Thursday, 31 July 2014
ವಿಶೇಷ ಬಸ್ ಮೂಲಕ ಕಾನೂನು ವಿದ್ಯಾಪ್ರಸಾರ ಕಾರ್ಯಕ್ರಮಕ್ಕೆ ಜಿಲ್ಲಾ ನ್ಯಾಯಾಧೀಶರಿಂದ ಚಾಲನೆ
ತುಂಗಭದ್ರಾ ಜಲಾಶಯದ ನೀರಿನ ಮಟ್ಟ ದಿ: 31-07-2014
ಒಳ ಹರಿವು : 49,883 ಕ್ಯೂಸೆಕ್
ಹೊರ ಹರಿವು : 4,163 ಕ್ಯೂಸೆಕ್
ನೀರಿನ ಮಟ್ಟ : 1630. 13 ಅಡಿ
ಗರಿಷ್ಠ ಮಟ್ಟ : 1633 ಅಡಿ
ನೀರಿನ ಸಂಗ್ರಹ : 88. 942 ಟಿ.ಎಂ.ಸಿ.
ಗರಿಷ್ಠ ಸಂಗ್ರಹ ಸಾಮಥ್ರ್ಯ : 100. 855 ಟಿ.ಎಂ.ಸಿ
-------------------------
ಕಳೆದ ವರ್ಷ ಇದೇ ದಿನದಂದು (31-7-2013) :
ಒಳ ಹರಿವು : 1,31,908 ಕ್ಯೂಸೆಕ್
ಹೊರ ಹರಿವು : 1,32,397 ಕ್ಯೂಸೆಕ್
ನೀರಿನ ಮಟ್ಟ : 1631. 02 ಅಡಿ
ಗರಿಷ್ಠ ಮಟ್ಟ : 1633 ಅಡಿ
ನೀರಿನ ಸಂಗ್ರಹ : 93. 390 ಟಿ.ಎಂ.ಸಿ.
ಸಂಕಷ್ಟದಲ್ಲಿರುವ ದಾಳಿಂಬೆ ಬೆಳೆಗಾರರ ಸಾಲ ಮನ್ನಾಕ್ಕೆ ಸಂಸದ ಸಂಗಣ್ಣ ಕರಡಿ ಒತ್ತಾಯ
ಕೊಪ್ಪಳ ಜು. 31 (ಕ.ವಾ) : ಕೊಪ್ಪಳ ಜಿಲ್ಲೆಯೂ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ
ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ದ್ರಾಕ್ಷಿ ಮತ್ತು ದಾಳಿಂಬೆ ಬೆಳಗಾರರ ಸಾಲ ಮನ್ನಾ ಮಾಡಲು ಅಗತ್ಯ
ಕ್ರಮ ಕೈಗೊಳ್ಳುವಂತೆ ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಲೋಕಸಭೆ
ಅಧಿವೇಶನದಲ್ಲಿ ಈ ಕುರಿತು ಮಾತನಾಡಿದ ಅವರು, ದ್ರಾಕ್ಷಿ ಮತ್ತು ದಾಳಿಂಬೆ ತೋಟಗಾರಿಕೆ ಬೆಳೆಗಳು ಕೊಪ್ಪಳ
ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಪ್ರಮುಖ ಬೆಳೆಗಳಾಗಿವೆ. ಕರ್ನಾಟಕದಲ್ಲಿ ಅತಿಹೆಚ್ಚು ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತಿದ್ದು,
ಕಳೆದ 12-14 ವರ್ಷಗಳಿಂದ ಜಿಲ್ಲೆಯಲ್ಲಿನ ತೋಟಗಾರಿಕೆ ಬೆಳೆ ಬೆಳೆಯುವ ರೈತರ ಪರಿಸ್ಥಿತಿ ಚಿಂತಾಜನಕವಾಗಿದೆ. 2001 ರಿಂದ 04 ರವರೆಗೆ ಬರಗಾಲ, 2005 ರಲ್ಲಿ ನೆರೆಹಾವಳಿ,
2006 ಮತ್ತು 07 ರಲ್ಲಿ ನೆರೆ ಹಾವಳಿ ಮತ್ತು ಬರ ಪರಿಸ್ಥಿತಿ, 2008 ರಲ್ಲಿ ಫಸಲು ಬರುವ ಸಮಯದಲ್ಲಿ
ಅಕಾಲಿಕ ಮಳೆ, 2009 ರಲ್ಲಿ ಭಾರಿ ನೆರೆಹಾವಳಿ, 2011 ರಿಂದ 2012 ರವರೆಗೆ ಭೀಕರ ಬರಗಾಲದಿಂದ ಈ ಭಾಗದ
ರೈತ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾನೆ. ಈ ಭಾಗದ
ದಾಳಿಂಬೆ ಬೆಳೆಯಲ್ಲಿ ಕಾಣಿಸಿಕೊಂಡ ದುಂಡಾಣು ಅಂಗಮಾರಿ ರೋಗ ದಾಳಿಂಬೆ ಬೆಳೆಯನ್ನು ಸಂಪೂರ್ಣ ನಾಶಪಡಿಸಿದೆ. ಇದರಿಂದಾಗಿ ಇಲ್ಲಿನ ಬೆಳೆಗಾರರು ತೀರ್ವ ಆರ್ಥಿಕ ಸಂಕಷ್ಟದಲ್ಲಿದ್ದು,
ರೈತರು ಪಡೆದ ದೀರ್ಘಾವಧಿ, ಮಧ್ಯಮಾವಧಿ ಸಾಲಗಳನ್ನು ಬ್ಯಾಂಕುಗಳಿಗೆ ಮರು ಪಾವತಿಸಲು ಸಾಧ್ಯವಾಗದೆ ನಿಸ್ಸಹಾಯಕಾಗಿದ್ದಾರೆ. ಮೇಲಾಗಿ ಬೆಳೆಗಾರರ ಸಾಲ, ಬಡ್ಡಿಯೊಂದಿಗೆ ವರ್ಷದಿಂದ ವರ್ಷಕ್ಕೆ
ಬೆಳೆಯುತ್ತಿದೆ. ಬೆಳೆಗಾರರು ಈ ಕುರಿತು ಸರ್ಕಾರಕ್ಕೆ
ಮನವಿ ಸಲ್ಲಿಸಿದ ನಂತರ ಸರ್ಕಾರ, ತೋಟಗಾರಿಕೆ ಇಲಾಖೆ ಹಾಗು ಬ್ಯಾಂಕರ್ಸ್ ಸಮಿತಿಗಳಿಗೆ ಸಮಸ್ಯೆ ಅಧ್ಯಯನ
ಮಾಡಿ ವರದಿ ಸಲ್ಲಿಸಲು ಸೂಚಿಸಿತ್ತು. ವರದಿ ಸಲ್ಲಿಕೆ
ಆಧ ನಂತರ ಸರ್ಕಾರ ಹಣಕಾಸು ಇಲಾಖೆಗೆ ಒಪ್ಪಿಸಿದೆ.
ತದನಂತರ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ
ಕೇಂದ್ರ ಹಣಕಾಸು ಕಾರ್ಯದರ್ಶಿಗಳ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಅಂತರ ಇಲಾಖಾ ಕೋರ್ಕಮಿಟಿ ರಚಿಸಲಾಯ್ತು. ರೈತರ ಸಾಲಕ್ಕೆ ಸಂಬಂಧಪಟ್ಟಂತೆ ಪರಿಹಾರ ಹಾಗೂ ಸಾಲ ಮರುಪಾವತಿ
ಪರಿಷ್ಕøತ ಯೋಜನೆ ರೂಪಿಸಲು ಸೂಚಿಸಲಾಗಿದ್ದು, ಈ ಸಮಿತಿ 3 ಬಾರಿ ಸಭೆ ಸೇರಿ, ರೈತರ ಕೆಲವು ಬೇಡಿಕೆಗಳನ್ನು
ಪರಿಹರಿಸಿದೆ. ಕೃಷಿ ಅಥವಾ ತೋಟಗಾರಿಕೆ ಇಲಾಖೆಯು ಬ್ಯಾಕ್ಟೀರಿಯಲ್
ಬ್ರೈಟ್ ರೋಗ ನಿವಾರಣೆ ಮಾಡಲು ಹಾಗೂ ರೈತರ ಸಾಲ ಮನ್ನಾ ಮಾಡಲು ಕೇಂದ್ರ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಬೇಕು
ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ ಎಂದು ಸಂಸದರ
ಕಚೇರಿ ಪ್ರಕಟಣೆ ತಿಳಿಸಿದೆ.
ವಿದ್ಯಾರ್ಥಿನಿಯರು ಆತ್ಮರಕ್ಷಣಾ ಕಲೆ ಕಲಿಯುವುದು ಅಗತ್ಯ- ವಸಂತ ಪ್ರೇಮಾ
ಕೊಪ್ಪಳ ಜು. 31 (ಕ.ವಾ) : ಯಾವುದೇ ಕೀಟಲೆ ಮಾಡುವಂತಹ ತಂಟೆಕೋರರಿಗೆ ತಕ್ಕ ಪಾಠ ಕಲಿಸುವಂತಾಗಲು,
ವಿದ್ಯಾರ್ಥಿನಿಯರು ಕರಾಟೆಯಂತಹ ಆತ್ಮರಕ್ಷಣಾ ಕಲೆಯನ್ನು ಕಲಿಯುವುದು ಇಂದಿನ ಅಗತ್ಯಗಳಲ್ಲೊಂದಾಗಿದೆ
ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಸಂತಪ್ರೇಮಾ ಅಭಿಪ್ರಾಯಪಟ್ಟರು.
ಜಿಲ್ಲಾ
ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ವಿದ್ಯಾ ವಿಕಾಸ ಶಿಕ್ಷಣ ಸಂಸ್ಥೆ ಇವರ
ಸಂಯುಕ್ತಾಶ್ರಯದಲ್ಲಿ ಭಾಗ್ಯನಗರದಲ್ಲಿ ಕಾನೂನು ಸಾಕ್ಷರತಾ ಅಂಗವಾಗಿ ಗುರುವಾರ ಏರ್ಪಡಿಸಲಾಗಿದ್ದ ವಿಶೇಷ
ಕಾನೂನು ವಿದ್ಯಾಪ್ರಸಾರ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಮಕ್ಕಳ
ಹಕ್ಕುಗಳ ರಕ್ಷಣೆಗಾಗಿ ವಿಶೇಷ ಕಾಯ್ದೆ ಕಾನೂನುಗಳು ರಚನೆಯಾಗಿದ್ದರೂ, ಹಕ್ಕುಗಳ ರಕ್ಷಣೆಗೆ ತೀವ್ರ
ತೊಂದರೆ ಉಂಟಾಗುತ್ತಿದೆ. ಹೆಣ್ಣು ಮಕ್ಕಳ ಮೇಲೆ ಲೈಂಗಿಕ
ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಾಗಿ ಪೋಕ್ಸೋ
ನಂತಹ ಕಠಿಣ ಕಾನೂನು ಜಾರಿಯಾಗಿದ್ದು, ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಲಿದೆ. ವಿದ್ಯಾರ್ಥಿನಿಯರು ಸಹ ತಮ್ಮ ಜೀವನ ಶೈಲಿಯನ್ನು ಬದಲಿಸಿಕೊಳ್ಳುವುದು
ಅನಿವಾರ್ಯವಾಗಿದ್ದು, ತಂಟೆಕೋರರಿಗೆ ತಕ್ಕ ಪಾಠ ಕಲಿಸುವ ನಿಟ್ಟಿನಲ್ಲಿ ಕರಾಟೆಯಂತಹ ಆತ್ಮರಕ್ಷಣಾ ಕಲೆಯನ್ನು
ಕಲಿತುಕೊಳ್ಳುವುದು ಅಗತ್ಯವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಸಂತಪ್ರೇಮಾ
ಅವರು ಹೇಳಿದರು.
ಜಿಲ್ಲಾ
ಸರ್ಕಾರಿ ವಕೀಲರಾದ ಬಿ. ಶರಣಪ್ಪ, ವಿದ್ಯಾ ವಿಕಾಸ ಶಿಕ್ಷಣ ಸಂಸ್ಥೆಯ ಮಂಜುನಾಥ್ ಕಾರ್ಯಕ್ರಮದಲ್ಲಿ
ಉಪಸ್ಥಿತರಿದ್ದರು. ವಕೀಲ ಎಂ. ಹನುಮಂತರಾವ್ ಅವರು
ಲೈಂಗಿಕ ಹಲ್ಲೆಗಳಿಂದ ಚಿಕ್ಕ ಮಕ್ಕಳ ರಕ್ಷಣಾ ಕಾಯ್ದೆ ಕುರಿತು ಹಾಗೂ ವಕೀಲ ಎಸ್.ಬಿ. ಪಾಟೀಲ್ ಅವರು
ಕಡ್ಡಾಯ ಶಿಕ್ಷಣ ಕಾಯ್ದೆ ಕುರಿತು ಇದೇ ಸಂದರ್ಭದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಶಾಲಾ ಮಟ್ಟದ ಮಕ್ಕಳ ಸುರಕ್ಷ ಸಮಿತಿ ರಚನೆಗೆ ಡಿಸಿ ಆರ್.ಆರ್. ಜನ್ನು ಸೂಚನೆ
ಕೊಪ್ಪಳ ಜು. 31 (ಕ.ವಾ) : ಜಿಲ್ಲೆಯ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ
ಮೇಲಿನ ಲೈಂಗಿಕ ಕಿರುಕುಳ ಇತರೆ ದೌರ್ಜನ್ಯಗಳ ಪ್ರಕರಣಗಳನ್ನು ತಡೆಗಟ್ಟುವ ಸಲುವಾಗಿ ಎಲ್ಲಾ ಶಾಲೆಗಳಲ್ಲಿ
‘ಮಕ್ಕಳ ಸುರಕ್ಷಾ ಸಮಿತಿ’ಯನ್ನು ಕಡ್ಡಾಯವಾಗಿ ಹತ್ತು ದಿನಗಳ ಒಳಗಾಗಿ ರಚಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ
ಕೊಪ್ಪಳ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ
ನೀಡಿದರು.
ಮಹಿಳೆಯರು,
ಮಕ್ಕಳು ಹಾಗೂ ಶಾಲಾ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ, ಕಿರುಕುಳ, ಅತ್ಯಾಚಾರದಂತಹ ಪ್ರಕರಣಗಳು
ಪದೇ ಪದೇ ವರದಿಯಾಗುತ್ತಿರುವುದು ನಿಜಕ್ಕೂ ಸಮಾಜ ತಲೆ ತಗ್ಗಿಸುವಂತಹ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ಇಂತಹ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ
ಶಿಕ್ಷಣ ಇಲಾಖೆ ಕೆಲವು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದು, ಎಲ್ಲಾ ಶಾಲೆಗಳು, ಶಿಕ್ಷಣ ಇಲಾಖೆಯ
ಅಧಿಕಾರಿಗಳು ಸೂಚನೆಗಳನ್ನು ಅನುಷ್ಠಾನಗೊಳಿಸುವುದು ಅಗತ್ಯವಾಗಿದೆ. ಸರ್ಕಾರಿ ಶಾಲೆಗಳೂ ಸೇರಿದಂತೆ ಎಲ್ಲಾ ಶಾಲೆಗಳು ಆಯಾ ಶಾಲೆಯ
ಹೆಸರು, ಶಿಕ್ಷಕರು, ಸಿಬ್ಬಂದಿಗಳು, ವಾಹನಚಾಲಕರು, ಇತ್ಯಾದಿ ಎಲ್ಲ ಸಿಬ್ಬಂದಿಗಳ ಹೆಸರು, ದೂರವಾಣಿ
ಸಂಖ್ಯೆ, ವಿಳಾಸ ಇತ್ಯಾದಿ ವಿವರಗಳನ್ನು ಆ ಶಾಲಾ ವ್ಯಾಪ್ತಿಯ ಪೊಲೀಸ್ ಠಾಣೆಗೆ ತಪ್ಪದೆ ನೀಡಬೇಕು. ಶಿಕ್ಷಕರು ಸೇರಿದಂತೆ ಸಿಬ್ಬಂದಿಗಳ ಯಾವುದೇ ಬದಲಾವಣೆಯಾದಲ್ಲಿ,
ಕಾಲಾಕಾಲಕ್ಕೆ ಪೊಲೀಸ್ ಠಾಣೆಗೆ ತಪ್ಪದೆ ಮಾಹಿತಿ ಒದಗಿಸಬೇಕು. ಎಲ್ಲಾ ಶಾಲೆಗಳ ಶಿಕ್ಷಕರು, ಸಿಬ್ಬಂದಿಗಳು, ಶಾಲಾ ಮಕ್ಕಳು
ಸೇರಿದಂತೆ ಎಲ್ಲರಿಗೂ ಭಾವಚಿತ್ರವಿರುವ ಗುರುತಿನ ಕಾರ್ಡ್ ಅನ್ನು ನೀಡಬೇಕು. ಪ್ರತಿಯೊಂದು ಶಾಲಾ ಮಟ್ಟದಲ್ಲಿ
‘ಮಕ್ಕಳ ಸುರಕ್ಷಾ ಸಮಿತಿ’ಯನ್ನು ಹತ್ತು ದಿನಗಳ ಒಳಗಾಗಿ ರಚಿಸಬೇಕು. ಈ ಸಮಿತಿಯಲ್ಲಿ ಆಯಾ ಶಾಲೆಯ ಮುಖ್ಯಸ್ಥರು ಅಧ್ಯಕ್ಷರು, ಶಿಕ್ಷಕರು,
ವಿದ್ಯಾರ್ಥಿಗಳ ಪೋಷಕರು, ಮಕ್ಕಳು, ಭದ್ರತೆ ಒದಗಿಸುವ ಸಿಬ್ಬಂದಿ, ಮಕ್ಕಳ ಅಭಿವೃದ್ಧಿಯಲ್ಲಿ ಆಸಕ್ತಿ
ಇರುವ ಶಾಲೆಗೆ ಸಂಬಂಧಪಡದ ವ್ಯಕ್ತಿಯೊಬ್ಬರು ಸೇರಿದಂತೆ ಐವರು ಈ ಸಮಿತಿಯಲ್ಲಿರಬೇಕು. ವಿದ್ಯಾರ್ಥಿಗಳು ಅಥವಾ ಇತರೆ ಯಾವುದೇ ದೂರುಗಳ ಬಗ್ಗೆ ಸಮಿತಿಯು
ಪ್ರತಿ ತಿಂಗಳು ಪೋಷಕರು ಮತ್ತು ಸಿಬ್ಬಂದಿಗಳೊಂದಿಗೆ ಸಭೆ ನಡೆಸಿ ಪರಾಮರ್ಶೆ ನಡೆಸಬೇಕು. ಶಾಲೆಗಳಲ್ಲಿ ದೂರು/ಸಲಹಾ ಪೆಟ್ಟಿಗೆಯನ್ನು ಅಳವಡಿಸಿ, ಕಾಲ
ಕಾಲಕ್ಕೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಶಿಕ್ಷಕರು,
ಚಾಲಕರು, ಪರಿಚಾರಕರು, ಅಡುಗೆಯವರು ಇತ್ಯಾದಿ ಸಿಬ್ಬಂದಿಗಳ ಭಾವಚಿತ್ರಗಳನ್ನು ಶಾಲಾ ಸೂಚನಾ ಫಲಕದಲ್ಲಿ
ಹಾಕಬೇಕು. ಅಲ್ಲದೆ ಶಿಕ್ಷಣ ಇಲಾಖೆ ನೀಡಿರುವ ಸೂಚನೆಗಳನ್ನು
ಎಲ್ಲ ಶಾಲೆಗಳು ಕಟ್ಟುನಿಟ್ಟಾಗಿ ಪಾಲಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆರ್.ಆರ್.
ಜನ್ನು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ
ಭಾಗವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರೋಹಿಣಿ ಸೆಪಟ್ ಕಟೋಚ್ ಅವರು ಮಾತನಾಡಿ, ಆಯಾ
ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿನ ಎಲ್ಲ ಶಾಲೆಗಳ ಶಿಕ್ಷಕರು, ಸಿಬ್ಬಂದಿವರ್ಗಗಳ ವಿಳಾಸ, ದೂರವಾಣಿಯನ್ನು
ಸಂಗ್ರಹಿಸಲಾಗುವುದು. ಪೊಲೀಸ್ ಠಾಣೆಗಳಿಗೆ ಮಕ್ಕಳಿಂದ,
ಪೋಷಕರಿಂದ, ಸಿಬ್ಬಂದಿಗಳಿಂದ ಶಾಲೆ ಅಥವಾ ಮಕ್ಕಳ ಕುರಿತು ಬರುವ ದೂರುಗಳನ್ನು ಠಾಣೆಗಳಲ್ಲಿ ಕೂಡಲೆ
ಸ್ವೀಕರಿಸಿ, ತ್ವರಿತವಾಗಿ ಕ್ರಮ ಕೈಗೊಳ್ಳಾಗುವುದು.
ಸಾರ್ವಜನಿಕ ಸ್ಥಳಗಳಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಕಿರುಕುಳ, ಚುಡಾಯಿಸುವುದು, ಮುಂತಾದ ಅಹಿತಕರ
ಚಟುವಟಿಕೆಗಳ ಮೇಲೆ ಪೊಲೀಸ್ ಸಿಬ್ಬಂದಿ ನಿಗಾ ವಹಿಸಲು ಸೂಚನೆ ನೀಡಲಾಗಿದೆ ಎಂದರು.
ಸಭೆಯಲ್ಲಿ
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ ಉದಪುಡಿ, ಅಪರ ಜಿಲ್ಲಾಧಿಕಾರಿ ಡಾ.
ಸುರೇಶ್ ಇಟ್ನಾಳ್, ಡಿಡಿಪಿಐ ಜಿ.ಹೆಚ್. ವೀರಣ್ಣ, ಸೇರಿದಂತೆ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು,
ಪೊಲೀಸ್, ಆರೋಗ್ಯ, ಸಮಾಜ ಕಲ್ಯಾಣ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಿವಿಧ
ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ತುಂಗಭದ್ರಾ ಜಲಾಶಯ ಭರ್ತಿಗೆ ಕೇವಲ 3 ಅಡಿ ಬಾಕಿ : ನದಿ ಪಾತ್ರದ ಜನರಿಗೆ ಎಚ್ಚರಿಕೆ
ಕೊಪ್ಪಳ ಜು. 31 (ಕರ್ನಾಟಕ ವಾರ್ತೆ): ತುಂಗಭದ್ರಾ ಜಲಾಶಯ ಭರ್ತಿಗೆ ಕೇವಲ 03 ಅಡಿ ಮಾತ್ರ
ಬಾಕಿ ಉಳಿದಿದ್ದು, ಜಲಾಶಯ ಯಾವುದೇ ಕ್ಷಣದಲ್ಲಿ ಭರ್ತಿಯಾಗಿ, ಹೆಚ್ಚುವರಿ ನೀರನ್ನು ಕ್ರಸ್ಟ್ ಗೇಟ್
ಮೂಲಕ ನದಿಗೆ ಯಾವುದೇ ಕ್ಷಣದಲ್ಲಿ ನೀರು ಬಿಡುವ ಸಾಧ್ಯತೆ ಇದ್ದು, ನದಿ ಪಾತ್ರದಲ್ಲಿನ ಸಾರ್ವಜನಿಕರು
ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.
ಗುರುವಾರದಂದು ತುಂಗಭದ್ರಾ ಜಲಾಶಯದ ನೀರಿನ ಮಟ್ಟವು 1630.13 ಅಡಿ ಇದ್ದು, ಒಳಹರಿವು
47,050 ಕ್ಯೂಸೆಕ್ಗಳಾಗಿರುತ್ತದೆ. ಜಲಾಶಯದ ಗರಿಷ್ಟ ನೀರಿನ ಮಟ್ಟ 1633 ಅಡಿ ಆಗಿದೆ. ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ
ಜಲಾಶಯವು ಶೀಘ್ರ ಭರ್ತಿಯಾಗುವ ಸಾಧ್ಯತೆಗಳಿದೆ. ಯಾವುದೇ ಸಮಯದಲ್ಲಿ ಜಲಾಶಯದಿಂದ ತುಂಗಭದ್ರಾ ನದಿಗೆ
ಹೆಚ್ಚುವರಿ ನೀರನ್ನು ಹೊರಬಿಡಲಾಗುವುದರಿಂದ, ಜಲಾಶಯದ ಕೆಳಭಾಗದ ನದಿ ಪಾತ್ರದಲ್ಲಿ ವಾಸಿಸುವ ಸಾರ್ವಜನಿಕರು
ತಮ್ಮ ಜನ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ತುಂಗಭದ್ರಾ ಯೋಜನಾ ವೃತ್ತದ ಅಧೀಕ್ಷಕ
ಅಭಿಯಂತರ ಭೋಜಾನಾಯ್ಕ ಕಟ್ಟಿಮನಿ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಮಕ್ಕಳ ಉತ್ತಮ ಕಲಿಕೆಗೆ ಪೂರಕ ವಾತಾವರಣ ಕಲ್ಪಿಸಿ- ಆರ್.ಆರ್. ಜನ್ನು
ಕೊಪ್ಪಳ ಜು. 31 (ಕ.ವಾ) : ಮಕ್ಕಳು ಶಾಲೆಯಲ್ಲಿ ಉತ್ತಮ ಕಲಿಕೆಗೆ ಪೂರಕ ವಾತಾವರಣವನ್ನು ಶಿಕ್ಷಕರು
ಕಲ್ಪಿಸುವ ಮೂಲಕ, ಅವರಲ್ಲಿ ಆತ್ಮವಿಶ್ವಾಸವನ್ನು ಬೆಳೆಸುವ ಕಾರ್ಯವನ್ನು ಶಿಕ್ಷಕರು ಮಾಡಬೇಕು ಎಂದು
ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಶಿಕ್ಷಕರಿಗೆ ಕರೆ ನೀಡಿದರು.
ಜಿಲ್ಲಾ
ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಗುಳೇ
ಹೋಗುವುದು ಕಂಡು ಬರುತ್ತಿದ್ದು, ಅಂತಹ ಕುಟುಂಬದವರು, ತಮ್ಮ ಮಕ್ಕಳ ಶೈಕ್ಷಣಿಕ ಭವಿಷ್ಯವನ್ನು ಹಾಳು
ಮಾಡದೆ, ಉತ್ತಮ ಶಿಕ್ಷಣ ನೀಡಲು ಶ್ರಮಿಸಬೇಕು. ವಿದ್ಯಾರ್ಥಿಗಳ
ಅನುಕೂಲಕ್ಕಾಗಿ ಜಿಲ್ಲೆಯಲ್ಲಿ ಹೆಚ್ಚು, ಹೆಚ್ಚು ವಸತಿ ನಿಲಯಗಳನ್ನು ಸ್ಥಾಪಿಸಲು ಜಿಲ್ಲಾ ಪಂಚಾಯತಿ
ಕ್ರಮ ಕೈಗೊಳ್ಳುತ್ತಿದೆ ಎಂದರು.
ಪ್ರಾಸ್ತಾವಿಕವಾಗಿ
ಮಾತನಾಡಿದ ಡಿಡಿಪಿಐ ಜಿ.ಹೆಚ್. ವೀರಣ್ಣ ಅವರು, ಕಳೆದ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶದಲ್ಲಿ
ಜಿಲ್ಲೆ ಶೇ. 81. 69 ರಷ್ಟು ಫಲಿತಾಂಶ ಪಡೆಯುವ ಮೂಲಕ ರಾಜ್ಯದಲ್ಲಿ 13 ನೇ ಸ್ಥಾನ ಗಳಿಸಿದೆ. 2012-13 ನೇ ಸಾಲಿನಲ್ಲಿ ಜಿಲ್ಲೆ 16 ನೇ ಸ್ಥಾನದಲ್ಲಿ ಗಳಿಸಿತ್ತು. ಈ ಪೈಕಿ ಜಿಲ್ಲೆಯ ಸರ್ಕಾರಿ ಶಾಲೆಗಳೇ ಖಾಸಗಿ ಶಾಲೆಗಳಿಗಿಂತ
ಉತ್ತಮ ಸಾಧನೆ ತೋರಿವೆ. ಕಳೆದ ಬಾರಿ ಜಿಲ್ಲೆಯಲ್ಲಿ ಫಲಿತಾಂಶ ಸುಧಾರಣೆಗಾಗಿ ಜಿಲ್ಲಾ ಮತ್ತು ತಾಲೂಕು
ಮಟ್ಟದಲ್ಲಿ ವಿಷಯ ಪರಿಣಿತರಿಂದ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗಿತ್ತು. ಯಲಬುರ್ಗಾ ತಾಲೂಕು ಕುಕನೂರಿನಲ್ಲಿ ವಿಷಯ ತಜ್ಞರೊಂದಿಗೆ
ವಿದ್ಯಾರ್ಥಿಗಳ ನೇರ ಸಂವಾದ, ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಇದರಿಂದ, ಫಲಿತಾಂಶ ಸುಧಾರಣೆಗೆ ಸಹಕಾರಿಯಾಗಿದ್ದು, ಈ ವರ್ಷ
ಇನ್ನಷ್ಟು ಉತ್ತಮ ಫಲಿತಾಂಶಕ್ಕೆ ಕ್ರಿಯಾ ಯೋಜನೆ ಸಿದ್ಧಪಡಿಸಿ, ಶ್ರಮಿಸಲಾಗುವುದು. 2012-13 ಹಾಗೂ 2013-14 ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ
ಅತಿಹೆಚ್ಚು ಅಂಕಗಳಿಸಿ ಉತ್ತೀರ್ಣರಾದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸರ್ಕಾರ ಕೊಡಮಾಡಿದ ಕಂಪ್ಯೂಟರ್
ಅನ್ನು ಆ. 15 ರಂದು ನಡೆಯುವ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು
ವಿತರಣೆ ಮಾಡುವರು. ಜಿಲ್ಲಾ ಮತ್ತು ಕೊಪ್ಪಳ ತಾಲೂಕು
ಮಟ್ಟದ ವಿದ್ಯಾರ್ಥಿಗಳಿಗೆ ಕೊಪ್ಪಳದಲ್ಲಿ ಹಾಗೂ ಉಳಿದ ತಾಲೂಕು ಮಟ್ಟದ ವಿದ್ಯಾರ್ಥಿಗಳಿಗೆ ಆಯಾ ತಾಲೂಕು
ಕೇಂದ್ರದಲ್ಲಿ ಕಂಪ್ಯೂಟರ್ ವಿತರಣೆ ಮಾಡಲಾಗುವುದು ಎಂದರು.
ಸಮಾರಂಭದ
ಅಧ್ಯಕ್ಷತೆ ವಹಿಸಿ ಮಾತನಾಡಿದ, ಜಿ.ಪಂ. ಅಧ್ಯಕ್ಷ ಅಮರೇಶ್ ಕುಳಗಿ ಅವರು, ಜಿಲ್ಲೆಯಲ್ಲಿ ಫಲಿತಾಂಶ
ಸುಧಾರಣೆಗೆ ಶ್ರಮಿಸಿದ ಶಿಕ್ಷಕರು, ವಿದ್ಯಾರ್ಥಿಗಳು ಅಭಿನಂದನಾರ್ಹರು. ಜಿಲ್ಲೆಯ ಫಲಿತಾಂಶ ಇನ್ನಷ್ಟು ಸುಧಾರಿಸಲು ಜಿಲ್ಲಾ ಪಂಚಾಯತಿ
ಎಲ್ಲ ಅಗತ್ಯ ನೆರವನ್ನು ನೀಡಲಿದೆ ಎಂದರು.
ಕಾರ್ಯಕ್ರಮದಲ್ಲಿ
ಯುನಿಸೆಫ್ನ ಹರೀಶ್ ಜೋಗಿ, ಮುರಳಿ ಕೃಷ್ಣ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿದ್ದರು. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ
ವಿದ್ಯಾರ್ಥಿಗಳಿಗೆ ಹಾಗೂ ಶೇ. 100 ರಷ್ಟು ಫಲಿತಾಂಶ ಪಡೆದ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಇದೇ ಸಂದರ್ಭದಲ್ಲಿ
ಸನ್ಮಾನಿಸಲಾಯಿತು.
Wednesday, 30 July 2014
ತುಂಗಭದ್ರಾ ಜಲಾಶಯದ ನೀರಿನ ಮಟ್ಟ ದಿ: 30-07-2014
ಒಳ ಹರಿವು : 49,176 ಕ್ಯೂಸೆಕ್
ಹೊರ ಹರಿವು : 4,344 ಕ್ಯೂಸೆಕ್
ನೀರಿನ ಮಟ್ಟ : 1628. 65 ಅಡಿ
ಗರಿಷ್ಠ ಮಟ್ಟ : 1633 ಅಡಿ
ನೀರಿನ ಸಂಗ್ರಹ : 84. 996 ಟಿ.ಎಂ.ಸಿ.
ಗರಿಷ್ಠ ಸಂಗ್ರಹ ಸಾಮಥ್ರ್ಯ : 100. 855 ಟಿ.ಎಂ.ಸಿ
-------------------------
ಒಳ ಹರಿವು : 1,27,213 ಕ್ಯೂಸೆಕ್
ಹೊರ ಹರಿವು : 1,47,334 ಕ್ಯೂಸೆಕ್
ನೀರಿನ ಮಟ್ಟ : 1631. 04 ಅಡಿ
ಗರಿಷ್ಠ ಮಟ್ಟ : 1633 ಅಡಿ
ನೀರಿನ ಸಂಗ್ರಹ : 93. 463 ಟಿ.ಎಂ.ಸಿ.
ಯಲಬುರ್ಗಾ :ಮ್ಯಾನ್ಯಯಲ್ ಸ್ಕ್ಯಾವೆಂಜರ್ಗಳ ಮತ್ತು ಅವರ ಅವಲಂಬಿತರ ಬಗ್ಗೆ ಸಮೀಕ್ಷೆ
ಕೊಪ್ಪಳ,ಜು.30(ಕರ್ನಾಟಕ ವಾರ್ತೆ): ಮ್ಯಾನ್ಯುಯಲ್ ಸ್ಕ್ಯಾವೆಂಜರ್ಗಳ ಗುರುತಿಸುವಿಕೆ ಮತ್ತು
ಪುನರ್ವಸತಿಗೆ ರಾಷ್ಟ್ರಾದ್ಯಂತ ಸಮೀಕ್ಷೆಯನ್ನು ಕೈಗೊಳ್ಳಲಾಗಿದೆ. ಮ್ಯಾನ್ಯುಯಲ್ ಸ್ಕ್ಯಾವೆಂಜರ್ಗಳ
ಮತ್ತು ಅವರ ಅವಲಂಬಿತರ ನಿಖರವಾದ ಸಂಖ್ಯೆಯನ್ನು ಮತ್ತು ಅವರನ್ನು ಸದರ ವೃತ್ತಿಯಿಂದ ವಿಮುಕ್ತಿಗೊಳಿಸಿ
ಪುನರ್ವಸತಿಗೊಳಿಸಲು ಸಮೀಕ್ಷೆ ಕೈಗೊಳ್ಳಲು ಸರ್ಕಾರ ಉದ್ದೇಶಿಸಿದೆ.
ಯಲಬುರ್ಗಾ ಪಟ್ಟಣದಲ್ಲಿ ಯಾವುದೇ ಆಧುನಿಕ ಸಲಕರಣೆಗಳಿಲ್ಲದೇ ಕೈಯಿಂದ ಮಲವನ್ನು ಸ್ವಚ್ಛಗೊಳಿಸುವ,
ಸಾಗಿಸುವ ಕೆಲಸದಲ್ಲಿ ತೊಡಗಿರುವ ಅಥವಾ ಆ ತರಹದ ಕೆಲಸದಲ್ಲಿ ಖಾಸಗಿ ವ್ಯಕ್ತಿಯಿಂದ ಅಥವಾ ಖಾಸಗಿ ಏಜೆನ್ಸಿಯಿಂದ
ತೊಡಗಿಸಲಾದ ವ್ಯಕ್ತಿ ಅಥವಾ ಒಣ ಶೌಚಾಲಯ ಅಥವಾ ಒಣ ಶೌಚಾಲಯದಿಂದ ಹೊರಹೊಮ್ಮುವ ಮಲವನ್ನು ಕೈಯಿಂದ ತೆಗೆಯುವ
ವ್ಯಕ್ತಿಗೆ ಮ್ಯಾನ್ಯುಯೆಲ್ ಸ್ಕ್ಯಾವೆಂಜರ್ಗಳು ಎನ್ನುತ್ತಾರೆ.
ಇಂತಹ ಮ್ಯಾನ್ಯುಯೆಲ್ ಸ್ಕ್ಯಾವೆಂಜರ್ಗಳು
ಈ ಸ್ಕ್ಯಾವೆಂಜರ ವೃತ್ತಿಯನ್ನು ಮಾಡುವುದು ಶಿಕ್ಷಾರ್ಹ ಅಪರಾದವಾಗಿದ್ದು, ಇಂತಹ ಸ್ಕ್ಯಾವೆಂಜರ್ ವೃತ್ತಿ
ಯಲಬುರ್ಗಾ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಇದ್ದಲ್ಲಿ ಆ.07 ರೊಳಗಾಗಿ ನಿಗದಿತ ನಮೂನೆಯಲ್ಲಿ ಘೋಷಣೆ
ಮಾಡಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:
08534-220528, ಬಸವಲಿಂಗಪ್ಪ ಭಾಸ್ಕರ ಮೊ.9844282692, ಮಹಾಂತೇಶ ಕುಂದಗೋಳ ಮೊ.9620017306 ಇವರನ್ನು
ಸಂಪರ್ಕಿಸಬಹುದಾಗಿದೆ ಎಂದು ಯಲಬುರ್ಗಾ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಶಲ ಕರ್ಮಿಗಳಿಗೆ ಗುಂಪು ವಸತಿ ಕಾರ್ಯಾಗಾರ : ಅರ್ಜಿ ಆಹ್ವಾನ
ಕೊಪ್ಪಳ ಜು.30(ಕರ್ನಾಟಕ ವಾರ್ತೆ): ಯಲಬುರ್ಗಾ ಪಟ್ಟಣ ಪಂಚಾಯತಿ ವತಿಯಿಂದ ಪ್ರಸಕ್ತ ಸಾಲಿಗೆ
ಕುಶಲ ಕರ್ಮಿಗಳಿಗೆ ಗುಂಪು ವಸತಿ ಕಾರ್ಯಾಗಾರ ಹಾಗೂ ವೈಯಕ್ತಿಕ ಕುಶಲ ಕರ್ಮಿಗಳಿಗೆ ವಸತಿ ಕಾರ್ಯಾಗಾರ
ನಿರ್ಮಾಣಕ್ಕಾಗಿ ಕ್ರಿಯಾ ಯೋಜನೆ ಸಲ್ಲಿಸಬೇಕಾಗಿದ್ದು, ಆಸಕ್ತ ಕುಶಲಕರ್ಮಿ ಕಾರ್ಮಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕುಶಲ ಕರ್ಮಿಗಳಿಗೆ ಬಿದಿರು, ಬೆತ್ತದ,
ಬಡಗಿ, ಕಮ್ಮಾರಿಕೆ, ಚರ್ಮಗಾರಿಕೆ, ಕರಕುಶಲ ವಸ್ತು ತಯಾರಿಕೆ, ತೆಂಗಿನ ನಾರಿನ ಉತ್ಪನ್ನ ತಯಾರಿಕೆ,
ಬೆಳ್ಳಿ/ಬಂಗಾರ ಆಭರಣಗಳ ತಯಾರಿಕೆ, ಜೀನ್ಸ್ ಹೊಲಿಗೆ, ಕುಂಬಾರಿಕೆ, ಖಾದಿ ಕೈಮಗ್ಗ ನೇಯ್ಗೆಗಾರರು
(ಹತ್ತಿ), ರೇಷ್ಮೆ, ಪಾಲಿಸ್ಟರ್), ನೂಲುಗಾರರು ಕೆಲಸ, ಕೌದಿ ಹೊಲಿಯುವುದು, ಜನರಲ್ ಇಂಜನಿಯರಿಂಗ್,
ಚಾಪೆ, ಬುಟ್ಟೆ ಹೆಣೆಯುವುದು, ತೆಂಗಿನ ನಾರಿನ ಹಗ್ಗ ಮಾಡುವುದು (ಪ್ಲಾಸ್ಟಿಕ್ ಹೊರತುಪಡಿಸಿ), ಅಗರಬತ್ತಿ,
ಕಸೂತಿ, ಎಂಬ್ರಾಯಡರಿ, ಎತ್ತಿನ ಗಾಡಿ ತಯಾರಿಕೆ, ಕಲ್ಲಿನ ಕೆತ್ತನೆ ಕೆಲಸ, ಇತರೆ ಕುಶಲ ಕರ್ಮಿಗಳು
ಈ ಸೌಲಭ್ಯವನ್ನು ಪಡೆಯಬಹುದಾಗಿದೆ.
ಅರ್ಜಿ ಸಲ್ಲಿಸುವವರು ಆ.25 ರೊಳಗಾಗಿ
ಪಟ್ಟಣ ಪಂಚಾಯತ್ ಕಾರ್ಯಾಲಯ, ಯಲಬುರ್ಗಾ ಇವರಿಗೆ ಅಧಿಕೃತ ದಾಖಲೆಗಳೊಂದಿಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ
ಮಾಹಿತಿಗಾಗಿ ಪಟ್ಟಣ ಪಂಚಾಯತ್ ಕಛೇರಿಯ ವಿಷಯ ನಿರ್ವಾಹಕರನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ
ಎಂದು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸದಸ್ಯತ್ವ ನವೀಕರಣಕ್ಕೆ ಅವಕಾಶ
ಕೊಪ್ಪಳ ಜು.30(ಕರ್ನಾಟಕ ವಾರ್ತೆ): ಕಾರ್ಮಿಕ ಕಾಯ್ದೆ ಅಡಿ ನೋಂದಣಿ ಮಾಡಿಸಿ, ಇದುವರೆಗೂ
ನವೀಕರಣ ಮಾಡಿಸಿಕೊಳ್ಳದೇ ಇರುವ ಕಾರ್ಮಿಕರು, ನವೀಕರಣ ಮಾಡಿಸಿಕೊಳ್ಳಲು ನ. 11 ರವರೆಗೆ ಅವಕಾಶ ಕಲ್ಪಿಸಲಾಗಿದೆ
ಎಂದು ಕಾರ್ಮಿಕ ಅಧಿಕಾರಿಗಳು ತಿಳಿಸಿದ್ದಾರೆ.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫಲಾನುಭವಿಯ ನಿಂತು ಹೋದ ಸದಸ್ಯತ್ವವನ್ನು ಮರಳಿ
ಪಡೆಯುವ ಅವಕಾಶವನ್ನು ಕಾರ್ಮಿಕ ಇಲಾಖೆ ಒದಗಿಸಿದೆ.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾಯ್ದೆ 2006 ಅಡಿ ಕಾರ್ಮಿಕ ಅಧಿಕಾರಿ/ಕಾರ್ಮಿಕ
ನಿರೀಕ್ಷಕರುಗಳ ಕಛೇರಿಗಳಲ್ಲಿ ಕಟ್ಟಡ ಕಾರ್ಮಿಕರೆಂದು ಹಿಂದೆ ಯಾವುದೇ ಅವಧಿಯಲ್ಲಿ ನೊಂದಣಿ ಮಾಡಿಸಿ
ಗುರುತಿನ ಕಾರ್ಡ್ ಪಡೆದು ಇದುವರೆಗೆ ನವೀಕರಣ ಮಾಡದೇ ಇರುವ ನೊಂದಾಯಿತ ಕಟ್ಟಡ ಕಾರ್ಮಿಕರು ನ.11 ರೊಳಗಾಗಿ
ನಿಯಮಾವಳಿಗಳಲ್ಲಿ ವಿಧಿಸಿರುವ ಶುಲ್ಕ ಮತ್ತು ದಂಡ ಪಾವತಿಸಿ, ಸಂಬಂಧಪಟ್ಟ ಕಾರ್ಮಿಕ ಅಧಿಕಾರಿ/ಕಾರ್ಮಿಕ
ನಿರೀಕ್ಷಕರುಗಳ ಕಛೇರಿಗಳಲ್ಲಿ ಸದಸ್ಯತ್ವವನ್ನು ನವೀಕರಣ ಮಾಡಿಸಿಕೊಳ್ಳಬಹುದಾಗಿದೆ. ಈ ಅವಧಿಯೊಳಗೆ
ನವೀಕರಣ ಮಾಡಿಸಿಕೊಳ್ಳದೇ ಇದ್ದಲ್ಲಿ ಅಂತಹವರ ಸದಸ್ಯತ್ವ ರದ್ದುಪಡಿಸಲಾಗುವುದು ಎಂದು ಕಾರ್ಮಿಕ ಅಧಿಕಾರಿಗಳು
ತಿಳಿಸಿದ್ದಾರೆ.
ಲೆಕ್ಕಪರಿಶೋಧನೆ ಮಾಡಿಸಲು ಸಹಕಾರ ಸಂಘಗಳಿಗೆ ಸೂಚನೆ
ಕೊಪ್ಪಳ ಜು.30(ಕರ್ನಾಟಕ ವಾರ್ತೆ): ಜಿಲ್ಲೆಯ ಎಲ್ಲಾ ಕಾರ್ಯನಿರತ ಸಹಕಾರ ಸಂಘಗಳು ಹಾಗೂ ಸೌಹಾರ್ದ
ಸಹಕಾರ ಸಂಘಗಳು, ಕಾಯ್ದೆ ಪ್ರಕಾರ ಸೆ.01 ರೊಳಗಾಗಿ 2013-14ನೇ ಸಾಲಿನ ಲೆಕ್ಕಪರಿಶೋಧನೆಯನ್ನು ಮಾಡಿಸುವಂತೆ ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಉಪನಿರ್ದೇಶಕರು
ತಿಳಿಸಿದ್ದಾರೆ.
ಜಿಲ್ಲೆಯ ಎಲ್ಲಾ ಕಾರ್ಯನಿರತ ಸಹಕಾರ ಸಂಘಗಳು ಹಾಗೂ ಸೌಹಾರ್ದ ಸಹಕಾರ ಸಂಘಗಳು, ಕಾಯ್ದೆ ಪ್ರಕಾರ
ಸೆ.01 ರೊಳಗಾಗಿ 2013-14ನೇ ಸಾಲಿನ ಲೆಕ್ಕಪರಿಶೋಧನೆಯನ್ನು ಮಾಡಿಸಿ, ಲೆಕ್ಕಪರಿಶೋಧನಾ ವರದಿಯನ್ನು ಸರ್ವಸಾಧಾರಣಾ ಸಭೆಗೆ
ಮಂಡಿಸಬೇಕಾಗಿದ್ದು, ಆದರೆ ಕೊಪ್ಪಳ ಜಿಲ್ಲೆಯ ಬಹುತೇಕ ಸಹಕಾರ ಸಂಘಗಳು ಇಲ್ಲಿಯವರೆಗೂ ಸನ್ನದು ಲೆಕ್ಕಪರಿಶೋಧಕರನ್ನಾಗಲಿ
ಅಥವಾ ಇಲಾಖಾ ಲೆಕ್ಕಪರಿಶೋಧಕರನ್ನಾಗಲಿ ಆಯ್ಕೆಮಾಡಿಕೊಂಡು ಲೆಕ್ಕಪರಿಶೋಧನೆ ಮಾಡಿಸಿರುವುದಿಲ್ಲ. ಇದು
ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದ್ದು, ಜೊತೆಗೆ ಮುಖ್ಯಕಾರ್ಯನಿರ್ವಾಹಕರು ಹಾಗೂ ಆಡಳಿತ ಮಂಡಳಿಯ ನಿರ್ದೇಶಕರುಗಳಿಗೆ
ಕಾಯ್ದೆಯಲ್ಲಿ ಶಿಕ್ಷೆ ವಿಧಿಸಲು ಅವಕಾಶವಿದೆ. ಆದ್ದರಿಂದ
ಸಂಬಂಧಪಟ್ಟವರು ಕೂಡಲೇ 2013-14ನೇ ಸಾಲಿನ ಲೆಕ್ಕ ಪರಿಶೋಧನೆಯನ್ನು ಮಾಡಿಸಿಕೊಳ್ಳಬೇಕು ಎಂದು ಸಹಕಾರ
ಸಂಘಗಳ ಲೆಕ್ಕ ಪರಿಶೋಧನಾ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜು.31 ರಂದು ವಿವಿಧೆಡೆ ಕಾನೂನು ಅರಿವು-ನೆರವು ಕಾರ್ಯಾಗಾರ
ಕೊಪ್ಪಳ ಜು.30(ಕರ್ನಾಟಕ ವಾರ್ತೆ): ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ
ಸಂಘ ಇವರುಗಳ ಸಂಯುಕ್ತ ಆಶ್ರಯದಲ್ಲಿ ಜು. 31 ರಂದು
ಬೆಳಿಗ್ಗೆ 10 ಗಂಟೆಗೆ ಭಾಗ್ಯನಗರದ ವಿದ್ಯಾ ವಿಕಾಸ ಶಿಕ್ಷಣ ಸಂಸ್ಥೆಯ ಆವರಣದಲ್ಲಿ, ಮಧ್ಯಾಹ್ನ 2 ಗಂಟೆಗೆ
ಹಿರೇಸಿಂದೋಗಿಯ ಸರ್ಕಾರಿ ಹಿ.ಪ್ರಾ.ಶಾಲೆ ಆವರಣದಲ್ಲಿ ಹಾಗು ಸಂಜೆ 7 ಗಂಟೆಗೆ ಬೆಟಗೇರಿಯ ಮೂಕಬಸವೇಶ್ವರ
ದೇವಸ್ಥಾನ ಆವರಣದಲ್ಲಿ ವಿಶೇಷ ಕಾನೂನು ವಿದ್ಯಾ ಪ್ರಸಾರ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಭಾಗ್ಯನಗರ : ಕಾನೂನು ಸಾಕ್ಷರತಾ
ಅಂಗವಾಗಿ ಭಾಗ್ಯನಗರದಲ್ಲಿ ಜು. 31 ರಂದು ಬೆಳಿಗ್ಗೆ 10 ಗಂಟೆಗೆ ನಡೆಯುವ ಕಾನೂನು ವಿದ್ಯಾಪ್ರಸಾರ
ಕಾರ್ಯಕ್ರಮದ ಉದ್ಘಾಟನೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕಿ ವಸಂತ ಪ್ರೇಮಾ
ಅವರು ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ವಕೀಲರಾದ ಆರ್.ಬಿ.ಪಾನಗಂಟಿ ಅವರು ವಹಿಸುವರು. ಮುಖ್ಯ
ಅತಿಥಿಗಳಾಗಿ ಲಾ ಅಕಾಡೆಮಿ ಅಧ್ಯಕ್ಷೆ ಸಂಧ್ಯಾ ಬಿ.ಮಾದಿನೂರು, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ.ಕಣವಿ,
ಜಿಲ್ಲಾ ಸರ್ಕಾರಿ ವಕೀಲರಾದ ಬಿ.ಶರಣಪ್ಪ, ವಕೀಲರಾದ ವಿ.ಎಂ.ಭೂಸನೂರಮಠ, ಉದ್ಯಮಿ ಶ್ರೀನಿವಾಸ ಗುಪ್ತಾ,
ಸಂಸ್ಥೆಯ ಪ್ರಾಂಶುಪಾಲ ವಾದಿರಾಜ ದೇಸಾಯಿ ಅವರು ಪಾಲ್ಗೊಳ್ಳುವರು. ವಿಶೇಷ ಉಪನ್ಯಾಸಕರಾಗಿ ವಕೀಲ ವಿ.ಎಂ.ಭೂಸನೂರಮಠ ಅವರು ಮೋಟಾರು
ವಾಹನ ಕಾಯ್ದೆ ಕುರಿತು, ಎಂ.ಹನುಮಂತರಾವ್ ಅವರು ಲೈಂಗಿಕ
ಹಲ್ಲೆಗಳಿಂದ ಚಿಕ್ಕ ಮಕ್ಕಳ ರಕ್ಷಣೆ ಕಾಯ್ದೆ ಕುರಿತು ಹಾಗೂ ವಕೀಲರಾದ ಎಸ್.ಬಿ.ಪಾಟೀಲ್ ಅವರಿಂದ ಕಡ್ಡಾಯ
ಶಿಕ್ಷಣ ಕಾಯ್ದೆ ಕುರಿತು ಉಪನ್ಯಾಸ ನೀಡುವರು.
ಹಿರೇಸಿಂದೋಗಿ : ಜಿಲ್ಲಾ ಕಾನೂನು
ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಸಿಂದೋಗಿ
ಇವರುಗಳ ಸಂಯುಕ್ತ ಆಶ್ರಯದಲ್ಲಿ ಶಾಲೆಯ ಆವರಣದಲ್ಲಿ ಜು.31 ರಂದು ಮಧ್ಯಾಹ್ನ 2.00 ಗಂಟೆಗೆ ಕಾನೂನು
ಸಾಕ್ಷರತಾ ಅಂಗವಾಗಿ ವಿಶೇಷ ಕಾನೂನು ವಿದ್ಯಾ ಪ್ರಸಾರ ಕಾರ್ಯಕ್ರಮ ನಡೆಯಲಿದ್ದು, ಉದ್ಘಾಟನೆಯನ್ನು
ಕೊಪ್ಪಳ ತಹಶೀಲ್ದಾರ್ ಪುಟ್ಟುರಾಮಯ್ಯ ಅವರು ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಶಾಲೆಯ ಮುಖ್ಯಗುರು
ಎಸ್.ಬಿ.ಕುರಿ ಅವರು ವಹಿಸುವರು. ಮುಖ್ಯ ಅತಿಥಿಗಳಾಗಿ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ
ಟಿ.ಕೃಷ್ಣಮೂರ್ತಿ, ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯ ಅಧಿಕಾರಿ ಶರಣಪ್ಪ ಜಿ., ಜಿಲ್ಲಾ ವಕೀಲರ ಸಂಘದ
ಅಧ್ಯಕ್ಷ ಎ.ವಿ.ಕಣವಿ, ಜಿಲ್ಲಾ ಸರ್ಕಾರಿ ವಕೀಲರಾದ ಬಿ.ಶರಣಪ್ಪ, ವಕೀಲರಾದ ವಿ.ಎಂ.ಭೂಸನೂರಮಠ, ಬಿಆರ್ಸಿಯ
ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಎಂ.ಎಚ್.ಕುರಿ ಅವರು ಪಾಲ್ಗೊಳ್ಳುವರು. ವಿಶೇಷ ಉಪನ್ಯಾಸಕರಾಗಿ ವಕೀಲರಾದ ಎಂ.ಹನುಮಂತರಾವ್ ಅವರು
ಪ್ರತಿಕೂಲದಿಂದ ವಿದ್ಯಾರ್ಥಿಗಳಿಗೆ ಪೀಡಿಸುವ ಕುರಿತು, ವಕೀಲರಾದ ಎಸ್.ಬಿ.ಪಾಟೀಲ್ ಅವರು ಮೂಲಭೂತ ಹಕ್ಕುಗಳು
ಮತ್ತು ಕರ್ತವ್ಯಗಳ ಕುರಿತು ಹಾಗೂ ವಕೀಲರಾದ ಶಶಿಕಾಂತ ಕಲಾಲ ಅವರು ಮಾಹಿತಿ ಹಕ್ಕು ಅಧಿನಿಯಮ ಕುರಿತು
ಉಪನ್ಯಾಸ ನೀಡುವರು.
ಬೆಟಗೇರಿ : ಜಿಲ್ಲಾ ಕಾನೂನು
ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಅಧ್ಯಕ್ಷರು, ಸರ್ವ ಸದಸ್ಯರು ಗ್ರಾಮ ಪಂಚಾಯತಿ
ಬೆಟಗೇರಿ, ಶ್ರೀ ಲಾಲಬಹದ್ದೂರ ಶಾಸ್ತ್ರೀ ಗ್ರಾಮೀಣ ಅಭಿವೃದ್ದಿ ಮತ್ತು ಶಿಕ್ಷಣ ಸಂಸ್ಥೆ, ಸ್ತ್ರೀ
ಶಕ್ತಿ ಸಂಘಗಳು ಹಾಗೂ ಮಹಿಳಾ ಒಕ್ಕೂಟಗಳು ಇವರ ಸಂಯುಕ್ತ ಆಶ್ರಯದಲ್ಲಿ ಗ್ರಾಮದ ಮೂಕಬಸವೇಶ್ವರ ದೇವಸ್ಥಾನದ
ಆವರಣದಲ್ಲಿ ಜು.31 ರಂದು ಸಂಜೆ 7.00 ಗಂಟೆಗೆ ಕಾನೂನು ಸಾಕ್ಷರತಾ ಅಂಗವಾಗಿ ವಿಶೇಷ ಕಾನೂನು ವಿದ್ಯಾ
ಪ್ರಸಾರ ಕಾರ್ಯಕ್ರಮ ನಡೆಯಲಿದ್ದು, ಉದ್ಘಾಟನೆಯನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ
ಶ್ರೀಕಾಂತ ದಾ.ಬಬಲಾದಿ ಅವರು ನೆರವೇರಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷೆ
ಕಾಳಮ್ಮ ಕಲ್ಲಳ್ಳಿ ಅವರು ವಹಿಸುವರು. ಮುಖ್ಯ ಅತಿಥಿಗಳಾಗಿ ನ್ಯಾಯಾಧೀಶರಾದ ಬಿ.ದಶರಥ, ಲಾ ಅಕಾಡೆಮಿ
ಅಧ್ಯಕ್ಷೆ ಸಂಧ್ಯಾ ಬಿ.ಮಾದಿನೂರು, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ.ಕಣವಿ, ಜಿಲ್ಲಾ ಸರ್ಕಾರಿ
ವಕೀಲರಾದ ಬಿ.ಶರಣಪ್ಪ, ತಾ.ಪಂ.ಸದಸ್ಯ ವಿರೇಶ ಸಜ್ಜನ್, ಅಳವಂಡಿ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕರಾದ
ಪ್ರಕಾಶ ಮಾಳಿ, ಜಿ.ಪಂ.ಸದಸ್ಯ ನಾಗನಗೌಡ ಮಾಲಿ ಪಾಟೀಲ್, ಗ್ರಾ.ಪಂ.ಸದಸ್ಯರಾದ ಶರಣಪ್ಪ ಮತ್ತೂರು, ಭೀಮಣ್ಣ
ಕವಲೂರು, ಸಿದ್ದಣ್ಣ ಬಿ.ಸಜ್ಜನ್, ಲಲಿತಮ್ಮ ಹೂಗಾರ, ಕಲ್ಲವ್ವ ಕಮಲಾಪುರ, ರೇಣುಕಾ ಹಂಚ್ಯಾಳಪ್ಪ ಭಜಂತ್ರಿ,
ಶಿವಲಿಂಗಮ್ಮ ಬೆಲ್ಲಡಗಿ, ಮುದಿಯಪ್ಪ ಗುಡಿಹಿಂದಿನ, ಗವಿಸಿದ್ದಪ್ಪ ಮಾಳೆಕೊಪ್ಪ, ರಾಮಣ್ಣ ಕಲಿಕೇರಿ,
ಪಾರ್ವತಿ ಕುಮಾರಸ್ವಾಮಿ ಪಾತ್ರದ ಅವರು ಪಾಲ್ಗೊಳ್ಳುವರು.
ಆ. 18 ರಿಂದ ಕೊಪ್ಪಳದಲ್ಲಿ ಸೇನಾ ಭರ್ತಿ ರ್ಯಾಲಿ : ಸಕಲ ವ್ಯವಸ್ಥೆಗೆ ಡಿ.ಸಿ. ಆರ್.ಆರ್. ಜನ್ನು ಸೂಚನೆ
ಕೊಪ್ಪಳ ಜು. 30 (ಕ.ವಾ) : ಭಾರತೀಯ ಸೇನೆಯಲ್ಲಿನ ವಿವಿಧ ಹುದ್ದೆಗಳ ಭರ್ತಿಗೆ ಆ. 18 ರಿಂದ
ಕೊಪ್ಪಳದಲ್ಲಿ ಸೇನಾ ನೇಮಕಾತಿ ರ್ಯಾಲಿ ನಡೆಯಲಿದ್ದು, ರ್ಯಾಲಿಯು ಸೂಕ್ತ ರೀತಿಯಲ್ಲಿ ನಡೆಯುವಂತಾಗಲು,
ಅಗತ್ಯ ವ್ಯವಸ್ಥೆಯನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ
ಸೂಚನೆ ನೀಡಿದರು.
ಬೆಳಗಾವಿಯ
ಸೇನಾ ನೇಮಕಾತಿ ಕಚೇರಿ ವತಿಯಿಂದ, ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ಆ. 18 ರಿಂದ 24 ರವರೆಗೆ ಭಾರತೀಯ
ಸೇನೆಯಲ್ಲಿನ ಸೋಲ್ಜರ್ ಟೆಕ್ನಿಕಲ್, ಸೋಲ್ಜರ್ ನರ್ಸಿಂಗ್ ಅಸಿಸ್ಟೆಂಟ್, ಸೋಲ್ಜರ್ ಜನರಲ್ ಡ್ಯೂಟಿ,
ಸೋಲ್ಜರ್ ಕ್ಲರ್ಕ್, ಸ್ಟೋರ್ ಕೀಪರ್ ಟೆಕ್ನಿಕಲ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಸೇನಾ ಭರ್ತಿ ರ್ಯಾಲಿ
ನಡೆಯಲಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ನೇಮಕಾತಿ ರ್ಯಾಲಿಗೆ ದಿನವೊಂದಕ್ಕೆ ಸುಮಾರು 5 ಸಾವಿರ
ಅಭ್ಯರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಆಗಸ್ಟ್
18 ರಂದು ರಾತ್ರಿಯಿಂದಲೇ ಅಭ್ಯರ್ಥಿಗಳ ನೋಂದಣಿ ಪ್ರಕ್ರಿಯೆ ಪ್ರಾರಂಭಗೊಳ್ಳಲಿದ್ದು, ಆ. 19 ರಿಂದ
ಅಭ್ಯರ್ಥಿಗಳ ದೈಹಿಕ ಸಾಮಥ್ರ್ಯ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆ ನಡೆಯಲಿದೆ. ನೇಮಕಾತಿ ರ್ಯಾಲಿ
ವೇಳೆ ಯಾವುದೇ ಅಭ್ಯರ್ಥಿಗಳಿಗೆ ತೊಂದರೆ ಆಗದಂತೆ, ಕ್ರೀಡಾಂಗಣದಲ್ಲಿ ಸೂಕ್ತ ಬ್ಯಾರಿಕೇಡಿಂಗ್ ವ್ಯವಸ್ಥೆ,
ತಾತ್ಕಾಲಿಕ ಶೌಚಾಲಯ, ಅಗತ್ಯ ಕುಡಿಯುವ ನೀರು, ವಿದ್ಯುತ್ ದೀಪದ ವ್ಯವಸ್ಥೆ, ಕ್ರೀಡಾಂಗಣ ಬಳಿ ಹಣ್ಣು,
ಉಪಹಾರದ ಮಳಿಗೆಗಳು ಮುಂತಾದ ವ್ಯವಸ್ಥೆ ಅಚ್ಚುಕಟ್ಟಾಗಿ ಆಗಬೇಕು. ಕ್ರೀಡಾಂಗಣದಲ್ಲಿ ಅಭ್ಯರ್ಥಿಗಳ ನೂಕು-ನುಗ್ಗಲು ನಂತಹ ಅಹಿತಕರ
ಘಟನೆಗಳು ವಿವಿಧ ಜಿಲ್ಲೆಗಳಲ್ಲಿ ಸಂಭವಿಸಿದ ನಿದರ್ಶನಗಳಿದ್ದು, ಅಂತಹ ಯಾವುದೇ ಅಹಿತಕರ ಘಟನೆಗಳಿಗೆ
ಅವಕಾಶ ನೀಡದಂತೆ, ಶಿಸ್ತು ಬದ್ಧ ವ್ಯವಸ್ಥೆ ಕೈಗೊಳ್ಳಬೇಕು. ಕ್ರೀಡಾಂಗಣದಲ್ಲಿ ಅಗತ್ಯ ಶ್ಯಾಮಿಯಾನ, ಲೈಟಿಂಗ್, ಕುರ್ಚಿಗಳು
ಇತ್ಯಾದಿ ವ್ಯವಸ್ಥೆಯನ್ನು ಲೋಕೋಪಯೋಗಿ ಇಲಾಖೆ ಕೈಗೊಳ್ಳಬೇಕು. ಬ್ಯಾರಿಕೇಡಿಂಗ್ ವ್ಯವಸ್ಥೆಯನ್ನು ಪಂಚಾಯತಿ ರಾಜ್ ಇಂಜಿನಿಯರಿಂಗ್
ಇಲಾಖೆ. ತಾತ್ಕಾಲಿಕ ಶೌಚಾಲಯ, ಕುಡಿಯುವ ನೀರು, ಸ್ವಚ್ಛತಾ
ವ್ಯವಸ್ಥೆಯನ್ನು ಕೊಪ್ಪಳ ನಗರಸಭೆ, ವಿದ್ಯುತ್ ಹಾಗೂ ಜನರೇಟರ್ ವ್ಯವಸ್ಥೆಯನ್ನು ಜೆಸ್ಕಾಂ ಇಲಾಖೆ,
ಅಭ್ಯರ್ಥಿಗಳ ಪ್ರಮಾಣಪತ್ರಗಳ ಪರಿಶೀಲನೆಗೆ ಸಿಬ್ಬಂದಿಗಳ ನಿಯೋಜನೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ,
ಸೂಕ್ತ ಬಂದೋಬಸ್ತ್ ಅನ್ನು ಪೊಲೀಸ್ ಇಲಾಖೆ. ಮುಂಜಾಗ್ರತಾ
ಕ್ರಮವಾಗಿ ಕ್ರೀಡಾಂಗಣದಲ್ಲಿ ಆ್ಯಂಬುಲೆನ್ಸ್ ಹಾಗೂ ತಜ್ಞರ ಸೇವೆಯನ್ನು ಆರೋಗ್ಯ ಇಲಾಖೆ ವ್ಯವಸ್ಥೆಯನ್ನು
ಕೈಗೊಳ್ಳಬೇಕು. ಎಲ್ಲ ವ್ಯವಸ್ಥೆಗಳೂ ಆ. 17 ರ ಮಧ್ಯಾಹ್ನ
1 ಗಂಟೆಯೊಳಗಾಗಿ ಸಿದ್ಧ ಮಾಡಿ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಸಂಬಂಧಪಟ್ಟ
ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ
ಭಾಗವಹಿಸಿದ್ದ ಕರ್ನಲ್ ದುಷ್ಯಂತ್ ಸಿಂಗ್ ಅವರು ಮಾತನಾಡಿ, ನೇಮಕಾತಿ ರ್ಯಾಲಿಯನ್ನು ಅತ್ಯಂತ ಮುಕ್ತ
ಹಾಗೂ ನ್ಯಾಯಸಮ್ಮತ ಮತ್ತು ಪಾರದರ್ಶಕವಾಗಿ ನಡೆಸಲಿದ್ದು, ಯಾವುದೇ ಮಧ್ಯವರ್ತಿಗಳ ಸುಳ್ಳು ವದಂತಿಯನ್ನು
ಸಾರ್ವಜನಿಕರು ಹಾಗೂ ಅಭ್ಯರ್ಥಿಗಳು ನಂಬಬಾರದು. ಆ.
18 ರಿಂದ 21 ರವರೆಗೆ ಬೀದರ್, ಗುಲಬರ್ಗಾ, ಕೊಪ್ಪಳ ಮತ್ತು ಯಾದಗಿರಿ ಜಿಲ್ಲೆಯ ಅಭ್ಯರ್ಥಿಗಳು ಪಾಲ್ಗೊಳ್ಳುವರು. ಆ. 22 ರಂದು ರಾಜ್ಯದ ಇನ್ನುಳಿದ ಜಿಲ್ಲೆಗಳ ಅಭ್ಯರ್ಥಿಗಳು
ನೇಮಕಾತಿ ರ್ಯಾಲಿಯಲ್ಲಿ ಪಾಲ್ಗೊಳ್ಳುವರು. ಆ. 23
ರಂದು ಬೀದರ್, ಗುಲಬರ್ಗಾ, ಕೊಪ್ಪಳ ಮತ್ತು ಯಾದಗಿರಿ ಜಿಲ್ಲೆ ಅಭ್ಯರ್ಥಿಗಳು ಹಾಗೂ ಮಾಜಿ ಸೈನಿಕರು
ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ. ನೇಮಕಾತಿ ರ್ಯಾಲಿ
ಸಮರ್ಪಕವಾಗಿ ಆಯೋಜಿಸಲು ಎಲ್ಲ ಇಲಾಖೆಗಳ ಸಹಕಾರ ಅಗತ್ಯವಾಗಿದೆ ಎಂದರು.
ಸಭೆಯಲ್ಲಿ
ಭಾಗವಹಿಸಿದ್ದ ಡಿವೈಎಸ್ಪಿ ರಾಜೀವ್ ಎಂ. ಅವರು ಮಾತನಾಡಿ, ಸೇನಾ ಭರ್ತಿ ರ್ಯಾಲಿಗೆ ಬಂದೋಬಸ್ತ್ಗಾಗಿ
04-ಸಿಪಿಐ/ಪಿಐ, 15- ಪಿಎಸ್ಐ, 34-ಎಎಸ್ಐ, 255- ಪಿಸಿ/ಹೆಚ್.ಸಿ. ಜೊತೆಗೆ 06 ಕ್ಷಿಪ್ರ ಪ್ರಹಾರ
ದಳ ತಂಡವನ್ನು ನಿಯೋಜಿಸಲಾಗುವುದು ಎಂದರು.
ಸಭೆಯಲ್ಲಿ
ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್, ಡಿವೈಎಸ್ಪಿ ರಾಜೀವ್ ಎಂ., ಮೇಜರ್ ಲಲಿತ್ ಕುಮಾರ್,
ಸುಬೇದಾರ್ ಮೇಜರ್ ಎಸ್.ಪಿ. ಪಢಿ, ಸೈನಿಕ ಕಲ್ಯಾಣಾ ಇಲಾಖೆ ಉಪನಿರ್ದೇಶಕ ಶಿವಾಜಿ ತುಕ್ಕರ್ ಸೇರಿದಂತೆ
ಲೋಕೋಪಯೋಗಿ, ಆರೋಗ್ಯ, ಶಿಕ್ಷಣ, ಪ್ರಾದೇಶಿಕ ಸಾರಿಗೆ ಮುಂತಾದ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.
Monday, 28 July 2014
ವಿದ್ಯಾಸಿರಿ ಯೋಜನೆ : ಕಾಲೇಜುಗಳಿಗೆ ಸೂಚನೆ
ಕೊಪ್ಪಳ ಜು.28(ಕರ್ನಾಟಕ ವಾರ್ತೆ): ವಿದ್ಯಾಸಿರಿ ಯೋಜನೆಯಡಿ ವಿದ್ಯಾರ್ಥಿಗಳು ಊಟ ಮತ್ತು
ವಸತಿ ಸಹಾಯ ಯೋಜನೆ- ‘ವಿದ್ಯಾರ್ಥಿ ವೇತನ’ ಪಡೆಯುವ ನಿಟ್ಟಿನಲ್ಲಿ, ಎಲ್ಲ ಕಾಲೇಜುಗಳು-ಪಾಸ್ ಪೋರ್ಟಲ್
ನಲ್ಲಿ ಕೋರ್ಸ್ಗಳ ವಿವರವನ್ನು ಆಗಸ್ಟ್ 10 ರೊಳಗಾಗಿ ಅಪ್ಲೋಡ್ ಮಾಡುವಂತೆ ಸೂಚನೆ ನೀಡಲಾಗಿದೆ.
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪದವಿ ಪೂರ್ವ, ಐಟಿಐ,
ಡಿಪ್ಲೋಮಾ, ಪಾಲಿಟೆಕ್ನಿಕ್, ಪದವಿ, ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್, ವೈದ್ಯಕೀಯ, ಇಂಜಿನಿಯರಿಂಗ್,
ಕೃಷಿ ಮತ್ತು ಪಶುವೈದ್ಯಕೀಯ, ಸ್ನಾತಕೋತ್ತರ, ಕೋರ್ಸುಗಳಲ್ಲಿ ವ್ಯಾಸಂಗ ಮಾಡುವ ಹಿಂದುಳಿದ ವರ್ಗಗಳ
ವಿದ್ಯಾರ್ಥಿಗಳಿಗೆ ಊಟ ಮತ್ತು ವಸತಿ ಸಹಾಯ ಯೋಜನೆ (ವಿದ್ಯಾಸಿರಿ) ವಿದ್ಯಾರ್ಥಿ ವೇತನ, ಶುಲ್ಕ ವಿನಾಯಿತಿ
ಇತ್ಯಾದಿ ಸೌಲಭ್ಯಗಳನ್ನು ನೇರವಾಗಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದ್ದು, ವಿದ್ಯಾರ್ಥಿಗಳು
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಅನುಕೂಲವಾಗುವಂತೆ, ಸಂಬಂಧಪಟ್ಟ ಕಾಲೇಜುಗಳು ಇ-ಪಾಸ್ ಪೋರ್ಟ್ಲ್ನಲ್ಲಿ
ಕಾಲೇಜಿನ ಮಾಹಿತಿ ಮತ್ತು ಕಾಲೇಜಿನ ಭೋಧಿಸಲಾಗುತ್ತಿರುವ ಕೋರ್ಸುಗಳ ವಿವರಗಳನ್ನು ಅಪ್ಲೋಡ್ ಮಾಡಬೇಕು.
2013-2014 ನೇ ಸಾಲಿನಲ್ಲಿ ಇ-ಪಾಸ್ ಪೋರ್ಟಲ್ನಲ್ಲಿ
ಅಪ್ಲೋಡ್ ಮಾಡದೇ ಇರುವ, ರಾಜ್ಯದ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರು, ಕಾಲೇಜುಗಳ ರಜಿಸ್ಟ್ರೇಷನ್ ನಂ,
ಅಫಿಲಿಯೇಷನ್ ನಂ, ಪೂರ್ಣ ವಿಳಾಸ, ಪ್ರಾಂಶುಪಾಲರ ಹೆಸರು, ದೂರವಾಣಿ ಸಂಖ್ಯೆ, ಇ-ಮೇಲ್ ವಿಳಾಸ, ವೆಬ್ಸೈಟ್(ಇದ್ದಲ್ಲಿ),
ಕಾಲೇಜಿನ ಬ್ಯಾಂಕ್ಖಾತೆ/ಐಎಫ್ಎಸ್ಸಿ ಕೋಡ್, ಭೋಧಿಸಲಾಗುತ್ತಿರುವ(ಮಾನ್ಯತೆ ಪಡೆದ) ಕೋರ್ಸುಗಳ ಮಾಹಿತಿಗಳನ್ನು
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವೆಬ್ಪೋರ್ಟಲ್ http://karepass.cgg.gov.in
ರಲ್ಲಿ ಅಪ್ ಲೋಡ್ ಮಾಡಬೇಕು. ಹೊಸದಾಗಿ ಯೂಸರ್-ಐಡಿ
ಮತ್ತು ಪಾಸ್ವರ್ಡ್ಗಳ ಅಗತ್ಯ ಇರುವ ಕಾಲೇಜು ಪ್ರಾಂಶುಪಾಲರು ಕಾಲೇಜಿನ ಅಫಿಲಿಯೇಷನ್ ಆದೇಶ ಮತ್ತು
ಮಾನ್ಯತೆ ಪಡೆದ ಕೋರ್ಸುಗಳ ಕುರಿತ ಆದೇಶಗಳ ಸ್ಕ್ಯಾನ್ ಪ್ರತಿಗಳೊಂದಿಗೆ, ಆಯುಕ್ತರು, ಹಿಂದುಳಿದ ವರ್ಗಗಳ
ಕಲ್ಯಾಣ ಇಲಾಖೆ, ಬೆಂಗಳೂರು ಇವರ ಇ-ಮೇಲ್ http://bcdbng@kar.nic.in ವಿಳಾಸಕ್ಕೆ ಪತ್ರವನ್ನು ಕಳುಹಿಸಬಹುದು. ಕಾಲೇಜುಗಳಿಗೆ ನೀಡಲಾದ ಯೂಸರ್-ಐಡಿ
ಮತ್ತು ಪಾಸ್ವರ್ಡ್ಗಳನ್ನು ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳನ್ನು
ಸಂಪರ್ಕಿಸಿ ಪಡೆದು ಆ.10 ರೊಳಗಾಗಿ ತಪ್ಪದೇ ಅಪ್ಲೋಡ್ ಮಾಡಬೇಕು.
ಊಟ ಮತ್ತು ವಸತಿ ಸಹಾಯ ಯೋಜನೆ(ವಿದ್ಯಾಸಿರಿ),
ವಿದ್ಯಾರ್ಥಿ ವೇತನ ಮತ್ತು ಶುಲ್ಕ ವಿನಾಯಿತಿ ಇತ್ಯಾದಿಗಳನ್ನು ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳು
ಎಸ್.ಎಸ್.ಎಲ್.ಸಿ. ಅಂಕಪಟ್ಟಿಯಲ್ಲಿ ಇರುವ ರೀತಿಯಲ್ಲಿಯೇ (ಉದಾಹರಣೆಗೆ, ಬಿ. ಸಂತೋಷ್ ಇದ್ದರೆ ಬ್ಯಾಂಕ್
ಖಾತೆ ತರೆಯುವಾಗ ಬಿ. ಸಂತೋಷ್ ಎಂದೇ ನಮೂದಿಸಬೇಕು.
ಸಂತೋಷ್. ಬಿ. ಎಂದು ನಮೂದಿಸಬಾರದು) ವಿದ್ಯಾರ್ಥಿಗಳ ಹೆಸರಿನಲ್ಲಿ ಯಾವುದಾದರೂ ಕೋರ್ ಬ್ಯಾಂಕಿಂಗ್
ವ್ಯವಸ್ಥೆ ಇರುವ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ, ಬ್ಯಾಂಕ್ ಖಾತೆಯನ್ನು ತೆರೆಯಲು ವಿದ್ಯಾರ್ಥಿಗಳಿಗೆ
ಸೂಚನೆಗಳನ್ನು ನೀಡುವಂತೆ ಬಿಸಿಎಂ ಜಿಲ್ಲಾ ಅಧಿಕಾರಿ ಬಿ. ಕಲ್ಲೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತುಂಗಭದ್ರಾ ಜಲಾಶಯದ ನೀರಿನ ಮಟ್ಟ ದಿ: 28-07-2014
ಒಳ ಹರಿವು : 64,846 ಕ್ಯೂಸೆಕ್
ಹೊರ ಹರಿವು : 3,749 ಕ್ಯೂಸೆಕ್
ನೀರಿನ ಮಟ್ಟ : 1626. 07 ಅಡಿ
ಗರಿಷ್ಠ ಮಟ್ಟ : 1633 ಅಡಿ
ನೀರಿನ ಸಂಗ್ರಹ : 76. 344 ಟಿ.ಎಂ.ಸಿ.
ಗರಿಷ್ಠ ಸಂಗ್ರಹ ಸಾಮಥ್ರ್ಯ : 100. 855 ಟಿ.ಎಂ.ಸಿ
-------------------------
ಒಳ ಹರಿವು : 1,22,804 ಕ್ಯೂಸೆಕ್
ಹೊರ ಹರಿವು : 1,29,637 ಕ್ಯೂಸೆಕ್
ನೀರಿನ ಮಟ್ಟ : 1631. 83 ಅಡಿ
ಗರಿಷ್ಠ ಮಟ್ಟ : 1633 ಅಡಿ
ನೀರಿನ ಸಂಗ್ರಹ : 96. 381 ಟಿ.ಎಂ.ಸಿ.
ಅತಿಸಾರ ಭೇದಿ ತೀವ್ರತರ ನಿಯಂತ್ರಣ ಪಾಕ್ಷಿಕ ದಿನಾಚರಣೆಗೆ ಚಾಲನೆ
ಕೊಪ್ಪಳ ಜು.28(ಕರ್ನಾಟಕ ವಾರ್ತೆ): ಅತಿಸಾರ ಭೇದಿಯಿಂದಾಗುವ ಚಿಕ್ಕ ಮಕ್ಕಳ ಮರಣ ಪ್ರಕರಣವನ್ನು
ತಡೆಗಟ್ಟಲು ಜಿಲ್ಲೆಯಾದ್ಯಂತ ಅತಿಸಾರ ಭೇದಿ ತೀವ್ರತರ ನಿಯಂತ್ರಣ ಪಾಕ್ಷಿಕ ದಿನಾಚರಣೆಯನ್ನು ಪರಿಣಾಮಕಾರಿಯಾಗಿ
ಆಚರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ ಅವರು ಆರೋಗ್ಯ
ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ
ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ್ ಬಾಸೂರ್ ಅವರು ಮಾತನಾಡಿ, 5 ವರ್ಷದೊಳಗಿನ
ಮಕ್ಕಳ ಸಾವಿಗೆ ಅತಿಸಾರ ಭೇದಿಯೂ ಪ್ರಮುಖ ಕಾರಣವಾಗಿದ್ದು, ಬೇಸಿಗೆ ಮತ್ತು ಪೂರ್ವ ಮುಂಗಾರಿನ ಮಾಸಗಳಲ್ಲಿ
ಹೆಚ್ಚು ಬಾಧಿಸುತ್ತದೆ. ಅತಿಸಾರ ಭೇದಿಗೂ, ಅಪೌಷ್ಠಿಕತೆಗೂ
ನಿಕಟ ಸಂಬಂಧವಿದ್ದು, ಉತ್ತಮ ಆರೋಗ್ಯವಂತ ಮಕ್ಕಳೂ ಸಹ ಅತಿಸಾರ ಭೇದಿಯಿಂದ ತೂಕ ಕ್ಷೀಣಿಸಿ ಅಪೌಷ್ಠಿಕತೆಗೆ
ಒಳಗಾಗುವ ಮೂಲಕ ಸಾವು ಸಂಭವ ಇರುತ್ತದೆ. ಸೂಕ್ತ ಆಹಾರದ
ಜೊತೆಗೆ ಓಆರ್ಎಸ್ ಮತ್ತು ಜಿಂಕ್ ದ್ರಾವಣ ಅಥವಾ ಮಾತ್ರೆಯನ್ನು ನೀಡುವುದರಿಂದ ಸಂಭವನೀಯ ಸಾವನ್ನು
ತಪ್ಪಿಸಬಹುದಾಗಿದೆ, ಹಾಗೂ ಇದು ಮಗುವಿನ ಸೋಂಕು ನಿರೋಧಕ ಶಕ್ತಿಯನ್ನೂ ಸಹ ಹೆಚ್ಚಿಸುತ್ತದೆ. ಜಿಲ್ಲಾ
ಆಸ್ಪತ್ರೆಯಲ್ಲಿ ಸದ್ಯ ಓಆರ್ಎಸ್-ಜಿಂಕ್ ಕಾರ್ನರ್ ಅನ್ನು ಸ್ಥಾಪಿಸಲಾಗಿದ್ದು, ಜಿಲ್ಲೆಯಲ್ಲಿನ ಒಟ್ಟು
812 ಆಶಾ ಕಾರ್ಯಕರ್ತೆಯರ ಮೂಲಕ ಎಲ್ಲ ಗ್ರಾಮಗಳ ಮನೆ, ಮನೆಗಳಿಗೆ ಓಆರ್ಎಸ್ ಪೊಟ್ಟಣಗಳನ್ನು ಹಂಚಲಾಗುವುದು
ಅಲ್ಲದೆ ಸೂಕ್ತ ಅರಿವು ಮೂಡಿಸಲಾಗುವುದು ಎಂದರು.
ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ: ಲೋಕೇಶ್,
ಆರ್ಸಿಹೆಚ್ ಅಧಿಕಾರಿ ರಮೇಶ ಮೂಲಿಮನಿ, ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ಎಸ್.ಕೆ. ದೇಸಾಯಿ, ಜಿಲ್ಲಾ
ಸರ್ವೇಕ್ಷಣಾಧಿಕಾರಿ ಎಂ.ಎಂ. ಕಟ್ಟಿಮನಿ, ಕ್ಷಯ ರೋಗ ನಿಯಂತ್ರಣ ಅಧಿಕಾರಿ ಡಾ: ಪ್ರಭು ಸೇರಿದಂತೆ ವಿವಿಧ
ಗಣ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.
ಆ. 02 ರಂದು ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆ
ಕೊಪ್ಪಳ ಜು. 28 (ಕ.ವಾ) : ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ಆ. 02 ರಂದು ಮಧ್ಯಾಹ್ನ
3-30 ಗಂಟೆಗೆ ಮುನಿರಾಬಾದಿನ ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಕಚೇರಿ (ಕಾಡಾ)
ಸಭಾಂಗಣದಲ್ಲಿ ನಡೆಯಲಿದೆ.

Sunday, 27 July 2014
ಕುಪೋಷಣೆ ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳಿಗೆಅಗತ್ಯ ಸೌಲಭ್ಯ : ಆರ್.ಆರ್.ಜನ್ನು
ಕೊಪ್ಪಳ,ಜು.27(ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಕುಪೋಷಣೆ ತಡೆಗಟ್ಟುವ ಬಗ್ಗೆ ಹಾಗೂ ಶಾಲೆಯಿಂದ
ಹೊರಗುಳಿದಿರುವ ಮಕ್ಕಳನ್ನು ಶಿಕ್ಷಣದ ವಾಹಿನಿಗೆ ಮರಳುವಂತೆ ಮಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ
ಎಲ್ಲ ಕ್ರಮ ಕೈಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಆರ್.ಆರ್.ಜನ್ನು ಅವರು ತಿಳಿಸಿದರು.
ಅಪೌಷ್ಠಿಕ ಮಕ್ಕಳ ಸ್ಥಿತಿಗತಿಗಳ ಕುರಿತು ಕಾಲ ಕಾಲಕ್ಕೆ ಪರಿಶೀಲನೆ ನಡೆಸಲಾಗುತ್ತಿದ್ದು,
ತೀವ್ರ ಅಪೌಷ್ಠಿಕ ಮಕ್ಕಳಿಗೆ ಪೂರಕ ಪೌಷ್ಠಿಕ ಆಹಾರ ಒದಗಿಸುವ ಮೂಲಕ ಅಂತಹ ಮಕ್ಕಳು ಸಾಮಾನ್ಯ ಮಕ್ಕಳಂತೆ
ಆರೋಗ್ಯವಂತರಾಗಬೇಕು ಎನ್ನುವುದು ಸರ್ಕಾರದ ಆಶಯವಾಗಿದೆ. ಎಲ್ಲರೂ ಈ ನಿಟ್ಟಿನಲ್ಲಿ ಜಾಗೃತರಾಗಿ ಶ್ರಮಿಸಬೇಕಾಗಿದೆ.
ಜಿಲ್ಲೆಯನ್ನು ಕುಪೋಷಣೆ ಮುಕ್ತ ಹಾಗೂ ರಾಜ್ಯದಲ್ಲಿ ಜಿಲ್ಲೆಯ ಸ್ಥಾನಮಾನ ಉತ್ತಮ ಪಡಿಸಲು ಶ್ರಮಿಸಲಾಗುವುದು
ಎಂದರು. ಗ್ರಾಮೀಣ ಪ್ರದೇಶದಲ್ಲಿ ಮಕ್ಕಳು ಶಾಲೆಯಿಂದ
ಹೊರಗುಳಿಯುವುದು ಹೆಚ್ಚಾಗಿ ಕಂಡುಬರುತ್ತಿದ್ದು, ಶಿಕ್ಷಣ ಎಲ್ಲ ಮಕ್ಕಳ ಹಕ್ಕು. ಯಾವ ಮಕ್ಕಳೂ ಸಹ ಶಿಕ್ಷಣದ ಮುಖ್ಯವಾಹಿನಿಯಿಂದ ಹೊರಗುಳಿಯಬಾರದು, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪುನಃ ಶಾಲೆಗೆ ದಾಖಲು
ಮಾಡುವ ನಿಟ್ಟಿನಲ್ಲಿ ವಿಶೇಷ ದಾಖಲಾತಿ ಆಂದೋಲನ ಏರ್ಪಡಿಸಬೇಕು. ಸಾರ್ವಜನಿಕರು, ಶಿಕ್ಷಕರು ಶ್ರಮಿಸಿದಲ್ಲಿ ಯಾವುದೇ ಮಕ್ಕಳು
ಶಿಕ್ಷಣದಿಂದ ವಂಚಿತರಾಗದಂತೆ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ ಎಂದು ಜಿಲ್ಲಾಧಿಕಾರಿ ಆರ್.ಆರ್.ಜನ್ನು
ಅವರು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ, ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ
ಶ್ರೀಕಾಂತ್ ದಾ ಬಬಲಾದಿ ಅವರು, ಸಂವಿಧಾನದಲ್ಲಿ ಎಲ್ಲರೂ ಸಮಾನರಾಗಿದ್ದು, ಸಂವಿಧಾನದ 39ನೇ ಅನುಚ್ಛೇದದಲ್ಲಿ
ಶಿಕ್ಷಣ ಪಡೆಯುವುದು ಎಲ್ಲರ ಹಕ್ಕಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ಹಾಗೂ ಸಾರ್ವಜನಿಕರು
ಜಿಲ್ಲಾಡಳಿತದೊಂದಿಗೆ ಸಹಕರಿಸಿ ಉತ್ತಮ ಶೈಕ್ಷಣಿಕ ಜಿಲ್ಲೆ ಹಾಗೂ ಕುಪೋಷಣೆ ಮುಕ್ತ ಜಿಲ್ಲೆಯನ್ನಾಗಿಸಲು
ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಶ್ರೇಣಿ ನ್ಯಾಯಾಧೀಶರಾದ
ಬಿ.ದಶರಥ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕಿ ವಸಂತ ಪ್ರೇಮಾ, ಜಿಲ್ಲಾ ವಕೀಲರ
ಸಂಘದ ಅಧ್ಯಕ್ಷ ಎ.ವಿ.ಕಣವಿ, ಜಿಲ್ಲಾ ಸರ್ಕಾರಿ ವಕೀಲ ಬಿ.ಶರಣಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ
ಜಿ.ಹೆಚ್.ವೀರಣ್ಣ, ಡಿವೈಎಸ್ಪಿ ಎಂ.ರಾಜೀವ್, ಜಿಲ್ಲಾ ಸರ್ಜನ್ ಲೊಕೇಶ, ಯಲಬುರ್ಗಾ ತಾಲೂಕ ವೈದ್ಯಾಧಿಕಾರಿ
ಪ್ರಶಾಂತಬಾಬು, ಶ್ರೀ ಸಿದ್ದೇಶ್ವರ ವಿದ್ಯಾಪೀಠದ (ಹಿರಿಯ ನಾಗರಿಕರ ಸಹಾಯವಾಣಿ) ಅಧ್ಯಕ್ಷರಾದ ಶರಣಗೌಡ
ಬಿರಾದಾರ, ಯುನಿಸೆಫ್ನ ಸಂಯೋಜಕ ಹರೀಶ್ ಜೋಗಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮುನಿರಾಜಪ್ಪ ಸೇರಿದಂತೆ
ಅನೇಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸೌಮ್ಯ ಪದಕಿ ನಿರೂಪಿಸಿದರು. ವಕೀಲರಾದ ಹನುಮಂತಪ್ಪ
ಅವರು ವಂದನಾರ್ಪಣೆ ಮಾಡಿದರು.
Saturday, 26 July 2014
ಗಂಗಾವತಿ : ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ
ಕೊಪ್ಪಳ ಜು.26(ಕರ್ನಾಟಕ ವಾರ್ತೆ): ಗಂಗಾವತಿ ತಾಲೂಕಿನ ಶಾಲೆಗಳಲ್ಲಿ ಪ್ರವೇಶ ಪಡೆದ ಹಿಂದುಳಿದ
ವರ್ಗಗಳ ವಿದ್ಯಾರ್ಥಿಗಳಿಗೆ ಪ್ರಸಕ್ತ ಸಾಲಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಮಂಜೂರಾತಿಗಾಗಿ
ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ವಿವಿಧ ಶಾಲೆಯಲ್ಲಿ 5 ರಿಂದ 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗಗಳ
ವಿದ್ಯಾರ್ಥಿಗಳಿಗೆ ಪ್ರಸಕ್ತ ಸಾಲಿಗೆ, ಅಲೆಮಾರಿ, ಅರೆಅಲೆಮಾರಿ ಜನಾಂಗದ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ
ಹೊಸದಾಗಿ ಹಾಗೂ ನವೀಕರಣಕ್ಕಾಗಿ ವಿದ್ಯಾರ್ಥಿ ವೇತನವನ್ನು ಮಂಜೂರು ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತಿಯುಳ್ಳ ವಿದ್ಯಾರ್ಥಿಗಳು ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿ ಗೆ ಸೇರಿದವರಾಗಿರಬೇಕು.
(ಮುಸ್ಲಿಂ, ಜೈನ್, ಕ್ರಿಶ್ಚಿಯನ್, ಸಿಖ್, ಬೌದ್ಧ, ಪಾರ್ಸಿ, ಆಂಗ್ಲೋ ಇಂಡಿಯನ್ ಈ ಸಮುದಾಯಗಳ ವಿದ್ಯಾರ್ಥಿಗಳನ್ನು
ಹೊರತುಪಡಿಸಿ). ವಾರ್ಷಿಕ ಆದಾಯ 44500 ರ ಒಳಗೆ ಇರಬೇಕು, ಸರ್ಕಾರದ ಅನುದಾನಿತ/ಅನುದಾನರಹಿತ ಶಾಲೆಗಳಲ್ಲಿ
ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಹರು. ಆದರೆ ಸರ್ಕಾರದ, ಸರ್ಕಾರದ ಅನುದಾನಿತ ವಿದ್ಯಾರ್ಥಿ
ನಿಲಯಗಳಲ್ಲಿ/ವಸತಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಹರಿರುವುದಿಲ್ಲ. ಹಿಂದಿನ
ತರಗತಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆಯಲು ಅರ್ಹರಿರುವುದಿಲ್ಲ,
5 ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ರೂ.250/. 8 ರಿಂದ 10ನೇ ತರಗತಿ ಬಾಲಕರಿಗೆ ರೂ.500 ಹಾಗೂ
ಬಾಲಕಿಯರಿಗೆ ರೂ.600 ಕ್ಕೆ ಹೆಚ್ಚಿಸಲಾಗಿದೆ.
ಅರ್ಜಿ ನಮೂನೆಯನ್ನು ಇಲಾಖೆಯ ವೆಬ್ಸೈಟ್ www.backwardclasses.kar.nic.in ನಿಂದ ಡೌನ್ಲೋಡ್
ಮಾಡಿಕೊಳ್ಳಬಹುದು. ವಿದ್ಯಾರ್ಥಿ ವೇತನ ಮಂಜೂರಾತಿ ಸಲ್ಲಿಸುವ ಪೂರ್ವದಲ್ಲಿ ಈ ಕೆಳಗಿನ ಮಾಹಿತಿ ಹೊಂದಿರಬೇಕು.
ಶಾಲೆಯ ಬ್ಯಾಂಕ್ ಖಾತೆ ಸಂಖ್ಯೆ, ರಾಷ್ಟ್ರೀಕೃತ ಬ್ಯಾಂಕಿನ ಹೆಸರು, ಶಾಲೆಯ ದೂರವಾಣಿ ಸಂಖ್ಯೆ, ವಿದ್ಯಾರ್ಥಿಯ
ರಾಷ್ಟ್ರೀಕೃತ ಬ್ಯಾಂಕ್ ಖಾತೆ ಸಂಖ್ಯೆ ಹೊಂದಿರಬೇಕು. ಅರ್ಜಿ ಸಲ್ಲಿಸಲು ಜು.31 ಕೊನೆಯ ದಿನವಾಗಿದ್ದು,
ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಗಂಗಾವತಿ ತಾಲೂಕ ಹಿಂದುಳಿದ ವರ್ಗಗಳ
ವಿಸ್ತರಣಾಧಿಕಾರಿಗಳ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ.
ತುಂಗಭದ್ರಾ ಜಲಾಶಯದ ನೀರಿನ ಮಟ್ಟ D: 26-7-2014
ಒಳ ಹರಿವು : 92,891 ಕ್ಯೂಸೆಕ್
ಹೊರ ಹರಿವು : 3,230 ಕ್ಯೂಸೆಕ್
ನೀರಿನ ಮಟ್ಟ : 1622. 27 ಅಡಿ
ಗರಿಷ್ಠ ಮಟ್ಟ : 1633 ಅಡಿ
ನೀರಿನ ಸಂಗ್ರಹ : 64. 606 ಟಿ.ಎಂ.ಸಿ.
ಗರಿಷ್ಠ ಸಂಗ್ರಹ ಸಾಮಥ್ರ್ಯ : 100. 855 ಟಿ.ಎಂ.ಸಿ
-------------------------
ಕಳೆದ ವರ್ಷ ಇದೇ ದಿನದಂದು (26-7-2013) :
ಒಳ ಹರಿವು : 89,625 ಕ್ಯೂಸೆಕ್
ಹೊರ ಹರಿವು : 96,209 ಕ್ಯೂಸೆಕ್
ನೀರಿನ ಮಟ್ಟ : 1631. 87 ಅಡಿ
ಗರಿಷ್ಠ ಮಟ್ಟ : 1633 ಅಡಿ
ನೀರಿನ ಸಂಗ್ರಹ : 96. 528 ಟಿ.ಎಂ.ಸಿ.
Subscribe to:
Posts (Atom)