Sunday, 22 April 2018

ಮತದಾನ ದಿನದಂದು ಸೆಕ್ಟರ್ ಅಧಿಕಾರಿಗಳ ತೀವ್ರ ಕಟ್ಟೆಚ್ಚರ ಅಗತ್ಯ- ಎಂ. ಕನಗವಲ್ಲಿ


ಕೊಪ್ಪಳ ಏ. 22 (ಕರ್ನಾಟಕ ವಾರ್ತೆ): ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ನಿಮಿತ್ಯ ಮೇ. 12 ರಂದು ಮತದಾನ ನಡೆಯಲಿದ್ದು, ಸೆಕ್ಟರ್ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು, ಮತದಾನ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ತೀವ್ರ ಕಟ್ಟೆಚ್ಚರ ವಹಿಸುವುದು ಅಗತ್ಯವಾಗಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.

     ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ವಿಧಾನಸಭೆ ಚುನಾವಣೆ ಸಂಬಂಧ ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳಿಗೆ ನೇಮಕಗೊಂಡಿರುವ ಸೆಕ್ಟರ್ ಅಧಿಕಾರಿಗಳು ಹಾಗೂ ಮಾಸ್ಟರ್ ಟ್ರೈನರ್‍ಗಳಿಗೆ ಶನಿವಾರದಂದು ಏರ್ಪಡಿಸಲಾದ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

     ಈ ಬಾರಿಯ ವಿಧಾನಸಭಾ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಸಲು ಜಿಲ್ಲಾಡಳಿತ ವತಿಯಿಂದ ನೇಮಿಸಲಾಗಿರುವ ಸೆಕ್ಟರ್ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ.  ಸೆಕ್ಟರ್ ಅಧಿಕಾರಿಗಳು ಈಗಾಗಲೆ ಮತಗಟ್ಟೆಗಳ ಸ್ಥಿತಿ-ಗತಿ, ಮೂಲಭೂತ ಸೌಕರ್ಯ ಮುಂತಾದ ಅಗತ್ಯ ಮಾಹಿತಿಯನ್ನು ಸಂಗ್ರಹಿಸಿ, ಸಮರ್ಪಕವಾಗಿ ಒದಗಿಸುವಲ್ಲಿ ಉತ್ತಮ ಕಾರ್ಯವನ್ನು ನಿರ್ವಹಿಸಿದ್ದಾರೆ.  ಅದೇ ರೀತಿ ಸೆಕ್ಟರ್ ಅಧಿಕಾರಿಗಳು ಆಯಾ ಮತಗಟ್ಟೆಗಳ ವ್ಯಾಪ್ತಿಯಲ್ಲಿ ನೀತಿ ಸಂಹಿತೆಯ ಪಾಲನೆ, ಉಲ್ಲಂಘನೆ ಪ್ರಕರಣಗಳ ಬಗ್ಗೆಯೂ ನಿಗಾ ವಹಿಸಿದ್ದಾರೆ.  ಮೇ. 12 ರಂದು ನಡೆಯುವ ಮತದಾನ ದಿನದಂದು ಸೆಕ್ಟರ್ ಅಧಿಕಾರಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಮತಗಟ್ಟೆಯ ಅಧಿಕಾರಿಗಳು, ಸಹಾಯಕ ಸಿಬ್ಬಂದಿಗಳು, ಮತದಾನ ಸಿಬ್ಬಂದಿಗಳಿಗೆ ಚುನಾವಣಾ ಆಯೋಗ ನೀಡಿರುವ ಮಾರ್ಗಸೂಚಿ ಹಾಗೂ ನಿರ್ದೇಶನಗಳ ಬಗ್ಗೆ ಸೆಕ್ಟರ್ ಅಧಿಕಾರಿಗಳು ಅರಿವು ಹೊಂದಿರಬೇಕು.  ಆಯಾ ಮತಗಟ್ಟೆಗಳ 100 ಮೀ. ವ್ಯಾಪ್ತಿಯಲ್ಲಿ ಯಾವುದೇ ವ್ಯಕ್ತಿ, ಅಭ್ಯರ್ಥಿ, ಅಥವಾ ಪಕ್ಷಗಳು ಪ್ರಚಾರ ಮಾಡುವುದನ್ನು ನಿಷೇಧಿಸಿದ್ದು, ಈ ಕುರಿತಂತೆ ಸೆಕ್ಟರ್ ಅಧಿಕಾರಿಗಳು ನಿಗಾ ವಹಿಸಬೇಕು.  ಮತದಾನ ಪ್ರಕ್ರಿಯೆಯಲ್ಲಿ ಬೆಳಿಗ್ಗೆ 06 ಗಂಟೆಗೆ ಅಣಕು ಮತದಾನ ಪ್ರಾರಂಭವಾಗಲಿದ್ದು, ಈ ಸಂದರ್ಭದಲ್ಲಿ ಮತಯಂತ್ರಗಳ ಕಾರ್ಯ ನಿರ್ವಹಣೆ ಕುರಿತು ಯಾವುದೇ ಸಮಸ್ಯೆಗಳು ತಲೆದೋರಿದಲ್ಲಿ, ಕೂಡಲೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು, ಅದನ್ನು ನಿವಾರಿಸಿ, ಮತದಾನ ಪ್ರಕ್ರಿಯೆ ಸುಗಮವಾಗಿ ಮುಂದುವರೆಯುವಂತೆ ಮಾಡುವಲ್ಲಿ ಸೆಕ್ಟರ್ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು.  ಅಲ್ಲದೆ ಮತಗಟ್ಟೆ ಅಧಿಕಾರಿಗಳಿಗೆ ಸೂಕ್ತ ಜಾಗೃತಿ ನೀಡಬೇಕು.  ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ಸುಗಮವಾಗಿ ಹಾಗೂ ನ್ಯಾಯ ಸಮ್ಮತವಾಗಿ ಜರುಗಲು ಸೂಕ್ತ ರೀತಿಯಲ್ಲಿ ವ್ಯವಸ್ಥೆ ಕೈಗೊಳ್ಳಲಾಗಿದೆಯೇ ಹಾಗೂ ಮತದಾನ ಗೌಪ್ಯತೆ ಕಾಪಾಡುವ ರೀತಿಯಲ್ಲಿ ಮತಯಂತ್ರಗಳನ್ನು ಸೂಕ್ತ ಸ್ಥಳದಲ್ಲಿ ಜೋಡಿಸಿಡಲಾಗಿದೆಯೇ ಎಂಬುದರ ಬಗ್ಗೆಯೂ ನಿಗಾ ವಹಿಸಬೇಕು.  ಮತಗಟ್ಟೆಗಳಲ್ಲಿ ಚುನಾವಣಾ ಏಜೆಂಟರು ನಿಯಮಾನುಸಾರ ಕಾರ್ಯ ನಿರ್ವಹಿಸುವುದರಿಂದ, ಏಜೆಂಟರ ಕಾರ್ಯದ ಬಗ್ಗೆಯೂ ಮತಗಟ್ಟೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.
     ವಿಧಾನಸಭಾ ಚುನಾವಣೆ ಸಂಬಂಧ ಮಾಸ್ಟರ್ ಟ್ರೇನರ್ ಆಗಿ ನೇಮಕ ಮಾಡಲಾಗಿರುವ ಶಂಕರಪ್ಪ ಅವರು, ಸೆಕ್ಟರ್ ಅಧಿಕಾರಿಗಳು ಹಾಗೂ ಕ್ಷೇತ್ರವಾರು ಟ್ರೈನರ್‍ಗಳಿಗೆ ಮತದಾನ ದಿನದಂದು ಕೈಗೊಳ್ಳಬೇಕಾಗಿರುವ ಎಲ್ಲ ಕಾರ್ಯ ಹಾಗೂ ಕ್ರಮಗಳ ಕುರಿತು ವಿವರವಾಗಿ ತರಬೇತಿ ನೀಡಿದರು.
     ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಉಪಸ್ಥಿತರಿದ್ದರು.  ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳಿಗೆ ನೇಮಕಗೊಂಡಿರುವ ಸೆಕ್ಟರ್ ಅಧಿಕಾರಿಗಳು ಹಾಗೂ ಮಾಸ್ಟರ್ ಟ್ರೈನರ್‍ಗಳು ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿದ್ದರು.

ಭಗೀರಥ ಜಯಂತಿ : ಗಣ್ಯರಿಂದ ಭಕ್ತಿ ನಮನ ಸಲ್ಲಿಕೆ


ಕೊಪ್ಪಳ ಏ. 22 (ಕರ್ನಾಟಕ ವಾರ್ತೆ): ಮಹಾನ್ ತಪಸ್ವಿ ಹಾಗೂ ಸಾಧಕ, ಮಹರ್ಷಿ ಭಗೀರಥ ಅವರ ಜಯಂತಿ ಅಂಗವಾಗಿ ಜಿಲ್ಲಾಡಳಿತದ ವತಿಯಿಂದ ಭಾನುವಾರದಂದು ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಎಲ್ಲ ಅಧಿಕಾರಿ, ಸಿಬ್ಬಂದಿಗಳು ಮಹರ್ಷಿ ಭಗೀರಥರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಭಕ್ತಿ ಪೂರ್ವಕ ನಮನ ಸಲ್ಲಿಸಿದರು.
     ಚುನಾವಣಾ ನೀತಿ ಸಂಹಿತೆಯ ಕಾರಣದಿಂದಾಗಿ ಭಗೀರಥ ಅವರ ಜಯಂತಿ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸರಳವಾಗಿ ಆಚರಿಸಲಾಯಿತು.   ಕಾರ್ಯಕ್ರಮದಲ್ಲಿ ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ., ಚುನಾವಣಾ ವಿಭಾಗದ ತಹಸಿಲ್ದಾರ್ ನಾಗರಾಜ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡು, ಭಗೀರಥರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು, ಭಕ್ತಿ ಪೂರ್ವಕ ನಮನ ಸಲ್ಲಿಸಿದರು.

ಯಶಸ್ವಿ ಚುನಾವಣೆಗಾಗಿ ಮತಗಟ್ಟೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳಿಂದ ಪಾಠಕೊಪ್ಪಳ ಏ. 22 (ಕರ್ನಾಟಕ ವಾರ್ತೆ): ಕರ್ನಾಟಕ ವಿಧಾನಸಭೆ ಚುನಾವಣೆ ನಿಮಿತ್ಯ ಮೇ. 12 ರಂದು ಬೆಳಿಗ್ಗೆ 07 ಗಂಟೆಯಿಂದ ಸಂಜೆ 06 ಗಂಟೆಯವರೆಗೆ ಮತದಾನ ನಡೆಯಲಿದ್ದು, ಮತದಾನ ಪ್ರಕ್ರಿಯೆ ಗೊಂದಲ ರಹಿತವಾಗಿ ಹಾಗೂ ಸುಗಮವಾಗಿ ನಡೆಸಲು ಮತಗಟ್ಟೆ ಅಧಿಕಾರಿ ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಖುದ್ದು ಮಾರ್ಗದರ್ಶನ ನೀಡಿದರು.

     ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಧಾನಸಭೆ ಚುನಾವಣೆ ಸಂಬಂಧ ಮತಗಟ್ಟೆ ಅಧಿಕಾರಿಗಳು ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಭಾನುವಾರದಂದು ಏರ್ಪಡಿಸಲಾದ ತರಬೇತಿಯಲ್ಲಿ ಪಾಲ್ಗೊಂಡು, ಅವರು ಅಧಿಕಾರಿಗಳಿಗೆ ಮತದಾನ ದಿನದಂದು ಕೈಗೊಳ್ಳಬೇಕಾದ ಕಾರ್ಯಗಳ ಕುರಿತು ಮಾರ್ಗದರ್ಶನ ನೀಡಿದರು.

     ಮೇ. 12 ರಂದು ಜರುಗುವ ಮತದಾನ ಪ್ರಕ್ರಿಯೆಗೆ ಈಗಾಗಲೆ ಮತಗಟ್ಟೆ ಅಧಿಕಾರಿಗಳು ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಮತದಾನ ಕಾರ್ಯ ಸುಗಮವಾಗಿ ನಡೆಸಲು ಈ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ.  ಮತಗಟ್ಟೆಯಲ್ಲಿದ್ದುಕೊಂಡು, ಮತದಾರರಿಗೆ ಹಾಗೂ ಇತರೆ ಸಿಬ್ಬಂದಿಗಳಿಗೆ ಸೂಕ್ತ ನಿರ್ದೇಶನ ನೀಡಲು, ಮತಗಟ್ಟೆ ಅಧಿಕಾರಿಗಳು ಆಯೋಗದ ನಿಯಮಗಳನ್ನು ಸರಿಯಾಗಿ ಮನನ ಮಾಡಿಕೊಳ್ಳಲೇಬೇಕಿದೆ.  ಹೀಗಾಗಿ ಮತಗಟ್ಟೆ ಅಧಿಕಾರಿಗಳು ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಖುದ್ದು ತಾವೇ ತರಬೇತಿ ನೀಡುವುದರ ಜೊತೆಗೆ, ಅಧಿಕಾರಿಗಳ ಗೊಂದಲ, ಪ್ರಶ್ನೆ ಅಥವಾ ಸಮಸ್ಯೆಗಳಿಗೆ ಸ್ಪಂದಿಸಲು ಅನುಕೂಲವಾಗಲಿದೆ.  ಇದಕ್ಕೆಂದೆ ಭಾನುವಾರದಂದು ಆಯಾ ತಾಲೂಕು ಕೇಂದ್ರಗಳಲ್ಲಿ ಮತಗಟ್ಟೆ ಅಧಿಕಾರಿಗಳು ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ಏರ್ಪಡಿಸಲಾಗಿದ್ದು, ಈ ತರಬೇತಿ ಕೇಂದ್ರಗಳಿಗೆ ತಾವೇ ಖುದ್ದು, ಭೇಟಿ ನೀಡಿ, ಅಧಿಕಾರಿಗಳೊಂದಿಗೆ ನಿಯಮಗಳ ಕುರಿತು ಮಾಹಿತಿ ವಿನಿಮಯ ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
     ಮತಗಟ್ಟೆ ಅಧಿಕಾರಿಗಳು, 100 ಮೀ. ವ್ಯಾಪ್ತಿಯಲ್ಲಿ ಯಾವುದೇ ಪ್ರಚಾರ ಚಟುವಟಿಕೆಗೆ ಅವಕಾಶ ನೀಡಬಾರದು.  ಮತಗಟ್ಟೆಗಳಲ್ಲಿ ಯಾವುದೇ ಪಕ್ಷ ಅಥವಾ ಚಿಹ್ನೆಗಳ ಛಾಯಾಚಿತ್ರವಿದ್ದಲ್ಲಿ ಅದನ್ನು ಮರೆಮಾಚಬೇಕು.  ಮತದಾನ ಪ್ರಕ್ರಿಯೆ ಗೌಪ್ಯವಾಗಿರುವ ರೀತಿಯಲ್ಲಿ ಮತಯಂತ್ರಗಳನ್ನು ಇರಿಸಲು ಸಮರ್ಪಕ ಬೆಳಕಿನ ವ್ಯವಸ್ಥೆ ಮಾಡಿಕೊಂಡು, ಸ್ಥಳ ನಿಗದಿ ಮಾಡಿಕೊಳ್ಳಬೇಕು.  ಪೋಲಿಂಗ್ ಏಜೆಂಟರ ಕಾರ್ಯ ಪರಿಶೀಲಿಸಬೇಕು. ಬೆಳಿಗ್ಗೆ 06 ಗಂಟೆಗೆ ಸರಿಯಾಗಿ ಅಣಕು ಮತದಾನ ಪ್ರಕ್ರಿಯೆ ಪ್ರಾರಂಭಿಸಬೇಕು.  ಮತಗಟ್ಟೆಯೊಳಗೆ ಯಾವುದೇ ಮತದಾರ ಅಥವಾ ಸಿಬ್ಬಂದಿ ಮೊಬೈಲ್ ಫೋನ್ ತರುವಂತಿಲ್ಲ.  ಇದರ ಬಗ್ಗೆ ನಿಗಾ ವಹಿಸಬೇಕು.  ಮತಗಟ್ಟೆ ಬಳಿ ಸೂಕ್ತ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಬೇಕು.  ಚುನಾವಣೆಯನ್ನು ಮುಕ್ತ ಮತ್ತು ನಿಸ್ಪಕ್ಷಪಾತ ರೀತಿಯಲ್ಲಿ ನಡೆಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.  ಮತಗಟ್ಟೆಯಲ್ಲಿ ಮತದಾನದ ಬಗ್ಗೆ ಸರಿಯಾಗಿ ದಾಖಲೆಗಳನ್ನು ನಿರ್ವಹಿಸಬೇಕು.  ನಕಲಿ ಮತದಾರರು ಮತ ಚಲಾವಣೆಗೆ ಯತ್ನಿಸುವ ಸಾಧ್ಯತೆಗಳಿದ್ದು, ಈ ಕುರಿತು ನಿಗಾ ವಹಿಸಿ, ಮತದಾರರನ್ನು ಗುರುತಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಅಂಧರು ಅಥವಾ ದುರ್ಬಲರು ಮತಗಟ್ಟೆಗೆ ಬಂದಾಗ, ಅವರು ಮತ ಚಲಾಯಿಸಲು ನಿಯಮಾನುಸಾರ ಅನುವು ಮಾಡಿಕೊಡಬೇಕು.  ಸಂಜೆ 06 ಗಂಟೆಗೆ ಮತದಾನ ಪ್ರಕ್ರಿಯೆ ಮುಕ್ತಾಯವಾದ ಬಳಿಕ, ನಿಯಮಗಳಿಗೆ ಅನುಗುಣವಾಗಿ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.  ಒಟ್ಟಾರೆ ಮತಗಟ್ಟೆಯಲ್ಲಿ ಚುನಾವಣಾ ಆಯೋಗದ ನಿಯಮಗಳು ಹಾಗೂ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಸುಗಮವಾಗಿ ಹಾಗೂ ನ್ಯಾಯ ಸಮ್ಮತವಾಗಿ ಮತದಾನ ಪ್ರಕ್ರಿಯೆ ಜರುಗಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.
     ಕೊಪ್ಪಳ ಕ್ಷೇತ್ರ ಚುನಾವಣಾಧಿಕಾರಿ ಸಿ.ಡಿ. ಗೀತಾ, ಸಹಾಯಕ ಚುನಾವಣಾಧಿಕಾರಿ ಗುರುಬಸವರಾಜ ಸೇರಿದಂತೆ ಟ್ರೈನರ್‍ಗಳು ಪಾಲ್ಗೊಂಡಿದ್ದರು.  ತರಬೇತಿ ಅಂಗವಾಗಿ ಮತಗಟ್ಟೆ ಅಧಿಕಾರಿಗಳು ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಮತಯಂತ್ರಗಳ ಕಾರ್ಯ ನಿರ್ವಹಣೆ ಹಾಗೂ ಈ ಬಾರಿಯ ಚುನಾವಣೆಯಲ್ಲಿ ನೂತನವಾಗಿ ಪರಿಚಯಿಸಲಾಗುತ್ತಿರುವ ವಿವಿ ಪ್ಯಾಟ್ ಕಾರ್ಯ ನಿರ್ವಹಣೆ ಕುರಿತು ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡಲಾಯಿತು.    ಮತಗಟ್ಟೆಗಳಿಗೆ ನೇಮಕ ಮಾಡಲಾಗಿರುವ ಅಧಿಕಾರಿಗಳಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿವಿಧ ಕೊಠಡಿಗಳಲ್ಲಿ ತರಬೇತಿ ನೀಡಲಾಯಿತು.

ವಿಧಾನಸಭೆ ಚುನಾವಣೆ ನೀತಿ ಸಂಹಿತೆ : ಅಬಕಾರಿ ಅಕ್ರಮಕ್ಕೆ 32 ಜನರ ಬಂಧನ : 05 ಮದ್ಯದಂಗಡಿಗಳ ಲೈಸೆನ್ಸ್ ಅಮಾನತು


ಕೊಪ್ಪಳ ಏ. 22 (ಕ.ವಾ): ವಿಧಾನಸಭಾ ಚುನಾವಣೆ ನಿಮಿತ್ಯ ನೀತಿ ಸಂಹಿತೆ ಜಾರಿಯಲ್ಲಿದೆ.  ಜಿಲ್ಲೆಯಲ್ಲಿ ಈವರೆಗೆ ಅಬಕಾರಿ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಒಟ್ಟು 64 ಪ್ರಕರಣಗಳನ್ನು ದಾಖಲಿಸಿ 32 ಜನರನ್ನು ಬಂಧಿಸಲಾಗಿದ್ದು. ಒಟ್ಟು 05 ಮದ್ಯದ ಅಂಗಡಿಗಳ ಲೈಸೆನ್ಸ್ ಅಮಾನತುಗೊಳಿಸಲಾಗಿದೆ ಎಂದು ಕೊಪ್ಪಳ ಜಿಲ್ಲೆಯ ಅಬಕಾರಿ ಉಪ ಆಯುಕ್ತ ಪ್ರಶಾಂತಕುಮಾರ್ ತಿಳಿಸಿದ್ದಾರೆ.
     ಚುನಾವಣೆ ನಿಮಿತ್ಯ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ.  ಚುನಾವಣೆ ಸಮಯದಲ್ಲಿ ಅಕ್ರಮ ಮದ್ಯ ಸಾಗಾಣಿಕೆ ಬಗ್ಗೆ ತೀವ್ರ ನಿಗಾ ವಹಿಸಲಾಗಿದ್ದು, ಕೊಪ್ಪಳ ಜಿಲ್ಲೆಯಲ್ಲಿ ನೀತಿ ಸಂಹಿತೆ ಜಾರಿಯಾದಾಗಿನಿಂದ ಅಂದರೆ ಮಾ. 27 ರಿಂದ ಇದುವರೆಗೂ ಸುಮಾರು 160 ಕಡೆ ದಾಳಿ ನಡೆಸಲಾಗಿದೆ.  ಈ ಪೈಕಿ ಅಕ್ರಮ ಮದ್ಯ ಸಾಗಾಣಿಕೆಗೆ ಸಂಬಂಧಿಸಿದಂತೆ ತೀವ್ರತರವಾದ 09 ಪ್ರಕರಣಗಳನ್ನು ದಾಖಲಿಸಿದೆ.  ಅಬಕಾರಿ ನಿಯಮಗಳನ್ನು ಉಲ್ಲಂಘಿಸಿದ 32 ಮದ್ಯದಂಗಡಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.  ನಿಯಮ ಉಲ್ಲಂಘಿಸಿ ಸಣ್ಣ ಪುಟ್ಟ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡಿದಂತಹ 23 ಪ್ರಕರಣಗಳನ್ನು ದಾಖಲಿಸಿದೆ.  ಅಕ್ರಮ ಸಾಗಾಣಿಕೆ ಪ್ರಕರಣಗಳಲ್ಲಿ 32 ಜನರನ್ನು ಬಂಧಿಸಿ, 183. 380 ಲೀ. ಅಕ್ರಮ ಮದ್ಯ ಮತ್ತು 26. 850 ಲೀ. ಬಿಯರ್ ವಶಪಡಿಸಿಕೊಳ್ಳಲಾಗಿದೆ.  ಅಲ್ಲದೆ 04 ದ್ವಿಚಕ್ರ ವಾಹನಗಳನ್ನು ಜಪ್ತು ಮಾಡಲಾಗಿದೆ.  ಅಬಕಾರಿ ನಿಯಮಗಳನ್ನು ಉಲ್ಲಂಘಿಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಿಲ್ಲೆಯ ಗಂಗಾವತಿಯಲ್ಲಿ 01, ಕೊಪ್ಪಳ-02, ಕುಕನೂರು- 01 ಹಾಗೂ ಯಲಬುರ್ಗಾದಲ್ಲಿ 01 ಸೇರಿದಂತೆ ಒಟ್ಟು 05 ಸಿ.ಎಲ್-02 ಮದ್ಯದಂಗಡಿಗಳ ಲೈಸೆನ್ಸ್ ಅಮಾನತುಗೊಳಿಸಲಾಗಿದೆ.  
ಅಬಕಾರಿ ಅಕ್ರಮ ಕಂಡುಬಂದಲ್ಲಿ ಮಾಹಿತಿ ನೀಡಿ : ಜಿಲ್ಲೆಯಲ್ಲಿ ಅಕ್ರಮ ಮದ್ಯ ಸಾಗಾಣಿಕೆ ಅಥವಾ ಶೇಖರಣೆ ಬಗ್ಗೆ ಯಾವುದೇ ಮಾಹಿತಿ ಅಥವಾ ದೂರು ಇದ್ದಲ್ಲಿ ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ನೀಡಬಹುದಾಗಿದೆ.  ಪ್ರಶಾಂತಕುಮಾರ್, ಅಬಕಾರಿ ಉಪ ಆಯುಕ್ತರು, ಕೊಪ್ಪಳ- 9449597170, 08539-222002.  ಎಂ.ಎಸ್. ನಾರಾಯಣ ನಾಯ್ಕ್, ಅಬಕಾರಿ ಉಪಾಧೀಕ್ಷಕರು, ಕೊಪ್ಪಳ- 9449597175, 08539-221610.  ಕೊಪ್ಪಳ ತಾಲೂಕು ವ್ಯಾಪ್ತಿಯಲ್ಲಿ ಮಹದೇವ ಪೂಜಾರಿ, ಅಬಕಾರಿ ನಿರೀಕ್ಷಕರು, ಕೊಪ್ಪಳ- 9535479446. ಎಂ.ಎಲ್. ಕಣಬರಕರ, ಅಬಕಾರಿ ಉಪನಿರೀಕ್ಷಕರು- 9902936649.  ಎ.ಎಚ್. ಕೃಷ್ಣಮೂರ್ತಿ, ಅಬಕಾರಿ ನಿರೀಕ್ಷಕರು, ಕೊಪ್ಪಳ- 9880404148, 08539-222384.  ಬಿ.ಎ. ಪಾಂಗೇರಿ, ಅಬಕಾರಿ ಉಪ ನಿರೀಕ್ಷಕರು, ಕೊಪ್ಪಳ- 9481740977.  ಎಂ. ಭವಾನಿ, ಅಬಕಾರಿ ನಿರೀಕ್ಷಕರು, ಕೆ.ಎಸ್.ಬಿ.ಸಿ.ಎಲ್. ಡಿಪೋ, ಗೋಶಾಲಾ ಆವರಣ, ಕಾತರಕಿ ರಸ್ತೆ, ಕೊಪ್ಪಳ- 9845678027.  ಗಂಗಾವತಿ ತಾಲೂಕು ವ್ಯಾಪ್ತಿಯಲ್ಲಿ ಮಹಾದೇವ ಪೂಜಾರಿ, ಅಬಕಾರಿ ನಿರೀಕ್ಷಕರು, ಗಂಗಾವತಿ-9535479446, 08533-230527.  ಎಸ್.ಎಸ್. ಈಶ್ವರಪ್ಪ, ಅಬಕಾರಿ ಉಪ ನಿರೀಕ್ಷಕರು, ಗಂಗಾವತಿ- 9844077032.  ಕುಷ್ಟಗಿ ಮತ್ತು ಯಲಬುರ್ಗಾ ತಾಲೂಕು ವ್ಯಾಪ್ತಿಗೆ ಕೆ. ಸುಷ್ಮಾ, ಅಬಕಾರಿ ನಿರೀಕ್ಷಕರು, ಕುಷ್ಟಗಿ- 9448844650, 08536-267247.  ಬಸವರಾಜ ಎಸ್. ಮುಡಶಿ, ಅಬಕಾರಿ ಉಪ ನಿರೀಕ್ಷಕರು, ಕುಷ್ಟಗಿ- 9241767667.   ಅಬಕಾರಿ ನಿಯಮಗಳ ಉಲ್ಲಂಘನೆ, ಅಕ್ರಮ ಮದ್ಯ ಸಾಗಾಣಿಕೆ ಅಥವಾ ಸಂಗ್ರಹಣೆ ಕುರಿತ ಯಾವುದೇ ಅಕ್ರಮಗಳು ಕಂಡುಬಂದಲ್ಲಿ ಮೇಲೆ ತಿಳಿಸಿದ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ನೀಡಬಹುದಾಗಿದೆ ಎಂದು ಕೊಪ್ಪಳ   ಅಬಕಾರಿ ಉಪ ಆಯುಕ್ತ ಪ್ರಶಾಂತಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Saturday, 21 April 2018

ಕೊಪ್ಪಳ ಜಿಲ್ಲೆ : ಏ. 21 ರ ನಾಮಪತ್ರ ಸಲ್ಲಿಕೆ ವಿವರ

ಕೊಪ್ಪಳ ಜಿಲ್ಲೆ : ಏ. 21 ರ ನಾಮಪತ್ರ ಸಲ್ಲಿಕೆ ವಿವರ

ಮತದಾನ ಜಾಗೃತಿ : ಕೊಪ್ಪಳ ಜಿಲ್ಲೆಗೆ ಗಂಗಾವತಿ ಪ್ರಾಣೇಶ್ ಐಕಾನ್ : ಏ. 26 ರಿಂದ ಜಿಲ್ಲೆಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ


ಕೊಪ್ಪಳ ಏ. 21 (ಕರ್ನಾಟಕ ವಾರ್ತೆ): ರಾಜ್ಯ, ದೇಶ, ವಿದೇಶಗಳಲ್ಲಿ ಪ್ರವಾಸ ಕೈಗೊಂಡು, ತಮ್ಮ ಮಾತುಗಳ ಮೂಲಕವೇ ಜನರನ್ನು ನಗೆಗಡಲಲ್ಲಿ ತೇಲಿಸುವ, ಖ್ಯಾತ ಹಾಸ್ಯ ಸಾಹಿತಿ, ಕಲಾವಿದ ಕೊಪ್ಪಳ ಜಿಲ್ಲೆ ಗಂಗಾವತಿಯ ಪ್ರಾಣೇಶ್ ಅವರು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸಲು ಐಕಾನ್ ಆಗಿ ನೇಮಕಗೊಂಡಿದ್ದಾರೆ.

     ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರಾದ ಜಿ.ಪಂ. ಸಿಇಒ ವೆಂಕಟ್ ರಾಜಾ ಅವರು, ಪ್ರಾಣೇಶ್ ಅವರನ್ನು ಕೊಪ್ಪಳ ಜಿಲ್ಲೆಗೆ ಸಂಬಂಧಿಸಿದಂತೆ ಮತದಾರರ ಜಾಗೃತಿಗೆ ಐಕಾನ್ ಆಗಿ ಆಯ್ಕೆ ಮಾಡಿ, ಅನುಮೋದನೆಗೆ ಚುನಾವಣಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.  ಇದೀಗ, ಚುನಾವಣಾ ಆಯೋಗವು ಈ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದು, ಗಂಗಾವತಿಯ ಪ್ರಾಣೇಶ್ ಅವರು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮತದಾರರಲ್ಲಿ ನೈತಿಕ ಮತದಾನದ ಬಗ್ಗೆ ಹಾಸ್ಯ  ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲು ಜಿಲ್ಲೆಯಾದ್ಯಂತ ಏರ್ಪಡಿಸುವ ಸಮಾರಂಭಗಳಲ್ಲಿ ಪಾಲ್ಗೊಳ್ಳಲಿದ್ದಾರೆ.  ಕಾರ್ಯಕ್ರಮಗಳ ಆಯೋಜನೆ ಕುರಿತಂತೆ ಜಿಲ್ಲಾ ಪಂಚಾಯತಿ ವತಿಯಿಂದ ಕಾರ್ಯಕ್ರಮದ ವೇಳಾಪಟ್ಟಿ ಸಿದ್ಧಪಡಿಸಿದ್ದು, ಕಾರ್ಯಕ್ರಮದ ಸ್ಥಳವನ್ನು ಆಯಾ ತಾಲೂಕಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳೇ ಆಯ್ಕೆ ಮಾಡಲಿದ್ದಾರೆ.
     ಕೊಪ್ಪಳ ಜಿಲ್ಲಾ ಪಂಚಾಯತ ವತಿಯಿಂದ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಸಂಬಂಧಿಸಿದಂತೆ ನಗರ, ಪಟ್ಟಣ ಮತ್ತು ಗ್ರಾಮೀಣ ಭಾಗದ ಜನರಲ್ಲಿ ಮತದಾನದ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಏ. 26 ರಿಂದ ಜಿಲ್ಲೆಯಲ್ಲಿ ಆಯೋಜಿಸಲಾಗಿದೆ.  ಏ. 26 ರಂದು ಕೊಪ್ಪಳ ತಾಲೂಕಿನಲ್ಲಿ, ಏ. 28 ರಂದು ಕುಷ್ಟಗಿ ತಾಲೂಕು, ಏ. 30 ರಂದು ಗಂಗಾವತಿ ತಾಲೂಕು, ಮೇ. 02 ರಂದು ಯಲಬುರ್ಗಾ ತಾಲೂಕು, ಮೇ. 07 ರಂದು ಕೊಪ್ಪಳ ನಗರ ಮತ್ತು ಮೇ. 08 ರಂದು ಗಂಗಾವತಿ ನಗರ ಪ್ರದೇಶ ವ್ಯಾಪ್ತಿಯಲ್ಲಿ ಹಾಸ್ಯ ಸಾಹಿತಿ ಗಂಗಾವತಿ ಪ್ರಾಣೇಶ ಅವರಿಂದ ಮತದಾನ ಜಾಗೃತಿ ಕಾರ್ಯಕ್ರಮ ಜರುಗಲಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರಾಗಿರುವ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ತಿಳಿಸಿದ್ದಾರೆ.

ಕುಷ್ಟಗಿ : ಉದ್ಯೋಗಖಾತ್ರಿ ಕೂಲಿಕಾರರಿಗೆ ಮತದಾರರ ಜಾಗೃತಿ

ಕೊಪ್ಪಳ ಏ. 21 (ಕರ್ನಾಟಕ ವಾರ್ತೆ): ವಿಧಾನಸಭಾ ಚುನಾವಣೆಗಾಗಿ ಮೇ. 12 ರಂದು ನಡೆಯುವ ಮತದಾನ ಕಾರ್ಯದಲ್ಲಿ ಎಲ್ಲ ಕೂಲಿ ಕಾರ್ಮಿಕರು ತಪ್ಪದೆ ಪಾಲ್ಗೊಂಡು, ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ ನೈತಿಕವಾಗಿ ಮತದಾನ ಮಾಡಬೇಕು ಎಂದು ಕುಷ್ಟಗಿ ತಾಲೂಕಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಮೋಹನ್ ಅವರು ಮನವಿ ಮಾಡಿಕೊಂಡರು.

     ಕುಷ್ಟಗಿ ತಾಲೂಕು ತಳುವಗೇರಾ ಗ್ರಾಮ ವ್ಯಾಪ್ತಿಯ ನಿಡಶೇಸಿ ಕೆರೆಯಲ್ಲಿ ಉದ್ಯೋಗಖಾತ್ರಿ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದ್ದು, ಕೆರೆ ಹೂಳೆತ್ತುವ ಕೆಲಸದಲ್ಲಿ ನಿರತರಾಗಿದ್ದ ಕೂಲಿ ಕಾರ್ಮಿಕರಿಗೆ ಮತದಾನ ಜಾಗೃತಿ ಮೂಡಿಸಲಾಯಿತು.  ಕುಷ್ಟಗಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಮೋಹನ್ ಅವರು ಮಾತನಾಡಿ, ಮೇ. 12 ರಂದು ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದ್ದು, ಅಂದು ಎಲ್ಲ ಮತದಾರರು ತಪ್ಪದೆ ಮತದಾನ ಮಾಡಬೇಕು.  ಮತದಾನಕ್ಕಾಗಿ ಕೆಲವರು ಹಣ, ಮದ್ಯದ ಆಸೆ, ಆಮಿಷವೊಡ್ಡುವ ಸಾಧ್ಯತೆಗಳಿದ್ದು, ಇಂತಹ ಆಮಿಷಗಳಿಗೆ ಯಾರೂ ಒಳಗಾಗಬಾರದು.  ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ಇರುವ ಏಕೈಕ ಅಧಿಕಾರ, ಅದು ಮತ ಚಲಾವಣೆಯಾಗಿದ್ದು, ಇಂತಹ ಪವಿತ್ರ ಕಾರ್ಯವಾಗಿರುವ ಮತದಾನವನ್ನು, ತಪ್ಪದೆ ಕೈಗೊಂಡು, ನಮ್ಮ ಕರ್ತವ್ಯವನ್ನು ನಾವು ನಿಭಾಯಿಸಬೇಕು ಎಂದು ಅವರು ಹೇಳಿದರು.


     ಗ್ರಾಮ ಪಂಚಾಯತಿ ಪಿಡಿಒ ಸಂಗನಗೌಡ ಸೇರಿದಂತೆ ತಳುವಗೇರಾ, ನಿಡಶೇಸಿ ಹಾಗೂ ವಣಗೇರಾ ಗ್ರಾಮಗಳ ಸುಮಾರು 1500 ಕೂಲಿ ಕಾರ್ಮಿಕರು ಪಾಲ್ಗೊಂಡಿದ್ದರು.