲಾಭದಾಯಕವಾಗಿವೆ. ಅದರಂತೆ ಅನೇಕ ತರಕಾರಿಗಳನ್ನು  ಅಲ್ಪಾವಧಿಯಲ್ಲಿ ಕಡಿಮೆ ನೀರನ್ನು ಬಳಸಿ ಬೆಳೆಯಬಹುದಾಗಿದೆ. ಲಭ್ಯವಿದ್ದ ನೀರನ್ನು ಹನಿ ನೀರಾವರಿ, ತುಂತುರು ನೀರಾವರಿ ಅಳವಡಿಸಿಕೊಂಡು ನೀರನ್ನು ಮಿತವಾಗಿ ಬಳಸಿ ಅನೇಕ ಬಗೆಯ ತರಕಾರಿಗಳನ್ನು ಬಳೆದು ಲಾಭ ಗಳಿಸಬಹುದಾಗಿದೆ.
ಚಳಿಗಾಲದ ಬೆಳೆಗಳಲ್ಲಿ ಎರಡು ವಿಧಗಳಿವೆ.  ಮೊದಲನೆಯದು, ಮಳೆಗಾಲದ ಕೊನೆಯಲ್ಲಿ ನಾಟಿ  ಅಥವಾ ಬಿತ್ತನೆ ಮಾಡಿ ಚಳಿಗಾಲದಲ್ಲಿ ಬೆಳವಣಿಗೆ ಹಂತ ಮುಗಿಸಿ, ಚಳಿಗಾಲದ ಅಂತ್ಯದಲ್ಲಿ ಅಥವಾ ಬೇಸಿಗೆ ಕಾಲದ ಆರಂಭದಲ್ಲಿ ಅಥವಾ ಮಧ್ಯದಲ್ಲಿ ಕಟಾವಿಗೆ ಬರುವ ಕೆಲವು ಬೆಳೆಗಳು ಉದಾಹರಣೆಗೆ ಮೆಣಸಿನಕಾಯಿ, ದೊಣ್ಣೆ ಮೆಣಸಿನಕಾಯಿ ಇತ್ಯಾದಿ.  ಇನ್ನೊಂದು ವಿಧದ ಬೆಳೆಗಳೆಂದರೆ ಚಳಿಗಾಲದಲ್ಲಿ ನಾಟಿ ಅಥವಾ ಬಿತ್ತನೆ ಮಾಡಿ ಅಲ್ಪಾವಧಿಯಲ್ಲೇ ಅಂದರೆ ಬೇಸಿಗೆ ಆರಂಭ ಆಗುವುದರೊಳಗೆ  ಕಟಾವಿಗೆ ಬರುವ ತರಕಾರಿಗಳು. ಉದಾಹರಣೆಗೆ ಎಲೆಕೋಸು, ಹೂ ಕೋಸು, ಪಾಲಕ ಮುಂತಾದ ಸೊಪ್ಪಿನ ತರಕಾರಿಗಳಲ್ಲದೇ ಗಡ್ಡೆ ಜಾತಿಗೆ ಸೇರಿದ ಸೀಮೆ ಈರುಳ್ಳಿ, ಟರ್ನಿಪ್ ಇತ್ಯಾದಿ.  ಇನ್ನು ದ್ವಿದಳ ಧಾನ್ಯಗಳಲ್ಲಿ ಬಟಾಣಿ, ತಿಂಗಳ ಹುರುಳಿ ಮುಖ್ಯವಾದವು.   ಇದಲ್ಲದೇ, ಬೇರು ಜಾತಿಗೆ ಸೇರಿದ ಗಜ್ಜರಿ, ಮೂಲಂಗಿ, ಸಾಂಬಾರ ಜಾತಿಗೆ ಸೇರಿದ ಕೊತ್ತಂಬರಿ ಮುಂತಾದ ಬೆಳೆಗಳು 70 ರಿಂದ 80 ದಿನಗಳಲ್ಲಿ ಕಟಾವಿಗೆ ಬರುತ್ತವೆ. ಕೆಲವು ತಳಿಗಳು ಇನ್ನೂ ಕಡಿಮೆ ಅವಧಿಯಲ್ಲಿ ಕಟಾವಿಗೆ ಸಿಧ್ಧವಾಗುತ್ತವೆ. ಇದಲ್ಲದೇ ಹೊಸ ತಾಂತ್ರಿಕತೆಗಳಾದ ಹಸಿರುಮನೆ ಹಾಗೂ ಕಡಿಮೆ ವೆಚ್ಚದ ನೆರಳು ಪರದೆ ಅಳವಡಿಸಿಕೊಂಡು ಕೇವಲ 10 ಗುಂಟೆ ಜಾಗದಲ್ಲಿ ಕಡಿಮೆ ನೀರಿನ ನಿರ್ವಹಣೆಯಲ್ಲಿ ಅಧಿಕ ಹಾಗೂ ಗುಣಮಟ್ಟದ ಇಳುವರಿ ಪಡೆದು ಹೆಚ್ಚಿನ ಲಾಭ ಮಾಡಿಕೊಳ್ಳಬಹುದು.  ಇವೆಲ್ಲ ಯೋಜನೆಗಳು ತೋಟಗಾರಿಕೆ ಇಲಾಖೆಯಲ್ಲಿ ಲಭ್ಯವಿದೆ.
ಆದರೆ, ಚಳಿಗಾಲದಲ್ಲಿ ರಸಹೀರುವ ಕೀಟಗಳ ಮತ್ತು ಬೂದಿ ರೋಗದಂತಹ ಪೀಡೆಗಳ ಹಾವಳಿ ಜಾಸ್ತಿ ಇರುತ್ತದೆ.  ಸಾವಯವ ರೀತಿಯಲ್ಲಿ ತರಕಾರಿ ಬೇಸಾಯ ಲಾಭಕರವಷ್ಟೇ ಅಲ್ಲದೇ ಪರಿಸರ ಪ್ರೇಮಿ ಬೇಸಾಯ ಕ್ರಮವಾಗಿದೆ.  ಆದಾಗ್ಯೂ, ರೋಗ , ಕೀಟಗಳ ಹಾವಳಿ ಹೆಚ್ಚಾದಾಗ ತಜÐರ ಸಲಹೆ ಪಡೆದು ಒಂದೆರಡು ಸಾರಿ ಶಿಫಾರಸು ಮಾಡಿದ ಪೀಡೆ ನಾಶಕಗಳನ್ನು ಮಾತ್ರ ಬಳಕೆ ಮಾಡಿದರೆ, ಖರ್ಚೂ ಕಡಿಮೆ ಮಾಡಬಹುದಲ್ಲದೇ, ಗುಣಮಟ್ಟದ ಉತ್ಪನ್ನ ಪಡೆಯಬಹುದಾಗಿದೆ. ರೈತರು ಇದರ ಲಾಭ ಪಡೆದುಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಕೊಪ್ಪಳ, ಗಂಗಾವತಿ, ಸಹಾಯಕ ನಿರ್ದೇಶಕರು, ಯಲಬುರ್ಗಾ, ಕುಷ್ಟಗಿ ಅಥವಾ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ, ಹಾರ್ಟಿಕ್ಲಿನಿಕ್ , ಕೊಪ್ಪಳ ವನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತೋಟಗಾರಿಕೆ ಅತ್ಯುತ್ತಮ ತಾಂತ್ರಿಕ ಅನ್ವೇಷಕರ ಪ್ರಶಸ್ತಿ : ಅರ್ಜಿ ಆಹ್ವಾನ

ಕೊಪ್ಪಳ ನ. 19 (ಕರ್ನಾಟಕ ವಾರ್ತೆ): ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ನಾಲ್ಕನೇಯ ತೋಟಗಾರಿಕೆ ಮೇಳವನ್ನು ಡಿ. 19 ರಿಂದ 21 ರವರೆಗೆ ತೋಟಗಾರಿಕೆ ವಿವಿಯ ಆವರಣದಲ್ಲಿ ಆಯೋಜಿಸಿದ್ದು, ಈ ಮೇಳದಲ್ಲಿ ರೈತರು ತಮ್ಮ ಕ್ಷೇತ್ರದಲ್ಲಿ ತಾವೇ ಸ್ವತ: ಕಂಡುಹಿಡಿದ ಪ್ರಯೋಗಗಳನ್ನು ಮಾಡಿ ಆವಿಷ್ಕಾರ ಮಾಡಿದ ತಂತ್ರಜ್ಞಾನಗಳನ್ನು ಅಥವಾ ಯಂತ್ರೋಪಕರಣಗಳನ್ನು ಅಥವಾ ನೂತನ ತಳಿಗಳನ್ನು ಪ್ರದರ್ಶನಕ್ಕೆ ಇಡಲು ಅರ್ಜಿಗಳನ್ನು ಅಹ್ವಾನಿಸಲಾಗಿದೆ.
     ಇಚ್ಛೆವುಳ್ಳ ರೈತರು ಸ್ವತ: ತಾವೇ ಕಂಡುಹಿಡಿದ/ಆವಿಷ್ಕಾರಿಸಿದ ಹೊಸ ತಳಿಗಳು, ವಿನೂತನ ಪದ್ಧತಿಗಳು, ತಾಂತ್ರಿಕತೆಗಳು, ಯಂತ್ರೋಪಕರಣಗಳು, ತೋಟಗಾರಿಕೆಯಲ್ಲಿ ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿ ಪಡೆದ ಉತ್ತಮ ಇಳುವರಿಯ ಮಾದರಿಗಳು, ಉತ್ಪನ್ನಗಳು ಹಾಗೂ ಇತರೆ ಅವಿಷ್ಕಾರಗಳನ್ನು ತೋಟಗಾರಿಕೆ ಮೇಳದಲ್ಲಿ ಪ್ರದರ್ಶಿಸಲು ತಮ್ಮ ಹೆಸರು, ಸ್ಥಳ, ದೂರವಾಣಿ ಸಂಖ್ಯೆ ಮತ್ತು ಪ್ರದರ್ಶಿಸುವ ಅವಿಷ್ಕಾರಗಳ ವಿವರ ಮತ್ತು ಅವುಗಳ ಫೋಟೋಗಳನ್ನು ವಿಸ್ತರಣಾ ನಿರ್ದೇಶಕರು, ವಿಸ್ತರಣಾ ನಿರ್ದೇಶನಾಲಯ, ಉದ್ಯಾನಗಿರಿ, ಹುಬ್ಬಳ್ಳಿ ಬೈಪಾಸ್ (ಸೀಮಿಕೆರಿ ಕ್ರಾಸ್ ಹತ್ತಿರ), ನವನಗರ, ಬಾಗಲಕೋಟ- 587104 hortifairuhsb@gmail.com ಪೋನ ನಂ. (08354-201352) ಇವರಿಗೆ ನ. 30 ರೊಳಗಾಗಿ ಸಲ್ಲಿಸಬೇಕು.  ತೋಟಗಾರಿಕೆ ವಿ.ವಿ.ಯು ಅನುಮೋದಿಸಿದ ರೈತರಿಗೆ ಡಿ. 10 ರೊಳಗಾಗಿ ತಿಳಿಸಲಾಗುವುದು. ಆಯ್ಕೆಗೊಂಡ ರೈತರು ತಮ್ಮ ಆವಿಷ್ಕಾರಗಳು ತೋಟಗಾರಿಕೆ ಮೇಳದ ಅವಧಿ 19 ರಿಂದ 21ನೇ ಡಿಸೆಂಬರ್, 2015 ರವರೆಗೆ ಪ್ರದರ್ಶಿಸಲು ತಿಳಿಸಲಾಗುವುದು. ಪ್ರದರ್ಶಿಸಲು ಪ್ರತ್ಯೇಕ ವಿಶಾಲವಾದ ಮಳಿಗೆಯ ವ್ಯವಸ್ಥೆ ಮಾಡಲಾಗುತ್ತದೆ.
ತೋಟಗಾರಿಕೆ ಮೇಳದಲ್ಲಿ ರೈತರು ಪ್ರದರ್ಶಿಸಿದ ಪ್ರದರ್ಶನಗಳಲ್ಲಿ ಒಂದು ವಿನೂತನ ಹಾಗೂ ಉತ್ತಮ ಅನ್ವೇಷಣೆಯನ್ನು ಆಯ್ಕೆ ಮಾಡಿದ ರೈತ / ರೈತ ಮಹಿಳೆಗೆ “ಅತ್ಯುತ್ತಮ ತಾಂತ್ರಿಕ ಅನ್ವೇಷಕ / ಅನ್ವೇಷಕಿ” ಪ್ರಶಸ್ತಿಯ ಪ್ರಮಾಣ ಪತ್ರ ಹಾಗೂ ರೂ 5,000 ಗಳ ನಗದು ಪ್ರಶಸ್ತಿಯೊಂದಿಗೆ ಸನ್ಮಾನಿಸಲಾಗುವುದು ಎಂದು ವಿಸ್ತರಣಾ ನಿರ್ದೇಶಕ ಎ.ಬಿ. ಪಾಟೀಲ್ ತಿಳಿಸಿದ್ದಾರೆ.

ಹಿಂಗಾರು ಹಂಗಾಮಿನ ಬೆಳೆಗಳಿಗೆ ನೀರು ಹರಿಸಲಾಗುವುದಿಲ್ಲ: ಭೋಜಾನಾಯ್ಕ ಕಟ್ಟೀಮನಿ

ಕೊಪ್ಪಳ, ನ.19 (ಕರ್ನಾಟಕ ವಾರ್ತೆ) : ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಹಿಂಗಾರು ಹಂಗಾಮಿನ ಬೆಳೆಗಳಿಗೆ ನೀರು ಹರಿಸಲಾಗುವುದಿಲ್ಲ ಎಂದು ತುಂಗಭದ್ರಾ ಯೋಜನಾ ವೃತ್ತ, ಮುನಿರಾಬಾದ್‍ನ ಅಧೀಕ್ಷಕ ಅಭಿಯಂತರ ಹಾಗೂ ನೀರಾವರಿ ಅಧಿಕಾರಿ ಭೋಜಾನಾಯ್ಕ ಕಟ್ಟೀಮನಿ ಅವರು ತಿಳಿಸಿದ್ದಾರೆ.
     ನ.16 ರಂದು ಬೆಂಗಳೂರಿನ ವಿಕಾಸ ಸೌಧದಲ್ಲಿ ಜರುಗಿದ ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿಯ 102 ನೇ ಸಭೆಯಲ್ಲಿ ತುಂಗಭದ್ರಾ ಯೋಜನೆ ವ್ಯಾಪ್ತಿಯ ಹಿಂಗಾರು ಹಂಗಾಮಿನ ಬೆಳೆಗಳಿಗೆ ನೀರು ಹರಿಸದಿರಲು ತೀರ್ಮಾನಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ರೈತರು ಬೆಳೆದ ಹಿಂಗಾರು ಹಂಗಾಮಿನ ಬೆಳೆಗಳಿಗೆ ನೀರು ಹರಿಸಲಾಗುವುದಿಲ್ಲ ಹಾಗೂ ಈಗ ಲಭ್ಯವಾಗುವ ನೀರಿನ ಪ್ರಮಾಣ ಆಧರಿಸಿ, ಕುಡಿಯುವ ನೀರಿನ ಸಲುವಾಗಿ ನೀರನ್ನು ಕಾಯ್ದಿರಿಸಿ, ಮುಂಗಾರು ಹಂಗಾಮಿನಲ್ಲಿ ಬೆಳೆದು ನಿಂತ ಬೆಳೆಗಳನ್ನು ಸಂರಕ್ಷಿಸಲು ಲಭ್ಯತೆ ಅನುಸಾರ ನೀರು ಹರಿಸಲಾಗುವುದು ಎಂದು ತುಂಗಭದ್ರಾ ಯೋಜನಾ ವೃತ್ತ, ಮುನಿರಾಬಾದ್‍ನ ಅಧೀಕ್ಷಕ ಅಭಿಯಂತರ ಹಾಗೂ ನೀರಾವರಿ ಅಧಿಕಾರಿ ಭೋಜಾನಾಯ್ಕ ಕಟ್ಟೀಮನಿ ಅವರು ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.

ಅಪಘಾತ ವಿಮೆ ಯೋಜನೆಯಡಿ ಖಾಸಗಿ ವಾಹನ ಚಾಲಕರ ನೊಂದಣಿ

ಕೊಪ್ಪಳ, ನ.19 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲಾ ಕಾರ್ಮಿಕ ಇಲಾಖೆ ಮತ್ತು ಪ್ರಾದೇಶಿಕ ಸಾರಿಗೆ ಕಛೇರಿ ಇವರುಗಳ ಸಂಯುಕ್ತಾಶ್ರಯದಲ್ಲಿ ಸರ್ಕಾರದ ವತಿಯಿಂದ ಇರುವ 2 ಲಕ್ಷ ರೂ. ಅಪಘಾತ ವಿಮೆ ಯೋಜನೆಯಡಿ ಗುರುವಾರ ನಗರದ ಹೊಸಪೇಟೆ, ಗದಗ ರಸ್ತೆಯಲ್ಲಿ ಖಾಸಗಿ ವಾಹನ ಚಾಲಕರ ನೊಂದಣಿ ಕಾರ್ಯವನ್ನು ಕೈಗೊಳ್ಳಲಾಯಿತು.
     ಪ್ರಾದೇಶಿಕ ಸಾರಿಗೆ ಇಲಾಖೆಯ ಸಾರಿಗೆ ನಿರೀಕ್ಷಕ ಜೆ.ಪಿ. ಪ್ರಕಾಶ, ಕಾರ್ಮಿಕ ಅಧಿಕಾರಿ ಶಿವಕುಮಾರ. ಜಿ, ಕಾರ್ಮಿಕ ನಿರೀಕ್ಷಕ ಬಸಯ್ಯ ಅಂಗಡಿ ನೊಂದಣಿ ಕಾರ್ಯದ ನೇತೃತ್ವ ವಹಿಸಿದ್ದರು.  ವಿಮಾ ನೊಂದಣಿ ಕಾರ್ಯಕ್ರಮದಲ್ಲಿ 75 ಖಾಸಗಿ ವಾಹನ ಚಾಲಕ ಫಲಾನುಭವಿಗಳನ್ನು ನೊಂದಾಯಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಸಿಬ್ಬಂದಿಗಳಾದ ವೀರಣ್ಣ ವ್ಹಿ.ಕುಂಬಾರ, ಮಾರುತಿ ನಾಯಕರ್  ಉಪಸ್ಥಿತರಿದ್ದರು.